|| ಶ್ರೀ ಗುರುರಾಘವೇಶ್ವರಾಯ ನಮಃ ||

ಶ್ರೀಗುರುಗಳ ಅಂತರ್ಜಾಲ ತಾಣದಲ್ಲಿ ಬರೆಯಲು ನಮಗೆ ಅವಕಾಶ ಕರುಣಿಸಿದ ಶ್ರೀಗುರುಚರಣಗಳಿಗೆ ಕೋಟಿ ಕೋಟಿ ನಮನಗಳು.

ನಾವು ಮೊದಲಿನಿಂದಲೂ ಶ್ರೀಗುರು ಪರಂಪರೆಯನ್ನು ಮತ್ತು ಶ್ರೀಮಠದ ಕಾರ್ಯಕ್ರಮಗಳನ್ನು ನಂಬಿಕೊಂಡು ನಡೆದುಕೊಂಡು ಬಂದಿರುವ ಕುಟುಂಬದವರು. ಶ್ರೀಸವಾರಿ ಊರಿಗೆ ಚಿತ್ತೈಸಿದಾಗಲೆಲ್ಲಾ ನಮ್ಮ ಹೆತ್ತವರು ಗುರುದರ್ಶನ ಪಡೆಯುತ್ತಿದ್ದರು. ನಮ್ಮಮ್ಮ ಯಾವಾಗಲೂ ಗುರುಪೂಜೆ ಮತ್ತು ಗೋಪೂಜೆ ಹಾಗೂ ಕುಂಕುಮಾರ್ಚನೆ ಮಾಡುತ್ತಿದ್ದರು. ಇದಿಷ್ಟು ನನಗೆ ಗೊತ್ತಿರುವ ವಿಷಯ. ಚಿಕ್ಕವನಿದ್ದಾಗ ನಮ್ಮಮ್ಮ ಶ್ರೀಗುರುಗಳ ಮಂತ್ರಾಕ್ಷತೆಯನ್ನು ನೀಡುತ್ತಿದ್ದುದು ಈಗಲೂ ನನ್ನ ನೆನಪಿಗೆ ಬರುವುದು.

೨೦೦೧ರಲ್ಲಿ ಬೆಂಗಳೂರಿನ  ಗಿರಿನಗರದಲ್ಲಿ ನಡೆದ ಶ್ರೀಗುರುಗಳ ಕಿರೀಟೋತ್ಸವ ಸಮಾರಂಭದ ಸಂದರ್ಭದಲ್ಲಿ ನಾನು ಮತ್ತು ನನ್ನ ಶ್ರೀಮತಿಯವರು ಗಿರಿನಗರದ ಶಾಖಾಮಠಕ್ಕೆ ಹೋಗಿದ್ದೆವು. ಅಲ್ಲಿ ಶ್ರೀಗುರುಗಳ ದರ್ಶನಭಾಗ್ಯ ಲಭಿಸಿತ್ತು. ಅದಾದ ನಂತರ ನಾವು ಮಠಕ್ಕೆ ಹೋದದ್ದು ತೀರಾ ಕಡಿಮೆ. ಮುಂದೆ ೨ ವರ್ಷಗಳ ನಂತರ ಶ್ರೀಗುರುಗಳು ಗಿರಿನಗರ ಶಾಖಾಮಠಕ್ಕೆ ಆಗಮಿಸುವ ವಿಷಯ ತಿಳಿಯಿತು. ಆ ದಿವಸ ಗುರುದರ್ಶನಕ್ಕೆ ನಾನೊಬ್ಬನೇ ಹೋಗಿದ್ದೆ. ಅಲ್ಲಿ ಶ್ರೀಗುರುಗಳಿಂದ ಮಂತ್ರಾಕ್ಷತೆಯನ್ನು ಪಡೆಯುವ ಸಮಯದಲ್ಲಿ ನನ್ನ ಪರಿಚಯವನ್ನು ಹೇಳಿ ನನ್ನ ಅರಿಕೆಯನ್ನು ನಿವೇದಿಸಿದೆ. ಆವಾಗ ಶ್ರೀಸಂಸ್ಥಾನ ನನ್ನನ್ನು ಕುಟುಂಬ ಸಮೇತನಾಗಿ ಬರಲು ಆದೇಶಿಸಿದರು. ನಂತರ ಕುಟುಂಬಸ್ಥರಾಗಿ ಹೋಗಿ ಮಂತ್ರಾಕ್ಷತೆಯನ್ನು ಪಡೆಯುವ ಸಂದರ್ಭದಲ್ಲಿ ಶ್ರೀಸಂಸ್ಥಾನ ನಮ್ಮ ಜಾತಕದ ಮೇಲೆ ಮಂತ್ರಾಕ್ಷತೆಯನ್ನು ಹಾಕಿ, ನೀವು ಈಗ ಸರಿಯಾದ ಜಾಗಕ್ಕೆ ಬಂದಿದ್ದೀರ ಎಂದ ಆಶೀರ್ವಾದ ಪೂರ್ವಕವಾದ ಗುರುವಾಕ್ಯ ಈಗಲೂ ನಮ್ಮ ಹೃದಯದಲ್ಲಿ ಮೊಳಗುತ್ತಾ ಇರುತ್ತದೆ. ಆ ದಿನ ನಮಗೆ ಅನಿಸಿದ್ದು ಗುರುವಾಕ್ಯ, ಗುರುದೃಷ್ಟಿ, ಗುರುಕೃಪೆಯನ್ನು ಪಡೆಯುವವನೇ ಧನ್ಯ ಎಂದು.

ಮಠ ಅಂದ ಕ್ಷಣ ನಮಗೆ ನೆನಪಿಗೆ ಬರುವುದು ಅಲ್ಲಿನ ಪರಿಸರ. ಅದು ನಮ್ಮನ್ನು ತುಂಬಾ ಆಕರ್ಷಿಸಿತ್ತು. ಗುರುಗಳು ಶ್ರೀರಾಮಾಶ್ರಮಕ್ಕೆ ಬಂದಾಗ (ಗುರು ಸಾನಿಧ್ಯವಿದ್ದ ಎಲ್ಲಾ ಕಡೆಗೂ) ಹಬ್ಬದ ವಾತಾವರಣವಿರುತ್ತಿತ್ತು. ಎಲ್ಲರೂ ತುಂಬಾ ಖುಷಿಯಾಗಿ ಓಡಾಡುತ್ತಾ ಇರುತ್ತಿದ್ದರು. ಅದರಲ್ಲೂ ಶ್ರೀಗುರು ಪರಿವಾರದವರು ಎಲ್ಲರನ್ನೂ ಸ್ವಂತ ಅಣ್ಣ ತಮ್ಮಂದಿರಂತೆ ಅಕ್ಕ ತಂಗಿಯರಂತೆ ಮಾತಾನಾಡಿಸುವುದು ಮನಸ್ಸಿಗೆ ಮುದವೆನಿಸುತ್ತದೆ. ಶಿಸ್ತು ಭಕ್ತಿ ನಿಯಮಗಳಿಂದ ಕೂಡಿರುವ ಗುರು ಪರಿವಾರವನ್ನು ನೋಡುವುದೇ ಚೆಂದ. ಶ್ರೀರಾಮನ ಅವತಾರವಾದ ಗುರುಗಳು ರಾಮದೇವರ ಪೂಜೆಯನ್ನು ಮಾಡುವುದನ್ನು ನೋಡುವಾಗ ಆಗುವ ಆನಂದ, ಪೀಠದಲ್ಲಿನ ಪರಮಾತ್ಮ ಸ್ವರೂಪಿ ಶ್ರೀಗುರುವಿಗೆ ಆರತಿ ಎತ್ತುವಾಗ ಮೂಡುವ ಧನ್ಯತೆಯ ಭಾವ ಎಷ್ಟು ಜನರಿಗೆ ಸಿಗುವುದು? ಆಗ ನಾವೇ ಪುಣ್ಯವಂತರು. ನಾವೇ ಭಾಗ್ಯವಂತರು ಎನ್ನುವ ಹಾಡು ಯಾರಿಗೆ ನೆನಪಿಗೆ ಬರುವುದಿಲ್ಲ ಹೇಳಿ.

ಅಲ್ಪ ಬುದ್ಧಿಯ ನಮಗೆ ದೇವರ ವರ್ಣನೆ ಮಾಡಲು ಅಸಾಧ್ಯ. ಗುರುಗಳು ಪ್ರವಚನ ಮಾಲಿಕೆಯಲ್ಲಿ ತಿಳಿಸಿರುವಂತೆ ಮಹರ್ಷಿಗಳು ದೇವಿಯನ್ನು ಕಂಡಾಗ ಮಾಡಿದ ದೇವಿಯ ವರ್ಣನೆ ಶ್ಲೋಕರೂಪವಾಗಿ ಜಗತ್ತಿಗೆ ಬಂತಂತೆ. ಹಾಗೆ  ದೊಡ್ಡವರು ಹೇಳಿದ ಶ್ಲೋಕಗಳನ್ನು ನಾವು ಪಠಿಸಬಹುದಷ್ಟೆ ಹೊರತು ದೇವರನ್ನು ವರ್ಣನೆ ಮಾಡಲು ನಮ್ಮತ್ರ ಸಾಧ್ಯವಾ? ಪರಮಾತ್ಮಸ್ವರೂಪಿ ಗುರುಗಳ ದರ್ಶನವಾದಾಗ ಸಂತೃಪ್ತಿ, ಸಮಾಧಾನ ಎಲ್ಲವೂ ಸಿಗುವುದು. ಮನಸ್ಸಿನ ಎಲ್ಲಾ ದುಗುಡ, ದುಮ್ಮಾನಗಳೂ ದೂರವಾಗುವುದನ್ನು ಅನುಭವಿಸಿಯೇ ಹೇಳಬೇಕು.

ಶ್ರೀರಾಮಾಯಣ ಮಹಾಸತ್ರದಿಂದ ವಿಶ್ವಗೋಸಮ್ಮೇಳನ, ಕೋಟಿನೀರಾಜನ, ಕೋಟಿರುದ್ರ ಇದೆಲ್ಲದರ ಅಮೃತತ್ತ್ವದ ಸವಿಯನ್ನು ಗುರುಗಳು ನಮ್ಮೆಲ್ಲರಿಗೂ ತೋರಿಸಿಕೊಟ್ಟಿದ್ದಾರೆ. ರಾಮಾಯಣ ಮಹಾಸತ್ರದಲ್ಲಿ ಶ್ರೀರಾಮ ದೇವರ ಮಹತ್ವ, ವಿಶ್ವಗೋಸಮ್ಮೇಳನ ಮೂಲಕ ಗೋಮಾತೆ ಪ್ರಾಣಿಯಾಗದೆ ಪ್ರಾಣವಾಗಿ ಬೆಳೆದದ್ದು, ಕೋಟಿ ನೀರಾಜನದ ಮೂಲಕ ಮೂರು ಮಾತೆಯರ ಸಂಗಮವಾಗಿರುವ ಪವಾಡ ದೈವೀ ಶಕ್ತಿಯಿಂದ ಮಾತ್ರ ಸಾಧ್ಯ. ಇನ್ನು ಕೋಟಿರುದ್ರ ಹೆಸರು ಕೇಳಿದರೇನೆ ಅದ್ಭುತ, ಈ ಶತಮಾನದಲ್ಲಿ ನಮ್ಮಂಥವರು ರುದ್ರ ಕಲಿಯುವಂತೆ ಆಗಿರುವುದು ಶ್ರೀಗುರುಮಹಿಮೆಯೇ ಆಗಿದೆ. ಮೊನ್ನೆ ನವರಾತ್ರಿಯ ಸಂದರ್ಭ ಶ್ರೀಗುರುಗಳು ಶ್ರೀಕರಾರ್ಚಿತ ದೇವರುಗಳಿಗೆ ಪೂಜೆ ಸಲ್ಲಿಸುವ ಸಂದರ್ಭ ನಮಗೆಲ್ಲರಿಗೂ ರುದ್ರ ಪಠಣ ಮಾಡುವ ಸದವಕಾಶ ದೊರೆತಿದ್ದು ನಮ್ಮ ಭಾಗ್ಯ. ನಾವು ರುದ್ರವನ್ನು ಪಠಿಸುವಾಗ ಆದ ಆನಂದ ಅವಿಸ್ಮರಣೀಯವೆನಿಸಿ ಬದುಕು ಸಾರ್ಥಕವೆನಿಸಿತು. ಶ್ರೀಗುರುವಿಗೆ ಕೋಟಿ ಕೋಟಿ ನಮನಗಳು.

ನಾವು ಶ್ರೀರಾಘವೇಶ್ವರರ ಭಕ್ತರೆಂದು ಹೇಳಿಕೊಳ್ಳುವ ಸಂದರ್ಭದಲ್ಲೆಲ್ಲಾ ಅನುಭವಿಸುವ ಖುಷಿಯನ್ನು ಬಣ್ಣಿಸಲು ಅಸಾಧ್ಯ. ಒಂದು ಸಲ ಕೆಲಸದ ನಿಮಿತ್ತ ವಿಮಾನಯಾನಕ್ಕೆಂದು ಹೊರಟಾಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪೇಜಾವರ ಶ್ರೀ ವಿಶ್ವೇಶ್ವರತೀರ್ಥರ ದರ್ಶನ ಭಾಗ್ಯ ಸಿಕ್ಕಿತು. ಸಂಪ್ರದಾಯದಂತೆ ನಾನು ಸ್ವಾಮೀಜಿಯವರಿಗೆ ಶಿರಬಾಗಿ  ನಮಸ್ಕರಿಸಿದೆನು. ಆಗ ಅವರು ನನ್ನನ್ನು ಸನಿಹಕ್ಕೆ ಕರೆದು ಪರಿಚಯವನ್ನು ಕೇಳಿದರು. ನಾನು ಶ್ರೀರಾಘವೇಶ್ವರರ ಶಿಷ್ಯನೆಂದು ತಿಳಿಸಿದಾಗ ಅವರ ಮುಖದಲ್ಲಿ ಉಂಟಾದ ಸಂತೋಷ ಭಾವ ನನ್ನನ್ನು ಪುಳಕಿತಗೊಳಿಸಿತು. ಇಂತಹ ಗುರುಗಳನ್ನು ಪಡೆದ ನಾವು ಧನ್ಯರಲ್ಲವೇ?

ಜೀವನದಲ್ಲಿ ಗುರಿ ಇಲ್ಲದಿರಬಹುದು, ಆದರೆ ಗುರು ಇರಲೇಬೇಕು. ನಮ್ಮ ಜೀವನದ ಗುರಿಯನ್ನು ಗುರುವೇ ತೋರಿಸಿಕೊಡುವರು. ಇದಕ್ಕೆ ನಾವು ನಡೆದು ಬಂದ ದಾರಿಯೇ ಸಾಕ್ಷಿ. ನಾನೊಬ್ಬ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದು ಶ್ರಮಿಸಿ ಬೆಂಗಳೂರಿಗೆ ಬಂದು ಉದ್ಯೋಗದಲ್ಲಿದ್ದು ಸಾಧಾರಣ ಜೀವನ ಮಾಡುತ್ತಿರುವವನು. ಬೆಂಗಳೂರಿನಲ್ಲಿ ಈಗಿನ ಕಾಲದಲ್ಲಿ ಸ್ವಂತ ಮನೆಯನ್ನು ಕಟ್ಟುವುದು ಸುಲಭದ ಮಾತಲ್ಲ. ನನ್ನ ಪಾಲಿಗೆ ಸಾಧ್ಯವಾಗಿರುವುದು ನಾನು ಮನತುಂಬಿ ಸೇವಿಸುತ್ತಿರುವ ಶ್ರೀರಾಘವೇಶ್ವರರ ಕೃಪೆಯಿಂದ. ಗುರುವಿನ ಮಂತ್ರಾಕ್ಷತೆಯ ಮಹಿಮೆಯನ್ನು ತಿಳಿದವನೆ ಬಲ್ಲ. ನೂತನ ಗೃಹದ ನಕಾಶೆ ಅಂತಿಮಗೊಂಡಾಗ ಶ್ರೀಗುರುಗಳಲ್ಲಿಗೆ ಹೋಗಿ ನಕಾಶೆಗೆ ಶ್ರೀಗುರುಗಳ ಅನುಗ್ರಹ ಮಂತ್ರಾಕ್ಷತೆಯನ್ನು ಹಾಕಿಸಿ ಮನೆ ನಿರ್ಮಾಣ ಕಾರ್ಯವನ್ನು ಆರಂಭಿಸಿದೆವು. ಗುರು ಅನುಗ್ರಹದ ಬಲದಿಂದ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನಡೆಯಿತು. ಗುರುಪೀಠದ ಶ್ರೀರಕ್ಷೆಯಿಂದ ಪದಕಮಲ ಸೃಷ್ಟಿಯಾಯಿತು. ೧೩-೦೬-೨೦೧೦ರಂದು ಪದಕಮಲದಲ್ಲಿ ಶ್ರೀಗುರುವಿನ ಪಾದಕಮಲ ಮೂಡುವುದನ್ನು ನೋಡುವ  ಸೌಭಾಗ್ಯ ನಮ್ಮದಾಯಿತು. ಆಚಾರ್ಯ ಮುಖೇನ ಪದಕಮಲದಲ್ಲಿ ಶ್ರೀಗುರುಸೇವೆ, ಶ್ರೀಸೀತಾರಾಮಚಂದ್ರ ಚಂದ್ರಮೌಳೀಶ್ವರ ರಾಜರಾಜೇಶ್ವರೀ ಸೇವೆ, ಶ್ರೀಗುರುಭಿಕ್ಷಾಸೇವೆ, ಪಾದುಕಾಪೂಜೆ, ಗೋಪೂಜೆ ನೆರವೇರಿಸಿ ಪುನೀತರಾದೆವು.

ನಮ್ಮ ಮಗಳು ಶ್ರೇಯಾ (ಅಮೂಲ್ಯ) ೬-೭ ವರ್ಷ ಇರುವಾಗ ಅವಳ ಜಾತಕ ಪರೀಶೀಲಿಸಿದ ಪುರೋಹಿತರು ೮ನೇ ವರ್ಷದಲ್ಲಿ ರಾಹುಬೃಹಸ್ಪತಿ ಸಂಧಿ ಇದೆ. ಏನಾದರೂ ತೊಂದರೆಯಾಗದಂತೆ ಎಚ್ಚರದಿಂದ ಇರಿ ಎಂದರು. ಅದಕ್ಕೆ ಶಾಂತಿಯನ್ನು ಮಾಡಿಸಬೇಕು ಎಂದಿದ್ದರು. ನನಗೆ ತುಂಬಾ ಚಿಂತೆಯಾಯಿತು. ಅದೇ ಸಮಯದಲ್ಲಿ ಶ್ರೀಸಂಸ್ಥಾನ ಗಿರಿನಗರ ಮಠಕ್ಕೆ ಬಂದಿದ್ದರು. ಮಂತ್ರಾಕ್ಷತೆಯ ಸಮಯದಲ್ಲಿ ಈ ವಿಷಯವನ್ನೂ ಶ್ರೀಸಂಸ್ಥಾನದವರ ದಿವ್ಯ ಅವಗಾಹನೆಗೆ ತಂದೆ. ಅದಕ್ಕೆ ಅವರು ನೀನು ಅದನ್ನು ಸಂಸ್ಥಾನಕ್ಕೆ ಬಿಟ್ಟುಬಿಡು ಎಂದರು. ಮಕ್ಕಳಿಗೆ ಮಂತ್ರಾಕ್ಷತೆ ನೀಡುವ ಸಂದರ್ಭದಲ್ಲಿ ಅವಳ ತಲೆ ನೇವರಿಸಿ ಆಶೀರ್ವದಿಸಿದರು. ನಂತರ ನಾನು ಯಾವಾಗಲೂ ಗುರುಗಳು ಹೇಳಿದ್ದನ್ನು ಮತ್ತು ಮಠಕ್ಕೆ ಹೋದಾಗ ಅವಳಿಗೆ ಸಿಗುವ ಗುರು ಆಶೀರ್ವಾದವನ್ನು ನೆನೆದು ಸುಮ್ಮನಾದೆ. ಅದಾಗಿ ೩ ವರ್ಷ ಕಳೆದಿರಬಹುದು ಗುರು ಅನುಗ್ರಹದಿಂದ ಅವಳಿಗೆ ಯಾವ ತೊಂದರೆಯೂ ಆಗಲಿಲ್ಲ ಇದಕ್ಕೆ ಹಿರಿಯರು ಹೇಳಿದ್ದು ನೆನಪಾಯ್ತು ಹರ ಮುನಿದರೂ ಗುರು ಕಾಯ್ತ.

ಈ ಸಂದರ್ಭದಲ್ಲಿ ನನ್ನಾಕೆಯ ಒಂದೆರಡು ಅನುಭವಗಳನ್ನು ಅವರು ತಿಳಿಸಿದಂತೆಯೇ ಪ್ರಸ್ತುತಪಡಿಸಲು ಇಚ್ಛಿಸುತ್ತೇನೆ

೧೭-೦೩-೨೦೦೮ ಸೋಮವಾರ ದಿನ ಬೆಳಿಗ್ಗೆ ನನ್ನವರು ದೇವರ ಪೂಜೆಯನ್ನು ಮಾಡಿ ಮಾಮೂಲಿನಂತೆ ಆಫೀಸಿಗೆ ಹೊರಟರು. ಸುಮಾರು ೧೦ ಘಂಟೆಯ ಸಮಯಕ್ಕೆ ದೂರವಾಣಿ ಕರೆ ಮಾಡಿ “ಗೀತಾ ಆಕ್ಸಿಡೆಂಟ್ ಆಗಿದೆ ಯಾರೋ ಗಾರ್ಡ್ ಅನ್ಸುತ್ತೆ ಮಾತಾಡ್ತ ಇಲ್ಲೆ” ಹೇಳಿ ದೂರವಾಣಿ ಇಟ್ಟರು. ನನಗೆ ತುಂಬಾ ಗಾಬರಿ ಆಯಿತು. ಮುಂದಿನ ಏನೇನೋ ವಿಚಾರಗಳು ಯೋಚನೆ ಬಂದು ಅಳು ಬರುತ್ತಾ ಇತ್ತು. ಶ್ರೀಗುರುವಿನ ಮುಂದೆ ಕುಳಿತು ಅಳಲು ಶುರು ಮಾಡಿದ್ದೆ. ನಿಮ್ಮನ್ನು ಸ್ಮರಿಸಿ, ಪೂಜಿಸಿ ಹೋದಮೇಲೂ ಈತರನಾ? ಎಂದು ಕೇಳುತ್ತಾ ಕುಂತೆ. ಎಷ್ಟೇ ಫೋನ್ ಟ್ರೈ ಮಾಡಿದರೂ ಇವರು ಸಂಪರ್ಕಕ್ಕೆ ಸಿಕ್ತಾ ಇರಲಿಲ್ಲ. ನಂತರ ೨ಘಂಟೆಯ ಹತ್ತಿರ ಇವರು ಕರೆ ಮಾಡಿ ಘಟನೆಯನ್ನು ವಿವರಿಸಿ “ಅಪಘಾತಕ್ಕೆ ಸಿಲುಕಿದವನು ಮಾತನಾಡ್ತ ಇದ್ದಾನೆ ನನಗೆ ಏನೂ ತೊಂದರೆ ಆಯ್ದಿಲ್ಲೆ. ಕಾರಿನ ಮುಂದಿನ ಗಾಜು ಮಾತ್ರ ಪುಡಿ ಪುಡಿ ಆಗೋದ್ರೂ  ನನಗೆ ಒಂದು ಗೀರು ಬಿದ್ದಿಲ್ಲ ಗುರುವೇ ಕಾಪಾಡ್ದ ಹೆದರಡಾ” ಎಂದರು. ಅವಾಗ ನನಗೆ ಉಸಿರು ಬಂದಾಂಗೆ ಆತು. ಈಗ ಹೇಳಿ ಕರೆದರೆ ಓ ಎನ್ನರೇ ಶ್ರೀ ಗುರು ರಾಘವೇಶ್ವರಾ!

ಗುರುಗಳ ಪ್ರವಚನ ಎಂದರೆ ಎಲ್ಲಾ ವಯಸ್ಸಿನವರಿಗೂ ತುಂಬಾ ಇಷ್ಟ. ಗುರುಗಳು ನವರಾತ್ರಿಯ ಸಂದರ್ಭದಲ್ಲಿ ಗಿರಿನಗರದ ಶಾಖಾಮಠದಲ್ಲಿ ದೇವಿಯ ಮಹಿಮೆಯನ್ನು ವರ್ಣಿಸುತ್ತಿದ್ದರು. ಆದಿನ ಪ್ರವಚನ ಕೇಳಲು ಹೋಗಬೇಕಾದರೆ ನನಗೆ ಮನಸ್ಸಿನ ತುಂಬಾ ನೋವಿತ್ತು. ಕಳೆದುಕೊಂಡಿರುವುದರ ನೆನಪಲ್ಲಿ ಕಣ್ಣು ತುಂಬಿ ಬರುತ್ತಿತ್ತು. ನಿಯಂತ್ರಣ ಮಾಡುವ ಪ್ರಯತ್ನದಲ್ಲಿದ್ದೆ. ಸ್ವಲ್ಪ ಹೊತ್ತಿನಲ್ಲಿ ಗುರುಗಳು ಪೀಠಕ್ಕೆ ಬಂದು ಪ್ರವಚನ ಪ್ರಾರಂಭಿಸಿದರು. ಮುಂದುವರಿದಂತೆ ಹೇಳುತ್ತಿದ್ದರು “ತಾಯಿಗೆ (ದೇವಿ) ತನ್ನ ಮಗುವಿಗೆ ಏನು ಬೇಕು ಹೇಳಿ ಗೊತ್ತಿರುತ್ತೆ. ಮಗುವಿನ ಕೈಯಲ್ಲಿರುವ ಚಿಕ್ಕದನ್ನು ಕಸಿದುಕೊಂಡು ದೊಡ್ಡದನ್ನು ಕೊಡುತ್ತಾಳೆ ಆದರೆ ಚಿಕ್ಕದನ್ನು ಕಸಿದುಕೊಂಡು ದೊಡ್ಡದನ್ನು ಕೊಡುವವರೆಗಿನ ಸಮಯ ತ್ರಾಸದಾಯಕ.” ಪ್ರವಚನದ ಸಾಲುಗಳು ಮನಕ್ಕಿಳಿಯುತ್ತಿದ್ದಂತೆಯೇ ದುಗುಡವಾಗಿದ್ದ ಮನಸು ಹಗುರವಾಗತೊಡಗಿತು. ನಾವು ಏನು ಕೇಳದೆಯೇ ನಮ್ಮ ಮನಸ್ಸಿನಲ್ಲಿದ್ದ ನೋವಿಗೆ, ಚಿಂತೆಗೆ, ಪ್ರಶ್ನೆಗೆ ಉತ್ತರ ನಮಗೆ ಸಿಕ್ಕಿತ್ತು. ನಮಗರಿಯದೆಯೇ ನಮ್ಮಂತರಾಳವನ್ನು ಹೊಕ್ಕು ನೋವನ್ನು ಅಳಿಸುವ ಸದ್ಗುರುವಿಗೆ  ಹೃದಯಾಂತರಾಳದಿಂದ ಶತಕೋಟಿ ಪ್ರಣಾಮಗಳು.

ಹೀಗೆ ನಮ್ಮ ಜೀವನದಲ್ಲಿ ನಮಗೆ ಏನೇ ತೊಂದರೆಯಿದ್ದರೂ ನಾವು ಶ್ರೀಗುರುಗಳಲ್ಲಿ ಹೋಗಿ ಪ್ರಾರ್ಥಿಸಿ ಪರಿಹಾರವನ್ನು ಪಡೆದುಕೊಳ್ಳುತ್ತೇವೆ. ಪ್ರತಿಯೊಬ್ಬ ವ್ಯಕ್ತಿಯೂ ಶ್ರೀಗುರುಗಳು ಹಮ್ಮಿಕೊಂಡಿರುವ ಗುರುಕುಲ, ಮೂಲಮಠ ಪುನರುತ್ಥಾನ, ಗೋಸಂರಕ್ಷಣೆ ಯೋಜನೆಗಳಲ್ಲಿ ಕೈಜೋಡಿಸಿ ಯಥಾಸಾಧ್ಯ ಸೇವೆ ಸಲ್ಲಿಸಿ ಸದಾ ಶ್ರೀಗುರುಪೀಠದ ಶ್ರೀರಕ್ಷೆ, ಆಶೀರ್ವಾದ ಪಡೆಯೋಣ.

ಮತ್ತೆ ಮತ್ತೆ ಪದಕಮಲದಲ್ಲಿ ಶ್ರೀಗುರುವಿನ ಪಾದಕಮಲವನ್ನು ಪೂಜಿಸಲು ಕಾಯುತ್ತಿರುವ

ನಿಮ್ಮವ,

ಮಂಜುನಾಥ ಭಾಗ್ವತ್

ಪರಿಚಯ

ಶ್ರೀ ಸತ್ಯನಾರಾಯಣ ಭಾಗ್ವತ್ ಮತ್ತು ಶ್ರೀಮತಿ ಲಕ್ಷ್ಮೀ ಭಾಗ್ವತ್  ಇವರ ಏಕಮಾತ್ರ ಪುತ್ರರಾಗಿ ಹೊನ್ನಾವರದ ಉಂಚಗೇರಿಯಲ್ಲಿ ೧೯೬೯ರಲ್ಲಿ ಜನಿಸಿದ

ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹೊನ್ನಾವರದ ಶ್ರೀ ಕರಿಕಾನ ಪರಮೇಶ್ವರಿ ವಿದ್ಯಾಸಂಸ್ಥೆಯಲ್ಲಿ ಪೂರೈಸಿ

ಉಚ್ಛ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದು ಪ್ರಸಿದ್ಧ ವಿಪ್ರೋ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
೧೯೯೭ರಲ್ಲಿ ಹೊನ್ನಾವರ ತಾಲೂಕು ಅಪ್ಸರಕೊಂಡ ಮಠದ ಸನಿಹದಲ್ಲಿರುವ ಹೆಬ್ಬೈಲು ಮನೆಯ

ಶ್ರೀಮತಿ ಲೀಲಾವತಿ ಮತ್ತು ಶ್ರೀ ತಿಮ್ಮಣ್ಣ ಹೆಗಡೆ ದಂಪತಿಗಳ ಜ್ಯೇಷ್ಠ ಪುತ್ರಿ ಗೀತಾ ಇವರ ಕೈ ಹಿಡಿದು ಗೃಹಸ್ಥಾಶ್ರಮ ಪ್ರವೇಶಿಸಿದರು.

ಶ್ರೀಮಠದ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶ್ರೀಯುತರು ಗೋಬಂಧು ಯೋಜನೆಯಲ್ಲಿ

ಜವಾಬ್ದಾರಿಯನ್ನು ವಹಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೂ ಕುಟುಂಬಕ್ಕೂ ಶ್ರೀಗುರುದೇವತಾನುಗ್ರಹ ಸದಾ ಇರಲೆಂದು ಹಾರೈಕೆ

Facebook Comments Box