ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಮನೆ-ಮನೆಗೆ ಬಂದ ಶಂಕರಾಚಾರ್ಯರೂಪ!

ಮನೆ-ಮನೆಗೆ ಬಂದ ಶಂಕರಾಚಾರ್ಯರೂಪ!

ಜ್ಞಾನ ಸುಮ 15:

ಅದ್ವಿತೀಯ ಭಾಷ್ಯಕಾರ ಶಂಕರ ಭಗವತ್ಪಾದರು

ಪ್ರೊ. ವೆಂಕಟೇಶ ಕೃಷ್ಣ ವೀಣಾಕರ

ಶಂಕಾರೂಪೇಣ ಮಚ್ಚಿತ್ತಂ ಪಂಕೀಕೃತಮಭೂದ್ಯಯಾ|
ಕಿಂಕರೀ ಯಸ್ಯ ಸಾ ಮಾಯಾ ಶಂಕರಾಚಾರ್ಯಮಾಶ್ರಯೇ ||

ಪ್ರಪಂಚದ ವೈಚಾರಿಕ ಕ್ಷೇತ್ರದಲ್ಲಿ ಆಚಾರ್ಯ ಶಂಕರರಿಗೆ ಮಹತ್ತ್ವದ ಸ್ಥಾನವಿದೆ. ಅದ್ಭುತ ಮೇಧಾಶಕ್ತಿ, ಪ್ರಸನ್ನ ಗಂಭೀರಶೈಲೀ, ಹೃದಯಂಗಮ ಅಭಿವ್ಯಕ್ತಿ ಸಾಮರ್ಥ್ಯಗಳಿಂದ ಕೂಡಿದ ಅವರ ಕೃತಿಗಳು ಪ್ರಾಚ್ಯ-ಪಾಶ್ಚಾತ್ಯ ತತ್ತ್ವಜ್ಞಾನಿಗಳನ್ನು-ಮೇಧಾವಿಗಳನ್ನು ಬೆರಗುಗೊಳಿಸಿವೆ.

ಆಚಾರ್ಯರ ಜೀವನ, ಸಾಧನೆ, ತತ್ತ್ವನಿರೂಪಣೆಗಳೆಲ್ಲವೂ ವಿಸ್ಮಯಕರವಾಗಿವೆ.

ಅಷ್ಟವರ್ಷೇ ಚತುರ್ವೇದೀ ದ್ವಾದಶೇ ಸರ್ವಶಾಸ್ತ್ರವಿತ್ |
ಷೋಡಶೇ ಕೃತವಾನ್ ಭಾಷ್ಯಂ ದ್ವಾತ್ರಿಂಶೇ ಮುನಿರಭ್ಯಗಾತ್ ||

ಎಂಬ ಅವರ ಬಗೆಗೆ ಇರುವ ವರ್ಣನೆಯಲ್ಲಿ ಆಚಾರ್ಯರು ಭುವನ ಭೂಷಣವಾದ ತಮ್ಮ ಭಾಷ್ಯವನ್ನು ಹದಿನಾರನೆಯ ವಯಸ್ಸಿನಲ್ಲಿಯೇ ಬರೆದರೆಂಬ ವರ್ಣನೆ ಇದೆ. ಹದಿನಾರು ಜನ್ಮಗಳ ಅಭ್ಯಾಸದಿಂದ ಕೂಡ ಅನುಭವಿಸಿ ಮುಗಿಯಲಾರದಷ್ಟು ಸಾರಭೂತವಾಗಿರುವ ಅವರ ಈ ಭಾಷ್ಯ ನಿರೂಪಣೆಯು ಅದ್ವಿತೀಯವಾಗಿದ್ದು ಇತರ ಎಲ್ಲ ಭಾಷ್ಯಕಾರರನ್ನು ದ್ವಿತೀಯರನ್ನಾಗಿಸಿದೆ.

ವೇದ-ಶ್ರುತಿ ಎಂದು ಪ್ರಸಿದ್ಧವಾದ ಭಾರತೀಯ ವಾಂಙ್ಮಯವಾಹಿನಿಯು ವೈಚಾರಿಕ ದೊಂಬಲಾಟವಾಗಲಿ, ತಾರ್ಕಿಕ ಕಸರತ್ತಾಗಲಿ ಆಗಿರದೆ ಸತ್ಯ-ಋತದರ್ಶನವನ್ನು ಸಾಧಿಸಿದ ಯೋಗಿಗಳ ತಪಸ್ಸಿಗೆ ಗೋಚರವಾಗಿ ಸಾಮೂಹಿಕ ಅನುಭವದಿಂದ ದೃಢೀಕೃತವಾದ ತತ್ತ್ವವಿಶೇಷವಾಗಿದೆ. ಭಾರತದ ಆಸ್ತಿಕ ದರ್ಶನಗಳೆಲ್ಲವೂ ಈ ಶ್ರುತಿಯನ್ನೇ ಪರಮಪ್ರಮಾಣವೆಂದು ಅಂಗೀಕರಿಸಿವೆ.

ನಮ್ಮ ಋಷಿಗಳ ಚಿಂತನೆಯು ಏಕಮುಖವಾಗಿರದೆ ವೈವಿಧ್ಯಮಯವಾಗಿದೆ. ವೇದಪ್ರಾಮಾಣ್ಯವನ್ನು ಅಂಗೀಕರಿಸಿ ಅಭಿವ್ಯಕ್ತವಾದ ವಿಚಾರಲಹರಿಯು ಆಸ್ತಿಕ ದರ್ಶನವೆಂದು ಪ್ರಸಿದ್ಧಿ ಪಡೆದಿದೆ. ಸ್ವತಂತ್ರ ಧೀಶಕ್ತಿಯಿಂದ ಪ್ರವರ್ತಿತವಾದ ವಿಚಾರಧಾರೆಯು ನಾಸ್ತಿಕದರ್ಶನವೆಂದು ಗುರುತಿಸಲ್ಪಟ್ಟಿದೆ.

ಈ ಎಲ್ಲ ದರ್ಶನಗಳನ್ನು ಸರಿಯಾಗಿ ಅರಿತು ಅರಗಿಸಿಕೊಂಡು ಅವುಗಳಲ್ಲಿನ ಯುಕ್ತಾಯುಕ್ತತೆಯನ್ನು ಸಮರ್ಪಕವಾಗಿ ಪರಿಶೀಲಿಸುವ ಪ್ರಯತ್ನ ಕಠಿಣವಾದದ್ದು. ಇದರಲ್ಲಿ ಸಂಪೂರ್ಣ ಯಶವನ್ನು ಪಡೆದ ಶಂಕರರು ಭಾರತೀಯರಿಗೆ ಪರಮಾರ್ಥ ಸಾಧನೆಯ ಪರಮೋಚ್ಚ ಮಾರ್ಗವನ್ನು ತೋರಿದ್ದರಿಂದ ಜಗದ್ಗುರುಗಳೆಂದೂ, ಆಚಾರ್ಯರೆಂದೂ, ಅದ್ವಿತೀಯ ಭಾಷ್ಯಕಾರರೆಂದೂ ಸಾರ್ಥಕವಾಗಿ ಗೌರವಿಸಲ್ಪಟ್ಟಿದ್ದಾರೆ.

ಈ ಎಲ್ಲ ದರ್ಶನಗಳೂ ಪರಮಾರ್ಥ ಸಾಧನೆಗೆ ಸಹಕಾರಿಗಳೇ. ಆದರೆ ಇತರ ದರ್ಶನಗಳ ಉಪಯುಕ್ತತೆಯು ಸೀಮಿತವಾಗಿದ್ದು, ವೇದಾಂತದರ್ಶನವು ಮಾತ್ರ ಪರಮಪುರುಷಾರ್ಥಕ್ಕೆ ಶ್ರೇಷ್ಠಸಾಧನವೆಂಬುದನ್ನು ಶ್ರುತಿ, ಸ್ಮೃತಿ, ಪುರಾಣ, ಇತಿಹಾಸಗಳಿಂದ ಶಂಕರರು ವಿಶದೀಕರಿಸಿದ್ದಾರೆ.

ವೇದಾಂತ ಸಿದ್ಧಾಂತವನ್ನು ಪ್ರತಿಪಾದಿಸುವ ಮಹತ್ತ್ವದ ಗ್ರಂಥಗಳೆಂದರೆ ಉಪನಿಷತ್ತು, ಬ್ರಹ್ಮಸೂತ್ರಗಳು ಹಾಗೂ ಭಗವದ್ಗೀತೆ. ಇವು ಪ್ರಸ್ಥಾನತ್ರಯವೆಂದು ಪ್ರಸಿದ್ಧವಾಗಿವೆ. ಉಪನಿಷತ್ತು ವೇದದ ಕೊನೆಯ ಭಾಗವಾದ್ದರಿಂದ ವೇದಾಂತವೆಂದೇ ಗುರುತಿಸಲ್ಪಟ್ಟಿದೆ. ನಿಗೂಢವಾದ ಆತ್ಮಾನುಭವವನ್ನು ಅತ್ಯಂತ ಸಂಕ್ಷಿಪ್ತವಾಗಿ ವಿವರಿಸುವ ಇವುಗಳ ಶೈಲಿ ಸಾಮಾನ್ಯಮತಿಗಳಿಗೆ ಅರ್ಥವಾಗದಷ್ಟು ಗಂಭೀರವಾಗಿದೆ.

ಈ ಉಪನಿಷದ್ ರಹಸ್ಯಗಳನ್ನು ಪೂರ್ವಪಕ್ಷ-ಸಿದ್ಧಾಂತಗಳ ಮೂಲಕ ಪರಮ ನಿರ್ಣಾಯಕವಾಗಿ ತಿಳಿಸುವುದಕ್ಕಾಗಿ ಭಗವಾನ್ ಬಾದರಾಯಣರು ಬ್ರಹ್ಮಸೂತ್ರಗಳನ್ನು ರಚಿಸಿದರು. ಶಂಕರಭಗವತ್ಪಾದರು ಹೇಳಿದಂತೆ, ‘ವೇದಾಂತ ವಾಕ್ಯ ಕುಸುಮ ಗ್ರಥನಾರ್ಥತ್ವಾತ್ ಸೂತ್ರಾಣಾಂ’ ಎಂದರೆ ವೇದಾಂತದಲ್ಲಿ ಅಲ್ಲಲ್ಲಿ ಬಿಡಿಬಿಡಿಯಾಗಿರುವ ಹೂವುಗಳನ್ನು ಸಂಗ್ರಹಿಸಿ ಸುಂದರವಾದ ಮಾಲೆಯನ್ನು ಮಾಡಿದಂತೆ ಈ ಸೂತ್ರಗಳಿರುವವು. ಸೂತ್ರವೆಂದರೆ,

ಅಲ್ಪಾಕ್ಷರಮಸಂದಿಗ್ಧಂ ಸಾರವದ್ ವಿಶ್ವತೋಮುಖಮ್ |
ಅಸ್ತೋಭಮನವದ್ಯಂ ಚ ಸೂತ್ರಂ ಸೂತ್ರವಿದೋ ವಿದುಃ||”

ಇವುಗಳಲ್ಲಿ ಜೀವ, ಈಶ್ವರ, ಜಗತ್ತು, ಸಂಸಾರ, ಕರ್ಮ, ಬಂಧ, ಮೋಕ್ಷ- ಇತ್ಯಾದಿ ಮಹತ್ತ್ವದ ವಿಚಾರಗಳು ಪ್ರೌಢವಾಗಿ ಪ್ರತಿಪಾದಿತವಾಗಿವೆ. ಆದರೆ ಈ ಸೂತ್ರಗಳೂ ಕೂಡ ಅತ್ಯಂತ ಸಂಕ್ಷಿಪ್ತವಾಕ್ಯಗಳಿಂದ ಕೂಡಿದ್ದು ಭಾಷ್ಯದ ಸಹಾಯವಿಲ್ಲದೆ ವಿದ್ವಾಂಸರಿಗೂ ಕೂಡ ತಿಳಿದುಕೊಳ್ಳುವುದು ಕ್ಲಿಷ್ಟವಾಗಿದೆ.

 ಇದರಂತೆ ಭಗವದ್ಗೀತೆಯೂ ಕೂಡ ಉಪನಿಷತ್ತುಗಳೆಂಬ ಗೋವಿನ ಸಾರಭೂತವಾದ ಕ್ಷೀರದಂತೆ ಗಂಭೀರಾರ್ಥ ಪ್ರತಿಪಾದಕವಾಗಿದೆ. ಸಾಮಾನ್ಯ ಜನತೆಗೆ ಆಪಾತತಃ ಕೆಲವು ವಿರೋಧಗಳು ಕಂಡುಬರುವುದರಿಂದಲೂ ಸಕೃದ್ ದರ್ಶನಕ್ಕೆ ಇವುಗಳ ಅರ್ಥವು ದುರವಗಾಹ್ಯವಾದ್ದರಿಂದಲೂ ಶಂಕರಭಗವತ್ಪಾದರು ಲೋಕಹಿತಕ್ಕಾಗಿ ಈ ಪ್ರಸ್ಥಾನತ್ರಯಕ್ಕೆ ಪ್ರಸನ್ನಗಂಭೀರ ಶೈಲಿಯಲ್ಲಿ ಭಾಷ್ಯವನ್ನು ರಚಿಸಿ ಸಮಗ್ರ ವೇದಾಂತ ದರ್ಶನದಲ್ಲಿ ಏಕವಾಕ್ಯತೆಯನ್ನು ತೋರಿಸಿ ಭಾಷ್ಯದ ರಚನೆ ಮಾಡಿದ್ದಾರೆ.

ಅವರ ಭಾಷ್ಯ ವೈಖರಿಯು ಅತ್ಯಂತ ಉಪಾದೇಯವೂ, ಅರ್ಥಗರ್ಭಿತವೂ ಆಗಿದ್ದು, ‘ನ ಭೂತೋ ನ ಭವಿಷ್ಯತಿ’ ಎಂಬಂತಿದೆ. ಆಚಾರ್ಯರ ಭಾಷ್ಯದಿಂದಾಗಿ ಭಾರತೀಯ ವೇದಾಂತವು ಸರ್ವಜನಮಾನ್ಯವಾದ್ದರಿಂದ ಸಂಸ್ಕೃತ ಸಾಹಿತ್ಯದ ಪ್ರಸಿದ್ಧ ಭಾಷ್ಯತ್ರಯದಲ್ಲಿ (ಪಾತಂಜಲ, ಶಾಬರ, ಶಾಂಕರ) ಶಾಂಕರಭಾಷ್ಯವು ಅಗ್ರಸ್ಥಾನವನ್ನು ಪಡೆದಿದೆ.

ಸೂತ್ರಕಾರರ ಆಶಯಕ್ಕೆ ಸರಿಯಾಗಿ ಸೂತ್ರಗಳ ಅರ್ಥವನ್ನು ವಿವರಿಸುವ ಆ ವಿವರಣೆಯಲ್ಲಿಯ ವೈಶಿಷ್ಟ್ಯವನ್ನು ಶ್ರುತಿ-ಸ್ಮೃತಿಗಳ ಆಧಾರದಿಂದ ನಿರೂಪಿಸುವ ವ್ಯಾಖ್ಯಾನ ವಿಶೇಷವೇ ಭಾಷ್ಯವೆನಿಸುವುದು.

“ಸೂತ್ರಾರ್ಥೋ ವರ್ಣ್ಯತೇ ಯತ್ರ ಪದೈಃ ಸೂತ್ರಾನುಸಾರಿಭಿಃ |
ಸ್ವಪದಾನಿ ಚ ವರ್ಣ್ಯಂತೇ ಭಾಷ್ಯಂ ಭಾಷ್ಯವಿದೋ ವಿದುಃ ||”

ಇತರ ಶಾಸ್ತ್ರಗಳಲ್ಲಿ ನಿರ್ಧಿಷ್ಟ ನಿಯಮಗಳನ್ನು ಒಳಗೊಂಡ ವಿಷಯಗಳಿರುವುದರಿಂದ ಅವುಗಳ ಅರ್ಥಗಳನ್ನು ಸೂತ್ರಕಾರರ ಅಭಿಪ್ರಾಯದಂತೆ ವರ್ಣಿಸುವುದು ಸುಲಭವಾಗುವುದು. ವೇದಾಂತಸೂತ್ರಗಳ ವಿಷಯ ಹಾಗಲ್ಲ. ಅವು ಗಾಢವಾದ ಆತ್ಮಸಾಕ್ಷಾತ್ಕಾರರೂಪ ಅನುಭವಜನ್ಯವಾಗಿದ್ದು, ಇಲ್ಲಿ ಸಾಮಾನ್ಯಮತಿಗಳಿಗೆ ಭಿನ್ನಭಿನ್ನ ಭಾವಾರ್ಥಗಳು ತೋರುವುದು ಸಹಜವಾಗಿದೆ. ಇಂತಹ ಸಂಭಾವ್ಯ ಪೂರ್ವಪಕ್ಷಗಳನ್ನೆಲ್ಲ ಸಂಗ್ರಹಿಸಿ ಅವುಗಳ ಅಸಾರತೆಯನ್ನು ತಿಳಿಸಿ ಸೂತ್ರಕಾರರ ನಿಜವಾದ ಅಭಿಪ್ರಾಯವನ್ನು ನಿರೂಪಿಸುವುದು ಕೇವಲ ಸರ್ವಜ್ಞಕಲ್ಪನಿಗೆ ಮಾತ್ರ ಸಾಧ್ಯ.

“ಬ್ರಹ್ಮಸೂತ್ರಪದೈಶ್ಚೈವ ಹೇತುಮದ್ಭಿರ್ ವಿನಿಶ್ಚಿತೈಃ” ಎಂದು ಭಗವಂತನಿಂದ ಹೇಳಲ್ಪಟ್ಟ ಗಂಭೀರ ನಿಗೂಢಾರ್ಥವುಳ್ಳ ಬ್ರಹ್ಮಸೂತ್ರಗಳಿಗೆ ಭಾಷ್ಯ ಬರೆಯುವ ಅಸಾಮಾನ್ಯ ಕಾರ್ಯವು ಶಂಕರರಂತಹ ಧೀಮಂತರಿಗೆ ಮಾತ್ರ ಸಾಧ್ಯವಾಗುವಂತದು. ವೇದಾಂತಪ್ರಸ್ಥಾನತ್ರಯಕ್ಕೆ ಶಂಕರರಲ್ಲದೆ ರಾಮಾನುಜ, ಮಧ್ವ, ವಲ್ಲಭ, ನಿಂಬಾರ್ಕಾದಿ ಆಚಾರ್ಯರುಗಳು ಭಾಷ್ಯಗಳನ್ನು ರಚಿಸಿದ್ದಾರೆ. ಆದರೆ ಬ್ರಹ್ಮಸೂತ್ರಗಳ ಜೊತೆಗೆ ಸಂಪೂರ್ಣ ಭಗವದ್ಗೀತೆ, ಪ್ರಸಿದ್ಧವಾದ ದಶೋಪನಿಷತ್ತುಗಳಿಗೆ ಆದ್ಯಂತವಾಗಿ ಭಾಷ್ಯ ಬರೆದವರು ಶಂಕರರೊಬ್ಬರೇ ಆಗಿರುವುದರಿಂದ ಅವರು ಅದ್ವಿತೀಯ ಭಾಷ್ಯಕಾರರೆನಿಸಿದ್ದಾರೆ.

ಶಂಕರಭಗವತ್ಪಾದರು ಸಮಸ್ತವೇದಾಂತ ಪ್ರಸ್ಥಾನತ್ರಯಕ್ಕೆ ಭಾಷ್ಯ ಬರೆದಿದ್ದು ಅವರ ಭಾಷ್ಯ ಪ್ರಭಾವದಿಂದಾಗಿಯೇ ವೇದಾಂತ ತತ್ತ್ವವು ಇಡೀ ಭರತ ಖಂಡದಲ್ಲಿ ಅಜರಾಮರವಾಗಿದೆ. ಹಿಮವತ್ಪರ್ವತದ ಗಂಗಾನದಿಯು ಪ್ರವಹಿಸುವಂತೆ ಭಗವತ್ಪಾದರ ಭಾಷ್ಯವಾಹಿನಿಯು ಪ್ರಸನ್ನಗಂಭೀರವೂ ಪಾವನತಮವೂ ಆಗಿದೆ.

ಉಪಕ್ರಮ-ಉಪಸಂಹಾರ, ಅಭ್ಯಾಸ, ಅಪೂರ್ವತಾ, ಫಲ, ಅರ್ಥವಾದ, ಉಪಪತ್ತಿ- ಎಂಬ ಆರು ಅಂಶಗಳಿಂದಲೂ ಪರಿಪೂರ್ಣವಾದ ಆ ಭಾಷ್ಯವೈಖರಿಯನ್ನು ಅಭ್ಯಸಿಸುವುದೇ ಭಾಗ್ಯವಿಶೇಷವಾಗಿದೆ.

ಶಂಕರಭಾಷ್ಯದ ವೈಶಿಷ್ಟ್ಯಗಳನ್ನು ಎತ್ತಿ ತೋರಿಸುವ ಉದಾಹರಣೆಗಳನ್ನು ಆರಿಸುವುದೇ ಕಷ್ಟವಾಗುತ್ತದೆ. ಪ್ರಸ್ಥಾನತ್ರಯವಾಕ್ಯಗಳನ್ನು ಪದಶಃ, ವಾಕ್ಯಶಃ, ಅಭಿಪ್ರಾಯಶಃ ಅವರು ವಿವೇಚಿಸುವಾಗ ಎಲ್ಲವೂ ಚೇತೋಹರವೂ ನವನವೋನ್ಮೇಷಶಾಲಿಯೂ ಆಗಿ ಕಾಣುತ್ತದೆ. “ಒಂದರೊಲು ಒಂದಿಲ್ಲ, ಒಂದರೊಲು ಕುಂದಿಲ್ಲ” ಎಂಬ ಬೇಂದ್ರೆಯವರ ವರ್ಣನೆ ಆಚಾರ್ಯರ ಭಾಷ್ಯಪಂಕ್ತಿಗಳ ವಿಷಯಕ್ಕೆ ಸಾರ್ಥಕವೆನಿಸುತ್ತದೆ. “ಈಕ್ಷತೇರ್ನಾಶಬ್ಧಮ್” ಎಂಬ ಸೂತ್ರದ ಅಧಿಕರಣಾರಂಭದಲ್ಲಿ ಹಿಂದಿನ ನಾಲ್ಕೂ ಸೂತ್ರಗಳನ್ನೆಲ್ಲ ಅತ್ಯಂತ ಸಮರ್ಪಕವಾಗಿ ಸಂಗ್ರಹಿಸಿ ಮುಂದಿನ ದ್ವಿತೀಯಾಧ್ಯಾಯಸಾರವನ್ನು ಕೇವಲ ನಾಲ್ಕಾರು ವಾಕ್ಯಗಳಲ್ಲಿಯೇ ತಿಳಿಸುವ ಆ ವೈಶಿಷ್ಟ್ಯವನ್ನು ಭಾಷ್ಯವನ್ನು ಓದಿಯೇ ತಿಳಿಯಬೇಕು. ಅದರಂತೆ ಇಡೀ ಸಾಂಖ್ಯದರ್ಶನದ ಅಭಿಪ್ರಾಯವನ್ನು “ಸಾಂಖ್ಯದಯಸ್ತು ಪ್ರಧಾನಾದೀನಿ ಕಾರಣಾಂತರಾಣಿ ಅನುಮಿಮಾನಾಃ ತತ್ಪರ ತಯೈವ ವೇದಾಂತವಾಕ್ಯಾನಿ ಯೋಜಯಂತಿ” ಎಂಬಷ್ಟರಲ್ಲಿ ಸಂಗ್ರಹಿಸುತ್ತಾರೆ.

ಬೃಹದಾರಣ್ಯಕೋಪನಿಷತ್ತಿನ ಭಾಷ್ಯದಲ್ಲಿ ಪಾರಮಾರ್ಥಿಕ ಸತ್ಯತ್ವವನ್ನು ವಿವೇಚಿಸುವಾಗ ತಾರ್ಕಿಕಾದಿ ಸರ್ವಮತಗಳನ್ನು ವಿಮರ್ಶಿಸಿ ಸತ್ತಾತ್ರಯ ಪ್ರತಿಪಾದನೆಯನ್ನು ಮಾಡಿದ ರೀತಿಯು ಅನನ್ಯವೂ, ಅನನುಕರಣೀಯವೂ ಆಗಿದೆ.

“ಸರ್ವೋಪನಿಷದಾಂ ಪರಮಾತ್ಮೈಕತ್ವಜ್ಞಾಪನಪರತ್ವೇ ಅಥ ಕಿಮರ್ಥಂ ತತ್ಪ್ರತಿಕೂಲೋsರ್ಥೋ ವಿಜ್ಞಾನಾತ್ಮಭೇದಃ ಪರಿಕಲ್ಪಿತ ಇತಿ”- ಇಲ್ಲಿಂದ ಆರಂಭಿಸಿ ಅವರು ಮಾಡಿದ ಪ್ರತಿಪಾದನೆ ಅವರ ಸರ್ವಜ್ಞತ್ವದ ಸೂಚಕವಾಗಿದೆ.

ಛಾಂದೋಗ್ಯೋಪನಿಷದ್ ಭಾಷ್ಯದಲ್ಲಿ ಉದ್ಧಾಲಕ ಶ್ವೇತಕೇತು ಉಪದೇಶಸಂವಾದಪರವಾದ ಭಾಗವಂತೂ ಅತ್ಯಂತ ಪ್ರಸಿದ್ಧವಾಗಿದೆ. ಅದರ ನಿರೂಪಣ ಸ್ವಾರಸ್ಯವು ಕೇವಲ ಅನುಭವಗಮ್ಯವಾಗಿದೆ. ಕಠೋಪನಿಷತ್ತಿನಲ್ಲಿ ತತ್ತ್ವಜ್ಞಾನಿಯಾದ ಯಮಧರ್ಮನು ವಿವರಿಸಿದ ಜೀವ-ಪರಮಾತ್ಮಸ್ವರೂಪ ಹಾಗೂ ಐಕ್ಯಾನುಭವಗಳ ವಿವರವೂ ಅಷ್ಟೇ ಸ್ವಾರಸ್ಯಕರವಾಗಿದೆ.

ಹೀಗೆ ಶಂಕರಭಗವತ್ಪಾದರು ಜಗದ್ಗುರುಗಳೂ, ಆಚಾರ್ಯರೂ ಎಂದು ಗೌರವಿಸಲ್ಪಟ್ಟಿರುವುದರ ಜೊತೆಗೆ ಅದ್ವಿತೀಯ ಭಾಷ್ಯಕಾರರೆನಿಸಿರುವುದು ಸರ್ವಥಾ ಸಾರ್ಥಕವಾಗಿದೆ.

ಶ್ರುತಿಸ್ಮೃತಿ ಪುರಾಣಾನಾಮ್ |
ಆಲಯಂ ಕರುಣಾಲಯಮ್ |
ನಮಾಮಿ ಭಗವತ್ಪಾದಮ್ |
ಶಂಕರಂ ಲೋಕಶಂಕರಮ್||

~*~

Facebook Comments