LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಬದುಕು ಬದಲಿಸಿತು ಕಣಾ..!!

Author: ; Published On: ಸೋಮವಾರ, ಅಕ್ತೂಬರ 4th, 2010;

Switch to language: ಕನ್ನಡ | English | हिंदी         Shortlink:

ಯಾವ ಮಹಾಮಹಿಮನ ಕೃಪೆಯು ನನ್ನ ಬದುಕಿನ ಎಲ್ಲ ಅಂಗಗಳಲ್ಲಿ ವ್ಯಾಪಿಸಿದೆಯೋ,
ಯಾವ ಮಮತಾಮಯಿಯ ಕರುಣೆಯು ವಿಧಿಯಾಟದ ಸುಳಿಯಲ್ಲಿ ಕಳೆದು ಹೋಗುತ್ತಿದ್ದ ಬದುಕನ್ನು ಮೇಲೆತ್ತಿ, ಉದಾತ್ತವಾದುದನ್ನು ಕಿಂಚಿತ್ತಾದರೂ ಅರ್ಥೈಸಿಕೊಳ್ಳಲು ನನ್ನನ್ನು ಪ್ರೇರಿಸಿದೆಯೋ,ಅಂತಹ ಮಹಾತ್ಮನ ಕುರಿತಾಗಿ ನನ್ನ ಕೆಲವು ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತಿದ್ದೇನೆ.
ಕುರುಡನು ಆನೆಯ ಬಗ್ಗೆ ವರ್ಣಿಸ ಹೊರಟಂತೆ ನಾನೆಷ್ಟೇ ಹೇಳಿದರೂ ಅದು ಆ ವಿರಾಟ್ ವ್ಯಕ್ತಿತ್ವದ ಕಿಂಚಿನ್ಮಾತ್ರವನ್ನೂ ಹೇಳಿದಂತಾಗದೆಂದು ನನಗೆ ಅರಿವಿದೆ.ಆದರೂ ನಾನನುಭವಿಸಿದ ದಿವ್ಯ ಸಾನ್ನಿಧ್ಯ ಸುಖವನ್ನು ನಿಮ್ಮೊಂದಿಗೆ ಹೇಳಿಕೊಳ್ಳುವಾಸೆ.

ಯಾವುದೋ ಒಂದು ಸಮಸ್ಯೆಯು ಬದುಕಿನ ನೆಮ್ಮದಿಯರಮನೆಗೆ ಕೊಳ್ಳಿಯಿಟ್ಟಾಗ ಪರಿಹಾರ ಹುಡುಕಿಕೊಂಡು ಶ್ರೀಸಂಸ್ಥಾನದ ಭೇಟಿಗಾಗಿ ಹೋದೆ.
ಅಂದು ಇಟ್ಟ ಹೆಜ್ಜೆ ಜೀವನದ ದಿಕ್ಕನ್ನೇ ಬದಲಾಯಿಸಬಹುದೆಂಬ ಕಲ್ಪನೆ ಕೂಡಾ ನನಗಿರಲಿಲ್ಲ…!
ಸಮಸ್ಯೆಯ ಮೂಲವನ್ನರಸಲು ಹೊರಟು, ಬದುಕಿನ ಮೂಲವನ್ನೇ ಅರಸಲು ಮನಮಾಡುವುದಕ್ಕೆ ಪ್ರೇರಕವಾದ ದಿವ್ಯಕೃಪೆಯೊಂದು ಬದುಕಿನಲ್ಲಾಯಿತು.
ಪ್ರಾರಂಭದಲ್ಲಿ ಧರ್ಮಪೀಠದ ಗುರುವಾಗಿ ಕಂಡವರು ಕೆಲವು ಕಾಲದಲ್ಲೇ ಪೂಜ್ಯರಾಗಿ ತೋರಿಬಂದರು.ಮತ್ತೆ ಜೀವನದ ಗುರಿ ತೋರಿಸಿದ ಪರಮ ಗುರುವಾದರು.

ಮೊದಲೊಂದೆರಡು ಬಾರಿ ಗುರುಗಳನ್ನು ಅಕ್ಕಪಕ್ಕದ ಮನೆಗೆ, ದೇವಸ್ಥಾನಕ್ಕೆ ಬಂದಾಗ ನೋಡಿದ್ದೆ ಅಷ್ಟೇ.ಆದರೂ ಗುರುಗಳನ್ನು ನೋಡಲೆಂದೇ ಎಲ್ಲಿಗೂ ಹೋಗಿರಲಿಲ್ಲ.
ನಾನು ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಶ್ರೀಸಂಸ್ಥಾನ ಮೈಸೂರಿನಲ್ಲಿಯೇ ಮೊಕ್ಕಾಂ ಇದ್ದಾರೆಂದು ತಿಳಿದುಬಂತು.’ಹೋಗಿ ಆಶೀರ್ವಾದ ತೆಗೆದುಕೊಂಡು ಬಾ’ ಎಂದರು ಮನೆಯಲ್ಲಿ.ಸರಿ ಎಂದು ಹೊರಟೆ.
ಶ್ರೀಗಳವರ ಮೊಕ್ಕಾಮಿನ ಸ್ಥಳವನ್ನು ತಲುಪಿ ಶ್ರೀಕರಾರ್ಚಿತ ಶ್ರೀರಾಮದೇವರಿಗೆ ನಮಸ್ಕರಿಸಿದೆ.ಅದಾಗಲೇ ಎಲ್ಲರೂ ಗುರುಗಳ ಬರುವನ್ನು ಕಾತರದಿಂದ ಕಾಯುತ್ತಾ ಇದ್ದರು.ಅವರ ಮಧ್ಯದಲ್ಲಿ ನಾನೂ ಕುಳಿತೆ.ಸುಮ್ಮನೆ ಕಾಯುತ್ತಾ ಕುಳಿತೆ. ನನ್ನಲ್ಲಿ ಯಾವ ನಿರೀಕ್ಷೆಗಳೂ ಇರಲಿಲ್ಲ.
ಹೇಳಿಕೊಳ್ಳುವಂತಹ ಯಾವ ಭಕ್ತಿ-ಭಾವಗಳೂ ಆ ಹೊತ್ತು ಮೂಡಿದ್ದುದು ಇಂದು ನೆನಪಾಗುವುದಿಲ್ಲ.ನೋಡು-ನೋಡುತ್ತಿರುವಂತೆಯೇ ಗುರುಗಳು  ಶ್ರೀಪರಿವಾರದೊಂದಿಗೆ ಪೀಠಕ್ಕೆ ಬಿಜಯಂಗೈದರು.ಪರಾಕು- ಜೈಕಾರಗಳಾದವು. ಇದನ್ನೆಲ್ಲ ಒಂದೆರಡು ಬಾರಿ ನೋಡಿದ್ದೆನಾದರೂ ಅಂದು ಹೊಸತೆನಿಸಿತು.
ಸಂಸ್ಥಾನ ದಿವ್ಯ ಮಂದಹಾಸದೊಂದಿಗೆ ಸಮಸ್ತ ಸಭೆಯನ್ನೊಮ್ಮೆ ನಿರುಕಿಸಿದರು.ದೃಷ್ಟಿ ನನ್ನ ಮೇಲೂ ಹಾದು ಹೋಯಿತು. ಏನಿತ್ತು ಅದರಲ್ಲಿ?
ನನ್ನ ಹೊರಮನಸ್ಸಿಗೆ ಅದು ತಿಳಿಯದು, ಆದರೆ ಆಂತರ್ಯವು ಮಾತ್ರ ಬದುಕಿನಲ್ಲಿ ಹಿಂದೆಂದೂ ಕಂಡರಿಯದಂತ ಭಾವೋದ್ವೇಗದ ಮಹಾಪೂರವೊಂದಕ್ಕೆ ಆ ಕ್ಷಣದಲ್ಲಿ ಪಕ್ಕಾಗಿ ಹೋಯಿತು.
ಯಾವ ಕಾರಣಕ್ಕೆ ಎಂಬುದು ತಿಳಿಯದೆಯೇ ಕಣ್ಣುಗಳು ಹನಿಗೂಡತೊಡಗಿದವು.ಒಂದು ಹನಿ ಕಣ್ಣಂಚನ್ನು ದಾಟುವುದೇ ತಡ, ಅದಕ್ಕಾಗಿ ಅದೆಷ್ಟೋ ಕಾಲದಿಂದ ಕಾದಿದ್ದವೋ ಎಂಬಂತೆ ಮತ್ತಷ್ಟು ಹನಿಗಳು ಮೊದಲ ಹನಿಯನ್ನು ಹಿಂಬಾಲಿಸಿದವು.ನನಗಾದುದಾದರೂ ಏನು?
ಕೆಲವು ಕ್ಷಣಗಳಲ್ಲಿಯೇ ನಾನು ನನ್ನೆಲ್ಲ ಪ್ರಯತ್ನವನ್ನು ಮೀರಿ , ಹೃದಯದಲ್ಲಿ ಮಡುಗಟ್ಟಿದ ಅವ್ಯಕ್ತ ದುಃಖ ಪರಂಪರೆಯೆಲ್ಲವನ್ನೂ ಒಮ್ಮೆಲೇ ಬೋರ್ಗರೆದು  ಬಸಿದುಕೊಳ್ಳಲು ಹೊರಟಿದ್ದೆನೇನೋ ಎಂಬಂತೆ  ಸಶಬ್ದವಾಗಿಯೇ ಬಿಕ್ಕಿ ಬಿಕ್ಕಿ ಅಳತೊಡಗಿದೆ.
ಎಲ್ಲರೂ ಪ್ರಶ್ನಾರ್ಥಕವಾಗಿ ನನ್ನನ್ನೇ ನೋಡುತ್ತಿದ್ದಾರೆಂದು ತಿಳಿದರೂ, ಪಕ್ಕದಲ್ಲಿದ್ದವರು ಏನೇ ಸಮಾಧಾನ ಹೇಳಿದರೂ ನನಗೆ ಮಾತ್ರ  ಅದೇಕೋ ಅಳು ನಿಲ್ಲಿಸಲಾಗಲೇ ಇಲ್ಲ.
ನಾನು ಅಳಲು ಕಾರಣ ಸಮಾಧಾನ ಹೇಳುತ್ತಿದ್ದ ಉಳಿದವರಿಗೆ ತಿಳಿಯದಿರುವುದು ಸಹಜ.ಆದರೆ ವಿಚಿತ್ರವೆಂದರೆ, ಅದು ಖುದ್ದು ನನಗೇ ತಿಳಿದಿರಲಿಲ್ಲ…! ಆದರೆ ಸರ್ವಭಾವಗ್ರಾಹಿಗಳಾದ ಗುರುಗಳಿಗೆ ಅದೇನು ತಿಳಿಯಿತೋ ಕಾಣೆ. ನನ್ನನ್ನು ಬಳಿ ಕರೆದರು – “ನಾವಿದ್ಯ ಪುಟೀ, ನೀ ಎಂತಕೆ ಅಳ್ತೆ…?” ಎಂದರು.ಅವ್ಯಕ್ತ ದುಃಖಕ್ಕೆ ಸಾಂತ್ವನವು ಪರೋಕ್ಷವಾಗಿಯೇ ದೊರೆಯಿತು.ನಿಜಕ್ಕೂ ಅದೊಂದು ಮಾತಿಗಿರಲಿ, ಮನಸ್ಸಿಗೂ ನಿಲುಕದ ದಿವ್ಯಾನುಭವ…!
ಅದಾಗಿ ಹಲ ವರ್ಷಗಳೇ ಕಳೆದರೂ ಕೂಡ ಅಂದು ನಾನು ಅತ್ತದ್ದೇಕೆಂದು ಇಂದಿಗೂ ನನಗೆ ಸೋಜಿಗ..! ಈಗ ಯೋಚನೆ ಮಾಡಿದಾಗ ಕೆಲವೊಮ್ಮೆ ಅನ್ನಿಸುತ್ತದೆ ‘ಅದು ನನ್ನ ಜನ್ಮ-ಜನ್ಮಾಂತರಗಳ ಪಾಪ ಕಳೆಯುವ, ದಾರಿ ತೋರುವ, ಗುರು ಸಿಕ್ಕಿದ್ದಾರೆಂದು ತಿಳಿದ ಒಳಮನಸ್ಸು ಹರಿಸಿದ ಆನಂದ ಬಾಷ್ಪವಾಗಿತ್ತೇ..?’ಎಂದು.

ಅದಾಗಿ ಕೆಲದಿನಗಳಲ್ಲಿ ನಾನೊಂದು ಸಮಸ್ಯೆಗೆ ಸಿಲುಕಿಕೊಂಡೆ.ತಿಳಿದವರನ್ನು ವಿಚಾರಿಸಿದಾಗ ಅದು ಮನುಷ್ಯ ಪ್ರಯತ್ನದಿಂದ ಪರಿಹರಿಸಲಾಗದ ಸಮಸ್ಯೆಯೆಂದು ತಿಳಿದು ದಿಙ್ಮೂಢಳಾದೆ.ಏನೂ ಮಾಡಲು ತೋಚದೆ ನಾನೂ ಮನೆಯ ಎಲ್ಲರೂ ಕೈಚಲ್ಲಿ ಕುಳಿತಿದ್ದಾಗ ನನಗೆ ಗುರುಗಳನ್ನು ಮೊದಲ ಭಾರಿ ಭೇಟಿ ಮಾಡಿದಾಗ ಆದ ಅನುಭೂತಿಯು ನೆನಪಿಗೆ ಬಂತು. ಅಂದು ದೊರೆತ ಸಾಂತ್ವನ, ಹೃದಯಕ್ಕುಂಟಾದ ಅಪೂರ್ವ ಶಾಂತಿ ರಕ್ಷಿಸುವವರಿದ್ದಾರೆಂಬ ಭಾವದಿಂದ ಬದುಕಿನಲ್ಲಿ ಉಂಟಾದ ಭದ್ರತೆ ಇವೆಲ್ಲವೂ ಸ್ಮೃತಿಗೆ ಬಂದವು.ಗುರುಗಳಲ್ಲದೇ ಇನ್ನಾರೂ ನನ್ನನ್ನು ರಕ್ಷಿಸಲಾರರೆಂದು ಮನಸ್ಸಿಗೆ ದೃಢವಾಗಿ ತೋರಿತು.ಶ್ರೀಸಂಸ್ಥಾನದ ದಿವ್ಯಮಂಗಲ ಮೂರ್ತಿಯನ್ನೇ ನೆನೆದುಕೊಂಡು ಅವರೇ ಗತಿ ಎಂದು ಹೊಸನಗರ ಮಠಕ್ಕೆ ಹೋದೆ.
ಅದು ಚಾತುರ್ಮಾಸ್ಯದ ಸಂದರ್ಭ.

ಆ ದಿನ ನನಗೆ ಮರೆಯಲಾಗದಂತಹದ್ದು…
ಗೋಶಾಲೆಯ ಮಧ್ಯದಲ್ಲೊಂದು ಕುಟೀರ ಮಾದರಿಯ ಕೊಠಡಿಯಲ್ಲಿ ಸೀಮಾ ಸಭೆ ಸಂಪನ್ನವಾಗಿತ್ತು. ಅಲ್ಲಿ  ಶ್ರೀಸಂಸ್ಥಾನದ ದಿವ್ಯ ಉಪಸ್ಥಿತಿಯಿದೆಯೆಂದು ತಿಳಿದಾಗ ಕಾತರದಿಂದ ಅತ್ತ ದಾವಿಸಿದೆ.ಆ ಹಿರಿಯರ ಸಭೆಯಲ್ಲಿ ಮುಂಬರಿಯಲು ಸಂಕೋಚವಾಗಿ ಅಲ್ಲೇ ತುಸು ದೂರದಲ್ಲಿ ನಿಂತೆ.ಒಳಹೋಗಲು ಸಂಕೋಚದ ಜೊತೆಗೆ ಭಯವೂ ಇತ್ತು.ಈ ಗೊಂದಲಗಳ ಮಧ್ಯೆ ನಾನು ತಾಕಲಾಡುತ್ತಿದ್ದಾಗ ಶ್ರೀಸಂಸ್ಥಾನ ನನ್ನನ್ನು ನೋಡಿದರು; ನೋಡಿ ಪರಿಚಯದ ಮುಗುಳ್ನಗೆ ಬೀರಿದರು!

 ಆ ಮೃದು ಮಂದಹಾಸವು ಯಾರನ್ನು ತಾನೇ ಆಕರ್ಷಿಸದೇ ಬಿಟ್ಟಿದೆ??
ಏನನ್ನೂ ಅರಿಯದ ಮುಗ್ಧ ಮಗುವಿನಿಂದ ಹಿಡಿದು ಸಂತ-ಮಹಂತರನ್ನೂ ,ತುತ್ತನ್ನಕ್ಕಾಗಿ ಪರದಾಡುವ ಬಡವನಿಂದ ಹಿಡಿದು ಆಗರ್ಭ ಶ್ರೀಮಂತರನ್ನೂ,ಮಠದ ಪಾರಂಪರಿಕ ಭಕ್ತರಿಂದ ಹಿಡಿದು ಮಠದ ಹೆಸರೇ ಕೇಳದ ಭಿನ್ನ ಭಿನ್ನ ಮನೋವೃತ್ತಿಗಳ ಅಸಂಖ್ಯಾತ ವ್ಯಕ್ತಿಗಳನ್ನೂ ಅದು ಮೋಡಿಮಾಡಿದೆ.
ಆ ನಗುವನ್ನು ನೆನೆದಾಗಲೆಲ್ಲ ನನಗನ್ನಿಸುವುದು ಅದು ಬರೀ ನಗುವಲ್ಲ, ಜೀವಿಯ ಹೃದಯಾಲವಾಲಕ್ಕೆ ಪರೋಕ್ಷವಾಗಿ ಆಗುವ ಭಗವದಮೃತ ಸಿಂಚನ ಎಂದು.ಆ ಪರಿಚಯದ ನಗುವನ್ನು ಕಂಡು ನಾನು ವಿಸ್ಮಿತನಾದೆ!!ಅಷ್ಟು ದೊಡ್ಡ ಸಭೆಯಲ್ಲಿ ಅವರಿಗೆ ನಾನು ಕಂಡುದಾದರೂ ಹೇಗೆ?!ಕಂಡರೂ ಎಂದೋ ನೋಡಿದ ಪರಿಚಯ ನೆನಪಿರುವುದಾದರೂ ಹೇಗೆ?!.
ಕರೆದು ಆತ್ಮೀಯತೆಯಿಂದ ಮಾತನಾಡಿಸಿದರು. ಮನಸ್ಸು ಹಿರಿಹಿರಿ ಹಿಗ್ಗಿತು..!ನನ್ನನ್ನು ಮಾತ್ರಾ ಹಾಗೆ ಮಾತನಾಡಿಸಿದ್ದು ಎಂದುಕೊಂಡಿದ್ದೆ,ಆದರೆ ಮಂತ್ರಾಕ್ಷತೆ ಸಾಲಿನಲ್ಲಿ ನಿಂತಾಗ ಅವರು ಅಲ್ಲಿದ್ದವರ ಪ್ರತಿಯೊಬ್ಬರ ಹೆಸರನ್ನು ಕರೆದು ಪ್ರೀತಿಯಿಂದ ಆಡುತ್ತಿದ್ದ ಮಾತುಗಳನ್ನು ನೋಡಿ ಮೂಕವಿಸ್ಮಿತಳಾದೆ..!ಅವರ ಸ್ಮರಣಶಕ್ತಿಯ ಕುರಿತಾಗಿ ಕೇಳಿದ್ದೆ, ಅಂದು ಕಂಡೆ.ಅಂದು ನನಗರಿವಿಲ್ಲದೆಯೇ ಅವರ ಬಗ್ಗೆ ಗೌರವ ಪ್ರೀತಿಗಳು ಮೂಡಿದವು.ಶರಣಾದೆ… ನನ್ನೆಲ್ಲ ಕಷ್ಟವನ್ನೂ ತೋಡಿಕೊಂಡೆ.
ಅಂದು ಶ್ರೀಸಂಸ್ಥಾನದ ನುಡಿಗಳಿಂದ ನನಗಾದ ಸಮಾಧಾನ ಇಂದಿಗೂ ಸ್ಪಷ್ಟವಾಗಿ ನೆನಪಿದೆ.ಯಾವ ಸಮಸ್ಯೆಯ ಪರಿಹಾರವು ಅಸಾಧ್ಯವೆಂದೇ ತೋರಿತ್ತೋ ಅದು, ಯಾವಾಗ ಶ್ರೀ ಸಂಸ್ಥಾನ ನಿವಾರಿಸಲುಪಕ್ರಮಿಸಿದರೋ ಆಗ ಮಂಜಿನಂತೆ ಕರಗಿ ಹೋಯಿತು.
ಶ್ರೀಸಂಸ್ಥಾನ ಪ್ರತಿ ಹಂತದಲ್ಲೂ ಖುದ್ದಾಗಿ ತಾವೇ ನಿಂತು ಪರಿಹಾರದ ಎಲ್ಲಾ ಉಪಕ್ರಮಗಳನ್ನು ಜರುಗಿಸಿ ನನಗೆ ಅಕ್ಷರಶಃ ಮರುಜನ್ಮವನ್ನೇ ನೀಡಿದರು.

ಸಮಸ್ಯೆಯ ಪರಿಹಾರ ಸಂಪೂರ್ಣವಾಗಿ ದೊರೆತ ಅನಂತರವೂ ಶ್ರೀಸಂಸ್ಥಾನದ ಸಾನಿಧ್ಯದಿಂದ ಮನಸ್ಸಿಗಾಗುತ್ತಿದ್ದ ಅನಿರ್ವಚನೀಯ ಅನುಭೂತಿಯಿಂದ ನನಗೆ ಮತ್ತೆ ಮತ್ತೆ ಗುರುಗಳನ್ನು ಭೇಟಿ ಮಾಡಬೇಕೆಂದು ಸದಾ ಅನ್ನಿಸತೊಡಗಿತು. ಎಲ್ಲವನ್ನೂ ಅವರಲ್ಲಿ ತೋಡಿಕೊಂಡು ಖಾಲಿಯಾಗಿಬಿಡಬೇಕೆನಿಸುತ್ತಿತ್ತು.ಮತ್ತೆ ಮತ್ತೆ ಹೋಗತೊಡಗಿದೆ.ಹೇಳಬೇಕೆಂದುಕೊಂಡ, ಹೇಳಬಹುದೋ ಹೇಳಬಾರದೋ ಗೊತ್ತಿಲ್ಲದ ನನ್ನ ರೂಕ್ಷ ಭಾವನೆಗಳನ್ನು ಶ್ರೀಸಂಸ್ಥಾನದ ಸಮಯ, ಕೆಲಸದ ಒತ್ತಡ, ಮನಸ್ಥಿತಿ ಇದಾವುದನ್ನೂ ಗಣಿಸದೆ ಹೇಳಿಕೊಳ್ಳತೊಡಗಿದೆ. ಸಣ್ಣ ಸಣ್ಣ ಸಮಸ್ಯೆಗಳನ್ನು ಕೂಡ ಬದುಕಿನ ಅದಾವುದೋ ಮಹತ್ಸಂಕಟವೋ ಎಂಬಂತೆ  ತೋಡಿಕೊಂಡೆ.ಆ ಎಲ್ಲ ಚಿಕ್ಕ ಪುಟ್ಟ ಸಮಸ್ಯೆಗಳಿಗೂ ಕೊಡಲಿಯಿಂದಲೇ ಪರಿಹಾರವೇನೋ ಎಂದುಕೊಂಡು ಹೋಗುತ್ತಿದ ನನಗೆ.ಒಂದೆರಡು ಮಾತುಗಳಲ್ಲೇ ಬರೀ ಉಗುರಿನಿಂದ ಚಿವುಟಿ ಪರಿಹರಿಸುವ ಅವರ ಸಾಮರ್ಥ್ಯದ ಕುರಿತಾಗಿ ಅಚ್ಚರಿಯಾಗತೊಡಗಿತು…! ನನ್ನ ಗಳಹುಗಳನ್ನು ನನಗಿಂತ ಹೆಚ್ಚು ಶ್ರದ್ಧೆಯಿಂದ ಕೂತು ಕೇಳಿದರು.ಸಮಸ್ಯೆಯನ್ನು ಎದುರಿಸುವ, ಅದರೆಡೆಗಿನ ನ್ಯೇತ್ಯಾತ್ಮಕ ದೃಷ್ಟಿಯನ್ನು ಬದಲಿಸುವ ಹೊಸ ಪಾಠಗಳನ್ನು ಹೇಳಿಕೊಡತೊಡಗಿದರು.ಸದಾ ಪ್ರಾಪಂಚಿಕ ಆಸೆಗಳೊಂದಿಗೆ ತೊಳಲಾಡುತ್ತಿದ್ದ ನನ್ನನ್ನು ಭಗವಂತನೆಂಬ ಮಹದ್ಗುರಿಯೆಡೆಗೆ ಸರಳ ಮಾತುಗಳಲ್ಲಿ ಪ್ರೇರಿಸಿದರು.ಆ ಮಾತುಗಳು ಆಚರಣೆಯಲ್ಲಿ ಪರ್ಯಾವಸಾನವಾಗುವಲ್ಲಿ ಅತೀವ ಕಾಳಜಿ ತೋರಿದರು.ಅವರ ಸಣ್ಣ ಸಣ್ಣ ಸೂಚನೆಗಳನ್ನೂ ಕೂಡ ಆಚರಣೆಗೆ ತರುವಲ್ಲಿ ನಾನು ಎಡವಿದಾಗಲೆಲ್ಲ,ಎಂತಹಾ ತಪ್ಪುಗಳಿಗೂ ಅದೊಂದು ಸಹಜ ದೋಷವೆಂಬಂತೆ ಹೇಳಿ ;ನಾನು ನನಗೇ ಕೀಳಾಗಿ ತೋರದಂತೆಯೂ ಆದರೆ ಅಪೇಕ್ಷಿತ ಬದಲಾವಣೆಯು ನನ್ನಲ್ಲಿ ಆಗುವಂತೆಯೂ ಮಾಡಿದ ಅವರ ಜಾದೂವಿನ ಕುರಿತಾಗಿ ಎಷ್ಟು ಹೇಳಿದರೂ ಕಡಿಮೆಯೇ…
ಭಗವಂತನ ಈ ಸೃಷ್ಟಿಯ ಬಗ್ಗೆ, ಸೃಷ್ಟಿಯಲ್ಲಿರುವ ನಮ್ಮಗಳ ಆದ್ಯ ಕರ್ತವ್ಯದ ಬಗ್ಗೆ ಅದೆಷ್ಟು ಸೊಗಸಾಗಿ ಹೇಳುತ್ತಿದ್ದರೆಂದರೆ ನಿಧಾನವಾಗಿ ನನ್ನ ಇರುವಿಕೆಯಲ್ಲಿ , ಉಡುಗೆ ತೊಡುಗೆಗಳಲ್ಲಿ , ಚಿಂತನೆಗಳಲ್ಲಿ, ಮಾಡುವ ಕಾರ್ಯಗಳಲ್ಲಿ ಬದಲಾವಣೆ ಆರಂಭವಾಯಿತು.ಒಟ್ಟಿನಲ್ಲಿ ಕೊಂಚ ಕೊಂಚವಾಗಿ ನನ್ನ ಬಾಳ್ವಿಕೆಯು ರೂಕ್ಷತೆಯಿಂದ ದಿವ್ಯತೆಯನ್ನು ಕಾಣುವೆಡೆಗೆ ಮುಖಮಾಡಿತು.

ಶ್ರೀಸಂಸ್ಥಾನವನ್ನು ಕಾಣುವ ಪೂರ್ವದಲ್ಲಿ, ಸಂಸ್ಥಾನ ಹೇಳಿದಂತಹ ಆದರ್ಶಗಳನ್ನು ನನ್ನ ಅಪ್ಪ-ಅಮ್ಮ ಸೇರಿದಂತೆ ಬಹಳ ಜನ ಹೇಳಿದುದನ್ನು ಕೇಳಿದ್ದೆ.ಆಯಾ ಸನ್ನಿವೇಶಗಳನ್ನು ಆದರಿಸಿ, ಆ ಕ್ಷಣದಲ್ಲಿ, ಅದನ್ನು ಅನುಷ್ಠಾನಕ್ಕೆ ತರಬೇಕೆಂದು ಅನ್ನಿಸಿತ್ತು ಕೂಡಾ.ಆದರೆ ಕೆಲಕಾಲದಲ್ಲೇ ಅಂದುಕೊಂಡ ಆದರ್ಶವು ಮರವೆಯಾಗಿ ಬಾಳುವೆಯು ಯಾವತ್ತಿನ ಸ್ಥರಕ್ಕೆ ಇಳಿದುಬಿಡುತ್ತಿತ್ತು.ಆದರೆ ಶ್ರೀಸಂಸ್ಥಾನದ ಮಾತುಗಳು ಮಾತ್ರ ಅಂತರಂಗದಲ್ಲಿ ಗಟ್ಟಿಯಾಗಿ ನಿಂತು ಸದಾ ಆ ಕುರಿತಾಗಿ ಮನಸ್ಸು ಜಾಗೃತವಾಗಿರುವಂತೆ ಮಾಡುತ್ತದೆ.ಏಕೆಂದರೆ ಅವರ ಮಾತು ಬರೀ ಮಾತಾಗದೆ ಹೃದಯ-ಬುದ್ಧಿ-ಮನೋಮಯಕೋಶಗಳನ್ನು ಆದ್ಯಂತವಾಗಿ ಸ್ಪರ್ಷಿಸುವ,ತನ್ಮೂಲಕ ಸಂಪೂರ್ಣ ವ್ಯಕ್ತಿತ್ವದಲ್ಲೇ ಹೊಸ ಮಾರ್ಪಾಡುಗಳನ್ನು ಮಾಡಿಬಿಡುವ ಅಪೂರ್ವ ಶಕ್ತಿಯಳ್ಳದ್ದು.
ಅದೆಷ್ಟೋ ಕಾಲದಿಂದ ಭಾವಕೋಶಗಳ ಮೇಲಾದ ಕುಸಂಸ್ಕಾರಗಳನ್ನು ಅವರ ಒಂದು ಮಾತು, ಒಂದು ಸೂಚನೆ, ಒಂದು ನಗು ಒರೆಸಿಹಾಕಿಬಿಡುತ್ತದೆ ಎಂದಾದಲ್ಲಿ ಶ್ರೀಸಂಸ್ಥಾನ ಸೂಕ್ಷ್ಮಾತಿಸೂಕ್ಷ್ಮಭಾವಸಂರಚನಾ ಕೌಶಲವನ್ನು ಅರಿತವರೂ, ವ್ಯಕ್ತಿಯ ಮೂಲದಲ್ಲೇ ಅಡಗಿರುವ ದೋಷಗಳನ್ನು ತೊಡೆಯುವ ಪರಿಣಿತರೂ ಆಗಿದ್ದಾರೆಂಬುದಕ್ಕೆ ಇದಕ್ಕಿಂತ ಬೇರೆ ಸಾಬೀತು ಬೇಕಾಗಿಲ್ಲವಷ್ಟೆ… ಇಂತಹ ಪರಿಣಿತಿಯನ್ನೂ, ಕೌಶಲವನ್ನೂ ದೈವಾಂಶಸಂಭೂತರಲ್ಲದೆ ಕೇವಲ ಮನುಷ್ಯಮಾತ್ರರು  ತೋರಲಶಕ್ಯವೇಂದೇ ನನ್ನ ನಂಬುಗೆ…

ಆ ಪರಮಕರುಣಾಮಯಿಯಾದ ಭಗವಂತನು ಇಂತಹ ಮಹಾಮಹಿಮರ ಸಂಪರ್ಕವನ್ನು ನನಗೊದಗಿಸಿದ್ದಕ್ಕೆಆ ಭಗವಂತನಿಗೆ, ಗುರುಪೀಠಸ್ಥಿತ ಆತನ ಪ್ರತಿರೂಪಿಗೆ ಕೋಟಿ ಕೋಟಿ ಹೃದ್ಯ ನಮನಗಳು…

ಮಣಿಮಂತ್ರ ತಂತ್ರಸಿದ್ದಿಗಳ ಸಾಕ್ಷಗಳೇಕೆ
ಮನಗಾಣಿಸಲು ನಿನಗೆ ದೈವದದ್ಭುತವ?|
ಮನಜರೊಳಗಾಗ ತೋರ್ತ ಮಹನೀಯಗುಣ-
ವನುವಾದ ಬೊಮ್ಮನದು- ಮಂಕುತಿಮ್ಮ||
ಪರಿಚಯ:
ಕು. ಅಶ್ವಿನಿ, ಇವರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಹನ್ನಾರ ಸೀಮೆಯ ಉಡುಚೆ ಜನಾರ್ಧನ ಭಟ್ ಹಾಗೂ ವರದಾಂಬಿಕೆ ಇವರ ಸುಪುತ್ರಿ .
ಎಂ.ಸಿ.ಎ ಪದವೀಧರೆ.
ಪ್ರಸ್ತುತ  SAP ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ವೃತ್ತಿ ನಿರ್ವಹಿಸುತ್ತಿದ್ದಾರೆ.
ಇವರು ಅವಲಂಬನದ ಸಕ್ರಿಯ ಸದಸ್ಯರು ಹಾಗೂ ಶ್ರೀಮಠದ ನಿಷ್ಠಾವಂತ ಕಾರ್ಯಕರ್ತರು.

 

29 Responses to ಬದುಕು ಬದಲಿಸಿತು ಕಣಾ..!!

 1. yajneshbhat

  ತುಂಬಾ ಚೆನ್ನಾಗಿ ಬರದ್ದೆ ಅಶ್ವಿನಿ. ಅಂತಹ ಗುರುವಿನ ಸಾಮಿಪ್ಯ ಸಿಕ್ಕ ನಾವೆಲ್ಲ ಧನ್ಯರು.

  [Reply]

 2. sriharsha.jois

  ಸೋದರೀ….

  ಶುದ್ಧ ಮನಸಿನಲ್ಲುಂಟಾಗುವ ಭಾವೋದ್ವೇಗ ಮಹಾಪೂರವಾಗಿ ಹರಿದರೆ ಅದಕ್ಕಿರುವುದು ಒಂದೇ ಗುರಿ…
  ಯಾವುದು ಆ ಸ್ಥಿತಿಗೆ ಕಾರಣವೋ ಅದೇ ಶಕ್ತಿಯನ್ನೇ ಸೇರುವುದೇ ಅಲ್ಲವೇ ಅದು…?
  ಯಾವಾಗ ನಮ್ಮ ಮನಸ್ಸು ಹಾಗೆ ವರ್ತಿಸಲು ಆರಂಭ ಮಾಡುತ್ತದೋ,
  ನನ್ನ ಪ್ರಕಾರ ಅದು ನಮ್ಮೆಲ್ಲ ಪಾಪಗಳೂ ದೂರವಾಗಲು ಬೇಕಾದ ಪ್ರಾಯಶ್ಚಿತ್ತದ ಚಿಹ್ನೆ…
  ಪ್ರಾಯಶಹ ಆ ಕಾಲದಲ್ಲಿ ಗುರುವೇ ನಮ್ಮನ್ನು ಹುಡುಕಿಕೊಂಡು ಬರುತ್ತಾನೆಯೇ..?
  ನಿಜ….ಊಹುಂ ಹಾಗಲ್ಲ,
  ಅದೇ ನಿಜ…!

  ಕರುಣಾಮಯಿಯ ಅಂತಃಕರಣಕ್ಕೆ ತೋರದುದಾವುದು ಈ ಜಗತ್ತಿನಲ್ಲಿ..?
  ಯಾರಿಗೆ, ಯಾವುದಕ್ಕೆ, ಯಾವಾಗ ಎಲ್ಲಿ ಪರಿಹಾರವೋ..ಗ್ರಹಿಸುವುದು ಗುರುಚಿತ್ತ ಮಾತ್ರ…!
  ನಮ್ಮ ಸಮಸ್ಯೆಗಳು ಎಂದು ಗುರುಮನಕ್ಕೆ ವೇದ್ಯವಾಯಿತೋ…
  ಮತ್ತೆಲ್ಲಿಯ ಕಷ್ಟ …?

  ತಂಗೀ..
  ಸಮಸ್ಯೆಯ ಬಗ್ಗೆ ನಾವ್ಯಾಕೆ ಯೋಚಿಸಬೇಕು..
  ಅದಿಲ್ಲದ ಮನುಷ್ಯನಾರು ಈ ಪ್ರಪಂಚದಲ್ಲಿ…?
  ನನಗನ್ನಿಸುವುದು ಹೀಗೆ…
  ಈ ಬದುಕಿನಲ್ಲಿ ನಮ್ಮ ಸಮಸ್ಯೆಗಳಿಗೆ ಗುರುವೇ ಪರಿಹಾರವಾಗಿ ಬರುವುದು ಎಲ್ಲೋ ಕೇಲವೇ ಅದೃಷ್ಟವಂತರಿಗೆ ಮಾತ್ರ..
  ನಮ್ಮ ಮನಸ್ಸು ಗುರುವನ್ನು ಒಪ್ಪಿಕೊಂಡಾಗ ಮಾತ್ರ ಅದು ಬರುವುದೇ ಹೊರತು…

  ನಿಶ್ಚಲ ಮನಸ್ಸು ಎಲ್ಲಿರುತ್ತದೋ ಅದು ಗುರುನಿವಾಸ….
  ನಿರ್ಮಲ ಹೃದಯವೆಲ್ಲಿರುತ್ತದೋ, ಅದೇ ಗುರುಪೀಠ….
  ಎಲ್ಲಿ ಶರಣಾಗತ ಭಾವವೋ…
  ಅಲ್ಲೇ ಗುರುವಿನ ಶಾಶ್ವತ ನೆಲೆ….!

  ಮತ್ತೊಂದು ಲೇಖನವೇ ಆಯಿತೇ…?
  ಅಡ್ಡಿಯಿಲ್ಲ.. ಭಾವನೆಗಳಿನ್ನೂ ಮುಗಿದಿಲ್ಲ ನನ್ನದು…

  ಒಂದೇ ಮಾತು…
  ಓ ವಾತ್ಸಲ್ಯಮಯೀ, ನೀನು ಧನ್ಯೆ…
  ನಿನ್ನ ಭಾವನೆಗಳ ಜೊತೆಗೂಡಿದ ನಾವೂ ಧನ್ಯರಲ್ಲವೇ….??!!.

  [Reply]

 3. gopalakrishna pakalakunja

  ‘……ಆ ಮೃದು ಮಂದಹಾಸವು ಯಾರನ್ನು ತಾನೇ ಆಕರ್ಷಿಸದೇ ಬಿಟ್ಟಿದೆ?? ಏನನ್ನೂ ಅರಿಯದ ಮುಗ್ಧ ಮಗುವಿನಿಂದ ಹಿಡಿದು ಸಂತ-ಮಹಂತರನ್ನೂ , ತುತ್ತನ್ನಕ್ಕಾಗಿ ಪರದಾಡುವ ಬಡವನಿಂದ ಹಿಡಿದು ಆಗರ್ಭ ಶ್ರೀಮಂತರನ್ನೂ, ಮಠದ ಪಾರಂಪರಿಕ ಭಕ್ತರಿಂದ ಹಿಡಿದು ಮಠದ ಹೆಸರೇ ಕೇಳದ ಬಿನ್ನ ಬಿನ್ನ ಮನೋವೃತ್ತಿಗಳ ಅಸಂಖ್ಯಾತ ವ್ಯಕ್ತಿಗಳನ್ನೂ ಅದು ಮೋಡಿಮಾಡಿದೆ. ಆ ನಗುವನ್ನು ನೆನೆದಾಗಲೆಲ್ಲ ನನಗನ್ನಿಸುವುದು ಅದು ಬರೀ ನಗುವಲ್ಲ, ಜೀವಿಯ ಹೃದಯಾಲವಾಲಕ್ಕೆ ಪರೋಕ್ಷವಾಗಿ ಆಗುವ ಭಗವದಮೃತ ಸಿಂಚನ ಎಂದು. ಆ ಪರಿಚಯದ ನಗುವನ್ನು ಕಂಡು ನಾನು ವಿಸ್ಮಿತನಾದೆ. ………………”
  ಅಯಸ್ಕಾಂತ ಕಬ್ಬಿಣದ ರಜಗಳನ್ನು ತನ್ನೆಡೆಗೆ ಸೆಳೆದು ಕೊಳ್ಲುವಂತ ಆಕರ್ಷಣೆ ಅದು….. ಬೆಳೆವದ ಗಿಡ ಲತೆಗಳ ಸುಕೋಮಲ ಎಳೆ ಮೊಗ್ಗನ್ನು ಅರಳಿಸುವ ಸೂರ್ಯನ ಹೊಂಗಿರಣ ಅದು….ಶಿಷ್ಯ ಭಕ್ತ ಹ್ರದಯ ಮಂದಾರ ಕ್ಕಂಟಿದ ಕೊಳೆಯನ್ನ
  ತೊಳೆದರಳಿಸುವ ವಾತ್ಸಲ್ಯಾಮ್ರತದ ಮಧುರಾನುವಭವದು.

  [Reply]

 4. madhyastharv

  ಬಹಳ ಚನ್ನಾಗಿದೆ …

  [Reply]

 5. Shaman Hegde

  harerama… speechless !!! excellent narration……

  [Reply]

 6. nandaja haregoppa

  ಗುರು ಶಿಶ್ಯೆಗಾಗಿ ಅಥವ

  ಶಿಶ್ಯೆ ಗುರುವಿಗಾಗಿ ಕಾಯುತ್ತಿದ್ದ ಸಮಯ ಬ೦ದಿತ್ತೆ ?

  ಇದೊ೦ದೆ ಬರಹ ಸಾಕು ಗುರುವಿನ ಸಾಮಿಪ್ಯದ ಬೆಲೆ ಅರಿಯಲು,

  ಅಶ್ವಿನಿ ,ಯಾಕೊ ಮನಸೆಲ್ಲ ಒದ್ದೆ ಆತು,

  [Reply]

 7. Anuradha Parvathi

  ಅದ್ಭುತ… ನನ್ನ ಮನಿಸ್ಸಿನಲ್ಲಿ ಇರುವುದನ್ನೆ ಬರೆದ ಹಾಗೆ ಅನಿಸಿತು.

  [Reply]

 8. Ashwini

  ಅದ್ಭುತ ಅಭಿವ್ಯಕ್ತಿ..!!!

  ಅಶ್ವಿನಿ , ಅದು ಅಳುವಲ್ಲ..
  ‘ಭಾವ ಸಂಸ್ಕಾರ’ ಗೊಂಡ ಹೃದಯಂಗಳದಿ, ಆ ಪರಮ ಕರುಣಾಮಯಿಯ ‘ಪಾದಸ್ಪರ್ಷದ ಗುರುತದು’.

  ‘ಗುರು’ವೊಂದು ‘ವಿಸ್ಮಯ.’!!

  ‘ಸಾನಿದ್ಯದಲ್ಲಿ’ ವಿವರಿಸಲಾಗದೊಂದು ‘ಭರವಸೆ’. ಅದು ನನ್ನಾತ್ಮವರಿತ ‘ದೇವ’ನಿರುವನೆಂಬ ‘ಜೀವದ’ಭಾವ.
  ದೃಷ್ಟಿಯಲ್ಲಿ ‘ ಸಾಂತ್ವಾನ’. ಅದು ಪದಗಳಲ್ಲಿ ಹೇಳಲರಿಯದ ‘ಜೀವ’ದ ನೋವನ್ನು ಅರಿತ ‘ಗುರುಕರುಣೆ’.
  ನುಡಿನುಡಿಯಲ್ಲಿ ‘ಅನುಗ್ರಹ’. ಅದು ‘ಆತ್ಮನ’ ಮೂಲ ‘ಪರಮಾತ್ಮ’ ತತ್ವ ಮಾರ್ಗ ಭೋಧನೆ.

  ಶ್ರೀಸಂಸ್ಥಾನವೊಂದು ‘ಅಮೃತ ಸಾಗರ’,
  ಅಲ್ಲಿ ಸಮಸ್ತ ‘ಜೀವಕೋಟಿ’ಗೆ ಮುಗಿಯದ ‘ವಾತ್ಸಲ್ಯ’ ವಿದೆ.

  ಶ್ರೀಸಂಸ್ಥಾನವೊಂದು ‘ಬೆಳಕಿನ ಆಗರ’,
  ಅಲ್ಲಿ ‘ಪರಂಜ್ಯೋತಿಯ’ ‘ಅಭಿಜ್ಞಾನ’ ವಿದೆ.

  ಶ್ರೀಸಂಸ್ಥಾನವೊಂದು ‘ದಿವ್ಯತೆ’
  ಅಲ್ಲಿ ‘ಮನ’ ‘ಮೂಕವಾಗುತ್ತದೆ’.

  ‘ಶರಣಾಗತ’ ಭಾವ ಹೃದಯ ತುಂಬಿ,
  ಎಲ್ಲ ಮಾತುಗಳು,ಭಾವಗಳು ‘ಮೌನವಾಗಿ’ .
  ‘ಮೌನ’ ‘ಪ್ರಣವ ನಾದವಾಗಲೆಂದು’ ಪರಮ ಪವಿತ್ರ ‘ಗುರುಚರಣದಲ್ಲಿ’ ಪ್ರಾರ್ಥನೆ.

  ಹರೇ ರಾಮ.

  [Reply]

 9. Raghavendra Narayana

  ಅದ್ಭುತ, ಅತ್ಯದ್ಭುತ, ಅತ್ಯತ್ಯತ್ಯದ್ಭುತ, ಜೊತೆಗೆ ಅಚ್ಚರಿ ಕೂಡ…
  Fantastic

  [Reply]

 10. Raghavendra Narayana

  Great. Very well said. Thanks.

  [Reply]

 11. ಜಗದೀಶ್ ಬಿ. ಆರ್.

  ವೇದನೆಯ ನಿವೇದನೆಯಿಂದ ವ್ಯಕ್ತಗೊಂಡ ಭಕ್ತಿ.
  ಭಾವ ಬಲಿತ, ಅಶ್ರು ಭರಿತ

  [Reply]

  Raghavendra Narayana Reply:

  Beautiful

  [Reply]

 12. seetharama bhat

  ಹರೇರಾಮ್

  ಗುರು ದೊರೆತ ಮೇಲೆ ಗುರಿ ಸಿಗಲಾರದೇ?
  ಹರಿ ದೊರೇತ ಮೇಲೆ ಹರದಾರಿ ದೂರೇಕೆ?
  ನಗು ದೊರೇತ ಮೇಲೆ ನಮಗೇನಾದರೂ ಬೇಕೆ?
  ಅಳು ಏಕೆ ಇನ್ನು ಆಳುವವ ನಿರುವಾಗ?

  ನಿತ್ಯ ಸತ್ಯ ಅಶ್ವಿನಿ-ತು೦ಬಾ ಚೆನ್ನಾಗಿ ಬರದ್ಯ.

  ಹರೇರಾಮ್

  [Reply]

 13. Raghavendra Narayana

  ಕರಗುವ ಕತ್ತಲೆ ಬೆಳಕಿ೦ದ, ಕರಗುವ ಮ೦ಜು ಸೂರ್ಯನಿ೦ದ.
  ಮಳೆ ಬಿದ್ದು ಶುಭ್ರವಾದ ಎಲೆ ಗಿಡ ಮರ ಚೆ೦ದ.
  ಸಹಸ್ರ ಗಡಿಗೆಯ ಜಲದಿ೦ದ ಅಭಿಷೇಕಗೊ೦ಡ ಶಿವಲಿ೦ಗ ಚೆ೦ದ. ಅದನ್ನು ಕ೦ಡು ಕರಗುವ ಮನ ಚೆ೦ದ, ಕದಡಿದ ಮಾನಸ ಸರೋವರವ ಈ ಕರಗಿದ ಜಲವಲ್ಲವೆ ತಿಳಿಯಾಗಿಸುವುದು.
  ಪರಮಾತ್ಮ, ಮೊದಲು ಅಳುವಲ್ಲವೆ ನಿನ್ನ ನೋಡಲು, ಅಳುವಲ್ಲವೆ ನಿನ್ನ ಸೇರಲು. ಅಳುವಿನ ಮಳೆಯಲ್ಲವೆ ನನ್ನ ನಿನ್ನ ತೇಲಿಸಿ ಸೇರಿಸುವುದು?
  ಕಿರಿಯರು ಬಯಸುವ ಸಿಹಿತಿ೦ಡಿಯ೦ತೆ, ಹಿರಿಯರು ನೆನೆಯುವ ಸಿಹಿನೆನಪ೦ತೆ, ಎಳೆಯರು ಕಾಣುವ ಸಿಹಿಸ್ವಪ್ನದ೦ತೆ, ಗುರುಲೋಕವದು ಯಾವ ಆಧಾರವು ಇಲ್ಲದೆ ಸೆಳೆಯುತ್ತದೆ ಸಿಹಿನಿರ್ಮೋಹದ೦ತೆ, ನಿರ್ಮೋಹದೆಡೆಗಿನ ಸೆಳೆತ? (ಅದೋ ದುರ್ಗೆ ಕಾಣುತಿಹಳು, ಕಲಿಸುತಿಹಳು ಮೋಹದಿ೦ದ ನಿರ್ಮೋಹದೆಡೆಗಿನ ನಡಿಗೆಯ ತಾಯಿಯ ರೂಪದಿ)
  .
  ಶ್ರೀ ಗುರುಭ್ಯೋ ನಮಃ

  [Reply]

 14. Ganesh Bhat Madavu

  ಹರೇ ರಾಮ..
  ನಡೆದಿದ್ದು ಅನುಭವ…!
  ನಡೆಯುತ್ತಿರುವುದು ಪ್ರಯೋಗ…!
  ನಡೆಯಲಿರುವುದು ನಿರೀಕ್ಷೆ…
  ಉತ್ತಮ ವಿಚಾರ ಹಂಚಿಕೊಂಡಿದ್ದಕ್ಕಾಗಿ ನಿಮಗೆ ವಂದನೆಗಳು.

  [Reply]

 15. chs bhat

  ಅಶ್ವಿನಿ, “ಮನದಾಳದ ಮಾತುಗಳ ಅಭಿವ್ಯಕ್ತ” ಅಂದರೆ ಇದುವೇಯೋ ಏನೋ. ನಿನ್ನ ಬರವಣಿಗೆಯಲ್ಲಿ ನಿನ್ನ ನಿವೇದನೆ ಹಾಗೂ ಪರಮಪೂಜ್ಯರ ಸಾಂತ್ವನ- ಕರುಣಾ ಕಟಾಕ್ಷದ ಚಿತ್ರಗಳ ವಿಡಿಯೋ ಮೂಡಿಬಂದುವು. ಎಷ್ಟೋ ಸಲ ನಿನ್ನ ಜಾಗದಲ್ಲಿ ನನ್ನಂತವನ ಚಿತ್ರವೂ ಮೂಡಿಬಂತು. ನೀನು ಧನ್ಯೆ! ಹರೇ ರಾಮ.

  [Reply]

 16. H.S.Swamidatta datta

  ಶ್ರೀ ಗುರುವಿನ ಕರುಣೇ ಇರುವ ತನಕ ಭಯವಿನ್ಯಾತಕೆ………………

  [Reply]

 17. srirama bhat

  ಬಹಳ ಚನ್ನಾಗಿ ಇದೆ

  [Reply]

 18. maruvala narayana

  ಹರೇ ರಾಮ
  ಶ್ಫ್ರೀ ಸಂಸ್ಫ್ಥಾನದ ಬಗೆಗೆ ಎಂಗೊಗೆ ಅನಿಸಿದ್ಫ್ದುದರ ಅಶ್ಫ್ವಿನಿ ಬರದ ಹಾಂಗೆ ಅನಿಸಿತ್ಫು. ಪ್ಫ್ರಾಯಶಃ ಎಲ್ಫ್ಲರಿಂಗೂ ಅದೇ ಅಭಿಪ್ಫ್ರಾಯ.

  [Reply]

 19. maruvala narayana

  ಅಶ್ಫ್ವಿನಿ, ನಿನ್ಫ್ನ ಅನುಭವ ಅದೆಷ್ಥೋ ಜೀವಾತ್ಮಂಗಳ ಪರಮಾತ್ಮನೆಡೆಗೆ ಕರಕೊಂಡು ಹೋಪ ನಿಜ ಗುರುವಿನ ದಶ೯ನ ಮಾಡಿಸಿದ ಹಾಂಗಿತ್ಫ್ತು. “ಗುರುಗಳ ಮೇಲಿಪ್ಫ ಈ ಆಕಷ೯ಣೆ ( ಗುರುತ್ಫ್ವಾಕಷ೯ಣೆ) ಪರಮಾತ್ಮಾಕಷ೯ಣೆಲಿ ಲೀನವಾಗಲಿ. ಹಾಂಗಾದಾಗ ನಮಗೆ ಒಳಗೂ ಹೊರಗೂ ( ಹೊರ ಪ್ಫ್ರಪಂಚದಲ್ಫ್ಲೂ) ಎಲ್ಫ್ಲೆಲ್ಫ್ಲೂ ಆ ರಾಮನನ್ಫ್ನೇ ಕಾಣುವಂತಾಗುವುದು” – ಹೇಳಿ ಶ್ಫ್ರೀ ಸಂಸ್ಫ್ಥಾನ ಹೇಳಿದ್ಫ್ದು ನೆನಪಾತು . ವೀಣಾ ಮರುವಳ

  [Reply]

 20. Ravish Hegde

  ತಮ್ಮ ಅನುಭವದ ಮಾತು ತುಂಬಾ ಚೆನ್ನಾಗಿದೆ.

  [Reply]

 21. Sowmya Anegoli

  ಹರೇ ರಾಮ,
  ಅಶ್ವಿನಿ ನಿನ್ನ ಮನದಾಳದ ಮಾತು ತುಂಬಾ ತುಂಬಾ ಚೆನ್ನಾಗಿ ಮೂಡಿಬ್ಯೆಂದು ನಮ್ಮ ಗುರುಗಳ ಕೃಪೆ ಯಾರಮೇಲೆ ಇಲ್ಲೇ ಹೇಳು?
  ಅವರ ಬಗ್ಗೆ ಹೇಳಕ್ಕೆ ಪದಗಳೆ ಸಾಲ್ತಲ್ಲೆ ಸಮಸ್ಯೆಯ ಪರಿಹಾರಕ್ಕಾಗಿ ಗುರುಗಳ ಬಳಿ ಹೋದವರು ಯಾರು ಬರಿಗೈಲಿ ಬರದಿಲ್ಲೆ ಅವರಿಗೆಲ್ಲ ಗುರುಗಳು ಪರಿಹಾರ ಮಾರ್ಗ ತುಂಬು ಸಂತೋಷನ ಕೊಟ್ಟೆ ಕಳಸ್ತ.
  ಸಮಸ್ಸೆ ಪರಿಹಾರದ ನಂತ್ರನು ಅವರ ಮಾರ್ಗದರ್ಶನದಲ್ಲಿ ನಡೆಯುವವರು ಕೆಲವೇ ಕೆಲವರು ಅವರಲ್ಲಿ ನೀನು ಒಬ್ಳು.ನಮಗೆಲ್ಲರಿಗು ನಿನ್ನ ಬಗ್ಗೆ ತುಂಬಾ ಅಭಿಮಾನ ಇದ್ದು ನೀನು ಎಷ್ಟು ಚೆಂದ ಹಾಗು ನಿಷ್ಕಪಟವಾಗಿ ನಿನ್ನ ಮನಸಿನ ಭಾವನೆ ಹೇಳಿದ್ದೆ ಪ್ರಾಯಶ: ನಿನ್ನ ಈ ಬರಹ ತುಂಬಾ ಜನರಿಗೆ ಕಣ್ಣು ತೆರಿಸಿದ ಕ್ಷಣ ಆಗ್ತು.

  [Reply]

 22. Shreekant Hegde

  ನಿಟ್ಟೂರ್ ಕೂಸೇ, ಭಾವನೆಗಳೇ ಬರಹವಾದಾಗ ‘ಭಾಷೆ’ ಹೇಗೆ ಬದಲಾಗುತ್ತದೆಂದು ಕಂಡ ಮೊದಲ ದೃಷ್ಟಾಂತ. all the best

  [Reply]

 23. ravi n

  ಬರೆಯುವವನು ಬರೆಸಿಕೊಳ್ಳುವವನು ಒಬ್ಬನೇ ಆದಾಗ ಬದುಕೇ ಬರಹವಾಗುತ್ತದೆ…..
  ಇರುವವನು ತೋರಿಕೊಳ್ಳುವವನು ಒಬ್ಬನೇ ಆದಾಗ ಪ್ರಕ್ರುತಿಯ ದೋಷಗಳು ಲಕ್ಷವಿದ್ದರೂ ಅಲಕ್ಷ್ಯಮಾಡಿ ಆತ ಆವಿರ್ಭವಿಸುತ್ತಾನೆ…
  ಮನದಾಳದ ಭಾವನೆಗಳಿಗೆ ಸೊಗಸಾದ ವಿದ್ವತ್ ಪೂರ್ಣ ನಿರೂಪಣೆ

  [Reply]

 24. Prasanna Mavinakuli

  It is very very well written/effectively conveyed all the feelings…really good.. Congratulations ….

  [Reply]

 25. Raghava Hegde

  hareraama

  [Reply]

 26. Jayashree Neeramoole

  ಹರೇ ರಾಮ ,

  ಅಕ್ಕ ತಂಗಿಗೆ ದಾರಿ ತೋರುವುದು ಸಹಜ… ತಂಗಿ ಅಕ್ಕನಿಗೆ ಪ್ರೇರಣೆಯಾದರೆ ಅದ್ಭುತ ಅಲ್ಲವೇ? ಅನಂತಾನಂತ ಧನ್ಯವಾದಗಳು…

  [Reply]

 27. ಶ್ರೀದೇವಿ ಭಟ್

  ಅಕ್ಕ….. ಆಹಾ!!!! ಇದುನ್ನ ನೋಡಿ ಎಂತ ಹೇಳಕ್ಕು ಅಂತನೇ ಗೊತಾಗ್ತ ಇಲ್ಲೆ…. ಹರೇರಾಮ

  [Reply]

 28. gshegde

  Harerama….. Good to share…..

  [Reply]

Leave a Reply

Highslide for Wordpress Plugin