ನಮ್ಮ ತಂದೆಯವರು ತುಂಬಾ ಬಡತನದಿಂದ ಜೀವನ ಸಾಗಿಸುತ್ತಿದ್ದರು. ಅಮ್ಮನ ಅಕ್ಕನ ಗಂಡ ಆಗಿರುವ ದಿ. ಬಲೇಗಲ್ಲ್ ಚಿದಂಬರಯ್ಯನವರು ನಮ್ಮ ತಂದೆಯವರನ್ನು ಶ್ರೀಮಠದ ಅಂದಿನ ವ್ಯವಸ್ಥಾಪಕರಾದ  ಶ್ರೀ ಎ. ಎಸ್. ರಾಮಪ್ಪನವರ ಮುಖಾಂತರ ಜಗದ್ಗುರು ಶಂಕಾರಾಚಾರ್ಯ ಶ್ರೀಮದ್ ರಾಘವೇಂದ್ರಭಾರತೀ ಮಹಾಸ್ವಾಮಿಗಳ ಅಪ್ಪಣೆ ಪಡೆದು ಶ್ರೀರಾಮಚಂದ್ರಾಪುರಮಠಕ್ಕೆ ಕರೆತಂದು ಬಿಟ್ಟರು. ತೀರ್ಥರೂಪರು ಹೊಸನಗರದ ಶ್ರೀರಾಮಚಂದ್ರಾಪುರಮಠದಲ್ಲಿ 1981 ರಿಂದ 1997 ಮೇ ತಿಂಗಳವರೆಗೆ (14 ವರ್ಷಗಳ ಕಾಲ) ಶ್ರೀರಾಮ ಸೇವೆ ಮತ್ತು ಶ್ರೀಗುರು ಸೇವೆ ಮಾಡಿರುತ್ತಾರೆ.

ಶ್ರೀಸಂಸ್ಥಾನದವರ ವಿಶೇಷ ಅಪ್ಪಣೆಯಂತೆ 1983ರಲ್ಲಿ ನಾನು ಶ್ರೀಮಠಕ್ಕೆ ಬಂದು ಅಪ್ಪ ಅಮ್ಮಂದಿರನ್ನು ಕೂಡಿಕೊಂಡೆ. 2ನೇ ತರಗತಿಯಿಂದ 8ನೇ ತರಗತಿಯವರೆಗೆ ಶ್ರೀಮಠದಿಂದಲೇ ಶಾಲೆಗೆ ಹೋಗುತ್ತಿದ್ದು ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿದೆ.  ಕಾಲೋಚಿತ ಪ್ರಯೋಗ ಅಭ್ಯಾಸ ಮಾಡಲು ಇಡಗುಂಜಿ ಪಾಠಶಾಲೆಗೆ ಹೋಗಿದ್ದು ವಿದ್ಯಾಭ್ಯಾಸದ ಅರ್ಧದಲ್ಲಿಯೇ ಶ್ರೀಮಠಕ್ಕೆ ಹಿಂತಿರುಗಿ ಬಂದೆ. ನಂತರ 1990ರಲ್ಲಿ ನನ್ನನ್ನು ಶ್ರೀ ಎ. ಎಸ್. ರಾಮಪ್ಪನವರು ಹಾಗೂ ಶ್ರೀಮಠದ ಆಗಿನ ಪ್ರಬಂಧಕರಾದ ಉಳ್ಳೂರು ಶ್ರೀಕೃಷ್ಣಮೂರ್ತಿಯವರು ನನ್ನನ್ನು ತೀರ್ಥಹಳ್ಳಿ ಶಾಖಾಮಠದಲ್ಲಿದ್ದ ಶ್ರೀಸಂಸ್ಥಾನದ ಭೇಟಿಗೆ ಕರೆತಂದರು. ಸಂಜೆಯ ಸಮಯ ಶ್ರಿಗಳವರ ದರ್ಶನ ಆಯಿತು. ನಂತರ ಶ್ರೀ ಎ. ಎಸ್. ರಾಮಪ್ಪವರು ಇವನು ತುಂಬಾ ತುಂಟ ಇವನನ್ನು ನೀವೇ ಸರಿಮಾಡಬೇಕು ಗುರುಗಳೆ ಎಂದು ಶ್ರೀ ಶ್ರೀಗಳಲ್ಲಿ ನಿವೇದಿಸಿದರು.  ಶ್ರೀಗಳು ನನ್ನನ್ನು ನೋಡಿ ಇವನು ಕಾಡು ಕಲ್ಲಾಗಿದ್ದಾನೆ ಊರ ಕಲ್ಲು ಮಾಡಬೇಕು ಎಂದು ಹೇಳಿ ಅವರನ್ನು ಕಳುಹಿಸಿಕೊಟ್ಟು ನನ್ನನ್ನು ಅವರ ಜೊತೆಯೇ ಉಳಿಸಿಕೊಂಡರು. ಇದಾದ 6 ತಿಂಗಳನಂತರ ಅಂದರೆ 1990 ನವೆಂಬರ್ ತಿಂಗಳಲ್ಲಿ ಶ್ರೀಸಂಸ್ಥಾನದವರ ಹಾಜರುವಾಸಿ ಕೆಲಸ ಮಾಡುವ ಭಾಗ್ಯ ದೊರೆಯಿತು. 1991 ನವೆಂಬರ್ 21ಕ್ಕೆ ಶ್ರೀಗಳ ಜೊತೆ ಬೆಂಗಳೂರಿನ ಗಿರಿನಗರದ ವಿದ್ಯಾಮಂದಿರಕ್ಕೆ ಬಂದೆ, ಇಲ್ಲಿ ಅರನ್ನು ಇನ್ನೂ ಹತ್ತಿರದಿಂದ ಸೇವೆ ಮಾಡುವ ಭಾಗ್ಯ ದೊರೆಯಿತು.

1997 ಮೇ ತಿಂಗಳ ಆರಂಭದಲ್ಲಿ ಶ್ರೀ ಭಾನ್ಕುಳಿ ಮಠದ ಪುನರ್ ಪ್ರತಿಷ್ಠಾಪನಾ ಸಮಾರಂಭಕ್ಕೆ ಮುಂಚಿತವಾಗಿಯೇ ಶ್ರೀಗಳೊಂದಿಗೆ ಅಲ್ಲಿಗೆ ಹೋಗಿದ್ದು ಆ ಸಂಧರ್ಭದಲ್ಲಿ  ಶ್ರೀಗಳು ನನಗೆ ಅಪ್ಪನನ್ನು ನೋಡಿಕೊಂಡು ಬಾ ಎಂದು ಹೇಳಿದರು. ಆದರೆ ನಾನು ಶ್ರೀಗುರುಗಳನ್ನು ಬಿಟ್ಟು ಹೋಗುವ ಮನಸ್ಸಿಲ್ಲದೆ ಮನೆಗೆ ಹೋಗದೆ ಉಳಿದುಕೊಂಡೆ.

1997 ಮೇ 4ರಂದು ನನ್ನ ತಂದೆಯವರು ನಿಧನರಾದ ಸುದ್ದಿ ಬಂತು. ಶ್ರೀಗಳು ಈ ವಿಚಾರವನ್ನು ಪೂರ್ವದಲ್ಲಿಯೇ ಗ್ರಹಿಸಿದುದರಿಂದಲೇ ನನಗೆ ನೋಡಿ ಬರಲು ಹೇಳಿರಬಹುದೇನೋ ಎಂದೆನಿಸಿತು. ಅವರ ದಿವ್ಯ ಶಕ್ತಿಯ ಬಗ್ಗೆ ವರ್ಣಿಸಲಾಗದು. ತುಂಬಾ ಸಮಸ್ಯೆ ಇರುವವರು ಬಂದರೆ ನಿನಗೆ  ಸರಿ ಹೋಗುತ್ತದೆ ಎಂದು ಆಶೀರ್ಮಂತ್ರಾಕ್ಷತೆ ಕೊಟ್ಟರೆ ಸಾಕು ಅವರ ಸಮಸ್ಯೆ ಪರಿಹಾರವಾಗುತ್ತಿತ್ತು.  ಯಾವುದೇ ವಿಚಾರವನ್ನು ಕೂಡಾ ಮುಂಚಿತವಾಗಿ ಗ್ರಹಿಸುತ್ತಿದ್ದರು. ದೇಹಾರೋಗ್ಯ  ಎಷ್ಟೇ ತೊಂದರೆ ಇದ್ದರೂ ಸಹಿತ ನಿತ್ಯಾನುಷ್ಠಾನ ಮಾಡುತ್ತಿದ್ದರು, ಅವರ ಜೀವನದ ಕೊನೆಯ ಮೂರು ತಿಂಗಳು ತುಂಬಾ ಆರೋಗ್ಯದ ತೊಂದರೆ ಇತ್ತು. ಮುಕ್ತರಾಗುವ ನಾಲ್ಕು ದಿನ ಮೊದಲು ರಾತ್ರಿ ಅಂದಾಜು 12ರ ಸಮಯದಲ್ಲಿ ನನ್ನನ್ನು ಕರೆದು ತಲೆಯ ಮೇಲೆ ಕ್ಯೆಯಿಟ್ಟು ನೀನು ಪೂರ್ವಜನ್ಮದಲ್ಲಿ ಮಾಡಿದ ಪುಣ್ಯದಿಂದ ಪೀಠದ ಸೇವಾಭಾಗ್ಯ ದೊರೆಯಿತು. ಮುಂದೆ ಈ ಪೀಠದ ಆರ್ಶೀವಾದ ಸಂಪೂರ್ಣ ಇದೆ ಎಂದು ಹೇಳಿದ ತಕ್ಷಣ ನನಗೆ ಸೂರ್ಯಕೋಟಿ ಸಮಪ್ರಭ ಎಂಬಂತೆ ಬೆಳಕಿನ ಪ್ರಭೆ ಗೋಚರಿಸಿತು, ನಂತರ ನಮ್ಮ ಪೂಜ್ಯರಾದ ಜಗದ್ಗುರು ಶಂಕಾರಾಚಾರ್ಯ ಶ್ರೀಮದ್ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಅನುಗ್ರಹ ಹಾಗೂ ಆಶೀರ್ವಾದದಿಂದ ಶ್ರೀಪೀಠದ ಸೇವೆಯನ್ನು ಮಾಡುವ ಭಾಗ್ಯ ನಿರಂತರವಾಗಿ ಮುಂದುವರಿಯುತ್ತಿದೆ.

ಅದೆಷ್ಟೋ ಜನ ವಿದ್ವಾಂಸರು ಇದ್ದರೂ ಪೂರ್ವ ಪೀಠಾಧಿಪತಿಗಳ ಸಮಾಧಿಗೆ ಪೂಜಾ ಸೇವೆಯನ್ನು ಮಾಡುವ ಅವಕಾಶವನ್ನು ಮಾಡಿಕೊಟ್ಟಿದ್ದು ನನ್ನ ಪಾಲಿನ ಭಾಗ್ಯವೇ ಸರಿ. 1998 ನವೆಂಬರ್‌ನಿಂದ ಈ ಸೇವಾ ಕಾರ್ಯವನ್ನು ಶ್ರೀಗುರು ನಿರ್ದೇಶನದಂತೆ ಮಾಡುತ್ತಿದ್ದೇನೆ. ಚಿತ್ರಭಾನು ಸಂವತ್ಸರದ ವೈಶಾಖ ಶುದ್ಧ ಅಕ್ಷಯ ತೃತೀಯ (15-05-2002) ದಂದು ಪೂರ್ವ ಪೀಠಾಧಿಪತಿಗಳ ಸಂಕಲ್ಪದಂತೆ ಗಿರಿನಗರದಲ್ಲಿ ಸೀತಾ ಲಕ್ಷ್ಮಣ ಹನುಮತ್ಸಮೇತ ಪ್ರಭು ಶ್ರೀರಾಮಚಂದ್ರ ದೇವರ  ಪ್ರತಿಷ್ಠಾ ಸಮಾರಂಭ ನನ್ನ ಜೀವನದ ಅವಿಸ್ಮರಣೀಯ ಘಟನೆಗಳಲ್ಲೊಂದು ಎಂದು ಹೇಳಲಿಚ್ಛಿಸುತ್ತೇನೆ. ಪರಮಪೂಜ್ಯ ಜಗದ್ಗುರು ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನ ಹಾಗೂ ಸಾನಿಧ್ಯದಲ್ಲಿ ನೆರವೇರಿದ ಈ ಅಭೂತಪೂರ್ವ ಸಮಾರಂಭದಲ್ಲಿ ಪ್ರತಿಷ್ಠಾಪನಾ ದಿನದಂದು ಪ್ರತಿಷ್ಠಾ  ಮುಹೂರ್ತದ ಸಂದರ್ಭದಲ್ಲಿ ಪರಿಸರದಲ್ಲಿ ಪ್ರಕೃತಿಯು ಹೂಮಳೆಗರೆಯಿತು, ಮೇಲೆ ಆಕಾಶವನ್ನು ನೋಡ ನೋಡುತ್ತಿದ್ದಂತೆಯೇ ವಿಷ್ಣು ವಾಹನವಾದ ಗರುಡ ಕ್ರಮವಾಗಿ ದೇವಾಲಯಕ್ಕೆ ಪ್ರದಕ್ಷಿಣಾಕಾರವಾಗಿ ಸುತ್ತುತ್ತಿತ್ತು. ಇದೇ ಸಂದರ್ಭದಲ್ಲಿ ವಾನರವೊಂದು ಈ ಎಲ್ಲಾ ಸಮಾರಂಭಕ್ಕೆ ಸಾಕ್ಷಿಯಾಗಿ ಪರಿಸರದಲ್ಲೇ ಗೋಚರಿಸಿತು.

ಆ ದಿನ…..     ಆ ಕ್ಷಣ….. ಮೈ ಮನ ರೋಮಾಂಚನಗೊಂಡಿತು ಜೀವಮಾನದ ವಿಶೇಷ ಅವಿಸ್ಮರಣೀಯ ಅನುಭವ ನನ್ನದಾಯಿತು. ಶ್ರೀಗುರು ಶ್ರೀರಾಮನ ಅನಂತ ಮಹಿಮೆಯ ದರ್ಶನದಿಂದ ಪುಳಕಿತಗೊಂಡಿತು ಮನಸ್ಸು. 2002ರಿಂದ ಶ್ರೀರಾಮ ದೇವರ ಸೇವಾ ಭಾಗ್ಯವನ್ನೂ ಕರುಣಿಸಿದ ಮಾತೃ ಹೃದಯಿ ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮಿಗಳ ಪ್ರೀತಿ ವಾತ್ಸಲ್ಯಕ್ಕೆ ನಾನು ಯಾವತ್ತೂ ಋಣಿಯಾಗಿದ್ದೇನೆ.

ನನ್ನ ಅನುಭವದಿಂದ ಸಮಾಜಕ್ಕೆ ನಾನು ಹೇಳುವುದಾದರೆ ಶ್ರೀಗುರು ಚರಣಗಳಿಗೆ ಶರಣಾಗತರಾದೆರೆ ಜೀವನದಲ್ಲೆಲ್ಲೂ ಸೋಲೇ ಇಲ್ಲ ಎಂಬುದಾಗಿದೆ. ಆದರೆ ಶ್ರೀಗುರುಗಳ ಸೇವೆ ಮಾಡುವ ಭಾಗ್ಯ ಪೂರ್ವಜನ್ಮದ ಪುಣ್ಯದಿಂದಲೇ ಲಭಿಸುವುದು ಎಂದು ನನ್ನ ಅಭಿಪ್ರಾಯ. ಹಾಗೆಯೇ ನನ್ನ ಜೀವನದ ಎಲ್ಲ ಯಶಸ್ಸಿಗೂ ಶ್ರೀಪೀಠದ ಅನುಗ್ರಹವೇ ಕಾರಣ ಎಂದು ನಂಬಿದ್ದೇನೆ.

ಸದಾ ಶ್ರೀಗುರುಗಳ ಸೇವೆ ಮಾಡುವ ಭಾಗ್ಯ ನನ್ನದಿರಲಿ ಎಂದು ಆಶಿಸುತ್ತಾ ಇರುವ
ತಮ್ಮ
ಚಿದಾನಂದ ಭಟ್ಟ

ಪರಿಚಯ:
ದಿ. ಗಾಲಿ ಗಣಪತಿ ಭಟ್ಟ ಮತ್ತು ಶ್ರೀಮತಿ ಜಾನಕಮ್ಮ ದಂಪತಿಗಳ ಜ್ಯೇಷ್ಠ ಪುತ್ರನಾಗಿ 10-03-1977ರಲ್ಲಿ ಶಿವಮೊಗ್ಗ ಜಿಲ್ಲೆ ಸಾಗರದ ಬಚ್ಚಗಾರು ಶ್ರೀ ಮಹಾಗಣಪತಿ ದೇವಸ್ಥಾನದ ಸನಿಹದಲ್ಲಿ ಜನಿಸಿದ ಶ್ರೀ ಚಿದಾನಂದ ಭಟ್ಟರು ಪ್ರಾಥಮಿಕ ಶಿಕ್ಷಣವನ್ನು ಹೊಸನಗರದಲ್ಲಿ ಹಾಗೂ ವೇದಾಧ್ಯಯನವನ್ನು ಶ್ರೀಮಠದಲ್ಲಿಯೇ ಪೂರೈಸಿ ಏಳು ವರ್ಷಗಳ ಕಾಲ ಶ್ರೀಪೀಠದ ಸೇವೆಯನ್ನು ಮಾಡಿದ್ದು ಜ್ಯೋತಿಷ ಶಾಸ್ತ್ರವನ್ನು ಕೂಡಾ ಅಭ್ಯಸಿಸಿರುತ್ತಾರೆ. ಪ್ರಸ್ತುತ ಪರಮಪೂಜ್ಯ ಶ್ರೀ ಶ್ರೀಗಳ ನಿರ್ದೇಶನದಂತೆ ಶ್ರೀರಾಮಮಚಂದ್ರಾಪುರಮಠದ ಶಾಖಾಮಠವಾದ ಗಿರಿನಗರದ ಶ್ರೀರಾಮಾಶ್ರಮದಲ್ಲಿ ಪ್ರಧಾನ ಅರ್ಚಕರಾಗಿ ಸೇವೆಸಲ್ಲಿಸುತ್ತಿದ್ದು ಶ್ರೀಗುರು ಸೇವಾ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಇವರಿಗೆ ಶ್ರೀಕರಾರ್ಚಿತ ದೇವತಾನುಗ್ರಹ ಹಾಗೂ ಶ್ರೀಗುರು ಆಶೀರ್ವಾದ ಸದಾ ಇರಲೆಂದು ಹಾರೈಕೆ
Facebook Comments