ಗೋಸೇವೆಗೆ ಮಹಾಫಲವಿದೆ : ರಾಘವೇಶ್ವರ ಶ್ರೀಗಳು

 ಗೋಸೇವೆಗೆ ಮಹಾಫಲವಿದೆ. ದಿಲೀಪ ಚಕ್ರವರ್ತಿ ಬ್ರಹ್ಮರ್ಷಿ ವಾಷಿಷ್ಠರ ಆಶ್ರಮದ ನಂದಿನಿ ಗೋವಿನ ಸೇವೆ ಮಾಡಿದ ಫಲವಾಗಿ ರಘು ಚಕ್ರವರ್ತಿಯಂತ ಕೀರ್ತಿಶಾಲಿಯಾದ ಪುತ್ರರತ್ನವನ್ನು ಪಡೆದ. ಹಾಗಾಗಿ ಗೋಸೇವೆ ಮಾಡಿದವ ಶ್ರೇಯಸ್ಸನ್ನು ಪಡೆಯುತ್ತಾನೆ ಎಂದು ಒಡಲು ಸಭಾಂಗಣದ ಮಡಿಲು ವೇದಿಕೆಯಲ್ಲಿ ಸಾನ್ನಿಧ್ಯವಹಿಸಿದ ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ತಮ್ಮ ಗೋಚಾತುರ್ಮಾಸ್ಯಸಂದೇಶದಲ್ಲಿ ಹೇಳಿದರು.

 

ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತರಾದ ಡಾ. ಭೀಮೇಶ್ವರ ಜೋಷಿ ಕುಟುಂಬದ ಸರ್ವಸೇವೆಯನ್ನು ಸ್ವೀಕರಿಸಿ ಮಾತನಾಡಿದ ಶ್ರೀಗಳು, ಯಾರು ದೇವರನ್ನು ಕಾಣಿಸುತ್ತಾನೆ ಹಾಗೂ ಕಾಣುತ್ತಾನೆ ಅವನು ಗುರು. ಗೋವು ಜಗತ್ತಿನ ಹಲವು ದೇವಸ್ಥಾನಗಳನ್ನು ತೋರಿಸಿದೆ. ಹಾಗಾಗಿ ಗೋವು ಮತ್ತು ಸಂತರಿಗೆ ಗುರುವಿನ ರೂಪದಲ್ಲಿ ಸಾಮ್ಯತೆ ಇದೆ. ಪ್ರಪಂಚವನ್ನು ಅರ್ಥ ಮಾಡಿಸುವುದು ವೇದ. ಪರಮಾರ್ಥದ ಯಥಾರ್ಥ ಜ್ಞಾನವೇ ಆಗಿದೆ. ಯಾವುದು ನಿತ್ಯವೋ ಅದು ಸತ್ಯ, ಯಾವುದು ಸತ್ಯವೋ ಅದು ನಿತ್ಯ, ನಿಮ್ಮ ಉಪಾಸನೆ ನಿತ್ಯವಾಗಲಿ, ನಿಮ್ಮ ಉಪಾಸನೆ ಸತ್ಯವಾಗಲಿ, ಅದು ನಿತ್ಯ ಸತ್ಯವನ್ನು ತಲುಪಲಿ ಎಂದು ಆಶೀರ್ವದಿಸಿದರು.

 

ಮುಳಬಾಗಿಲು ಶ್ರೀವಾದಿರಾಜಮಠದ ಶ್ರೀ ಶ್ರೀ ಕೇಶವನಿಧಿತೀರ್ಥರು ಸಂತಸಂದೇಶ ನೀಡಿ, ಗೋ ಸಂರಕ್ಷಣೆ ಬಹಳ ಮುಖ್ಯ, ಗೋಹತ್ಯೆ ತಡೆಯಬೇಕು. ಗೋಸಂಪತ್ತು ವೃದ್ಧಿಯಾಗಬೇಕು, ಇದರಿಂದ ದೇಶದ ಸಂಪತ್ತು ಹೆಚ್ಚಾಗುತ್ತದೆ ಎಂದರು.

 

ಶ್ರೀಗಳವರ ಜನ್ಮವರ್ಧಂತಿಯ ಪುಣ್ಯದಿನದ ಸೇವೆಯಿಂದ ಧನ್ಯರಾಗಿ ಮಾತನಾಡಿದ ಸೇವಾಕರ್ತ ಭೀಮೇಶ್ವರ ಜೋಶಿಯವರು, ಗೋವಿಗೆ ಪ್ರಧಾನ ಸ್ಥಾನ ನೀಡಿ ಕಾರ್ಯಕ್ರಮ ಮಾಡುವಂತಹ ಹೆಮ್ಮೆಯ ಪೀಠವಿದು. ಅರ್ಥಪೂರ್ಣವಾಗಿ ಬದುಕುವುದು ಶ್ರೇಷ್ಠ ಎಂದು ತೋರಿಸಿಕೊಟ್ಟವರು ರಾಘವೇಶ್ವರ ಶ್ರೀಗಳು ಎಂದರು. ಶಿವಪ್ರಸಾದ್ ಎನ್ ಭಟ್ ಇವರಿಗೆ ಗೋಸೇವಕ ಪುರಸ್ಕಾರ ನೀಡಲಾಯಿತು. ಶ್ರೀಭಾರತೀಪ್ರಕಾಶನವು ಹೊರತಂದ ನಿತ್ಯೋಪಾಸನಾ ಪುಸ್ತಕ ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ಧ್ವನಿಮುದ್ರಿಕೆಯನ್ನು ಲೋಕಾರ್ಪಣೆ ಮಾಡಲಾಯಿತು. ಮಹಾಬಲೇಶ್ವರ ಭಟ್ ದಂಪತಿ ಸಭಾಪೂಜೆ ನೆರವೇರಿಸಿದರು. ಕುಮಾರಿ ಸಂಧ್ಯಾ ಬಳಗದಿಂದ ಯೋಗಪ್ರದರ್ಶನ ಜರುಗಿತು.

ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ. ಜಿ. ಭಟ್, ಶ್ರೀಸಂಸ್ಥಾನದವರ ಕಾರ್ಯದರ್ಶಿಗಳು, ಪದಾಧಿಕಾರಿಗಳು, ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.

 

nityopasana-bidugade Yogasana2 BhimeshvaraJoshi Gousevapuraskara

Facebook Comments