|| ಹರೇರಾಮ ||

ಬರೆಯಲೆಣಿಸಿದರೆ ಬರವು ಒಳಗಿದ್ದ ಭಾವಗಳು..
ಬರಹದಲೆಂದೂ ಪೂರ್ಣತೆ ಬಾರದು ಮನದಿಂಗಿತಕೆ…
ಬರೆಯುವವನ ಭಾವವೊಂದು…
ಓದುಗನ ಭಾವವಿನ್ನೊಂದು….
ಈ ಎರಡೂ ಭಾವಗಳ ಮಿಲನವಾದಲ್ಲಿ ಬರಹಕೊಂದು ಅರ್ಥ…
ಬಯಸುವೆನು ನಾ ನಿಮ್ಮೊಳಗಿಳಿಯಲು ಅಕ್ಷರರೂಪದಿ…
ತೆರೆದುಕೊಳ್ಳಿ ನಿಮ್ಮಂತರಂಗವನು ತುಸುವೇ..
ಕರೆದುಕೊಳ್ಳಿರೀ ನಿಮ್ಮವನ ನಾ ನಿಮ್ಮೆಡೆಗೆ ಬರುವೆ..

ಗುರುವಿನ ಸಂಪರ್ಕ ಬೇಕೆಂದಾಗ ಸಿಗದು..!
ಅದೇ ಗುರುವೇ ಬಯಸಿದರೆ…?
ಬೇಡವೆಂದರೂ ತಪ್ಪದು..!

ಹುಟ್ಟಿದಂದಿನಿಂದ ಸುಮಾರು ಇಪ್ಪತ್ತೇಳು ವರ್ಷಗಳ ಕಾಲ ಮಠದ ಸಂಪರ್ಕವಿಲ್ಲದೇ ಬೆಳೆದವನು ನಾನು..!
ಹಾಗಂತ ಮಠವನ್ನು ದೂರುವವನಾಗಿರಲಿಲ್ಲ..
ಅಪ್ಪ ಮೊದಲಿನಿಂದಲೂ ಗುರುವಿನ ಸಂಪರ್ಕವಿದ್ದವರು..
ಮುಕ್ತರಾಗುವ ಮೊದಲು ದೊಡ್ಡ ಗುರುಗಳು ತೀರ್ಥಹಳ್ಳಿಯಲ್ಲಿ ಮೊಕ್ಕಾಂ ಮಾಡಿದ್ದಾಗ ಅಪ್ಪನ ಜೊತೆ ಮೀಟಿಂಗಿಗೆ ಹೋಗಿದ್ದೆ..
ಅದೇ ಮೊದಲು ನಮ್ಮ ಗುರುಗಳನ್ನು ಪ್ರತ್ಯಕ್ಷ ನೋಡಿದ್ದು…!
ಎದುರು ನಿಲ್ಲಲೂ ಹೆದರಿಕೆ…
ಇವ ಯಾರು?..ಕೇಳಿದ ನೆನಪು ನಂಗೆ..
ಹೀಗೆ ಪ್ರಾರಂಭವಾಯಿತು ಗುರುಮಠದ ಪರಿಚಯ..!

ಪರಿಚಯವಾದದ್ದು ದೊಡ್ಡ ಗುರುಗಳ ಗಂಭೀರ ಮೊಗ..
ಅಲ್ಲಿಯೂ ಮಠ ಎಂದರೆ ಒಂದು ರೀತಿಯ ಹೆದರಿಕೆ..!
ಸಂಪ್ರದಾಯಗಳಾವುದೂ ಗೊತ್ತಿಲ್ಲ…
ಆದರೂ ಸೆಳೆತ ಶುರುವಾದದ್ದು ಮಾತ್ರ ಸತ್ಯವೇ…!

ದೇವರಲ್ಲಿ ಎಷ್ಟೇ ನಂಬಿಕೆಯಿದ್ದರೂ ನಮಗೆ ಏನೋ ಕೊರತೆ ಇದ್ದೇ ಇರುತ್ತದೆ…!
ಏಕೆಂದರೆ ಆ ದೇವರನ್ನು ಪ್ರತ್ಯಕ್ಷ ನೋಡಲು ಸಾಧ್ಯವಿಲ್ಲವಲ್ಲ…!
ನೆನೆದರೆ ಕೂಡಲೇ ಎದುರಿಗೆ ಬರಬೇಕು ದೇವರು, ಹಾಗಿದ್ದರೆ ಮಾತ್ರ ನಾವು ತೃಪ್ತರು..!
ಹಾಗಾದರೆ ಕಾಣದ ದೇವರ ಬಳಿಗೆ ತಲುಪಲು ಒಂದು ಮಾರ್ಗ ಬೇಕು..
ಯಾವುದದು…?
ಯೋಚಿಸಿದಾಗ ಕಾಣುವುದು ಕಣ್ಣೆದುರಿಗೆ “ಗುರುವೊಬ್ಬನೇ“..
ಹೌದು ಅವನೊಬ್ಬನೇ ಮಾರ್ಗದರ್ಶಕ…

ದಿನೇ ದಿನೇ ಮನಸ್ಸಿನಲ್ಲಿ ಈ ವಿಷಯ ಗಟ್ಟಿಯಾಗತೊಡಗಿತು..
ಯಾವುದಾದರೂ ಧರ್ಮಸಂಕಟಕ್ಕೊಳಗಾದರೆ, ಇದೋ ಪರಿಹಾರ ಇಲ್ಲಿದೆ ಎನ್ನುವ ಸಮಾಧಾನ ಮನಸ್ಸಿಗೆ ನಿಲುಕಲಾರಂಭಿಸಿತು..!
ಗುರು ಎಂಬ ಶಬ್ದ ಮಹಿಮೆಯೆ ಹಾಗೆಯೇನೋ…
ನಂಬಿಕೆ’ ಎನ್ನುವುದಕ್ಕೊಂದು ಪರ್ಯಾಯ ಪದವೆಂದರೆ… ಅದು ’ಗುರು’ವೇ….!!
‘ಗುರುತತ್ವವನು ಪಡೆದವನಿಗೆ ಬೇರಾವ ತತ್ವವೂ ಬೇಡವೇನೋ..’!

ದೊಡ್ದ ಗುರುಗಳು ಬ್ರಹ್ಮಲೀನರಾದ ನಂತರ ಎಂದು ನಮ್ಮ ಈಗಿನ ಸಂಸ್ಥಾನದ ಪೀಠಾರೋಹಣವಾಯಿತೋ,
ಮಠ ಎಲ್ಲರನ್ನೂ ಸೆಳೆಯಲಾರಂಭಿಸಿತು…
ಮಠದ ಕಾರ್ಯಗಳಲ್ಲಿ ಸಕ್ರಿಯರಾದವರಲ್ಲಿ ನಾನೂ ಒಬ್ಬನಾದೆ..!
೨೦೦೧ರಲ್ಲಿ ಪ್ರಥಮ ಬಾರಿಗೆ ಗುರುವಿನ ಆಗಮನ ನಮ್ಮ ಮನೆಗಾಯಿತು..
ಸಂಭ್ರಮದ ಕಾರ್ಯಕ್ರಮವಾಯಿತು..ಮನಸು ಗುರುವನ್ನು ಬಯಸಲಾರಂಭಿಸಿತು..!

ಗುರುವಿನ ಗುರುತ್ವಾಕರ್ಷಣೆ ಬಲವಾಗತೊಡಗಿತ್ತು…
ಚಾತುರ್ಮಾಸ್ಯದ ಸಮಯದಲ್ಲಿ ಮಠಕ್ಕೆ ಹೋಗುತ್ತಿದ್ದೆ..
೮-೧೦ ದಿನವಿದ್ದು ಸೇವೆ ಸಲ್ಲಿಸಿ ಮನೆಗೆ ಬರುತ್ತಿದ್ದೆ..
ಅಲ್ಲಿದ್ದ ಸಮಯದ ಆನಂದ ಹಿಂದಕ್ಕೆ ಬಂದ ಮೇಲೆ ಹುಡುಕಾಡಬೇಕಾಗಿತ್ತು..
ಏನೋ ತಳಮಳ, ಏನೋ ಕಳೆದುಕೊಂಡ ಭಾವ ಉಕ್ಕುತ್ತಿತ್ತು ಮನದಲ್ಲಿ..

ಪುನಃ ೨೦೦೪ ರಲ್ಲಿ ನನ್ನೊಡೆಯನ ಆಗಮನ ನಮ್ಮ ಮನೆಗೆ..!!
ಈ ಬಾರಿ ಬಯಸಿತ್ತು ಗುರುವನ್ನು ನನ್ನ ಮನ..ಸಂಪೂರ್ಣ ಶರಣಾಗಿತ್ತು..
ಗುರುವಿನ ಸ್ವಾಗತದಲ್ಲೇ ತೊಡಗಿಸಿಕೊಂಡೆ..
ಅಂತರಂಗಕ್ಕೆ ಅಂತರಂಗವೇ ಶಬ್ಧರೂಪದಲ್ಲಿ ಹೊರಬಂದಿತು..
ಬಂದೆಯಾ ಓ ತಂದೇ“…
ತುಂಬಿದ ಹೃದಯ ಹೊರಹರಿದು ಕರೆದಿದ್ದು ಹೀಗೆ ಗುರುವನ್ನು..
ಯಾರು ನುಡಿಸಿದರು ಹೀಗೆ ? ಹೇಗೆ ಹೊರಬಂತು..?
ಊಹುಂ, ಗೊತ್ತಿಲ್ಲ..
ಆದರೆ, ಅಂದಿನ ಆ ಕ್ಷಣದ ಕರುಣಾದೃಷ್ಟಿ ಇಂದಿಗೂ ಮರೆಯಲಾರೆ..
ಅಂದಿನ ಮೊಕ್ಕಾಮನ್ನೂ ಮರೆಯಲಾರೆ..
ಮಗನಾಗಿ ಸ್ವೀಕರಿಸಿದರು..ನನ್ನಂತರಂಗದ ಬೇಗುದಿಯನ್ನು ಕೇಳಿದರು..
ನನಗರಿಯದಲೆ ನನ್ನೊಳಗಿಳಿದರು….!

ಬಂಧುಗಳೇ,ನಮ್ಮ ಗುರುವೇ ಹಾಗೆ…!
ಒಂದು ಬಾರಿ ನಮ್ಮೊಳಗಿಳಿದರೆ  ಗುರು ಮತ್ತೆಂದೂ ಹೊರಬರುವುದೇ ಇಲ್ಲ..!
ಯಾರ ಸಮಸ್ಯೆಗಳನ್ನು ಕೇಳುವಾಗಲೂ ಆತುರವಿಲ್ಲ..ಬೇಸರವಿಲ್ಲ..
ಏನೋ ತಪ್ಪು ಮಾಡಿ ನಮ್ಮ ಹತ್ತಿರ ಬಂದಿದ್ದೀಯೆ ಎಂದು ಯಾರಿಗೂ ಹೇಳುತ್ತಿರಲಿಲ್ಲ..!
ನೀನು ಇದನ್ನ ಮಾಡಬಾರದು, ಹೀಗೇ ಮಾಡಬೇಕು ಎನ್ನುವ ಒತ್ತಾಯವನ್ನೂ ಮಾಡುತ್ತಿರಲಿಲ್ಲ..
ಇದು ನಮ್ಮ ಆಜ್ಞೆ ಎಂಬಂತೆ ಎಂದೂ ಭಾರ ಹೇರುತ್ತಿರಲಿಲ್ಲ..!
ಬದಲಾಗಿ , ಆ ಸಮಸ್ಯೆ ನಮ್ಮನ್ನು ಹೇಗೆ ಸುತ್ತಿಕೊಂಡಿದೆ, ಅದರಿಂದ ಹೊರಬರುವ ಪರಿಯೆಂತು..ಇದೆಲ್ಲಾ ನಮಗೇ ಅರ್ಥವಾಗಬೇಕು, ನಾನು ಮಾಡಿದ್ದು ತಪ್ಪು, ಆದ್ದರಿಂದ ಸರಿಯಾಗಬೇಕಾದುದು ನಾನೇ ಎಂಬ ಭಾವ ನಮ್ಮಲ್ಲಿ ಮೂಡಬೇಕು ಹಾಗೆ ಸಮಸ್ಯೆಗಳನ್ನು ಬಿಚ್ಚಿಡುತ್ತಿದ್ದರು..!
ಆದ್ದರಿಂದಲೇ ಇರಬೇಕು; ನನ್ನ ಗುರುವಿನ ಬಳಿಸಾರಿದವರೆಂದೂ ಹಿಂದಿರುಗಲಾರರು..!
ಕಾಲ ಕಳೆಯಿತು..ಮಠ ಸೆಳೆಯಿತು…
೨೦೦೬ ರ ರಾಮಸತ್ರದ ಸಮಯದಲ್ಲಿ ಹೊಸನಗರಕ್ಕೆ ಬಂದವನನ್ನು ನನ್ನ ದೇವರು ತಿರುಗಿ ಕಳುಹಿಸಲಿಲ್ಲ.!
ಭಾನ್ಕುಳಿ ಮಠದಲ್ಲಿ ಶ್ರೀಸವಾರಿ ಪರಿವಾರದಲ್ಲಿ ಒಬ್ಬನಾಗಿಹೋದೆ…!
ಅಂದು ಮೇ ೨-೨೦೦೬..
ವೈಶಾಖ ಶುದ್ಧ ಪಂಚಮಿ, ಮಂಗಳವಾರ..ವ್ಯಯ ನಾಮ ಸಂವತ್ಸರ..

ನಿಮಗೆ ಗೊತ್ತೇ..ಗುರು ಪರಿವಾರವನ್ನು ನೋಡಿಕೊಳ್ಳುವ ರೀತಿ..?
ತಿಳಿದುಕೊಳ್ಳಿ ಗೊತ್ತಿರದಿದ್ದರೆ….
‘ಮರಿಯಾನೆಯನ್ನು ಗುಂಪಿನ ನಡುವೆಯಿಟ್ಟುಕೊಂಡು ರಕ್ಷಿಸುವ ಗಜರಾಜನಂತೆ’ ..
ಪರಿವಾರದೊಳಗಿಟ್ಟು, ‘ನಿನಗೇನು ಕಷ್ಟ ಬಂದರೂ ನಾವಿದ್ದೇವೆ’ ಎಂಬ ಮಾತುಗಳು ನಮ್ಮನ್ನು ಗಟ್ಟಿಯಾಗಿಸುತ್ತವೆ..!
ಪರಿವಾರವನ್ನು ಇಷ್ಟೆಲ್ಲಾ ಪ್ರೀತಿಸುವ ಒಬ್ಬ ಗುರು ಇನ್ನೆಲ್ಲಿ ಸಿಕ್ಕಿಯಾನು…?
ನಮಗೆ ಏನೇ ಸಂಕಟ ಕಾಲಗಳು ಬಂದರೂ ಆ ಗುರುಸಾನ್ನಿಧ್ಯ ನಮಗಿದ್ದರೆ ಸಾಕು…

ಓ ನನ್ನ ಬಂಧುಗಳೇ….
ಗುರುವಿನ ಕರುಣೆಯಿರುವುದೇ ಇಲ್ಲಿ..
ಒಬ್ಬನನ್ನು ಉದ್ಧರಿಸಬೇಕಾದರೆ, ಪ್ರಾರಂಭದಲ್ಲಿ ಎಚ್ಚರಿಕೆ ರೂಪದಲ್ಲಿ ಪ್ರಕಟವಾಗುತ್ತಾನೆ..
ನಂತರ ಮಾತುಗಳ ಮೂಲಕ ಮಲಗಿದ್ದ-ದಾರಿತಪ್ಪಿದ್ದ ಮನವನ್ನು ಎಬ್ಬಿಸಲು ಪ್ರಯತ್ನಿಸುತ್ತಾನೆ..
ಕೊನೆಯ ಹಂತವಾಗಿ ತನ್ನ ಬಳಿಗೇ ಕರೆಸಿಕೊಳ್ಳುತ್ತಾನೆ..!
ಇದರರ್ಥ, ಇನ್ನು ಹೊರಗೆ ರಕ್ಷಣೆ ಸಾಧ್ಯವೇ ಇಲ್ಲ ಎಂಬುದೇ…!!
ಇಷ್ಟು ಸಾಲದೆ ನಮ್ಮಂಥ ಪಾಮರರಿಗೆ..?

ಇನ್ನೊಂದೆರಡು ವಿಷಯಗಳನ್ನೂ ಹೇಳಬೇಕೆನ್ನಿಸುತ್ತಿದೆ ನನಗೆ..
ಬೆಂಗಳೂರಿನಲ್ಲಿ ಮುಕ್ಕಾಂ ಇದ್ದ ಸಮಯದಲ್ಲಿ ಪ್ರತಿದಿನವೂ ಪುಟ್ಟ ಹೆಜ್ಜೆಗಳನ್ನಿಡುತ್ತಾ ಶಬ್ಧವಾಗದಂತೆ ಬಂದು ದೇವರಿಗೆ ನಮಸ್ಕರಿಸಿ ಹೋಗುವ ಒಂದು ಮಗುವಿನ ರೂಪವನ್ನು ಕಾಣುತ್ತಿದ್ದೆ..
ಮುಂದೆ ಅದೇ ಮಗುವಿನ ರೂಪ ನನ್ನ ಪಾಲಿಗೆ ತಂಗಿಯಾಗಿ ದೊರಕಿತು..!
ಜೀವಿಗಳಿಗೆ ಸಾಂತ್ವನ ಹೇಳಲೆಂದೇ ಕೆಲವು ಜೀವವನ್ನು ಸೃಷ್ಟಿಸಿರುತ್ತಾನೇನೋ ದೇವರು..!
ಮುದುಡಿದ ಮನಸ್ಸಿಗೆ ವೈದ್ಯೆಯಾದಳು..
ತಂಗಿಯಾಗಿ ಪ್ರೀತಿಯುಣಿಸಿದಳು…
ತಾಯಿಯಾಗಿ ವಾತ್ಸಲ್ಯದಿಂದ ಆರೈಕೆ ಮಾಡಿದಳು…
ದೇವತೆಯಾಗಿ ನನ್ನನ್ನು ಪ್ರತಿಕ್ಷಣವೂ ಕಾಯ್ದಳು..
ಎಲ್ಲಕ್ಕಿಂತ ಮಿಗಿಲಾಗಿ..
ಗುರುವಾಗಿ ಎಲ್ಲಿಯೂ ನನಗರಿವಾಗದಂತೆ ನನ್ನನ್ನು ಮೃದುವಾಗಿ ತಿದ್ದಿದಳು…!!

ಬದುಕೇ ಹಾಗೆ..
ಗುರು ಯಾರಿಗೆ ಯಾವಾಗ ಎಲ್ಲಿ ಹೇಗೆ ಯಾರಿಂದ ತಿಳುವಳಿಕೆ ಮೂಡಿಸುತ್ತಾನೋ ಗೊತ್ತಾಗುವುದಿಲ್ಲ..
ಗುರುಸಂಕಲ್ಪವೇನಿರುತ್ತದೋ ಗೊತ್ತಿಲ್ಲ..
ತಾನು ಹೇಳಬೇಕಾದ ಮತ್ತಷ್ಟು ವಿಷಯಗಳನ್ನು ಇನ್ನಾರ ಮುಖಾಂತರವೋ ಹೇಳಿಸಿರುತ್ತಾನೆ..!
ಏಕೆಂದರೆ, ಗುರುವಿನಲ್ಲಿ ನನ್ನನ್ನು ಹೇಗೆ ತೆರೆದುಕೊಳ್ಳುತ್ತಿದ್ದೆನೋ..ಹಾಗೇ ಇಲ್ಲಿಯೂ ಕೂಡ..!
ಅಲ್ಲೇನು ಸಾಂತ್ವನ ಸಿಗುತ್ತಿತ್ತೋ, ಅದೇ ಇಲ್ಲೂ ಸಹ…!
ಒಟ್ಟಾರೆ ನನ್ನೊಡೆಯನನ್ನು ನಾನು ತಿಳಿದುಕೊಂಡದ್ದು ಹೀಗೆ..
ಅವನು ಸರ್ವಾಂತರ್ಯಾಮಿ..
ನಾವು ಶುದ್ಧ ಮನಸಿನಿಂದ ಬೇಡಿದ್ದನ್ನು ಕ್ಷಣಮಾತ್ರದಲ್ಲಿ ಕೊಡಬಲ್ಲ..
ಅದಕ್ಕೆ ನಾನೇ ಸಾಕ್ಷಿ..
ಇಂದಿಗೂ…ನನ್ನ ಪಾಲಿಗೆ ಗುರುದೇವನ ನಂತರದಲ್ಲಿ ಅಪ್ಪ-ಅಮ್ಮನ ಜೊತೆಯಲ್ಲಿ ಪುಟ್ಟದೇವತೆಯಾಗಿ ಮೆರೆಯುತ್ತಿರುವವಳು ಪುಟ್ಟ ತಂಗಿ..
ಅದಕ್ಕೇ ಹೇಳುವುದು “ಗುರುವನ್ನು ನಂಬಿ, ಮತ್ತೆ ಹರನೂ ಬೇಡವಾಗುತ್ತದೆ..!
ಯಾಕೇಂದ್ರೆ ಎಲ್ಲವೂ ಅವನೇ…!!!

ಇನ್ನು ಗುರುವಿನ ಪರಿವಾರ..
ಅವರಲ್ಲಿ ನಾನೂ ಒಬ್ಬನಾದೆ…
ಅಂತರಂಗದ ಸೇವೆ ಸಲ್ಲಿಸುವ ಭಾಗ್ಯವೂ ದೊರೆಯಿತು..!
ಈಗಲೂ ನನಗನ್ನಿಸುವುದು ನನ್ನ ಬದುಕಿನ ರಕ್ಷಣೆಗಾಗಿಯೇ ಹೀಗೆ ಅಂತರಂಗದ ಸೇವೆಯಲ್ಲಿ ತೋಡಗಿಸಿದರೆನೋ ಎಂಬುದಾಗಿ..

ಪರಿವಾರದಲ್ಲಿ ನಾನು ಕಲಿತಿದ್ದು ಬಹಳ..
ಒಳಗಿನ ಸೇವೆಗೆ ಬರುವ ಮೊದಲು ಅಲ್ಲಿದ್ದಿದ್ದು ನನ್ನ ಪ್ರೀತಿಯ ‘ಮಧ್ಯಸ್ಥ’…
ನಿಜ ಹೇಳಲೇ..? ಇಂದಿಗೂ ಅವನನ್ನು ಕಂಡರೆ ಹೆದರಿಕೆ ನನಗೆ..
ಆ ಹೆದರಿಕೆಯಲ್ಲಿ ಭಯವಿಲ್ಲ ಪ್ರೀತಿಯಿದೆ…!
ಅವನೆಂದೂ ಈ ಕೆಲಸ ಹೀಗೇ ಮಾಡು, ಹೀಗೇ ಇರಬೇಕು, ಊಹುಂ ಯಾವ ಮಾತುಗಳನ್ನೂ ಹೇಳಲಿಲ್ಲ..!
ಅವನ ಕಾರ್ಯತತ್ಪರತೆಯೇ ನನಗೆಲ್ಲವನ್ನೂ ಕಲಿಸಿತು..!
ಯಾವುದನ್ನೂ ಹೇಳದೆಯೇ ಎಲ್ಲವನ್ನೂ ಕಲಿಸಿದ..
ನಾನು ಕಲಿತಿದ್ದನ್ನು ಮೌನವಾಗಿಯೇ ತಿದ್ದಿದ..
ನಾನು ಅವನೊಡನೆ ಜಗಳ ಆಡಿದ್ದು ನೆನಪಿಲ್ಲ..ಸಿಟ್ಟು ಮಾಡಿದ್ದೇನೆ,ಮಾತು ಬಿಟ್ಟು ಕೂತಿದ್ದುಂಟು..!
ಎಲ್ಲವೂ ಪ್ರೀತಿಯಿಂದಲೇ..
ಇಂದು ನಾನು ಪರಿವಾರದಲ್ಲಿ ಈ ಸ್ಥಿತಿಯಲ್ಲಿರಲು ಕಾರಣ ಅವನೇ…!
ಇದು ಗುರುಪ್ರಸಾದವೇ ಅಲ್ಲವೇ…!!

ಇನ್ನು ಹಿರಿಯರಾದ ಸ್ವಾಮಿಯಣ್ಣ, ರಮೇಶಣ್ಣ, ಅನಂತಣ್ಣ,..
ನಲ್ಮೆಯ ಹೆಗ್ಗಾರಳ್ಳಿ..
ಕಿರಿಯರಾದ ಮಂಜುನಾಥ ಹೆಬ್ಬಾರ, ಪ್ರೀತಿಯ ವಿಗ್ಗು..(ಗುರುದರ್ಶನದ ಕೊಂಡಿ)..
ರಜನೀಶ…ಹೀಗೆ ಪ್ರತಿಯೊಬ್ಬರೂ ನನ್ನ ಪಾಲಿಗೆ ಪಾಠ ಕಲಿಸಿದ ಗುರುಗಳೇ..

ಇವರೆಲ್ಲರ ನಡುವೆ..ನನ್ನ ಅತ್ಯಂತ ಪ್ರೀತಿಯ ‘ಮಡಿ ರಾಘು’..
ಯಾಕೋ ಕೆಲವರನ್ನು ನೋಡಿದರೆ ಆತ್ಮೀಯತೆ ಜಾಸ್ತಿ..
ಅಷ್ಟೇ ಅಲ್ಲ ಯಾವುದೋ ಬಂಧ…
ಈ ರಾಘು ಅದೇಕೋ ತುಂಬಾ ತುಂಬಾ ತುಂಬಾ ಹತ್ತಿರದವನು ನನಗೆ..
ಎಲ್ಲವೂ ಗುರುಮಹಿಮೆ..!

ಎಲ್ಲವೂ ಗುರುವಿನಿಂದಲೇ..ಎಲ್ಲವೂ ಅವನೇ..!
ಸಂಕಟದಲ್ಲಿ ಮುಳುಗಿದ್ದವರನ್ನು ಮೇಲಕ್ಕೆತ್ತಿ, ‘ಮಗನೇ, ನೋಡು ಇಲ್ಲಿದೆ ನೀನು ಕಲಿಯಬೇಕಾದ ವಿಷಯಗಳು ಬಾ’
ಎಂದು ದಾರಿ ತೋರುವ ಆ ನನ್ನ ತಂದೆಗೆ ಎಷ್ಟು ಸಲ್ಲಿಸಿದರೂ ಮುಗಿಯದು ನನ್ನ ಸೇವೆ..!

ಈಗ ಹೇಳಿ..
ಹರ ಮುನಿದರೂ ಗುರು ಕಾಯ್ವನೆಂಬುದು ಬರಿದೇ ಗಾದೆಯ ಮಾತೇ..?
ಗಾದೆಯೆಂಬುದು ಎಂದೂ ಸುಳ್ಳಲ್ಲ..
ಒಬ್ಬ ವ್ಯಕ್ತಿ ತನ್ನ ಬದುಕಿನ ಆಸೆಯನ್ನು ತಾನೇ ಕೈಬಿಟ್ಟು ಕಬ್ಬಿಣದ ಪಂಜರದಲ್ಲಿ ಕೊನೆಯ ಕ್ಷಣಗಳನ್ನು ಎಣಿಸುತ್ತಿರುವಾಗ..
ತಾನೇ ಬಂದು ಆ ಜೀವವನ್ನು ರಕ್ಷಿಸುವವನು ಗುರುವಲ್ಲದೇ ಮತ್ತಾರು..?

ಇನ್ನೊಂದು ಸ್ವಲ್ಪ ಬರೆಯಲೇ ..?

ಓ ನನ್ನವರೇ…

ಗುರುವನ್ನೆಂದಿಗೂ ನಿಷ್ಕರುಣಿಯಾಗಿ ನೋಡಬೇಡಿ…
ಗುರುವನ್ನೆಂದಿಗೂ ಬಯಕೆಗಳಿಂದ ನೋಡಬೇಡಿ…
ಗುರುವನ್ನೆಂದಿಗೂ ಆಸೆಯಿಂದ ನೋಡಬೇಡಿ..
ಗುರುವನ್ನೆಂದಿಗೂ ಕ್ರೂರ ದೃಷ್ಟಿಯಿಂದ ನೋಡಬೇಡಿ…
ಗುರುವನ್ನೆಂದಿಗೂ ದ್ವೇಷಭಾವದಿಂದ ನೋಡಬೇಡಿ…

ನೋಡಬೇಕೆಂದಿದ್ದರೆ….
ಓ ನನ್ನ ಬಂಧುಗಳೇ…

ಗುರುವನ್ನೊಮ್ಮೆ ಅಂತರಂಗದಿಂದ ನೋಡಿ …
ಸಾಕು…ಮತ್ತೇನೂ ಮಾಡಬೇಡಿ..
ನಿಮ್ಮ ಜನ್ಮ ಸಾರ್ಥಕ..
ಆಮೇಲೆ ಅವನೇ ನಿಮ್ಮನ್ನು ನೋಡುತ್ತಾನೆ..!
ಮನದಾಳದಲ್ಲಿ ಒಂದು ಪುಟ್ಟ ಜಾಗದಲ್ಲಿ ಹುದುಗುತ್ತಾನೆ..
ಮುಗಿಯಿತು ಮತ್ತೆಂದೂ ಅವನು ಹೊರಬರನು…
ನಿಮ್ಮ ಆಗು-ಹೋಗುಗಳಿಗೆಲ್ಲಾ ಮಾರ್ಗದರ್ಶಕನಾಗುತ್ತಾನೆ..!

ನಾವೇನಾದರೂ ದೇವರನ್ನು ಕರೆದರೆ..
ನೆನಪಿಡಿ ಎಂದೆಂದೂ….
ನಮ್ಮ ಕರೆಗೆ ಓಗೊಡುವ ಮೊದಲ ಸ್ವರವೇ ನಮ್ಮ ಗುರುವಿನದು…!!

ಬನ್ನಿರೆಲ್ಲ..
ನಾವೆಲ್ಲರೂ ನಮ್ಮೆಲ್ಲರ ಜಗವನೇ ಪಸರಿಸಿರುವ..
ಕರುಣಾಂತರಂಗದ ಈ ಬೆಳದಿಂಗಳ ಜಾಲದಲ್ಲಿ ಸಿಲುಕಿಕೊಳ್ಳೋಣವೇ…?
ಅದರ ಫಲವನ್ನನುಭವಿಸೋಣವೇ…?

ಒಂದು ಮಾತು ..
ಕಷ್ಟ ಕಳೆದು ನೆಮ್ಮದಿ ಸಿಕ್ಕಿದಾಗ ಭಕ್ತರ ಮೊಗವರಳಿದಾಗ..
ಅದರ ಪ್ರತಿರೂಪ ಕಾಣುವುದು ನನ್ನ ಗುರುವಿನ ಮೊಗದಲ್ಲಿ…!!
ಈ ಅನುಭವವನ್ನು ಯಾರಾದರೂ ಪಡೆದಿದ್ದರೆ ಅವರೇ ಧನ್ಯರು…
ನಾನಂತೂ ಚೂರು-ಪಾರು…!

ಇಷ್ಟು ಸಾಕೇನೋ…?
ಬರಹವೆಂದಿಗೂ ಮುಗಿಯದು..
ಅಂತರಂಗವೆಂದಿಗೂ ಪೂರ್ಣ ಹೊರಹರಿಯದು..
ಎಷ್ಟು ಸಾಧ್ಯವೋ ಅಷ್ಟೇ ಹೊರಬರುವುದು…
ಉಳಿದಿದ್ದೆಲ್ಲವೂ ಪ್ರಾರಂಭದಲ್ಲೇ ಹೇಳಿದಂತೆ…

ಮೌನಗೌರಿ ನನ್ನ ತಂಗಿ ಹೇಳಿದ ಮಾತುಗಳ ನೆನಪು..
‘ನಮ್ಮ ಮನಸ್ಸಿನ ಭಾವನೆಗಳನ್ನು ಒಂದು ಹಂತದವರೆಗೆ ಮಾತ್ರ ಹೊರಹಾಕಬಹುದು..
ಉಳಿದಂತೆ ಭಾವವೇ ಹೇಳಬೇಕಾದುದನ್ನ ಹೇಳುತ್ತೆ..
ಅದನ್ನು ಅರ್ಥ ಮಾಡಿಕೊಳ್ಳಬೇಕು..
ಹಾಗೆಯೇ ಆಗುವುದು ಅದು…’

ಧನ್ಯ ನಾನು, ಓ ವಾತ್ಸಲ್ಯಮಯೀ, ಈ ಮಾತು ನೀ ಹೇಳಿದಾಗಿನಿಂದಲೇ ನನ್ನೊಳಗಿದ್ದ ಇದೆಲ್ಲಾ ಭಾವಗಳು ಹೊರಬರಲು ತವಕಿಸಿದ್ದು…!
ಗುರುವಿನಂತರಂಗವೇನೋ ಬಲ್ಲವರಾರು….?
ಎಲ್ಲವೂ ಅವನೇ…!

ಯಾಕೋ ಅಪೂರ್ಣವಾದಂತೆನಿಸುತ್ತಿದೆ..
ಮೊಗೆದಷ್ಟೂ ಮುಗಿಯದ ಕಣಜ ಗುರುವೆಂದರೆ…
ಬರೆದಷ್ಟೂ ನಿಲುಕದ ವಿಸ್ತಾರ ಗುರುವೆಂದರೆ…
ಕರುಣೆಯ ಮೂರ್ತರೂಪ ಗುರುವೆಂದರೆ…
ಭಗವಂತನ ಸಾಕ್ಷಾತ್ಕಾರವೇ ಗುರುವೆಂದರೆ..

ಇನ್ನು ಮುಗಿಸಲೇ..
ತಡವಾಯಿತು ನಿಮಗೆ ಹೋಗಿಬನ್ನಿ….
ಆದರೆ ನೆನಪಿರಲಿ ನಿಮಗೆ…
ಗುರು ಶಾಶ್ವತ…
ಗುರುವೆಂದಿಗೂ ಶಾಶ್ವತ…
ಅಲ್ಲ…ಗುರುವೇ ಎಂದಿಗೂ ಶಾಶ್ವತ…

|| ಹರೇರಾಮ ||

ಶ್ರೀಹರ್ಷ ಜೋಯ್ಸ್ ರ ಕುಟುಂಬದ  ಶ್ರೀಮಠದೊಂದಿಗಿನ ಮಧುರ ನೆನಪುಗಳು.

ಪರಿಚಯ:

ಕೃಷಿಕ ಶ್ರೀ ರಾಮಮೂರ್ತಿ ಜೋಯ್ಸ್ ಮತ್ತು ಶ್ರೀಮತಿ ಯಶೋದಾ ದಂಪತಿಗಳ ಪುತ್ರನಾಗಿ 06-11-1967ರಲ್ಲಿ ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ ಕೊಂಡಿಬೈಲಿನಲ್ಲಿ ಜನಿಸಿದರು. ಶ್ರೀಯುತರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಉತ್ತಮೇಶ್ವರದಲ್ಲಿ ಹಾಗೂ ಪದವಿ ಶಿಕ್ಷಣವನ್ನು ಕೊಪ್ಪದಲ್ಲಿ ಪಡೆದಿರುತ್ತಾರೆ. ಪ್ರಸ್ತುತ ಪರಮಪೂಜ್ಯ ಶ್ರೀಶ್ರೀಗಳ ಶ್ರೀಪರಿವಾರದಲ್ಲಿ ಸೇವೆಸಲ್ಲಿಸುತ್ತಿದ್ದು ಶ್ರೀಗುರು ಸೇವಾ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಇವರಿಗೆ ಶ್ರೀಕರಾರ್ಚಿತ ದೇವತಾನುಗ್ರಹ ಹಾಗೂ ಶ್ರೀಗುರು ಆಶೀರ್ವಾದ ಸದಾ ಇರಲೆಂದು ಹಾರೈಕೆ.

Facebook Comments Box