|| ಹರೇ ರಾಮ ||
ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್ – ಶ್ರೀಸಂಸ್ಥಾನಗೋಕರ್ಣ
ಶ್ರೀರಾಮಚಂದ್ರಾಪುರಮಠ
ಶಾಖೆ : ಭಾನ್ಕುಳಿ

ಅವಿಚ್ಛಿನ್ನಶಾಂಕರರಾಜಗುರುಪರಂಪರೆಯ ಶ್ರೀರಾಮಚಂದ್ರಾಪುರಮಠದ ಹದಿನಾರನೆಯ ಪೀಠಾಧಿಪತಿಗಳಾದ ಶ್ರೀಅನಂತೇದ್ರಭಾರತಿಗಳು ತಮ್ಮ ಶಿಷ್ಯರಾದ ಶ್ರೀರಾಮಭದ್ರಭಾರತಿಗಳನ್ನು ಶ್ರೀರಾಮಚಂದ್ರಾಪುರಮಠದಲ್ಲಿ ಉಳಿಸಿ ಬಿಳಗಿ ಅರಸರ ಪ್ರಾರ್ಥನೆಯನ್ನು ಮನ್ನಿಸಿ ಸಿದ್ಧಾಪುರ ಸೀಮೆಯ ಬಿದ್ರಕಾನು ಎಂಬಲ್ಲಿ ನೂತನ ಮಠಾಯತನವನ್ನು ಸ್ಥಾಪಿಸಿ ಅಲ್ಲಿ ಕೆಲ ಕಾಲ ಉಳಿದರು. ಹೊಸನಗರಮಠದ ವಿಶಾಲ ಶಿಲಾಮಯಕಟ್ಟಡವು ಶ್ರೀ ರಾಮಭದ್ರಭಾರತಿಗಳ ಅನುಗ್ರಹ. ನಂತರದ ಶಿಷ್ಯಪರಂರೆಯಲ್ಲಿ ಶ್ರೀ ರಾಘವೇಶ್ವರಭಾರತಿಗಳು ಮತ್ತು ಶ್ರೀ ವಿದ್ಯಾಧನೇಂದ್ರಭಾರತೀಸ್ವಾಮಿಗಳು ಪೀಠವನ್ನಲಂಕರಿಸಿದರು. ಇದೇ ಕಾಲದಲ್ಲಿ ಕ್ಯಾದಗೀ ಮಠವೂ ಸ್ಥಾಪನೆಯ ಅಗಿರಬಹುದೆಂಬುದು ಒಂದು ಊಹೆ. ಭಾನ್ಕುಳಿಮಠದಲ್ಲಿ ಬ್ರಹ್ಮಲೀನರಾದ ಹನ್ನೊಂದು ಯತಿಶ್ರೇಷ್ಠರ ದಿವ್ಯಸಮಾಧಿಗಳಿವೆ. ಈ ಹಿನ್ನೆಲೆಯಲ್ಲಿ ನೂರಾರು ವರ್ಷಗಳ ಹಿಂದೆಯೇ ಅಂದರೆ ಶ್ರೀ ಶ್ರೀ ಅನಂತೇಂದ್ರಭಾರತೀಮಹಾಸ್ವಾಮಿಗಳ ಕಾಲದಲ್ಲಿಯೇ ಶ್ರೀರಾಮಚಂದ್ರಾಪುರಮಠದ ಶಾಖೆಯಾಗಿ ಈ ಮಠವು ಸ್ಥಾಪಿತವಾಗಿರಬಹುದೆಂದು ಇತಿಹಾಸಜ್ಞರ ಅಭಿಪ್ರಾಯ. ಈ ಮಠದ ಪರಂಪರೆಯಲ್ಲಿ ಕ್ರಿ.ಶ. ೧೯೪೨ ರಲ್ಲಿ ಮುಕ್ತರಾದ ಶ್ರೀ ಶ್ರೀಕೃಷ್ಣಾನಂದಭಾರತೀ ಶ್ರೀಗಳೇ ಕೊನೆಯವರು. ಈ ಶ್ರೀಗಳು ಶಿಷ್ಯಸ್ವೀಕಾರವನ್ನು ಮಾಡದೇ ಬ್ರಹ್ಮಲೀನರಾದ್ದರಿಂದ ಈ ಮಠದ ಶಿಷ್ಯರಾದ ಬಿಳಗಿಸೀಮೆಯ ಮಹಾಜನತೆಯು ಒಂದು ವಿಶ್ವಸ್ತಮಂಡಳಿಯ ಮೂಲಕ ಶ್ರೀಮಠದ ಆಡಳಿತವನ್ನು ನಡೆಸುತ್ತಿದ್ದರು. ಶ್ರೀರಾಮಚಂದ್ರಾಪುರಮಠದ ಮೂವ್ವತ್ತೈದನೆಯ ಪೀಠಾಧಿಪತಿಗಳ ಕಾಲ ಕ್ರಿ. ಶ. ೧೯೫೪ರಲ್ಲಿ ಸೀಮೆಯ ಶಿಷ್ಯರೆಲ್ಲ ಸೇರಿ ಮಠದಸೊತ್ತಿನ ಜವಾಬ್ದಾರಿ ಮಠಾಧಿಪತಿಗಳದ್ದೇ ಆಗಿರಬೇಕೆಂದು ಸರ್ವಸಮ್ಮತವಾದ ನಿರ್ಣಯವನ್ನು ಕೈಗೊಂಡು ಈ ಮಠವನ್ನು ಎಲ್ಲ ಸ್ವತ್ತುಗಳ ಸಹಿತ ಶ್ರೀ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳಿಗೆ ಅರ್ಪಿಸಿ ಶ್ರೀರಾಮಚಂದ್ರಾಪುರಮಠದಲ್ಲಿ ವಿಲೀನಗೊಳಿಸಿದರು. ೧೯೬೯ರ ಏಪ್ರಿಲ್ ತಿಂಗಳಲ್ಲಿ ಈಮಠದ ನೂತನ ಕಟ್ಟಡದ ಪ್ರವೇಶೋತ್ಸವವು ವಿವಿಧ ಧಾರ್ಮಿಕ ಅನುಷ್ಠಾನಗಳೊಂದಿಗೆ ಶ್ರೀ ಶ್ರೀಮದ್ರಾಘವೇಂದ್ರಭಾರತೀಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿತು.

ಈಮಠದ ಆರಾಧ್ಯದೇವರು ಸೀತಾಲಕ್ಷಮಣಸಮೇತನಾದ ಪ್ರಭು ಶ್ರೀರಾಮಚಂದ್ರ. ಶ್ರೀಸಂಸ್ಥಾನದ ಉಳಿದ ಮಠಗಳಲ್ಲಿರುವಂತೆ ಪಂಚಲೋಹ ನಿರ್ಮಿತವಾದ ಶ್ರೀಸೀತಾರಾಮಚಂದ್ರಾದಿ ದೇವತಾಪ್ರತಿಷ್ಠಾಕಾರ್ಯವು ಪೂಜ್ಯಶ್ರೀಗಳ ಸಂಕಲ್ಪದಂತೆ ಧಾತೃಸಂವತ್ಸರದ ಚೈತ್ರ ಬಹುಳ ಅಷ್ಟಮೀ ಗುರುವಾರದಂದು (೧೧-೪-೧೯೯೬) ನೆರವೇರಿದೆ. ಈ ಮಠದಲ್ಲಿ ನೂತನವಾಗಿ ಪ್ರತಿಷ್ಠಿತವಾದ ಶ್ರೀರಾಮಾದಿ ವಿಗ್ರಹಗಳು, ಮನಮೋಹಕವಾದ ರಜತಮಂಟಪ ಹಾಗೂ ಪೂಜಾಪರಿಕರಗಳೆಲ್ಲವೂ ಈ ಮಠದ ಪುರೋಭಿವೃದ್ಧಿಸಮಿತಿಯ ಕಾರ್ಯಾಧ್ಯಕ್ಷರಾಗಿದ್ದ ಶ್ರೀಮಠದ ಆಪ್ತಶಿಷ್ರಲ್ಲಿ ಓರ್ವರಾಗಿದ್ದ ಸಿದ್ಧಾಪುರ ಪ್ರಾಂತದಲ್ಲಿ ಕೃಷ್ಣಡಾಕ್ಟರು ಎಂದೇ ಖ್ಯಾತರಾಗಿದ್ದ ದಿ. ಡಾ| ಕೆ. ಜಿ. ಭಟ್ಟರ ಉದಾರ ದೇಣಿಗೆಯೆಂಬುದನ್ನು ಇಲ್ಲಿ ಸ್ಮರಿಸಲೇಬೇಕು. ಸುಸಜ್ಜಿತವಾದ ಶ್ರೀಗುರುನಿವಾಸ, ಭೋಜನಶಾಲೆ, ಗೋಶಾಲೆ ಮೊದಲಾದವುಗಳು ಈ ಮಠದ ವಿಶೇಷತೆ. ಸಿದ್ಧಾಪುರ ತಾಲೂಕಿನಲ್ಲಿ ಕೊಮ್ಮಿನಕೈ ಮಠ ಎಂಬ ಮಠವಿದ್ದು ಅದು ಮೂವ್ವತ್ತೆರಡನೆಯ ಪೀಠಾಧಿಪತಿಗಳಾಗಿದ್ದ ಪರಂಪರೆಯ ಮೊದಲ ಶ್ರೀ ಶ್ರೀಮದ್ರಾಘವೇಂದ್ರಭಾರತೀಮಹಾಸ್ವಾಮಿಗಳ ಕಾಲದಲ್ಲಿ ಶ್ರೀರಾಮಚಂದ್ರಾಪುರಮಠದಲ್ಲಿ ವಿಲೀನವಾಗಿತ್ತು. ಒಂದು ಕಾಲದಲ್ಲಿ ಶ್ರೀರಾಮಚಂದ್ರಾಪುರಮಠಕ್ಕೆ ನಲವತ್ತು ಶಾಖಾ ಮಠಗಳಿದ್ದುದು ದಾಖಲೆಗಳಿಂದ ಕಂಡುಬರುತ್ತದೆ. ಎಷ್ಟೋ ಮಠಗಳು ಇಂದು ಹೆಸರನ್ನು ಮಾತ್ರ ಉಳಿಸಿಕೊಂಡಿವೆ. ಸಮೀಪದ ಬಿದ್ರಕಾನಿನಲ್ಲಿ ಈಗ ಚಿಕ್ಕದೇವಾಲಯವೊಂದು ಮಾತ್ರ ಗೋಚರಿಸುತ್ತಿದೆ.

|| ಹರೇ ರಾಮ ||

ವಿಳಾಸ :
ಶ್ರೀರಾಮಚಂದ್ರಾಪುರಮಠ,
ಭಾನ್ಕುಳಿ, ಅಂಚೆ : ಬೇಡ್ಕಣಿ, ತ್ಯಾರ್ಸಿ,
ಸಿದ್ಧಾಪುರ ತಾಲೂಕು, ಉತ್ತರ ಕನ್ನಡ ಜಿಲ್ಲೆ
ದೂರವಾಣಿ : 08389 – 291332

Facebook Comments