“ಗೋಸೇವೆಯನ್ನು ಗುರುತಿಸಿ” ಶ್ರೀಗಳ ಅಭಿಮತ

ಬೆಂಗಳೂರು, ಜು.21 : ಗೊಸೇವಕರು ಗೊಸೇವೆಯನ್ನು ಸದ್ದಿಲ್ಲದೇ ಮಾಡುತ್ತಿರುತ್ತಾರೆ,ಅವರ ಕುರಿತು ನಾವು ಸದ್ದು ಮಾಡಬೇಕು, ಅವರ ಸೇವೆಯನ್ನು ಪ್ರಶಂಸಿಸುವ ಮೂಲಕ ಇತರರಿಗೆ ಸ್ಪೂರ್ತಿ ತುಂಬಬೇಕು ಎಂದು ಒಡಲು ಸಭಾಂಗಣದ ಮಡಿಲು ವೇದಿಕೆಯಲ್ಲಿ ಸಾನ್ನಿಧ್ಯವಹಿಸಿದ ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ತಮ್ಮ ಗೋಚಾತುರ್ಮಾಸ್ಯಸಂದೇಶದಲ್ಲಿ ಅಭಿಪ್ರಾಯಪಟ್ಟರು

ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ಗೋಕರ್ಣ ಉಪಾಧಿವಂತ ಮಂಡಳಿಯ ಸರ್ವಸೇವೆಯನ್ನು ಸ್ವೀಕರಿಸಿ ಮಾತನಾಡಿದ ಶ್ರೀಗಳು, ಗೋ ಮಾತೆಯದು ಮೂಕ ಸೇವೆ, ಜೀವಮಾನವಿಡಿ ಒಂದು ಮಾತನ್ನೂ ಆಡದೇ ಮನುಕುಲದ ಸೇವೆ ಮಾಡುತ್ತದೆ. ಅಂತಹ ಸದ್ದಿಲ್ಲದ ಸೇವೆಯನ್ನು ಸಮಾಜ ಗುರುತಿಸಬೇಕು ಹೇಗೆ ಗೋವುಗಳು ವಿವಿಧ ಬಣ್ಣಗಳಲ್ಲಿ ಇದ್ದರೂ ಹಾಲಿನ ಬಣ್ಣ ಸ್ವಚ್ಛ ಬಿಳಿ ಒಂದೇ ಆಗಿರುತ್ತದೋ, ಸಂತರ ಪರಂಪರೆ ಬೇರೆಬೇರೆ ಇದ್ದರೂ, ಅವರು ಕೊಡುಮಾಡುವವ ಉಪದೇಶ ಒಂದೇ, ಅದರಲ್ಲಿ ಭಿನ್ನತೆ ಇಲ್ಲ..ಅದು ಜೀವರಕ್ಷಕ ಬಿಳಿ ಹಾಲಿನಂತೆ ಎಂದು ನುಡಿದರು.

ಇಂದು ಬಿಡುಗಡೆಯಾದ ಸಾಧನಾಪಂಚಕ ಧ್ವನಿಸುರುಳಿಯ ಕುರಿತು ಮಾತನಾಡಿದ ಶ್ರೀಗಳು, ಐದು ಶ್ಲೋಕದಲ್ಲಿ ಸಾಧನೆ ಮಾಡುವುದು ಹೇಗೆ ಅಂಥ ತೋರಿಸಿದ್ದಾರೆ ಶಂಕಾರಾಚಾರ್ಯರು. ನಮ್ಮ ಜೀವನದ ಪ್ರತಿ ಹೆಜ್ಜೆಯೂ ಕೂಡ ಸಾಧನೆಯ ಮೆಟ್ಟಲಾಗಬೇಕು. ಆಸೆ ಕೆಡುಕು ಎಂದು ಹೇಳ್ತಾರೆ, ಆದರೆ ಎಲ್ಲ ಆಸೆಗಳೂ ಕೆಡುಕಲ್ಲ, ಒಳಿತಿನ ಆಸೆ ಎಂದಿಗೂ ಕೆಡುಕಲ್ಲ, ಕೆಡುಕಿನ ಆಸೆ ಕೆಡುಕು, ನಮ್ಮ ಆಸೆಯನ್ನು ತಿದ್ದುವ ಮೂಲಕ ಒಳಿತನ್ನು ಪಡೆಯೋಣ

ಇದಕ್ಕೂ ಮುನ್ನ ಸಾನ್ನಿಧ್ಯವಹಿಸಿದ್ದ ಶ್ರೀ ಭಂಡಾರಕೇರಿ ಮಠ, ಶ್ರೀ ಭಾಗವತ್ ಆಶ್ರಮದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ತಮ್ಮ ಗೋಸಂದೇಶದಲ್ಲಿ, ಯಜ್ಞಕ್ಕೆ ಬೇಕಾಗಿರುವ ಹವಿಸ್ಸನ್ನು ತಲುಪಿಸುವವರು ಬ್ರಾಹ್ಮಣರು, ಆದರೆ ಹವಿಸ್ಸನ್ನು ಒದಗಿಸುವುದು ಗೋವು. ಹೀಗಾಗಿ ಗೋ-ಬ್ರಾಹ್ಮಣರನ್ನು ರಕ್ಷಿಸಬೇಕು
ಭಾರತೀಯ ಗೋತಳಿಯಲ್ಲಿ ವಿಶೇಷ ಶಕ್ತಿಯಿದೆ. ಗೋವು, ಗಂಗೆ, ಗೀತೆ ಹಾಗೂ ಗಾಯತ್ರಿ – ಈ ನಾಲ್ಕು ‘ಗ’ಗಳನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದರು. ಗೋವಿನಲ್ಲಿ ಮಾತೃತ್ವದ ಭಾವನೆ ಕಂಡುಬರುತ್ತದೆ. ಹೀಗಾಗಿ ಗೋವನ್ನು ಕೇವಲ ರಾಷ್ಟ್ರೀಯ ಪ್ರಾಣಿಯನ್ನಾಗಲ್ಲ, ರಾಷ್ಟ್ರದ ಮಾತೆಯಾಗಿ ಘೋಷಿಸಬೇಕು ಆಕೆ ವಿಶ್ವದ ಮಾತೆ ಎಂದು ಅಭಿಪ್ರಾಯಪಟ್ಟರು. ಅಷ್ಟೇ ಅಲ್ಲದೆ, ನಿರಂತರ ಗೋ ರಕ್ಷಣೆಯನ್ನು ಮಾಡುತ್ತಿರುವ ರಾಘವೇಶ್ವರ ಶ್ರೀಗಳ ಅನನ್ಯ ಕಾರ್ಯವನ್ನು ಮನಸಾರೆ ಪ್ರಶಂಸಿಸಿದರು. ರಾಘವೆಶ್ವವರನ್ನು ಅಭಿನವ ಗೋಪಾಲಕ ಎಂದು ಕರೆದರು. ಅವಿರತ ಗೋವಿಗಾಗಿ ಶ್ರಮಿಸುತ್ತಿರುವ ರಾಘವೇಶ್ವರ ಶ್ರೀಗಳ ಜೊತೆ ನಾವೆಲ್ಲಾ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಹನುಮದ್ವಿಕಾಸಎಂಬ ಪುಸ್ತಕ ಶ್ರೀಭಾರತಿ ಪ್ರಕಾಶನದ ವತಿಯಿಂದ ಲೋಕಾರ್ಪಣೆಗೊಂಡಿತು ಹಾಗೆಯೇ ಶ್ರೀಕಾಂತ ಬೆಟಗೇರಿ ಹಾಗೂ
ಡಾ. ಸುಬ್ಬಯ್ಯ
ಇವರುಗಳು ಗೋಸೇವಾ ಪುರಸ್ಕಾರಕ್ಕೆ ಭಾಜನರಾದರು.

ಕಾರ್ಯನಿರ್ವಹಣಾಧಿಕಾರಿ ಕೆ. ಜಿ. ಭಟ್, ಶ್ರೀಸಂಸ್ಥಾನದವರ ಎಲ್ಲಾ ಕಾರ್ಯದರ್ಶಿಗಳು, ಪದಾಧಿಕಾರಿಗಳು, ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.

Facebook Comments