|| ಹರೇರಾಮ ||

ಭಾರತರೆಲ್ಲರಿಗೆ ‘ಪ್ರಭಾದಿನ’ದ ಮಂಗಲಕಾಮನೆಗಳು…

ಆಗಸದಲ್ಲಿ ರವಿ-ಶಶಿ-ತಾರೆಗಳೆಂಬ ಮಹಾದೀಪಗಳನ್ನು ಬೆಳಗಿ ಜಗದೀಶ್ವರನು ನಿತ್ಯದೀಪಾವಳಿಯನ್ನಾಚರಿಸುವನು..
ಆತನ ಮಕ್ಕಳಾದುದಕ್ಕೆ ವರುಷಕ್ಕೊಮ್ಮೆಯಾದರೂ ಹಣತೆಗಳ ಹಬ್ಬವನ್ನಾಚರಿಸಿ ಸಂಭ್ರಮಿಸೋಣ..

‘ಆತ’ ಹಚ್ಚುವ ದೀಪಗಳು ಅವನಿರುವ ತಾವೆಲ್ಲವನ್ನೂ-ವಿಶ್ವವೆಲ್ಲವನ್ನೂ ಬೆಳಗಿದರೆ ನಾವು ಹಚ್ಚುವ ದೀಪಗಳು ನಾವಿರುವ ತಾವುಗಳನ್ನು-ನಮ್ಮ ಪರಿಸರವನ್ನು ಬೆಳಗಲಿ..

ಬೀದಿಯಲಿ ಬೆಳಕೆಷ್ಟಿದ್ದರೇನು ಫಲ ಮನೆಯೊಳಗೆ ಕತ್ತಲಿದ್ದರೆ..!?
ಬದುಕಿನ ಬಹಿರಂಗವು ಬೆಳಗಿದರೆ ಸಾಕೇನು..ಅಂತರಂಗವು ಅಜ್ಞಾನದಲ್ಲಿಯೇ ಮುಳುಗಿದ್ದರೆ..?
ಈ ದೀಪಾವಳಿಯು ನಮ್ಮ ಮನೆ ಬೆಳಗುವಲ್ಲಿ ನಿಲ್ಲದೆ ಮನ ಬೆಳಗುವವರೆಗೆ ವಿಸ್ತರಿಸಲೆಂದು ಹಾರೈಸುವೆವು…

ಸಿದ್ಧಮುಹೂರ್ತವಿದು ದೀಪಾವಳಿ…
ಶುಭಕಾರ್ಯಗಳನ್ನಾರಂಭಿಸಲು ಪರಮಪ್ರಶಸ್ತದಿನ…
ಜ್ಞಾನಸಂಕ್ರಮಣಕ್ಕಿಂತ, ಭಾವಸಂಗಮನಕ್ಕಿಂತ ಶುಭಕಾರ್ಯ ಬೇರುಂಟೇ…?
ಶರೀರದಲ್ಲಿ ಮುಖವಲ್ಲವೇ ಆ ಕಾರ್ಯವನ್ನು ಮಾಡುವುದು..?
ನಮಗೂ ನಿಮಗೂ ಸೇರಿ ಒಂದೇ ಶರೀರ…!
ಅದೇ ‘ಹರೇರಾಮ’
‘ಹರೇರಾಮ’ವು ಜನ್ಮ ತಾಳಿದ ಈ ಶುಭದಿನವಿದು..
ಇಂದಿಗೆ ಒಂದು ವರುಷವಾಯಿತು ಈ ಜ್ಞಾನಶಿಶುವಿಗೆ…
‘ಮೂಕಂ ಕರೋತಿ ವಾಚಾಲಂ’ ಮಕ್ಕಳಲ್ಲಿ ಪ್ರಕಟಗೊಳ್ಳುವ ವಯಸ್ಸದು..

ಇಂದಿನಿಂದ ‘ಹರೇರಾಮ’ದ ಶ್ರೀ-ಮುಖವು ಭಾವ ಬಿಚ್ಚಿ ಮಾತನಾಡತೊಡಗಲಿ…

ಕೇಳಲು ಮೈಯೆಲ್ಲ ಕಿವಿಯಾಗಲಿ…
ನೋಡಲು ಮೈಯೆಲ್ಲ ಕಣ್ಣಾಗಲಿ…
ಭಾವಿಸಲು ಮೈಯೆಲ್ಲ ಮನವಾಗಲಿ…

ಬದುಕೆಲ್ಲ-ಜಗವೆಲ್ಲ ದೀಪಾವಳಿಯೇ ಆಗಲಿ…

|| ಹರೇರಾಮ ||

Facebook Comments Box