ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಜ್ಞಾನಸುಮ 34:

ಗೋತ್ರಪ್ರವರಗಳ ಸಂರಕ್ಷಣೆ 

ಪುರೋಹಿತ ಶ್ರೀ ಮಂಜುನಾಥ ಭಟ್ಟ

“ಜಂತೂನಾಂ ನರಜನ್ಮ ದುರ್ಲಭಮ್” ಎಂದು ಶಂಕರ ಭಗವತ್ಪಾದರು ಹೇಳಿದ್ದಾರೆ. ಎಂಬತ್ತನಾಲ್ಕು ಲಕ್ಷ ಜೀವಜಂತುಗಳಲ್ಲಿ ಮನುಷ್ಯ ಜನ್ಮವು ಅತ್ಯಂತ ದುರ್ಲಭವಾದುದು. ಎಷ್ಟೋ ಜನ್ಮಗಳ ಪುಣ್ಯ ವಿಶೇಷದಿಂದ ಮನುಷ್ಯ ಜನ್ಮವು ದೊರೆಯುತ್ತದೆ. ಅದರಲ್ಲೂ ಬ್ರಾಹ್ಮಣನಾಗಿ ಹುಟ್ಟಿ ವೈದಿಕ ಧರ್ಮ ಮಾರ್ಗದಲ್ಲಿ ನಡೆಯುವವನಾಗಿರಬೇಕು. ವೈದಿಕ ಮಾರ್ಗವೆಂದರೆ  ಶ್ರುತಿ-ಸ್ಮೃತಿಗಳಿಂದ ವಿಹಿತವಾದ ಕರ್ಮಾಚರಣೆ. ಪುರುಷಾರ್ಥ ಪ್ರಾಪ್ತಿಯೇ ಧರ್ಮಾಚರಣೆಯ ಗುರಿ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳೆಂದು ಪುರುಷಾರ್ಥಗಳು ನಾಲ್ಕು. ಧರ್ಮಾಚರಣೆಯಿಂದಲೇ ಅರ್ಥಕಾಮಗಳನ್ನು ಸಾಧಿಸಿ ಚಿತ್ತಶುದ್ಧಿಯನ್ನು ಪಡೆದು ಪರಮಪುರುಷಾರ್ಥವಾದ ಮೋಕ್ಷವನ್ನು ಸಾಧಿಸಬೇಕು.

ವೈದಿಕ ಧರ್ಮಾಚರಣೆಯ ಪರಂಪರೆಯಲ್ಲಿ ಗೋತ್ರಪ್ರವರಗಳ ವಿಚಾರವು ಅತ್ಯಂತ ಮಹತ್ತ್ವ ಪೂರ್ಣವಾಗಿದೆ. ಈಗಿನ ತಲೆಮಾರಿನಲ್ಲಿ ಎಷ್ಟೋ ಮಂದಿಗೆ ಗೋತ್ರಪ್ರವರಗಳ ಮಹತ್ತ್ವದ ಅರಿವು ಇಲ್ಲ. ಬ್ರಾಹ್ಮಣನು ಶಾಸ್ತ್ರವಿಹಿತವಾದ ಷಟ್ ಕರ್ಮಗಳನ್ನು ಆಚರಿಸಬೇಕು. ದೇವಯಜ್ಞ, ಪಿತೃಯಜ್ಞ, ಋಷಿಯಜ್ಞ, ಮನುಷ್ಯ ಯಜ್ಞ ಮತ್ತು ಭೂತಯಜ್ಞವೆಂಬ ಪಂಚಮಹಾಯಜ್ಞಗಳನ್ನು ಆಚರಿಸಬೇಕು. ಸಾಮಾನ್ಯ ಮತ್ತು ವಿಶೇಷ ಧರ್ಮಗಳನ್ನು ಅರಿತವನಾಗಿ ತನಗೆ ವಿಹಿತವಾದ ಧರ್ಮದ ಆಚರಣೆಯನ್ನು ಪ್ರಮಾದವಿಲ್ಲದೆ ಪಾಲಿಸಬೇಕು. ಸನಾತನಧರ್ಮ ಸಂರಕ್ಷಣೆಯಲ್ಲಿ ಗೋತ್ರ ಪ್ರವರಗಳ ಸಂರಕ್ಷಣೆಯು ಅತ್ಯಂತ ಮಹತ್ತ್ವ ಪೂರ್ಣವಾಗಿದೆ.

ಗೋತ್ರ ಶಬ್ದದ ಅರ್ಥ :
ಗವತೇ ಶಬ್ದಯತಿ ಪೂರ್ವಪುರುಷಾನ್ ಇತಿ ಗೋತ್ರಮ್. ವಂಶದ ಪೂರ್ವಪುರುಷರನ್ನು ಹೆಸರಿಸುವ ಶಬ್ದಕ್ಕೆ ಗೋತ್ರವೆಂದು ಹೆಸರು. ವಂಶ ಪರಂಪರೆಯಿಂದ ಪ್ರಸಿದ್ಧವಾದ ಆದಿಪುರುಷರೂಪವಾದ ಬ್ರಾಹ್ಮಣ ಸ್ವರೂಪವು ಇದಾಗಿದೆ.

ಪ್ರವರ ಎಂದರೆ ಒಂದು ಗುಂಪಾಗಿ ವರಿಸುವುದು ಎಂದು ಅರ್ಥ. ಇದು ಅತ್ಯಂತ ಪ್ರಾಚೀನ ಕಾಲದಲ್ಲಿ ಅಗ್ನಿಯ ಉಪಾಸನೆಯನ್ನು ನಿಮಿತ್ತವಾಗಿ ಮಾಡಿಕೊಂಡು ಪ್ರಚಾರದಲ್ಲಿತ್ತು. ಈಗ ಗೋತ್ರಪ್ರವರ್ತಕರಾದ ಋಷಿಗಳನ್ನು ಪ್ರತ್ಯೇಕವಾಗಿ ವರ್ಗೀಕರಿಸಿ ಪರಿಗಣಿಸುವ ಋಷಿ ಸಮೂಹ ಎಂಬ ಅರ್ಥದಲ್ಲಿ ಪ್ರಚುರವಾಗಿದೆ.

ಇಪ್ಪತ್ತನಾಲ್ಕು ಗೋತ್ರಗಳೆಂದು ಮನುವು ಹೇಳುತ್ತಾನೆ.

“ಜಮದಗ್ನಿರ್ಭರದ್ವಾಜೋ ವಿಶ್ವಾಮಿತ್ರಾತ್ರಿಗೌತಮಾಃ |
ವಸಿಷ್ಠಕಾಶ್ಯಪಾಗಸ್ತ್ಯಮುನಯೋ ಗೋತ್ರಕಾರಿಣಃ |”

ಎಂದು ಬೋಧಾಯನರೇ ಮೊದಲಾದ ಮಹರ್ಷಿಗಳು ಹೇಳಿದ್ದಾರೆ. ಅಗಸ್ತ್ಯರೂ ಸೇರಿ ಎಂಟು ಮಂದಿ ಗೋತ್ರ ಪ್ರವರ್ತಕ ಋಷಿಗಳಾಗಿದ್ದಾರೆ. ಈ ಮೂಲ ಪುರುಷರಾದ ಮಹರ್ಷಿಗಳ ಸಂತಾನಗಳೇ ಗೋತ್ರಗಳಾಗಿ ಬೆಳೆದವು. ಇದು ಉಪಲಕ್ಷಣ ಮಾತ್ರವಾದ್ದರಿಂದ ಇತರ ಗೋತ್ರಗಳೂ ಉಂಟು. ಧರ್ಮಪ್ರದೀಪದಲ್ಲಿ ನಲವತ್ತು ಗೋತ್ರಗಳು ಪರಿಗಣಿತವಾಗಿವೆ.

  ಗೋತ್ರಭೂತರಾದ ಋಷಿಗಳನ್ನೇ ವರಿಸಿ-ಅಂದರೆ ಪ್ರವರವಾಗಿ ಸ್ವೀಕರಿಸಿ ಅಗ್ನಿಯ ಉಪಾಸನೆಯನ್ನು ಋಷಿಕುಲವು ಬೆಳೆಸಿತು. ಅತ್ಯಂತ ಪ್ರಾಚೀನ ಕಾಲದಲ್ಲಿ ಎಂಬತ್ತೆಂಟುಸಾವಿರ ಮಂದಿ ಋಷಿಗಳು ವಿವಾಹ ಮಾಡಿಕೊಳ್ಳದೆ ಬ್ರಹ್ಮಚರ್ಯ ನಿಯಮವನ್ನು ಪಾಲಿಸಿದರು; ಎಂಟು ಮಂದಿ ಮಹರ್ಷಿಗಳು ಸೃಷ್ಟಿಕರ್ತನ ಸಂಕಲ್ಪದಂತೆ ವಿವಾಹಮಾಡಿಕೊಂಡು ಗೋತ್ರಪ್ರವರ್ತಕರಾದರು ಹೀಗೆ ಪತಂಜಲಿಯು ಮಹಾಭಾಷ್ಯದಲ್ಲಿ ಹೇಳಿದ್ದಾನೆ. ಇದು ಪ್ರಾಚೀನ ಕಥೆ. ಋಷಿಗಳ ಕಾಲ ಗೊತ್ತಿಲ್ಲ. ಆದ್ದರಿಂದಲೇ ನದೀಮೂಲವನ್ನೂ ಋಷಿಮೂಲವನ್ನೂ ಹುಡುಕಬಾರದೆಂದು ಹೇಳುವ ರೂಢಿಯಿದೆ.

“ಸಗೋತ್ರಾಯ ದುಹಿತರಂ ನ ಪ್ರಯಚ್ಛೇತ್”– ಅಂದರೆ ಸಮಾನ ಗೋತ್ರನಾದ ವರನಿಗೆ ಕನ್ಯೆಯನ್ನು ಕೊಡಬಾರದು ಎಂದು ಆಪಸ್ತಂಬ ಮುನಿಯು ಹೇಳುತ್ತಾನೆ.

“ಅಸಮಾನಪ್ರವರೈಃ ವಿವಾಹಃ”– ಅಂದರೆ ಸಮಾನ ಪ್ರವರವುಳ್ಳವರೊಡನೆ ವಿವಾಹ ಕೂಡದು ಎಂಬುದಾಗಿ ಗೌತಮ ಮುನಿಯು ಹೇಳುತ್ತಾನೆ. ಬೋಧಾಯನಾದಿ ಮಹರ್ಷಿಗಳು ಇದೇ ವಿಷಯವನ್ನು ಸಮರ್ಥಿಸುತ್ತಾರೆ.

“ಗೋತ್ರಾಣಾಂ ಚ ಸಹಸ್ರಾಣಿ ಪ್ರಯುತಾನ್ಯರ್ಬುದಾನಿ ಚ |
ಊನಪಂಚಾಶದೇತೇಷಾಂ ಪ್ರವರಾ ಋಷಿದರ್ಶನಾತ್ ||”

ಅಂದರೆ ಗೋತ್ರಗಳು ಅಸಂಖ್ಯಾತವಾಗಿವೆ. ಆದರೆ ಈ ಗೋತ್ರಗಳಿಗೆ ಸೇರಿದಂತೆ ನಲವತ್ತೊಂಬತ್ತು ಪ್ರವರಗಳನ್ನು ಋಷಿಗಳು ನಿಶ್ಚಯಿಸಿದ್ದಾರೆ ಎಂದು ತಾತ್ಪರ್ಯ. ಹೀಗೆ ಸೂತ್ರಕಾರರಾದ ಬೋಧಾಯನ ಮಹರ್ಷಿಗಳು ಹೇಳಿದ್ದಾರೆ. ಏಕಗೋತ್ರ ಹಾಗೂ ಏಕಪ್ರವರವು ವಿವಾಹಕ್ಕೆ ನಿಷಿದ್ಧವಾಗಿದೆ. ಧರ್ಮಶಾಸ್ತ್ರದಲ್ಲಿ ಇದಕ್ಕೆ ಕೆಲವು ಮಾತ್ರ ಅಪವಾದಗಳಿವೆ. ವಿವಾಹಾದಿಗಳಲ್ಲಿ ಗೋತ್ರ-ಪ್ರವರಗಳ ಪರಿಗಣನೆಯು ವೈಜ್ಞಾನಿಕವಾಗಿದೆ. ಧರ್ಮಸಾಧನೆಗೆ ಕ್ಷೇತ್ರವಾದ ಶರೀರವು ವಂಶಪರಂಪರೆಯಿಂದ ಶುದ್ಧವಾಗಿರಬೇಕು. ರಕ್ತ-ವೀರ್ಯಗಳ ಶುದ್ಧಿಯಿಂದ ದೇಹಶುದ್ಧಿ, ಸಂಸ್ಕಾರಶುದ್ಧಿ, ಬುದ್ಧಿಶುದ್ಧಿ, ತಪಸ್ಸಿದ್ಧಿ, ಆರೋಗ್ಯ ಸಂರಕ್ಷಣೆ, ವಂಶಪರಂಪರೆಯ ಸಂರಕ್ಷಣೆ-ಇತ್ಯಾದಿ ವಿಷಯಗಳಿಗೆ ಪೋಷಣೆಯಾಗುತ್ತದೆ. ಈಗ ವಿಜ್ಞಾನಕ್ಷೇತ್ರದಲ್ಲಿ ಸಾಕಷ್ಟು ಶೋಧನೆಗಳು ನಡೆಯುತ್ತಿವೆ. ಜೀನ್ ಸಿದ್ಧಾಂತವು ಬಹುಮಟ್ಟಿಗೆ ಗೋತ್ರಪ್ರವರ ಸಂರಕ್ಷಣೆಗೆ ಪೋಷಕವಾಗಿದೆಯೆಂದು ಹೇಳಬಹುದು. ಆಧುನಿಕ ವಿಜ್ಞಾನಿಗಳು ಗೋತ್ರಪ್ರವರ ಸಂರಕ್ಷಣೆಯ ಮಹತ್ತ್ವವನ್ನು ಈಗೀಗ ಪ್ರಶಂಸೆಮಾಡುತ್ತಿದ್ದಾರೆ. ಅತ್ಯಂತ ಪ್ರಾಚೀನ ಕಾಲದಿಂದಲೇ ನಮ್ಮ ಮಹರ್ಷಿಗಳು  ಗೋತ್ರಪ್ರವರ ಸಂರಕ್ಷಣೆಯು ವಂಶಶುದ್ಧಿಗೆ ಆವಶ್ಯಕವೆಂದು ಪರಿಗಣಿಸಿದ್ದಾರೆ. ವಿಜ್ಞಾನದ ಶೋಧನೆಯಿಂದ ಆರ್ಷಸಿದ್ಧಾಂತವು ಇನ್ನೂ ಅಧಿಕವಾಗಿ ಪುಷ್ಟಿಯನ್ನು ಹೊಂದುವುದು.

ವಿವಾಹಕರ್ಮ, ಋತ್ವಿಜರ ವರಣ, ಉಪನಯನ, ಪಿತೃಕರ್ಮ, ಅಭಿವಾದನ- ಮುಂತಾದ ಸಂದರ್ಭಗಳಲ್ಲಿ ಗೋತ್ರಪ್ರವರಗಳ ಕೀರ್ತನೆಯು ಧಾರ್ಮಿಕವಾಗಿ ವಿಹಿತವಾಗಿದೆ. ನಾಮ – ಗೋತ್ರ ಪ್ರವರ – ಸೂತ್ರಾದಿಗಳನ್ನು ಕೀರ್ತನೆ ಮಾಡುವುದು ತನ್ನ ವಂಶಾದಿಗಳ ನೆನಪನ್ನು ಮುಂದುವರಿಸಲು ಅತ್ಯಂತ ಉಪಯುಕ್ತವಾಗಿದೆ. ಇದಕ್ಕೆ ಧಾರ್ಮಿಕ ದೃಷ್ಟಿಯಿಂದಲೂ ವ್ಯಾವಹಾರಿಕ ದೃಷ್ಟಿಯಿಂದಲೂ ಮಹತ್ತ್ವವಿದೆ. ವಂಶದ ಮೂಲಪುರುಷನ ಸ್ಮರಣೆಯನ್ನು ಮಾಡಿ ತನ್ನ ಪವಿತ್ರತೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಆವಶ್ಯಕವಾಗಿದೆ. ಹೀಗೆ ಸನಾತನ ಧರ್ಮ  ಪರಂಪರೆಯಲ್ಲಿ ಗೋತ್ರಪ್ರವರಗಳ ಸಂರಕ್ಷಣೆಯು ಅತ್ಯಂತ ಮಹತ್ತ್ವ ವನ್ನು ಹೊಂದಿದೆ. ಪ್ರಕೃತ ಚಿಕ್ಕ ಲೇಖನದಲ್ಲಿ ಆ ಮಹತ್ತ್ವವನ್ನು ಕುರಿತು ಸೂಚನಾಮಾತ್ರ ಸಾರವಾಗಿ ಪ್ರಸ್ತಾಪಿಸಲಾಗಿದೆ. ಈ ಬಗ್ಗೆ ಅಧಿಕವಾದ ವಿಚಾರವನ್ನು ಪರಿಣತರಾದ ವಿದ್ವಾಂಸರಿಂದಲೂ ಪ್ರಾಮಾಣಿಕವಾದ ಧರ್ಮಶಾಸ್ತ್ರ-ಗ್ರಂಥಗಳಿಂದಲೂ ತಿಳಿದುಕೊಂಡು ಸನಾತನ ಧರ್ಮದ ಸಂರಕ್ಷಣೆಯಿಂದ ಆತ್ಮಕಲ್ಯಾಣ ಮತ್ತು ಲೋಕಕಲ್ಯಾಣಗಳನ್ನು ಮಹಾಜನರು ಸಾಧಿಸಬೇಕು.   

          ಧರ್ಮೋ  ವಿಶ್ವಸ್ಯ ಜಗತಃ ಪ್ರತಿಷ್ಥಾ !

                

                   *****************

 

 

Facebook Comments