LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಅನಂತಪುರದಿಂದ ತಿರುವನಂತಪುರಕ್ಕೆ “ಅನಂತ ಗೋಯಾತ್ರೆ”ಗೆ ಸಿದ್ಧತೆ

Author: ; Published On: ಶುಕ್ರವಾರ, ಅಕ್ತೂಬರ 11th, 2013;

Switch to language: ಕನ್ನಡ | English | हिंदी         Shortlink:

ಪೆರ್ಲ:
‘ಕೃಷಿ – ಆಹಾರ – ಆರೋಗ್ಯ’ ಎಂಬ ಧ್ಯೇಯವಾಕ್ಯದೊಂದಿಗೆ ಸಮಾಜದಲ್ಲಿ ಗೋವಿನ ಕುರಿತಾದ ಅರಿವು ಮತ್ತು ಜಾಗೃತಿ ಮೂಡಿಸುತ್ತಾ ಕೇರಳದ ಉತ್ತರದಲ್ಲಿರುವ ಅನಂತಪುರದಿಂದ ಹೊರಟು ದಕ್ಷಿಣದಲ್ಲಿರುವ ತಿರುವನಂತಪುರದ ಅನಂತಪದ್ಮನಾಭ ಸ್ವಾಮೀ ಸನ್ನಿಧಿಯನ್ನು ಸೇರಲಿರುವ ‘ಅನಂತ ಗೋಯಾತ್ರೆ’ಗೆ ಭರದ ಸಿದ್ಧತೆ ನಡೆಯುತ್ತಿದೆ. ಅಕ್ಟೋಬರ್ 14ರಂದು ಅನಂತಪುರದಿಂದ ವಿಧ್ಯುಕ್ತ ಚಾಲನೆ ಪಡೆಯಲಿರುವ ಯಾತ್ರೆಯು 17 ರಂದು ತಿರುವನಂತಪುರವನ್ನು ತಲಪಲಿದೆ. ಯಾತ್ರೆಯ ಅಂಗವಾಗಿ ವಿಶಿಷ್ಟವಾದ ‘ಕಾಸರಗೋಡು ತಳಿ’ ಗೋವುಗಳನ್ನು ಅಕ್ಟೋಬರ್ 18 ರಂದು ಶ್ರೀಅನಂತಪದ್ಮನಾಭ ಸ್ವಾಮೀ ದೇವರ ಸನ್ನಿಧಿಗೆ ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ಸಮರ್ಪಿಸಲಾಗುವುದು.
ಸುಭಾಶ್ ಪಾಳೇಕರ್ ಕೃಷಿ ವಿಧಾನ ಕೇರಳದಲ್ಲಿ ಜನಪ್ರಿಯವಾಗುವುದರೊಂದಿಗೆ ಶೂನ್ಯ ಬಂಡವಾಳದ ಕೃಷಿಗೆ ಸೂಕ್ತವಾದ ‘ಕಾಸರಗೋಡು ತಳಿ’ ಹಸುವಿನ ಕುರಿತ ಜಾಗೃತಿ ಸಮಾಜದಲ್ಲಿ ಮೂಡಲಾರಂಭಿಸಿದೆ. ಹೊಸನಗರ ಶ್ರೀರಾಮಚಂದ್ರಾಪುರ ಮಠದ ‘ಕಾಮದುಘಾ’ ಯೋಜನೆಯ ಮೂಲಕ ಸಮಾಜದ ಆರೋಗ್ಯಕ್ಕಾಗಿ ತಯಾರಿಸಲಾದ ಪಂಚಗವ್ಯ ಉತ್ಪನ್ನಗಳ ಕುರಿತಾಗಿ ಕೇರಳ ಸರಕಾರವೇ ಆಸಕ್ತಿಯಿಂದ ಸಂಶೋಧನೆ ನಡೆಸುತ್ತಿದೆ. ಈಗಾಗಲೇ ಕೇಂದ್ರ ಸರಕಾರದ ‘ಆಯುಷ್’ ಸಂಸ್ಥೆಯಿಂದ ಅಂಗೀಕರಿಸಲ್ಪಟ್ಟ ಈ ಉತ್ಪನ್ನಗಳು ಇನ್ನೊಂದು ಸರಕಾರೀ ಪ್ರಯೋಗಶಾಲೆಯಿಂದ ಅಂಗೀಕಾರ ಪಡೆಯುವುದರೊಂದಿಗೆ ಪಂಚಗವ್ಯ ಉತ್ಪನ್ನಗಳು ಹೆಚ್ಚಿನ ಮಹತ್ವ ಪಡೆಯಲಿದೆ.
ಪುರಾಣ ಪ್ರಸಿದ್ಧ ಹಾಗೂ ಅನಂತಪದ್ಮನಾಭ ಸ್ವಾಮಿಯ ಮೂಲಕ್ಷೇತ್ರ ಅನಂತಪುರದಲ್ಲಿ ಅರ್ಚಕರಾಗಿದ್ದ ಬಿಲ್ವಮಂಗಲ ಸ್ವಾಮಿಗಳಿಗೆ ಬಾಲಕನ ರೂಪದಲ್ಲಿ ಕಾಣಿಸಿಕೊಂಡ ಭಗವಂತನು, ಅವರು ತನ್ನನ್ನು ಹಿಂಬಾಲಿಸುವಂತೆ ಮಾಡಿ ತಿರುವನಂತಪುರದಲ್ಲಿ ಅನಂತಶಯನನಾಗಿ ತನ್ನ ದರ್ಶನ ನೀಡಿ ಈ ಎರಡು ಪುಣ್ಯ ಕ್ಷೇತ್ರಗಳ ನಡುವೆ ಸಂಬಂಧ ಬೆಸೆಯಿತೆಂಬ ಐತಿಹ್ಯವಿದೆ. ಪ್ರಸ್ತುತ ವಿಜಯ ನಾಮ ಸಂವತ್ಸರದ ವಿಜಯದಶಮಿಯಂದು ಹೊರಡುವ ಗೋಯಾತ್ರೆಯು ಅನಂತಪುರದಲ್ಲಿ ನಡೆಯಲಿರುವ ‘ನವಾನ್ನ’ದ ದಿನದಂದೇ ತಿರುವನಂತಪುರದಲ್ಲಿ ಅನಂತಶಯನನಿಗೆ ಕಾಸರಗೋಡು ತಳಿ ಹಸುವಿನ ಕ್ಷೀರಾಭಿಷೇಕ ನಡೆಸುವ ಮೂಲಕ ಸಂಪನ್ನಗೊಳ್ಳಲಿದೆ. ಈ ಮೂಲಕ ಪುರಾಣ ಪ್ರಸಿದ್ಧ ಸಂಬಂಧವನ್ನು ಗೋಮಾತೆ ಮತ್ತೆ ಗಟ್ಟಿಗೊಳಿಸುತ್ತಿದ್ದಾಳೆ.
ಗೋಸಾಕಣೆಗೆ ಪೂರಕವಾಗುವ ‘ಅನಂತ ಗೋಯಾತ್ರೆ’ಯು ಕಾಸರಗೋಡು ಜಿಲ್ಲೆಯಲ್ಲಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಅಕ್ಟೋಬರ್ 13 ರಂದು ಬೆಳಗ್ಗೆ 7.30ಕ್ಕೆ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಟು ಪೆರ್ಲ, ಇಡಿಯಡ್ಕ ಕ್ಷೇತ್ರ, ಕುಂಬಳೆ, ಮಧೂರು ಮೂಲಕ ಸಂಚರಿಸಿ ಅಣಂಗೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಸಂಗಮಗೊಳ್ಳಲಿದೆ.
ಸಂಜೆ 4 ಗಂಟೆಗೆ ಅಣಂಗೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಶಾರದಾಂಬಾ ಸೇವಾ ಸಂಘದ ಅಧ್ಯಕ್ಷ ಪಿ.ಭಾಸ್ಕರ ವಹಿಸಲಿದ್ದಾರೆ. ಚಿನ್ಮಯ ಮಿಷನ್ ಕಾಸರಗೋಡಿನ ಶ್ರೀ ಶ್ರೀ ವಿವಿಕ್ತಾನಂದ ಸರಸ್ವತಿ ಸ್ವಾಮೀಜಿ, ಬ್ರಹ್ಮಶ್ರೀ ವಿಷ್ಣು ಆಸ್ರ ಉಳಿಯ, ಉದ್ಯಮಿ ಕೆ.ಸಿ.ನಾಯಕ್, ಕಾಸರಗೋಡು ನಗರಸಭೆಯ ಪ್ರತಿಪಕ್ಷ ನಾಯಕ ರಮೇಶ್.ಪಿ, ದಿನೇಶ್ ಮಡಪ್ಪುರಂ, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಈ ಸಂದರ್ಭದಲ್ಲಿ ಗುರುತಿಸಲಾದ ಹತ್ತು ಮಂದಿ ದಾನಿಗಳು ಹಸುವಿನ ಆರೋಗ್ಯ ಪರಿಪಾಲನೆಗಾಗಿ ಅವುಗಳನ್ನು ದತ್ತು ಸ್ವೀಕರಿಸುವ ‘ಗೋ ದತ್ತು ಸ್ವೀಕಾರ’ ಯೋಜನೆಗೆ ಚಾಲನೆ ದೊರೆಯಲಿದೆ.
ಅಕ್ಟೋಬರ್ 14 ರಂದು ಬೆಳಗ್ಗೆ 10 ಗಂಟೆಗೆ ಅನಂತಪುರ ದೇವಸ್ಥಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳು ದೀಪ ಬೆಳಗಿಸಿ ಯಾತ್ರೆಯನ್ನು ವಿಧ್ಯುಕ್ತವಾಗಿ ಉದ್ಘಾಟಿಸಲಿದ್ದಾರೆ. ಶ್ರೀ ಅನಂತಪದ್ಮನಾಭ ಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ಬಿ.ವಸಂತ ಪೈಯವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಖ್ಯಾತ ಮಲಯಾಳ ಚಿತ್ರ ನಟಿ ಮೇನಕಾ, ಮಲಯಾಳ ಚಿತ್ರ ನಿರ್ಮಾಪಕ ಸುರೇಶ್ ಕುಮಾರ್, ಮಾಧ್ಯಮ ಸಲಹೆಗಾರ ವಿಜಯಕೃಷ್ಣನ್. ಎಸ್, ಅನಂತಪುರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರಮಾನಾಥ ಶೆಟ್ಟಿ, ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರ ಮಾರಪ್ಪ ಭಂಡಾರಿ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದ ಯಶಸ್ಸಿಗಾಗಿ ಸ್ಥಳೀಯ ಪ್ರಕೃತಿ ಯುವ ತಂಡದ ಸದಸ್ಯರು ಜನಜಾಗೃತಿ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ಬದಿಯಡ್ಕದ ಗಣೇಶ ಮಂದಿರದಲ್ಲಿ ಗೋಯಾತ್ರೆಯ ರಥ ಸಿದ್ಧಗೊಳ್ಳುತ್ತಿದೆ. ಈ ರಥವು ಗುರುವಾಯೂರು, ಪಾವಕ್ಕುಳಂ ಮೂಲಕ ಸಾಗಿ ಅಕ್ಟೋಬರ್ 16 ರಂದು ತಿರುವನಂತಪುರವನ್ನು ತಲಪಲಿದೆ. ದೇವಳಕ್ಕೆ ಸಮರ್ಪಿಸಲಾಗುವ ಗೋವುಗಳ ಪಾಲನೆ, ಪೋಷಣೆಗಳಿಗಾಗಿ ದೇಸೀ ತಳಿಯ ಗೋವುಗಳ ಪ್ರತ್ಯೇಕ ಗೋಶಾಲೆಯನ್ನು ತಿರುವನಂತಪುರದಲ್ಲಿ ಆರಂಭಿಸಲಾಗುವುದು ಎಂದು ಯಾತ್ರೆಯ ಸಂಘಟನಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ

(ವರದಿ: ರವಿಶಂಕರ ದೊಡ್ಡಮಾಣಿ, ಕುಂಬಳೆ)

5 Responses to ಅನಂತಪುರದಿಂದ ತಿರುವನಂತಪುರಕ್ಕೆ “ಅನಂತ ಗೋಯಾತ್ರೆ”ಗೆ ಸಿದ್ಧತೆ

 1. gshegde

  Very good -Jai Gow mata………….

  [Reply]

 2. Kuloor Subrhmanya, Mumbai

  Hare Raam,a,
  Vande Gou Mtaram

  [Reply]

 3. beleyur venu

  Vande Gou Mtaram

  [Reply]

 4. Mahesha Bhat Savanal

  hare rama

  [Reply]

 5. Senagasetti Rajendra Prasad

  Jai.. Gomatha…

  [Reply]

Leave a Reply

Highslide for Wordpress Plugin