ನಾಗರ ಪೂಜೆ ಹಿರಿಮೆ ತಿಳಿಸುವ ಲೇಖನ ‘ನಾಗೋಪಾಸನೆಯ ಮಹತ್ತ್ವ’ ನಾಗರಪಂಚಮಿಯ ಶುಭ ಅವಸರದಲ್ಲಿ ಹರೇರಾಮ ಓದುಗರಿಗಾಗಿ …
ವಿದ್ವಾನ್ ಆದರ್ಶ ಭಟ್, ಉಡುಚೆ ಅವರ ಈ ಲೇಖನ ಧರ್ಮಭಾರತೀ ಪತ್ರಿಕೆಯಲ್ಲಿ ಅಗಷ್ಟ್ -೨೦೧೩ ಸಂಚಿಕೆಯಲ್ಲಿ ಪ್ರಕಟಿತ.

ಕಲ್ಲು ನಾಗರಕ್ಕೆ ಹಾಲೆರೆಯುವುದು ಒಂದು ಹಾಸ್ಯಾಸ್ಪದ ಸಂಗತಿ,
ಅದು ಸನಾತನ ಧರ್ಮಕ್ಕೆ ಕಳಂಕ ಎಂದು ನಾಗರಪೂಜೆಯ ಹಿಂದಿನ ತಥ್ಯ ಪ್ರಶ್ನಿಸುವ ಮನೋಭಾವ ಹೆಚ್ಚು ಹೆಚ್ಚು ಜನಜನಿತವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಓದಲೇಬೇಕಾದ ಲೇಖನವಿದು.

ನಾಗೋಪಾಸನೆಯ ಹಿನ್ನೆಲೆ

ಭಾರತೀಯ ಮಹರ್ಷಿಗಳು ರೂಪಿಸಿದ ಜೀವನ ಶೈಲಿಯನ್ನುಳ್ಳ ನಮಗೆ ಪರ್ವಗಳ ಆಚರಣೆಗಳೇನೂ ಅಪರೂಪದ ಸಂಗತಿಗಳಲ್ಲ. ವಾರ್ಷಿಕವಾಗಿ ನಾವು ಅನೇಕಾನೇಕ ಪರ್ವಗಳನ್ನಾಚರಿಸುವುದು ಭಾರತೀಯ ಸಂಪ್ರದಾಯವನ್ನು ಬಲ್ಲವರೆಲ್ಲ್ಲ ಅರಿತ ವಿಷಯ.
ಅಂತಹ ಪರ್ವಗಳಲ್ಲೊಂದಾಗಿರುವ “ನಾಗರಪಂಚಮಿ” ಎಂಬ ಪರ್ವವನ್ನು ನಾವು ಶ್ರಾವಣ ಶುಕ್ಲ ಪಂಚಮಿಯಂದು ಆಚರಿಸುತ್ತೇವೆ. ಇದರಂತೆಯೇ ಸರ್ಪಗಳ ಉಪಾಸನೆಯು ನಮ್ಮ ಸಂಪ್ರದಾಯದಲ್ಲಿ ಅನೇಕ ವಿಧವಾಗಿ ಬೇರೆ ಬೇರೆ ಕಾಲಗಳಲ್ಲಿಯೂ ಕಂಡು ಬರುತ್ತದೆ. ಯಾವುದೇ ಒಂದು ಕರ್ಮವನ್ನು ಮಾಡುವಾಗ “ಜ್ಞಾತ್ವಾ ಕರ್ಮಾಣಿ ಕುರ್ವೀತ” ಎಂಬ ಉಕ್ತಿಯಂತೆ ಕರ್ಮದ ಮರ್ಮವರಿತು ಮಾಡಿದಾಗ ಅದು ಅತಿಶಯವಾದ ಫಲವನ್ನಿತ್ತು ಸಾರ್ಥಕವಾಗುತ್ತದೆ ಎಂಬುದು ಜ್ಞಾನಿಗಳ ಆಶಯ.
ಮೂಲಭೂತವಾಗಿ ಇರಬೇಕಾದ ತಿಳಿವಳಿಕೆಯನ್ನು ಪ್ರಯತ್ನಪೂರ್ವಕವಾಗಿ ಸಂಪಾದಿಸಿಕೊಂಡು ಮಾಡುವ ಕಾರ್ಯವು ಪ್ರಾಜ್ಞರ ಪ್ರಂಶಸೆಗೆ ಪಾತ್ರವಾಗುತ್ತದೆ. ನಮ್ಮ ವಾಹನದ ಪೂರ್ಣ ಪ್ರಯೋಜನ ಪಡೆಯಲು ಪ್ರಾಥಮಿಕವಾದ ಕೆಲವು ತಿಳಿವಳಿಕೆಗಳು ಬೇಕೆಂಬುದು ಅನುಭವ ಸಿದ್ಧವಷ್ಟೇ. ಹಾಗೆಯೇ ನಾಗನ ಉಪಾಸನೆಯ ಕುರಿತಾಗಿ ಕೆಲವು ಪ್ರಾಥಮಿಕ ಪರಿಚಯದತ್ತ ನಮ್ಮ ಚಿತ್ತವನ್ನು ಹರಿಸಬೇಕಾಗಿದೆ.
ನಮ್ಮ ದೇಶದಲ್ಲಿ ಬೆಳೆದು ಬಂದಿರುವ ಎಲ್ಲ್ಲ ಆಚಾರ-ವ್ಯವಹಾರಗಳ ಬಗೆಗೂ ಬಗೆ ಬಗೆಯ ಟೀಕೆ-ಟಿಪ್ಪಣೆಗಳು ಆಧುನಿಕತೆಯ ಸೋಗನ್ನು ಹೊತ್ತು ಬೆಳೆದಿರುವುದು ಕಂಡುಬರುತ್ತದೆ. ಮೌಢ್ಯವೆಂಬ ಲೇಪವು ನಮ್ಮ ಅನೇಕ ವಿಚಾರಗಳಿಗೆ ಅಂಟಿದಂತೆಯೇ ಪರ್ವಗಳಿಗೂ ಅಂಟಿದೆ. ಪ್ರಸ್ತುತವಾಗಿರುವ ನಾಗೋಪಾಸನೆಯೂ ಇದಕ್ಕೆ ಹೊರತಾಗಿ ನಿಂತ ವಿಷಯವಲ್ಲ. ಇವು ಕೃತಜ್ಞತೆಯಿಲ್ಲದ, ವಿಷಜಂತುವಾದ ಸರ್ಪಗಳಿಗೆ ಪೂಜೆಗೈವ ಆಚರಣೆಗಳಾಗಿವೆ, ಜಡವಾದ ನಾಗರಕಲ್ಲಿನಂತಹ ವಸ್ತುಗಳ ಮುಂದೆ ಭಾವಾವೇಶವನ್ನು ಪ್ರದರ್ಶಿಸುವವರು ಈ ಭಾರತೀಯರು, ಇವೇ ಮೊದಲಾದ ಆರೋಪಗಳು ನಮ್ಮ ಕಿವಿದೆರೆಗಳಿಗೆ ಕೇಳಿಬರುತ್ತವೆ. ಇತ್ತೀಚೆಗೆ ದೃಶ್ಯ ಮಾಧ್ಯಮವೊಂದು ಕೊಟ್ಟ ಮಾಹಿತಿ ಹಾವಿಗೆ ಹಾಲಿತ್ತರೆ ಹಾವು ಸಾಯುವುದೆನ್ನುವ ಆಧುನಿಕ ಸಂಶೋಧನೆ. ಇದು ಭಾರತೀಯರಲ್ಲಿನ ಅವೈಜ್ಞಾನಿಕಚಿಂತನೆಗೆ ಕೊಡುವ ಉದಾಹರಣೆ. ಹೀಗೆ ಹುಡುಕಹೊರಟರೆ ಆರೋಪಗಳ ಪಟ್ಟಿ ವಿಸ್ತಾರವಾಗಿ ಮುಂದೆ ನಿಲ್ಲುತ್ತದೆ. ಇಲ್ಲಿ ಅದನ್ನು ಹೆಚ್ಚು ವಿಸ್ತರಿಸದೇ ಕೆಲವು ಮೌಲಿಕವಾದ ವಿಚಾರ-ವಿವೇಕಗಳನ್ನು ಭಾವಿಸಿ ಈ ಆಚರಣೆಗಳನ್ನು ತಂದ ಮಹರ್ಷಿಗಳ ಆಶಯವನ್ನು ಅರಿಯುವ ಪ್ರಯತ್ನವನ್ನು ಮಾಡೋಣ.

ಸನಾತನಾರ್ಯ ಮಹರ್ಷಿಗಳ ಮೂಲಭೂತವಾದ ಕೆಲವು ಚಿಂತನೆಗಳನ್ನರಿತಾಗಲೇ ನಮಗೆ ಅವರ ಆಮೂಲಾಗ್ರವಾದ ನೋಟದ ಪರಿಚಯ ಸಾಧ್ಯ. ಅವರು ಈ ಸೃಷ್ಟಿಯನ್ನು ಕಂಡ ಬಗೆ, ಜೀವನದ ಬಗ್ಗೆ ಅವರಿಗಿದ್ದ ಪರಿಕಲ್ಪನೆಗಳೇ ಅವರು ಮುಂದೆ ಬೆಳೆಸಿಕೊಟ್ಟ ಸಂಸ್ಕೃತಿಯ ಭದ್ರ ಬುನಾದಿಗಳಾಗಿ ಕಂಡುಬರುತ್ತವೆ. ಅತ್ತ ಒಂದು ಪಕ್ಷಿನೋಟವನ್ನು ಹರಿಸಿ ಅನಂತರ ಈ ಪರ್ವದ ಬಗ್ಗೆ ಭಾವಿಸಬೇಕಾಗುತ್ತದೆ.
ಚರಾಚರಾತ್ಮಕವಾದ ಪ್ರತಿಯೊಂದು ವಸ್ತುವೂ ಕೇವಲ ಭೌತಿಕ ಕ್ಷೇತ್ರಕ್ಕೇ ಸೀಮಿತವಾಗಿರದೇ ಇನ್ನೆರಡು ಕ್ಷೇತ್ರಗಳನ್ನು ತನ್ನ ಮೂಲವಾಗಿ ಹೊಂದಿ ವಿಕಾಸಗೊಂಡಿದೆ. ಹೇಗೆ ಒಂದು ವೃಕ್ಷದ ಸಮಗ್ರ ಸೌಂದರ್ಯವು ಅದರ ಬೇರನ್ನವಲಂಬಿಸಿ ರೂಪುಗೊಳ್ಳುವುದೋ ಅಂತೆಯೇ ಈ ಸೃಷ್ಟಿಯಲ್ಲಿನ ಎಲ್ಲ ವಸ್ತುಗಳ, ಅದರಲ್ಲೂ ಮಾನವ ಜೀವಿಯ ಜೀವನದ ಬೇರು ಆ ಎರಡು ಕ್ಷೇತ್ರಗಳು. ಅವು ಆಧಿದೈವಿಕ ಮತ್ತು ಆಧ್ಯಾತ್ಮಿಕಗಳೆಂಬ ಕ್ಷೇತ್ರಗಳು. ನಮ್ಮ ಇಹ ಜೀವನದ ಆಗು-ಹೋಗುಗಳಿಗೆ ಭೌತಿಕ ಕ್ಷೇತ್ರದಲ್ಲೇ ಕಾರಣ ಸಾಮಗ್ರಿಗಳನ್ನು ಭಾವಿಸದೇ ದೈವಿಕವಾದ ಮತ್ತು ಆಧ್ಯಾತ್ಮಿಕವಾದ ಸಂಬಂಧಗಳನ್ನು ಅರಿತು ಪೂರ್ಣತೆಯೊಡನೆ ಬಾಳಿದವರು ಭಾರತಮಹರ್ಷಿಗಳು. ಇಂತಿರುವ ಅವರ ವಿಶಾಲವಾದ ನೋಟವನ್ನರಿತು ಅವರ ಚಿಂತನೆಯೆಡೆಗೆ ಸಾಗಿದಾಗ ಅವರ ಪೂರ್ಣತೆಯ ನೋಟದ ಅರಿವು ನಮ್ಮ ಮನಮುಟ್ಟುತ್ತದೆ.

ಅಂತೆಯೇ ಈ ಜೀವನದಲ್ಲಿ ಇಂದ್ರಿಯಕ್ಷೇತ್ರದ ನೆಮ್ಮದಿಯೇ ಆತ್ಯಂತಿಕವಲ್ಲ. ಅದಕ್ಕೂ ಮೀರಿದ ನೆಮ್ಮದಿಯ ನೆಲೆಯೊಂದಿದೆ. ಅದೇ ಮಾನವ ಜನ್ಮದ ಚರಮ ಲಕ್ಷ್ಯ. ಹಾಗಾಗಿಯೇ ಯೋಗ-ಭೋಗಮಯವಾದ, ಧರ್ಮಾರ್ಥ ಕಾಮಮೋಕ್ಷರೂಪವಾದ, ಜಾಗ್ರತ್-ಸ್ವಪ್ನ-ಸುಷುಪ್ತಿ-ತುರೀಯಗಳನ್ನೊಳಗೊಂಡ ಬದುಕನ್ನು ಬಾಳಿ ತೋರಿಸಿ ನಮಗೂ ಅದನ್ನೇ ಆದರ್ಶವಾದುದೆಂದು ಸಾರಿದವರು ಜ್ಞಾನಿಗಳು. ಅಂತಹ ಬಾಳಾಟದಲ್ಲಿ ತಾವು ಕಂಡ ನೆಮ್ಮದಿಯ ಪರಾಕಾಷ್ಠೆಯನ್ನು ಲೋಕಕ್ಕೆ ಕಾರುಣ್ಯದಿಂದ ಅನುಗ್ರಹಿಸಹೊರಟಾಗ ರೂಪುಗೊಂಡಿದ್ದೇ ಭಾರತೀಯ ಸಂಸ್ಕೃತಿ. ತಮ್ಮ ಜೀವಿತವನ್ನೇ ಮುಡಿಪಾಗಿಟ್ಟಂತಹ ಈ ಸಂಸ್ಕೃತಿಯ ಅಡಿಯಲ್ಲಿಯೇ ಭಾವಿಸಬೇಕಾದ ವಿಷಯಗಳಾಗಿವೆ ಈ ಪರ್ವಗಳು.

ಈ ಹಿನ್ನೆಲೆಗಳೊಂದಿಗೆ ನೋಡಿದಾಗ ಎಲ್ಲ್ಲ ಪರ್ವಗಳೂ ನಮ್ಮ ಜೀವನದ ಸಾರ್ಥಕ್ಯದೆಡೆಗೆ ಕೈದೋರಿ ನಿಲ್ಲುತ್ತವೆ. ಅಂತೆಯೇ ಈ ನಾಗರಪಂಚಮಿಯೂ ಕೂಡ. ನಾಗನ ಉಪಾಸನಾರೂಪವಾದ ಸಂಪ್ರದಾಯಗಳೆಲ್ಲವೂ ಕೂಡ ನಮ್ಮನ್ನು ಆನಂದದ ಮೂಲನೆಲೆಯೆಡೆಗೆ ಕರೆದೊಯ್ಯುವ ಸಾಧನಗಳಾಗಿವೆ. ನಮ್ಮ ಇಹ-ಪರ ಜೀವನಗಳ ಸೌಖ್ಯಕ್ಕಾಗಿಯೇ ಮಹರ್ಷಿಗಳು ಯೋಜಿಸಿಕೊಟ್ಟ ಆಚರಣೆಗಳಿವು. ಈ ಕಾಲಗಳಲ್ಲಿ ನಾವು ಆರಾಧಿಸಬೇಕಾಗಿರುವುದು ಕೇವಲ ಹೊರಪ್ರಪಂಚದಲ್ಲಿರುವ ಸರ್ಪಗಳನ್ನಷ್ಟೇ ಅಲ್ಲ. ಮೌಲಿಕವಾಗಿ ಅದು ನಮ್ಮೊಳಗೇ ಕೆಲಸ ಮಾಡುತ್ತಿರುವ ’ಕುಂಡಲಿನೀ’ ಎಂಬ ಶಕ್ತಿಯ ಆರಾಧನೆಗೆ ಮೀಸಲಾದ ಕಾಲವಿಶೇಷ. ಯೋಗಸಾಮ್ರಾಜ್ಯದಲ್ಲಿ ವಿಹರಿಸುವ ಯೋಗಿಗಳು ತಮ್ಮ ಅಂತರಂಗದಲ್ಲಿ ಈ ದೇವತೆಯ ದರ್ಶನ ಮಾಡುವರು. ಅವರ ಮಾತಿನಂತೆ ಈ ಕುಂಡಲಿನಿಯು ಅಜ್ಞಾನಿಗಳಲ್ಲಿ ಅಧೋಮುಖವಾಗಿ ಸುತ್ತಿಕೊಂಡು ಮಲಗಿರುವ ಸರ್ಪದಂತಿರುತ್ತದೆ. ಜ್ಞಾನಿಗಳಲ್ಲಿ ಇದು ಊರ್ಧ್ವಮುಖವಾಗಿ ಸಾಗಿ ಸಹಸ್ರಾರಕಮಲದಲ್ಲಿ ತನ್ನ ಫಣಾಮಂಡಲವನ್ನು ಬಿಚ್ಚಿ ನಿಂತಿರುತ್ತದೆ. ಈ ಕುಂಡಲಿನಿಯ ಅನುಗ್ರಹದಿಂದಲೇ ನಮ್ಮ ಆತ್ಮಜೀವನದ ಸೌಖ್ಯ ಸಿದ್ಧಿಸುವುದಾಗಿದೆ. ಅಂತೆಯೇ ಆತ್ಮಜೀವನಕ್ಕೆ ಅವಿರೋಧವಾದ ಇಹಜೀವನವೂ ನೆಮ್ಮದಿಯನ್ನು ಕಾಣಲು ಸಾಧ್ಯವಾಗುತ್ತದೆ. ಇದೇ ಕುಂಡಲಿನಿಯೇ ಕೆಲವೊಮ್ಮೆ ಆತ್ಮಜೀವನಕ್ಕೆ ವಿರೋಧವಾಗಿ ನಿಲ್ಲುವುದುಂಟು. ಆಗ ಭಗವಂತನೇ ಅದನ್ನು ಮೆಟ್ಟಿ ನಿಗ್ರಹಿಸುವನೆಂಬ ತಾತ್ತ್ವಿಕ ಸತ್ಯವನ್ನು ಸಾರುತ್ತದೆ ಶ್ರೀಕೃಷ್ಣನ ಕಾಳಿಂಗಮರ್ದನ. ಹೀಗೆ ನಮ್ಮ ಐಹಿಕ-ಪಾರಮಾರ್ಥಿಕ ಜೀವನದಲ್ಲಿ ಕುಂಡಲಿನಿಯ ಪಾತ್ರ ಬಹುಮುಖ್ಯವಾಗಿದೆ.
ಹಾಗಾದರೆ ಹೊರಸರ್ಪಗಳ ಆರಾಧನೆಯೇಕೆ? ಎಂದರೆ ಈ ಭಗವಂತನ ಸೃಷ್ಟಿಯಲ್ಲಿರುವ ವೈಶಿಷ್ಟ್ಯವೊಂದರ ಕಡೆಗೆ ನಮ್ಮ ದೃಷ್ಟಿ ಹಾಯಿಸಬೇಕಾಗುತ್ತದೆ. ಭಗವಂತನು ಈ ಸೃಷ್ಟಿಯನ್ನು ವಿಕಾಸಗೊಳಿಸುವಾಗ ಕೆಲವು ಸ್ಮರಣಿಕೆಗಳನ್ನು ಅಲ್ಲಲ್ಲಿ ನೀಡಿರುತ್ತಾನೆ. ಎಂತಹ ಸ್ಮರಣಿಕೆಗಳವು ಎಂದರೆ ಒಬ್ಬ ಸಂಸ್ಕಾರಿಯಾದವನಿಗೆ ಅವನ ಅಂತಃಪ್ರಪಂಚವನ್ನು ನೆನಪಿಗೆ ತರುವಂತಹ ಕುರುಹುಗಳಾಗಿವೆ. ತ್ರಿಗುಣಮಯವಾದ ಈ ಸೃಷ್ಟಿಯಲ್ಲಿ ತ್ರಿಗುಣಾತೀತವಾದ ಸತ್ಯವನ್ನು ಪ್ರತಿಹೆಜ್ಜೆಯಲ್ಲಿಯೂ ಮರೆಯದೇ ಬಾಳಲು ಬೇಕಾದ ಒಂದು ವ್ಯವಸ್ಥೆಯಾಗಿದೆ ಅದು. ಯೋಗಮಾರ್ಗವನ್ನು ಕಂಡ ಜ್ಞಾನಿಗಳು ಈ ಸ್ಮರಣಿಕೆಗಳನ್ನು ಕಂಡು ಮತ್ತೆ ಅದೇ ಸ್ಥಿತಿಯನ್ನು ಅನುಭವಿಸುವಂತೆ ಮಾಡುತ್ತವೆ ಇವು. ಹೊರಗಿರುವ ಸೂರ್ಯನು ನಮ್ಮೊಳಗಿನ ಜ್ಞಾನ ಸೂರ್ಯನನ್ನು ನೆನಪಿಸಿದರೆ ಅವನ ಕಿರಣಗಳಿಂದ ಅರಳುವ ಕಮಲವು ಆತ್ಮ ಸೂರ್ಯನ ಕಿರಣಗಳಿಂದ ಅರಳುವ ಹೃದಯಕಮಲವನ್ನು ಜ್ಞಾಪಿಸುವುದೆನ್ನುವರು ಜ್ಞಾನಿಗಳು. ಹೀಗೆ ಈ ಸೃಷ್ಟಿಯಲ್ಲಿ ಅಂತಹ ಜ್ಞಾಪಕಗಳು ಅನೇಕ. ಅಂತಹ ವಸ್ತುಗಳಲ್ಲಿ ಸರ್ಪವೂ ಒಂದು. ಒಳಗಿರುವ ಕುಂಡಲಿನಿಗೂ ಹೊರಗಿನ ಸರ್ಪಗಳಿಗೂ ಅನೇಕ ಸಾಮ್ಯಗಳನ್ನು ಯೋಗಿಗಳು ಗುರುತಿಸಿದರು. ಕುಂಡಲಿನಿಯು ಸುತ್ತಿ ಮಲಗುವಂತೆಯೇ ಈ ಸರ್ಪಗಳು ಮಲಗುತ್ತವೆ. ಕುಂಡಲಿನೀ ಶಕ್ತಿಯು ಹೆಡೆಯೆತ್ತಿ ನಿಲ್ಲುವಂತೆಯೇ ಈ ಸರ್ಪಗಳಲ್ಲಿಯೂ ಆ ನಡೆಯಿದೆ. ಎರಡರಲ್ಲಿಯೂ ವಿಷ್ಣುಪಾದ (ಬಸವನ ಪಾದ)ದ ಗುರುತು ಸಮಾನವಾಗಿದೆ. (ಇದು ಭಾರತೀಯ ಸರ್ಪಗಳಲ್ಲಿ ಮಾತ್ರವೇ ಹೆಚ್ಚಾಗಿ ತೋರಿಬರುವ ಗುರುತಾಗಿದೆ.) ಹೀಗೆ ಅನೇಕ ಸಾಮ್ಯಗಳಿರುವುದರಿಂದ ಹೊರಗಿನ ಸರ್ಪಗಳಿಗೂ ಪೂಜ್ಯವಾದ ಭಾವನೆ ಸಂದಿದೆ.

ನಮ್ಮ ನಿತ್ಯ ಜೀವನದಲ್ಲಿರುವ ನಡೆಯೊಂದನ್ನು ಭಾವಿಸಹೊರಟರೆ ನಮ್ಮ ತಂದೆಯ ಭಾವಚಿತ್ರಕ್ಕೆ ನಾವು ಗೌರವವನ್ನು ಸಲ್ಲಿಸುವುದುಂಟು. ಕಾರಣ ಅದು ನಮ್ಮ ತಂದೆಯನ್ನು ಜ್ಞಾಪಿಸುವ ವಸ್ತು. ಕೇವಲ ಕಾಗದ ಬಣ್ಣಗಳಿಂದ ಕೂಡಿದ ಭಾವಚಿತ್ರಕ್ಕೆ ಗೌರವವೆಂತು? ಎಂದು ಅದನ್ನು ಅವಮಾನಿಸಿದರೆ ಅದು ನಮ್ಮ ತಂದೆಗೆ ಮಾಡುವ ಅಪಚಾರವೇ ಸರಿ. ಅದು ಅವರಿಗೆ ಅಸಂತುಷ್ಟಿಯನ್ನೇ ಉಂಟುಮಾಡುತ್ತದೆ. ಹಾಗೊಂದು ಸಂಬಂಧವಿದೆ ಈ ಸೃಷ್ಟಿಯಲ್ಲಿ. ಇದು ಹೇಗೋ ಹಾಗೆಯೇ ನಮ್ಮ ಒಳಗಿನ ಕುಂಡಲಿನೀ ತತ್ತ್ವ್ವವನ್ನು ಪ್ರತಿನಿಧಿಸುವ ಈ ಸೃಷ್ಟಿಯಲ್ಲಿನ ಸರ್ಪಗಳನ್ನು ಗೌರವಿಸಿದಾಗ  ಅದು ನಮ್ಮನ್ನು ಕುಂಡಲಿನಿಯ ಅನುಗ್ರಹಕ್ಕೆ ಪಾತ್ರರಾಗುವಂತೆ ಮಾಡುತ್ತದೆ. ಹಾಗಲ್ಲದೇ ಅದಕ್ಕೆ ಅಪಚಾರವಿತ್ತರೆ ಆ ಒಳಶಕ್ತಿಯ ಅಪ್ರಸನ್ನತೆಯಿಂದ ನಮ್ಮ ಇಹ-ಪರ ಜೀವನದ ಸೌಖ್ಯವನ್ನು ನಾಶಗೊಳಿಸಿ-ಕೊಂಡಂತಾಗುತ್ತದೆ. ಹಾಗಾಗಿಯೇ ಸರ್ಪದೋಷದಿಂದ ಸಂತಾನನಾಶ, ಮನೋವೈಕಲ್ಯ, ಚರ್ಮವ್ಯಾಧಿ ಇವೇ ಮೊದಲಾದ ತೊಂದರೆಗಳನ್ನು ಶಾಸ್ತ್ರಗಳಲ್ಲಿ ಕಾಣುತ್ತೇವೆ. ಇವೆಲ್ಲ ಪ್ರಧಾನವಾಗಿ ಭೌತಿಕಜೀವನದ ಮೇಲೆ ಉಂಟಾಗುವ ವಿಕಾರಗಳಾದರೆ ಆತ್ಮಜೀವನದ ಮೇಲೂ ಅದರ ದುಷ್ಪರಿಣಾಮವುಂಟು. ಅದು ನಮ್ಮ ಸಾಧನಾ ಮಾರ್ಗವನ್ನೇ ಮುಚ್ಚಿಬಿಡುವಂತಹದ್ದು. ಇದು ನಮ್ಮ ಇಂದಿನ ಜೀವನ ವಿಧಾನದಲ್ಲಿ ತೊಂದರೆಯೆಂದೇ ನಾವು ಭಾವಿಸದಿರಬಹುದು. ಆದರೆ ಜ್ಞಾನಿಗಳು ಅದೊಂದು ತುಂಬಲಾರದ ನಷ್ಟವೆಂದು ಅದರ ಬೆಲೆಯರಿತು ಭಾವಿಸುತ್ತಾರೆ. ಆದ್ದರಿಂದ ಕುಂಡಲಿನಿಯ ಪ್ರಸನ್ನತೆಯು ಮಾನವಜೀವಿಯ ಸರ್ವವಿಧ ಸೌಖ್ಯಕ್ಕೆ ಸಾಧನವೆಂದು ಭಾವಿಸಿ ಮಹರ್ಷಿಗಳು ತಮ್ಮ ತಪೋಭೂಮಿಕೆಯಲ್ಲಿ ನಿಂತು ಬೆಳೆಸಿದ ಆಚಾರ-ವಿಚಾರಗಳೇ ನಾಗೋಪಾಸನೆಯ ವಿಧಿ-ವಿಧಾನಗಳಾಗಿವೆ. ಹೀಗೆ ಸಹಸ್ರಾರು ವರ್ಷಗಳ ತಪಸ್ಯೆಯಿಂದ ಕಂಡ ಸತ್ಯಗಳನ್ನು ಸಂಸ್ಕೃತಿರೂಪದಲ್ಲಿ  ಹೆಣೆದು-ಪೋಣಿಸಿ ಮಣಿಮಾಲೆಯಾಗಿ ಲೋಕಕ್ಕೆ ಅನುಗ್ರಹಿಸಿದವರು ಮಹರ್ಷಿಗಳು. ಈ ದೃಷ್ಟಿಯಲ್ಲಿ ಹಾವಿಗೆ ತನಿಯೆರೆಯುವುದೊಂದು ತಾತ್ತ್ವ್ವಿಕ ಹಿನ್ನೆಲೆಯುಳ್ಳ ಸತ್ಯವೇ ಹೊರತು ಕೇವಲ ಭೌತಿಕ ಕ್ಷೇತ್ರಕ್ಕೇ ಸೀಮಿತಗೊಂಡಿದ್ದಲ್ಲ. ತಮ್ಮ ಆತ್ಮಸಾಮ್ರಾಜ್ಯದಲ್ಲಿ ಕುಂಡಲಿನಿಯ ಜಾಗೃತಿಯಾದಾಗ ಯಾವುದೋ ಒಂದು ಸ್ಥಿತಿವಿಶೇಷದಲ್ಲಿ ಅದು ಅಮೃತಪಾನವನ್ನು ಮಾಡುವ ಅನುಭವವನ್ನು ಹೊಂದಿದರು. ಅದರ ಜ್ಞಾಪಕವಾಗಿ ಈ ಸೃಷ್ಟಿಯಲ್ಲಿ ಅಮೃತಪ್ರಾಯವಾದ ಹಾಲನ್ನು ಹಾವಿಗೆ ಸಮರ್ಪಿಸುವ ಆಚಾರವನ್ನು ಕೊಡಮಾಡಿದರು. ಈ ದೃಷ್ಟಿಕೋನವಿಲ್ಲದೇ ವಿಜ್ಞಾನವನ್ನು ಕೇವಲ ಹೊರದೃಷ್ಟಿಗೆ ಸೀಮಿತವಾಗಿಟ್ಟುಕೊಂಡು ಅವರ ಚಿಂತನೆಯನ್ನು ಅಲ್ಲಗಳೆದರೆ ಅದು ನಮ್ಮ ದೃಷ್ಟಿಯಲ್ಲಿನ ಕೊರತೆಯೇ ಹೊರತು ಅವರ ಚಿಂತನೆಯ ಪರಿಪೂರ್ಣತೆಯದ್ದಲ್ಲ. ಕಲ್ಲಿಗೆ ನೈವೇದ್ಯವಿತ್ತರೆ ಕಲ್ಲು ತಿನ್ನದೆಂಬುವಷ್ಟೂ ಅರಿವಿಲ್ಲದವರೆಂದು ಅವರನ್ನು ನಾವು ಭಾವಿಸಿದರೆ ಅದು ನಮ್ಮ ಮೌಢ್ಯವನ್ನು ಸಾರುತ್ತದೆ. ಇಲ್ಲೆಲ್ಲ್ಲ ಆ ಜ್ಞಾನಿಗಳ ಮತ್ತು ನಮ್ಮ ಮನಸ್ಸಿನ Wavelength ಸರಿ ಹೊಂದಿದಾಗಲೇ ಇರುವ ಸತ್ಯವನ್ನು ಭಾವಿಸಲು ಸಾಧ್ಯ. ಹೀಗಿರುವುದರಿಂದಾಗಿ ಅವರು ಯಾವ ನೆಲೆಯಲ್ಲಿ ನಿಂತು ಈ ಸತ್ಯಗಳನ್ನರಿತರೋ ಅದೇ ನೆಲೆಯನ್ನು ನಾವೂ ಮುಟ್ಟಿ ಅವರ ಆಶಯವನ್ನು ಅರಿಯಬೇಕಿದೆ. ಆ ಹಿನ್ನೆಲೆಯೊಡನೆ ಆಚರಿಸಿದಾಗ ನಮ್ಮ ಎಲ್ಲ ಆಚಾರ-ವಿಚಾರಗಳೂ ಪೂರ್ಣಫಲದಲ್ಲಿ ಪರ್ಯವಸಾನಗೊಳ್ಳುತ್ತವೆ.

ಎಷ್ಟೇ ಹೇಳಿದರೂ ಇವೆಲ್ಲ ಅನುಭವಕ್ಷೇತ್ರದ ವಿಷಯಗಳು. ಸಕ್ಕರೆಯ ಸಿಹಿಯನ್ನು ಮಾತಿನಿಂದ ಎಷ್ಟು ಅನುಭವಕ್ಕಿಳಿಸಲು ಸಾಧ್ಯ? ಯಾವುದೋ ಒಂದು ಮಟ್ಟದ ಪರಿಚಯವಾಗಬಹುದಷ್ಟೇ. ಆದರೆ ಆ ಪರಿಚಯದ ಮನೋಭೂಮಿಕೆಯೊಡನೆ ಬದುಕಿದಾಗ ಅದು ನಮ್ಮನ್ನು ಅನುಭವಕ್ಷೇತ್ರಕ್ಕೆ ಎತ್ತುತ್ತದೆ. ನಾಗರಪಂಚಮಿಯ ಕಾಲವಿಶೇಷವು ಅದನ್ನು ತಂದವರ ಆಶಯದೊಡನೆ ಆಚರಿಸುವ ಪರ್ವವಾಗಲಿ. ಕುಂಡಲಿನೀ ಶಕ್ತಿಯ ಅನುಗ್ರಹದಿಂದ ನಮ್ಮ ಜೀವನವನ್ನು ಹಸನಾಗಿಸಿಕೊಳ್ಳುವಂತಾಗಲಿ. ಜೀವನದ ಚರಮಲಕ್ಷ್ಯದೆಡೆಗೆ ನಮ್ಮನ್ನು ಆ ಶಕ್ತಿಯು ಕರೆದೊಯ್ಯಲಿ ಎಂದು ಪ್ರಾರ್ಥಿಸುತ್ತಾ ಈ ಲೇಖನಕ್ಕೆ ಮಂಗಳವನ್ನು ಭಾವಿಸುತ್ತೇನೆ.
***

ಸೂ:

  • ಕೃಪೆ: ಧರ್ಮಭಾರತೀ, ಅಗೋಸ್ತು ೨೦೧೩
Facebook Comments