LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಹನುಮಂತನ ವಾಕ್-ಕೌಶಲ – ಡಾ|| ಕೆ. ಎಸ್. ಕಣ್ಣನ್

Author: ; Published On: ಸೋಮವಾರ, ಅಕ್ತೂಬರ 14th, 2013;

Switch to language: ಕನ್ನಡ | English | हिंदी         Shortlink:

ಹನುಮಂತನ ವಾಕ್-ಕೌಶಲ

– ಡಾ|| ಕೆ. ಎಸ್. ಕಣ್ಣನ್
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು.

ಸದಾ ರಾಮ-ರಾಮೇತಿ ನಾಮಾಮೃತಂ ತೇ
ಸದಾ ರಾಮಮ್ ಆನಂದ-ನಿಷ್ಯಂದ-ಕಂದಮ್ |
ಪಿಬಂತಂ ನಮಂತಂ ಸುದಂತಂ ಹಸಂತಂ
ಹನೂಮಂತಮ್ ಅಂತರ್ಭಜೇ ತಂ ನಿತಾಂತಮ್ ||

ಶ್ರೀಮದ್ವಾಲ್ಮೀಕಿ ರಾಮಾಯಣದ ಅತ್ಯಂತ ಚೇತೋಹಾರಿ ಪಾತ್ರಗಳಲ್ಲಿ ಹನೂಮಂತನೂ ಒಬ್ಬ. ದಾಸೋಽಹಂ ಕೋಸಲೇಂದ್ರಸ್ಯ – ಎಂಬುದಾಗಿ ಹೇಳಿಕೊಂಡ ಈ ದಾಸನ ಮಹಾಸಾಧನೆಗಳು ಶ್ರೀರಾಮಚಂದ್ರನ ಅಪೂರ್ವಸಾಧನೆಗಳಿಗೆ ತಕ್ಕ ಜೊತೆಯಾಗಬಲ್ಲವು. ಈ ಕಿರುಲೇಖನದಲ್ಲಿ ಆತನ ವಾಕ್ಕೌಶಲವನ್ನು ಕುರಿತು ಎರಡು ಮಾತುಗಳನ್ನಾಡಲಾಗಿದೆ.

ಹನುಮ-ರಾಮರ ಸಂವಾದ

ರಾಮ-ಹನುಮ

ರಾಮ-ಹನುಮ

ದೌತ್ಯಕರ್ಮ(ದೂತನ ಕಾರ್ಯ)ದಲ್ಲಿ ಪ್ರಧಾನವಾದ ಒಂದು ಅಂಶವೆಂದರೆ ಜವಾಬ್ದಾರಿಯಿಂದಲೂ ಜಾಣ್ಮೆಯಿಂದಲೂ ಮಾತನ್ನಾಡುವುದು. ರಾಮನಿಗೆ ಹನುಮಂತನ ಮೊಟ್ಟಮೊದಲ ಭೇಟಿಯಾಗುವುದು ಆತನು ಭಿನ್ನವೇಷದಲ್ಲಿ ಶ್ರೀರಾಮಚಂದ್ರನನ್ನು ಸಂಧಿಸುವ ಪ್ರಸಂಗದಲ್ಲಿ. ಆ ಸಂದರ್ಭದಲ್ಲೇ ರಾಮನ ಮೆಚ್ಚುಗೆಯನ್ನು ಆತನು ಸಂಪಾದಿಸುತ್ತಾನೆ. ರಾಮನು ಯಾರೆಂಬುದನ್ನೂ ಆತನಿಂದ ಸುಗ್ರೀವನಿಗೆ ಯಾವ ಪ್ರಯೋಜನವಾಗಬಹುದೆಂಬುದನ್ನೂ ಹನುಮಂತನು ತಿಳಿಯಬೇಕಾಗಿತ್ತು. ಆ ಸಂದರ್ಭದಲ್ಲಿ ಅವನು ರಾಮನೊಂದಿಗೆ ಆಡಿದ ಮಾತು ಅತ್ಯಂತ ಔಚಿತ್ಯಪೂರ್ಣ. ಆತನ ಮಾತಿನ ವರಸೆಯನ್ನು ಗಮನಿಸಿದ ರಾಮನು ಹನುಮಂತನ ಬಗ್ಗೆ ಹೀಗೆ ಭಾವಿಸಿಕೊಳ್ಳುತ್ತಾನೆ :

ಯಾವನು ಋಗ್ವೇದ-ಯಜುರ್ವೇದ-ಸಾಮವೇದಗಳನ್ನು ಅರಿಯನೋ ಅವನು ಈ ರೀತಿ ಮಾತನಾಡಲಾರ.

ನಾನೃಗ್ವೇದ-ವಿನೀತಸ್ಯ ನಾಯಜುರ್ವೇದ-ಧಾರಿಣಃ |
ನಾಸಾಮವೇದ-ವಿದುಷಃ ಶಕ್ಯಮೇವಂ ಪ್ರಭಾಷಿತುಮ್ ||

ಈತನು ಬಹಳಷ್ಟೇ ಮಾತಾಡಿದ್ದಾನಾದರೂ ಯಾವುದೇ ಅಪಶಬ್ದದ ಪ್ರಯೋಗವಿಲ್ಲವಾಗಿ, ಈತನು ಇಡೀ ವ್ಯಾಕರಣವನ್ನು ಬಗೆಬಗೆಯಾಗಿ ಕೇಳಿರಲೇಬೇಕು.
ನೂನಂ ವ್ಯಾಕರಣಂ ಕೃತ್ಸ್ನಮ್ ಅನೇನ ಬಹುಧಾ ಶ್ರುತಮ್ |
ಬಹು ವ್ಯಾಹರತಾನೇನ ನ ಕಿಂಚಿದ್ ಅಪಶಬ್ದಿತಮ್ ||

ಹನುಮಂತನ ಮಾತಿನ ಮತ್ತೊಂದು ವಿಶೇಷವನ್ನು ಶ್ರೀರಾಮಚಂದ್ರನು ತೋರಿಸಿಕೊಡುತ್ತಾನೆ. ಅದೆಂದರೆ, ಎಂತಹ ಶತ್ರುವಿನ ಮನಸ್ಸನ್ನೂ ಅದು ಸೆಳೆದುಬಿಡುವುದು. ಕೋಪಗೊಂಡ ಶತ್ರುವು ಪ್ರಹರಿಸಲು ಕತ್ತಿಯನ್ನೇ ಮೇಲೆ ಎತ್ತಿದ್ದರೂ, ಆತನ ಹೃದಯವೇ ಈತನ ಮಾತಿನಿಂದ ಸೂರೆಗೊಂಡು, ಆತನನ್ನು ಪ್ರಸನ್ನನನ್ನಾಗಿಸಿಬಿಡಬಲ್ಲುದು!
ಕಸ್ಯ ನಾರಾಧ್ಯತೇ ಚಿತ್ತಮ್ ಉದ್ಯತಾಸೇರರೇರಪಿ ? ||
ಈ ಮೇಲಿನದು ಕಿಷ್ಕಿಂಧಾಕಾಂಡದಲ್ಲಿ ನಡೆದ ಪ್ರಸಂಗ.

ಹನುಮ-ಸೀತೆಯರ ಸಂವಾದ
ಇನ್ನು, ಸುಂದರಕಾಂಡದಲ್ಲಿ ಶ್ರೀರಾಮಚಂದ್ರನ ಪತ್ನಿಯಾದ ಸೀತೆಯೊಂದಿಗೆ ನಡೆಯುವ ಆತನ ಸಂವಾದದ ಪ್ರಸಂಗವನ್ನು ಪರಿಶೀಲಿಸಬಹುದು.
ರಾವಣನನ್ನು ಕುರಿತಾಗಿ ಸೀತೆಗೆ ತೀವ್ರ ರೋಷದೊಂದಿಗೆ ಜುಗುಪ್ಸೆಯೂ ಭಯವೂ ಇದ್ದವು. ಅಂತಹ ಸೀತೆಗೆ ನಂಬಿಕೆಯನ್ನುಂಟುಮಾಡುವ ಮಾತುಗಳನ್ನಾಡುವುದು ಸುಲಭವಲ್ಲ. ಸೀತೆಯೆದುರಿಗೆ ಹನುಮಂತನು ತೋರಿಕೊಂಡಾಗ, “ರಾವಣನೇ ಈ ವೇಷದಲ್ಲಿ ಬಂದಿರಬಾರದೇಕೆ?” – ಎಂದೂ ಆಕೆಗೆ ಸಂಶಯವಾಯಿತು. ಸರಿಯಾದ ಸಂದರ್ಭದಲ್ಲಿ ರಾಮನಾಮದ ಗುರುತುಳ್ಳ ಉಂಗುರವನ್ನು ಹನುಮಂತನು ಸೀತೆಗೆ ಕೊಡುತ್ತಾನೆ.
ರಾಮ-ನಾಮಾಂಕಿತಂ ಚೇದಂ ಪಶ್ಯ ದೇವ್ಯಂಗುಲೀಯಕಮ್ |
ಆಗ ಸೀತೆಗಾದ ಸಂತೋಷಕ್ಕೆ ಪಾರವುಂಟೆ?

ರಾಮನ ಸುದ್ದಿಯನ್ನು ಸೀತೆಗೆ ಮುಟ್ಟಿಸಿದಂತೆ, ಸೀತೆಯ ಸುದ್ದಿಯನ್ನು ರಾಮನಿಗೆ ಮುಟ್ಟಿಸುವುದೂ ಆತನ ಕಾರ್ಯವಷ್ಟೆ? ತಾನು ಕಂಡದ್ದು ಸೀತೆಯನ್ನೇ – ಎಂಬ ನಂಬಿಕೆಯು ಶ್ರೀರಾಮಚಂದ್ರನಿಗೆ ಬರಬೇಕೆಂಬ ಉದ್ದೇಶದಿಂದ ಅವರಿಬ್ಬರಿಗೆ ಮಾತ್ರವೇ ವಿದಿತವಾದ ಪ್ರಸಂಗವೊಂದನ್ನು ಅವಳಿಂದ ಕೇಳಿತಿಳಿದುಕೊಳ್ಳುತ್ತಾನೆ.
ತಾನಿದನ್ನು ಹಿಂದಿರುಗಿ ಹೋಗಿ ರಾಮನಿಗೆ ತಿಳಿಸುವುದೇನೋ ಉಂಟಷ್ಟೆ? ಆದರೆ ರಾಮನು ಬರುವ ತನಕ ರಾವಣನ ಉಪಟಳವನ್ನು ತಡೆದುಕೊಂಡು ಸೀತೆಯು ಜೀವಸಹಿತಳಾಗಿ ಇರಬೇಕಷ್ಟೆ? ಅಷ್ಟೇ ಅಲ್ಲದೆ, ರಾಮಚಂದ್ರನು ತನ್ನನ್ನು ಕಾಪಾಡಿ ಕರೆದುಕೊಂಡು ಹೋಗುವನು – ಎಂಬ ನಂಬಿಕೆಯೂ ಅವಳಿಗೆ ಬರಬೇಕಷ್ಟೆ? ಇದಕ್ಕೋಸ್ಕರವಾಗಿ, ಸುಗ್ರೀವನ ಸೈನ್ಯದಲ್ಲಿ ಎಂತೆಂತಹವರಿರುವರು – ಎಂಬುದನ್ನು ಸೀತೆಗೆ ಮನದಟ್ಟುಮಾಡಿ ಧೈರ್ಯ ತುಂಬುತ್ತಾನೆ :

ಸುಗ್ರೀವನ ಸೈನ್ಯದಲ್ಲಿ ನನಗಿಂತಲೂ ಉತ್ಕೃಷ್ಟರೂ, ನನಗೆ ಸಮನಾದವರೂ ಇರುವರು. ನನಗಿಂತ ಕಡಿಮೆ ಸಾಮರ್ಥ್ಯವುಳ್ಳವನು ಯಾರೊಬ್ಬನೂ ಇಲ್ಲ.
ಮದ್ವಿಶಿಷ್ಟಾಶ್ಚ ತುಲ್ಯಾಶ್ಚ ಸಂತಿ ತತ್ರ ವನೌಕಸಃ |
ಮತ್ತಃ ಪ್ರತ್ಯವರಃ ಕಶ್ಚಿನ್ನಾಸ್ತಿ ಸುಗ್ರೀವಸಂನಿಧೌ ||
ಇದಕ್ಕಿಂತಲೂ ಹೆಚ್ಚಾಗಿ, ಸೀತೆಯ ವಿಷಯದಲ್ಲಿ ರಾಮನ ಪ್ರೀತಿಯು ಮೊದಲಿನಷ್ಟೇ ಗಾಢವಾಗಿಯೇ ಇರುವುದು – ಎಂಬ ಸತ್ಯಾರ್ಥವನ್ನೂ ಸಹ ಹನುಮಂತನು ಹೇಳದೇ ಬಿಡುವುದಿಲ್ಲ: ಸೊಳ್ಳೆಗಳೋ, ಕೀಟಗಳೋ, ತನ್ನ ಮೈಮೇಲೆ ಓಡಾಡಿದರೂ ರಾಮನು ಅವನ್ನು ದೂರಮಾಡುವತ್ತ ಗಮನಕೊಡನು – ಆತನ ಮನಸ್ಸು ನಿನ್ನಲ್ಲಿಯೇ ಲಗ್ನವಾಗಿರುವುದರಿಂದ!

ನೈವ ದಂಶಾನ್ ನ ಮಶಕಾನ್ ನ ಕೀಟಾನ್ ನ ಸರೀಸೃಪಾನ್ |
ರಾಘವೋಽಪನಯೇದ್ ಗಾತ್ರಾತ್ ತ್ವದ್ಗತೇನಾಂತರಾತ್ಮನಾ ||

ನಿದ್ರೆಯೇ ಬರದ ರಾಮನು ಅಕಸ್ಮಾತ್ತಾಗಿ ಒಮ್ಮೆ ನಿದ್ದೆಹೋದರೂ, ‘ಸೀತೆ, ಸೀತೆ’ ಎಂಬ ಮಧುರವಾದ ನಾಮವನ್ನು ಉಚ್ಚರಿಸುತ್ತಲೇ ಏಳುತ್ತಾನೆ!

ಅನಿದ್ರಃ ಸತತಂ ರಾಮಃ ಸುಪ್ತೋಽಪಿ ಚ ನರೋತ್ತಮಃ |
ಸೀತೇತಿ ಮಧುರಾಂ ವಾಣೀಂ ವ್ಯಾಹರನ್ ಪ್ರತಿಬುದ್ಧ್ಯತೇ ||

ಹನುಮ-ರಾವಣರ ಸಂವಾದ
ಯುದ್ಧಕಾಂಡದ ಮತ್ತೊಂದು ಪ್ರಸಂಗವಾಗಿ ರಾವಣನೊಡನೆ ಹನುಮಂತನು ಮಾತನಾಡಿದ ಬಗೆಯನ್ನು ಪರಿಶೀಲಿಸಬಹುದು : ಯಾರು ರಾಮನಿಗೆ ಯುದ್ಧದಲ್ಲಿ ವಧ್ಯರೆನಿಸಿರುವರೋ, ಅವರಿಗೆ ಬ್ರಹ್ಮನಾಗಲೀ ಶಿವನಾಗಲೀ ಇಂದ್ರನಾಗಲೀ – ಯಾರೂ ರಕ್ಷಣೆಕೊಡಲಾರರು.

ಬ್ರಹ್ಮಾ ಸ್ವಯಂಭೂಶ್ಚತುರಾನನೋ ವಾ
ರುದ್ರಸ್ತ್ರಿನೇತ್ರಸ್ತ್ರಿಪುರಾಂತಕೋ ವಾ |
ಇಂದ್ರೋ ಮಹೇಂದ್ರೋ ಸುರನಾಯಕೋ ವಾ
ತ್ರಾತುಂ ನ ಶಕ್ತಾ ಯುಧಿ ರಾಮ-ವಧ್ಯಮ್ ||
ಇಂದ್ರ-ಬ್ರಹ್ಮ-ರುದ್ರರಿಗೆ ರಾಮನು ಸಮನೆಂಬುದನ್ನು ಹನುಮಂತನು ಇಲ್ಲಿ ಸಾರಿದ್ದಾನೆ.
ಹನುಮಂತನ ಮಾತಿನ ಕೆಚ್ಚನ್ನು ನಿರೂಪಿಸುವ ಬೇರೊಂದು ಕೃತಿಯ ಶ್ಲೋಕದೊಂದಿಗೆ ಈ ಲೇಖನವನ್ನು ಮುಗಿಸಬಹುದು. ಈ ಸಂವಾದವನ್ನು ಹನುಮನ್ನಾಟಕದಿಂದ ತೆಗೆದುಕೊಂಡಿದೆ.

ಎಲೈ ಕಪಿಯೇ, ಯಾರು ನೀನು?
ಎಲವೋ! ನಿನ್ನ ಮಗನನ್ನು ಕೊಂದವನು ನಾನು! ಕೋದಂಡಧಾರಿಯಾದ ಜಗದ್ಗುರು ರಾಮಚಂದ್ರನ ದೂತ ನಾನು! ನನ್ನ ತೋಳೆಂಬ ದಂಡದಿಂದ ಬೀಳುವ ಪ್ರಹಾರಕ್ಕೆ ಯಾವ ತ್ರಿಕೂಟ ಪರ್ವತ, ಯಾವ ಮೇರು? ಇನ್ನು ರಾವಣನು ಮತ್ತದಾವ ಲೆಕ್ಕ? ಕೋಟಿಯು ಕೀಟದಂತೆ, ಅಷ್ಟೆ!
ರೇ ರೇ ವಾನರ, ಕೋ ಭವಾನ್?, ಅಹಮ್ ಅರೇ ತ್ವತ್-ಸೂನು-ಹಂತಾಽಽಹವೇ
ದೂತೋಽಹಂ ಖರಖಂಡನಸ್ಯ ಜಗತಾಂ ಕೋದಂಡದೀಕ್ಷಾಗುರೋಃ |
ಮದ್-ದೋರ್ದಂಡ-ಕಠೋರ-ತಾಡನ-ವಿಧೌ ಕೋ ವಾ ತ್ರಿಕೂಟಾಚಲಃ
ಕೋ ಮೇರುಃ ಕ್ವ ಚ ರಾವಣಸ್ಯ ಗಣನಾ ಕೋಟಿಸ್ತು ಕೀಟಾಯತೇ ||
ಹೀಗೆ ಶತ್ರುವಿನ ಎದೆಯನ್ನು ಝಲ್ಲೆನ್ನಿಸುವ ಬಗೆಯನ್ನೂ ಹನುಮಂತ ಬಲ್ಲ.

ಮೂರು ಮುಖಗಳು
ಈ ಪ್ರಕಾರವಾಗಿ ಅಪರಿಚಿತ ರಾಮನ ಪರಿಚಯಮಾಡಿಕೊಳ್ಳುವ ಸಮಯದಲ್ಲಿ ಹನುಮಂತನು ತೋರಿದ ಮಾತಿನ ಜಾಣ್ಮೆ, ಸೀತೆಯನ್ನು ಸಂಪರ್ಕಿಸಿದಾಗ ಆತನ ಉಕ್ತಿಯ ಮಾರ್ದವ ಹಾಗೂ ರಾವಣನನ್ನು ಎದುರಿಸುವಾಗ ಆತನ ವಾಕ್ಕಿನ ತೀಕ್ಷ್ಣತೆ – ಈ ಮೂರೂ ಕೂಡ ಅತ್ಯಂತ ಔಚಿತ್ಯಪೂರ್ಣವೂ, ಎಂದೇ ಪ್ರಭಾವಶಾಲಿಯೂ ಆಗಿರುವುದನ್ನು ಯಾರು ತಾನೆ ಮೆಚ್ಚರು?
ಮೊಟ್ಟಮೊದಲ ಭೇಟಿಯಲ್ಲೇ ರಾಮನು ಈತನ ವಾಕ್ಕೌಶಲ್ಯವನ್ನು ಕೊಂಡಾಡಿದುದು ಯುಕ್ತವೇ ಆಗಿದೆ :
ಈತನ ಮಾತು ಸಂಸ್ಕಾರಕ್ರಮದಿಂದ ಕೂಡಿದುದಾಗಿದೆ. ಮಾತಿನಲ್ಲಿ ವೇಗ-ವಿಳಂಬಗಳಿಲ್ಲ. ಕಲ್ಯಾಣಮಯವೂ ಮನೋಹರವೂ ಆದ ಮಾತು ಈತನದು.

ಸಂಸ್ಕಾರಕ್ರಮ-ಸಂಪನ್ನಾಮ್ ಅದ್ರುತಾಮ್ ಅವಿಲಂಬಿತಾಮ್ |
ಉಚ್ಚಾರಯತಿ ಕಲ್ಯಾಣೀಂ ವಾಚಂ ಹೃದಯಹಾರಿಣೀಮ್ ||

ಇಂತಹ ಹನೂಮಂತನ ಉಪಾಸನೆಯಿಂದ ಮಾತಿನಲ್ಲಿ ಪಟುತ್ವವು ಬರುವುದೆಂಬುದರಲ್ಲಿ ಸಂಶಯವೇನು?

ಬುದ್ಧಿರ್ಬಲಂ ಯಶೋ ಧೈರ್ಯಂ ನಿರ್ಭಯತ್ವಮ್ ಅರೋಗಿತಾ |
ಅಜಾಡ್ಯಂ ವಾಕ್ಪಟುತ್ವಂ ಚ ಹನೂಮತ್ಸ್ಮರಣಾದ್ ಭವೇತ್ ||

~*~

(ಕೃಪೆ: ಧರ್ಮಭಾರತೀ, ಅಕ್ಟೋಬರ್ 2013)

2 Responses to ಹನುಮಂತನ ವಾಕ್-ಕೌಶಲ – ಡಾ|| ಕೆ. ಎಸ್. ಕಣ್ಣನ್

 1. durgasharma korikkar

  Hareraama.

  [Reply]

 2. drdpbhat

  harerama.
  nitya ramasmaraneyondige hanumasmaraneyu seridare bere ennenu beku?
  budhirbalam yashodhairyam……
  harerama.

  [Reply]

Leave a Reply

Highslide for Wordpress Plugin