ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿಯಾದ ಅನಂತ ಸಂಪತ್ತಿನ ಒಡೆಯನಾದ ಅನಂತಪದ್ಮನಾಭ ಸ್ವಾಮೀ ದೇವಸ್ಥಾನದಲ್ಲಿ ಇನ್ನು ಮುಂದೆ ಪ್ರತಿನಿತ್ಯ ದೇಶೀ ಗೋವಿನ ಹಾಲಿನ ಅಭಿಷೇಕ ನಡೆಯಲಿದೆ ಎಂದು ಹೊಸನಗರ ಶ್ರೀ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿಳಿಸಿದರು. ಅವರು ಇಲ್ಲಿನ ಕೃಷ್ಣವಿಲಾಸ ಅರಮನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡುತ್ತಿದ್ದರು.
ಇಂದು ಅನಂತಪುರ – ತಿರುವನಂತಪುರ, ಕೇರಳ – ಕರ್ನಾಟಕ, ಸಂತ – ರಾಜರನ್ನು ಈ ಯಾತ್ರೆ ಒಂದು ಗೂಡಿಸಿದೆ, ಇನ್ನು ಮುಂದೆ ಕೇರಳದ ಎಲ್ಲ ದೇವಸ್ಥಾನದಲ್ಲಿ ದೇಶೀ ಗೋವಿನ ಅಭಿಷೇಕ ನಡೆಯಲಿ ಎಂದು ಹಾರೈಸಿದರು. ಕಾಸರಗೋಡು ಅನಂತಪುರ ದೇವಸ್ಥಾನದಿಂದ ಹೊರಟ ೧೮ ದೇಶೀ ಗೋವುಗಳ ‘ಅನ೦ತ ಗೋ ರಥಯಾತ್ರೆ’ ಕೇರಳದ ಅನೇಕ ದೇವಸ್ಥಾನಗಳನ್ನು ಸಂದರ್ಶಿಸಿ, ದೇಶೀ ಗೋ ತಳಿಯ ಮಹತ್ವವನ್ನು ಸಾರಿತು. ಈ ಸಂದರ್ಭದಲ್ಲಿ ತಿರುವಾಂಕೂರು ಸಂಸ್ಥಾನದ ರಾಜಾ ಉತ್ರಾಡ ತಿರುವಳ ಮಾರ್ತಾಂಡ ವರ್ಮ ಅವರಿಗೆ ಪೆರ್ಲ ಬಜಕ್ಕೊಡ್ಲು ಅಮೃತಧಾರ ಗೋಶಾಲೆಯಿಂದ ತಂದ ಗೋವುಗಳನ್ನು ಶ್ರೀಗಳವರು ಹಸ್ತಾಂತರಿಸಿದರು.

Facebook Comments