ನಾಗರಿಕತೆಯ ಬೆಳವಣಿಗೆಯಲ್ಲಿ “ಗುರು”ಗಳ ಪಾತ್ರ ಗಣನೀಯ.
ಆಳವಾದ ಅಭ್ಯಾಸ, ಚಿಂತನ, ಸಾಧನೆಗಳ ಮೂಲಕ ತಾವು ಕಂಡುಕೊಂಡ ಸತ್ಯ, ಜ್ಞಾನ, ಕೌಶಲ್ಯಗಳನ್ನು ಯೋಗ್ಯ- ಸತ್ಪಾತ್ರ ಶಿಷ್ಯರ ಮೂಲಕ ಸಮಾಜಕ್ಕೆ ಉಪಯುಕ್ತವಾಗುವಂತೆ ಮಾಡಿ ಮಾನವ ಸಮಾಜವನ್ನು ಪ್ರಗತಿಯ ಹಾದಿಯಲ್ಲಿ ಒಯ್ಯುವಲ್ಲಿ ಗುರುಸಮೂಹದ ಪಾತ್ರ ಮಹತ್ವದ್ದು.
ನೂರಾರು ಋಷಿಮುನಿಗಳು ತಮ್ಮ ಸಾಧನೆಗಳ ಮೂಲಕ ಕಂಡುಕೊಂಡ ಸಿದ್ಧಾಂತಗಳನ್ನು ಗೌರವಿಸಿ ಆ ಹಾದಿಯಲ್ಲಿ ನಡೆದ ಸಾವಿರಾರು ಧರ್ಮಪ್ರಭುಗಳು ಭಾರತದ ಇತಿಹಾಸ ಬೆಳಗುವಂತೆ ಮಾಡಿ ವಿಶ್ವಕ್ಕೆ ಬೆಳಕು ನೀಡುವ ದೇಶವಾದುದು ಇತಿಹಾಸ ಸತ್ಯ.
ಗ್ರೀಕ್ ವಿದ್ವಾಂಸ ಅರಿಸ್ಟಾಟಲ್ ನ ಶ್ರೀರಕ್ಷೆಯಲ್ಲಿ ಅಲೆಕ್ಸಾಂಡರ್ ವಿಶ್ವವಿಜಯದ ಕನಸು ಕಂಡ. ನವ ನಂದರ ದುರಾಡಳಿತ ಕೊನೆಗೊಳಿಸಿ, ವಾಯವ್ಯ ಭಾರತವನ್ನು ಯವನ ಮುಕ್ತಗೊಳಿಸಿ ಅಖಂಡ ಭಾರತವನ್ನು ಒಂದು ಚಕ್ರಾಧಿಪತ್ಯದ ಒಳಗೆ ಪಾಲಿಸಿದ ಚಂದ್ರಗುಪ್ತನ ಮಾರ್ಗದರ್ಶಕ ಚಾಣಕ್ಯ..
ಹಕ್ಕಬುಕ್ಕರನ್ನು ಹುರಿದುಂಬಿಸಿ ಭವ್ಯ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿ ದಕ್ಷಿಣ ಭಾರತವನ್ನು ಸುಲ್ತಾನರುಗಳ ದುರಾಡಳಿತದಿಂದ ಕಾಪಾಡಿದ ವಿದ್ಯಾರಣ್ಯರು..
ಭಾರತದ ಉದ್ದಗಲಕ್ಕೂ ಹರಡಿದ್ದ ಮೊಗಲರ ವಿರುದ್ಧ ಕತ್ತಿ ಹಿರಿದು ಧರ್ಮ ರಕ್ಷಣೆಗಾಗಿ ನವ ಸಾಮ್ರಾಜ್ಯ ಸ್ಥಾಪಿಸಿದ ಶಿವಾಜಿಯ ಮಾರ್ಗದರ್ಶಕ ಸಮರ್ಥ ರಾಮದಾಸರು..

ಮೊದಲಾದವರು ಭಾರತದ ಇತಿಹಾಸದ ದಿಕ್ಕನ್ನೇ ಬದಲಿಸಿದವರು.
ಬೌದ್ಧ ಜೈನಮತಗಳ ಪ್ರಭಾವದಡಿ ತಾತ್ಕಾಲಿಕವಾಗಿ ಕಳಾಹೀನವಾಗಿದ್ದ ಸನಾತನ ಧರ್ಮದ ಬೆಳಕು ಮತ್ತೆ ಪ್ರಜ್ವಲಿಸುವಂತೆ ಮಾಡಿ ದೇಶದಾದ್ಯಂತ ಸಂಚರಿಸಿ ಅಲ್ಲಲ್ಲಿ ಮಠ ಮಂದಿರಗಳನ್ನು ಸ್ಥಾಪಿಸಿ ಸಮಸ್ತ ಶಿಷ್ಯರನ್ನು ಪೀಠಾಧಿಕಾರಿಗಳಾಗಿ ನೇಮಿಸಿ ಸನಾತನ ಧರ್ಮದ ದೀಪ ಸದಾ ಪ್ರಜ್ವಲಿಸುವಂತೆ ಮಾಡಿದ ಆದಿಶಂಕರರಿಂದ ಸ್ಥಾಪಿಸಲ್ಪಟ್ಟು ಅವಿಚ್ಚಿನ್ನವಾಗಿ ಮುಂದುವರಿದ ಶ್ರೀರಾಮಚಂದ್ರಾಪುರ ಮಠದ ಶಿಷ್ಯರೆಂಬುದು ನಮ್ಮೆಲ್ಲರ ಹೆಮ್ಮೆ. ಪ್ರಕೃತ ಆ ಪೀಠದಲ್ಲಿದ್ದು ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತಿರುವ ಶ್ರೀ ರಾಘವೇಶ್ವರ ಭಾರತೀ ಗುರುಗಳಿಗೆ ಅನಂತ ನಮನಗಳು.
ದೇವತಾರ್ಚನೆ, ಗೋಮಾತೆ, ಸಮಾಜ ಸೇವೆ, ರಾಷ್ಟ್ರ ಸೇವೆಗಳಲ್ಲಿ ತಮ್ಮನ್ನೂ, ತಮ್ಮ ಅನುಯಾಯಿಗಳನ್ನೂ ತೊಡಗಿಸಿ ಮಹಾತ್ಮರು ತೋರಿದ ದಾರಿಯಲ್ಲಿ ನಡೆದು,ಇತರರನ್ನೂ ನಡೆಸಿ ಈಗಾಗಲೇ ಸಾಕಷ್ಟು ಹೆಸರುಗಳಿಸಿರುವ ಧೀಮಂತ ಮೂರ್ತಿಗಳು.

ಸಾವಿರಾರು ವರ್ಷಗಳಿಂದ ಮಾನವನ ಸಹಜೀವಿಯಾಗಿ, ಸಂಪತ್ತಾಗಿ ಸಹಕರಿಸಿ ಇಂದು ಮಾನವನ ಕೃತಜ್ಞತೆಯಿಂದ ದುರ್ಭರ ಜೀವನ ನಡೆಸುತ್ತಿರುವ ಗೋಮಾತೆಯ ಸ್ಥಿತಿಯನ್ನು ಉತ್ತಮಪಡಿಸಲು ಅಹೋರಾತ್ರಿಯಿಂದ ಶ್ರಮಿಸುತ್ತಿರುವ  ಶ್ರೀ ಗುರುಗಳ ಕ್ರಮ ಶ್ಲಾಘನೀಯ. ಕಾಡುಹಂದಿ, ಹುಲಿ ಮುಂತಾದವುಗಳಿಗೂ ಅಭಯಾರಣ್ಯ ನಿರ್ಮಿಸುವ ನಾವು  ದನಕರುಗಳಿಗೆ ನಿರ್ಭಯವಾಗಿ ಅಭಯಾರಣ್ಯಗಳಿಲ್ಲದೆ ಬೇಡವಾದ ಕರುಗಳು ಬೇರೆ ಅವಕಾಶವೇ ಇಲ್ಲದೆ ಸಾವಿಗೆ ಶರಣಾಗುವ ಪರಿಸ್ಥಿತಿ ನಿಜಕ್ಕೂ ವಿಷಾದನೀಯವಲ್ಲವೇ? ಆಧುನಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ನುರಿತ ಕೆಲಮಂದಿ ಆಸಕ್ತ ಯುವಕ ಶಿಷ್ಯರ ತಂಡವೊಂದನ್ನು ರಚಿಸಿ, ವಿಶ್ವದಾದ್ಯಂತ ಹರಡಿರುವ ಶಿಷ್ಯರಿಗೂ,ಅಭಿಮಾನಿಗಳಿಗೂ ನೇರ ಸಂಪರ್ಕಕ್ಕೆ ದೊರೆಯುವಂತೆ ಹರೇರಾಮ.ಇನ್ ವೆಬ್ ಸೈಟ್ ಮುಖಾಂತರ ಗುರುಗಳ ಉಪದೇಶ, ಸೂಚನೆ,ಆದೇಶಗಳನ್ನು ತಿಳಿದುಕೊಂಡು ನೇರ ಸಂಪರ್ಕ ಸಾಧಿಸುವ ಸುತ್ಯರ್ಹ ಕಾರ್ಯಗಳನ್ನು ಮಾಡುವುದರ ಮೂಲಕ ಅಭಿನಂದನೀಯರಾಗಿದ್ದಾರೆ.

ದಿನಾಂಕ ೨೫-೦೫-೨೦೦೯ ರಂದು ನಮ್ಮ ಎಲ್ಯಡ್ಕ ಮನೆಯಲ್ಲಿ ನಡೆದ ಷಷ್ಟಿಪೂರ್ತಿ ಸಮಾರಂಭದಂದು ತಮ್ಮ ತುರ್ತು ಕೆಲಸಗಳ ನಡುವೆ ಕೃಪೆ ತೋರಿ ಎಲ್ಯಡ್ಕಕ್ಕೆ ದಯಮಾಡಿಸಿ, ದೇವರ ಕೋಣೆಯಲ್ಲಿ ದೇವರ ಪ್ರತಿರೂಪವಾಗಿ ಆಸೀನರಾಗಿ ಆತ್ಮೀಯ ಮಾತುಕತೆಗಳೊಂದಿಗೆ ಹರಸಿ ಸಭೆ ಸೇರಿದ್ದ ಬಂಧುಮಿತ್ರ, ನೆರೆಹೊರೆಯವರ ಸಮ್ಮುಖದಲ್ಲಿ ನಮ್ಮ ಆತ್ಮ ವೃತ್ತಾಂತ “ದೃಷ್ಟ-ಅದೃಷ್ಟ” ಕೃತಿಯನ್ನು ಬಿಡುಗಡೆಗೊಳಿಸಿ ನೆರೆದ ಸಮಸ್ತರನ್ನೂ ಹರಸಿ ಬೀಳ್ಕೊಡುವ ಮೊದಲು ನಮ್ಮ ಸಹವಾಸಿ ಗೋ ಸಂಸಾರದ ಮುತ್ತಜ್ಜಿ ಉಮಾ ಹಾಗೂ ಸಮಸ್ತ ಸದಸ್ಯರಿಗೂ ಫಲ ಮಂತ್ರಾಕ್ಷತೆ ನೀಡಿ ಹರಸಿದ ನೆನಪು ನಮ್ಮೆಲ್ಲರ ಕಣ್ಣ ಮುಂದೆ ಸದಾ ಹಸಿರಾಗಿದ್ದು ಗೌರವ ಭಾವನೆಯನ್ನು ಪ್ರಚೋದಿಸುತ್ತದೆ.
ಗುರು ಪರಂಪರೆಗೆ ವಂದನೆ ಭಗವಂತನಿಗೆ ಸೇರಿ ಭಗವಂತನ ಆಶೀರ್ವಾದ ಅವರ ಮೂಲಕ ಹರಿದು ಬರುತ್ತದೆ.

ನಮನಗಳು ಮತ್ತು ಆಶೀರ್ವಾದಗಳು ವಿದ್ಯುತ್ಪ್ರವಾಹದ ಎರಡು ತಂತಿಗಳಂತೆ ಹೊರಟಲ್ಲಿಗೆ ಬಂದು ಸೇರುವ ಪ್ರವಾಹಗಳು.
ಪ್ರತಿಯೊಂದು ವ್ಯಕ್ತಿಯೂ – ಕೆಲವರಿಗೆ ಗುರುಸ್ಥಾನದಲ್ಲಿದ್ದರೆ ಇನ್ನು ಕೆಲವರಿಗೆ ಶಿಷ್ಯರೇ. ಆದಿಗುರು ಭಗವಂತನೊಬ್ಬನೇ ಎಲ್ಲಾ ಗುರುಗಳಿಗೂ ಗುರು. ಗುರುಗಳಿಗೆ ನಮನ ಭಗವಂತನಿಗೆ ನಮನ. ಗುರುಗಳ ಕೃಪೆ-ಭಗವಂತನ ಕೃಪೆ. ಗುರು ಮತ್ತು ಭಗವಂತ ಜೊತೆಗೆ ಇದ್ದಾಗ ಮೊದಲು ಗುರುವಿನ ಪಾದಕ್ಕೆ ನಮಿಸುತ್ತೇನೆ. ಯಾಕೆಂದರೆ ಭಗವಂತನನ್ನು ತೋರಿಸಿ ಕೊಟ್ಟಾತ ಗುರು-ಅಂದಿದ್ದಾರೆ ಮಹಾತ್ಮ ಕಬೀರರರು. ಶ್ರೀ ಗುರುಗಳು ಆಶಿಸಿದ ಸಮಸ್ತ ರಚನಾತ್ಮಕ ಕಾರ್ಯಗಳಲ್ಲೂ ನಮ್ಮಿಂದಾದ ಅಳಿಲ ಸೇವೆ ಸಲ್ಲಿಸಲು ಸಮಸ್ತ ಶಿಷ್ಯ ಕೋಟಿಗೆ ಅನುವಾಗಲೆಂದು ಹಾರೈಸುತ್ತಾ ಗುರುಗಳಿಗೂ ಹಿರಿಯ ಕಿರಿಯ ಸೇವಾಸಕ್ತ ಶಿಷ್ಯ ವೃಂದಕ್ಕೂ ನಮನಗಳೊಂದಿಗೆ,


ಈಶ್ವರ ಭಟ್, ಎಸ್.
M.A. B.Ed
ಎಳ್ಯಡ್ಕ ಮನೆ, ಪಾಲ್ತಾಡಿ ಅಂಚೆ,
ಪುತ್ತೂರು ತಾಲೂಕು, ದ.ಕ 574210
ishwarabhats@gmail.com
08251-272292

ಪರಿಚಯ:

ಶ್ರೀ ಎಸ್.ಈಶ್ವರ ಭಟ್ಟರು

ಶ್ರೀ ಎಸ್.ಈಶ್ವರ ಭಟ್ಟರು ಪುತ್ತೂರು ತಾಲೂಕಿನ ಎಳ್ಯಡ್ಕದಲ್ಲಿರುವವರು. ಮೂವತ್ತನಾಲ್ಕು ವರುಶಗಳ ಕಾಲ ಅಧ್ಯಾಪನ ಸೇವೆ ಸಲ್ಲಿಸಿ ಈಗ ನಿವೃತ್ತ ಜೀವನವನ್ನು ಎಳ್ಯಡ್ಕ ಮನೆಯಲ್ಲಿ ನಡೆಸುತ್ತಿದ್ದಾರೆ. ವೇದ, ಜ್ಯೋತಿಷ್ಯ, ಚರಿತ್ರೆ, ಆಂಗ್ಲ-ಕನ್ನಡ ಸಾಹಿತ್ಯಗಳಲ್ಲಿ ವಿಶೇಷ ಒಲವನ್ನು ಹೊಂದಿರುವ ಇವರು ವಿದ್ಯಾವಂತ ಸಮಾಜದ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಪ್ರಸ್ತುತ ಅಪರೂಪದ ಅರ್ಥಗರ್ಭಿತ ಸುಭಾಷಿತಗಳ ಸಂಗ್ರಹವನ್ನು ಹವ್ಯಾಸವನ್ನಾಗಿಸಿಕೊಂಡು ವಿರಾಮದ ಸಮಯವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.
ಮಠ, ಪೀಠದ ಸೇವೆಯಲ್ಲಿಯೂ ಸಂತೋಷವನ್ನು ಕಾಣುತ್ತಿರುವ ಶ್ರೀ ಈಶ್ವರ ಭಟ್ಟರಿಗೆ ಶ್ರೀರಾಮನು ಶುಭಾಶೀರ್ವಾದವನ್ನು ಅನುಗ್ರಹಿಸಲೆಂದು ನಮ್ಮೆಲ್ಲರ ಹಾರಯಿಕೆ.

Facebook Comments Box