ಕಾಸರಗೋಡು:

ಭಾರತೀಯ ತಳಿಯ ಗೋವುಗಳ ಸಂರಕ್ಷಣೆ, ಸಂವರ್ಧನೆ ಹಾಗೂ ಸಂಬೋಧನೆಯ ಗುರಿಯೊಂದಿಗೆ ಹೊಸನಗರ ಶ್ರೀರಾಮಚಂದ್ರಾಪುರಮಠದ ‘ಕಾಮದುಘಾ’ ಯೋಜನೆಯ ಮೂಲಕ ಉತ್ಪಾದಿಸಲಾದ ವಿವಿಧ ಗವ್ಯ ಉತ್ಪನ್ನಗಳನ್ನು ಪರಿಶೀಲಿಸಿದ ಕೇರಳ ಸರಕಾರದ ಆರೋಗ್ಯ ಇಲಾಖೆಯು ಈ ಔಷಧಿಗಳ ಗುಣಗಳನ್ನು ತನ್ನ ಪ್ರಯೋಗಶಾಲೆಗಳಲ್ಲಿ ಪರೀಕ್ಷಿಸಿ ಔಷಧಿಗಳು ಕ್ರಮಬದ್ಧವಾಗಿವೆ ಮತ್ತು ಅವುಗಳು ಉಪಯೋಗಕ್ಕೆ ಯೋಗ್ಯವಾಗಿವೆ ಎಂಬ ವರದಿಯನ್ನು ನೀಡಿದೆ. ಕೃತಕ ಸ್ಟಿರಾಯ್ಡ್, ಅಲೋಪತಿಕ್ ಔಷಧಗಳು ಮತ್ತು ಇತರ ಯಾವುದೇ ಭಾರ ಲೋಹಗಳಿಲ್ಲದ ಈ ಔಷಧಿಗಳು ಆಯುರ್ವೇದೀಯ ಮೌಲ್ಯ ಇರುವವುಗಳು ಎಂದು ಈ ಮೂಲಕ ಸಾಬೀತಾಗಿದೆ.

ಗೇರು ಬೀಜದ ಅಧಿಕ ಪ್ರಮಾಣದ ಉತ್ಪಾದನೆಗಾಗಿ ಸಿಂಪಡಿಸಿದ ರಾಸಾಯನಿಕ ಎಂಡೋಸಲ್ಫಾನ್ ಅನೇಕ ಜೀವಗಳನ್ನು ಹಿಂಡಿ ಹಿಪ್ಪೆ ಮಾಡಿದೆ. ಪ್ರಸ್ತುತ ಈ ರಾಸಾಯನಿಕದ ಬಳಕೆಯನ್ನು ಎಂಡೋಸಲ್ಫಾನ್ ಬಾಧಿಸಿದ ಪ್ರದೇಶಗಳಲ್ಲಿ ನಿಷೇಧಿಸಲಾಗಿದ್ದರೂ ಭೂಮಿಯ ಜೊತೆಯಲ್ಲಿ ಬೆರೆತು ಹೋದ, ಜನಸಾಮಾನ್ಯರ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾದ ವಿಷದ ಪರಿಣಾಮಗಳು ಪರಿಣಾಮಕಾರಿಯಾಗಿ ಕಡಿಮೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 22, 2013 ರಂದು ಕಾಸರಗೋಡು ಜಿಲ್ಲೆಯ ಪುಲ್ಲೂರು ಪೆರಿಯ ಗ್ರಾಮ ಪಂಚಾಯತು ಮತ್ತು ಶ್ರೀಮಠದ ‘ಮಾ ಫೌಂಡೇಶನ್’ ಜಂಟಿಯಾಗಿ ಎಂಡೋಸಲ್ಫಾನ್ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ಪೆರಿಯಾ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಉಚಿತ ಪಂಚಗವ್ಯ ಚಿಕಿತ್ಸಾ ಕಾರ್ಯಕ್ರಮ ‘ನಿರಾಮಯ’ವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇರಳ ಸರಕಾರದ ಆರೋಗ್ಯ ಸಚಿವ ವಿ.ಎಸ್. ಶಿವಕುಮಾರ್ ಉದ್ಘಾಟನಾ ಕಾರ್ಯಕ್ರಮದ ನಂತರ ಈ ಔಷಧಿಗಳ ಬಗ್ಗೆ ತಮ್ಮ ಸಂಶಯವನ್ನು ವ್ಯಕ್ತಪಡಿಸಿ ಸುದೀರ್ಘ ಪರಿಶೀಲನೆಗೆ ಆದೇಶಿಸಿದ್ದರು. ಕೇರಳ ಸರಕಾರದ ಪ್ರಯೋಗಶಾಲೆಗಳಿಂದ ಪರಿಶೀಲನಾ ವರದಿ ಬಂದ ನಂತರವೇ ಈ ಯೋಜನೆಯನ್ನು ಅನುಷ್ಟಾನಗೊಳಿಸತಕ್ಕದ್ದು ಎಂದು ಅವರು ಕಾರ್ಯಕ್ರಮದ ವ್ಯವಸ್ಥಾಪಕರಿಗೆ ತಿಳಿಸಿದ್ದರು.

ಕೇಂದ್ರ ಸರಕಾರದ ಅಧಿಕೃತ ಸಂಸ್ಥೆ ಮತ್ತು ಪ್ರಯೋಗಶಾಲೆ ‘ಆಯುಷ್’ ನಿಂದ ದೊರೆತಿರುವ ಸರ್ಟಿಫಿಕೇಟುಗಳನ್ನು ಈ ಸಂದರ್ಭದಲ್ಲಿ ಸಚಿವರಿಗೆ ನೀಡಿದ್ದರೂ ಪೂರ್ವಾಗ್ರಹ ಪೀಡಿತರಂತಿದ್ದ ಸಚಿವರು ಈ ದಾಖಲೆಗಳನ್ನು ಕನಿಷ್ಟ ಪರಿಶೀಲನೆಗೂ ನೀಡಿಲ್ಲ ಎಂಬ ಟೀಕೆ ವ್ಯಾಪಕವಾಗಿ ಈ ಸಂದರ್ಭದಲ್ಲಿ ಕೇಳಿಬಂದಿತ್ತು. ಸ್ಥಳೀಯ ಕೆಲ ರಾಜಕಾರಣಿಗಳ ಕುಹಕದ ರಾಜಕಾರಣಕ್ಕೆ ಬಲಿಯಾಗಿ ಉತ್ತಮ ಚಿಕಿತ್ಸೆ ದೊರೆಯುವಂತಿದ್ದ ಉಚಿತ ಕಾರ್ಯಕ್ರಮವನ್ನು ಅನಿವಾರ್ಯವಾಗಿ ರದ್ದುಪಡಿಸಬೇಕಾಗಿ ಬಂದಿತ್ತು. ಸಚಿವರ ಈ ಕ್ರಮದ ಬಗ್ಗೆ ಎಂಡೋ ಪೀಡಿತ ವಿದ್ಯಾರ್ಥಿಗಳ ಹೆತ್ತವರು, ಕೆಲವು ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳು ವ್ಯಾಪಕ ಪ್ರತಿಭಟನೆಗೆ ಸಜ್ಜಾಗಿದ್ದವು. ಆದರೆ ಇವರನ್ನು ಸಮಾಧಾನಪಡಿಸಿದ ಹೊಸನಗರ ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಶ್ರೀಗಳು ಕಾನೂನಿನ ಪ್ರಕ್ರಿಯೆಗೆ ಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದ್ದರು.

ಈ ನಿಟ್ಟಿನಲ್ಲಿ ಸೆಪ್ಟೆಂಬರ್ 23 ರಂದು ಪೆರಿಯಾದಲ್ಲಿರುವ ‘ನಿರಾಮಯ’ ಆಸ್ಪತ್ರೆಗೆ ಆಗಮಿಸಿದ್ದ ಕಲ್ಲಿಕೋಟೆ ವಿಭಾಗದ ಡ್ರಗ್ಸ್ ಇನ್‌ಸ್ಪೆಕ್ಟರ್ (ಆಯುರ್ವೇದ) ಡಾ| ಜಯಾ. ವಿ. ದೇವ್ ಕಾಮದುಘಾ ಯೋಜನೆಯ ಕೆಲವು ಗವ್ಯ ಉತ್ಪನ್ನಗಳಾದ ಪಂಚಗವ್ಯ ಘೃತ, ಅಭ್ಯಂಗ ತೈಲ, ಗೋತೀರ್ಥ ಅರ್ಕ, ಶಮನ ತೈಲ, ವೈಶ್ವಾನರಚೂರ್ಣ ಇವುಗಳನ್ನು ವಶಪಡಿಸಿ ವಿಸ್ತೃತ ಅಧ್ಯಯನಕ್ಕಾಗಿ ಕೊಂಡೊಯ್ದಿದ್ದರು. ಪ್ರಸ್ತುತ ಈ ಪರಿಶೀಲನೆಗಳ ವರದಿಗಳು ಬಂದಿದ್ದು ಕಾಮದುಘಾ ಯೋಜನೆಯ ಗವ್ಯ ಉತ್ಪನ್ನಗಳು ಕ್ರಮಬದ್ಧವಾಗಿವೆ ಎಂದು ಮತ್ತೊಮ್ಮೆ ಸಾಬೀತಾಗಿದೆ. ಹೀಗೆ 1999 ಎಪ್ರಿಲ್ ತಿಂಗಳಲ್ಲಿ ಪರಮಪೂಜ್ಯ ಶ್ರೀಗಳ ಪೀಠಾರೋಹಣ ಸಂದರ್ಭದಲ್ಲಿ ಆರಂಭವಾದ ‘ಕಾಮದುಘಾ’ ಯೋಜನೆಯ ಹೆಗ್ಗಳಿಕೆಗೆ ಈ ವರದಿಯು ಮತ್ತೊಂದು ಗರಿ ಮೂಡಿಸಿದೆ.

ಭಾರತೀಯ ಗೋವಿಗೆ ಬೆನ್ನ ಮೇಲೆ ಗೋಪುರ ಆಕಾರದ ಭುಜವಿರುತ್ತದೆ. ಕೊರಳಿನ ಸುತ್ತ ಮಾಲೆಯ ರೀತಿಯಲ್ಲಿ ಚರ್ಮ ಜೋತಾಡುತ್ತಿರುತ್ತದೆ. ಬೆನ್ನಮೇಲೆ ಸೂರ್ಯಕೇತುನಾಡಿ ಎಂದು ಗುರುತಿಸಲ್ಪಡುವ ಸುಳಿ ಇರುತ್ತದೆ. ಈ ಯಾವ ಲಕ್ಷಣವೂ ವಿದೇಶಿ ತಳಿಗಳಲ್ಲಿರುವುದಿಲ್ಲ. ಈ ಕಾರಣದಿಂದಾಗಿ ಶ್ರೇಷ್ಟವಾದ ದೇಸೀ ತಳಿಯ ಹಸುವಿನ ಹಾಲು, ಮೊಸರು, ತುಪ್ಪ, ಗೋಮೂತ್ರ ಮತ್ತು ಸೆಗಣಿಗಳ ಮಿಶ್ರಣದಿಂದ ತಯಾರಿಸಲ್ಪಡುವ ಪಂಚಗವ್ಯ ಚಿಕಿತ್ಸಾ ವಿಧಾನವು ಉತ್ಕೃಷ್ಟ ಔಷಧೀಯ ಗುಣಗಳನ್ನು ಹೊಂದಿವೆ.

ಈಗಾಗಲೇ ನಡೆದ ಅಧ್ಯಯನಗಳಿಂದ ಪಂಚಗವ್ಯ ಚಿಕಿತ್ಸೆಯು ಎಂಡೋಸಲ್ಫಾನ್‌ನಿಂದ ಉಂಟಾದ ಚರ್ಮ ರೋಗಗಳು, ರೋಗ ನಿರೋಧಕತೆಯ ಕೊರತೆ, ಆಂಶಿಕ ಅಂಗವೈಕಲ್ಯ ಇತ್ಯಾದಿ ಸಮಸ್ಯೆಗಳಿಗೆ ದೇಸೀ ತಳಿಯ ಗೋವಿನ ಉತ್ಪನ್ನಗಳಿಂದ ತಯಾರಿಸಿದ ಪಂಚಗವ್ಯ ಔಷಧಿಯು ಅತ್ಯಂತ ಪರಿಣಾಮಕಾರಿ ಎಂದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಪೆರಿಯಾದಲ್ಲಿರುವ ‘ಮಹಾತ್ಮ ಬಡ್ಸ್ ಸ್ಕೂಲ್’ ವಿದ್ಯಾರ್ಥಿಗಳ ನೂರು ಜನರ ತಂಡಕ್ಕೆ ಪ್ರಯೋಗಾತ್ಮಕವಾಗಿ ಉಚಿತ ಚಿಕಿತ್ಸೆ ನೀಡಲು ಉದ್ದೇಶಿಸಲಾಗಿತ್ತು. ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ಪಂಚಕರ್ಮ ಚಿಕಿತ್ಸೆ, ವಿವಿಧ ಮಸಾಜ್‌ಗಳು, ಸೂಕ್ತ ಔಷಧಿಗಳನ್ನು ನೀಡಲು ಎಲ್ಲ ಏರ್ಪಾಡುಗಳು ಪೂರ್ತಿಯಾಗಿದ್ದವು. ಆದರೆ ಈ ಸಂದರ್ಭದಲ್ಲಿ ಕೇಂದ್ರ ಸರಕಾರದ ಅಂಗೀಕಾರದ ಹೊರತಾಗಿಯೂ ಸಚಿವರು ಗೊಂದಲಮಯ ಹೇಳಿಕೆ ನೀಡಿದ್ದರಿಂದ ಕಾರ್ಯಕ್ರಮವನ್ನು ಕೈಚೆಲ್ಲಬೇಕಾಯಿತು.

ಆದರೆ ಕೇರಳ ಸರಕಾರದ ಅಡೆತಡೆಯ ಹೊರತಾಗಿಯೂ ಪಂಚಗವ್ಯ ಚಿಕಿತ್ಸೆಗೆ ಎಲ್ಲಿಯೂ ಬೇಡಿಕೆ ಕಡಿಮೆಯಾಗಿರಲಿಲ್ಲ ಎಂಬುದೇ ನೆಲಮೂಲದ ಈ ಸಾಂಪ್ರದಾಯಿಕ ಚಿಕಿತ್ಸೆಯ ಮಹತ್ವವನ್ನು ಸಾರುತ್ತದೆ. ಕೇರಳ ಸರಕಾರದ ಈ ಗೊಂದಲಗಳ ನಡುವೆಯೇ ಕೇರಳದ ಉತ್ತರದ ಅನಂತಪುರದಿಂದ ದಕ್ಷಿಣದ ತಿರುವನಂತಪುರಕ್ಕೆ ‘ಅನಂತ ಗೋಯಾತ್ರೆ’ ಯನ್ನು ಶ್ರೀಗಳು ಕೈಗೊಂಡಿರುವುದು ದೇಸೀ ಹಸುಗಳ ಬಗ್ಗೆ ಸಾಮಾಜಿಕ ಜಾಗೃತಿ ಮೂಡಿಸಲು ನೆರವಾಗಿತ್ತು. ಪ್ರಸ್ತುತ ಎಲ್ಲ ಸಂಶಯಗಳಿಗೆ ಕೇರಳ ಸರಕಾರದ ಆರೋಗ್ಯ ಇಲಾಖೆಯೇ ಸಂಶೋಧನೆ ನಡೆಸಿ ಧನಾತ್ಮಕ ಫಲಿತಾಂಶದ ವರದಿ ನೀಡಿದೆ. ಈ ಸುದ್ದಿ ತಿಳಿದ ತಕ್ಷಣ ‘ನಿರಾಮಯ’ ಯೋಜನೆಯನ್ನು ಮುಂದುವರಿಸಲು ಎಂಡೋಸಲ್ಫಾನ್ ಪೀಡಿತರಿಂದ ಅಪಾರ ಬೇಡಿಕೆ ವ್ಯಕ್ತವಾಗಿದೆ. ಆದರೆ ಇನ್ನು ಮುಂದಿನ ಹಂತಗಳಲ್ಲಿ ‘ನಿರಾಮಯ’ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ ಎಂದು ಕಾರ್ಯಕ್ರಮದ ವ್ಯವಸ್ಥಾಪಕ ಪೂಚಕ್ಕಾಡು ವಿಷ್ಣುಪ್ರಸಾದ ಹೆಬ್ಬಾರ್ ತಿಳಿಸಿದ್ದಾರೆ.

ವರದಿ: ರವಿಶಂಕರ ದೊಡ್ಡಮಾಣಿ

Facebook Comments Box