ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳವರ ಚರಣಪದ್ಮಗಳಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು.
ಭಾರತ ಸಮೃದ್ಧ ಹಾಗೂ ಸಂಪನ್ನ ರಾಷ್ಟ್ರ. ನಮ್ಮ ಭಾರತವು ವಿಶ್ವದ ಹೃದಯ ಭಾಗದಲ್ಲಿದೆ.
ಮಾನವ ಶರೀರದ ಪ್ರತಿಯೊಂದು ಅವಯವಕ್ಕೂ ಶಕ್ತಿ, ತೇಜಸ್ಸು, ಮತ್ತು ರಕ್ತ ಸಂಚಾರವು ಹೃದಯದಿಂದಲೇ ವಿನಿಯೋಗವಾಗುವಂತೆ ಪ್ರಪಂಚದ ಪ್ರತಿಯೊಂದು ಪ್ರದೇಶಕ್ಕೂ ಭಾರತ ದೇಶದಿಂದಲೇ ಧಾರ್ಮಿಕತೆ, ಜ್ಞಾನ, ಸಂಸ್ಕೃತಿ  ಮುಂತಾದವುಗಳು ಪ್ರಸಾರವಾಗುತ್ತಿದೆ.
ಸದಾ ಜೀವಂತವಾಗಿರುವ ಪುರಾತನ ಹಾಗೂ ಸನಾತನ ಸಂಸ್ಕೃತಿಯ ತವರುಮನೆಯೇ ಭಾರತ. ರಮಣೀಯವಾದ ಪ್ರಕೃತಿಸೌಂದರ್ಯ ನದಿವನಗಳ ಶಿಲ್ಪಕಲೆಗಳ ಬೀಡೇ ಭಾರತ. ಎಷ್ಟೋ ದೇವಾನುದೇವತೆಗಳು, ಋಷಿಮುನಿಗಳು ಮಹಾನ್ ತಪಸ್ವಿಗಳ ಪಾದಸ್ಪರ್ಶದಿಂದ ಪಾವನವಾದ ಪುಣ್ಯಭೂಮಿಯೇ ಭಾರತ.
ಅಂತಹ ಮಹಾನ್ ಪುರುಷರ ಆದರ್ಶಗಳು ಈ ಮಣ್ಣಿನ ಕಣಕಣಗಳಲ್ಲೂ ನೆಲೆನಿಂತಿದೆ. ಇಂತಹ ಐತಿಹಾಸಿಕ ಪರಂಪರೆ, ಧಾರ್ಮಿಕತೆ, ಸನಾತನ ಸಂಸ್ಕೃತಿಯ ತವರಾದ ಭಾರತವಿಂದು ವಿದೇಶೀ ಸಂಸ್ಕೃತಿಗೆ, ಆಧುನಿಕತೆಗೆ ಮಾರುಹೋಗಿ ತನ್ನತನವನ್ನು ಕಳೆದುಕೊಂಡು ಒದ್ದಾಡುತ್ತಿದೆ. ಇಂತಹ ಪುಣ್ಯಭೂಮಿಯಲ್ಲಿ ಹುಟ್ಟಿದ ನಾವಿಂದು ಬೆಳಕನ್ನು ಅರಸುತ್ತಾ ಕತ್ತಲಿನೆಡೆಗೆ ಸಾಗುತ್ತಿದ್ದೇವೆ. ನಮ್ಮ ಪರಂಪರೆ, ಸಂಸ್ಕೃತಿ, ಕಲೆಗಳನ್ನು ಮರೆತು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಂಡು ನಾಶದಂಚಿಗೆ ಸಾಗುತ್ತಿದ್ದೇವೆ. ಅಭಿವೃದ್ಧಿ, ಬೆಳವಣಿಗೆ, ಪ್ರಗತಿಗಳೆಂಬ ಬಯಕೆಗಳು ನಮ್ಮನ್ನು ಅಂಧಕಾರವೆಂಬ ಕೂಪಕ್ಕೆ ತಳ್ಳಿಹಾಕಿದೆ. ಇಂತಹ ಪುಣ್ಯಭೂಮಿಯಾದ ಭಾರತವು ನಾಶದಂಚಿಗೆ ಸಾಗುತ್ತಿದ್ದ ಕಾಲದಲ್ಲಿ ಅವತರಿಸಿರುವ ಮಹಾನ್ ತಪಸ್ವಿಗಳೇ ಜಗದ್ಗುರು ಶಂಕರಾಚಾರ್ಯಪೀಠದ ಗೋಕರ್ಣಮಂಡಲಾಧೀಶ್ವರರಾದ ೩೬ನೇ ಪೀಠಾಧಿಪತಿಗಳಾಗಿ ಪೀಠಾರೋಹಣ ಮಾಡಿರುವ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು. ಈ ಪೀಠಾರೋಹಣವು ಭಕ್ತಜನಸ್ತೋಮವನ್ನು ರೋಮಾಂಚನಗೊಳಿಸಿದ ಪರ್ವಕಾಲ. ಇದೇ ಸಮಯದಲ್ಲಿ ಪೂಜ್ಯ ಶ್ರೀಗಳು “ಈ ಜೀವನ ಭಗವಂತನಿಗಾಗಿ, ಸನಾತನ ಧರ್ಮ ಸಂಸ್ಕೃತಿಯ ರಕ್ಷಣೆಗಾಗಿ ಮುಡಿಪು, ಶಿಷ್ಯ ಸಮೂಹದ ಅನಾಥ ದೀನದುಃಖಿಗಳ ರಕ್ಷಣೆಗೆ ಅರ್ಪಿತ” ಎಂಬುದಾಗಿ ಘೋಷಿಸಿದ್ದರು. ಅಂದಿನಿಂದ ಶ್ರೀಗಳು ಸಾಮಾಜಿಕ ಪರಿವರ್ತನೆ ಹಾಗೂ ಪ್ರಾಚೀನ ಮೌಲ್ಯಗಳ ಪುನರುಜ್ಜೀವನಕ್ಕಾಗಿ ಹಲವು ರೀತಿಯ ಸಂಕಲ್ಪಗಳನ್ನು ಮಾಡಿ ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಆ ಕ್ಷಣದಿಂದ ಇಂದಿನವರೆಗೂ ಶ್ರೀಗಳು ಹಗಲಿರುಳೆನ್ನದೆ ಲೋಕಕ್ಕೆ ತಮ್ಮಿಂದ ಏನನ್ನು ಅರ್ಪಿಸಲು ಸಾಧ್ಯವೋ ಅವನ್ನೆಲ್ಲಾ ಸಮರ್ಪಿಸುತ್ತಾ ಬಂದಿದ್ದಾರೆ. ಶಿಷ್ಯಸಮಾಜದ ಏಳಿಗೆಯನ್ನು ಸದಾ ಬಯಸುವ ಪೂಜ್ಯ ಶ್ರೀಗಳ ಪಾದಧೂಳಿನಿಂದ ನಮ್ಮ ಪರಿಸರವಿಂದು ಪಾವನವಾಗಿದೆ. ಆದ್ದರಿಂದ ಪೂಜ್ಯ ರಾಘವೇಶ್ವರಶ್ರೀಗಳು ಭಾರತದ ಹೃದಯವಲ್ಲವೇ?

ಗುರುಬ್ರಹ್ಮ ಗುರುರ್ವಿಷ್ಣೊ ಗುರುರ್ದೇವೋ ಮಹೇಶ್ವರಃ |
ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ||

ಗುರುವೆಂದರೆ ಬ್ರಹ್ಮ ವಿಷ್ಣು ಮಹೇಶ್ವರರ ಸ್ವರೂಪ. ಜಗತ್ತಿನ ಸೃಷ್ಟಿ ಸ್ಥಿತಿ ಲಯಕ್ಕೆ ಅಧಿಪತಿಗಳಾಗಿರುವ ಬ್ರಹ್ಮ ವಿಷ್ಣು ಮಹೇಶ್ವರರ ಗುಣಗಳನ್ನು ಶ್ರೀಗುರುಗಳಲ್ಲಿ ನಾವು ಕಾಣಬಹುದು.
ಜೀವಜಗತ್ತಿನ ಸೃಷ್ಟಿಗೆ ಕಾರಣನಾದವನೇ ಬ್ರಹ್ಮ. ಬ್ರಹ್ಮ ಸೃಷ್ಟಿಸಿದ ಈ ಜಗತ್ತು ಇಂದು ಮಾನವನ ಅಜ್ಞಾನ ಅನಾಚಾರ ಹಾಗೂ ಸ್ವಾರ್ಥದಿಂದ ನಾಶದ ಅಂಚಿಗೆ ಸಾಗುತ್ತಿದೆ.

ನಮ್ಮಲ್ಲಿಂದು ಮೂಲಭೂತ ಸಮಸ್ಯೆಗಳಾದ ಬಡತನ, ನಿರುದ್ಯೋಗ, ಅನಕ್ಷರತೆ, ಅನಾರೋಗ್ಯ ತಾಂಡವವಾಡುತ್ತಿದೆ. ನಮ್ಮ ಪ್ರಾಚೀನ ಪರಂಪರೆ, ಸಂಸ್ಕೃತಿ, ಧಾರ್ಮಿಕ ತಳಹದಿ ಇವನ್ನೆಲ್ಲಾ ಮರೆತು ಕ್ಷಣಿಕ ಸುಖಕ್ಕಾಗಿ ಹಾತೊರೆಯುತ್ತಿದ್ದೇವೆ.
ಶಾಂತಿ ಸುಭಿಕ್ಷೆಗಳಿಂದ ಕೂಡಿದ ದೇಶದಲ್ಲಿಂದು ಕತ್ತಲಾವರಿಸಿದೆ. ಈ ಸಂದಿಗ್ಧ ಕಾಲದಲ್ಲಿ ಅಲ್ಪಸಮಯದಲ್ಲಿ ಹಲವಾರು ಯೋಜನೆಗಳನ್ನು ಹುಟ್ಟುಹಾಕಿ ಅವುಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾದ ಸಾಕಾರಮೂರ್ತಿಯೇ “ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು“.
ಪೂಜ್ಯರು ಶ್ರೀಮಠದ ಸಾಂಪ್ರದಾಯಿಕ ಚೌಕಟ್ಟಿಗೆ ಮಾತ್ರ ಸೀಮಿತಗೊಳ್ಳದೆ ದೇಶದೆಲ್ಲೆಡೆ ಸಂಚಾರ ಕೈಗೊಂಡು ಆಧುನಿಕ ಜಗತ್ತಿನಲ್ಲಿ ನಶಿಸುತ್ತಿರುವ ಸನಾತನ ಸಂಸೃತಿಯ ಪುನರುತ್ಥಾನದ ಜೊತೆಗೆ ಸಮಾಜದ ಅವಶ್ಯಕತೆಗಳಿಗೆ ಅನುಗುಣವಾಗಿ ಹಾಗೂ ಸರ್ವತೋಮುಖ ಅಭಿವೃದ್ಧಿಗಾಗಿ ಹಲವು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಒಟ್ಟಿನಲ್ಲಿ ಸಮಾಜವನ್ನು ಸುಜ್ಞಾನ, ಸುಖ, ಶಾಂತಿ, ಸಮರಸ, ನೆಮ್ಮದಿಯತ್ತ ಕರೆದೊಯ್ಯುವುದೇ ಶ್ರೀಗುರುಗಳ ಮುಖ್ಯ ಉದ್ದೇಶ. ಇದಲ್ಲದೆ ಮುಖ್ಯವಾಗಿ ಮೂಲಮಠವಿರುವ ಜಾಗವನ್ನು ಅವಿಷ್ಕರಿಸಿ ಮೂಲಮಠದ ಪುನರುತ್ಥಾನಕ್ಕೆ ಶ್ರಮಿಸುತ್ತಿದ್ದಾರೆ. ಕೋಟಿಗಟ್ಟಲೆ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಮೂಲಮಠವು ಭೂಕೈಲಾಸವೆಂದೇ ಪ್ರತೀತವಾದ ಗೋಕರ್ಣದ ಸಮೀಪದ “ಅಶೋಕೆ” ಎಂಬಲ್ಲಿದೆ. ಅಶೋಕವೆಂದರೆ ಶೋಕರಹಿತವಾದದ್ದು. ಶೋಕನಿವಾರಣೆಯಾಗಿ ಸಮಸ್ತರನ್ನೂ ಆನಂದಮಯವಾಗಿಸುವುದೇ ಇದರ ಉದ್ದೇಶ. ಮೊದಲು ಈ ಅಶೋಕೆಯಲ್ಲಿ ಹುಲಿ-ಜಿಂಕೆಗಳ ಮೈತ್ರಿ ಇತ್ತು. ಈ ರೀತಿಯ ಸಾಮರಸ್ಯ ಮೈತ್ರಿಗಳನ್ನು ಪುನರ್ನಿರ್ಮಾಣ ಮಾಡುವುದೇ ಶ್ರೀಗುರುಗಳ ಆಶಯ. ಹೀಗೆ ಶ್ರೀಗುರುಗಳ ದಿವ್ಯ ಮಾರ್ಗದರ್ಶನದಂತೆ ಶರವೇಗದಲ್ಲಿ ಸಾಗುತ್ತಿರುವ ಈ ಮೂಲಮಠದ ನಿರ್ಮಾಣ ಭಕ್ತಸಮೂಹಕ್ಕೊಂದು ವರವಾಗಿದೆ. ಶ್ರೀಗಳ ಅವಿರತಪ್ರಯತ್ನದಿಂದಲೇ ನಿರ್ಮಾಣವಾಗುತ್ತಿರುವ ಈ ಮೂಲಮಠ ಶಿಷ್ಯಸಮಾಜಕ್ಕಾಗಿಯಲ್ಲವೇ? ಅವರ ಈ ಪ್ರಯತ್ನದಲ್ಲಿ ನಾವೂ ಭಾಗಿಗಳಾಗಬೇಕಲ್ಲವೇ? ಹೀಗೆ ನಶಿಸಿಹೋದ ಪರಂಪರೆ, ಸನಾತನ ಧರ್ಮ, ಸಂಸ್ಕೃತಿ, ಹಾಗೂ ಎಷ್ಟೋ ದೇವಾಲಯಗಳನ್ನು, ಮೂಲಮಠಗಳನ್ನು ಪುನರ್ ಸೃಷ್ಟಿ ಮಾಡುತ್ತಿರುವ ಪೂಜ್ಯ ರಾಘವೇಶ್ವರಶ್ರೀಗಳು ಬ್ರಹ್ಮನ ಅವತಾರವಲ್ಲವೇ?

ಜಗತ್ತಿನ ಎಲ್ಲಾ ರಾಷ್ಟ್ರಗಳಿಂದಲೂ ಪುರಾತನ ಸನಾತನವೆಂದು ಪ್ರಖ್ಯಾತವಾದ ರಾಷ್ಟ್ರ ಭಾರತ. ಶ್ರೀರಾಮನ ಆಳ್ವಿಕೆಯ ಕಾಲದಲ್ಲಿ ಭಾರತದಲ್ಲಿ ಶಾಂತಿ ಸುಭಿಕ್ಷೆಗಳು ನೆಲೆಗೊಂಡಿದ್ದವು. ಆ ಕಾಲದಲ್ಲಿ ಪ್ರತಿಯೊಬ್ಬನಲ್ಲೂ ಜ್ಞಾನದ ಜ್ಯೋತಿಯಿತ್ತು, ತುಡಿಯುವ ಮನವಿತ್ತು, ಮಿಡಿಯುವ ಹೃದಯವಿತ್ತು. ನ್ಯಾಯ ಮಾನವೀಯ ಮೌಲ್ಯಗಳಿಗೆ ಬೆಲೆಯಿತ್ತು. ಯಾವುದೇ ಹಿಂಸೆ, ಅಧರ್ಮ , ದುಃಖ, ದಾರಿದ್ರ್ಯ ಕಳ್ಳಕಾಕರ ಭಯವಿಲ್ಲದೆ ಪ್ರಜೆಗಳು ನಿರಾತಂಕದಿಂದ ಬಾಳ್ವೆ ನಡೆಸುತ್ತಿದ್ದರು. ಹೀಗೆ ರಾಮನ ಕಾಲದಲ್ಲಿ ಭರತಭೂಮಿಯು ಸುಖ, ಸಮೃದ್ಧಿಗಳ ಆಗರವೇ ಆಗಿತ್ತು. ಇಂತಹ ಪುಣ್ಯಭೂಮಿಯಾದ ಭಾರತವಿಂದು ಮನುಷ್ಯನ ಸ್ವಾರ್ಥ, ಮೋಸ, ಭ್ರಷ್ಟಾಚಾರ, ಲಂಚಕೋರತನ, ಸ್ವಜನ ಪಕ್ಷಪಾತ, ಶೋಷಣೆ, ಅನಾಚಾರದಿಂದ ತೊಳಲಾಡುತ್ತಿದೆ. ದೇಶದ ಈ ದುಃಸ್ಥಿತಿಯನ್ನು ಕಂಡು ಕಳವಳಗೊಂಡ ಪೂಜ್ಯಶ್ರೀಗಳು ಶ್ರೀರಾಮನ ಆದರ್ಶಗಳನ್ನು ಪಾಲಿಸಿಕೊಂಡು ವಿವಿಧ ಸಮಾಜಕಲ್ಯಾಣ ಯೋಜನೆಗಳನ್ನು ಹುಟ್ಟುಹಾಕಿ ರಾಮರಾಜ್ಯಕ್ಕಾಗಿ ಹೋರಾಡುತ್ತಿದ್ದಾರೆ. ಇದಕ್ಕಾಗಿ ಶ್ರೀಗಳು ಹೊಸನಗರದಲ್ಲಿ ಜಾಗತಿಕ ಇತಿಹಾಸದಲ್ಲಿಯೇ ಅತಿದೊಡ್ಡ ರಾಮಯಣ ಹಬ್ಬವಾದ ಶ್ರೀರಾಮಾಯಣ ಮಹಾಸತ್ರವನ್ನು ಏರ್ಪಡಿಸಿ, ಜನರಲ್ಲಿ ರಾಮರಾಜ್ಯದ ಬಗ್ಗೆ ಅರಿವುಮೂಡಿಸಿದರು. ಈ ಮಹಾಸತ್ರವು ಶ್ರೀಗುರುಗಳ ಮಾರ್ಗದರ್ಶನ ಹಾಗೂ ದಿವ್ಯ ಉಪಸ್ಥಿತಿಯಲ್ಲಿ ೧೦ ದಿವಸಗಳ ಕಾಲ ವೈಭವದಿಂದ ನಡೆಯಿತು. ಈ ಮಹಾಸತ್ರವು ಶ್ರೀರಾಮನ ಸಂಪ್ರೀತಿಗಾಗಿ ನಡೆದ ಮಹಾ ಹಬ್ಬ. ಇದರಲ್ಲಿ ಶ್ರೀರಾಮನ ಸನ್ನಿಧಿಯಲ್ಲಿ ಏಕಕಾಲಕ್ಕೆ ೧೦೦೮ ಮಂದಿ ವಾಲ್ಮೀಕಿ ರಾಮಯಣ ಪಾರಾಯಣ, ಶ್ರೀರಾಮತಾರಕ ಮಹಾಯಾಗ, ಶ್ರೀರಾಮಸಾಮ್ರಾಜ್ಯ ಪಟ್ಟಾಭಿಷೇಕ ಅಂದರೆ ಪ್ರಭು ಶ್ರೀರಾಮಚಂದ್ರನಿಗೆ ಭರತಖಂಡದ ಸಕಲ ಪುಣ್ಯನದಿಗಳ ಸರೋವರಗಳ ಚತುಸ್ಸಾಗರಗಳ ಜಲದಿಂದ ಅಭಿಷೇಕಮಾಡಿ ರಾಜಾಧಿರಾಜನಿಗೆ ಒಪ್ಪುವ ವಸ್ತ್ರಾಭರಣಗಳೊಂದಿಗೆ ದೇವರಾಜೋಪಚಾರ ಸೇವಾಸಮರ್ಪಣೆ ನಡೆಯಿತು. ಇದಲ್ಲದೆ ಶ್ರೀರಾಮನ ಚರಣಕ್ಕೆ ಶ್ರೀಗುರುಗಳಿಂದ ಶ್ರೀಮಠದ ಸರ್ವಸಂಪತ್ತಿನ ಸಮರ್ಪಣೆ ಹಾಗೂ ಸಾರ್ವಜನಿಕರಿಂದಲೂ ಸಹ ಧನ-ಧಾನ್ಯ, ವಸ್ತು, ಒಡವೆಗಳು ಕಾಣಿಕೆಯಾಗಿ ನೀಡಬಹುದಾದ ಅವಕಾಶವೂ ಇತ್ತು.
ಪೂಜ್ಯ ಶ್ರೀಗಳವರಿಂದ ನಿತ್ಯ ಶ್ರೀರಾಮಾಯಣ ಪ್ರವಚನ, ಹಗಳಿರುಳೆನ್ನದೆ ನಿರಂತರ ಶ್ರೀರಾಮ ಭಜನೆ, ಶ್ರೀರಾಮಲೀಲಾ ಉತ್ಸವ, ಶ್ರೀರಾಮಾಯಣವನ್ನು ಆಧರಿಸಿದ ಶಿಲ್ಪಗಳು, ಚಿತ್ರಗಳು ಹಾಗೂ ನೃತ್ಯಗಳನ್ನು ಉತ್ತಮ ಕಲಾವಿದರು ಸೃಷ್ಟಿಸಿ ಪ್ರದರ್ಶನ ಮಾಡುವ ವಿನೂತನ ಕಾರ್ಯಕ್ರಮವಿತ್ತು. ಹಾಗೂ ಎಲ್ಲಾ ದಿನಗಳಲ್ಲೂ ಶ್ರೀರಾಮಾಯಣ ಕಥಾಕೇಂದ್ರಿತ  ಕಲಾಪ್ರಕಾರಗಳ ಪ್ರದರ್ಶನ ನಡೆದು ಶ್ರೀರಾಮಾಯಣ ದರ್ಶನವೇ ಆದಂತಿತ್ತು. ಇದಲ್ಲದೆ ಆ ಸಮಯದಲ್ಲಿ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಗೆ ಗುರುಪರಂಪರೆಯಿಂದ ಬಂದ ಕಿರೀಟೋತ್ಸವ ಕಾರ್ಯಕ್ರಮವು ಹಿಂದಿನ ರಾಜದರ್ಬಾರನ್ನು ಮತ್ತೆ ನೆನಪಿಸುವ ರೀತಿಯಲ್ಲಿ ನಡೆಯಿತು.
ಕೊನೆಯಲ್ಲಿ ಪೂಜ್ಯಗುರುಗಳಿಂದ ಅಲ್ಲಿ ಸೇರಿದ ಸಮಸ್ತರೂ ಫಲ ಮಂತ್ರಾಕ್ಷತೆ ಪಡೆದು ಧನ್ಯರಾದದ್ದನ್ನು ನಾವು ಕಂಡಿದ್ದೇವೆಯಲ್ಲವೇ? ಹೀಗೆ ನಿರಂತರವಾಗಿ ೧೦ ದಿನಗಳ ಕಾಲ ರಾಮರಾಜ್ಯದ ವೈಭವವನ್ನು ನೋಡುವ ಸದವಕಾಶ ಶ್ರೀಗುರುಗಳಿಂದ ನಮಗೆ ಲಭಿಸಿತು. ಈ ಮಹಾ ಹಬ್ಬದಲ್ಲಿ ಸಾವಿರಗಟ್ಟಲೆ ಮಂದಿ ಸೇವೆ ಸಲ್ಲಿಸಿ ಶ್ರೀರಾಮನ, ಶ್ರೀಗುರುಗಳ ಕೃಪೆಗೆ ಪಾತ್ರರಾದರು. ಲಕ್ಷಗಟ್ಟಲೆ ಮಂದಿ ಇದನ್ನು ವೀಕ್ಷಿಸಿ ಬೆರಗಾದರು. ಹಾಗಾಗಿ ಶ್ರೀಗುರುಗಳು ಆಯೋಜಿಸಿದ್ದ ಶ್ರೀರಾಮಾಯಣ ಮಹಾಸತ್ರದಲ್ಲಿ ನಾವು ರಾಮರಾಜ್ಯದ ಕಲ್ಪನೆಯನ್ನು ಕಂಡಿದ್ದೇವೆಯಲ್ಲವೇ? ಅಂತಹ ಆ ದಿನಗಳನ್ನು ನಾವು ನಿತ್ಯವೂ ಕಾಣಬೇಕಲ್ಲವೇ? ಆದ್ದರಿಂದ ನಾವೆಲ್ಲ ಶ್ರೀಗುರುಗಳ ಧರ್ಮಜಾಗೃತಿಯ ಈ ಮಹತ್ಕಾರ್ಯದಲ್ಲಿ ಕೈಜೋಡಿಸಬೇಕಾಗಿದೆ. ಧರ್ಮಸ್ಥಾಪನೆಗೆ ಅಂದು ಶ್ರೀರಾಮನಿಗೆ ಕಪಿಸೈನ್ಯ ಸಹಾಯಮಾಡಿದಂತೆ ಇಂದು ಶ್ರೀಗುರುಗಳಿಗೆ ನಾವು ಕೈಜೋಡಿಸಬೇಕು. ಅಂದು ಶ್ರೀರಾಮನಿಗೆ ಕಪಿಗಳೇ ಅಷ್ಟೊಂದು ಸಹಾಯ ಮಾಡಿರುವಾಗ ಕೊನೇಪಕ್ಷ ಮಾನವ ಜನ್ಮವೆತ್ತಿದ ನಾವಿಂದು ಶ್ರೀಗುರುಗಳಿಗೆ ಧರ್ಮಸ್ಥಾಪನೆಗಾಗಿ ಕಪಿಗಳಷ್ಟಾದರೂ ಸಹಾಯಮಾಡಬೇಡವೇ? ಪ್ರಜೆಗಳ ರಕ್ಷಣೆಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟ ಶ್ರೀರಾಮನನ್ನು ಮೀರಿಸಿದ ರಾಜ ಸಿಗಲಾರ. ಅಂತೆಯೇ ಸಮಾಜದ ರಕ್ಷಣೆಗಾಗಿ, ಶ್ರೇಯೋಭಿವೃದ್ಧಿಗಾಗಿ, ಶಿಷ್ಯರಿಗಾಗಿ ಸದಾ ಮಿಡಿಯುವ ರಾಘವೇಶ್ವರಶ್ರೀಗಳಂತಹ ಬೇರೊಬ್ಬ ಮಹಾನ್ ತಪಸ್ವಿ ಸಿಗಲಾರರು. ಈ ಮಹಾನ್ ತಪಸ್ವಿಗಳ ಮಾರ್ಗದರ್ಶನದಲ್ಲಿ ಹೊರಹೊಮ್ಮಿರುವ ಯೋಜನೆಗಳಿಂದಾಗಿ ನಾವಿಂದು ರಾಮರಾಜ್ಯದ ಕನಸನ್ನು ಕಾಣಬಹುದಾಗಿದೆ.
ಇದಕ್ಕೆಲ್ಲಾ ಕಾರಣೀಭೂತರಾದ ಶ್ರೀಗಳು ಶ್ರೀರಾಮನ ಅವತಾರವಲ್ಲವೇ?

ಭಾರತ ಕೃಷಿಪ್ರಧಾನವಾದ ದೇಶ. ನಮ್ಮ ದೇಶದ ಮುಖ್ಯ ಸಂಪತ್ತೇ ಕೃಷಿ ಮತ್ತು ಗೋವು. ಇವೆರಡೂ ಭಾರತದ ಬೆನ್ನೆಲುಬು ಇದ್ದಂತೆ, ಒಂದಕ್ಕೊಂದು ಪೂರಕವಾಗಿವೆ. ಹಿಂದೆ ಪೂರ್ವಜರು ಗೋ ಉತ್ಪನ್ನಗಳಾದ ಗೋಮೂತ್ರ, ಸೆಗಣಿ ಇತ್ಯಾದಿಗಳನ್ನು ಬಳಸಿ ಕೃಷಿ ಮಾಡುತ್ತಿದ್ದರು. ಅದಲ್ಲದೆ ೩೩ ಕೋಟಿ ದೇವತೆಗಳ ಆವಾಸಸ್ಥಾನವಾಗಿರುವ ಗೋಮಾತೆಯನ್ನು ಕೇವಲ ಹಾಲಿನ ಯಂತ್ರವಾಗಿ ಮಾತ್ರ ನೋಡದೇ ಪಂಚಗವ್ಯಗಳಾದ ಹಾಲು, ಮೊಸರು, ತುಪ್ಪ, ಗೋಮೂತ್ರ, ಗೋಮಯದ ಎಲ್ಲಾ ಪ್ರಯೋಜನಗಳನ್ನೂ ಪಡೆದುಕೊಳ್ಳುತ್ತಿದ್ದರು. ಹೀಗೆ ಪೂರ್ವಜರು ವ್ಯವಸಾಯದಲ್ಲಿ, ಆಹಾರದಲ್ಲಿ ಔಷಧಿಯ ಖನಿಯಾಗಿ ಹಾಗೂ ಓಡಾಟಕ್ಕೂ ಗೋವುಗಳನ್ನು ಬಳಸುತ್ತಿದ್ದರು. ಇದರಿಂದ ಆಹಾರ ಔಷಧಗಳೆಲ್ಲವೂ ಅಮೃತವಾಗಿತ್ತು. ಯಾವುದೇ ರೋಗರುಜಿನಗಳಿಲ್ಲದೇ ಜನರು ಜೀವನ ಸಾಗಿಸುತ್ತಿದ್ದರು. ಆದರೆ ಇಂದು ಆಧುನಿಕ ಯುಗದಲ್ಲಿ ವ್ಯವಸಾಯಕ್ಕೆ, ಸರಕು ಸಾಮಾಗ್ರಿಗಳ ಸಾಗಾಟಕ್ಕೆ ಓಡಾಟಕ್ಕೆ ಗೋವುಗಳ ಬದಲಾಗಿ ಯಂತ್ರೋಪಕರಣಗಳನ್ನು ಉಪಯೋಗಿಸುತ್ತಿದ್ದೇವೆ. ಹೀಗೆ ಆಧುನಿಕ ಕೃಷಿಪದ್ಧತಿ ಹಾಗೂ ಕೈಗಾರಿಕೋದ್ಯಮಗಳಿಂದಾಗಿ ಇಂದು ಗೋಸಂತತಿ ಅಳಿವಿನಂಚಿನಲ್ಲಿದೆ. ಅಲ್ಲದೆ ವ್ಯಾಪಾರದ ದೃಷ್ಟಿಯಿಂದಲೂ ಗೋವುಗಳನ್ನು ಹತ್ಯೆಗೈದು ಪಾಪಿಷ್ಟರಾಗುತ್ತಿದ್ದೇವೆ. ಇದರಿಂದ ಆತಂಕಗೊಂಡ ಶ್ರೀಗಳು ರಾಷ್ಟ್ರವ್ಯಾಪಿ ಸಂಚರಿಸಿ ಗೋಸಂರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ದೇಶದ ಮೂಲೆ ಮೂಲೆಗಳಲ್ಲೂ ಸಂಚರಿಸಿ ಗೋವಿನ, ಗೋಸಂರಕ್ಷಣೆಯ ಬಗ್ಗೆ ಗೋಷ್ಠಿಗಳನ್ನು ನಡೆಸಿ ಜನರಲ್ಲಿ ಜಾಗೃತಿಯನ್ನು ಮೂಡಿಸಿದ್ದಾರೆ. ಗೋವಿಗಾಗಿ ತನ್ನ ಜೀವಿತವನ್ನೇ ಮುಡಿಪಾಗಿಟ್ಟ ಶ್ರೀಗಳು ವಿಶ್ವಮಂಗಲ ಗೋಗ್ರಾಮ ಯಾತ್ರೆಯ ಸಂಕಲ್ಪಮಾಡಿ ಜನಸಾಮಾನ್ಯರಿಂದ ಹಿಡಿದು ಸರಕಾರದ ತನಕ ಎಲ್ಲರ ಗಮನವನ್ನು ಗೋಸಂರಕ್ಷಣೆಯತ್ತ ಸೆಳೆದಿದ್ದಾರೆ. ಎಷ್ಟೋ ಜನ ಮಹಾನ್ ಸಂತರು, ಸನ್ಯಾಸಿಗಳು ಇವರೊಡನೆ ಒಟ್ಟಾಗಿ ಸೇರಿ ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಇದಲ್ಲದೆ ಗೋಹತ್ಯಾನಿಷೇಧ ಕಾನೂನಿಗಾಗಿ ಆಗ್ರಹಿಸಿ ೫೦ ಕೋಟಿ ಗೋಪ್ರೇಮಿಗಳ ಹಸ್ತಾಕ್ಷರ ಸಂಗ್ರಹಿಸಿ ಅದನ್ನು ರಾಷ್ಟ್ರಪತಿಗಳಿಗೆ ಸಮರ್ಪಣೆ ಮಾಡಿದ್ದಾರೆ. ಗೋಮಾತೆಯ ಹಾಲುಂಡ ಪ್ರತಿಯೊಬ್ಬನೂ ಈ ಗೋಸಂರಕ್ಷಣಾ ಕಾರ್ಯದತ್ತ ಕೈಜೋಡಿಸಬೇಕಲ್ಲವೇ?
ಇದಲ್ಲದೆ ಪೂಜ್ಯಶ್ರೀಗಳು “ವಿಶ್ವಗೋಸಮ್ಮೇಳನವನ್ನು” ಏರ್ಪಡಿಸಿ ಗೋವಂಶವೈಭವದ ಪ್ರತ್ಯಕ್ಷ ದರ್ಶನವನ್ನು ಜನರಿಗೆ ಮಾಡಿಸಿದ್ದಾರೆ. ಇದೊಂದು ಜಾಗತಿಕ ಇತಿಹಾಸದಲ್ಲಿಯೇ ಎಂದೂ ಕಾಣದ ಗೋವಿನ ಮಹಾಹಬ್ಬ. ಈ ಗೋಸತ್ರದಲ್ಲಿ ಮುಖ್ಯವಾಗಿ ಗೋಮಾತಾ ಪೂಜೆ, ಶ್ರೀಮಠದ ಗೋಶಾಲೆಯ ಗೋವುಗಳಿಗೆ ವೈಯಕ್ತಿಕ ಗೋಗ್ರಾಸ ಸಮರ್ಪಣೆ, ಗೋಪ್ರೇಮಿಗಳಿಂದ ಹೂವು, ಗಂಧ ಚಂದನ ಒಡವೆಗಳಿಂದ ಗೋಮಾತೆಯ ಪೂರ್ಣಾಲಂಕಾರ ಸೇವೆ, ಅಖಂಡ ಗೋಮಾತಾಭಜನೆ, ಗೋಸೂಕ್ತಹವನ ಹಾಗೂ ಕಾಮಧೇನು ಹವನ, ಗೋಮಾತೆಯ ತುಲಾಭಾರಸೇವೆ, ನಿರಂತರ ಕೊಳಲು ವಾದನ, ಗೋವುಗಳನ್ನು ಆಧರಿತ ಶಿಲ್ಪ-ಚಿತ್ರಗಳನ್ನು ಕಲಾವಿದರು ಸೃಷ್ಟಿಸಿ ಪ್ರದರ್ಶನ ಮಾಡುವ ವಿನೂತನ ಕಾರ್ಯಕ್ರಮ ಇತ್ಯಾದಿಗಳನ್ನೊಳಗೊಂಡ ಗೋಸಾಮ್ರಜ್ಯದ ವೈಭವವನ್ನು ನಾವು ಕಂಡಿದ್ದೇವೆಯಲ್ಲವೇ? ಇಂದು ಶ್ರೀಮಠದ ಪ್ರವೇಶಸ್ಥಳಗಳಲ್ಲಿ ನಮ್ಮನ್ನು ಸ್ವಾಗತಿಸುವುದು ಗೋಲೋಕವಲ್ಲವೇ? ಈ ಗೋಶಾಲೆಗಳಲ್ಲಿ ಎಲ್ಲಾ ಜಾತಿಯ ಭಾರತೀಯ ಗೋತಳಿಗಳನ್ನು ನಾವು ವೀಕ್ಷಿಸಬಹುದು. ಅಲ್ಲದೆ ಮುಖ್ಯವಾಗಿ ಶ್ರೀಗುರುಗಳನ್ನು ಗೋವುಗಳು ಪ್ರೀತಿಯಿಂದ ಸುತ್ತುತ್ತಿರುವ ರಮಣೀಯ ದೃಶ್ಯವನ್ನು ನಾವು ಕಾಣಬಹುದು. ಹೀಗೆ ಸದಾ ಗೋವುಗಳ ಲಾಲನೆ, ಪಾಲನೆ, ಪೋಷಣೆಗಳನ್ನು ಮಾಡುತ್ತಿರುವ ಶ್ರೀಗಳನ್ನು ನೋಡಿದರೆ ಶ್ರೀಕೃಷ್ಣಪರಮಾತ್ಮನು ನೆನಪಿಗೆ ಬರುತ್ತಾನಲ್ಲವೇ? ಹಿಂದೆ ಗೋಕುಲದಲ್ಲಿ ಶ್ರೀಕೃಷ್ಣಪರಮಾತ್ಮನೂ ಗೋವುಗಳ ಲಾಲನೆ, ಪಾಲನೆ, ಪೋಷಣೆಗಳನ್ನು ಮಾಡುತ್ತಾ ಗೋವುಗಳ ಮಧ್ಯೆಯೇ ಇರುತ್ತಿದ್ದನು. ಅಂದು ಗೋಕುಲದಲ್ಲಿ ಗೋವುಗಳು ಹೇಗೆ ನಿರ್ಭಯವಾಗಿ ತಿರುಗಾಡುತ್ತಿದ್ದವೋ ಹಾಗೆಯೇ ಇಂದು ಶ್ರೀಗಳ ಸಮ್ಮುಖದಲ್ಲಿ ಈ ದೃಶ್ಯವನ್ನು ನಾವು ಕಾಣಬಹುದು. ತಮ್ಮ ಜೀವನವನ್ನೇ ಗೋಸಂರಕ್ಷಣೆಗೆ ಮುಡಿಪಾಗಿಟ್ಟ ಶ್ರೀಗಳ ಈ ಮಹತ್ಕಾರ್ಯವನ್ನರಿತು ನಾವೂ ಗೋಸಂರಕ್ಷಣೆಗೆ ಕೈಜೋಡಿಸಿ ಗೋಮಾತೆಯ ಕೃಪೆಗೆ ಪಾತ್ರರಾಗೋಣವಲ್ಲವೇ? ಆದ್ದರಿಂದ ಅಂದು ಶ್ರೀಕೃಷ್ಣಪರಮಾತ್ಮನಿಂದ ಮಾತ್ರ ಸಾಧ್ಯವಾದ ಗೋಸಂರಕ್ಷಣೆಯನ್ನು ಇಂದು ರಾಷ್ಟ್ರಮಟ್ಟದಲ್ಲಿ ಮಾಡುತ್ತಿರುವ ರಾಘವೇಶ್ವರಶ್ರೀಗಳು ಶ್ರೀಕೃಷ್ಣಪರಮಾತ್ಮನ ಅವತಾರವಲ್ಲವೇ?

ವಿಶ್ವಕ್ಕೆ ಭಾರತವೇ ಆತ್ಮ. ಇಡೀ ವಿಶ್ವಕ್ಕೆ ಧಾರ್ಮಿಕತೆ, ಆಧ್ಯಾತ್ಮಿಕತೆ ಭೋದಿಸಿದಂತಹ ಭಾರತದಲ್ಲಿ ಮಾನವನ ಮಿತಿಮೀರಿದ ಆಸೆ ಆಕಾಂಕ್ಷೆಗಳು, ಪಾಶ್ಚಿಮಾತ್ಯ ಸಮಾಜದ ಪ್ರಭಾವ, ಜೀವನದ ಜಂಜಾಟ, ಸೂಕ್ತ ಮಾರ್ಗದರ್ಶನದ ಕೊರತೆಯಿಂದ ದೇವರು, ಧರ್ಮಗಳಿಂದ ದೂರ ಸರಿಯುತ್ತಿದ್ದೇವೆ. ಮಿತಿಮೀರಿದ ಕ್ರೌರ್ಯ, ಮದ, ಮತ್ಸರ, ಹಿಂಸೆಗಳಿಂದ ಕೂಡಿದ ಸಮಾಜದಲ್ಲಿಂದು ಸರಳತೆ, ಸಜ್ಜನಿಕೆ, ಮಾನವೀಯತೆ ಇವೆಲ್ಲಾ ದೂರವಾಗಿ ಹೋಗಿದೆ. ಮಾನವನ ಅನಾಚಾರ ಹಾಗೂ ಹಿಂಸೆಗಳಿಂದ ಪ್ರಕೃತಿಯ ಒಡಲಿಗೆ ದೊಡ್ಡ ಪೆಟ್ಟೇ ಬಿದ್ದಿದೆ. ನಮ್ಮ ಪರಿಸರವಿಂದು ಭೂಕಂಪ, ಸುನಾಮಿ, ಅತಿವೃಷ್ಟಿ, ಅನಾವೃಷ್ಟಿ ಮೊದಲಾದ ಪ್ರಾಕೃತಿಕ ವಿಕೋಪಗಳಿಂದ ನಾಶಹೊಂದುತ್ತಿದೆ. ಇಂದು ಸಮಾಜದ ಅದೆಷ್ಟೋಜನ ಬದುಕಿನ ದಾರಿಕಾಣದೆ ಬಡತನದ ಬೇಗೆಯಲ್ಲಿ ಬೇಯುತ್ತಿದ್ದಾರೆ. ಅನಾಥ ಪ್ರಜ್ಞೆಯಿಂದ ನರಳುತ್ತಿದ್ದಾರೆ. ಲಕ್ಷಗಟ್ಟಲೆ ಮಂದಿ ನಿರಾಶ್ರಿತರಾಗಿದ್ದಾರೆ. ಇಂತಹ ದುಃಖ ಬವಣೆಗಳನ್ನು ಅನುಭವಿಸುತ್ತಿರುವ ಸಮಾಜದ ಕಣ್ಣೀರೊರೆಸಲು, ಅವರಲ್ಲಿ ಬದುಕಿನ ನವ ಉತ್ಸಾಹ ತುಂಬಲು ಹಾಗೂ ಧರ್ಮದ ಅರಿವು ಮೂಡಿಸಲು ಅವತರಿಸಿರುವವರೇ ಶ್ರೀರಾಮಚಂದ್ರಾಪುರಮಠದ ಪೀಠವನ್ನು ಅಲಂಕರಿಸಿರುವ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು. ಪೂಜ್ಯ ಶ್ರೀಗಳು ಆತ್ಮಸಾಧನೆ, ಲೋಕಕಲ್ಯಾಣ ಮತ್ತು ಭಕ್ತಜನರ ಶ್ರೇಯೋಭಿವೃದ್ಧಿಗಾಗಿ ಒಂದೆಡೆ ನೆಲೆನಿಂತು ಚಾತುರ್ಮಾಸ್ಯವೆಂಬ ವಿಶಿಷ್ಟ ವ್ರತವನ್ನು ಆಚರಿಸುತ್ತಾರೆ. ಇದರಲ್ಲಿ ಸಮಸ್ತ ಭಕ್ತಜನರ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಲು ಅಪೂರ್ವವಾದ ಅವಕಾಶಗಳಿವೆ. ಇದಲ್ಲದೆ ಇದರಲ್ಲಿ ಲೋಕಕಲ್ಯಾಣ ಹಾಗೂ ಭಕ್ತಜನರ ಶ್ರೇಯೋಭಿವೃದ್ದಿಗಾಗಿ ಸಂಕಷ್ಟಗಳ ನಿವಾರಣೆಗಾಗಿ ಶ್ರೀಗುರುಗಳ ದಿವ್ಯ ಉಪಸ್ಥಿತಿಯಲ್ಲಿ ಸಹಸ್ರಾರು ಹೋಮ ಹವನಗಳು ನಡೆಯುತ್ತವೆ. ಇದರಲ್ಲಿ ಗುರುಪೀಠದ ಪ್ರತಿಯೊಬ್ಬ ಶಿಷ್ಯನೂ, ಭಕ್ತನೂ ಭಾಗವಹಿಸಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೂಳ್ಳಬಹುದು. ಹೀಗೆ ಶ್ರೀರಾಮಚಂದ್ರಾಪುರಮಠವು ಅಂದು-ಇಂದು-ಮುಂದು ಧರ್ಮರಕ್ಷಣೆಯ ದೀಕ್ಷೆಹೊತ್ತು ನಡೆಯುತ್ತಿದೆ. ಅಸಂಖ್ಯ ಶಿಷ್ಯಭಕ್ತರ ಜೀವನಕ್ಕೆ ಬೆಳಕಾಗಿದೆ. ಇದಲ್ಲದೆ ಇಂದು ಪ್ರತಿಯೊಬ್ಬ ಶಿಷ್ಯನೂ ರುದ್ರಾಧ್ಯಾಯವನ್ನು ಕ್ರಮವಾಗಿ ಕಲಿತು ಶ್ರೀಮಹಾಬಲೇಶ್ವರನ ಪಾದಗಳಿಗೆ ಸಮರ್ಪಣೆಮಾಡುವುದೇ ಶ್ರೀಗುರುಗಳ ಇನ್ನೊಂದು ಪ್ರಮುಖ ಆಶಯ. ಇದರಿಂದ ಪ್ರತಿಮನೆಯ ಜನಮನದ ಕೋಟಿ ಪ್ರಾರ್ಥನೆಗಳು ಕೈಲಾಸಪತಿಯಾದ ಮಹೇಶ್ವರನ ಮನವನ್ನು ತಲುಪುವಂತೆ ಮಾಡುವುದೇ ಈ ಕೋಟಿರುದ್ರ ಯೋಜನೆಯನ್ನು ಹಮ್ಮಿಕೊಂಡ ಶ್ರೀಗುರುಗಳ ಉದ್ದೇಶ. ಈ ಕೋಟಿರುದ್ರವು ಜಗತ್ತಿನಲ್ಲೇ ಹಿಂದೆಂದೂ ನಡೆಯದ ಮಹಾಯಾಗ. ಇದು ನಮ್ಮ ಯೋಗ. ಜೀವ ಜಗತ್ತಿನ ಎಲ್ಲಾ ಆಗುಹೋಗುಗಳಿಗೆ ಕಾರಣನಾದವನೇ ಜಗದೊಡೆಯನಾದ ಮಹೇಶ್ವರ.  ಈ ಜಗದೊಡೆಯನಾದ ಮಹೇಶ್ವರನ ಸಂಪ್ರೀತಿಗಾಗಿ ಜನಸಾಗರದ ದೀರ್ಘದಂಡ ನಮನವೇ ಈ ಕೋಟಿರುದ್ರ. ಪ್ರಾಕೃತಿಕ ವಿಕೋಪಗಳು, ಮಾನವ ಮಾಡುವ ಅನಾಹುತಗಳಿಂದಾಗಿ ತತ್ತರಿಸುತ್ತಿರುವ ಜೀವಜಗತ್ತಿನ ಸೌಖ್ಯಕ್ಕಾಗಿ ಕೋಟಿರುದ್ರವೆಂಬ ಮಹಾಯಾಗವನ್ನು ಈ ಯುಗದಲ್ಲಿ ನಡೆಯುವಂತೆ ಮಾಡಿದವರೇ ಪೂಜ್ಯ ರಾಘವೇಶ್ವರಶ್ರೀಗಳು. ಆದ್ದರಿಂದ ಮಾನವನಲ್ಲಡಗಿದ ಅಜ್ಞಾನ, ಅಂಧಕಾರ, ಅಧರ್ಮ, ಅನಾಚಾರ, ಹಿಂಸಾಪ್ರವೃತ್ತಿಗಳನ್ನು ಹೋಗಲಾಡಿಸಿ ಧರ್ಮದತ್ತ, ಬೆಳಕಿನತ್ತ ಕರೆದೊಯ್ಯುವುದೇ ಪೂಜ್ಯ ಶ್ರೀಗಳ ಆಶಯ.

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ |
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ||

ಆದ್ದರಿಂದ ನಮ್ಮ ಸಮಾಜದ ಅಜ್ಞಾನವೆಂಬ ಕಣ್ಣಿನ ಕಾಯಿಲೆಯನ್ನು ಜ್ಞಾನವೆಂಬ ಅಂಜನದ ಕಡ್ಡಿಯಿಂದ ಗುಣಪಡಿಸಿ ನಮ್ಮ ಕಣ್ಣನ್ನು ತೆರೆಯುವಂತೆ ಮಾಡಿದ ಪೂಜ್ಯ ಶ್ರೀಗಳು ಮಹೇಶ್ವರನ ಅವತಾರವಲ್ಲವೇ?

ಹೀಗೆ ಬ್ರಹ್ಮ ವಿಷ್ಣು ಮಹೇಶ್ವರರ ಗುಣಸ್ವರೂಪಗಳನ್ನು ಹೊಂದಿದ ರಾಘವೇಶ್ವರಶ್ರೀಗಳು ದೈವಾಂಶಸಂಭೂತರಲ್ಲವೇ? ಜೀವಲೋಕದ ಸಮಸ್ತ ಸಂಕಷ್ಟಗಳ ನಿವಾರಣೆಗಾಗಿ ಹಾಗೂ ಪ್ರಕೃತಿಯ ಸಮತೋಲನ ಕಾಯ್ದಿರಿಸಲು ಪರಮಾತ್ಮನು ಒಂದೊಂದು ಯುಗದಲ್ಲಿ ಒಂದೊಂದು ರೂಪದಲ್ಲಿ ಅವತಾರವೆತ್ತಿ ಬರುತ್ತಾನೆಂದು ಪ್ರತೀತಿಯಿದೆ. ಈ ಯುಗದಲ್ಲಿ ಪರಮಾತ್ಮನು ಪೂಜ್ಯ ರಾಘವೇಶ್ವರಶ್ರೀಗಳ ರೂಪದಲ್ಲಿ ಅವತಾರವೆತಿ ಬಂದಿದ್ದಾನೆ. ಆದ್ದರಿಂದ ಅವನತಿಯತ್ತ ಸಾಗುತ್ತಿದ್ದ ನಮ್ಮ ಸನಾತನ ಧರ್ಮ, ಸಂಸ್ಕೃತಿ ಆಚರಣೆಗಳನ್ನು ಪುನರ್ ಸೃಷ್ಟಿ ಮಾಡಿದ, ಮಾಡುತ್ತಿರುವ ಈ ಪರಮಾತ್ಮನ ಯೋಜನೆಗಳಿಗೆ, ಉದ್ದೇಶಗಳಿಗೆ ಸ್ಪಂದಿಸುತ್ತಾ ಅವರ ಕೃಪೆಗೆ ಪಾತ್ರರಾಗೋಣವಲ್ಲವೇ?

ಮನುಷ್ಯನಿಗೆ ಗಾಳಿ, ನೀರು, ಬೆಳಕು ಎಷ್ಟು ಅಗತ್ಯವೋ ಗುರುಪೀಠವೂ ಅಷ್ಟೇ ಅಗತ್ಯ. ಗುರುವಿನ ಅನುಗ್ರಹ ಇದ್ದರೆ ಮಾತ್ರ ಜನ್ಮ ಸಾಫಲ್ಯತೆ ಹೊಂದಬಹುದು. ಸದ್ಗುರುಗಳೆಂದರೆ ಹಿಮಾಲಯ ಪರ್ವತವಿದ್ದಂತೆ. ಅಲ್ಲಿಂದ ನಿರಂತರವಾಗಿ ಹರಿದುಬರುವ ಅಮೃತವಾಣಿಯು ಪವಿತ್ರ ಗಂಗಾಜಲವಿದ್ದಂತೆ. ಸತತವಾಗಿ ಅದನ್ನು ಕೇಳುತ್ತಾ ಮನನಮಾಡಿ ಅನುಸರಿಸಿದರೆ ಮಾತ್ರ ಉತ್ತಮ ಜ್ಞಾನಹೊಂದಿ ಸುಖಿಗಳಾಗಬಹುದು. ಅಂತಹ ಜಗದ್ಗುರುಗಳಾದ ರಾಘವೇಶ್ವರಶ್ರೀಗಳು ನಮಗೆ ಪ್ರಾಪ್ತರಾಗಿರುವುದು ನಮ್ಮ ಭಾಗ್ಯದ ಬಾಗಿಲು ತೆರೆದಂತೆಯೇ ಅಲ್ಲವೇ? ಇಂತಹಾ ಮಹಾನ್ ತಪಸ್ವಿಗಳ ಮಾರ್ಗದರ್ಶನದಲ್ಲಿ ಹೊರಹೊಮ್ಮಿರುವ ಯೋಜನೆಗಳಿಂದಾಗಿ ಸಮಾಜವಿಂದು ಕತ್ತಲೆಯಿಂದ ಬೆಳಕಿನೆಡೆಗೆ ಸಾಗುತ್ತಿರುವುದನ್ನು ನಾವು ಕಾಣಬಹುದು. ಆದ್ದರಿಂದ ಮನೆಮನಗಳನ್ನು ಸದಾ ಬೆಳಗುತ್ತಿರುವ “ರಾಘವೇಶ್ವರಶ್ರೀ” ಎಂಬ ದಿವ್ಯಜ್ಯೋತಿಯ ಸಂಕಲ್ಪ, ಉದ್ದೇಶ, ಆದೇಶಗಳನ್ನು ಶಿಷ್ಯಭಕ್ತರಾದ ನಾವಿಂದು ಶಿರಸಾಪಾಲಿಸಿದಲ್ಲಿ ರಾಮರಾಜ್ಯವನ್ನು ಭಾರತದಲ್ಲಿ ಕಾಣಲು ಹೆಚ್ಚಿನ ಸಮಯ ಬೇಕಾಗಿಲ್ಲವಲ್ಲವೇ?

ಒಮ್ಮತದೊಳೇಕಪಂಥವ ಹಿಡಿದು ಸಾಗುವೆವು
ಸೋದರರು ಕ್ಷಮಿಸಮ್ಮ ಬಡಿದಾಡೆವು
ಹೊಸ ಜಗದ ನಿರ್ಮಾಣದೀಸಂಧಿ ಕಾಲದಲಿ
ನಿನ್ನ ಘನತೆಗೆ ಕೊರತೆಯಾಗಬಿಡೆವು

ಆದ್ದರಿಂದ ಶಿಷ್ಯಭಕ್ತರಾದ ನಾವಿಂದು ಒಮ್ಮತದಿಂದಿದ್ದು ಶ್ರೀಗುರುಗಳ ವಿಶಿಷ್ಟ ಕಲ್ಪನೆಯಾದ “ರಾಮರಾಜ್ಯ”ದ ಸ್ಥಾಪನೆಗೆ ಕೈಜೋಡಿಸೋಣ.

ಗುರುಗಳೇ,
ಏನೆಂದು ಬಣ್ಣಿಸಲಿ ಗುರುಪೀಠದ ವೈಭವವ
ಏನೆಂದು ವರ್ಣಿಸಲಿ ಗುರುವರ್ಯರ ಜ್ಞಾನವ
ಮನದಿ ನಮಿಪೆ ನಿತ್ಯವೂ ನಿಮ್ಮ ಚರಣ ಕಮಲಗಳಿಗೆ
ಹರಸಿ ಮಾರ್ಗ ತೋರಿಸಿ ಕತ್ತಲೆಯಿಂದ ಬೆಳಕಿನೆಡೆಗೆ

|| ಹರೇರಾಮ ||

ಪರಿಚಯ:

ಪಾಣಾಜೆ ಸೂರ್ಯಂಬೈಲು ಶ್ರೀಮತಿ ಮನೋರಮಾ ಮತ್ತು  ಶ್ರೀಯುತ ಎಸ್.ಆರ್.ನರಸಿಂಹ ಭಟ್  ದಂಪತಿಗಳ ಪುತ್ರಿಯಾಗಿ 1980 ರಲ್ಲಿ ಜನಿಸಿದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪಾಣಾಜೆಯ ಸುಭೋಧ ಶಿಕ್ಷಣ ಸಂಸ್ಥೆಯಲ್ಲಿಯಲ್ಲಿ ಪಡೆದು, B .Com ಪದವಿ ಶಿಕ್ಷಣವನ್ನು  ಪುತ್ತೂರಿನ ವಿವೇಕಾನಂದ ವಿದ್ಯಾಲಯದಿಂದ  ಪಡೆದಿರುತ್ತಾರೆ.

2002 ರಲ್ಲಿ ಡಾ.ರವಿಶಂಕರ್ ಯೇಳ್ಕಾನ ಇವರ ಕೈ ಹಿಡಿದು ಗೃಹಸ್ಥ ಜೀವನಕ್ಕೆ ಕಾಲಿರಿಸಿದ ಇವರು ಶ್ರೀಮಠದ ವಿವಿಧ ಯೋಜನೆಗಳಲ್ಲಿ ಭಾಗಿಯಗಿರುತ್ತಾರೆ.
ಶ್ರೀಮಠದ ಕುಂಕುಮಾರ್ಚನೆ ವಿಭಾಗದ ಸಂಚಾಲಕಿಯಾಗಿ 2 ವರ್ಷಗಳ ಸೇವೆ ಸಲ್ಲಿಸಿದ್ದು  ಶ್ರೀಗುರು ಸೇವಾಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.

ಇವರಿಗೆ ಮತ್ತು ಇವರ ಕುಟುಂಬಕ್ಕೆ ಶ್ರೀಗುರುದೇವತಾನುಗ್ರಹ  ಸದಾ ಇರಲಿ ಎಂದು ಹಾರೈಸುತ್ತೇವೆ.

Facebook Comments Box