ಬೆಂಗಳೂರು : ಕಾಲಕೆಟ್ಟಿದೆ ಎಂದು ಕೂರುವುದು ತರವಲ್ಲ, ನಮ್ಮ ತನವನ್ನು ಬಿಡಬಾರದು, ನಮ್ಮದೆಂಬ ಅಭಿಮಾನ ಎಂದೂ ಇರಬೇಕು, ಪ್ರವಾಹದ ವಿರುದ್ಧವಾಗಿ ಈಜುವುದಾದರೂ ಸರಿಯೇ, ಸತ್ಯವನ್ನು ಬಿಟ್ಟು ಹೋಗಬಾರದು ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.
ಗೋಚಾತುರ್ಮಾಸ್ಯದ ಅಂಗವಾಗಿ ಶ್ರೀರಾಮಚಂದ್ರಾಪುರದ ಬೆಂಗಳೂರು ಶಾಖಾಮಠದಲ್ಲಿ ಸಂಪನ್ನವಾದ ಗೋಕಥಾದಲ್ಲಿ ಕಲಿಯನ್ನೇ ಕಟ್ಟಿ ‘ರಾಜಾ ಕಾಲಸ್ಯ ಕಾರಣಂ’ ಎಂಬುದನ್ನು ನಿರೂಪಿಸಿದ ಪರೀಕ್ಷಿತನ ಕಥೆಯನ್ನು ನಿರೂಪಿಸಿದ ಶ್ರೀಗಳು, ಕೆಡುಕಿಗೆ ಒಳಿತನ್ನು ಕಂಡರಾಗದು, ಒಳಿತು ಹುಟ್ಟುವ ಮೊದಲೇ ಅದನ್ನು ನಾಶಮಾಡುವ ಪ್ರಯತ್ನಗಳಾಗುತ್ತವೆ, ಆದರೆ ಅರಕ್ಷಿತವಾದದ್ದನ್ನು ದೇವರು ಕಾಪಾಡುತ್ತನೆ ಎಂದು ಹೇಳಿದರು.

ಪರೀಕ್ಷಿತ ರಾಜನ ಪ್ರಕರಣದಲ್ಲಿ ಬರುವ ಧರ್ಮನಂದಿಯ ಬಗ್ಗೆ ವಿವರಿಸಿದ ಶ್ರೀಗಳು, ಕಲಿಯುಗದ ಆದಿಯಲ್ಲಿ ತಪಸ್ಸು, ಶುಚಿ ಹಾಗೂ ಕಾರುಣ್ಯ ವೆಂಬ ಮೂರು ಕಾಲುಗಳನ್ನು ಕಳೆದುಕೊಂಡು ಸತ್ಯಎಂಬ ಕಾಲಿನಲ್ಲಿ ನಿಂತಿತ್ತು. ದರ್ಪದಿಂದ ತಪಸ್ಸು ನಾಶವಾಗುತ್ತದೆ, ದುರ್ಜನ ಸಂಗದಿಂದ ಶುಚಿ ನಾಶವಾಗುತ್ತದೆ, ಮದದಿಂದ ಕಾರುಣ್ಯ ನಷ್ಟವಾಗುತ್ತದೆ , ಜೂಜು, ಪಾನ, ಸ್ತ್ರೀಸಂಗ ಹಾಗು ಹಿಂಸೆಯಲ್ಲಿ ಕಲಿ ಇದ್ದು ಇವುಗಳಿಂದ ದೂರವಿರಬೇಕು ಎಮ್ದು ಕಿವಿಮಾತು ಹೇಳಿದರು.

ರಾಜನೇ ಕಾಲಕ್ಕೆ ಕಾರಣನಾಗಿದ್ದು, ಪ್ರಜೆಗಳ ಪಾಪದಲ್ಲಿ ರಾಜನಿಗೂ ಪಾಲಿದೆ. ಕಲಿಪುರುಷ ಕಿರೀಟವನ್ನು ಹಾಕಿ ಮೆರೆಯುತ್ತಾನೆ, ಆದರೆ ಸಮಯಬಂದಾಗ ಕಾಲಿಗೆ ಬೀಳಲು ಹಿಂದೆಮುಂದೆ ನೋಡುವುದಿಲ್ಲ. ಈ ಬಗ್ಗೆ ಎಚ್ಚರಾವ್ಗಿರಬೇಕು. ಕಲಿಯನ್ನು ಮೀರಿನಿಂತರೆ ನಮ್ಮ ಜೀವನವನದಲ್ಲಿ ಕೃತಯುಗವನ್ನು ತಂದುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ಪ್ರವಚನ, ಕಥನ, ಗಾಯನ, ರೂಪಕಗಳನ್ನೊಳಗೊಂಡ ಈ ಗೋಕಥೆಯಲ್ಲಿ ಸಂದರ್ಭಕ್ಕೆ ಹೊಂದುವ ಚಿತ್ರಗಳನ್ನು ನೀರ್ನಳ್ಳೀ ಗಣಪತಿ ಅವರು ಮನಮೋಹಕವಾಗಿ ಚಿತ್ರಿಸಿದರು. ಡಾ| ಗಜಾನನ ಶರ್ಮ ಅವರ ಸಾಹಿತ್ಯ ಸಹಕಾರ, ಗಾಯನದಲ್ಲಿ ಶ್ರೀಪಾದ ಭಟ್, ದೀಪಿಕಾ ಭಟ್, ಸತ್ಯಜಿತ್ ಜೈನ್ ಕೊಲ್ಕೋತಾ, ಪೃಥ್ವಿ, ರಘುನಂದನ ಬೇರ್ಕಡವು ಹಾಗೂ ಸಂಗೀತ ವಾದ್ಯಗಳಲ್ಲಿ ಪ್ರಜ್ಞಾನಲೀಲಾಶುಕ ಉಪಾಧ್ಯಾಯ, ಗಣೇಶ್ ಕೆ.ಎಸ್., ಗಣೇಶ್ ಗುಂಡ್ಕಲ್, ಆದಿತ್ಯ ಭಟ್ ಕೆಕ್ಕಾರು ಮೊದಲಾದವರು ಭಾಗವಹಿಸಿದ್ದರು. ಅನಂತರ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರ ಸಾರಥ್ಯದಲ್ಲಿ ಮೂಡಿಬಂದ ಯುಗಧೇನು ರೂಪಕ ಜನರ ಮನತಟ್ಟಿತು. ಸಾವಿರಾರು ಜನರು ಈ ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಗೋಕಥೆಯ ನಂತರ ಶ್ರೀಗಳು ಹಾಗೂ ಗೋವಿನ ಸಮ್ಮುಖದಲ್ಲಿ ಸೇರಿದ ಸಾವಿರಾರು ಜನರು ಗೋರಕ್ಷಣೆಯ ಪ್ರತಿಜ್ಞೆಯನ್ನು ಕೈಗೊಂಡರು, ಗೋಕುಲಕ್ಕೆ ಒಳಿತಾಗಲೆಂಬ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
ಮಧ್ಯಾಹ್ನ ನಡೆದ ಸಭೆಯಲ್ಲಿ ಶ್ರೀಭಾರತೀಪ್ರಕಾಶನವು ಹೊರತಂದಿರುವ ಸಾಧನಾಪಂಚಕ ದೃಶ್ಯಮುದ್ರಿಕೆ ಹಾಗೂ ಗೋಕಥಾ ದೃಶ್ಯಮುದ್ರಿಕೆಯನ್ನು ಪೂಜ್ಯ ಶ್ರೀಗಳು ಲೋಕಾರ್ಪಣೆಗೊಳಿಸಿದರು. ವೈದ್ಯರ ಬಳಗ ಇಂದಿನ ಗೋಕಥಾ ಪ್ರಾಯೋಜಕತ್ವವನ್ನು ವಹಿಸಿತ್ತು. ಶ್ರೀಮಠದ ಪದಾಧಿಕಾರಿಗಳು, ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಶ್ರೀ ಸೂಕ್ತ ಜಪ, ಶ್ರೀ ಸೂಕ್ತ ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ ನಡೆಯಿತು.

29.08.2016 ರ ಕಾರ್ಯಕ್ರಮ:
ಬೆಳಗ್ಗೆ 7.00 : ಕಾಮಧೇನು ಹವನ
ಬೆಳಗ್ಗೆ 9.00 : ಕುಂಕುಮಾರ್ಚನೆ
ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
ಮದ್ಯಾಹ್ನ 12.00 : ಫಲಸಮರ್ಪಣೆ, ಮಂತ್ರಾಕ್ಷತೆ ಅನುಗ್ರಹ
ಅಪರಾಹ್ನ 3.00 :
ಗೋಸಂದೇಶ : ಎಂ ಬಿ ಪುರಾಣಿಕ್
ಲೋಕಾರ್ಪಣೆ : ಗೋ ಭಾರತ – ಪುಸ್ತಕ
ಸಾಧನಾಪಂಚಕ ಪ್ರವಚನಮಾಲಿಕೆ – ದೃಶ್ಯಮುದ್ರಿಕೆ
ಗೋಸೇವಾಪುರಸ್ಕಾರ : ಭಾಜನರು – ಎಂ ಬಿ ಪುರಾಣಿಕ್ ಹಾಗೂ ಗೀತಾ ಶೇಷಗಿರಿ ಭಟ್ಶ್
ಸಂತ ಸಂದೇಶ : ಶ್ರೀರಾಜಶೇಖರಾನಂದ ಸ್ವಾಮಿಜಿ, ವಜ್ರದೇಹಿ ಮಠ, ಮಂಗಳೂರು.
ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಂದ ಚಾತುರ್ಮಾಸ್ಯ ಸಂದೇಶ
ಸಂಜೆ: 5.00 : ಕಲಾರಾಮ : ಯಕ್ಷಗಾನ – ರಾಧಾಂತರಂಗ
ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
ರಾತ್ರಿ 8.00 : ಶ್ರೀಸಂಸ್ಥಾನದವರಿಂದ ‘ಸಾಧನಾಪಂಚಕ’ ಪ್ರವಚನ

Facebook Comments