ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಜ್ಞಾನಸುಮ 22:

ಸಾಂಖ್ಯ ದರ್ಶನ

          ವಿದ್ವಾನ್ ಸೂರ್ಯನಾರಾಯಣ ನಾಗೇಂದ್ರ ಭಟ್ಟ,

ಆರು ಆಸ್ತಿಕ ದರ್ಶನಗಳನ್ನು ಮೂರು ಜೋಡಿಗಳಾಗಿ ವಿಭಾಗಿಸುವುದುಂಟು. ನ್ಯಾಯ-ವೈಶೇಷಿಕ, ಸಾಂಖ್ಯ-ಯೋಗ ಮತ್ತು ಪೂರ್ವೋತ್ತರ ಮೀಮಾಂಸೆ- ಇವೇ ಆ ಮೂರು ಗುಂಪುಗಳು. ಇವುಗಳನ್ನು ಸಮಾನತಂತ್ರ ಎಂದೂ ಕರೆಯುವುದುಂಟು. ವಿಭಿನ್ನ ಸಿದ್ಧಾಂತಗಳಲ್ಲಿ ವಿಪ್ರತಿಪತ್ತಿಯಿರುವಾಗ ಸಮಾನತಂತ್ರವನ್ನು ಪ್ರಶಸ್ತವೆಂದು ಪರಿಗ್ರಹಿಸಲಾಗುತ್ತದೆ. ಈ ನ್ಯಾಯ-ವೈಶೀಷಿಕ ದರ್ಶನದ ಏಳು ಪದಾರ್ಥಗಳನ್ನೂ ಒಂದೇ ಶಾಸ್ತ್ರದ ಪರಿಧಿಯಲ್ಲಿ ನೋಡುವ ರೂಢಿಯಿದೆ. ಸಾಂಖ್ಯ-ದರ್ಶನದ ತತ್ತ್ವಗಳನ್ನು, ಯೋಗದರ್ಶನದ ಪ್ರಾಯೋಗಿಕ ವಿಧಾನವನ್ನೂ ಒಟ್ಟಿಗೆ ಸ್ವೀಕರಿಸಿ ನಿರೂಪಿಸುವುದುಂಟು. ಪೂರ್ವಮೀಮಾಂಸೆಯ ಪ್ರಮಾಣ ನಿರೂಪಣೆ ಉತ್ತರ ಮೀಮಾಂಸೆ ಅಥವಾ ವೇದಾಂತದಲ್ಲಿ ಗ್ರಾಹ್ಯವೆನ್ನಲಾಗಿದೆ. ಆದುದರಿಂದಲೇ “ವ್ಯವಹಾರೇ ಭಾಟ್ಟನಯಃ” ಎಂಬ ಉಕ್ತಿ ಪ್ರಸಿದ್ಧವಾಗಿದೆ. ಪ್ರಕೃತ ಈ ಲೇಖನದಲ್ಲಿ ಸಾಂಖ್ಯದರ್ಶನವನ್ನು ಕುರಿತು ಸಂಕ್ಷೇಪವಾಗಿ ನಿರೂಪಿಸಲಾಗಿದೆ.

ಸಂಖ್ಯಾ ಎಂಬ ಶಬ್ದದಿಂದ ಉತ್ಪನ್ನವಾಗಿರುವ ಸಾಂಖ್ಯಶಬ್ದವನ್ನು ಎರಡು ವಿಧವಾಗಿ ಅರ್ಥೈಸಲಾಗಿದೆ. ಒಂದು, ಸಮ್ಯಕ್ ಖ್ಯಾನ ಅಥವಾ ಪ್ರಕೃತಿ-ಪುರುಷರ ವಿವೇಕ ಜ್ಞಾನ, ಇನ್ನೊಂದು ೨೪ ತತ್ತ್ವಗಳ ಗಣನೆ. ಪ್ರಕೃತಿ ಮತ್ತು ಪುರುಷರು ಬೇರೆ ಎಂಬ ಜ್ಞಾನವು ಯಾವ ದರ್ಶನದಲ್ಲಿ ನಿರೂಪಿತವಾಗಿದೆಯೋ ಅದು ಸಾಂಖ್ಯವೆಂದು ಒಂದು ಅರ್ಥವಾದರೆ, ಪ್ರಕೃತಿ-ಪ್ರಕೃತಿ ವಿಕೃತಿ-ವಿಕೃತಿ ಮತ್ತು ಅನುಭಯ ಎಂದು ೪ ವರ್ಗಗಳಲ್ಲಿ ವಿಂಗಡಿಸುವ ೨೫ ತತ್ತ್ವಗಳನ್ನು ಗಣನೆ ಮಾಡುವ ದರ್ಶನವೆಂದು ಇನ್ನೊಂದು ಅರ್ಥ. ಇತಿಹಾಸ-ಪುರಾಣಗಳಲ್ಲಿ ಎಲ್ಲೆಲ್ಲಿಯೂ ಸಾಂಖ್ಯದರ್ಶನದ ಉಲ್ಲೇಖವನ್ನು ಕಾಣಬಹುದು.

ಉದಾಹರಣೆಗಾಗಿ, ಇತಿಹಾಸವೆಂದು ಪ್ರಸಿದ್ಧವಾದ ಶ್ರೀಮನ್ಮಹಾಭಾರತದಲ್ಲಿ ಸಾಂಖ್ಯವನ್ನೂ ಅದಕ್ಕೆ ಅನುಕೂಲವಾದ ಯೋಗವನ್ನೂ ಉಲ್ಲೇಖಿಸಿ ಸಾಂಖ್ಯವನ್ನು ಪ್ರಶಂಸಿಸಲಾಗಿದೆ-

“ನಾಸ್ತಿ ಸಾಂಖ್ಯಸಮಂ ಜ್ಞಾನಂ
ನಾಸ್ತಿ ಯೋಗಸಮಂ ಬಲಮ್  |
ಅತ್ರ ವಃ ಸಂಶಯೋ ಮಾ ಭೂತ್
ಜ್ಞಾನಂ ಸಾಂಖ್ಯಂ ಪರಂ ಸ್ಮೃತಮ್ ||

(ಸಾಂಖ್ಯಕ್ಕೆ ಸಮವಾದ ಜ್ಞಾನವಿಲ್ಲ. ಯೋಗಕ್ಕೆ ಸಮವಾದ ಬಲವಿಲ್ಲ. ಈ ವಿಷಯದಲ್ಲಿ ನಿಮಗೆ ಸಂಶಯ ಬೇಡ. ಸಾಂಖ್ಯವು ಶ್ರೇಷ್ಠವಾದ ಜ್ಞಾನವೆಂದು ಸ್ಮೃತವಾಗಿದೆ)

ಇದರಂತೆ ಗೀತೆಯಲ್ಲಿ ಬರುವ “ಸಾಂಖ್ಯಯೋಗೌ ಪೃಥಗ್ ಬಾಲಾಃ ಪ್ರವದಂತಿ ನ ಪಂಡಿತಾಃ”ಎಂಬ ಶ್ಲೋಕವನ್ನು ಉದಾಹರಿಸಬಹುದು. ಸಾಂಖ್ಯವೂ ಯೋಗವೂ ಬೇರೆಯಲ್ಲ. ಅದು ಬೇರೆಯೆಂದು ಅಜ್ಞರು ಹೇಳಬಹುದು. ಪಂಡಿತರು ಅರ್ಥಾತ್ ತತ್ತ್ವವಿದರು ಹಾಗೆ ಹೇಳಲಾರದು. ಇದರಿಂದ ಸಾಂಖ್ಯ-ಯೋಗಗಳಿಗೆ ಹಿಂದೆ ಅಪಾರವಾದ ಮನ್ನಣೆಯಿತ್ತು ಎಂದು ಊಹಿಸಬಹುದು.

ಆಚಾರ್ಯ ಶಂಕರರು ಸಾಂಖ್ಯರನ್ನು ಪ್ರಧಾನಮಲ್ಲರೆಂದು ಗುರುತಿಸಿದ್ದಾರೆ. ತಮ್ಮ ಬ್ರಹ್ಮಸೂತ್ರ ಭಾಷ್ಯದಲ್ಲಿ ಅವರು ಹಲವು ಸೂತ್ರಗಳಿಗೆ ವ್ಯಾಖ್ಯಾನವನ್ನು ಮಾಡುವಾಗ ಸಾಂಖ್ಯರನ್ನು ಕಟುವಾಗಿಟೀಕಿಸಿದ್ದಾರೆ (೧.೧.೫)ಅವರನ್ನು ಖಂಡನೆ ಮಾಡಿದ್ದಾರೆ, ಇತರ  ದಾರ್ಶನಿಕರನ್ನು ಖಂಡಿಸಿದಂತೇಯೇ ಎಂದು ಭಗವತ್ಪಾದರು ತಿಳಿಸುತ್ತಾರೆ. ಸೂತ್ರದಲ್ಲಿಯೇ “ಏತೇನ ಸರ್ವೇ ವ್ಯಾಖ್ಯಾತಾಃ…, ಎಂದು ನೈಯಾಯಿಕ ಮುಂತಾದವರ ಖಂಡನೆ ಮಾಡಿದಂತೆಯೇ ಆಯಿತು ಎಂಬ ಸೂಚನೆಯಿದೆ. ನ್ಯಾಯ-ವೈಶೇಷಿಕಗಳನ್ನು ಅಲ್ಲಿ “ಶಿಷ್ಟಾಪರಿಗ್ರಹ” ಅಂದರೆ ಶಿಷ್ಟರು ಸ್ವೀಕರಿಸದಿರುವ ದರ್ಶನಗಳೆನ್ನಲಾಗಿದೆ. ಇದರಿಂದಲೇ ಸಾಂಖ್ಯಯೋಗಗಳನ್ನು ಶಿಷ್ಟರು ಪುರುಸ್ಕರಿಸಿದ್ದರೆಂಬ ಅಂಶವು ಬೆಳಕಿಗೆ ಬರುತ್ತದೆ. ಶ್ರೀಶಂಕರರೂ ಅದನ್ನು ತಮ್ಮ ಸ್ಪಷ್ಟವಾದ ಮಾತುಗಳಲ್ಲಿ ಹೇಳಿದ್ದಾರೆ (ಅಧ್ಯಾಯ ೨, ಪಾದ೧, ಅಧಿಕರಣ೧ ಮತ್ತು ಅಧ್ಯಾಯ ೨, ಪಾದ೨, ಅಧಿಕರಣ ೧)

ಕಪಿಲ ಮಹರ್ಷಿ ಸಾಂಖ್ಯದರ್ಶನದ ಪ್ರಪ್ರಥಮ ಆಚಾರ್ಯನೆಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. “ಋಷಿಂ ಪ್ರಸೂತಂ ಕಪಿಲಂ ಯಸ್ತಮಗ್ರೇ ಜ್ಞಾನೈರ್ಬಿಭರ್ತಿ ಜಾಯಮಾನಂ ಚ ಪಶ್ಯೇತ್” ಎಂಬ ಶ್ರುತಿಯೂ ಕಪಿಲ ಮಹರ್ಷಿಯ ಸರ್ವಜ್ಞತ್ವವನ್ನು ಕೊಂಡಾಡುತ್ತದೆ. ಅವನ ಗ್ರಂಥವು ಈಗ ಉಪಲಬ್ದವಾಗಿಲ್ಲವಾದರೂ, ಅವನ ಶಿಷ್ಯನು ಆಸುರಿಯೆಂದೂ, ಆಸುರಿಯ ಶಿಷ್ಯನು ಪಂಚಶಿಖನೆಂದೂ ಹೇಳಲಾಗಿದೆ.

ಕಪಿಲಾಯ ಮಹಾಮುನಯೇ ಮುನಯೇ
ಶಿಷ್ಯಾಯ ತಸ್ಯ ಚಾಸುರಯೇ
ಪಂಚಶಿಖಾಯ ತಥೇಶ್ವರ
ಕೃಷ್ಣಾಯೈತೇ ನಮಸ್ಯಾಮಃ ||

-ತತ್ತ್ವಕೌಮುದೀ ಶ್ಲೋಕ 2

ಸಾಂಖ್ಯ ದರ್ಶನದ ಈ ಆಚಾರ್ಯರು ಹೇಳಿದ ತತ್ತ್ವವಿವರಣೆ ‘ಷಷ್ಟಿತಂತ್ರ’ಎಂಬ ಗ್ರಂಥದಲ್ಲಿ ಸಂಗ್ರಹವಾಗಿ ದೊರೆಯುತ್ತಿತ್ತು. ಅದನ್ನು ಈಶ್ವರ ಕೃಷ್ಣನು ಸಾಂಖ್ಯಕಾರಿಕೆಯಲ್ಲಿ ಸಂಕ್ಷೇಪವಾಗಿ 70 ಕಾರಿಕೆ-ಆರ್ಯೆಗಳಲ್ಲಿ ತಿಳಿಸುತ್ತಾನೆ-

“ಸಪ್ತತ್ಯಾಂ ಕಿಲ ಯೇsಥಾಸ್ತೇರ್ಥಾಃ ಕೃತ್ಸ್ನಸ್ಯ ಷಷ್ಟಿತಂತ್ರಸ್ಯ” ಎಂದು ಸಾಂಖ್ಯಕಾರಿಕೆಯಲ್ಲಿದೆ. ಆಧುನಿಕ ಕಾಲದಲ್ಲಿ ಸಾಂಖ್ಯ ದರ್ಶನವೆಂದರೆ, ಸಾಂಖ್ಯಕಾರಿಕೆ ಮತ್ತು ಅದರ ಮೇಲಿನ ವ್ಯಾಖ್ಯಾನಗಳೇ ಆಗಿವೆ. ಸಾಂಖ್ಯಸೂತ್ರ ಮತ್ತು ಭಾಷ್ಯ ಪ್ರಸಿದ್ಧವಾಗಿದ್ದರೂ ಅವುಗಳಿಗೆ ಕಾರಿಕೆಗಳಿಗೆ ಇರುವ ಮಹತ್ತ್ವವಿಲ್ಲವಂತೆ! ಆಚಾರ್ಯ ಶಂಕರರು ಸೂತ್ರಗಳನ್ನು ಉಲ್ಲೇಖಿಸದಿರುವುದು ಗಮನಾರ್ಹವಾಗಿದೆ.

ಪ್ರಕೃತಿಯಿಂದ ಮಹತ್ತತ್ವವೂ, ಮಹತ್ ಅಥವಾ ಬುದ್ಧಿಯಿಂದ ಅಹಂಕಾರವೂ ಅಹಂಕಾರದಿಂದ ಪಂಚ-ಜ್ಞಾನೇಂದ್ರಿಯಗಳೂ ಪಂಚ ಕರ್ಮೇಂದ್ರಿಯಗಳೂ, ಪಂಚತನ್ಮಾತ್ರೆಗಳೂ ಮನಸ್ಸೂ ಜನಿಸಿದವು. ಪಂಚ-ತನ್ಮಾತ್ರೆಗಳಿಂದ ಪೃಥಿವಿ, ಜಲ, ತೇಜಸ್ಸು, ವಾಯು, ಆಕಾಶ ಎಂಬ ಐದು ಭೂತಗಳು ಹುಟ್ಟಿದವು. ಹೀಗೆ ಪ್ರಕೃತಿ ಮತ್ತು ಅದರ ವಿಕಾರಗಳು ಒಟ್ಟಿಗೆ ೨೪. ಇದನ್ನು ಕಾರಿಕೆಯಲ್ಲಿ ಹೀಗೆ ಸಂಗ್ರಹಿಸಲಾಗಿದೆ-

“ಪ್ರಕೃತೇರ್ಮಹಾಂಸ್ತತೋsಹಂಕಾರಸ್ತಸ್ಮಾದ್ ಗಣಶ್ಚ ಷೋಡಶಕಃ |
ತಸ್ಮಾದಪಿ ಷೋಡಶಕಾತ್ ಪಂಚಭ್ಯಃ ಪಂಚ-ಭೂತಾನಿ||

ಇದರಿಂದ ಮೊದಲ ಮೂರು ವರ್ಗಗಳನ್ನು ನಿರೂಪಿಸಿದಂತಾಗುತ್ತದೆ. ಮೂಲ ಪ್ರಕೃತಿಯು ಕೇವಲ ಪ್ರಕೃತಿ. ಮಹಾನ್, ಅಹಂಕಾರ ಮತ್ತು ಐದು ತನ್ಮಾತ್ರೆಗಳು- ಈ ಏಳು ಪ್ರಕೃತಿ- ವಿಕೃತಿಗಳು. ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಐದು ಮಹಾಭೂತಗಳು ಮತ್ತು ಮನಸ್ಸು -ಈ ಹದಿನಾರು ತತ್ತ್ವಗಳು ಕೇವಲ ವಿಕೃತಿಗಳು. ಈ ಮೂರರಲ್ಲಿಯೂ ಸೇರದವನು ಪುರುಷ. ಪ್ರಕೃತಿ ಮತ್ತು ಪ್ರಾಕೃತ ತತ್ತ್ವಗಳು ಒಟ್ಟಿಗೆ ೨೪ ಆಗುವುದರಿಂದ ಪುರುಷನು ೨೫ ನೇ ತತ್ತ್ವವೆನ್ನಬೇಕಾಗುತ್ತದೆ. ಇದರಿಂದ, “ಸಾಂಖ್ಯರು ೨೪ ತತ್ತ್ವಗಳನ್ನು ಸ್ವೀಕರಿಸುತ್ತಾರೆ”ಎಂಬ ಪ್ರಸಿದ್ಧಿಗೆ ಜಡತತ್ತ್ವಗಳ ಒಟ್ಟು ಸಂಖ್ಯೆಯೇ ಕಾರಣ. ಚೇತನ ಅಥವಾ ಪುರುಷ ತತ್ತ್ವವನ್ನೂ ಸೇರಿಸಿದರೆ, ಒಟ್ಟು ೨೫ ತತ್ತ್ವಗಳಾಗುತ್ತವೆ. ಈ ತತ್ತ್ವಗಳನ್ನು ತಿಳಿದವನು ಮುಕ್ತನಾಗುತ್ತಾನೆ ಎಂದು ಮಹಾಭಾರತದಲ್ಲಿ ತಿಳಿಸಿದೆ-

“ಪಂಚವಿಂಶತಿತತ್ತ್ವಜ್ಞೋ ಯತ್ರ ಕುತ್ರಾಶ್ರಮೇ ವಸೇತ್|
ಜಟೀ ಮುಂಡೀ ಶಿಖೀ ವಾಪಿ ಮುಚ್ಯತೇ ನಾತ್ರ ಸಂಶಯಃ”||

(೨೫ ತತ್ತ್ವಗಳನ್ನು ತಿಳಿದವನು ಯಾವುದೇ ಆಶ್ರಮದಲ್ಲಿರಲಿ, ವಾನಪ್ರಸ್ಥನಾಗಲಿ ಸಂನ್ಯಾಸಿಯಾಗಲಿ ಅಥವಾ ಬ್ರಹ್ಮಚಾರಿಯೋ, ಗೃಹಸ್ಥನೋ ಆಗಿರಲಿ, ಅವನು ಮೋಕ್ಷವನ್ನು ಪಡೆಯುತ್ತಾನೆ ಎಂಬ ಬಗ್ಗೆ ಸಂಶಯಬೇಡ).

ಸಾಂಖ್ಯರು ಈಶ್ವರ ಅಥವಾ ಪರಮಾತ್ಮನನ್ನು ಸ್ವೀಕರಿಸುವುದಿಲ್ಲವೆಂದೂ ಅವರು ಮೀಮಾಂಸಕರಂತೆ ನಿರೀಶ್ವರ ವಾದಿಗಳೆಂದೂ ಪ್ರಸಿದ್ಧಿಯಿದೆ. ಯೋಗದರ್ಶನದಲ್ಲಿ ಈಶ್ವರನನ್ನು ಉಲ್ಲೇಖಿಸಿರುವುದರಿಂದ ಅದು ಸೇಶ್ವರದರ್ಶನ ಎಂದು ಹೇಳುವುದುಂಟು ಆದರೆ “ಸೇಶ್ವರ ಸಾಂಖ್ಯ”ಎಂಬ ಒಂದು ದರ್ಶನವೂ ಇರುವುದನ್ನು ಗಮನಿಸಿದರೆ, ಸಾಂಖ್ಯರು ನಿರೀಶ್ವರರೇ ಎಂದು ಖಚಿತವಾಗಿ ಹೇಳಲಾಗದು. ಸೇಶ್ವರ ಸಾಂಖ್ಯ ದರ್ಶನದಲ್ಲಿ ಯೋಗದರ್ಶನದಂತೆ ೨೬ ತತ್ತ್ವಗಳು ! ಈಶ್ವರನೂ ಪುರುಷತತ್ತ್ವದಲ್ಲಿಯೇ ಅಂತರ್ಭಾವವನ್ನು ಹೊಂದುವುದಾದರೆ, ಹಾಗೆ ವಾದಿಸುವ ಪಕ್ಷದಲ್ಲಿ ೨೫ ತತ್ತ್ವಗಳು. ತತ್ತ್ವಜ್ಞಾನವನ್ನು ಪಡೆಯುವ ಪುರುಷನನ್ನು ಹೊರತು ಪಡಿಸಿದರೆ ಉಳಿಯುವುದು ಜಡತತ್ತ್ವ ಮಾತ್ರ. ಅವುಗಳ ಸಂಖ್ಯೆ ೨೪ ಎಂದು ಹಿಂದೆಯೇ ತಿಳಿಸಿದೆ.

ಪ್ರಕೃತಿ ತ್ರಿಗುಣಾತ್ಮಕವಾದುದು ಅಂದರೆ ಸತ್ತ್ವ-ರಜಸ್ತಮೋಗುಣಗಳ ಸಾಮ್ಯಾವಸ್ಥೆ. ಪುರುಷನು ನಿರ್ಗುಣನಾದರೂ, ಪ್ರಕೃತಿಯ ಅಥವಾ ಪ್ರಾಕೃತ ಸಂಬಂಧದಿಂದ ಅವನಲ್ಲಿ ಗುಣಗಳು ಕಾಣುತ್ತವೆ. ಪ್ರಕೃತಿ ಪುರುಷರ ಸಂಬಂಧವನ್ನು ಸಾಂಖ್ಯರು ಕುರುಡ-ಕುಂಟರ ಮೇಲನದಂತೆ ಎಂದು ವರ್ಣಿಸುತ್ತಾರೆ. ಕುರುಡನು ನೋಡಲಾರನಾದರೂ ಹೋಗಬಲ್ಲನು. ಕುಂಟನು ಹೋಗಲಾರನಾದರೂ ನೋಡಬಲ್ಲನು. ಒಮ್ಮೆ ಒಬ್ಬ ಕುರುಡನು ಕುಂಟನನ್ನು ಹೆಗಲ ಮೇಲೆ ಏರಿಸಿಕೊಂಡು ಹೊರಟು ಕುಂಟನು ಹೇಳಿದಂತೆ ಹೋದನಂತೆ. ಆಗ ಇಬ್ಬರೂ ಸೇರಬೇಕಾದ ಸ್ಥಳವನ್ನು ಸೇರಿದರು! ಇಲ್ಲಿಯೂ ಹಾಗೆಯೇ. ಪುರುಷನು ಚೇತನನಾದರೂ ಕುಂಟನಂತೆ ಏನನ್ನೂ ಮಾಡಲಾರನು. ಪ್ರಕೃತಿಯು ಎಲ್ಲವನ್ನೂ ಮಾಡುವ ಸಾಮರ್ಥ್ಯವನ್ನು ಹೊಂದಿದ್ದರೂ ಜಡವಾಗಿರುವುದರಿಂದ ಏನನ್ನೂ ಕಾಣಲಾರದು. ಪ್ರಕೃತಿ ಮತ್ತು ಪುರುಷರ ಮೇಳನದಿಂದ ಮಹಾಭೂತಪರ್ಯಂತವಾದ ಸೃಷ್ಟಿಯಾಯಿತು. ಇದರಿಂದ ಪುರುಷನಿಗೆ ಭೋಗವುಂಟಾಗುತ್ತದೆ. ಭೋಗವೆಂದರೆ ಸುಖಃದುಖಃಗಳ ಅರಿವು.

ಪುರುಷನು ಭೋಗವನ್ನು ಪಡೆಯಲಿ ಎಂದು ಪ್ರಕೃತಿಯು ಅವನ ಸನ್ನಿಧಿಯಲ್ಲಿ ಸಮಸ್ತ ಪ್ರಪಂಚವನ್ನೂ ಸೃಷ್ಟಿಸುತ್ತದೆ. ಅವನ ಭೋಗವು ಪೂರೈಸಿದ ಮೇಲೆ ಅದು ಸುಮ್ಮನಾಗುತ್ತದೆ. ನಟಿಯೊಬ್ಬಳು ರಂಗಮಂಚದ ಮೇಲೆ  ಬಂದು ಹಾವ-ಭಾವಗಳಿಂದಲೂ, ಲೀಲಾ-ವಿಲಾಸಗಳಿಂದಲೂ, ಸುಕುಮಾರ ಸೌಂದರ್ಯದಿಂದಲೂ ಪ್ರೇಕ್ಷಕರನ್ನು ರಂಜಿಸುವಂತೆ ಈ ಪ್ರಕೃತಿಯ ನಾಟಕವು ನಡೆಯುತ್ತದೆ. ರಾತ್ರಿಯೆಲ್ಲಾ ಕಳೆಯುವವರೆಗೂ ಅದು ಮುಂದುವರೆಯುತ್ತದೆ. ಅದರಲ್ಲಿ ತನ್ಮಯತೆಯಿಂದ ನೋಡುವವನು ಎಲ್ಲವನ್ನೂ ಮರೆಯುತ್ತಾನೆ. ವಿವೇಕ-ವಿಜ್ಞಾನವೆಂಬ ಅರುಣೋದಯವಾದ ಕೂಡಲೇ ನಾಟಕವು ಮುಗಿಯುತ್ತದೆ! ಆಗ  ಪ್ರಪಂಚವೂ ಇಲ್ಲ, ಪ್ರಕೃತಿಯೂ ಇಲ್ಲ, ಪುರುಷನೊಬ್ಬನೇ ತನ್ನ ಸ್ವರೂಪದಲ್ಲಿ ಸ್ವಚ್ಛವಾಗಿ ಬೆಳಗುತ್ತಾನೆ.

ಪುರುಷನ ಭೋಗಕ್ಕಾಗಿ ಪ್ರಪಂಚವನ್ನು ಸೃಷ್ಟಿಸುವ ಪ್ರಕೃತಿಯು ಅದನ್ನು ನಿಲ್ಲಿಸುವುದಾದರೂ ಹೇಗೆ? ಪ್ರಕೃತಿಯು ಅತ್ಯಂತ ಕೋಮಲ ಸ್ವಭಾವಯುಕ್ತವಾಗಿ ಲಜ್ಜಾವತಿಯಾದ ಕುಲವಧೂಗಿಂತಲೂ ಹೆಚ್ಚು. ವಿವೇಕೋದಯವಾದ ಮೇಲೆ ಪುರುಷನು ಪರಪುರುಷನಿಗೆ ಸಮಾನನಾಗುತ್ತಾನೆ. ಪರಪುರುಷ ದರ್ಶನದಿಂದ ಕುಲವಧುವು ದೂರ ಸರಿಯುವಂತೆ ವಿವೇಕವು ಉಂಟಾದ ಮೇಲೆ ಪ್ರಕೃತಿಯು ಮತ್ತೆ ಪ್ರವರ್ತಿಸುವುದಿಲ್ಲ. ಇದೇ ಮೋಕ್ಷ ಅಥವಾ ಕೈವಲ್ಯ.

ಅಚೇತನವಾದ ಪ್ರಕೃತಿಯು ತಾನಾಗಿಯೇ ಪ್ರಪಂಚವಾಗಿ ಪರಿಣಾಮ ಹೊಂದಿ ಪುರುಷನಿಗೆ ಭೋಗವನ್ನೂ, ವಿವೇಕದಿಂದ ಮೋಕ್ಷವನ್ನೂ ಕೊಡುವುದಾದರೂ  ಹೇಗೆ? ಎಂಬ ಪ್ರಶ್ನೆಯೇಳುವುದು ಸಹಜವೇ ಆಗಿದೆ. ಇದಕ್ಕೆ ಸಾಂಖ್ಯರು ಹಸು ಮತ್ತು ಕರುವಿನ ದೃಷ್ಟಾಂತವನ್ನು ಕೊಡುತ್ತಾರೆ. ಕರುವಿನ ಆಹಾರಕ್ಕಾಗಿ ಹಾಲು ತಾನಾಗಿಯೇ ಉಂಟಾಗುವುದು. ಅದರಂತೆ ಅಚೇತನವಾದರೂ ಪ್ರಕೃತಿಯು ಪುರುಷನ ಪ್ರಯೋಜನಕ್ಕಾಗಿ (ಮೋಕ್ಷಕ್ಕಾಗಿ) ಪ್ರವರ್ತಿಸುತ್ತದೆ.

ಸಾಂಖ್ಯರು ಪರಿಣಾಮವಾದ ಮತ್ತು ಸತ್ಕಾರ್ಯವಾದವನ್ನು ಬಲವಾಗಿ ಪ್ರತಿಪಾದಿಸುತ್ತಾರೆ. ಹಾಲು ಮೊಸರಾಗುವಂತೆ ಪ್ರಕೃತಿಯೇ ಪ್ರಾಕೃತ ಪ್ರಪಂಚವಾಗುತ್ತದೆ. ತಿಲದಲ್ಲಿರುವ ತೈಲವನ್ನು ಪಡೆಯುವಂತೆ, ಕಬ್ಬಿನಲ್ಲಿರುವ ರಸವನ್ನು ಹಿಂಡುವಂತೆ, ಕೆಚ್ಚಲಿನಲ್ಲಿರುವ ಹಾಲನ್ನು ಪಾತ್ರೆಯಲ್ಲಿ ತುಂಬಿಕೊಳ್ಳುವಂತೆ, ಇರುವ ವಸ್ತುವಿನ ಅಭಿವ್ಯಕ್ತಿಯೇ ಕಾರ್ಯ ಎಂಬ ಸಿದ್ಧಾಂತವನ್ನು ಅವರು ಮಂಡಿಸುತ್ತಾರೆ. ವೇದಾಂತಿಗಳು ಅವರನ್ನು ಬೇರೆಯ ವಿಷಯದಲ್ಲಿ, ಪ್ರಪಂಚವು ಪ್ರಕೃತಿಯ ಸ್ವಾತಂತ್ರ್ಯದಿಂದ ಬಂದುದಲ್ಲ ಎಂದು ಖಂಡಿಸಿದರೂ, ಪರಿಣಾಮವಾದವನ್ನೂ ಪ್ರಕೃತಿ ಅಥವಾ ಮಾಯೆಯ ಪಾತ್ರವನ್ನೂ ಒಪ್ಪಿಕೊಳ್ಳಲೇಬೇಕಾಗಿದೆ.

ಹೀಗೆ ದರ್ಶನದ ಪ್ರಪಂಚದಲ್ಲಿ ಪ್ರಧಾನಮಲ್ಲರಾಗಿ ಮೆರೆದ ಸಾಂಖ್ಯರು ಕಾಲವು ಕಳೆದಂತೆ ತಮ್ಮ ಸ್ಥಾನವನ್ನು ಮೀಮಾಂಸಕರಿಗೂ, ಅದರಲ್ಲಿಯೂ ವಿಶೇಷವಾಗಿ ವೇದಾಂತಿಗಳಿಗೂ ಬಿಟ್ಟುಕೊಡಬೇಕಾಗಿ ಬಂದು, ಸಂಪೂರ್ಣವಾಗಿ ಉಪೇಕ್ಷಿತರ ಸಾಲಿಗೆ ಸೇರಿದ್ದಾರೆ. ಆದರೆ ಸಾಂಖ್ಯದರ್ಶನದ ಜ್ಞಾನವಿಲ್ಲದೆ, ಭಾರತೀಯ ದರ್ಶನಗಳ ಅಧ್ಯಯನವು ಪೂರ್ಣವಾಗುವುದಿಲ್ಲ, ಎಂಬ ಸತ್ಯವನ್ನು ಎಲ್ಲರೂ ಸ್ವೀಕರಿಸಲೇ ಬೇಕಾಗಿದೆ.

 

   ||ಶ್ರೀ ಗುರುಃ ಶರಣಂ||

ಶ್ರೀಃ

~*~

Facebook Comments