ಡಾ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ.

ನನಗೂ ಶ್ರೀರಾಮಚಂದ್ರಾಪುರಮಠಕ್ಕೂ ಸಂಪರ್ಕವಾಗಿದ್ದು ಹಿಂದಿನ ಗುರುಗಳ  ಕಾಲದಲ್ಲಿ.  ಹಿಂದಿನ ಗುರುಗಳನ್ನು ಒಂದೆರಡು ಬಾರಿ ದರ್ಶನ ಮಾಡುವಂತಹ ಅವಕಾಶ ನನಗೆ ಸಿಕ್ಕಿತ್ತು.

ಭಕ್ತರ ’ಸಿರಿ’, ಧರ್ಮಸ್ಥಳ ಕ್ಷೇತ್ರ

ನನಗೆ ನೆನಪಿದ್ದ ಹಾಗೆ, ಒಂದು ಬಾರಿ ಕೊಲ್ಲೂರಿನಲ್ಲಿ ನಡೆದ ಚಂಡಿಕಾ ಹೋಮದ ಸಂದರ್ಭದಲ್ಲಿ, ಮತ್ತೊಂದೆರಡು ಬೇರೆ ಕಾರ್ಯಕ್ರಮಗಳಲ್ಲಿ ಕೂಡ ಭೇಟಿ ಮಾಡಿದ್ದೆ. ಅವರ ತೇಜಸ್ಸು ಮತ್ತು ಆ ದಿನಗಳಲ್ಲಿ ಸಮಾಜದಲ್ಲಿ ಅವರಿಗಿದ್ದ ವ್ಯಕ್ತಿತ್ವ  ಬಹಳ ದೊಡ್ಡದಾಗಿತ್ತು. ಆದರೆ  ನನ್ನ ವಯಸ್ಸಿಗೂ  ಅವರ ವಯಸ್ಸಿಗೂ ಬಹಳ ಅಂತರ ಇದ್ದಿದ್ದರಿಂದ ಅವರ ಸಾಮೀಪ್ಯದ ಅವಕಾಶ ನನಗೆ ಹೆಚ್ಚಾಗಿ ಸಿಕ್ಕಿರಲಿಲ್ಲ. ಆದರೆ, ರಾಘವೇಶ್ವರ ಪೂಜ್ಯರು ಪೀಠಾಧಿಕಾರಿಗಳಾದ ಮೇಲೆ ಅವರ ಮತ್ತು ನಮ್ಮ ನಡುವೆ ವಿಶ್ವಾಸ ಹೆಚ್ಚಿನದಾಗಿ ಬೆಳೆದಿದೆ. ಅನೇಕ ಬಾರಿ ನಾನು ಶ್ರೀಗಳ ಜೊತೆ ಕಳೆದಿದ್ದೇನೆ. ಅನೇಕ ಸಂದರ್ಭಗಳಲ್ಲಿ ನಾವು ಅವರ ಜೊತೆಗೆ ಖಾಸಗಿಯಾಗಿ ಸಂತೋಷದ ಕ್ಷಣಗಳನ್ನು ಕಳೆದದ್ದೂ ಉಂಟು. ಆತ್ಮೀಯತೆಯಿಂದ ಇಬ್ಬರೂ ನಕ್ಕು ನಲಿದಿದ್ದೇವೆ. ಅವರ ಸಾಮೀಪ್ಯ  ನನಗೆ ಬಹಳ ಇಷ್ಟವಾದ ವಿಚಾರ.

ಇಂತಹ ಸಂದರ್ಭಗಳಲ್ಲಿ ನಾನು  ಅವರಲ್ಲಿ ಕಂಡ ಒಂದು ಗುಣವೆಂದರೆ  ‘ವಿಷಯಗಳನ್ನು ಸಂಗ್ರಹಿಸಬೇಕು, ವಿಷಯಗಳನ್ನು ತಿಳಿದುಕೊಳ್ಳಬೇಕು’ ಅನ್ನುವ ಹಂಬಲ ಮತ್ತು ಕುತೂಹಲ. ಅವರು ಅನೇಕ ವಿಷಯಗಳ ಕುರಿತು ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ಆಗ ನಾವು ಕೂಡ   ನಮ್ಮ ಅನುಭವ ಏನು ಹೇಗೆ ಎನ್ನುವುದನ್ನು   ತಿಳಿಸಿದ್ದಿದೆ.  ಬಹುಶಃ ಪೀಠಕ್ಕೆ ಬಂದಮೇಲೆ, ಜಗದ್ಗುರುಗಳಾದಮೇಲೆ ಇನ್ನೊಬ್ಬರ ಮಾತು ಕೇಳುವವರು ಬಹಳ ಕಡಿಮೆ.  ಹೇಳುವವರೇ  ಹೆಚ್ಚು, ತಾವು ಸರ್ವಜ್ಞರು ಅಂತ ತಿಳಿದುಕೊಳ್ಳುವವರೇ ಜಾಸ್ತಿ. ಆದರೆ ಇನ್ನೊಬ್ಬರ ಅನುಭವವನ್ನು ಗೌರವಿಸುವ, ಇನ್ನೊಬ್ಬರ ಬಳಿ ಕೇಳಬೇಕು, ಮತ್ತೊಬ್ಬರ ಬಳಿ ತಿಳಿದುಕೊಳ್ಳಬೇಕು ಅನ್ನುವ ಪೂಜ್ಯರ ಬಿಚ್ಚುಮನಸಿನ ಆತ್ಮೀಯತೆ ನನಗೆ ಬಹಳ ಸಂತೋಷ ಕೊಡುತ್ತದೆ. ಹಾಗಾಗಿ ಎಷ್ಟೋ ಬಾರಿ ನಾವು ಕೂಡ ಅವರಿಗೆ ಸಂದೇಶವನ್ನು ಕೊಡುತ್ತ ಇರುತ್ತೇವೆ.
ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನಿಜವಾಗಿಯೂ ಕಾಲಕ್ಕೆ ಸರಿಯಾದಂತಹ ಮನೋಧರ್ಮವನ್ನು ಹೊಂದಿದಂತಹ ಪೀಠಾಧಿಕಾರಿಗಳು. ಯಾಕೆಂದರೆ  ಸಮಾಜ ಮತ್ತು  ಕಾಲ ಎರಡೂ
ಶ್ರೀ ವೀರೇಂದ್ರ ಹೆಗ್ಗಡೆಯವರು

ಶ್ರೀ ವೀರೇಂದ್ರ ಹೆಗ್ಗಡೆಯವರು

ಪರಿವರ್ತನಾಶೀಲವಾದದ್ದು. ಪರಿವರ್ತನೆ  ಸದಾ ಆಗುತ್ತಲೇ ಇರುತ್ತದೆ. ಅದರಲ್ಲಿ ಚಿರಂತನವಾಗಿ ಚಲನಶೀಲತೆ ಇರುತ್ತದೆ. ಈ ಚಲನಶೀಲತೆಯಲ್ಲಿ ನಮ್ಮ ವ್ಯಕ್ತಿತ್ವವನ್ನು ಬಿಡದೆ ಸಮಾಜದ ಪ್ರವಾಹದ ಒಟ್ಟಿಗೆ ಹೋಗಬೇಕಾಗುತ್ತದೆ. ಹಾಗಾಗಿ, ಚಲನಶೀಲತೆ ಅಂದರೆ ಎಲ್ಲದನ್ನೂ ಹೊಂದಿಸಿಕೊಂಡು ಹೋಗುವಂತಹದ್ದು ಅಂತ ಅಲ್ಲ. ಆದರೂ ಕಾಲ ದೇಶ ರಾಜಕೀಯ ಇನ್ನಿತರ ವಸ್ತು ಸ್ಥಿತಿಗಳನ್ನು ಅರ್ಥ ಮಾಡಿಕೊಂಡು, ಶಿಷ್ಯರಲ್ಲಿಯೂ ಸಮಾಜದಲ್ಲಿಯೂ  ದೇಶದಲ್ಲಿಯೂ ಆಗಿರತಕ್ಕಂತಹ  ಬದಲಾವಣೆಯನ್ನು ಗುರುತಿಸಿಕೊಂಡು, ತಮ್ಮ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುವಂತಹದ್ದು ಬಹಳ  ಅವಶ್ಯಕತೆ ಇದ್ದು, ಆ ದಿಶೆಯಲ್ಲಿ ಇಂದಿನ ದಿನಗಳಲ್ಲಿ ನನಗೆ ಮುಖ್ಯವಾಗಿ ಕಾಣುವಂತಹದ್ದು ಶ್ರೀರಾಘವೇಶ್ವರ ಶ್ರೀಗಳವರು. ಅವರು  ತಮ್ಮ ವ್ಯಕ್ತಿತ್ವವನ್ನು ಕಾಲಕ್ಕೆ ಸರಿಯಾದ ಹಾಗೆ ಪರಿವರ್ತನೆಗೊಳಿಸಿಕೊಂಡಿದ್ದಾರೆ.  ಮಠದ ಅನೇಕ ಶಿಸ್ತುಗಳು, ರೀತಿ ರಿವಾಜುಗಳು, ಸಂಪ್ರದಾಯಗಳು,  ಅಲ್ಲದೇ ಅನೇಕ ಪೂಜಾದಿ ಕ್ರಿಯಾಭಾಗಗಳು ಇದನ್ನೆಲ್ಲವನ್ನೂ ಉಳಿಸಿಕೊಂಡು ಅದರ ಜೊತೆಜೊತೆಗೆ ಅದನ್ನೂ ಹೇಗೆ ಎಷ್ಟರ ಮಟ್ಟಿಗೆ ಸರಳೀಕರಿಸಿಕೊಳ್ಳಬಹುದು ಅನ್ನುವುದನ್ನೂ ಕೂಡ ಅರ್ಥ ಮಾಡಿಕೊಂಡಿದ್ದಾರೆ.

ಇನ್ನೊಂದು ಬಹಳ ಮುಖ್ಯವಾದ ಅಂಶವೇನೆಂದರೆ ಗುರು ಯಾವಾಗಲೂ ಭಕ್ತನಿಗೆ ಆತ್ಮೀಯನಾಗಿರಬೇಕು.  ಬಹಳ ಹತ್ತಿರ ಇರಬೇಕು. ಆ ಆತ್ಮೀಯತೆ ಬರುವುದು ಹೇಗೆ ಎನ್ನುವುದು ಬಹಳ ಕಷ್ಟದ ಪ್ರಶ್ನೆ.  ಏಕೆಂದರೆ ಆತ್ಮೀಯತೆ  ಬೇಕಾದ ಹಾಗೆ ಬರುವಂತಹದ್ದಲ್ಲ.  ಶಿಷ್ಯರಿಗೆ ಬೇಕಾದ ಹಾಗೆ ಇರುವಂತಹದ್ದಲ್ಲ. ‘ಗುರು ಶಿಷ್ಯರನ್ನು ಆಕರ್ಷಿಸುವಂತವನಾಗಿರಬೇಕು, ಅವರ ಚಿತ್ತವನ್ನು ಅಪಹರಿಸುವಂತವನಾಗಿರಬೇಕು’  ಅಂತ ಒಂದು ಮಾತಿದೆ. ಶಿಷ್ಯರ ಚಿತ್ತಾಕರ್ಷಣೆ ಮಾಡಬೇಕಾದರೆ ಅದು ಗುರುವಿನ ವ್ಯಕ್ತಿತ್ವದಿಂದ ಆಗಬೇಕು. ಮಾತಿನಿಂದ ಆಕರ್ಷಿಸಬೇಕು. ಮತ್ತೆ  ಹೃದಯಪೂರ್ವಕವಾಗಿ ಆಕರ್ಷಿಸಬೇಕು.  ನಾನು ಕಂಡ ಹಾಗೆ  ಶ್ರೀಗಳಲ್ಲಿ ಮಾತೃ ಹೃದಯವಿದೆ. ಬಹಳ ಸವಿಯಾದ ಮಾತನಾಡುವಂತಹ ಅಭ್ಯಾಸ ಇದೆ, ಸಂಸ್ಕಾರ ಇದೆ. ಅವರ ಧ್ವನಿಯೂ ಕೂಡ ಆಕರ್ಷಕವಾದದ್ದು. ಹೀಗಾಗಿ ಮೂರೂ ಅವರಲ್ಲಿ ಬೆರೆತಿದೆ:  ಮುಖದ ತೇಜಸ್ಸು,  ವಾಕ್ಷ ಕ್ತಿ,  ಮಾತೃ ಹೃದಯ.  ಅದರ ಜೊತೆಗೆ ಅವರ ಧ್ವನಿ ಕೂಡ ಪ್ರಭಾವಶಾಲಿ. ಇದು ಅವರು ಎಲ್ಲೇ ಹೋದರೂ ಶಿಷ್ಯರು ಆಕರ್ಷಿತರಾಗುವಂತೆ ಮಾಡಿದೆ. ಅದರ ಜೊತೆಗೆ ನಾನು ಕಂಡ ಹಾಗೆ, ಅವರು  ಅವರ ಶಿಷ್ಯ ಸಮುದಾಯದವರನ್ನಲ್ಲದೇ ಇತರ ಸಮಾಜದವರನ್ನೂ ಕೂಡ ಸಮಾನವಾಗಿ ಆಕರ್ಷಿಸುತ್ತಾರೆ. ಉದಾಹರಣೆಗೆ, ಕಡೂರಿನ ಕೃಷಿ ಮೇಳಕ್ಕೆ ಅವರು ಬಂದಿದ್ದರು. ಅಲ್ಲಿ ಸಹಜವಾಗಿಯೇ ಎಲ್ಲ ಸಮಾಜದವರೂ , ಸಂಪ್ರದಾಯದವರೂ, ಮತಧರ್ಮದವರೂ ಇದ್ದರು. ಅಂದಿನ ಅವರ ಮಾತು ಹೇಗಿತ್ತೆಂದರೆ, ಸರ್ವಧರ್ಮಗಳಿಗೂ , ಎಲ್ಲ ಜಾತಿಮತಪಂಥದವರಿಗೂ ಅನುಗುಣವಾಗಿ, ಆಕರ್ಷಣೀಯವಾಗಿ ಇತ್ತು. ಮತ್ತು ಅದು ಸಭೆಗೆ  ಉಪಯುಕ್ತವಾಗಿರತಕ್ಕಂತಹ ಸಂದೇಶವಾಗಿತ್ತು. ಪ್ರವಚನ ಪ್ರಾರಂಭ ಮಾಡಿ ಹತ್ತು ನಿಮಿಷದ ಒಳಗೆಯೇ ಅವರು ಎಲ್ಲರನ್ನೂ ಆಕರ್ಷಿಸಿಬಿಟ್ಟರು. ಇಂತಹ ಶಕ್ತಿ ಬಹಳ ಕಡಿಮೆ ಜನರಿಗೆ  ಇರುತ್ತದೆ. ಅಲ್ಲದೆ ಅವರ ಮಾತಿನಲ್ಲಿ ಸಹಜತೆ ಇರುತ್ತದೆ. ಅವರು ಪ್ರವಚನ ಕೊಡುವಾಗ ಅಲ್ಲಿನ ಸಂದರ್ಭಕ್ಕೆ ಸರಿಯಾಗಿ ಏನೋ ಮೇಲೆಮೇಲೆ ಮಾತನಾಡುವುದಲ್ಲ, ಹೃತ್ಪೂರ್ವಕವಾಗಿ ಮಾತು ಹೊರಗೆ ಬರುತ್ತದೆ.

ಶ್ರೀ ಹೆಗ್ಗಡೆಯವರ ಹವ್ಯಾಸ - ಹಳೆಕಾರುಗಳ ಸಂಗ್ರಹ

ನಾನು ಅವರಲ್ಲಿ ಕಂಡ ಮತ್ತೊಂದು ಗುಣವೆಂದರೆ, ಅವರು ಎಲ್ಲರನ್ನೂ ಮೆಚ್ಚುತ್ತಾರೆ, ಪ್ರಶಂಸೆ ಮಾಡುತ್ತಾರೆ ಮತ್ತು ಅವರಿಗೆ ಬೇಕಾದ ಪ್ರೇರಣೆಯನ್ನು ಕೊಡುತ್ತಾರೆ.  ಬಹಳ ಕಡಿಮೆ ವ್ಯಕ್ತಿಗಳಿಗೆ ಇಂತಹ  ಒಂದು ಮನೋಧರ್ಮ ಇರುತ್ತದೆ. ಅಂದರೆ ಮೆಚ್ಚಿ ಮಾತನಾಡುವಾಗ ಕೆಲವರು ಸ್ವಲ್ಪ ಹತೋಟಿ ಇಟ್ಟುಕೊಳ್ಳುತ್ತಾರೆ.  ಎಲ್ಲಿಯಾದರೂ ನಾವು ಇನ್ನೊಬ್ಬರನ್ನು ಪ್ರಶಂಸೆ ಮಾಡಿದರೆ ಅತಿಯಾದೀತೇನೋ,  ಈ ರೀತಿ ಹೇಳಿದರೆ ಅವರೇನು ಅಂದುಕೋಳ್ಳುತ್ತಾರೋ, ಜನ ಎನೆಂದುಕೊಳ್ಳುತ್ತಾರೋ ಎಂಬ ಹಾಗೆ. ಆದರೆ ಇವರದು ಹಾಗಲ್ಲ, ಮಾತೃಹೃದಯದಿಂದ ಅವರು ಎಲ್ಲರ ಒಳ್ಳೆಯ ವಿಷಯಗಳನ್ನೂ ಮೆಚ್ಚುತ್ತಾರೆ. ಮೆಚ್ಚುವಾಗ ಧಾರಾಳವಾಗಿ ಮೆಚ್ಚುತ್ತಾರೆ. ಅದೇ ರೀತಿಯಲ್ಲಿ ಧಾರಾಳವಾಗಿ ಅವರಿಗೆ ಬೇಕಾದ ಮಾರ್ಗದರ್ಶನವನ್ನೂ ಕೊಡುತ್ತಾರೆ. ಹೀಗಾಗಿ ಅವರ ವ್ಯಕ್ತಿತ್ವ ವಿಶೇಷವಾಗಿ ಇವತ್ತು ಎಲ್ಲರ ಗಮನ ಸೆಳೆದಿದೆ.

ಮಠದ ಸಾಂಪ್ರದಾಯಿಕ ಕಾರ್ಯಕ್ರಮಗಳ ಜೊತೆಗೆ ಒಂದೆರೆಡು ನಿರ್ದಿಷ್ಟವಾದ ಕಾರ್ಯಕ್ರಮಗಳನ್ನು ಗುರಿ ಇಟ್ಟುಕೊಂಡು ಮಾಡಿದರೆ ಆಗ ನಮ್ಮ ಕಾರ್ಯಕ್ರಮ ಸಫಲತೆಯನ್ನು ಹೊಂದುತ್ತದೆ.  ಶ್ರೀಗಳು ಅವರ ಪೂಜೆ ಪಾಠ ಪ್ರವಚನ  ಇವೆಲ್ಲ ಕಾರ್ಯಕ್ರಮಗಳನ್ನು ಮಾಡುತ್ತಲೇ ಇದ್ದಾರೆ. ಆದರೆ ಗೋಸಂರಕ್ಷಣೆ ವಿಷಯದಲ್ಲಿ ಅವರು ನಿರ್ದಿಷ್ಟವಾದ ಗುರಿ ಇಟ್ಟುಕೊಂಡು ಮಾಡಿದಂತಹ ಒಂದು ಕಾರ್ಯಕ್ರಮದಿಂದಾಗಿ ಇವತ್ತು ಇಡೀ ದೇಶದಲ್ಲಿಯೇ ಒಂದು ಅದ್ಭುತವಾದಂತಹ ವಿದ್ಯುತ್ಸಂಚಾರ ಆಗಿದೆ. ಗೋವಿನ ಬಗ್ಗೆ ಗೌರವ ಕೊಡುವ ಸಂದರ್ಭದಿಂದ ಹಿಡಿದು ರಕ್ಷಣೆ ಮಾಡುವಂತಹದ್ದು, ಪೋಷಣೆ ಮಾಡುವಂತಹದ್ದು ಮತ್ತು ಅದರ ಬೆಳವಣಿಗೆಗೆ ಬೇಕಾದಂತಹ ಎಲ್ಲ ಮಾರ್ಗದರ್ಶನವನ್ನೂ ಕೂಡ  ಕೊಟ್ಟಿದ್ದಾರೆ. ಇದು ಇವತ್ತು ಬಹಳ ಪರಿವರ್ತನೆಯನ್ನು ತಂದಿದೆ.  ಒಂದು ಸಂದರ್ಭದಲ್ಲಿ ಇಂತಹ ಗೋಸಂರಕ್ಷಣೆ ಅನ್ನುವಂತಹದ್ದು ಕೇವಲ ಭಕ್ತಿಯ ಮಾತಾಗಿತ್ತು. ಹಿಂದುಗಳು ಗೋಮಾತೆಯನ್ನು ರಕ್ಷಿಸಬೇಕು ಇಷ್ಟೇ ಆಗಿತ್ತು. ಆದರೆ ಅದಕ್ಕಿಂತ ಎರಡು ಮೂರು ಹೆಜ್ಜೆ ಮುಂದೆ ಹೋಗಿ ಕೇವಲ ಗೌರವಿಸಿ, ಪೂಜೆ ಮಾಡಿ ಆರಾಧಿಸುವುದಲ್ಲ. ಅದರ ಜೊತೆಗೆ ಅದನ್ನ ಮಾತೃವಾಗಿ ಕಂಡು, ಮಾತೃವಿನ ಮೇಲಿನ ಗೌರವದಿಂದ ನಾವು ಅದನ್ನು ಪೋಷಿಸಿಕೊಂಡು ಬರಬೇಕು, ಗೌರವಿಸಬೇಕು ಅನ್ನುವುದನ್ನು ಅವರು ತೋರಿಸಿಕೊಟ್ಟಿರುವುದರಿಂದ ಇದು ಇಂದು ಅತ್ಯಂತ ಪ್ರಬಲವಾದ ಆಂದೋಲನವಾಗಿ ಪರಿಣಮಿಸಿದೆ.
ನಾವಿದನ್ನು ಆಂದೋಲನ ಅಂತ ಹೇಳುತ್ತೇನೆ. ಎಷ್ಟೋ ಜನ ಉತ್ತರಭಾರತದಿಂದ ಧರ್ಮಸ್ಥಳಕ್ಕೆ ಬಂದವರು ಅವರನ್ನು ಅವರು ಪರಿಚಯಿಸಿಕೊಳ್ಳುವಾಗ ನಾವು ಗೋಸಂರಕ್ಷಣೆಯ ಕೆಲಸದಲ್ಲಿದ್ದೇವೆ ಅಂತ ಪರಿಚಯಿಸಿಕೊಳ್ಳುತ್ತಾರೆ.

ಶ್ರೀ ವೀರೇಂದ್ರ ಹೆಗ್ಗಡೆಯವರು, ಸಂದರ್ಶನ ಸಮಯದಲ್ಲಿ

ನಾವು ನಮ್ಮ ಆಶ್ರಮದಲ್ಲಿ ಅಥವಾ ಸಂಸ್ಥೆಯಲ್ಲಿ ಇಷ್ಟು ಸಂಖ್ಯೆಯ ಗೋವುಗಳನ್ನು ರಕ್ಷಿಸುತ್ತೇವೆ ಅಂತ ಹೇಳುತ್ತಾರೆ. ಬಹುಶಃ ಈ ಆಂದೋಲನಕ್ಕಿಂತ ಮೊದಲು ಅವರು ಹೀಗೆ ಹೇಳಿಕೊಳ್ಳುತ್ತಾ ಇದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ ಈಗಂತೂ ಇದನ್ನು ಬಹಳ ಅಭಿಮಾನದಿಂದ, ಹೆಮ್ಮೆಯಿಂದ, ಕರ್ತವ್ಯ ದೃಷ್ಟಿಯಿಂದ ಹೇಳಿಕೊಳ್ಳುತ್ತಾರೆ. ಪೂಜ್ಯರ ಆಂದೋಲನ  ಎಷ್ಟು ಯಶಸ್ವಿಯಾಗಿದೆ ಅಂದರೆ ಎಲ್ಲರ ಗಮನ ಅದರ ಕಡೆ ಹರಿದಿದೆ. ಅನೇಕ ಪರಿವರ್ತನೆಗಳು ಗೋಚರವಾಗಿ ಅಗೋಚರವಾಗಿ ಆಗುತ್ತಾ ಇವೆ. ಗೋಸಂರಕ್ಷಣೆ ಮತ್ತು ಗೋಹತ್ಯೆ ವಿರೋಧವಾಗಿ ಆಗುತ್ತಿರುವ ಕಾರ್ಯಕ್ರಮಗಳು ಗೋಚರವಾಗಿ ಆಗುತ್ತಿರುವ ಕಾರ್ಯಕ್ರಮಗಳು.  ಅಗೋಚರವಾಗಿ  ಕೂಡ ಅನೇಕ ಕಡೆ ಕಾರ್ಯಗಳು ನಡೆಯುತ್ತಿವೆ. ಉದಾಹರಣೆಗೆ ನಮ್ಮಲ್ಲಿಯೇ ನಾವು ಹಸುವನ್ನೋ ಕರುವನ್ನೋ ಕೇಳಿದವರಿಗೆ ಕೊಡುವಾಗ  ಯಾರು ತೆಗೆದು ಕೊಳ್ಳುತ್ತಾರೆ, ಅವರಲ್ಲಿ ಭೂಮಿ ಇದೆಯೇ, ಅವರಲ್ಲಿ ಸಂರಕ್ಷಣೆ ಮಾಡತಕ್ಕಂತಹ ಸಾಮರ್ಥ್ಯ ಇದೆಯೇ ಅಂತ ಪರಿಶೀಲಿಸುತ್ತೇವೆ.  ಭೂಮಿ ಇದೆ, ಸಂರಕ್ಷಿಸುತ್ತಾರೆ ಅಂತ ಬರವಣಿಗೆಯಲ್ಲಿ ಕೊಟ್ಟು, ಕೊಂಡುಹೋಗಬೇಕು ಅಂತ ನಾವು ಹೇಳುತ್ತೇವೆ. ಇದು ಹಿಂದೆ ವಿಶ್ವಾಸದಲ್ಲಿ ನಡೆಯುತ್ತಾ ಇತ್ತು. ಯಾರಾದರೂ ಬಂದು ಕೇಳಿದ್ದರೆ, ಪೂರ್ವಪರ ವಿಚಾರ ಮಾಡಿ ‘ಆಯ್ತು ನೀನು ಕೊಂಡು ಹೋಗಬಹುದು’ ಅಂತ ಕೊಡುತ್ತ ಇದ್ದೆವು. ಈಗ ಈ ಎಲ್ಲ ಆಂದೋಲನಗಳೆಲ್ಲ ಆದಮೇಲೆ,  ನಾವು ಎಚ್ಚರಿಕೆ ವಹಿಸಿ ಆ ಗೋವು ಸರಿಯಾಗಿ ರಕ್ಷಿಸಲ್ಪಡಬೇಕು.  ಹೋದ ಜಾಗದಲ್ಲಿ  ಅದು ಕೈಗಳನ್ನು ದಾಟಿ ಬೇರೆ ಆಪತ್ತಿಗೆ  ಒಳಗಾಗಬಾರದು ಅನ್ನುವಷ್ಟರ ಮಟ್ಟಿಗೆ ಎಚ್ಚರಿಕೆಯನ್ನು ವಹಿಸುತ್ತೇವೆ. ಇದು ಅಗೋಚರವಾಗಿ ಆಗಿರತಕ್ಕಂತಹ ಪರಿಣಾಮಗಳು. ಹೀಗಾಗಿ ಅವರ  ಆಂದೋಲನ ಬಹಳಷ್ಟು ಯಶಸ್ವಿಯಾಗಿದೆ.

ಯಾವುದೇ ಆಂದೋಲನ ಒಮ್ಮೆ ಚಾಲನೆಯಾದ ಮೇಲೆ  ನಿಲ್ಲುವುದಿಲ್ಲ. ಅದು ಮುಂದುವರಿಯುತ್ತಾ ಹೋಗುತ್ತದೆ. ಬೀಜ ಹಾಕಿದವರಿಗೆ ಅಷ್ಟೇ ಕೆಲಸ ಇರೋದು.. ಅದು ವೃಕ್ಷವಾದ ಮೇಲೆ ಅದರ ಫಲಗಳನ್ನು ಯಾರೋ ತಿನ್ನುತ್ತಾರೆ. ಯಾರೂ ತಿನ್ನಲಿ ಪರವಾಯಿಲ್ಲ. ಆದರೆ ಗೋಸರಂಕ್ಷಣೆಯ ಆಂದೋಲನದ ಮೂಲ ಬೀಜಾವಾಪ ಮತ್ತು ಅದರ ಪೋಷಣೆ ಮಾಡಿದ ಕೀರ್ತಿ ಮಾತ್ರ ಶ್ರೀಗಳಿಗೇ ಸಲ್ಲುತ್ತದೆ.
ನನ್ನಲ್ಲಿ ಪೂಜ್ಯರು ತುಂಬಾ ಆತ್ಮೀಯತೆಯನ್ನಿಟ್ಟಿದ್ದಾರೆ. ಸ್ವಲ್ಪ ದಿನಗಳ ಕೆಳಗೆ ಗೋಕರ್ಣದಲ್ಲಿ ನಡೆದ ಒಂದು ಘಟನೆ ಇಡೀ ಸಮಾಜಕ್ಕೆ  ಆಘಾತ ತಂದಿತ್ತು. ಅವರ ಮೇಲೆ ಅಪವಾದ ತರುವಂತಹ ಪ್ರಯತ್ನ ನಡಸಿದರು ಅಂತ ಗೊತ್ತಾಯಿತು. ಆಗ ನಾನು ಅವರಿಗೆ ದೂರವಾಣಿ ಮೂಲಕ ಮಾತನಾಡಿದೆ.  ನಾನು ಹೇಳಿದೆ ’ಸ್ವಾಮೀಜಿ ನೀವು ಗಾಬರಿ ಆಗ್ಬೇಡಿ. ಇದು ತಾತ್ಕಾಲಿಕವಾಗಿ ಮೋಡ ಬಂದ ಹಾಗೆ ಬಂದಿದೆ. ಇದರಿಂದ ಹೊರಗಡೆ ಬಂದ್ಮೆಲೆ ನಿಮ್ಮ ಪ್ರಕಾಶ ಇನ್ನೂ ಜಾಸ್ತಿ ಆಗತ್ತೆ’ ಅಂತ. ಮತ್ತು, ಅವರ  ಮನಸ್ಸಿಗೆ ಸ್ವಲ್ಪ ದುಗುಡ ಆಗಿತ್ತು. ಅದು ಯಾರಿಗಾದರೂ ಆಗುವಂತಹದ್ದು… ಈ ಸಂದರ್ಭದಿಂದ ತಮಗೇನಾದರೂ ಅಪಕೀರ್ತಿ ಬರುತ್ತದೋ, ಪೀಠದ ಘನತೆಗೇನಾದರೂ ತೊಂದರೆ ಬರುತ್ತದೋ ಎಂದು. ನಾನು ಹೇಳಿದೆ ‘ಇಲ್ಲ, ಅದರ ಬದಲಿಗೆ ಇಮ್ಮಡಿ ಆಗುತ್ತದೆ. ಯಾಕೆಂದರೆ ಯಾರು ಹೆಚ್ಚು ಪ್ರಸಿದ್ಧನಿರುತ್ತಾನೋ ಅವನ ಮೇಲೆ ಅಸೂಯೆ ಹೆಚ್ಚು’.   ಒನಿಡಾ ಕಂಪನಿಯವರು ಟೀವಿಯ ಒಂದು ಜಾಹಿರಾತು ಮಾಡಿದ್ದಾರೆ.  ಒಬ್ಬ ಟೀವಿಗೆ  ಕಲ್ಲು ಹೊಡಿಯುವುದು . ಯಾಕೆಂದರೆ ಅದು ಅಷ್ಟು ಪ್ರಸಿದ್ಧ…   ಈ ಪ್ರಸಿದ್ಧವಾದ ಟೀವಿ ಇರುವುದರಿಂದ ಪಕ್ಕದ ಮನೆಯವ ಮತ್ಸರದಿಂದ ಶತ್ರುವಾಗುತ್ತಾನೆ ಎಂದು ಆ ಟೀವಿಯ ಹೆಗ್ಗಳಿಕೆ. ಇದು ಕೂಡ ಆಗಿದ್ದು ಹಾಗೆ. ಶ್ರೀಗಳ ಪ್ರಖ್ಯಾತಿಯನ್ನು ಕಂಡು ಕರುಬಿದವರಿದ್ದಾರೆ. ಈ ಪ್ರಖ್ಯಾತಿಯನ್ನೇ ಕಂಡು ವಿನಾ ಕಾರಣ ಅವರ ಮೇಲೆ ದ್ವೇಷವನ್ನು ಸಾಧಿಸುವವರು, ಅವರ ಸಮಾಜದ ಒಳಗೂ ಹೊರಗೂ ಇದ್ದಾರೆ. ಹಾಗಾಗಿ ಅಂದು ನಾನು ಪೂಜ್ಯರಿಗೆ  ‘ತಾವು ಏನೂ ಈ ಕುರಿತಾಗಿ ಯೊಚನೆ ಮಾಡ್ಬೇಕಾದ್ದಿಲ್ಲ. ಇದನ್ನೆಲ್ಲ ಮೀರಿ ನಿಲ್ತೀರಿ ಮತ್ತು ಇಂತಹ ಘಟನೆಗಳಿಂದ ನಿಮ್ಮ ವ್ಯಕ್ತಿತ್ವಕ್ಕೆ ಇನ್ನೂ   ಪ್ರಭೆ ಬರುತ್ತದೆ… ಬೆಂಕಿಗೆ ಹಾಕಿ ಹೊರಬಂದ ಚಿನ್ನದ ಹಾಗೆ… ನೀವು ಪ್ರಜ್ವಲಿಸ್ತೀರಿ’ ಎಂಬುದಾಗಿ  ಹೇಳಿದೆ. ಅಂತಹ ಆತ್ಮೀಯತೆಯನ್ನು ಅವರು ಉಂಟುಮಾಡಿದ್ದಾರೆ.
ನಾನು ಮತ್ತೊಮ್ಮೆ ಹೇಳಬಯಸುವುದೇನೆಂದರೆ ಅವರ ಮಾತೃ ಹೃದಯ, ಅವರ ಶಿಷ್ಯ ವಾತ್ಸಲ್ಯ ಮತ್ತು  ವಿಶಾಲ ಹೃದಯದಿಂದ ಮಾತನಾಡುವಂತಹ ಅವರ ವಾಣಿಯನ್ನು ಅನೇಕ ಜನ ಗೌರವಿಸುತ್ತಾರೆ. ಅವರ ಹಿಂಬಾಲಕರಾಗುತ್ತಾ ಇದ್ದಾರೆ. ಹಾಗಾಗಿ ಸಮಕಾಲೀನವಾಗಿ ಇರತಕ್ಕಂತಹ ಅನೇಕ ಯತಿಶ್ರೇಷ್ಠರಲ್ಲಿ ಸಣ್ಣವಯಸ್ಸಿನಲ್ಲಿ ಇವತ್ತು ಶ್ರೀಗಳು ಅತ್ಯಂತ ಹೆಚ್ಚು ಜನರ ಗೌರವ ಪಡೆದುಕೊಂಡಿದ್ದಾರೆ. ಅವರಿಂದ ನಾವು ಬಹಳ ನಿರೀಕ್ಷಿಸುತ್ತೇವೆ. ಇಂತಹ ಉತ್ಸಾಹಿ ಮತ್ತು ತಮ್ಮ ದೇಹ ಅಥವಾ ಆರೋಗ್ಯ ಇವುಗಳ ಕಡೆ ಗಮನ ಹರಿಸದೇ ಕೇವಲ ಧಾರ್ಮಿಕ, ಸಾಮಾಜಿಕ ಮತ್ತು ಇತರ ಈ ರೀತಿಯ, ಗೋಸರಂಕ್ಷಣೆಯಂತಹ ಕಾರ್ಯಕ್ರಮಗಳನ್ನು ಪೂರ್ತಿ ಮನಸ್ಸಿನಿಂದ ತೆಗೆದುಕೊಳ್ಳತಕ್ಕಂತವರು ಅಪರೂಪ. ಮುಂದೆ ಅವರಿಗೆ ತುಂಬ ಉಜ್ವಲವಾದ ಭವಿಷ್ಯ ಇದೆ. ಅವರಿಂದ ಬಹಳ ನಿರೀಕ್ಷೆಗಳು ಹೆಚ್ಚಾಗುತ್ತಾ ಇವೆ. ಈ ನಿರೀಕ್ಷೆಗೆ ಸರಿಯಾಗಿ ಮತ್ತು ಅವರ ಮನೋಧರ್ಮಕ್ಕೆ ಸರಿಯಾಗಿ ಅವರು ಸಂಪೂರ್ಣವಾಗಿ ಬೆಳೆಯಲಿ ಅಂತ ನಾವು ಹಾರೈಸುತ್ತೇವೆ. ಮತ್ತು ಅವರು ಇನ್ನೂ ಹೆಚ್ಚು ಕಾರ್ಯಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ  ಮಾರ್ಗದರ್ಶನ ಕೊಟ್ಟರೆ ಖಂಡಿತವಾಗಿ ಜನ ಅವರ ಮಾತಿಗೆ ಬೆಲೆ ಕೊಡುತ್ತಾರೆ. ಇಂದು ಅವರು ಏನು ಹೇಳುತ್ತಾರೋ ಅದರ ಹಿಂದೆ ಹೋಗತಕ್ಕಂತಹ ಒಂದು ವರ್ಗ ತಯಾರಾಗಿದೆ, ಇದು ಕೂಡ ಬಹಳ ಅಪರೂಪಕ್ಕೆ ಒಬ್ಬ ಗುರುಗಳಿಗೆ ಸಿಗುತ್ತದೆ. ಎಂದರೆ ಯಾವುದೋ ಒಂದು ಕಾರ್ಯಕ್ರಮ ತೆಗೆದುಕೊಂಡರೆ ಅವರನ್ನ ನಾವು ಹಿಂಬಾಲಿಸುತ್ತೇವೆ ಅನ್ನುವಂತಹ ಒಂದು ದೊಡ್ಡ ಭಕ್ತವರ್ಗ ಅವರಿಗೆ ಇದೆ. ಅಂತಹ ಶಕ್ತಿಯನ್ನು ಅವರು ಪಡೆದುಕೊಂಡಿದ್ದಾರೆ. ಶ್ರೀಮಂಜುನಾಥ ಸ್ವಾಮಿ ಇನ್ನೂ ಅವರಿಗೆ ಆಯುರಾರೋಗ್ಯವನ್ನು ನೀಡಲಿ, ಸಮಾಜದ ನೇತೃತ್ವವನ್ನು ಅವರು ಬಹುಕಾಲ ವಹಿಸಲಿ,  ಧೀರ್ಘ ಕಾಲದ ಹಿನ್ನೆಲೆಯಿರತಕ್ಕಂತಹ ಪರಂಪರೆಯ ಮಠವಾದ ಶ್ರೀ ರಾಮಚಂದ್ರಾಪುರಮಠವನ್ನು ಇನ್ನೂ ಅವರು ಹೆಚ್ಚು ಬೆಳಸಲಿ  ಇನ್ನೂ  ದೀರ್ಘಕಾಲ ದೇವರಸೇವೆಯನ್ನು,  ಸಮಾಜದ  ಸೇವೆಯನ್ನು ಮಾಡುವಂತೆ   ಆಶೀರ್ವದಿಸಲಿ ಅಂತ  ಶ್ರೀಮಂಜುನಾಥಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ.

ಡಾ. ಡಿ. ವೀರೇಂದ್ರ ಹೆಗ್ಗಡೆ ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ

ಕಿರುಪರಿಚಯ: ಪದ್ಮಭೂಷಣ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು

ಧಾರ್ಮಿಕ ಆಡಳಿತ ಕ್ಷೇತ್ರದ ಅತಿದೊಡ್ಡ ಹೆಸರು..! ಧರ್ಮಸ್ಥಳದ ಹೊಸತನದ ಹರಿಕಾರರು.. ಮಂಜುನಾಥನ ಗುರಿಕಾರರು.. ಭಕ್ತರ ಪಾಲಿನ ಮಾತನಾಡುವ ಮಂಜುನಾಥ ಸ್ವಾಮಿ.. ಗ್ರಾಮೋದ್ಧಾರಕರು.. ಪುರಾತನ ದೇವಾಲಯಗಳ ಸಮುದ್ಧಾರಕರು.. ಪುರಾತನ ವಸ್ತುವೈವಿಧ್ಯದ ಸಂರಕ್ಷಕರು.. ಬಡವರ ಭಾಗ್ಯದೇವತೆ..

ಶ್ರೀ ಹೆಗ್ಗಡೆಯವರು ’ಹರೇರಾಮ’ದ ಸಂಪಾದಕ ಬಳಗದೊಂದಿಗೆ..

ಶ್ರೀ ಹೆಗ್ಗಡೆಯವರು ’ಹರೇರಾಮ’ದ ಸಂಪಾದಕ ಬಳಗದೊಂದಿಗೆ..

ಬಲ್ಲಿದರ ಪೊಷಕರು.. ಶಿಕ್ಷಣ ಕ್ಷೇತ್ರದ ಹೊಸ ಬೆಳಕು.. ಕಲಾಪ್ರೇರಕರು.. ಸಾಹಿತ್ಯ ಸಮಾರಾಧಕರು.. ಸರ್ವಮತ ಸಮನ್ವಯಕಾರರು.. ಕೃಷಿಕರ ಆಶಾಕಿರಣ.. ಸಮರ್ಥ ನಾಯಕರು.. ಅಮಿತಗುಣಗಣಿಗಳು.. ಸಂವೇದನಾಶೀಲ ಲೇಖಕರು.. ಸದ್ಭಾವಪೂರಿತ ಅಂತಃಕರಣ ಸಮನ್ವಿತರು.. ಉತ್ತಮ ಛಾಯಾಗ್ರಾಹಕರು.. ಆದರ್ಶ ಗೃಹಸ್ಥರು.. ಸಹಾಯಕರ ಪೂಜ್ಯ ಖಾವಂದರು.. ಗಂಭೀರ ಮಾತುಗಾರರು.. ಅತಿವಿಶಿಷ್ಟ ಕಾರ್ಯಕ್ರಮಗಳ ಸಂಯೋಜಕರು.. ಅನ್ನ-ಔಷಧ-ವಿದ್ಯಾ-ದಾನವೀರರು.. ಧರ್ಮಸ್ಥಳದ ಇಪ್ಪತ್ತೊಂದನೆಯ ಧರ್ಮಾಧಿಕಾರಿಗಳು..

ಪ್ರಕೃತಹರೇರಾಮ’ದ  “ಪ್ರಮುಖ”ರು..

~ ಸಂಪಾದಕರು, ಹರೇರಾಮ ಬಳಗ, editor@hareraama.in ಭಾವಚಿತ್ರಗಳು:

Facebook Comments Box