ಬೆಂಗಳೂರು : ನಾಡಿನ ದೊರೆಗಳು ಗೋರಕ್ಷಕರ ಬಗ್ಗೆ ಮಾತನಾಡುವ ಬದಲು, ಸಂವಿಧಾನದ ಆಶಯದಂತೆ ಗೋರಕ್ಷಣೆಯಲ್ಲಿ ತೊಡಗಿಕೊಳ್ಳಬೇಕಿದೆ. ಗೋಸಂರಕ್ಷಣೆ ರಾಷ್ಟ್ರೀಯ ನೀತಿಯಾಗಬೇಕಾದ ಅನಿವಾರ್ಯತೆ ಇದೆ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.

ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಗೋವನ್ನು ಉಳಿಸಿ – ಬೆಳಸಿ – ಪೂಜಿಸಿ ಎನ್ನುವುದು ಕೇವಲ ಯಾವುದೋ ವರ್ಗದ ನಂಬಿಕೆ ಅಥವಾ ಆಗ್ರಹಮಾತ್ರವಲ್ಲ. ವೇದ – ಉಪನಿಷತ್ತುಗಳಲ್ಲಿ ಗೋರಕ್ಷಣೆಗೆ ಕರೆನೀಡಲಾಗಿದೆ ಎಂದು ಗೋವನ್ನು ರಕ್ಷಿಸಬೇಕಾಗಿಲ್ಲ. ಧರ್ಮನಿರಪೇಕ್ಷ ರಾಷ್ಟ್ರವಾದ ನಮ್ಮ ದೇಶದ ಸಂವಿಧಾನದ ‘ರಾಜ್ಯ ನೀತೀಯ ಮಾರ್ಗದರ್ಶಿ ಸೂತ್ರ’ ಪರಿಚ್ಛೇದದಲ್ಲಿ ಗೋಸಂರಕ್ಷಣೆಯಲ್ಲಿ ಸರ್ಕಾರ ತೊಡಗಿಕೊಳ್ಳಬೇಕು ಎಂದು ಸೂಚಿಸಿದೆ. ಸಂವಿಧಾನವನ್ನು ಸರ್ಕಾರಗಳು ಒಪ್ಪುವುದಾದರೆ ಸರ್ಕಾರಗಳು ಗೋರಕ್ಷಣೆಯಲ್ಲಿ ತೊಡಗಿಕೊಳ್ಳಲೇ ಬೇಕು ಎಂದು ಆಗ್ರಹಿಸಿದರು.

ಭಾರತದ ಸಂವಿಧಾನದ ನಾಲ್ಕನೆಯ ಭಾಗವಾದ Directive Principles of State Policy (ರಾಜ್ಯ ನೀತಿಯ ಮಾರ್ಗದರ್ಶಿ ಸೂತ್ರಗಳು) 48 ನೆಯ ವಿಷಯ (article) ರೀತಿ ಹೇಳುತ್ತದೆ:

 1. The State shall endeavour to organise agriculture and animal husbandry on modern and scientific lines and shall, in particular, take steps for preserving and
  improving the breeds, and prohibiting the slaughter, of cows and calves and other milch and draught cattle.

ಸರಕಾರಕ್ಕೆ ನಮ್ಮ ಸಂದೇಶ ಇಷ್ಟೇ: ನಾವು ಹೇಳಿದ್ದನ್ನು ಮಾಡಬೇಡಿ, ಸಂವಿಧಾನ ಕರ್ತೃಗಳು ನಿಮಗೆ ಆದೇಶಿಸಿದ್ದನ್ನು ಮಾಡಿ!

ಶ್ರೀರಾಘವೇಶ್ವರಭಾರತೀ ಸ್ವಾಮಿಗಳು

ಸ್ವಾತಂತ್ರ್ಯಾನಂತರದಲ್ಲಿ ನಮ್ಮನ್ನಾಳಿದವರು ಗೋರಕ್ಷಣೆಗೆ ಏನು ಮಾಡಿದ್ದಾರೆ ಎಂದ ಪ್ರಶ್ನಿಸಿದ ಶ್ರೀಗಳು, ಮೈಸೂರು ಮಹಾರಾಜರು ಅಮೃತಮಹಲ್ ತಳಿಯನ್ನು ವಿಶೇಷವಾಗಿ ರಕ್ಷಿಸಿದ್ದರು, ಮೈಸೂರು ಮಹಾರಾಜರಿಗೆ  ಯುದ್ಧಗಳಲ್ಲೂ ಸಹಕರಿಸಿದ್ದ ಅಮೃತಮಹಲ್ ಇಂದು ವಿನಾಶದ ಅಂಚಿನಲ್ಲಿದೆ. ಸರ್ಕಾರಗಳು ಈ ಬಗ್ಗೆ ಗಮನಹರಿಸಬೇಕಾದ ಅನಿವಾರ್ಯತೆ ಇದೆ ಎಂದರು.

ಶ್ರೀರಮಾನಂದ ಸ್ವಾಮಿಜಿ, ಶಿವಾನಂದಾಶ್ರಮ, ನೆಲಮಂಗಲ ಸಂತಸಂದೇಶ ನೀಡಿ, ಮನುಕುಲದ ರಕ್ಷಣೆಗಾಗಿ ಗೋವನ್ನು ಸಂರಕ್ಷಿಸಬೇಕಿದೆ, ಗೋರಕ್ಷಣೆಗಾಗಿಯೇ ಜೀವನವನ್ನು ಮುಡಿಪಾಗಿಟ್ಟ ರಾಘವೇಶ್ವರ ಶ್ರೀಗಳ ಕಾರ್ಯ ಎಲ್ಲರಿಗೂ ಅನುಕರಣೀಯ ಎಂದು ಹೇಳಿದರು.

ನಾಗಪುರದ ಗೋವಿಜ್ಞಾನ ಅನುಸಂಧಾನ ಕೇಂದ್ರದ ಕಾರ್ಯದರ್ಶಿಗಳಾದ ಡಾ. ಸುನಿಲ್ ಮಾನ್ ಸಿಂಗ್ ಕಾ ಅವರಿಗೆ ಪೂಜ್ಯ ಶ್ರೀಗಳು ಗೋಸೇವಾ ಪುರಸ್ಕಾರವನ್ನು ಅನುಗ್ರಹಿಸಿದರು. ಅವರು ಗೋವಿಗೆ ಸಂಬಂಧಿಸಿದ ವೈಜ್ಞಾನಿಕ ವಿಚಾರಗಳನ್ನು ಹಂಚಿಕೊಂಡರು.  ಶ್ರೀಭಾರತೀಪ್ರಕಾಶನವು ಹೊರತಂದ ಅಹಲ್ಯಾಬಾಯಿ ಹೋಳ್ಕರ್ ಗೋಕಥಾ – ದೃಶ್ಯಮುದ್ರಿಕೆ ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ದೃಶ್ಯ ಮುದ್ರಿಕೆಯನ್ನು ಸಾನ್ನಿಧ್ಯವಹಿಸಿದ್ದ ಶ್ರೀಗಳು ಲೋಕಾರ್ಪಣೆ ಮಾಡಿದರು. ನಿರ್ಮಾಣ ವಿಭಾಗದಲ್ಲಿ ಉತ್ತಮ ಸೇವೆಸಲ್ಲಿಸಿದ ಮನಮೋಹನ ಕಲಗಲ್ ಅವರನ್ನು ಶ್ರೀಗಳು ಸನ್ಮಾನಿಸಿದರು. ಸಭಾಕಾರ್ಯಕ್ರಮದ ನಂತರ ಕಲಾರಾಮ ವೇದಿಕೆಯಲ್ಲಿ ಅರಭಿ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.

ಶ್ರೀಮಠದ ನಿರ್ಮಾಣ ವಿಭಾಗದಿಂದ ಸರ್ವಸೇವೆ ನೆರವೇರಿತು, ಅನೇಕ ನಿರ್ಮಾಣ ತಂತ್ರಜ್ಞರು ಭಾಗವಹಿಸಿ ಶ್ರೀಗಳಿಂದ ಆಶೀರ್ವಾದ ಪಡೆದರು. ಶ್ರೀಮಠದ ಪದಾಧಿಕಾರಿಗಳು, ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.

3.9.2016 ರ ಕಾರ್ಯಕ್ರಮ :

 • ಬೆಳಗ್ಗೆ 7.00 : ಕಾಮಧೇನು ಹವನ
 • ಬೆಳಗ್ಗೆ 9.00: ಕುಂಕುಮಾರ್ಚನೆ
 • ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
 • ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
 • ಮದ್ಯಾಹ್ನ 12.00 : ಫಲಸಮರ್ಪಣೆ, ಮಂತ್ರಾಕ್ಷತೆ ಅನುಗ್ರಹ
 • ಅಪರಾಹ್ನ 3.00 :
  ಗೋಸಂದೇಶ : ಸುಬ್ರಹ್ಮಣ್ಯ ಪ್ರಸಾದ್
  ಲೋಕಾರ್ಪಣೆ : ಗಮಕ ಕಲಾದರ್ಶನ ಪುಸ್ತಕ ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆ – ದೃಶ್ಯಮುದ್ರಿಕೆ
  ಗೋಸೇವಾಪುರಸ್ಕಾರ : ಸುಬ್ರಹ್ಮಣ್ಯ ಪ್ರಸಾದ್, ಉಮಾಮಹೇಶ್ವರ್
  ಸಂತ ಸಂದೇಶ :ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಂದ ಚಾತುರ್ಮಾಸ್ಯ ಸಂದೇಶ
 • ಸಂಜೆ: 5.00 : ಕಲಾರಾಮ : ಭರತನಾಟ್ಯ ಕಾರ್ಯಕ್ರಮ
 • ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
 • ರಾತ್ರಿ 8.00 : ಶ್ರೀಸಂಸ್ಥಾನದವರಿಂದ ‘ಸಾಧನಾಪಂಚಕ’ ಪ್ರವಚನ

 

Facebook Comments