೧೯೯೯ ರಲ್ಲಿ ಪ್ರಥಮವಾಗಿ ನಾನು ನನ್ನ ಶ್ರೀಮತಿಯವರೊಡನೆ ಪೂಜ್ಯರನ್ನು ಕಾಣಲು ಗಿರಿನಗರ ಮಠಕ್ಕೆ ಬಂದಿದ್ದೆನು. ಆಗಿನ್ನೂ ಪೂಜ್ಯರು ಶ್ರೀಮಠದ ಉಸ್ತುವಾರಿಯನ್ನು ವಹಿಸಿಕೊಂಡು ಸ್ವಲ್ಪವೇ ದಿನ ಕಳೆದಿದ್ದು, ಪೂಜ್ಯರೊಡನೆ ಸುಮಾರು ಅರ್ಧ ಗಂಟೆಗೂ ಹೆಚ್ಚುಕಾಲ ಬೇರೆ ಬೇರೆ ವಿಚಾರಗಳ ಬಗ್ಗೆ ಚರ್ಚಿಸುತ್ತಿದ್ದಾಗ ನಾನು ಪೂಜ್ಯರಲ್ಲಿ ಒಂದು ವಿನಂತಿಯನ್ನು ಮಾಡಿಕೊಂಡೆ, ‘ತಾವು ಯಾರನ್ನೂ ಅತಿ ಸಮೀಪಕ್ಕೆ ಸೇರಿಸಬಾರದು’ ಎಂದು, ಈಗ ಅವರ ವ್ಯಕ್ತಿತ್ವವನ್ನು ಕಂಡ ನನಗೆ ಅದು ನನ್ನ ಉದ್ಧಟತನದ ವಿನಂತಿ ಎಂದು ಅನ್ನಿಸುತ್ತಿದೆ. ಯಾಕೆಂದರೆ ಕಳೆದ ಮೂರು ವರ್ಷಗಳಿಂದ ನಾನು ಎಂದೂ ಪೂಜ್ಯರಲ್ಲಿ ಆ ರೀತಿಯ ಪ್ರವೃತ್ತಿಯನ್ನು ಕಂಡಿರುವುದಿಲ್ಲ.

೨೦೦೩ ರಲ್ಲಿ ನಾನು ನನ್ನ ಕುಟುಂಬ ಸಮೇತ ಪ್ರವಾಸಕ್ಕೆ ಹೋಗಿ ತಿರುಗಿ ಬರುವಾಗ ಹೊಸನಗರದಲ್ಲಿ ಪೂಜ್ಯರನ್ನು ಕಾಣಬೇಕೆನ್ನುವ ತುಡಿತದಿಂದ ಹೊಸನಗರ ಮಠಕ್ಕೆ ಭೇಟಿನೀಡಿದೆನು. ಆಗ ಪೂಜ್ಯರು ಶ್ರೀಮಠದ ಏಳಿಗೆಗಾಗಿ ಮತ್ತು ಸಂಘಟನೆಗಾಗಿ ನಡೆಯಬೇಕಿದ್ದ ಸಭೆಯಲ್ಲಿ ಭಾಗವಹಿಸಿದ್ದರು. ಸವಾರಿಯವರಲ್ಲೊಬ್ಬರಾದ ಶ್ರೀ ರಜನೀಶ್ ಇವರು ಪೂಜ್ಯರಿಗೆ ‘ಎಸ್.ಪಿ. ಕಾರವಾರ್ ರವರು ಬಂದಿದ್ದಾರೆ’ ಎಂದು ನನ್ನ ಬಗ್ಗೆ ತಪ್ಪು ಮಾಹಿತಿಯನ್ನು ನೀಡಿದ್ದು, ಪೂಜ್ಯರು ನನ್ನನ್ನು ನೋಡಲು ಸಭೆಯಿಂದ ಎದ್ದು ಬಂದು ನನ್ನನ್ನು ಕಂಡು ಅಂತಹ ಅಸಮಾಧಾನವನ್ನು ಸಹ ತೋರ್ಪಡಿಸದೆ ಕೆಲಸಗಳ ಒತ್ತಡದ ಮಧ್ಯೆಯೂ ಸುಮಾರು ೧೫-೨೦ ನಿಮಿಷ ನಮ್ಮ ಯೋಗಕ್ಷೇಮವನ್ನು ವಿಚಾರಿಸಿರುವುದು ಅವರ ಉದಾತ್ತ ಮನೋಭಾವನೆಯನ್ನು ಎತ್ತಿ ತೋರಿಸುತ್ತದೆ.

೨೦೦೫ ರಲ್ಲಿ ನಾನು ಶಿವಮೊಗ್ಗ ಜಿಲ್ಲೆಯಲ್ಲಿ ಸರ್ಕಾರಿ ಕೆಲಸದ ಮೇಲೆ ಹೋಗಿದ್ದು, ಪೂಜ್ಯರನ್ನು ನೊಡಬೇಕೆನ್ನುವ ಬಯಕೆ ನನ್ನಲ್ಲೂ ಇದ್ದು, ನನ್ನ ಶ್ರೀಮತಿಯವರೂ ವ್ಯಕ್ತಪಡಿಸಿದ ಪ್ರಯುಕ್ತ ಇಬ್ಬರೂ ಜೊತೆಯಾಗಿ ಹೊಸನಗರ ಪ್ರಧಾನಮಠಕ್ಕೆ ಭೇಟಿ ನೀಡಿದೆವು. ಆ ದಿನ ಪ್ರಧಾನಮಠದಲ್ಲಿ ವಿಶೇಷ ಕಾರ್ಯಕ್ರಮವಿದ್ದು, ಸೂಜಿಗಲ್ಲಿನಂತೆ ಆಕರ್ಷಿಸಲ್ಪಡುವ ಪೂಜ್ಯರನ್ನು ಕಾಣಲು ಸಾವಿರಾರು ಭಕ್ತರು ಅಲ್ಲಿ ನೆರೆದಿದ್ದರೂ ಸಹ ನನ್ನನ್ನು ಗುರುತಿಸಿ ಪೂಜ್ಯರು ಆತ್ಮೀಯವಾಗಿ ಉಪಚರಿಸಿರುವುದಲ್ಲದೆ, ನನ್ನನ್ನೂ ಸಹ ಆ ದಿನದ ಸಭೆಗೆ ಬರುವಂತೆ ಆಹ್ವಾನಿಸಿದರು. ನಾನು ನನ್ನ ಶ್ರೀಮತಿಯೊಡನೆ ಸಭೆಗೆ ಆಗಮಿಸುತ್ತಿದ್ದಂತೆಯೇ ಪೂಜ್ಯರು ನನ್ನನ್ನು ಸಭೆಗೆ ಪರಿಚಯಿಸುತ್ತಾ ‘ಇವರು ಇನ್ನು ೫-೬ ತಿಂಗಳಲ್ಲಿ ನಿವೃತ್ತರಾಗುತ್ತಾರೆ (ಆ ವಿಚಾರವನ್ನು ನಾನು ಪೂಜ್ಯರಿಗೆ ಹೇಳಿರಲಿಲ್ಲ) ಇವರ ಪೂರ್ಣ ಸೇವೆಯನ್ನು ಶ್ರೀಮಠಕ್ಕೆ ಉಪಯೋಗಿಸಿಕೊಳ್ಳಲಾಗುವುದು’ ಎಂದು ಘೋಷಿಸಿರುವುದಲ್ಲದೆ ನನ್ನನ್ನು ಮತ್ತು ನನ್ನ ಶ್ರೀಮತಿಯವರನ್ನು ಶಾಲು ಹೊದೆಸಿ ಸನ್ಮಾನಿಸಿದರು.

ನಾನು ೨೦೦೫ ರಲ್ಲಿ ನಿವೃತ್ತನಾಗಿ ನನ್ನ ಕೆಲವು ವೈಯಕ್ತಿಕ ಸಮಸ್ಯೆಗಳಿಂದ ಸುಮಾರು ೨ ವರ್ಷ ಶ್ರೀಮಠದ ಕೆಲಸಕಾರ್ಯಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದಾಗಿ ನನ್ನ ಮನಸ್ಸಿನಲ್ಲಿ ಪೂಜ್ಯರ ಅಪ್ಪಣೆಯನ್ನು ಕಾರ್ಯಗತಮಾಡಲಿಲ್ಲ ಎನ್ನುವ ಬೇಗುದಿ ಕಾಡುತ್ತಿತ್ತು. ೨೦೦೭ ರಲ್ಲಿ ಪೂಜ್ಯರು ಗಿರಿನಗರ ಮಠದಲ್ಲಿ ಇದ್ದಾಗ ಅವರನ್ನು ಕಂಡು ಆಶೀರ್ವಾದ ಪಡೆದೆನು ಅಲ್ಲದೆ, ಆಡಳಿತಾಧಿಕಾರಿಗಳಾದ ಶ್ರೀಯುತ ಶ್ರೀ ಟಿ. ಮಡಿಯಾಲ್ ಸಾಹೇಬರನ್ನು ಕಂಡು ಮಠಕ್ಕೆ ಆಗಬೇಕಾದ ಕೆಲಸಗಳೇನಾದರೂ ಇದ್ದಲ್ಲಿ ಅದನ್ನು ನನಗೆ ತಿಳಿಸಿದಲ್ಲಿ ಕಾರ್ಯಗತ ಮಾಡುತ್ತೇನೆ ಎಂದು, ಪೂಜ್ಯರ ಅಪ್ಪಣೆಯನ್ನು ಕಾರ್ಯಗತ ಮಾಡಲಾಗದ ನನ್ನ ಮನಸ್ಸಿನ ತುಮುಲವನ್ನು ಅವರಲ್ಲಿ ತಿಳಿಸಿದೆನು. ಮನೆಯಲ್ಲಿ ಸುಮ್ಮನೇ ಕುಳಿತು ಕಾಲಹರಣ ಮಾಡುತ್ತಿದ್ದ ನನಗೆ ೨-೩ ಬಹುರಾಷ್ಟ್ರೀಯ ಸಂಸ್ಥೆಗಳಿಂದ (MNC ಗಳಿಂದ) ಬೇರೆ ಬೇರೆ ಹುದ್ದೆ ನೀಡುವ ಬಗ್ಗೆಯೂ, ಹೆಚ್ಚಿನ ಸಂಭಾವನೆ ನೀಡುವ ಬಗ್ಗೆಯೂ ಒತ್ತಡಗಳು ಬರಲಾರಂಭಿಸಿದವು. ಆದರೆ ನನ್ನ ಮನಸ್ಸು ಮತ್ತು ನನ್ನ ಶ್ರೀಮತಿಯವರ ಅಪೇಕ್ಷೆ ಶ್ರೀಮಠದಲ್ಲಿ ಕೆಲಸ ಮಾಡುವ ಬಗ್ಗೆ ಹೆಚ್ಚಿನ ಒಲವು ವ್ಯಕ್ತವಾಗಿದ್ದು ಅದೇ ಸಮಯಕ್ಕೆ ಪೂಜ್ಯರಿಂದ ಅವರನ್ನು ಕಾಣಲು ದೂರವಾಣಿ ಮೂಲಕ ಸೂಚಿಸಿದಂತೆ ನಾನು ಸೆಪ್ಟೆಂಬರ್ ೨೦೦೭ ರಲ್ಲಿ ಪೂಜ್ಯರನ್ನು ಕಂಡಾಗ ಅವರು ನಿಮ್ಮ ಸೇವೆ ಶ್ರೀಮಠಕ್ಕೆ ಲಭ್ಯವಾಗಬೇಕು, ನಿಮ್ಮ ಬಗ್ಗೆ ಆಡಳಿತಾಧಿಕಾರಿಗಳೂ ಸಹ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾವು ಕೂಡಲೇ ಶ್ರೀಮಠದ ವ್ಯವಸ್ಥೆಯಲ್ಲಿ ಭಾಗಿಯಾಗಬೇಕೆಂದು ತಿಳಿಸಿದರು. ಅವರ ತೇಜಸ್ಸಿನಿಂದ ಹೊರಟ ಬೆಳಕು ನನ್ನ ಅಂತರಂಗವನ್ನು ಪೂರ್ಣವಾಗಿ ವ್ಯಾಪಿಸಿತು, ಅದರಂತೆ ನಾನು ೧೭/೦೯/೨೦೦೭ ರಿಂದ ಶ್ರೀಮಠದ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಇದು ನನ್ನ ಶ್ರೀಮತಿಯವರ ಅಪೇಕ್ಷೆ, ಪ್ರೇರಣೆ ಮತ್ತು ಸಹಕಾರ ಎಂದು ತಿಳಿಸಲು ನನಗೆ ತುಂಬಾ ಹೆಮ್ಮೆಯಾಗುತ್ತಿದೆ.

ಪರಮಪೂಜ್ಯರಲ್ಲಿ ನಾನು ಕಂಡ ವಿಶೇಷ ಏನೆಂದರೆ ಸಮಾಜಕ್ಕೆ ಒಳಿತನ್ನು ಮಾಡುವ, ಮಗುವಿನಂತಹ ಮನಸ್ಸು, ಯಾರಿಗೂ ಕೆಟ್ಟದ್ದನ್ನು ಬಯಸದ, ವಿಶಾಲ ಮನೋಭಾವವನ್ನು ಹೊಂದಿರುವ ಪೂಜ್ಯರನ್ನು ಪೀಠಾಧಿಪತಿಯಾಗಿ ಪಡೆದ ನಾವೆಲ್ಲರೂ ಧನ್ಯರು. ಅವರ ಜ್ಞಾನ, ದೂರದೃಷ್ಟಿ, ಸಂಘಟನಾ ಚಾತುರ್ಯ ಮುಂತಾದವುಗಳು ನನಗೆ ತುಂಬ ಮೆಚ್ಚಿಗೆಯಾಗಿದ್ದು, ಅವರ ಅಧೀನದಲ್ಲಿ ಕೆಲಸವನ್ನು ಮಾಡುವುದೇ ಒಂದು ಸೌಭಾಗ್ಯ ಎಂದು ನಾನು ನಂಬಿರುತ್ತೇನೆ. ಪೂಜ್ಯರಿಗೆ ನಮ್ಮ ಸಮಾಜದ ಏಳಿಗೆಗಾಗಿ ಇರುವ ಚಿಂತನೆ, ಆ ಬಗ್ಗೆ ಅವರು ಪಡುತ್ತಿರುವ ಶ್ರಮ, ಕಷ್ಟ, ಯಾರಿಗೂ ಇಲ್ಲದಿರುವುದು. ಪೂಜ್ಯರ ದರ್ಶನಪಡೆಯಲು ಸಾವಿರಾರು ಮೈಲಿ ದೂರದಿಂದ ಭಕ್ತಾದಿಗಳು ಬಂದಾಗ್ಯೂ ಕೆಲವೊಮ್ಮೆ ಪೂಜ್ಯರ ಕೆಲಸದ ಒತ್ತಡದಿಂದ ದರ್ಶನವಿಲ್ಲದೆ ಹೋಗುವ ಸಂಭವವಿರುತ್ತದೆ. ಆದರೆ ನನಗೆ ಪೂಜ್ಯರನ್ನು ಹತ್ತಿರದಿಂದ ನೋಡುವ, ಅವರೊಡನೆ ಸಂಭಾಷಣೆ ಮಾಡುವ, ಅವರಿಂದ ಮಾರ್ಗದರ್ಶನ ಪಡೆಯುವ, ಅವರಿಂದ ಎಷ್ಟೋ ವಿಚಾರಗಳನ್ನು ತಿಳಿದುಕೊಳ್ಳುವ ಸೌಭಾಗ್ಯವನ್ನು ದೇವರು ಕರುಣಿಸಿದ್ದು, ಇದೊಂದು ನನ್ನ ಪೂರ್ವಜನ್ಮದ ಸುಕೃತ ಎಂದು ನಾನು ಭಾವಿಸುತ್ತೇನೆ. ಪೂಜ್ಯರನ್ನು ಹತ್ತಿರದಿಂದ ನೋಡಿದ್ದು, ಅವರಲ್ಲಿರುವ ಉತ್ಸುಕತೆ, ಮಾನವೀಯ ಗುಣಗಳು, ಕೆಲಸದಲ್ಲಿಯ ಆಸಕ್ತಿ, ಸಮಾಜಕ್ಕೆ ಒಳಿತುಮಾಡಬೇಕೆನ್ನುವ ತುಡಿತ, ಅವರ ದೂರದೃಷ್ಟಿ, ಆಧುನಿಕ ಉಪಕರಣಗಳನ್ನು ಬಳಸುವ ಪದ್ಧತಿಗಳನ್ನು ಅವರು ತಿಳಿದುಕೊಂಡಿರುವ ರೀತಿ, ಗೋವಿನ ಬಗ್ಗೆ ಇರುವ ಅವರ ಕಳಕಳಿ, ಪರಿಸರ ಕಾಪಾಡುವ ಬಗ್ಗೆ ಅವರ ಚಿಂತನೆ ಮುಂತಾದವುಗಳು ನನಗೆ ತುಂಬಾ ಹಿಡಿಸಿದ್ದು, ಅವರ ಮಾರ್ಗದರ್ಶನದಲ್ಲಿ ಕೆಲಸಕಾರ್ಯಗಳನ್ನು ನಿರ್ವಹಿಸಲು ತುಂಬಾ ಹುಮ್ಮಸ್ಸನ್ನು ನೀಡಿರುತ್ತದೆ. ಪೂಜ್ಯರು ಹಗಲು ರಾತ್ರಿ ಸಮಾಜದ ಒಳಿತಿಗಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಕೆಲವೊಂದು ದುಷ್ಟಶಕ್ತಿಗಳು ಅವರ ವಿರುದ್ಧ ಕಾರ್ಯ ಪ್ರವೃತ್ತರಾಗಿರುವುದನ್ನು ನೋಡಿದರೆ ಅವರು ಮಾನವ ಕುಲದ ದೈತ್ಯರೆಂದು ಕರೆಯಲು ಯಾವ ಅಭ್ಯಂತರವೂ ಕಂಡು ಬರುವುದಿಲ್ಲ. ಒಂದು ದಿನ ನಡೆದ ಸಭೆಯಲ್ಲಿ ಪೂಜ್ಯರು ನನ್ನನ್ನು ಶ್ರೀಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂದು ನೇಮಿಸಿದಾಗ, ಅಂತಹ ದೊಡ್ಡ ಹುದ್ದೆಗೆ ನಾನು ಅರ್ಹನೇ ಎಂಬ ಭಾವನೆ ನನಗೆ ತುಂಬಾ ದಿನದಿಂದ ಕಾಡುತ್ತಿತ್ತು. ಆದರೆ ಪೂಜ್ಯರು ನೀಡುವ ಸಲಹೆ ಸೂಚನೆ ಮತ್ತು ಅವರ ಮಾರ್ಗದರ್ಶನದಲ್ಲಿ ಬೆಟ್ಟದಂತಹ ಕಷ್ಟಗಳು ಮೋಡದ ರೀತಿಯಲ್ಲಿ ಕರಗಿ ಹೋಗುತ್ತವೆ. ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವುದೇ ಒಂದು ಸೌಭಾಗ್ಯ ಎಂದು ನಾನು ಭಾವಿಸಿ ಕಾರ್ಯಪ್ರವೃತ್ತನಾಗಿರುತ್ತೇನೆ.

ಶ್ರೀ ಕೆ. ಜಿ. ಭಟ್ ಪರಿಚಯ:

೧೯೪೭ ಸೆಪ್ಟೆಂಬರ್ ೭ ರಂದು ಕುಮಟಾ ತಾಲೂಕು ದೇವರಬೋಳೆ ಎನ್ನುವಲ್ಲಿ ಜನಿಸಿದ ಶ್ರೀ ಕೃಷ್ಣ ಗಣೇಶ ಭಟ್ಟರು ಪ್ರಾಥಮಿಕ ಶಿಕ್ಷಣವನ್ನು ಲುಕ್ಕೇರಿ ಮತ್ತು ಮಿರ್ಜಾನ್ ಶಾಲೆಗಳಲ್ಲಿ ಪೂರೈಸಿ ಪ್ರೌಢಶಿಕ್ಷಣವನ್ನು ಹೆಗಡೆಯಲ್ಲಿ ಪಡೆದಿದ್ದು, ಕುಮಟಾದ ಡಾ|| ಎ.ವಿ. ಬಾಳಿಗಾ ಕಾಲೇಜಿನಲ್ಲಿ ೧೯೬೮-೬೯ ರಲ್ಲಿ ಪದವಿ ಪಡೆದು ಉಪ ಪೋಲಿಸ್ ನಿರೀಕ್ಷಕ ಹುದ್ದೆಗೆ ನೇರ ನೇಮಕಾತಿ ಹೊಂದಿದವರು ಮುಂದೆ ಭಡ್ತಿಪಡೆದು ಬೆಂಗಳೂರು ನಗರ, ಧಾರವಾಡ, ಬೆಳಗಾವಿ, ಕೊಡಗು ಮುಂತಾದ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿ ಮತ್ತೊಮ್ಮೆ ಉಪ ಆರಕ್ಷಕ ಅಧೀಕ್ಷಕರ (ಡಿ‌ಎಸ್‌ಪಿ) ಹುದ್ದೆಗೆ ಭಡ್ತಿ ಪಡೆದು ಮೈಸೂರು ಮತ್ತು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ೧೯೯೯ ರಲ್ಲಿ ಆರಕ್ಷಕ ಅಧೀಕ್ಷಕರು (ಎಸ್‌ಪಿ) ಆಗಿ ಭಡ್ತಿ ಪಡೆದು ಕಮಾಂಡೆಂಟ್ ಹೋಮ್ ಗಾರ್ಡ್ಸ್‌ನಲ್ಲಿ ಮತ್ತು ಬೆಂಗಳೂರಿನ ಯಲಹಂಕದ ಆರಕ್ಷಕ ತರಬೇತಿ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿರುತ್ತಾರೆ. ಇವರ ೩೬ ವರ್ಷ ಸೇವಾವಧಿಯಲ್ಲಿ ಮಾನ್ಯ ರಾಷ್ಟ್ರಪತಿಗಳಿಂದ ಎರಡು ಬಾರಿ ಶ್ಲಾಘನೀಯ ಸೇವಾಪದಕವನ್ನು ಮತ್ತು ಮಾನ್ಯ ಮುಖ್ಯಮಂತ್ರಿಗಳಿಂದ ಚಿನ್ನದ ಪದಕವನ್ನು ಪಡೆದಿರುತ್ತಾರೆ. ಸೇವಾವಧಿಯಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ನಗದು ಬಹುಮಾನ, ಪ್ರಶಂಸಾಪತ್ರ ಮುಂತಾದವುಗಳನ್ನು ಪಡೆದು ೨೦೦೫ರಲ್ಲಿ ಸೇವಾನಿವೃತ್ತನಾಗಿರುತ್ತಾರೆ. ಇವರ ರಾಷ್ಟ್ರಸೇವೆಯನ್ನು ಗುರುತಿಸಿ ಶ್ರೀ ಅಖಿಲ ಹವ್ಯಕ ಮಹಾಸಭಾವು ೨೦೦೨ ರಲ್ಲಿ ಸುಳ್ಯದಲ್ಲಿ ಮತ್ತು ೨೦೦೬ ರಲ್ಲಿ ಯಲ್ಲಾಪುರದಲ್ಲಿ ಇವರನ್ನು ವಿಶೇಷವಾಗಿ ಗೌರವಿಸಿದೆ. ೨೦೦೭ನೇ ಸೆಪ್ಟೆಂಬರ್ ೧೭ ರಿಂದ ಶ್ರೀಮಠದ ಉಪ ಆಡಳಿತಾಧಿಕಾರಿಯಾಗಿ ಶ್ರೀಗುರುಗಳ ಸೇವೆಯನ್ನು ಮಾಡುತ್ತಿದ್ದು, ೨೦೧೦ ರಿಂದ ಶ್ರೀರಾಮಚಂದ್ರಾಪುರಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿ ಶ್ರೀಗುರುಗಳು ಜವಾಬ್ದಾರಿಯನ್ನು ನೀಡಿದ್ದು, ನಿರಂತರ ಶ್ರೀಗುರು ಸೇವಾಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಇವರಿಗೆ ಶ್ರೀಕರಾರ್ಚಿತ ದೇವತಾನುಗ್ರಹ ಮತ್ತು ಶ್ರೀಗುರು ಅನುಗ್ರಹ ಸದಾ ಇರಲೆಂದು ಹಾರೈಕೆ.

ಸಂಪಾದಕ

Facebook Comments Box