ರಾಮಚಂದ್ರಾಪುರ ಮಠ ಅಥವಾ ಗುರುಗಳು ಎಂದರೆ ನನಗೆ ಮೊದಲು ನೆನಪಾಗುವುದು ಏನು? ಪೀಠಾರೋಹಣ ಸಮಾರಂಭದಲ್ಲಿ ಮೆರವಣಿಗೆಯಲ್ಲಿ ಕೆಂಪು ಮಡಿ ಹೊದ್ದು ಪುಟ್ಟ ದೇವರ ಮೂರ್ತಿಯಂತೆ ಕೂತಿದ್ದ, ‘ಅದೇ, ಅವ್ರೇ ಹೊಸಾ ಗುರುಗಳು’ ಅಂತ ಅಪ್ಪ ತೋರಿಸಿದ್ದ ಚಿತ್ರ? ಊರ ರಸ್ತೆಯಲ್ಲಿ ಧೂಳೆಬ್ಬಿಸುತ್ತ ಬಂದ ಹತ್ತಾರು ಕಾರುಗಳಲ್ಲೊಂದರಲ್ಲಿ ಕೂತಿದ್ದು, ನಮ್ಮನೆ ಎದುರಿಗೆ ನಿಂತಾಗ ಅಪ್ಪ ಹಿಡಿದು ನಿಂತಿದ್ದ ಕಾಯಿ-ಹಣ್ಣುಗಳನ್ನು ಮುಟ್ಟಿ ಮುಗುಳ್ನಕ್ಕ ಕಾವಿ ವಸ್ತ್ರಧಾರಿ? ಸೀಮಾ ಪರಿಷತ್ ಉದ್ಘಾಟನಾ ಸಮಾರಂಭದಲ್ಲಿ, ಸೀಮೆಯ ದೇವಸ್ಥಾನದಲ್ಲಿ ಉದ್ದುದ್ದ ಸರತಿಯ ಸಾಲಲ್ಲಿ ಕಾದು ಅಂತೂ ನನ್ನ ಸರದಿ ಬಂದು ಮಂತ್ರಾಕ್ಷತೆಗೆಂದು ಶಾಲೊಡ್ಡಿದಾಗ ಬೊಗಸೆಗಟ್ಟಲೆ ದ್ರಾಕ್ಷಿ ಹಣ್ಣು ಕೊಟ್ಟು ಖುಶಿಗೊಳಿಸಿದ ಹಸನ್ಮುಖಿ? ಜಾತ್ರೆಯೋಪಾದಿಯಲ್ಲಿ ನಡೆದ ವಿಶ್ವ ಗೋಸಮ್ಮೇಳನದ ಸಮಾರೋಪ ಸಮಾರಂಭದ ಕಟ್ಟಕಡೆ ನಿಮಿಷಗಳಲ್ಲಿ ಪೆಂಡಾಲೆಲ್ಲ ಕಿತ್ತು ಹಾರುವಂತೆ ಹುಚ್ಚು ಗಾಳಿಯೆದ್ದು ಮಳೆ ಬರುವಂತಾಗಿ ಜನವೆಲ್ಲ ಕಂಗಾಲಾದಾಗ, ಆಶೀರ್ವಚನ ನೀಡುತ್ತಿದ್ದ ಗುರುಗಳು, ‘ಯಾರೂ ಹೆದರಬೇಡಿ.. ಏನೂ ಆಗೋದಿಲ್ಲ.. ಗೋಮಾತೆಗಾಗಿ ನಾವು ನಡೆಸ್ತಿರೋ ಸತ್ಕಾರ್ಯ ಇದು.. ಅವಳಿಗೆ ಬೇಕು ಅಂತ ಇದ್ರೆ ಇವೆಲ್ಲ ನಿಲ್ಲುತ್ತೆ’ ಎಂದಾಕ್ಷಣ ಗಾಳಿಯೆಲ್ಲ ಕಮ್ಮಿಯಾಗಿ ನಿರ್ಮಲೆಯಾದ  ಪ್ರಕೃತಿಯ ವಿಸ್ಮಯ? ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೋಟಿನೀರಾಜನ ಸಂಭ್ರಮದಲ್ಲಿ, ಭೂಮಿಯೇ ನಕ್ಷತ್ರಾಚ್ಛಾದಿತ ಆಕಾಶವಾಯಿತೇ ಎಂಬ ಭ್ರಮೆ ತರಿಸುವ ಕಣ್ಮನ ತುಂಬುವ ದೃಶ್ಯಸಾಗರದ ಮುಂದಿದ್ದ ಸಾಲಂಕೃತ ವೇದಿಕೆಯಲ್ಲಿ, ಕನಸಿನಲ್ಲೆಂಬಂತೆ ಗುರುಗಳು ಪಡಿಮೂಡಿ ಬಂದ ಪರಿ? ವಿಶ್ವ ಗೋಗ್ರಾಮ ಯಾತ್ರೆ ದೇಶವನ್ನೆಲ್ಲ ಸುತ್ತುತ್ತಿರುವ ಸುದ್ದಿಯನ್ನು ದಿನವೂ ಮಾಧ್ಯಮಗಳು ಬಿಂಬಿಸುತ್ತಿದ್ದಾಗ ಆಗುತ್ತಿದ್ದ ರಾಘವೇಶ್ವರರ ಸಂಕಲ್ಪದೆಡೆಗಿನ ಬೆರಗು? ಅಥವಾ ಸುಖಾಸುಮ್ಮನೆ ಅದೇ ಮಾಧ್ಯಮಗಳು ವಿವಾದಗಳನ್ನು ಸೃಷ್ಟಿಸಿ ತೆವಲು ತೀರಿಸಿಕೊಳ್ಳುತ್ತಿದ್ದಾಗ ನನ್ನ ಮನಸಲ್ಲಾಗುತ್ತಿದ್ದ ‘ಯಾವುದು ಸರಿ, ಯಾವುದು ತಪ್ಪು’ ಎಂಬ ದ್ವಂದ್ವ?

ಯಾವುದೂ ಇರಬಹುದು ಅಥವಾ ಎಲ್ಲವೂ ಇರಬಹುದು… ಪೀಠಾರೋಹಣ ಸಮಾರಂಭಕ್ಕೆ ಅಪ್ಪನೊಂದಿಗೆ ಹೋದದ್ದು ನೆನಪಾಗುತ್ತದೆ… ‘ಮಠ’, ‘ಗುರುಗಳು’, ‘ಪೀಠ’, ‘ಆರೋಹಣ’ ಎಂದರೆಲ್ಲಾ ಏನೆಂದೇ ಸರಿಯಾಗಿ ಗೊತ್ತಿಲ್ಲದಿದ್ದ ವಯಸ್ಸು ನನ್ನದು.. ಅಷ್ಟು ದೊಡ್ಡ ಶಾಮಿಯಾನಾ ನೋಡಿಯೇ ತಲೆ ತಿರುಗಿತ್ತು! ಒಂದೇ ನೋಟಕ್ಕೆ ದಕ್ಕದಷ್ಟು ದೊಡ್ಡ ವೇದಿಕೆ, ಅಷ್ಟು ದೂರದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳು, ಗೊಂಬೆಗಳಂತೆ ಕಾಣುತ್ತಿರುವ ಜನಗಳು, ಅವನ್ನು ಬಿತ್ತರಿಸುತ್ತಿರುವ ಅಲ್ಲಲ್ಲಿ ಹಾಕಿರುವ ಟೀವಿಗಳು. ಉಳಿದಿದ್ದೇನೂ ನೆನಪಿಲ್ಲದಿದ್ದರೂ, ಅಷ್ಟು ಅಗಾಧ ಸಂಖ್ಯೆಯ ಜನಗಳ ಮಧ್ಯೆ ನಾನು ಅಪ್ಪನಿಂದ ತಪ್ಪಿಸಿಕೊಂಡು ಕಳೆದುಹೋಗದಿರಲು ಪಟ್ಟ ಕಷ್ಟ, ನಮ್ಮ ಮನೆಯ ನೆಂಟರೆಲ್ಲರೂ ಅಲ್ಲಲ್ಲಿ ಕಾಣಸಿಕ್ಕು ‘ಅರೇ, ಅಪ್ಪಿ!’ ಎಂದು ಜಂಗುಳಿಯಲ್ಲಿ ಮಾಯವಾಗುತ್ತಿದ್ದುದು, ‘ಅದೇ ಅಲ್ಲಿ, ಬೆಂಕ್ಟಳ್ಳಿ ಮಾವ’ ಅಂತ ನಾನು ಅಪ್ಪನಿಗೆ ಕೈಮಾಡಿ ತೋರಿಸಿದರೆ ‘ಹೋಯ್ ಭಾವಾ’ ಎಂದು ಅಪ್ಪ ಕೂಗಿದರೂ ಮಾವನಿಗೆ ಕೇಳದೇ ಆಗುತ್ತಿದ್ದ ನಿರಾಶೆ, ಅತ್ತೆ ಸಿಕ್ಕು ಕೊಡಿಸಿದ್ದ ಐಸ್‌ಕ್ರೀಮು, ಮತ್ತೆ ನನ್ನ ಶಾಲೆಯ ಮೇಷ್ಟ್ರೂ ಒಬ್ಬರು ಕಂಡುಬಿಟ್ಟು ಹೆದರಿಕೆಯಾಗಿ (ಜತೆಗೆ ಪಂಚೆ ಉಟ್ಟು, ಶಲ್ಯ ಹೊದ್ದಿದ್ದ ಅವರ ಹೊಸ ವೇಷ ಕಂಡು ನಗುವೂ ಬಂದು!) -ಅವರ ಕಣ್ಣಿಂದ ತಪ್ಪಿಸಿಕೊಳ್ಳಲು ಮಾಡಿದ ಹರಸಾಹಸ -ಚೆನ್ನಾಗಿ ನೆನಪಿವೆ. ಅಷ್ಟೇ ಅಲ್ಲ, ಗುರುಗಳು ತಮ್ಮ ಕನಸಿನ ಯೋಜನೆಗಳನ್ನು ಮಂಡಿಸುತ್ತ, ‘ನಮ್ಮ ಸಮಾಜದಲ್ಲಿ ಯಾವೊಬ್ಬ ವ್ಯಕ್ತಿಯೂ, ಯಾವೊಂದು ಕುಟುಂಬವೂ ಉಪವಾಸ ಬೀಳದಂತೆ ಮಠ ನೋಡಿಕೊಳ್ಳುತ್ತದೆ’ ಎಂದಿದ್ದ ಆಶಯವಾಕ್ಯ ಇನ್ನೂ ನೆನಪಿರುವುದಕ್ಕೆ ಕಾರಣ ಬಹುಶಃ ಅಪ್ಪ ಮನೆಗೆ ಬಂದಮೇಲೂ ಅದನ್ನು ನೆನೆದುಕೊಂಡು ಸುಮಾರು ಸಲ ಎಲ್ಲರ ಬಳಿ ಹೇಳಿದ್ದಕ್ಕಿರಬೇಕು.

ಅದಾದಮೇಲೆ ಗುರುಗಳು ನಮ್ಮ ಸೀಮೆಗೆ ಬಂದರು, ನಮ್ಮೂರಿಗೆ ಬಂದರು, ಪ್ರತಿ ಊರಲ್ಲೂ ಭಿಕ್ಷೆಗಳು ಆದವು, ತಲಕಾಲುಕೊಪ್ಪದ ಸೀತಾರಾಮಚಂದ್ರ ದೇವಸ್ಥಾನದಲ್ಲಿ ದಿನವೂ ಕಾರ್ಯಕ್ರಮಗಳು ಇರುತ್ತಿದ್ದವು. ಆಗ ಗೆಳೆಯರ ಜೊತೆ ಪ್ರತಿದಿನ ಅಲ್ಲಿಗೆ ಹೋಗಿ ಬೆಳಗಿಂದ ಮಧ್ಯರಾತ್ರಿಯವರೆಗೂ ಕಳೆದು ಊರಿನ ವಾಹನದಲ್ಲಿ ವಾಪಸು ಬರುವಾಗ ಪೂರ್ತಿ ತೂಕಡಿಕೆ.. ಆದರೂ ಮರುದಿನ ಬೆಳಗ್ಗೆ ಮತ್ತೆ ಅಲ್ಲಿಗೆ ಹೋಗಲು ಚಡಪಡಿಕೆ. ಆ ದಿನಗಳಲ್ಲಿ ರಚಿಸಲ್ಪಟ್ಟ ಪರಿಷತ್ತುಗಳು, ಅವುಗಳ ವಿಭಾಗಗಳು, ಅವುಗಳ ಮುಖ್ಯಸ್ಥರುಗಳು, ಇನ್ನವರು ನಿರ್ವಹಿಸಬೇಕಿದ್ದ ಹೊಣೆಗಳು, ವಿಧವಿಧದ ಯೋಜನೆಗಳ ವಿವರ ಕೇಳಿದ ಎಲ್ಲರಲ್ಲೂ ಸಂಚಲನ. ನಂತರದ ದಿನಗಳಲ್ಲಿ ಅಮ್ಮ ಊಟಕ್ಕೆಂದು ಅಕ್ಕಿಯಿಡುವಾಗಲೆಲ್ಲ ಮುಷ್ಟಿಭಿಕ್ಷೆಯ ನೆಪದಲ್ಲಿ ಮಠವನ್ನೂ ಗುರುಗಳನ್ನೂ ಪ್ರತಿದಿನ ನೆನೆದುಕೊಳ್ಳುವಂತಾದಾಗ ಅಲ್ಲೇ ಕಾಣುತ್ತಿತ್ತು ಯೋಜನೆಯ ಸಾರ್ಥಕ್ಯದ ಪ್ರತಿಫಲನ.

ವಿಶ್ವ ಗೋಸಮ್ಮೇಳನದ ಬಗ್ಗೆ ಎಲ್ಲೆಡೆ ಸುದ್ದಿ.. ನಾನಾಗಲೇ ಬೆಂಗಳೂರು ಸೇರಿದ್ದೆ. ಸುಮಾರೆಲ್ಲ ಗೆಳೆಯರು ಸಮ್ಮೇಳನಕ್ಕೆ ಮೊದಲ ದಿನದಿಂದಲೇ ಹೋಗಿ ಅಲ್ಲಿಂದ ಫೋನ್ ಮಾಡಿ ಹೊಟ್ಟೆ ಉರಿಸತೊಡಗಿದ್ದರು. ‘ಹೆಂಗಿದ್ದು ಗೊತ್ತಿದಾ ದೋಸ್ತಾ..? ಎಲ್ಲಿ ನೋಡಿರೂ ಜನ.. ಎಲ್ಲಿ ನೋಡಿರೂ ವೇದಿಕೆ, ಗುಡಿ, ಸಂಗೀತ, ಮಂತ್ರ, ಪ್ರೀತಿಯ ಮುಗುಳ್ನಗೆಯ ಕಾರ್ಯಕರ್ತರು. ಇಲ್ಲಿ ಒಂದು ಹೊಸ ಸಾಮ್ರಾಜ್ಯವೇ ಸೃಷ್ಟಿಯಾದಂಗೆ ಕಾಣ್ತಿದ್ದು’ ಅಂತೆಲ್ಲ ಹೇಳಿ, ನಾನೂ ಯಾವಾಗ ಅಲ್ಲಿಗೆ ಹೋಗಿ ಕೂಡಿಕೊಳ್ಳುತ್ತೇನೋ ಎಂದು ಕಾತರಿಸುವಂತೆ ಆಗಿತ್ತು. ಮತ್ತು ಅಲ್ಲಿಗೆ ಹೋಗಿ ನೋಡಿದಾಗ ಗೆಳೆಯರು ಹೇಳಿದ್ದೆಲ್ಲ ಸತ್ಯವೇ ಆಗಿತ್ತು.

ಗುರುತೇ ಸಿಗದಂತೆ ಬದಲಾಗಿಹೋಗಿತ್ತು ಮಠ ಮತ್ತದರ ಸುತ್ತಲ ಪರಿಸರ.. ಎಲ್ಲಿಗೆ ಹೋದರೆ ಎಲ್ಲಿಗೆ ಬರಬೇಕೆಂದೇ ತಿಳಿಯದಂತೆ, ಎಲ್ಲಿಗೆ ಹೋದರೂ ಅಲ್ಲೇ ನೋಡುತ್ತ ನಿಂತು ಬಿಡಬಹುದಾದಂತಹ ಸನ್ನಿವೇಶಗಳು. ಮಠದ ಮುಖ್ಯದ್ವಾರದಿಂದ ಶುರುವಾಗಿದ್ದ ಪರಿಕ್ರಮ ಪಥದಲ್ಲಿ ಸಾಗಿದರೆ ಮೊದಲಿಗೆ ಸಿಗುವುದೊಂದು ಭಜನಾ ಮಂದಿರ. ಅಲ್ಲಿ ನಿರಂತರ ಭಜನೆ. ರಾಮಭಜನೆ. ಗೋಭಜನೆ. ತಾಳದ ಟಿಣ್‌ಟಿಣ್. ಮಧ್ಯದಲ್ಲಿ ಸ್ಥಾಪಿತವಾಗಿದ್ದ ಬಣ್ಣದ ಗೋಮಾತೆಯ ಪ್ರತಿಮೆ. ಅರೆನಿಮಿಷ ಇಲ್ಲಿ ನಿಂತು ಮುಂದೆ ಸಾಗಬೇಕು. ಅಲ್ಲಿದೆ ವೃಂದಾವನೀ.. ಒಂಭತ್ತು ದಿನಗಳಿಂದ ನಿರಂತರವಾಗಿ ಇಲ್ಲಿ ಪ್ರವಹಿಸುತ್ತಿದೆ ವೇಣುನಿನಾದ.. ದ್ವಾಪರ ಮತ್ತೆ ಅವತರಿಸಿತೇ? ಧರೆಯೇ ಗೋಕುಲವಾಯಿತೇ? ಅದೆಷ್ಟು ಕೃಷ್ಣರು ಬಿದಿರ ತುಂಡಲ್ಲಿ ಉಸಿರೂದಿದರೋ ಇಲ್ಲಿ? ಅದೆಷ್ಟು ಮಂದಿ ಭಾವಪರವಶರಾಗಿ ನಿಂತರೋ ಇಲ್ಲಿ? ತಿಳಿದಿರಬಹುದು ಮಧ್ಯದಲ್ಲಿದ್ದ ಹಸಿರು ಮರಕ್ಕಾದರೂ.  ಅಲ್ಲೇ ಮುಂದೆಲ್ಲೋ ತಗ್ಗಿನಲ್ಲೊಂದು ವೇದಿಕೆಗಭಿಮುಖವಾಗಿ ಕುಳಿತ ನೂರಾರು ಖುರ್ಚಿಗಳು. ‘ಏನಿದು?’ ಹಾಯುವ ಜನಗಳ ಪ್ರಶ್ನೆ. ‘ರಾತ್ರಿ ಇಲ್ಲಿ ಯಕ್ಷಗಾನ ನಡೆಯೊತ್ತೆ’ ಕಾರ್ಯಕರ್ತರ ಉತ್ತರ. ಮುಂದೊಂದು ವಸ್ತು ಸಂಗ್ರಹಾಲಯ. ಇನ್ನೂ ಮುಂದೆ ಹೋದರಿದೆ ಗೋಶಾಲೆ. ಹಿಂದೆಲ್ಲೂ ಕಂಡರಿಯದ ಹೊಸ ಹೊಸ ತಳಿಯ ದನಗಳು. ಕೊಂಬು ನೋಡಿದರೇ ಸಾಕು ಭಯವಾಗುವಂತವು ಕೆಲವಾದರೆ ಮೈದಡವಿದರೂ ಹಾಯದೆ ಪ್ರೀತಿಪಾತ್ರವಾಗುವ ದನಗಳು ಕೆಲವು. ಪ್ರತಿ ಗೋವಿನ ಮುಂದೂ ಅದರ ವಿವರಗಳಿರುವ ಫಲಕ. ಹಾದಿಯುದ್ದಕ್ಕೂ ಆಸರಿಗೆ, ಉಪಚಾರಕ್ಕೆ ಕೊರತೆಯಿಲ್ಲ. ಬೆಲ್ಲ ಕರಗಿದ್ದ ಪಾನಕ ಎಷ್ಟು ಬೇಕಿದ್ದರೂ ಕುಡಿಯಬಹುದು. ಅಷ್ಟೇ, ‘ಹರೇ ರಾಮ’ ಅಂತ ಹೇಳಬೇಕು.

ವೇದಿಕೆಯ ಮೇಲೆ ನಿರಂತರ ಕಾರ್ಯಕ್ರಮಗಳಿರುತ್ತಿದ್ದವು. ವಿಶ್ವವೇ ಕಣ್ಣು ಕೀಲಿಸಿಕೊಂಡು ಕುತೂಹಲದಿಂದ ನೋಡಿದ ಈ ಸಮ್ಮೇಳನಕ್ಕೆ ದೇಶದ ಅದೆಷ್ಟು ಮುನಿವರ್ಯರು ಬಂದರೋ ಆ ಹಳ್ಳಿ ಹುಡುಕಿಕೊಂಡು? ಯಾವ್ಯಾವ ರಾಜಕಾರಣಿಗಳು ಬಂದು ಏನೇನು ಘೋಷಿಸಿದರೋ? ‘ರಾಮಚಂದ್ರಾಪುರ ಇಂದು ಗೋವರ್ಧನ ಗಿರಿಯಾಗಿದೆ’ ಎಂದ ವೇದಿಕೆಯ ಗಣ್ಯರ ಮಾತು ಬರೀ ಉತ್ಪ್ರೇಕ್ಷೆಯಾಗಿರಲಿಲ್ಲ; ಸದೃಶ್ಯವಾಗಿತ್ತು. ಲಕ್ಷಾಂತರ ಜನಗಳು ಉಂಡು ಸಂತೃಪ್ತರಾದ ಸಮ್ಮೇಳನ ಅದು. ಭೋಜನಶಾಲೆಯಲ್ಲಿ ಒಂದು ನಿಮಿಷಕ್ಕೆ ಇಪ್ಪತ್ತು ಸಾವಿರ ಜನ ಉಣ್ಣುತ್ತಿದ್ದರಂತೆ! ಒಂದು ದಿನಕ್ಕೆ ನಾಲ್ಕು ಲಕ್ಷ ಜನ! ಸ್ವಯಂಸೇವಕರು, ಕಾರ್ಯಕರ್ತರ ಒತ್ತಾಯವಂತೂ ಬಣ್ಣಿಸಲಸದಳ. ಅಂಥದೊಂದು ವೈಭವದಲ್ಲಿ ಭಾಗವಹಿಸಿದ ನಮ್ಮ ಅದೃಷ್ಟಕ್ಕೆ ನಾವೇ ಖುಶಿ ಪಡುವಂತಾದದ್ದಂತೂ ಸುಳ್ಳಲ್ಲ.

ನಂತರ ಅದೇ ಗೋರಕ್ಷಣೆಯ ಹೋರಾಟದ ಮುಂದುವರಿಕೆಯಾಗಿ ಬೆಂಗಳೂರಿನಲ್ಲಿ ನಡೆದ ಕೋಟಿನೀರಾಜನ ಕಾರ್ಯಕ್ರಮವಿರಬಹುದು, ಆಮೇಲಾದ ಸಾಲು ಸಾಲು ಸಮರಗಳಿರಬಹುದು, ಯಶಸ್ವಿಯಾಗಿ ಮುಗಿದ ಗೋಗ್ರಾಮ ಯಾತ್ರೆಯಿರಬಹುದು -ನಾನು ಅಂದುಕೊಳ್ಳುತ್ತಿದ್ದೆ: ರಾಘವೇಶ್ವರರಿಗೆ ಅದ್ಯಾವುದೋ ಗಳಿಗೆಯಲ್ಲಿ ಅನ್ನಿಸಿತಲ್ಲಾ, ‘ಗೋವು ದೇವತೆ. ಅಮಾನುಷವಾಗಿ ಹತ್ಯೆಗೊಳಗಾಗುತ್ತಿದೆ. ತಳಿಗಳು ನಿರ್ನಾಮವಾಗುತ್ತಿವೆ. ಇದರ ರಕ್ಷಣೆಗೆ ತಾವು ನಿಲ್ಲಬೇಕು’ ಅಂತ, ಅದೆಂತಹ ದಿವ್ಯಗಳಿಗೆಯಿರಬಹುದು? ಅವರು ಅಂದು ಮಾಡಿಕೊಂಡದ್ದು ಅದೆಂತಹ ಬೃಹತ್ ಸಂಕಲ್ಪವಿರಬಹುದು? ತದನಂತರ ನಡೆಯುತ್ತಿರುವ ಅದರ ಸಾಕಾರದ ನಡೆಗಳನ್ನು ನೋಡಿದಾಗ, ‘ಒಬ್ಬ ಗುರುವಿನ ಸಂಕಲ್ಪಕ್ಕೆ ಇಷ್ಟೊಂದು ಶಕ್ತಿ ಇರುತ್ತದೆ ಅಂತಾದರೆ, ನಮ್ಮ ರಾಜಕಾರಣಿಗಳು, ಜನ ಪ್ರತಿನಿಧಿಗಳು, ನಾಯಕರುಗಳು ಇಂಥದೇ ಬೇರೆ ಬೇರೆ ಲೋಕೋದ್ಧಾರದ ಸಣ್ಣ ಸಣ್ಣ ಸಂಕಲ್ಪಗಳನ್ನು ಮಾಡಿಕೊಂಡರೂ ಜಗತ್ತು ಮತ್ತು ಜನಜೀವನ ಎಷ್ಟು ಸುವ್ಯವಸ್ಥೆಯತ್ತ ಮುಖ ಮಾಡಬಹುದು’ ಅಂತ ಅಂದುಕೊಳ್ಳುತ್ತಿದ್ದೇನೆ.

ಮಠಕ್ಕೆ ಹೋದಾಗಲೆಲ್ಲ ಮುದಗೊಳಿಸುವ ಅಲ್ಲಿನ ಪರಿಸರ, ಗುರುಗಳು ಎಲ್ಲಿ ವಾಸ್ತವ್ಯ ಹೂಡುತ್ತಾರೋ ಅಲ್ಲಿ ಸೇರ್ಪಡೆಯಾಗುವ ಭಕ್ತರ ಸಮೂಹ, ಸದಾ ಮುಗುಳ್ನಗುವ ಗುರುಗಳ ಪ್ರತಿ ಆಜ್ಞೆಯನ್ನೂ ಶಿರಸಾವಹಿಸಿ ಪಾಲಿಸುವ ಶಿಷ್ಯವೃಂದ, ಎಲ್ಲಿಗೆ ಹೋದರೂ ಹೊಸ ಅನುಯಾಯಿಗಳನ್ನು ಹೊಂದಿ ಬರುವ ಗುರುಗಳ ಮೋಡಿ, ನಾಲ್ಕು ದಿನ ಒಡನಾಡಿದರೂ ಸಾಕು ಅವರೆಡೆಗೆ ಉಂಟಾಗಿಬಿಡುವ ಅಕಾರಣ ಪ್ರೀತಿ, ಹೊಸ ಕನಸುಗಳಿಗೆ ಕಂಕಣ ಕಟ್ಟುವ ರೀತಿ -ಎಲ್ಲವುಗಳಲ್ಲೂ ರಾಘವೇಶ್ವರ ಭಾರತೀ ಸ್ವಾಮೀಜಿ ಅನನ್ಯರು.

ಬರೆಯುತ್ತಿದ್ದವನು, ಈ ವಿಂಡೋವನ್ನು ಮಿನಿಮೈಸ್ ಮಾಡಿ, ಸುಮ್ಮನೆ ಅವರ ವೆಬ್‌ಸೈಟಿಗೆ ಹೋಗಿ ಚಿತ್ರಗಳನ್ನು ನೋಡಿದರೆ, ಪ್ರತಿ ಚಿತ್ರದ ಹಿಂದೂ ಬರೆದಿರುವ ತೇಜಃಪುಂಜದ ಗಾಫಿಕ್ಸ್ ನೋಡಿದಾಗ ಅನ್ನಿಸುತ್ತದೆ: ಬಹುಶಃ ಅದನ್ನು ಬರೆಯದಿದ್ದರೂ ನೋಡುವ ನಮ್ಮ ಕಣ್ಣುಗಳಿಗೆ ಅದು ಸೃಷ್ಟಿಯಾಗಿಯೇ ಕಾಣಿಸುತ್ತಿತ್ತೇನೋ ಅಂತ..

ಇದೇ ಸಂದರ್ಭದಲ್ಲಿ, ಅವ್ಯವಸ್ಥೆಗಳು ತಾಂಡವವಾಡುತ್ತಿದ್ದ ಗೋಕರ್ಣದ ಪರಿಸರವನ್ನೇ ಬದಲಿಸಿ ಅಲ್ಲೀಗ ಚಾತುರ್ಮಾಸ್ಯಕ್ಕೆ ಕೂತಿರುವ ಗುರುಗಳು ಪ್ರತಿದಿನ ನಡೆಸುತ್ತಿರುವ ಸಭೆಗಳ ಚಿತ್ರಗಳು, ವರದಿಗಳು ಪತ್ರಿಕೆಗಳಲ್ಲಿ ಬರುತ್ತಿದೆ. ಅಂದುಕೊಂಡದ್ದನ್ನೆಲ್ಲ ಅಚ್ಚುಕಟ್ಟಾಗಿ ಮಾಡಿ ಮುಗಿಸಿಯೇ ತೀರುವ ಗುರುವಿನ ಚಿತ್ರ ನೋಡಿ ಪ್ರೀತಿಯುಂಟಾಗುತ್ತದೆ. ಮನಸಿನಲ್ಲೇ ನಮಿಸುತ್ತೇನೆ.

ಪರಿಚಯ:

ಶ್ರೀ ಸುಶ್ರುತ ದೊಡ್ಡೇರಿ ಕ್ಯಾಸನೂರು ಸೀಮೆಯ ಬಿ.ದೊಡ್ಡೇರಿಯವರು. ಸದ್ಯ ಬೆಂಗಳೂರಿನಲ್ಲಿ ಉದ್ಯೋಗಿ. ಜೊತೆಗೆ, ’ಪ್ರಣತಿ’ ಎಂಬ ಸಂಸ್ಥೆಯೊಂದಿಗೆ ಸಾಹಿತ್ಯ, ಸಂಸ್ಕೃತಿ ಮತ್ತು ಪ್ರಕೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದಾರೆ. ಗೆಳೆಯರೊಂದಿಗೆ ಸೇರಿ ’ಚಿತ್ರಚಾಪ’ ಎಂಬ ಪ್ರಕೃತಿ ಪ್ರೀತಿಯ ಹೊತ್ತಗೆ ತಂದಿದ್ದಾರೆ. ’ಹೊಳೆಬಾಗಿಲು’ ಇವರ ಲಲಿತ ಪ್ರಬಂಧಗಳ ಸಂಕಲನ. ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿದೆ. ಇವರ ಬ್ಲಾಗ್ ’ಮೌನಗಾಳ’ ಬ್ಲಾಗ್ ಲೋಕದಲ್ಲಿ ಅತ್ಯಂತ ಜನಪ್ರಿಯ.

ಶ್ರೀ ಸುಶ್ರುತ ದೊಡ್ಡೇರಿಯವರ ಕುಟುಂಬಕ್ಕೆ ಶ್ರೀರಾಮಾನುಗ್ರಹ ಹಾಗೂ ಶ್ರೀಗುರುಗಳ ಆಶೀರ್ವಾದ ನಿರಂತರವಾಗಿರಲಿ ಎಂಬುದೇ ನಮ್ಮ ಹಾರಯಿಕೆ.

– ಸಂಪಾದಕ

Facebook Comments Box