LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಮುಡಿಯೋಣ ಭಕ್ತಿಯ ಎಸಳ – ಈಶ್ವರೀ ಶ್ಯಾಂಭಟ್ಟ, ಬೇರ್ಕಡವು.

Author: ; Published On: ಸೋಮವಾರ, ಅಕ್ತೂಬರ 18th, 2010;

Switch to language: ಕನ್ನಡ | English | हिंदी         Shortlink:

ಹರೇ ರಾಮ……….

ನಮಗೆ ಗುರುಗಳಿದ್ದಾರೆ, ನಮಗೆ ಗುರುಮಠವಿದೆ ಎಂಬ ಮಾತನ್ನು ಎಳೆವೆಯಲ್ಲಿದ್ದಾಗಲೇ ನನಗೆ ಕೇಳಿಸಿಕೊಂಡ ನೆನಪಿದೆ. ನನ್ನ ತವರು ಮನೆಯವರು ಗ್ರಾಮ ಗುರಿಕ್ಕಾರರ ಜವಾಬ್ದಾರಿಯುಳ್ಳವರಾಗಿದ್ದರು. ಅವರು ವರ್ಷಕ್ಕೊಂದು ಬಾರಿ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರಾಜೆಯ ಮಾಣಿ ಮಠಕ್ಕೆ ಹೋಗಿ ಬರುತ್ತಿದ್ದರು. ಈ ನೆಪದಲ್ಲಿ ಒಂದೆರಡು ಸಾರಿ ನಾನು ಮಾಣಿ ಮಠಕ್ಕೆ ಹಿರಿಯರ ಸಂಗಡ ಹೋಗಿದ್ದೆ. (ಪ್ರಥಮವಾಗಿ ೧೯೭೫ರಲ್ಲಿ ಮಾಣಿಮಠಕ್ಕೆ ಭೇಟಿ ನೀಡಿದ್ದು) ಆದರೆ ಆಗ ವಿಶೇಷವಾದ ಭಕ್ತಿಯೋ, ಧಾರ್ಮಿಕ ಪ್ರೀತಿಯೋ ಇರಲಿಲ್ಲ. ಕೇವಲ ಎಳೆತನದ ಕುತೂಹಲವಷ್ಟೇ ಇತ್ತು.

ಸುಮಾರು ೧೦ ವರ್ಷಗಳ ಹಿಂದೆ ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳ ಕುಂಬಳೆ ಸೀಮೆಯ ಪ್ರವಾಸದ ಸಂದರ್ಭ ಶಿಷ್ಟಾಚಾರದಂತೆ ಅವರನ್ನು ದೂರದಿಂದ ನೋಡುವ, ಅವರ ಆಶೀರ್ವಚನಗಳನ್ನು ಕೇಳುವ ಒಂದೆರಡು ಸನ್ನಿವೇಶಗಳು ಒದಗಿ ಬಂದವು. ಸಂಪ್ರದಾಯದಂತೆ, ಶ್ರೀಗುರುಗಳಿಂದ ಕುಶಲ ವಿಚಾರಣೆ, ಮಂತ್ರಾಕ್ಷತಾನುಗ್ರಹವೂ ಆಯಿತು.

ನನ್ನ ಮನೆಯವರಿಗೆ ಶ್ರೀಗುರುಗಳ ಮೇಲೆ ಅಪಾರ ಭಕ್ತಿ. ಮನೆಯಲ್ಲಿಯೂ ಆ ವಾತಾವರಣ ನಿರ್ಮಾಣವಾಗಿತ್ತು. ಶ್ರೀಗುರುಗಳು ತಾವು ಯೋಜಿಸಿಕೊಂಡಿದ್ದ ಸಮಾಜ ಸಂಘಟನೆಯ ಕಾರ್ಯಕ್ಕೆ ನಮ್ಮ ಸೇವೆಯನ್ನು ಬಳಸಿಕೊಳ್ಳುವ ಯೋಚನೆ ಮಾಡಿದರೋ ಏನೋ ? ನನಗೆ ೧೧-೦೬-೨೦೦೦ರಂದು ಮುಜುಂಗಾವು ಪಾರ್ಥಸಾರಥೀ ಶ್ರೀಕೃಷ್ಣನ ಸನ್ನಿಧಿಯಲ್ಲಿ  ಕುಂಬಳೆ ಸೀಮೆಯ ಮಹಿಳಾ ಪರಿಷತ್ತಿನ ಅಧ್ಯಕ್ಷತೆಯ ಜವಾಬ್ದಾರಿಯನ್ನು ನೀಡಿ ಆಶೀರ್ವದಿಸಿದರು. ಮುಂದಿನ ದಿನಗಳಲ್ಲಿ ನನ್ನ ಪತಿವರ್ಯರು ಸೀಮಾ ಪರಿಷತ್ತಿನ ಕಾರ್ಯದರ್ಶಿಯಾಗಿ ಶ್ರೀಗುರುಗಳಿಂದ ನಿಯುಕ್ತರಾದರು. ಆದುದರಿಂದ ನಾವು ಶ್ರೀಮಠದ ಸಂಪರ್ಕ, ಶ್ರೀಗುರುದರ್ಶನದ ಸೌಭಾಗ್ಯ ಪದೇ ಪದೇ ಒದಗಿಬರುತ್ತಿದ್ದ ಅದೃಷ್ಟ ದಂಪತಿಗಳಾದೆವು.

ಯಾವ ವಯೋಮಾನದ ಮಂದಿಯೇ ಆಗಲಿ ಶ್ರೀಗುರುಗಳ ಚರಣಮೂಲದಲ್ಲಿ ಬಂದು ಕುಳಿತರೂ ಅವರಿಗೆ ಪ್ರಿಯವಾಗುವಂತೆ ಮನಸ್ಸಿಗೆ ಮುದ ನೀಡುವಂತೆಯೂ ಮಾತನಾಡುತ್ತಾರೆ. ಪುಟ್ಟಿ, ತಂಗಿ, ಅಜ್ಜಿ ಹೇಗಿದ್ದೀ? ಎನ್ನುವ ಸಂಬೋಧನೆಯ ಮಾತುಗಳು ಗುರುಗಳ ಮನಸ್ಸಿನ ಪೂರ್ಣರೂಪವಾಗಿ ಕಣ್ಣು ಹಾಗೂ ಮನಸ್ಸಿನಲ್ಲಿ ಅಚ್ಚೊತ್ತಿ ನಿಲ್ಲುತ್ತವೆ. ಮುದ್ದು ಮಕ್ಕಳಿಗೆ ಕೊಂಡಾಟದಿಂದಾಗಿ ಗುರುಗಳ ಬಗ್ಗೆ ಸಲುಗೆ, ಹಿರಿಯರಿಗೆ ಆರ್ತರಿಗೆ ತಮ್ಮ ಸಮಸ್ಯೆಗಳ ಬಗ್ಗೆ ಹೇಳಿ ಪರಿಹಾರ ಕಂಡುಕೊಳ್ಳಬಹುದು ಎಂಬುದಾಗಿ ಗುರುಗಳ ಬಗ್ಗೆ ವಿಶ್ವಾಸ. ಆದುದರಿಂದ ಶ್ರೀಗಳ ಭಕ್ತವೃಂದದಲ್ಲಿ ಎಳೆಯರಂತೆ ಹಳೆಯವರೂ ಇರುತ್ತಾರೆ. ಖಾಸಗಿ ಭೇಟಿ, ಸಾರ್ವಜನಿಕ ಭೇಟಿಗಳಲ್ಲಿ ಎಷ್ಟು ಆಪ್ತರಾಗಿ, ಪ್ರೀತಿಯುಳ್ಳವರಾಗಿ ಮನಸ್ಸಿಗೆ ಸಮಾಧಾನವನ್ನು ತಂದುಕೊಡುವವರಾಗಿ ಮಾತನಾಡುತ್ತಾರೋ, ಸಾರ್ವಜನಿಕ ಆಶೀರ್ವಚನ ಸಂದರ್ಭಗಳಲ್ಲೂ ಶ್ರೀಗುರುಗಳು ಆತ್ಮೀಯವಾಗಿಯೇ ಮಾತನಾಡುತ್ತಾರೆ. ಕೇಳುಗರನ್ನು ಮುಗ್ಧಗೊಳಿಸುತ್ತಾರೆ. ತನ್ಮಯತೆಯ ಕಡಲಲ್ಲಿ ಅದ್ದಿ ತೆಗೆಯುತ್ತಾರೆ.

ಶ್ರೀಗಳು ಮಹಿಳಾ ಸಂಘಟನೆಗೆ ಚಾಲನೆ ಕೊಟ್ಟು, ಅಲ್ಲಲ್ಲಿ ಕುಂಕುಮಾರ್ಚನೆ, ಭಜನೆಗಳನ್ನೂ ಮಾಡುವುದಕ್ಕೆ ಅವಕಾಶ ಕಲ್ಪಿಸಿಕೊಟ್ಟರು. ತನ್ಮೂಲಕ ಸಮಾಜದಲ್ಲಿ ಧಾರ್ಮಿಕ ಭಾವನೆಯನ್ನು ಜಾಗೃತಗೊಳಿಸಿದರು. ಭಜನೆಯಾದರೋ ಹಿಂದೆ ಅಲ್ಲೊಂದು ಇಲ್ಲೊಂದು ಕಡೆ ಆಗುವ ಕ್ರಮವಿತ್ತು. ಆದರೆ ಕುಂಕುಮಾರ್ಚನೆಯ ಕಲ್ಪನೆಯೇ ಇರಲಿಲ್ಲ. ಮನೆ ಮನೆಯಲ್ಲಿ ಕುಂಕುಮಾರ್ಚನೆಯ ಅನುಷ್ಠಾನ ಶ್ರೀಗಳ ಬಹುದೊಡ್ಡ ಸಾಧನೆಗಳ ಸಾಲಿನಲ್ಲಿ ಸೇರಿಸಲೇಬೇಕಾದ ವಿಚಾರ. ಲಲಿತಾಸಹಸ್ರನಾಮವನ್ನು ಪಠಿಸುವ ಮೂಲಕ ಸಹಸ್ರನಾಮಗಳ ಪುಸ್ತಕಕ್ಕೆ ಬೊಟ್ಟಿಡುತ್ತಾ ಅರ್ಚಿಸುವ ಸರಳ ವಿಧಾನ ಎಷ್ಟು ಆಕರ್ಷಕ ! ಎತ್ತ ನೋಡಿದರೂ ಮಂಗಲ ಸೀರೆಯನ್ನುಟ್ಟು, ಮೈತುಂಬ ಸೆರಗನ್ನು ಹೊದ್ದು, ಸಾಲು ಸಾಲುಗಟ್ಟಿ ಕುಳಿತಿರುವ ಮಹಿಳೆಯರು, ಒಕ್ಕೊರಳಿನಲ್ಲಿ  ಏಕಶ್ರುತಿಯಲ್ಲಿ ಲಲಿತೆಯ ನಾಮವನ್ನು ಸಹಸ್ರವಿಧದಲ್ಲಿ ಉಚ್ಚರಿಸುತ್ತಾ, ಭಕ್ತಿಯ ಭಾವದಲ್ಲಿಯೇ ಅರ್ಧ-ಮುಕ್ಕಾಲು ಗಂಟೆ ತನ್ಮಯರಾಗಿ ದೇವತಾಸ್ವರೂಪಿಗಳಂತೆ ಕಣ್ಣಿಗೆ ಶೋಭಿಸಿದಂತಾಗುವುದು ಎಷ್ಟು ಅಭಿಮಾನಕರ, ಎಷ್ಟು ಅಭಿವಂದ್ಯಕರ.

ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಬುನಾದಿಯೆನ್ನುವಂತೆ ೧೭-೦೪-೨೦೦೨ರಂದು ಕಾಸರಗೋಡಿನ ಬದಿಯಡ್ಕದಲ್ಲಿ ಶ್ರೀಗುರುಗಳ ಆಣತಿಯಂತೆ ಗೃಹೋತ್ಪನ್ನ ವಸ್ತುಗಳ ಮಾರಾಟ ಮಳಿಗೆ ‘ಮಹಿಳೋದಯ’ವನ್ನು ತೆರೆಯಲಾಯಿತು. ಇದರ ಮೂಲಕ ಹವ್ಯಕ ತಿಂಡಿ ತಿನಿಸುಗಳು ಮತ್ತು ಇತರ ಗೃಹೋಪಯೋಗಿ ಪರಿಕರಗಳು ಪ್ರಪಂಚಕ್ಕೆ ತೆರೆದುಕೊಂಡಿತು. ಗ್ರಾಹಕರಿಂದ ಬೇಡಿಕೆ ಅಧಿಕವಾದಂತೆ, ಪರಿಕರಗಳನ್ನು ವೇಗವಾಗಿ ಹೆಚ್ಚಿಸಬೇಕಾಗಿ ಬಂತು. ಮಹಿಳೆಯರು ಸರದಿಯಲ್ಲಿ ತಮ್ಮ ತಮ್ಮ ಮನೆಗಳಲ್ಲಿ ಹತ್ತಾರು ಮಂದಿ ಜೊತೆಯಾಗಿ ಹಪ್ಪಳ, ಸೆಂಡಿಗೆ, ಬಾಳುಕ, ಉಪ್ಪಿನಕಾಯಿ, ಜ್ಯೂಸ್‌ಗಳು, ಶುದ್ಧ ಕುಂಕುಮ, ಪಂಚವರ್ಣದ ಹುಡಿಗಳನ್ನು ಸಿದ್ಧಗೊಳಿಸಿ ವ್ಯಾಪಾರದ ಲಾಭ-ನಷ್ಟಗಳಲ್ಲಿ ಹೆಗಲು ಕೊಡಲು ಆರಂಭ ಮಾಡಿದರು. ಶ್ರೀಗಳ ಮಾರ್ಗದರ್ಶನ ಹಾಗೂ ಅನುಗ್ರಹದಿಂದ ಈ ಚಟುಟಿಕೆ ಆರ್ಥಿಕ ವಿಚಾರಕ್ಕೆ ಅನುಕೂಲವಾಗುವುದರ ಜತೆಗೆ ಸಮಾಜ ಸಂಘಟನೆಗೂ ಪೂರಕವಾಯಿತು. ಸಂಸ್ಥೆಯು ಈ ವರೆಗೂ ಉತ್ತಮ ರೀತಿಯಲ್ಲಿ ಕಾರ್ಯ ನಡೆಸುತ್ತಿದೆ. ಕೇವಲ ಪೂಜೆ, ಮದುವೆ, ಮುಂಜಿಗಳಲ್ಲಿ ಮಾತ್ರ ಜೊತೆಯಾಗಿರುತ್ತಿದ್ದ ಮಹಿಳೆಯರಿಗೆ ಈ ಬಗೆಯ ಕಲೆಯುವಿಕೆ ಒಂದು ಹೊಸ ಪ್ರಪಂಚವನ್ನೇ ತೆರೆದು ತೋರಿಸಿತು.

ಶ್ರೀಮಠದ ವಿವಿಧ ಕಾರ್ಯಕ್ರಮಗಳಿಗೆ, ಬೇರೆ ಬೇರೆ ಸೀಮೆಗಳ ಮನೆಗಳಲ್ಲಾಗುವ ಗುರುಭಿಕ್ಷಾ ಸೇವೆಗಳಿಗೂ ಮಹಿಳೆಯರು ಗುಂಪು ಗುಂಪಾಗಿ ಪ್ರಯಾಣ ಮಾಡಲು ಅವಕಾಶ ಒದಗಿ ಬಂತು. ಗುರು-ಪೀಠ-ದೇವರು-ಸಮಾಜ-ದೇಶ ಹೀಗೆ ಚಿಂತನೆ ನಡೆಸಲು, ಅಭಿಪ್ರಾಯ ಹಂಚಿಕೊಳ್ಳಲು ಸಾಧ್ಯವಾಯಿತು. ಕೇವಲ ಸೀರೆ ಬಳೆಗಳಿಗೆ ಸೀಮಿತವಾಗಿದ್ದ, ಹೆಚ್ಚೆಂದರೆ ಮನೆ-ಮಕ್ಕಳವರೆಗೆ ವಿಸ್ತರಿಸಿ ಹೋಗುತ್ತಿದ್ದ ಮಹಿಳೆಯರ ಮಾತುಗಳು ಭಕ್ತಿಯಿಂದ ಗುರು-ಭಗವಂತನವರೆಗಿನ ಚಿಂತನೆಗೆ, ಊರು-ದೇಶದ ಚಿಂತನೆಗೆ ಎಡೆಯಾಯಿತು. ಎಲ್ಲಕ್ಕಿಂತ ಮಿಗಿಲಾಗಿ ಹೆಣ್ಣು ಮಕ್ಕಳಲ್ಲಿ ಒಗ್ಗಟ್ಟು ಬರದು ಎನ್ನುವ ಸಾಮಾನ್ಯ ಲೋಕಾಪವಾದದ ಮಾತು ಇಲ್ಲಿ ತಪ್ಪಿ ಹೋಯಿತು. ಒಂದು ಕೆಟ್ಟ ಅಪವಾದದ ನಿವಾರಣೆ ತೊಳೆದುಹೋದಂತೆ ನಿರ್ಮಲವಾಗುವುದು ಸಣ್ಣ ಸಂಗತಿಯಲ್ಲ. ಇನ್ನೊಂದು ವಿಚಾರವನ್ನು ಇಲ್ಲಿ ಬೊಟ್ಟು ಮಾಡಿ ಹೇಳಬೇಕು. ‘ಮಹಿಳೆಯರಿಗೆ ಪುರುಷರು ಗೌರವಕೊಡುವುದಿಲ್ಲ, ಮಹಿಳೆಯರು ಪುರುಷರನ್ನು ಶೋಷಣೆ ಮಾಡುತ್ತಾರೆ’ ಎನ್ನುವ ಟೀಕೆಗಳೆಲ್ಲ ಹುರುಳಿಲ್ಲದ ಹುಣಸೇ ಬೀಜದ ಮಾತುಗಳು ಎಂಬುದು ವೇದ್ಯವಾಯಿತು. ಯಾವ ಸಂದರ್ಭದಲ್ಲಿಯೂ ಯಾವ ಮನೆಗಳಲ್ಲಿಯೂ ಹೆಣ್ಣು ಮಕ್ಕಳಿಗೆ ಅಗೌರವವಾಗುವಂತೆ ಶೋಷಿಸುವಂತೆ ಪುರುಷರು ನಡೆದುಕೊಂಡ ಅನುಭವ ಉಂಟಾಗಲಿಲ್ಲ. ಅವರು ಕುಂಕುಮಾರ್ಚನೆಗೆ, ಹಪ್ಪಳ, ಸಂಡಿಗೆ ತಯಾರಿಗೆ ಹೋಗಿದ್ದಾಗ ಸ್ವಂತ ತಾಯಂದಿರಂತೆ, ಸ್ವಂತ ಮಕ್ಕಳಂತೆ ನೋಡಿದ್ದಾರೆ. ಪುರುಷರ ಗೌರವಪೂರ್ಣವಾದ ಸಹಕಾರದಿಂದಷ್ಟೇ ಮಹಿಳೆಯರಿಗೆ ಯಶಸ್ಸು ಸಾಧ್ಯವಾಗಿದೆ.

ಸಂಸಾರದ ಭಾರವನ್ನು ಅವರವರೇ ಹೊತ್ತುಕೊಳ್ಳಬೇಕಾಗುವುದು ಲೋಕಸಮ್ಮತವಾದ ಒಂದು ನ್ಯಾಯವಾಗಿದೆ. ಗುರುಸೇವೆಯಿಂದ ಮನಸ್ಸಿಗೆ ತುಂಬ ಉಲ್ಲಾಸ ಬರುತ್ತದೆ. ಸಮಸ್ಯೆಗಳನ್ನು ಎದುರಿಸುವ ಧೈರ್ಯ ಬರುತ್ತದೆ. ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಶಕ್ತಿ ಬರುತ್ತದೆ. ಆದುದರಿಂದ ವೈಯಕ್ತಿಕ ಕುಟುಂಬದ ನಾನಾ ಸಮಸ್ಯೆಗಳು ಗುರುಸೇವೆಯಲ್ಲಿ ತೊಡಕುಂಟುಮಾಡುತ್ತದೆ ಎನ್ನುವುದರಲ್ಲಿ ಯಾವುದೇ ಹುರುಳಿಲ್ಲ. ನಾನು ಯಾವುದಾದರೂ ಸಮಸ್ಯೆಗಳು ತಲೆದೋರಿದಾಗ ‘ಬಿಂದು-ಸಿಂಧು’ವಿನ ಕರಂಡಕಕ್ಕೆ ಮುಷ್ಟಿ ನಾಣ್ಯವನ್ನು ಹಾಕಿ ಸಮಾಧಾನಿಯಾಗಿದ್ದೇನೆ. ಅದರಿಂದಾಗಿ ನನ್ನ ಎಷ್ಟೋ ಕಷ್ಟಗಳು ದೂರವಾಗಿವೆ.

ಪ್ರತಿಯೊಬ್ಬ ಶಿಷ್ಯನ ಬದುಕೂ ಬಂಗಾರವಾಗಬೇಕು, ಯಾರೂ ಅನಾಥರಾಗಕೂಡದು ಎಂಬ ದಿವ್ಯ ಸಂಕಲ್ಪದಿಂದ, ಎಲ್ಲ ಭಕ್ತರಿಗೆ, ಶಿಷ್ಯರಿಗೆ ಹೊಂದಿಕೊಳ್ಳಲು, ಆಚರಿಸಲು ಅನುಕೂಲವಾಗುವಂತೆ ಶ್ರೀಗುರುಗಳು ಅನೇಕಾನೇಕ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಇವು ಎಲ್ಲವೂ ಶಿಷ್ಯರ ಒಳಿತಿಗಾಗಿ, ಲೋಕ ಕಲ್ಯಾಣಕ್ಕಾಗಿಯೂ ರೂಪುಪಡೆದಿದೆ ಎನ್ನುವುದು ಗಮನಾರ್ಹವಾಗಿದೆ. ಆದುದರಿಂದಲೇ ಅವು ಆಕರ್ಷಣೀಯವಾಗಿವೆ. ಎಲ್ಲವೂ ತ್ಯಾಗದ, ದಾನದ, ಪ್ರೀತಿಯ ಪಾಠವನ್ನು ಕಲಿಸುವ ಮೂಲಕ ಮನಸ್ಸನ್ನು ಶುದ್ಧಿಗೊಳಿಸಿ, ಜೀವನವನ್ನು ಹಸನುಮಾಡುತ್ತವೆ. ಯೋಜನೆಗಳಿಗೆಲ್ಲ ಶ್ರೀಗುರುಗಳು ಒಳ್ಳೊಳ್ಳೆಯ ಹೆಸರನ್ನೂ ಇರಿಸಿದ್ದಾರೆ.

ಪ್ರತೀ ಕುಟುಂಬವು ದಿನದ ಅಡುಗೆಗೆ ತೊಡಗಿದಾಗ ಗುರುಗಳನ್ನು ನೆನೆದು ಒಂದು ಮುಷ್ಟಿ ಅಕ್ಕಿಯನ್ನು ತೆಗೆದಿರಿಸಿ ಮಠದ ಯೋಜನೆಗಳಿಗೆ ರವಾನಿಸಲು ‘ಮುಷ್ಟಿಭಿಕ್ಷಾಯೋಜನೆ’, ಹಣದ ಪೂರೈಕೆಯನ್ನು ಸರಿದೂಗಿಸಲು ‘ಬಿಂದು-ಸಿಂಧು’, ಯುವಶಕ್ತಿಯ ಸದ್ಬಳಕೆಗೆ ಸ್ವಯಂಸೇವಕರ ತಂಡದ ‘ಸೇವಾವಾಹಿನೀ’, ವಿದ್ಯಾಭ್ಯಾಸ ಪ್ರಸಾರಕ್ಕೆ ‘ವಿದ್ಯಾನಿಧಿ’, ಅಶಕ್ತರಿಗಾಗಿ ‘ಆರ್ತತ್ರಾಣ’, ಜ್ಯೋತಿಷ್ಯದ ಪುನಶ್ಚೇತನಕ್ಕೆ ‘ಜ್ಯೋತಿರ್ನಿಧಿ’, ಗೋಮಾತೆಯ ರಕ್ಷಣೆಗೆ ‘ಕಾಮದುಘಾ’ ಹೀಗೆ ಒಂದೇ ಎರಡೇ?

ಈ ಬಗೆಯ ಯೋಜನೆಗಳಿಂದ ಶ್ರೀಗುರುಗಳಿಗೆ, ಶ್ರೀಮಠಕ್ಕೆ ಕೀರ್ತಿ ಪರಂಪರೆಯೇ ಒದಗಿ ಬರುತ್ತಿದೆ. ಪರಿಷತ್ತಿನ ಕಾರ್ಯಕರ್ತೆಯಾಗಿ ಸೇವೆ ಆರಂಭಿಸಿದ ಮೊದಲ ದಿವಸಗಳಲ್ಲಿ ನಮ್ಮ ಹವ್ಯಕ ಸಮಾಜದ ಗುರುಗಳು, ಹವ್ಯಕ ಮಠ ಎಂದು ಭಾವಿಸಿಕೊಂಡಿದ್ದೆ. ಮಠದ ಸಂಪರ್ಕ ಹೆಚ್ಚಾದಂತೆ ನಮ್ಮ ಗುರುಮಠಕ್ಕೆ ಹದಿನೆಂಟು ಬೇರೆ ಬೇರೆ ಸಮಾಜಗಳ ಸಾಂಪ್ರದಾಯಿಕ ‘ಕುಲಗುರುತ್ವ’ ಎನ್ನುವುದು ಗೊತ್ತಾಯಿತು. ಇತ್ತೀಚಿನ ವರ್ಷಗಳಲ್ಲಿ ನಡೆದ ಶ್ರೀರಾಮಾಯಣ ಮಹಾಸತ್ರ, ವಿಶ್ವ ಗೋ ಸಮ್ಮೇಳನ, ಶತಕೋಟಿ ಕುಂಕುಮಾರ್ಚನೆ, ಕೋಟಿ ನೀರಾಜನ, ದೀಪಗೋಪುರ, ವಿಶ್ವಮಂಗಲ ಗೋಗ್ರಾಮ ಯಾತ್ರೆಗಳಂತಹ ರಾಷ್ಟ್ರೀಯ / ಅಂತಾರಾಷ್ಟ್ರೀಯ ಮಟ್ಟದ ಬೃಹತ್ ಕಾರ್ಯಕ್ರಮಗಳ ಬಳಿಕ ನಾನಾ ಭಾಷೆ, ನಾನಾ ದೇಶದ ಭಕ್ತರು ಶ್ರೀಮಠದತ್ತ ಮುಖ ಮಾಡಿದುದರಿಂದ ವಿಶ್ವಗುರುಗಳೇ ಎನ್ನುವುದು ಹೆಜ್ಜೆ ಹೆಜ್ಜೆಗೂ ಮನವರಿಕೆ ಆಗುತ್ತದೆ. ಇಂತಹ ಗುರುಪೀಠದ ಸೇವೆ ನಮ್ಮ ಧನ್ಯತೆಗೆ ಕಾರಣವಾಗಿದೆ. ಶ್ರೀಮಠದ ನಾನಾ ಯೊಜನೆಗಳಲ್ಲಿ ಪ್ರಾಮಾಣಿಕವಾಗಿ ಭಾಗಿಗಳಾಗಿ ಜೀವನವನ್ನು ಸಾರ್ಥಕಪಡಿಸಿಕೊಳ್ಳುವ ಒಂದು ಸುವರ್ಣ ಸಂದರ್ಭದಲ್ಲಿ ನಾವು ಬದುಕುತ್ತಿದ್ದೇವೆ ಎನ್ನುವುದು ನಮ್ಮ ನಮ್ಮ ಭಾಗ್ಯದ ವಿಷಯವಾಗಿದೆ.

ಅವಕಾಶಕ್ಕಾಗಿ ಧನ್ಯವಾದಗಳೊಂದಿಗೆ

ಈಶ್ವರೀ ಶ್ಯಾಂಭಟ್ಟ, ಬೇರ್ಕಡವು.

ಈಶ್ವರೀ ಶ್ಯಾಂಭಟ್ಟರವರ ಕುಟುಂಬದ ಶ್ರೀಮಠದೊಂದಿಗಿನ ಮಧುರ ನೆನಪುಗಳು.

ಪರಿಚಯ

ಶ್ರೀಮತಿ ವೆಂಕಟೇಶ್ವರಿ ಅಮ್ಮ ಮತ್ತು ಶ್ರೀಯುತ ಗಣಪತಿ ಭಟ್ಟ ಕುಳೂರು ಇವರಿಗೆ ಐದನೇ ಪುತ್ರಿಯಾಗಿ ೧೯೬೬ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು

ಕಾಸರಗೋಡು ಜಿಲ್ಲೆಯ ಪನೆಯಾಲದಲ್ಲಿ ಪೂರೈಸಿ, ಮುಂದಿನ ಶಿಕ್ಷಣವನ್ನು ಸುಳ್ಯಪದವಿನ ಸರ್ವೋದಯ ಪ್ರೌಢಶಾಲೆಯಲ್ಲಿ ಪಡೆದು, ದೂರದ ಮಂಡ್ಯದ ಸೈಂಟ್ ಜೋಸೆಫ್ ಕಾನ್ವೆಂಟ್ ನಲ್ಲಿ ಶಿಕ್ಷಕ ತರಬೇತಿ ಪದವಿಯನ್ನು (ಟಿ. ಸಿ. ಎಚ್.) ಪ್ರಥಮ ಸ್ಥಾನದೊಂದಿಗೆ ಪಡೆದಿರುತ್ತಾರೆ.

೧೯೮೪ರಂದು ಬೇರ್ಕಡವು ಶ್ರೀ ಸೀತಾರಾಮ ಭಟ್ಟ ಮತ್ತು ಶ್ರೀಮತಿ ಲಕ್ಷ್ಮೀ ಅಮ್ಮ ಇವರ ಪುತ್ರ ಶ್ರೀಮಠದ ಸಕ್ರಿಯ ಕಾರ್ಯಕರ್ತರಾದ ಶ್ರೀ ಶ್ಯಾಮ ಭಟ್ಟ ಇವರನ್ನು ವಿವಾಹವಾಗಿ ಗೃಹಸ್ಥ ಜೀವನಕ್ಕೆ ಕಾಲಿರಿಸಿದರು.

ಶ್ರೀಮಠದ ವಿವಿಧ ಚಟುವಟಿಕೆಗಳಲ್ಲಿ ಜವಾಬ್ದಾರಿಯುತ ಸ್ಥಾನಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ ಇವರು ಪ್ರಸಕ್ತ ಮುಳ್ಳೇರಿಯ ಮಂಡಲ ಮಾತೃ ವಿಭಾಗದ ಪ್ರಧಾನರು, ಬದಿಯಡ್ಕದಲ್ಲಿರುವ ಮಹಿಳೋದಯದ ಅಧ್ಯಕ್ಷರು ಮತ್ತು ಗ್ರಾಮರಾಜ್ಯ ಯೋಜನೆಯಲ್ಲಿ ಕೇಂದ್ರ ಸಮಿತಿಯ ಸದಸ್ಯರಾಗಿ ಶ್ರೀಗುರುಗಳಿಂದ ನಿಯೋಜಿತರಾಗಿದ್ದು ಶ್ರೀಗುರು ಸೇವಾಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ

ಶ್ರೀಗುರುದೇವತಾನುಗ್ರಹ ಇವರಿಗೂ ಕುಟುಂಬಕ್ಕೂ ಸದಾ ಇರಲೆಂದು ಹಾರೈಸುತ್ತೇವೆ

12 Responses to ಮುಡಿಯೋಣ ಭಕ್ತಿಯ ಎಸಳ – ಈಶ್ವರೀ ಶ್ಯಾಂಭಟ್ಟ, ಬೇರ್ಕಡವು.

 1. ಮಂಗ್ಳೂರ ಮಾಣಿ...

  ತನು ಬಾಗಿತು, ಮನ ಸೋತಿತು.
  ನಮೋ.

  [Reply]

 2. mamata hegde

  Hare Rama

  Nijavaglu samajadalli sanchalana moodisida divya prabhe namma samstana….Anta divya prabhege nanna ananta vandanegalu

  [Reply]

 3. seetharama bhat

  ಹರೇರಾಮ್,

  ಸ೦ಘ ಶಕ್ತಿಯನ್ನು ಉಜ್ಜೀವನಗೊಳಿಸಿದ ಮಹಾನ್ ಶಕ್ತಿಯೊ೦ದಿಗೆ
  ನಾವೆಲ್ಲಾ ಸೇರೊಣ

  ಹರೇರಾಮ್

  [Reply]

 4. govindaraj korikkar

  sarala sundara baraha.Nishkalmasha bhavanegalannu,anubhavagalannu lekhanadalli theredirisiddeeri. Dhanyavadagalu

  [Reply]

 5. gopalakrishna pakalakunja

  ‘……ಯಾವ ವಯೋಮಾನದ ಮಂದಿಯೇ ಆಗಲಿ ಶ್ರೀಗುರುಗಳ ಚರಣಮೂಲದಲ್ಲಿ ಬಂದು ಕುಳಿತರೂ ಅವರಿಗೆ ಪ್ರಿಯವಾಗುವಂತೆ ಮನಸ್ಸಿಗೆ ಮುದ ನೀಡುವಂತೆಯೂ ಮಾತನಾಡುತ್ತಾರೆ. …ಕೇಳುಗರನ್ನು ಮುಗ್ಧಗೊಳಿಸುತ್ತಾರೆ. ತನ್ಮಯತೆಯ ಕಡಲಲ್ಲಿ ಅದ್ದಿ ತೆಗೆಯುತ್ತಾರೆ……. ಶ್ರೀಗಳು….’

  ನೂರಕ್ಕೆ ನೂರೊಂದು ಅಂಶ ಸತ್ಯ….ಸತ್ಯ….ಸತ್ಯ.

  [Reply]

 6. Raghavendra Narayana

  ಸು೦ದರವಾಗಿ ಪ್ರಸ್ತಾಪಿಸಲ್ಪಟ್ಟಿದೆ, ಗುರು-ಮಠಮಯವಾಗಿದೆ ಲೇಖನ ಮತ್ತು ಜೀವನ.
  .
  ಗುರು ಮಠ ಸ೦ಪರ್ಕದಿ೦ದ ಕಾರ್ಯಯೋಜನೆಗಳಿ೦ದ ಕಣ್ಣಿಗೆ ಕಾಣುತ್ತಿರುವ ಬದಲಾವಣೆಗಳು ಒ೦ದಾದರೆ, ಅ೦ತರ್ಗಣ್ಣಿಗೆ ಮಾತ್ರ ಕಾಣುವ ಬದಲಾವಣೆಗಳು ಹಲವು ಮತ್ತು ಬಹುಕಾಲದವರೆಗೆ ಉಳಿಯುವ೦ತವು. ಕಣ್ಣಿನ ಮೇಲೆ ಪ್ರಭಾವ ಬೀರುವ ವಿಷಯ ಹಲವು, ಮನಸ್ಸಿನ ಮೇಲೆ ಪ್ರಭಾವ ಬೀರುವ ವಿಷಯ ಕೆಲವೇ ಕೆಲವು, ಜೀವಕ್ಕೆ ಆತ್ಮಕ್ಕೆ ಒಳಿತನ್ನು ಏಳಿಗೆಯನ್ನು ಬಯಸುವ ತರಿಸುವ ಗುರು ವಿಶ್ವಗುರು.
  .
  ವಿಶ್ವಾಮಿತ್ರರಿಗೆ “ವಿಶ್ವಾಮಿತ್ರ” ಎ೦ದು ಯಾವಾಗ ಹೆಸರು ಬ೦ತು????
  .
  ಸನಾತನ ಧರ್ಮ ವಿಶ್ವಮ೦ಗಲಕರ, ಜಗದ್ಗುರುವಿನಿ೦ದ ಆನ೦ದ ಜಗದೆಲ್ಲೆಡೆ ಪಸರಿಸಲಿ. ಆ ಸುಗ೦ಧವನ್ನು ಹೊತ್ತೊಯ್ಯುವ ಗಾಳಿ ನಾವಾದರೆ ಸುಮದೊ೦ದಿಗೆ ನಾರು ನಾರಾಯಣನ ವೃಕ್ಷಸ್ಥಳ ಏರಿದ೦ತೆ, ಅಲ್ಲಿರುವ ಸಿ೦ಹಾಸನವ ಬಯಸುವ, ಇಲ್ಲಿ ತಾಲೀಮು ನಡೆಸುವ ಶುದ್ಧ ನಿರ್ಮಲ ಗಾಳಿಯಾಗಲು, ನಮ್ಮುಸಿರು ಆಳವಾಗಲಿ ನಿರಾಳವಾಗಲಿ.
  .
  ಶ್ರೀ ಗುರುಭ್ಯೋ ನಮಃ

  [Reply]

 7. Shama Prasada Sarali

  Hare Rama…….

  [Reply]

 8. chs bhat

  ಈಶ್ವರಿ ಅಕ್ಕ, ತುಂಬಾ ಸರಳವಾಗಿ ಸುಂದರವಾಗಿ ನಿಮ್ಮ ಭಾವನೆಗಳನ್ನು ಅಕ್ಷರರೂಪಕ್ಕಿಳಿಸಿದ್ದೀರಿ.ಮಾತೆಯರ ಬಗ್ಗೆ ಶ್ರೀಗಳಿಗಿದ್ದ ಕಳಕಳಿಯನ್ನು ಅರ್ಥ ಮಾಡಿಕೊಂಡು ಅವನ್ನು ಬೇರೆ ಬೇರೆ ಕಾರ್ಯಕ್ರಮಗಳ ಮೂಲಕ ನಿಮ್ಮ ಅಧ್ಯಕ್ಷತೆಯ ಕಾಲದಲ್ಲಿ ಚೆನ್ನಾಗಿ ಕಾರ್ಯ ರೂಪಕ್ಕಿಳಿಸಿದ್ದೀರಿ. ಅದಕ್ಕಾಗಿ ಸಮಾಜ ನಿಮಗೆ ಅಭಿನಂದಿಸುತ್ತದೆ. ನಿಮಗೂ ಶ್ಯಾಂಭಾವನಿಗೂ- ಹರೇರಾಮ. ಸೀಹೆಚ್ಚೆಸ್ಸ್.

  [Reply]

 9. SUBRAHMANYA B.R.

  Shri Gurugala Saniha Saannidya padeda Neene Dhanyaru

  [Reply]

 10. Mohan Bhaskar

  ಹರೆ ರಾಮ ಈಶ್ವರಿಯಕ್ಕ…

  ಉತ್ತಮ ಧೋರಣೆಯನ್ನೂ – ಗ೦ಭೀರತೆಯನ್ನೂ ಹೊ೦ದಿರುವ ಆಪ್ತವಾದ ಸ೦ಕಲನ

  ಅಭಿನ೦ದನೆಗಳು.

  ಮೋಹನ ಭಾಸ್ಕರ ಹೆಗಡೆ.

  [Reply]

 11. gshegde

  harerama…

  [Reply]

 12. vijayasubrahmanya, kumble

  ಈಶ್ವರೀ, ನಿನ್ನ ಇಷ್ಟಾರ್ಥಗಳೆಲ್ಲಾ ಈಡೇರಿ ಸದಾ ನಗು-ನಗುತ್ತಾ ಶ್ರೀಗುರು-ಜನ ಸೇವೆ ಮಾಡ್ತಾ ಇರೆಕು ಹೇಳಿ ವಿಜಯಕ್ಕನದ್ದುದೆ ಪ್ರಾರ್ಥನೆ.

  [Reply]

Leave a Reply

Highslide for Wordpress Plugin