ಗುರುಗಳೆಡೆಗೆ ಬಂದಾಗ ಮಾತು ಬಾರದು ಮೌನ ಮಾತಾಡುವುದು. ಇದು ನನ್ನ ಅನುಭವ.
ಜೀವಾತ್ಮ ಅಥವಾ ಪ್ರಾಣಶಕ್ತಿಯಾಗಿಯೇ ಪ್ರತಿಯೊಬ್ಬರೊಳಗೂ ಇದ್ದು ಹಗಲಿರುಳೂ ವಿಶ್ರಾಂತಿ ಇಲ್ಲದೆ ದುಡಿದು ಸಲಹುವ ಪರಮಾತ್ಮನಿಗೆ ನಮ್ಮ ಇಂಗಿತ ಇಷ್ಟಾರ್ಥಗಳು ಅರಿಯದೇ?
ಏಕಧ್ಯಾನದಿಂದ ಮನದಲ್ಲಿ ಅರ್ಚಿಸಿ, ಪೂಜಿಸಿ, ಪ್ರಾರ್ಥಿಸುವುದು ಭಕ್ತಿಯ ಅತ್ಯಾಪ್ತತೆಯ ಲಕ್ಷಣವಲ್ಲವೇ? ಜಗದ್ಗುರು ಶಂಕರಾಚಾರ್ಯ ಪೀಠದ ಅವಿಚ್ಛಿನ್ನ ಪರಂಪರೆಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳೆಂದರೆ ಭಕ್ತಕೋಟಿಯ ಮನದೊಳಗೆ ನಡೆದಾಡುವ ದೇವರು.
ಈ ಪರಂಪರೆಯಲ್ಲಿ ಇದು ಇಂದು ನಿನ್ನೆಯ ನಂಬಿಕೆಯೇನೂ ಅಲ್ಲ. ಸನಾತನದಿಂದಲೇ ಬಂದಂತಹ ಪ್ರಜ್ಞೆ.
ಇಂತಹ ವಿಶಿಷ್ಟ ಗುರು ನಂಬಿಕೆ ನನ್ನ ಹಿರಿಯರಿಂದಾಗಿ ನನ್ನೊಳಗೆ ಹರಿದು ಮೌನ ಸಮರ್ಪಣಾ ಭಾವದಿಂದ ಶರಣಾಗಿ ಸತ್ಫಲ ಪಡೆದ ಹಲವು ಅನುಭವಗಳಲ್ಲಿ ಒಂದೆರಡನ್ನು ವಿನಿಮಯ ಮಾಡುವುದೊಳಿತು ಅನಿಸಿದೆ.

೧೯೯೯ರಲ್ಲಿ ಶ್ರೀಸಂಸ್ಥಾನ ಸವಾರಿಯು ಕುಂಬಳೆ ಸನಿಹದ ‘ಕಾನ’ ಶ್ರೀ ಶಂಕರನಾರಾಯಣ ದೇವರ ಸನ್ನಿಧಿಗೆ ಚಿತ್ತೈಸಿದಾಗ ಗುರುಭಕ್ತ ಸಮೂಹದಲ್ಲಿ ನಾನೂ ಸಹಭಾಗಿಯಾಗಿದ್ದೆ.
ಅವರವರ ಇಷ್ಟಾರ್ಥವನ್ನು ಶ್ರೀಗುರುಗಳಲ್ಲಿ ಮನಸ್ವೀ ನಿವೇದಿಸುತ್ತಿರುವವರೂ ಬಹುರ್ಮುಖವಾಗಿ ಬೇಡುತ್ತಿರುವವರೂ ಕಿಕ್ಕಿರಿದು ಜಮಾಯಿಸಿದ್ದರೂ
ಅವರವರ ಭಾವಕ್ಕೆ ತಕ್ಕಂತೆ ಎನ್ನುವಂತೆ, ಮಂತ್ರಾಕ್ಷತೆಯ ವೇಳೆ ನನ್ನನ್ನೇ ಗಮನಿಸುತ್ತಿರುವ ಶ್ರೀಗುರುಗಳೊಡನೆ ನಾನು ಬೇಡಿಕೊಂಡಿದ್ದು ಹೀಗೆ – “ಎರಡು ದಿನಗಳ ಹಿಂದೆಯಷ್ಟೇ ದಿ| ಕೊಡಗಿನ ಗೌರಮ್ಮ ದತ್ತಿನಿಧಿ ಕಥಾಸ್ಪರ್ಧೆಗಾಗಿ ಕಥೆ ಕಳುಹಿಸಿದ್ದೆ, ಹೋದವರ್ಷ(೧೯೯೮) ದ್ವಿತೀಯ ಬಹುಮಾನ ಬಂದಿತ್ತು. ಈ ಬಾರಿ ಪ್ರಥಮ ವಿಜೇತೆಯಾಗಬೇಕೆಂಬುದು ಇಂಗಿತವಾದರೂ ಅದೊಂದೇ ಮಹದಾಸೆಯಲ್ಲ. ಅದೇನಿದ್ದರೂ ಶ್ರೀಗುರುಗಳ ದಿವ್ಯಕರಕಮಲಗಳಿಂದಲೇ ನಾನು ಪಡೆದುಕೊಳ್ಳುವಂತಾಗಲೆಂಬ ಅದಮ್ಯ ಆಕಾಂಕ್ಷೆ”.
ನನ್ನ ಆಗ್ರಹದ ಪ್ರಾರ್ಥನೆ ಅಂತರ್ಗತವಾಗಿ ಶ್ರೀಚರಣಗಳ ಮುಂದಿಟ್ಟೆ. ಶ್ರೀಗುರುಗಳು ಕ್ಷಣಹೊತ್ತು ನನ್ನ ಮೌನ ಬೇಡಿಕೆಯನ್ನು ವೀಕ್ಷಿಸಿ ಮಂತ್ರಾಕ್ಷತೆಯಿತ್ತು ಹರಸಿದರು.

ಆ ಕ್ಷಣದ ನನ್ನ ಅನನ್ಯ ಪ್ರಾರ್ಥನೆ ಫಲಿಸಿತು. ನನಗೇ ಕೊಡಗಿನ ಗೌರಮ್ಮ ಪ್ರಶಸ್ತಿ ಲಭಿಸಿತು.
ಅಷ್ಟೇ ಅಲ್ಲ ಕಥಾಸ್ಪರ್ಧಾವೇದಿಕೆಯ ಕಾರ್ಯಕರ್ತರು,  ಶ್ರೀಸಂಸ್ಥಾನ ಮುಜಂಗಾವು ವಿದ್ಯಾಲಯಕ್ಕೆ ಭೇಟಿಯಿತ್ತಾಗಲೇ ಬಹುಮಾನ ವಿತರಣಾ ಸಮಾರಂಭವನ್ನೂ ಹಮ್ಮಿಕೊಂಡಿದ್ದರು. ನನಗೆ ಮಹದಾನಂದವಾಯ್ತು,
ಶ್ರೀಗುರುಗಳ ದಿವ್ಯಹಸ್ತಗಳಿಂದಲೇ ಪ್ರಶಸ್ತಿಯೊಂದಿಗೆ ಮಂತ್ರಾಕ್ಷತೆಯನ್ನೂ ಸ್ವೀಕರಿಸಿದ ಮೊದಲ ವಿಜೇತೆಯಾದೆ. ಪ್ರಶಸ್ತಿ ಬಂದ ಮೊಬಲಗನ್ನು  ‘ಕಾನ’ ಶ್ರೀ ಶಂಕರನಾರಾಯಣಮಠ ಹಾಗೂ ಮುಜುಂಗಾವು ವಿದ್ಯಾಸಂಸ್ಥೆಗೆ ನೀಡಿ ಕೃತಕೃತ್ಯಳಾದೆ.
ಮುಂದಿನ ದಿನದಲ್ಲಿ (೨೦೦೧) ಕೊಡಗಿನ ಗೌರಮ್ಮ ದತ್ತಿನಿಧಿ ಕಥಾಸ್ಪರ್ಧೆಯ ಸಂಚಾಲಕತ್ವದ ಮಹತ್ವಪೂರ್ಣ ಜವಾಬ್ದಾರಿ ನನ್ನ ಹೆಗಲಿಗೆ ಬಂದಿದ್ದು ಹಾಗೂ ೨೦೦೬ರಲ್ಲಿ ಇದೇ ವೇದಿಕೆಯ ದಶಮಾನ ಆಚರಣೆಯ ಯಶಸ್ಸಿಗೆ ಕೂಡಾ ಶ್ರೀಗುರು ಆಶೀರ್ವಾದ ಕಾರಣವಾಗಿದೆ.

೨೦೦೧ರಲ್ಲಿ ನನ್ನ ಪತಿವರ್ಯರು ಅಕಾಲ ಮೃತ್ಯುವಶರಾಗಿ ನಾನು ಒಂಟಿಯಾದಾಗ ದಿಕ್ಕೇ ತೋಚದಾಯ್ತು. ಶ್ರೀಗುರುಗಳನ್ನೂ ಕುಲದೇವರನ್ನೂ ಸ್ಮರಿಸುತ್ತ ಕಾಲತಳ್ಳುವುದೇ ಆಯ್ತು.
ಹೀಗಿದ್ದ ಒಂದು ದಿನ ಮುಜುಂಗಾವು ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ಶ್ರೀಯುತ ವೆಂಕಟರಾಮ ಕೋಣಮ್ಮೆ ಹಾಗೂ ಕಾರ್ಯದರ್ಶಿಯವರಾದ ಕೃಷ್ಣಪ್ರಸಾದ ಎಡಪ್ಪಾಡಿಯವರು ಮುಜುಂಗಾವು ವಿದ್ಯಾಸಂಸ್ಥೆಯಲ್ಲಿ ಗ್ರಂಥಪಾಲಕಿಯಾಗಿ ಸೇವೆಸಲ್ಲಿಸಲು ಕರೆಯಿತ್ತರು.
ಅದೇ ದಿನಗಳಲ್ಲೊಂದು ಬಾರಿ ಶ್ರೀಸಂಸ್ಥಾನ ಸವಾರಿಯೂ ಮುಜಂಗಾವಿಗೆ ಚಿತ್ತೈಸಿದ್ದು ನನ್ನ ಪಾಲಿಗೆ ವರದಾನವಾಯ್ತು.
ಶ್ರೀಗುರುಗಳಲ್ಲಿ ನನ್ನ ಕರಾಳ ಕಥೆಯನ್ನು ಹೇಳ ಹೊರಟಾಗ ಮಾತು ಬರದೆ ಗಂಟಲುಬ್ಬಿ ಬಂದಿತ್ತು. ನನ್ನನ್ನೇ ವೀಕ್ಷಿಸಿದ ಶ್ರೀ ಸಂಸ್ಥಾನ “ಜೀವಿ ಎಂದ ಮೇಲೆ ಮರಣ ಇರುವಂತಾದ್ದು. ಸುಖ – ದುಃಖ ಎಂಬುದು ಮನುಜನಿಗಲ್ಲದೆ ಕಲ್ಲು ಮರಕ್ಕೆ ಬರುತ್ತ್ಯೇ? ನಿನ್ನ ಸ್ಥಿತಿಗಿಂತಲೂ ಹದಗೆಟ್ಟವರನ್ನು ಜ್ಞಾಪಿಸಿಕೊಂಡು ನಿನ್ನ ದುಃಖ ಶಮನವಾಗಿಸಿಕೊಂಡು ಮನಸ್ಸನ್ನು ಮುದವಾಗಿಟ್ಟುಕೋ. ನಿನ್ನ ಕೈಲಾದಷ್ಟು ಸರಸ್ವತಿಯ ಸೇವೆ ಮಾಡು” ಎಂಬುದಾಗಿ ಧೈರ್ಯ ತುಂಬಿ ಸಾಂತ್ವನ ಸಹಿತ ಕೆಲಸ ನಿಯೋಜಿಸಿದರು.
ಆ ರೀತಿಯಾಗಿ ಒಪ್ಪಿಕೊಂಡು ಅಪ್ಪಿಕೊಂಡ ಈ ಗ್ರಂಥಪಾಲನಾಸೇವೆ ನನಗೊಂದು ರೀತಿಯ ಅಪ್ಯಾಯತೆಯನ್ನು ನೀಡಿತು.

ಹಾಗೆಯೇ ಇನ್ನೊಂದು ಸಂದರ್ಭವನ್ನೂ ಸ್ಮರಿಸಲೇಬೇಕು.
೨೦೦೬ರಲ್ಲಿ ಶಿರಸಿಯ ಅಂಬಾಗಿರಿ ದೇವಸ್ಥಾನ ಶ್ರೀರಾಮಚಂದ್ರಾಪುರಮಠದ ಅಧೀನಕ್ಕೆ ಬಂದ ಸಮಯ ಜೀರ್ಣೋದ್ಧಾರ ಕೆಲಸ ಪ್ರಾರಂಭಿಸಿದ್ದರು.
ಗೋಕರ್ಣ ಮಂಡಲ ಮಹಿಳಾ ಸಮಿತಿ ಅಧ್ಯಕ್ಷೆಯಾದ ಶ್ರೀಮತಿ ಈಶ್ವರಿ ಬೇರ್ಕಡವುರವರು ಒಂದು ದಿನ, “ವಿಜಯಕ್ಕ ನಾವೆಲ್ಲ ಅಂಬಾಗಿರಿ ದೇವಸ್ಥಾನಕ್ಕೆ ತಲಾ ಒಂದೊಂದು ಸಾವಿರ ನಗದು ದೇಣಿಗೆ ಕೊಡುವೊ° ಹೇಳಿ ಲೆಕ್ಕ ಹಾಕಿದ್ದಿಯೊ°. ಆ ಪಟ್ಟಿಲಿ ನಿಂಗಳನ್ನು ಸೇರ್‍ಸಿದ್ದೆ” ಹೇಳಿದರು.
ಹೇಗಪ್ಪಾ ಕೊಡೋದು ! ಶ್ರೀಗುರುಗಳ ಕಾರ್ಯಯೋಜನೆಗೆ ಇಲ್ಲ ಎನ್ನಲಾಗುವುದಿಲ್ಲ ಎಂದು ಒಂದು ನಿರ್ಧಾರಕ್ಕೆ ಬಂದೆ.
ಈಶ್ವರಿಯವರಲ್ಲಿದ್ದ ಅತೀ ಆತ್ಮೀಯತೆಯೊಂದಿಗೆ ನನ್ನ ಆತ್ಮವಿಶ್ವಾಸವನ್ನು ಸೇರಿಸಿಕೊಂಡು ಹೇಳಿದೆ “ಈಶ್ವರೀ….. ಮುಂಬಯಿ ಅಕ್ಷಯ ಸಾಹಿತ್ಯ ವೇದಿಕೆ ಆಹ್ವಾನ ಮಾಡಿದ ಹಾಸ್ಯಕಥಾ ಸ್ಪರ್ಧೆಗೆ ಬರದ್ದೆ, – ಪ್ರಥಮ ಬಹುಮಾನ ನಗದು ಒಂದು ಸಾವಿರ, ಅದೆನಗೆ ಸಿಕ್ಕುವ ಹಾಂಗೆ ಪ್ರಾರ್ಥನೆ ಮಾಡು ಈಶ್ವರಿ” ಎಂದಾಗ ‘ಗುರು ಅನುಗ್ರಹ ನಿನಗೆ ಸಿಕ್ಕುತ್ತು ವಿಜಯಕ್ಕ’ ಎಂದು ಸಂಪ್ರಾರ್ಥಿಸುತ್ತಾ ಪರಸ್ಪರ ಬೀಳ್ಕೊಂಡಿದ್ದೆವು.

ಅರೇ! ಅದೇ ಸ್ಪರ್ಧೆಯ ಫಲಿತಾಂಶದಲ್ಲಿ ನನಗೇ ಪ್ರಥಮ ಬಹುಮಾನ ಬಂದಿತ್ತು.
ಬಹುಮಾನ ಸುದ್ದಿ ಹೊತ್ತು ಬಂದ ಪತ್ರ ತಲುಪಿದಾಗ ನಾನು ಪುಳಕಿತಳಾಗಿದ್ದೆ!
ಗುರುಮಹಿಮೆ ಅಂದ್ರೆ ಇದೇ ಅಲ್ವೇ ……!!

ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಆಶೀರ್ವಚನ ಎಂದರೆ ಕಿಕ್ಕಿರಿದ ಜನಸ್ತೋಮ. ಆದರೂ ಒಂದು ಸೂಜಿ ಬಿದ್ದ ಸದ್ದೂ ಕೇಳಿಸುವಂತಹ ಸಭಾಂಗಣ.
ಮೈಯೆಲ್ಲ ಕಣ್ಣಾಗಿ, ಮನಸೆಲ್ಲ ಕಿವಿಯಾಗಿ ಕೇಳುವ ಕುತೂಹಲ. ಶ್ರೀಗುರುಗಳ ಮಾತುಗಳೆಲ್ಲ ನಮ್ಮ ಮನದಲ್ಲಿ ಹರಳಾಗಿ ಕುಳಿತು ಎಂದಿಗೂ ಹಳತಾಗದೇ ಪ್ರಸ್ತುತವಾಗಿಯೇ ಇರುತ್ತದೆ.
ಆ ಶಬ್ದಗಳಿಗೆ ವಿರಾಟ್ ಶಕ್ತಿಯಿದೆ. ಜ್ಞಾನಾನುಭವದ ಪಾಕವನ್ನು ಶಿಷ್ಯಕೋಟಿಯಲ್ಲಿ ಪ್ರತಿಯೊಬ್ಬರಿಗೂ ‘ಗುಳಿಗೆ’ಗಳಂತೆ ಹಂಚುತ್ತಾರೆ.
ಕೇಳಿದ ಸಂದೇಶ ಸಾಲುಗಳನ್ನು ಆಗಾಗ ನಾಲಿಗೆ ಉದ್ಗರಿಸುತ್ತದೆ. ಹೃದಯ ಮೆಲುಕು ಹಾಕುತ್ತದೆ.
ಜೀವನದಲ್ಲಿ ಬರಬಹುದಾದ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ದಾಟುವುದಕ್ಕೆ ಸಮರ್ಥವಾದ ಮನೋಧರ್ಮವನ್ನು ಎಲ್ಲರಲ್ಲಿಯೂ ಅಣಿಗೊಳಿಸುವ ಮಹೋದ್ದೇಶ ಶ್ರೀಗಳವರದು.
ಅವರ ಗಂಭೀರವಾದ ಆಶೀರ್ವಚನದ ಜೊತೆಗೆ ಕಚಗುಳಿ ಇಡುವ ಪುಟ್ಟಕತೆ, ಹಾಸ್ಯಮಿಶ್ರಿತ ಹಸಿರು ಚಿಗುರುಗಳೂ ಇವೆ ಎಂಬುದನ್ನೂ ಮರೆಯುವಂತಿಲ್ಲ.

ನಾನು ಹೀರಿಕೊಂಡ ಹರಳಹನಿಗಳಲ್ಲಿ ಕೆಲವು :

  1. ಗುರಿ ಮುಂದೆ ಗುರು ಹಿಂದೆ ನಡೆದಿತ್ತು ಧೀರರ ದಂಡು.
  2. ಗುರಿ ಯೋಗ್ಯವಾಗಿದ್ದು ಸೇರುವ ದಾರಿ ಸಮರ್ಪಕವಾಗಿರಬೇಕು.
  3. ಹೆಣ್ಣು ಮಣ್ಣಿನ ಮೂರ್ತಿಯೋ ಚರ್ಮದ ಕಾಂತಿಯೋ ಆಗದೆ ಜೀವನದ ಸ್ಫೂರ್ತಿಯಾಗಬೇಕು.
  4. ದೌರ್ಬಲ್ಯ ಹಿಂದೆ ಸರಿಯಲು ಬಿಡಿ, ಪ್ರಾಬಲ್ಯ ಮುಂದೆ ಬರಲಿ.
  5. ಒಂದು ಗೋವಿನಲ್ಲಿ ಅನ್ನಪೂರ್ಣೆ, ಲಕ್ಷ್ಮೀ, ವೈದ್ಯ, ವಿಜ್ಞಾನಿ ಎಲ್ಲರೂ ಇದ್ದಾರೆ. ಮನುಷ್ಯನಿಗೆ ನೋಡುವ ಒಳಗಣ್ಣು ಬೇಕು.
  6. ಯುವಕರೇ ನಿಮ್ಮಲ್ಲಿ ಶಕ್ತಿ ಯುಕ್ತಿಗಳಿವೆ. ಅದನ್ನು ಮಲಗಿ ನಿದ್ರಿಸಲು ಬಿಡದೆ ಸತ್ಕಾರ್ಯಕ್ಕಗಿ ಬಳಸಿ.
  7. ಗುರುಗಳು ಮಳೆ ನೀರಿನಂತೆ ಕಾರ್ಯಕರ್ತರು ಹೊಳೆಯಂತೆ, ಮಳೆಯು ಬರುವ ಕಾಲಕ್ಕೆ ಬಂದು ಹೋದ ಮೇಲೆ ಹೊಳೆ ಸದಾ ಹರಿಯುತ್ತಿರಬೇಕು.
  8. ಎಲ್ಲಾ ‘ಯತಿ’ ಪೀಠಗಳೂ ನಮಗೆ ತಾಯಿ ಸಮಾನ ಆದರೆ ಹೆತ್ತಮ್ಮನ ಸ್ಥಾನ ಶಂಕರಾಚಾರ್ಯರ ಪೀಠಕ್ಕೆ.
  9. ನಮ್ಮದು ಕೊಡುವ ಬದುಕಾಗಬೇಕು, ಯಾಚನೆಯ ಬದುಕಾಗಬಾರದು.
  10. ನೀವು ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ಶ್ರೀಮಠದ ಶಿಷ್ಯರೆಂದು ಗುರುತಿಸುವಂತವರಾಗಿ.

ಹೀಗೆ ಅನೇಕಾನೇಕ ಮಾತಿನ ಮಣಿಗಳು ಶ್ರೀಗುರುಗಳ ಬಾಯ್ದೆರೆಯಾಗಿ ಬಿದ್ದು ನಕ್ಷತ್ರಗಳಾಗಿ ವಿಂಚುತ್ತವೆ.
ಅವು ಶಕ್ತಿಶಾಲಿಯಾದ ತತ್ವಗಳಾಗಿ ಬದುಕಿಗೆ ದಾರಿ ತೋರುತ್ತವೆ.

~*~*~

ಶ್ರೀಮತಿ ವಿಜಯಾ ಸುಬ್ರಹ್ಮಣ್ಯ ಕುಂಬಳೆ – ಮಧುರ ನೆನಪುಗಳು:


~

ಪರಿಚಯ

ಕುಂಬಳೆ ಸೀಮೆ ನಿಡುಗಳ ಶ್ರೀಮತಿ ಶಾರದಾ ಮತು ಶ್ರೀ ಶಂಭು ಭಟ್ಟ ಶಂಕರಮೂಲೆ ಇವರ ಪ್ರಥಮ ಪುತ್ರಿಯಾಗಿ ೧೯೪೯ರಲ್ಲಿ ಜನಿಸಿದ ಇವರು,
ಪ್ರಾಥಮಿಕ ವಿದ್ಯಾಭ್ಯಾಸವನ್ನು ಇಚ್ಲಂಪಾಡಿಯಲ್ಲಿ ಪೂರೈಸಿ ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣವನ್ನು ಪಡೆದರು.
೧೯೭೧ ರಲ್ಲಿ ಕಾನ ಮೂಡಕರೆ ಸುಬ್ರಹಣ್ಯ ಭಟ್ಟ ಇವರನ್ನು ವರಿಸುವುದರೊಂದಿಗೆ ಗೃಹಸ್ಥ ಜೀವನಕ್ಕೆ ಕಾಲಿಟ್ಟರು.

ಶ್ರೀಮತಿ ವಿಜಯಾ ಸುಬ್ರಹ್ಮಣ್ಯ

ಶ್ರೀಮತಿ ವಿಜಯಾ ಸುಬ್ರಹ್ಮಣ್ಯರು ಆದರ್ಶ ಗೃಹಿಣಿಯಾಗಿರುವುದರ ಜೊತೆಗೆ ಸಾಹಿತ್ಯ ಕೃಷಿಯನ್ನೂ ಬೆಳೆಸಿಕೊಂಡು ಬಂದಿರುತ್ತಾರೆ.
ದಕ್ಷಿಣ ಕನ್ನಡ ಮತ್ತು ಕಾಸರಗೋಡಿನಿಂದ ಪ್ರಕಾಶನಗೊಳ್ಳುವ ಹೆಚ್ಚಿನ ದೈನಿಕ, ಸಾಪ್ತಾಹಿಕ, ಪಾಕ್ಷಿಕ ಮತ್ತು ಮಾಸ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ.
ಇವರು ಬರೆದ ೬ಪುಸ್ತಕಗಳು, ಜಾನಪದ ಗೀತೆಗಳು (ಸಂಗ್ರಹ ಸಂಕಲನ), ಹೊಂಗಿರಣ (ಕಥಾ ಸಂಕಲನ), ಹತ್ತೆಸಳು (ಕಥಾ ಸಂಕಲನ), ಪುರಾಣ ಪುನೀತೆಯರು, ಇಷ್ಟಾರ್ಥಪ್ರದ ವಿಷ್ಣು ನಾಮಾವಳಿ, ಪುರಾಣ ಪುರುಷರತ್ನಗಳು ಪ್ರಕಾಶನಗೊಂಡಿವೆ.

ಕೊಡಗಿನ ಗೌರಮ್ಮ ದತ್ತಿನಿಧಿ ಕಥಾ ಸ್ಪರ್ಧೆಯಲ್ಲಿ ೧೯೯೮ರಲ್ಲಿ ದ್ವಿತೀಯ ಹಾಗೂ ೧೯೯೯ರಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ೨೦೦೩ರಲ್ಲಿ ಹವ್ಯಕ ಸಭಾ ಮೈಸೂರು, ೨೦೦೪ರಲ್ಲಿ ಹವ್ಯಕ ಅಧ್ಯಯನ ಕೇಂದ್ರ ಬೆಂಗಳೂರು, ೨೦೦೬ರಲ್ಲಿ ಅಕ್ಷಯ ಸಾಹಿತ್ಯ ವೇದಿಕೆ ಮುಂಬಯಿ ಸನ್ಮಾನಿಸಿ ಗೌರವಿಸಿದೆ.

ಪ್ರಸ್ತುತ ಮುಜುಂಗಾವಿನ ವಿದ್ಯಾಸಂಸ್ಥೆಗಳ ಗ್ರಂಥಾಲಯದಲ್ಲಿ ಸರಸ್ವತೀ ಸೇವೆ ಮಾಡುವುದರೊಂದಿಗೆ ಶ್ರೀಗುರು ಸೇವೆ ಸಲ್ಲಿಸುತ್ತಿದಾರೆ.
ಶ್ರೀಮಠದ ಮಹಿಳಾ ವಿಭಾಗದ ಸಕ್ರಿಯ ಕಾರ್ಯಕರ್ತರಾದ ಇವರಿಗೆ ಶ್ರೀಗುರುದೇವರ ಅನುಗ್ರಹ ಸದಾ ಇರಲೆಂದು ಹಾರೈಕೆ.

Facebook Comments Box