ಹರೇರಾಮ ಓದುಗರೇ..
ರಾಮಚಂದ್ರಾಪುರ ಶ್ರೀ ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಈ-ಸಮ್ಮುಖದಲ್ಲಿ ಬರೆಯುವ ಅವಕಾಶಕ್ಕಾಗಿ ಸಾಷ್ಟಾಂಗ ವಂದಿಸುತ್ತೇನೆ.
ಶ್ರೀ ಶಿಷ್ಯರ ಅಂಕಣವಾಗಿರುವ ಸಮ್ಮುಖದಲ್ಲಿ ಆರಂಭಿಕ ಲೇಖವನವಾಗಿ ನಿಮ್ಮೆದುರು ಇಡುತ್ತಿದ್ದೇನೆ.

ಚಿ | ಮಹೇಶ ಎಳ್ಯಡ್ಕ

ಸುಮಾರು ಹದಿನೈದು ಶತಮಾನಗಳಷ್ಟು ಹಿಂದೆ ಶ್ರೀ ಆದಿ ಶಂಕರಾಚಾರ್ಯರು ಅವತರಿಸಿದಾಗ..
ಭಾರತದ ಉದ್ದಗಲಕ್ಕೂ ಅಧರ್ಮ ತಾಂಡವವಾಡುತ್ತಿತ್ತು.
ಯವನ, ಮ್ಲೇಚ್ಛ ಧರ್ಮಗಳ ಆಗಮನದಿಂದಾಗಿ ಸುಂದರ ಸನಾತನ ಸಮಾಜ ನಲುಗಿ ಹೋಗುತ್ತಿತ್ತು..
ವೇದ ಪುರಾಣಗಳ ಉಚ್ಛ ಸಂಸ್ಕೃತ ಕಾವ್ಯಗಳಿಂದಾಗಿ ಪಾಲಿ/ ಪ್ರಾಕೃತದ ದೇಶವಾಸಿಗಳಿಗೆ ಕಬ್ಬಿಣದ ಕಡಲೆಯಾಗಿರುತ್ತಿತ್ತು..
ಬೌದ್ಧಧರ್ಮದ ಸರಳ ತತ್ವಗಳಿಂದಾಗಿ ಜನರ ಒಲವು ಸನಾತನತೆಗೆ ಧಕ್ಕೆಯುಂಟಾಗುತ್ತಿತ್ತು..
ಶ್ರೀ ಕೃಷ್ಣನ ಭಗವದ್ಗೀತೆಯ ಮಾತಿನಂತೆ,
{ಯದಾಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ |

ಭಾರತದಲ್ಲಿ ಅದೆಂದು ಧರ್ಮದ ಚ್ಯುತಿ ಉಂಟಾಗುವುದೋ, ಆ ದಿನ ನಾನು(ಭಗವಂತ) ಅವತರಿಸುತ್ತೇನೆ.
}

ಅದೇ ಪ್ರಕಾರವಾಗಿ, ಶಂಕರಾಚಾರ್ಯರ ಅವತಾರವಾಯಿತು.
ಭಾರತದ ಉದ್ದಗಲಕ್ಕೂ ಅವರ ಸಂಚಾರವಾಯಿತು..
ವಿಚಾರವಾದಿಗಳಾದ ಪಂಡಿತರುಗಳನ್ನು, ಋಷಿ ಮುನಿಗಳನ್ನು – ಚರ್ಚೆಯ ಮುಖಾಂತರ ಬುದ್ಧಿಗೆ ಇನ್ನೂ ಹೊಳಪನ್ನು ಕೊಟ್ಟರು..
ತನ್ಮೂಲಕ ಸನಾತನತೆಯ ಬಗೆಗೆ ಅರಿವನ್ನು ಹೆಚ್ಚಿಸಿದರು..
ಬೇರೆ ಧರ್ಮಗಳ ಪ್ರಾಬಲ್ಯ ಇರುವಲ್ಲಿ ಸನಾತನತೆಯ ಪುನಶ್ಚೇತನಗೊಳಿಸಿದರು..
ಕಾಡು, ಏಕಾಂತದಲ್ಲಿ ಮಾತ್ರಾ ಉಳಿದಿದ್ದ ಸನ್ಯಾಸವನ್ನು ಸಮಾಜದ ಮಧ್ಯದಲ್ಲೇ ನೆಟ್ಟು, ಯತಿಗಳೆಂದರೆ ಧರ್ಮಕೇಂದ್ರಬಿಂದುವಾಗಿಸಿದರು, ಅಂತಹ ವಿನೂತನ ಪ್ರಯತ್ನದಿಂದಾಗಿ ನಾಡಿನಲ್ಲಿ ಅರಳಿದ ಪ್ರಥಮ ಯತಿಗಳಾದರು..!
ಸಣ್ಣ ಪ್ರಾಯದಲ್ಲೇ ಅತಿ ದೊಡ್ಡ ಕಾರ್ಯದಿಂದ ಲೋಕೋತ್ತರ ಹೆಸರಾದರು..!

ಇದು ಇಪ್ಪತ್ತೊಂದನೆಯ ಶತಮಾನ..
ಸನಾತನತೆಗೆ ಮತ್ತೊಮ್ಮೆ ಘಾಸಿಯಾಗಿರುವ ಸಮಯ..
ಯವನ, ಮ್ಲೇಚ್ಛರ ಪ್ರಾಬಲ್ಯದಿಂದಾಗಿ ಪವಿತ್ರ ಗೋಮಾತೆಯ ಪ್ರಾಣಹಾನಿಯಾಗುವ ಸಂಭವವೆದುರಾಗಿದೆ..
ವೇದ, ಪುರಾಣ, ರಾಮಾಯಣಗಳ ಅರ್ಥವನ್ನು ಸರಳಗನ್ನಡದಲ್ಲಿ ವಿವರಿಸಬೇಕಾದ ಅನಿವಾರ್ಯತೆಯಿದೆ..
ಇದೇ ಸಂದರ್ಭದಲ್ಲಿ ಶ್ರೀ ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಪೀಠವು ಸಮಾಜದ ಮುಂದೆ ನಿಂತಿದೆ..
ಭರತವರ್ಷದ ಧರ್ಮದ ಮೂಲವೇ ಗೋವು, ಗೋವಿನ ರಕ್ಷಣೆಯೇ ಧರ್ಮರಕ್ಷಣೆಯ ಪ್ರಥಮ ಕಾರ್ಯ – ಎಂಬ ಶುದ್ಧ ತತ್ವವನ್ನು ಲೋಕಕ್ಕೆ ಸಾರುತ್ತ ಭಾರತದ ಮೂಲೆ-ಮೂಲೆಗಳಿಗೆ ಸಂಚರಿಸಿದರು.
ವಿಚಾರವಾದಿಗಳನ್ನು, ರಾಷ್ಟ್ರವಾದಿಗಳನ್ನು ಒಂದೇ ಸೂರಿನಡಿ ಒಗ್ಗೂಡಿಸಿ, ರಾಷ್ಟ್ರದ ಚಿಂತನೆಯ ಕಿಚ್ಚನ್ನು ಬೆಳಗಿಸಿದರು..
ವಿಶ್ವಮಂಗಳ ಗೋ ಗ್ರಾಮಯಾತ್ರೆಯಂತಹ ವಿನೂತನ ಚಿಂತನೆಯೊಂದಿಗೆ ಆಧುನಿಕ ಸಮಾಜಕ್ಕೆ ಧರ್ಮನಾಯಕರಾದರು.
ಕೇವಲ ಧರ್ಮವೊಂದಕ್ಕೇ ಸೀಮಿತವಾಗಿರಿಸದೇ, ಸಂಸ್ಕೃತಿ, ವೇದ,ಗುರುಕುಲ, ಆಚರಣೆಗಳು, ಮುಷ್ಟಿಭಿಕ್ಷೆಯಂತಹ ಸಮಾಜವನ್ನು ಹೊಂದಾಣಿಕೆಯೊಂದಿಗೆ ಮುನ್ನಡೆಸುವ ಕಾರ್ಯದಲ್ಲಿ ದೊಡ್ಡದಾದ ಆಯಾಮವನ್ನು ಕೊಟ್ಟರು.
ಶಿಷ್ಯರೆಲ್ಲಿಯೋ, ಗುರುಗಳೂ ಅಲ್ಲೇ! “ನೆನೆದವರ ಮನದಲ್ಲಿ” ಎಂಬಂತೆ ಶ್ರೀಗಳ ವ್ಯಾಪ್ತಿ ವೆಬ್‌ ಮೂಲಕವೂ ಹರಿದಾಡುವಂತಿದೆ.

ಕಂಪ್ಯೂಟರ್ ಉದ್ಯೋಗದೊಂದಿಗೆ ಅಂತರ್ಜಾಲದಲ್ಲಿರುವ ತುರ್ತಿನಲ್ಲಿರುವ ಅದೆಷ್ಟೋ ಶಿಷ್ಯರನ್ನು ಸಂಪರ್ಕದಲ್ಲಿಡಲು ತಾವೂ ಅಂತರ್ಜಾಲವನ್ನು ತಮ್ಮದಾಗಿಸಿಕೊಂಡರು.
ಆರ್ಕುಟ್, ಫೇಸ್-ಬುಕ್ ನಂತಹ ಸಾಮಾಜಿಕ ಸಂಪರ್ಕ ಸೇತುವಿಗೆ ಪರ್ಯಾಯವಾಗಿ ಹರೇರಾಮದಲ್ಲೊಂದು ಸಂಪರ್ಕ (ರಾಮ)ಸೇತುವನ್ನು ನಿರ್ಮಿಸಿ ತನ್ಮೂಲಕ ಸಮಾಜದ ’Un touched’ ಶಿಷ್ಯರನ್ನು ಆಶೀರ್ವದಿಸಿ, ಎಚ್ಚರಿಸುವಂತ ಮಹತ್ಕಾರ್ಯ ಮಹದಾಕಾಂಕ್ಷೆಯನ್ನು ಹೊಂದಿದ್ದಾರೆ..

ಕಂಪ್ಯೂಟರ್ ಕ್ಷೇತ್ರದಲ್ಲಿ ಲೀಲಾಜಾಲವಾಗಿ ಹರಿದಾಡಬಹುದಾದ ಆಧುನಿಕ ಯುಗದ ಪ್ರಥಮ ಯತಿಗಳಾಗಿ ನಮ್ಮ ಮುಂದೆ ಇದ್ದಾರೆ!
ತರುಣ ಉತ್ಸಾಹ ಮತ್ತು ಶ್ರದ್ಧೆಯೇ ಇದಕ್ಕೆಲ್ಲವೂ ಕಾರಣ- ಎಂದು ಬೇರೆ ಹೇಳಬೇಕಾಗಿಲ್ಲ.

ನಮಗಾಗಿ ನಮ್ಮಬಳಿ ಬಂದಿರುವ ಶ್ರೀಗಳ ಸಂಪೂರ್ಣ ಆಶೀರ್ವಾದ ಪಡೆಯೋಣ. ಶಿಷ್ಯರೆಲ್ಲರೂ ಹರೇರಾಮದಲ್ಲಿ ಜೊತೆಯಾಗೋಣ.
ಕರಾರಾಧ್ಯ ಶ್ರೀ ರಾಮದೇವರ ಅನುಗ್ರಹ, ಶ್ರೀ ಗುರುಗಳ ಸದಾಶೀರ್ವಾದ ನಮ್ಮೆಲ್ಲರ ಮೇಲೆ ಸದಾಕಾಲ ಇರಲಿ, ಎಂಬ ಆಶಯದೊಂದಿಗೆ ಈ ಬರಹಕ್ಕೆ ವಿರಾಮ ನೀಡುತ್ತಿದ್ದೇನೆ.

ಹರೇ ರಾಮ..

ಸದಾಶಿಷ್ಯ,
~
ಮಹೇಶ ಎಳ್ಯಡ್ಕ

ವ್ಯಕ್ತಿ ಪರಿಚಯ:

ಚಿ| ಮಹೇಶ ಎಳ್ಯಡ್ಕ – ಇವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಎಳ್ಯಡ್ಕದವರು.
ಪ್ರಸ್ತುತ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಉದ್ಯೋಗದಲ್ಲಿದ್ದಾರೆ.
ಶ್ರೀ ಗುರುಗಳ, ಶ್ರೀಮಠದ ಕಾರ್ಯಯೋಜನೆಗಳ ಬಗೆಗೆ ಒಲವು ಹೊಂದಿರುವ ಇವರು ಬೆಂಗಳೂರಿನ ಯುವ ಬಳಗ “ಅವಲಂಬನ” ಇತ್ಯಾದಿ ಸಂಘಗಳಲ್ಲಿದ್ದುಕೊಂಡು ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಳ್ಳುತ್ತಿದ್ದಾರೆ.

ವಿಳಾಸ: ಎಳ್ಯಡ್ಕ ಮನೆ, ಪಾಲ್ತಾಡಿ ಗ್ರಾಮ,
ಪುತ್ತೂರು ತಾಲೂಕು, ದ.ಕ
ಸಂಪರ್ಕ: 09448472292
ಈಮೈಲ್: e.mahesha@gmail.com
~
ಸಂಪಾದಕ

Facebook Comments