ಲೇಖಕರು ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ತಂತ್ರಜ್ಞಾನಿಗಳು, ಹಾಗೂ ಕಾನೂನು ಪದವೀಧರರು.
ಶ್ರೀಶ್ರೀಗಳವರನ್ನು ಅತ್ಯಂತ ಸಮೀಪದಿಂದ ಬಲ್ಲ “ಮಾವಿನಕುಳಿ” ಮನೆತನದವರು.

 

ಲೇಖಕರು: ಪ್ರಸನ್ನ.ಎಂ.ಮಾವಿನಕುಳಿ

ಲೇಖಕರು: ಪ್ರಸನ್ನ.ಎಂ.ಮಾವಿನಕುಳಿ

ಇಲ್ಲ, ಸಾಧ್ಯವಿಲ್ಲ.
ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಕುರಿತು ಚರ್ಚಿತವಾಗುತ್ತಿರುವ ಆರೋಪಗಳನ್ನು ಕೇವಲ ಧಾರ್ಮಿಕ ನೆಲೆಯಲ್ಲಿ ನೋಡಲು ಸಾಧ್ಯವಿಲ್ಲ. ಈ ರಾಜ್ಯ ದೇಶದ ಲಕ್ಷಾಂತರ ಜನ ಭಕ್ತರುಗಳು ಇಟ್ಟಿರುವ ನಂಬಿಕೆಗಿಂತ ಹೊರತಾಗಿ ನಾನು ಈ ಪ್ರಕರಣವನ್ನು ವಸ್ತುಸ್ಥಿತಿಯ ಆಧಾರದ ಮೇಲೆ, ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೂ, ನನ್ನ ವೈಯಕ್ತಿಕ ಆಸಕ್ತಿಗಳಿಂದ ಕಾನೂನು ಪದವೀಧರನೂ ಆಗಿರುವ ನಾನು, ಈ ಸಮಾಜದ ಒಬ್ಬ ಜವಾಬ್ದಾರಿಯುತ ನಾಗರೀಕನಾಗಿ ನೋಡಲು ಬಯಸುತ್ತೇನೆ. ಇದು ನಾನು ನನ್ನ ತಾಯಿ ಕೆಲವು ದೃಶ್ಯ ಮಾಧ್ಯಮಗಳು ಎಂದಿನಂತೆ ಅತಿ ರಂಜಿತವಾಗಿ ಆ ಆರೋಪಗಳನ್ನು ವೈಭವೀಕರಿಸುತ್ತಿರುವುದನ್ನು ನೋಡಲೇ ಬೇಡ ಎಂದು ಹೇಳಿದಾಗ ನಾನು ಕೊಟ್ಟ ಉತ್ತರ.

ನೋಡಿದೆನಲ್ಲಾ! ನನ್ನ ಇಡೀ ದಿನ ನನ್ನ ಕೆಲಸ ಕಾರ್ಯಗಳನ್ನು ಬದಿಗೊತ್ತಿ, ಯಾವ ದೃಶ್ಯ ಮಾಧ್ಯಮಗಳು ಅತಿರಂಜಿತವಾಗಿ ಶ್ರೀ ಶ್ರೀರಾಘವೇಶ್ವರರ ಮೇಲೆ ನೇತ್ಯಾತ್ಮಕ ಪ್ರಚಾರ ಮಾಡುತ್ತಿವೆಯೋ ಅಂತಹ ದೃಶ್ಯ ಮಾಧ್ಯಮಗಳನ್ನೇ ದಿನವಿಡೀ ನೋಡಿದೆನಲ್ಲಾ! ಹೌದು ಇದ್ದಿದ್ದದಾರೂ ಏನು, ತೋರಿಸಿದ್ದಾದರೂ ಏನು ಭಾರತೀಯ ದಂಡ ಸಂಹಿತೆ ಮತ್ತು ಭಾರತೀಯ ದಂಡಸಂಹಿತೆಯ ಪ್ರಕ್ರಿಯೆಯ ಪ್ರಕಾರ ಯಾವುದಾದರೂ ದೂರು ದಾಖಲಾಗಿದೆಯೇ, ಹೇಳಿಕೊಳ್ಳುತ್ತಿರುವ ದೂರಿನಲ್ಲಿ ಇರುವುದಾದರೂ ಏನು, ದೂರಿನ ಪ್ರತಿಯನ್ನು ಆಸಕ್ತಿಯಿಂದ ಅಭ್ಯಸಿಸಿದ ನನಗೆ ಸಿಕ್ಕಿದ್ದು ಸೊನ್ನೆ. ಮೊದಲಿಗೆ ಪಿರ್ಯಾದುದಾರರ ಹೆಸರೇ ಇಲ್ಲ. ಇರುವುದು ತಾನು ಇಂತಹವರ ಮಗಳು ಎಂದು ಮಾತ್ರ. ಹೋಗಲಿ ಅದರಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಉಲ್ಲೇಖವಾದರೂ ಇದೆಯೇ ಊಹೂಂ ಅದೂ ಇಲ್ಲ. ಅದರಲ್ಲಿರುವುದು ತನ್ನ ತಾಯಿ ಲೈಂಗಿಕ ದೌರ್ಜನ್ಯ ನಡೆದ ಬಗ್ಗೆ ನನ್ನಲ್ಲಿ ಪ್ರಸ್ತಾಪಿಸಿದ್ದರು. ಎಲ್ಲಿ, ಯಾವಾಗ ಊಹೂಂ ಕೇಳಲೇ ಬೇಡಿ.

ಇದರ ಜೊತೆಗೆ ಬನಶಂಕರಿ ಪೊಲೀಸರ ಮೇಲೆ ಸಹಿತ ಆಪಾದನೆ. ಭಾರತೀಯ ದಂಡ ಸಂಹಿತೆ ಪ್ರಕ್ರಿಯೆ ಸೆಕ್ಷನ್ ೧೫೭ರ ಪ್ರಕಾರ ಠಾಣಾಧಿಕಾರಿ ದೂರನ್ನು ಸ್ವೀಕರಿಸಿ ಆ ದೂರಿನಲ್ಲಿ ಸತ್ಯಾಂಶವಿರಬಹುದು ಎಂದು ಅಭಿಪ್ರಾಯ ಹೊಂದುವಂತೆ ಆ ದೂರು ಇದ್ದಲ್ಲಿ ಆ ಠಾಣಾಧಿಕಾರಿ ದೂರನ್ನು ದಾಖಲಿಸಿಕೊಂಡು ಮುಂದುವರೆಯಬೇಕು. ಈಗ ನೀವೇ ಹೇಳಿ ಈ ಮೇಲಿನ ದೂರಿನಲ್ಲಿ ಮೇಲ್ನೋಟಕ್ಕೆ ಏನಾದರೂ ಸತ್ಯಾಂಶವಿದ್ದಂತೆ ಕಾಣುತ್ತದೆಯೇ?

ಇಡೀ ನ್ಯಾಯಶಾಸ್ತ್ರ ಕಾನೂನು ಶಾಸ್ತ್ರವನ್ನು ಎರಡು ಶಬ್ದಗಳಲ್ಲಿ ಹೇಳುವುದಾದರೆ ಅದು “ಬೊನಾಫೈಡ್” ಮತ್ತು “ಮಾಲಾಫೈಡ್” ಪ್ರಾಮಾಣಿಕ ಮತ್ತು ಅಪ್ರಮಾಣಿಕ ಉದ್ದೇಶ. ಅದು ಯಾವುದೇ ಕಾನೂನು ಅಥವಾ ಕಾನೂನು ಪ್ರಕ್ರಿಯೆಗಳಾದರೂ ಕೊನೆಗೆ ನೋಡುವುದು ಪ್ರಾಮಾಣಿಕ ಉದ್ದೇಶವಿದೆಯೇ ಎಂಬುದಾಗಿ. ಹಲವು ವರ್ಷಗಳಿಂದ ಶ್ರೀಮಠದ ಶ್ರೀರಾಮ ಕಥಾಗಳಲ್ಲಿ ಭಾಗವಹಿಸುತ್ತಾ ಶ್ರೀಮಠದಿಂದ ಸಾಕಷ್ಟು ಹಣ ಮತ್ತು ಕೀರ್ತಿ ಸಂಪಾದಿಸಿಕೊಂಡು ನಂತರ ಸಾಕಷ್ಟು ಸಮಯದಿಂದ ಮಠಕ್ಕೆ ಬರುವುದನ್ನೇ ನಿಲ್ಲಿಸಿದ್ದ ಗಾಯಕಿಯೊಬ್ಬರು ಈಗ ಹತ್ತು ಹಲವಾರು ತಿಂಗಳುಗಳ ನಂತರ ಆರೋಪವೊಂದನ್ನು ಬೇರೊಬ್ಬರ ಮೂಲಕ ಮಾಡುತ್ತಾರೆಂದರೆ ಅದರಲ್ಲಿರುವ ಉದ್ದೇಶವೆಂತದ್ದು? ತೊಂದರೆಯೇ ಆಗಿದ್ದಲ್ಲಿ ತಕ್ಷಣ ಏಕೆ ಸೂಕ್ತ ವ್ಯಕ್ತಿಗಳನ್ನು ಸಂಪರ್ಕಿಸಲಿಲ್ಲ. ಕ್ರಿಮಿನಲ್ ಪ್ರಕರಣಗಳಲ್ಲಿ ಅತ್ಯಂತ ಮುಖ್ಯವಾಗಿರುವ ಟೈಮ್ ಫ್ಯಾಕ್ಟರ್ ಎಲ್ಲೋ ಕಳೆದು ಹೋಗಿ ಬಿದ್ದಿದೆಯಲ್ಲಾ. ಸರಿ, ಹೋಗಲಿ ಈಗಲಾದರೂ ಆರೋಪಿಸುತ್ತಿರುವ ದೌರ್ಜನ್ಯ ನಡೆದಿರಬಹುದು ಎಂದು ನಂಬಲು ಕಾರಣವಾಗುವ ಯಾವುದೇ ಸಾಕ್ಷಿ ದಾಖಲೆಗಳೂ ದೂರಿನಲ್ಲಿ ಹೇಳಲ್ಪಟ್ಟಿಲ್ಲ. ಭಾರತೀಯ ದಂಡ ಸಂಹಿತೆ ಪ್ರಕ್ರಿಯೆ ೨೧೩ರ ಸೆಕ್ಷನ್‌ನ ಪ್ರಕಾರ ಅಪರಾಧವನ್ನು ಹೇಳಬೇಕಾದಾಗ ಯಾವ ರೀತಿಯಲ್ಲಿ ಅಪರಾಧ ಆಯಿತು ಎಂಬುದನ್ನು ಕೂಡಾ ಹೇಳಬೇಕಾಗುತ್ತದೆ.

ಸಮಾಜಕ್ಕೆ ಹತ್ತು ಹಲವು ಕೊಡುಗೆಗಳನ್ನು ನೋಡಿ ನಮ್ಮ ಸನಾತನ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಾ ಯಾವುದೇ ಜಾತಿ ಮತ ಭೇದವಿಲ್ಲದೇ ಸಮಾಜದ ಕೊಟ್ಟ ಕೊನೆಯ ವ್ಯಕ್ತಿಗೂ ತಲುಪುತ್ತಾ ಅವರ ಜೀವನ ಮಟ್ಟ ಸುಧಾರಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳ ವಿರುದ್ಧ ನಡೆಯುತ್ತಿರುವ ಒಂದು ಸಂಚು ಮತ್ತು ಲಾಬಿಯ ಅಂಗವಾಗಿರುವ ಈ ದೂರೆಂಬ ನಾಟಕವನ್ನು ಕೆಲವು ದೃಶ್ಯ ಮಾಧ್ಯಮಗಳು ತಮ್ಮ ಟಿ.ಆರ್.ಪಿ. ಹೆಚ್ಚಳಕ್ಕೆ ಬಳಸಿಕೊಳ್ಳುವುದು ನಿಲ್ಲಲಿ. ಆ ದೂರಿನ ಸತ್ಯಾಸತ್ಯತೆಯ ವಿಚಾರಣೆಯಾಗಲಿ, ಅದರ ಬದಲಾಗಿ ಮಾಧ್ಯಮಗಳೇ ನ್ಯಾಯಾಧೀಶರ ಸ್ಥಾನದಲ್ಲಿ ಕುಳಿತರೆ ಅದರಿಂದ ಸಮಾಜದ ಮತ್ತು ಸಮಾಜದ ಸ್ವಾಸ್ಥ್ಯವನ್ನು ಮೇಲಕ್ಕೆತ್ತರಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಶ್ರಮಿಸುವ ಸಮಾಜ ಸುಧಾರಕರಿಗಿಂತ ಅವರಿಂದ ಉಪಕೃತರಾಗುವ ಸಮಾಜಕ್ಕಾಗುವ ಹಾನಿ ಹೆಚ್ಚು ಎಂಬುದನ್ನು ಆ ಕೆಲವು ದೃಶ್ಯ ಮಾಧ್ಯಮಗಳಲ್ಲಿ ವಿನಂತಿಸಿಕೊಳ್ಳಲು ಬಯಸುತ್ತೇನೆ.

– ಲೇ: ಪ್ರಸನ್ನ ಎಂ. ಮಾವಿನಕುಳಿ, ಬಿ.ಇ., (ಐ.ಟಿ.), ಎಲ್.ಎಲ್.ಬಿ.

Facebook Comments Box