ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.
ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಶ್ರದ್ಧಾಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಶ್ರದ್ಧಾಸುಮ 5:

ಸಿದ್ಧಸಂಕಲ್ಪ ಶ್ರೀಮದ್ಭಗವತ್ಪಾದರು 

ವಿದ್ವಾನ್ ಕೆ. ಸತ್ಯನಾರಾಯಣ ಶರ್ಮಾ

ನಮೋsಸ್ತು ಭಗವತ್ಪಾದಾಯ ಶ್ರೀ ಮದ್ರಾಘವೇಂದ್ರಾಯ

 ಪರಮಪೂಜ್ಯರಾದ ಶ್ರೀ ಶ್ರೀಮದ್ಭಗವತ್ಪಾದರ ಬಗ್ಗೆ ನಾಲ್ಕು ಮಾತುಗಳನ್ನು ಬರೆಯಬೇಕಾದರೆ ಏನೆಂದು ಬರೆಯಲಿ ? ಏಕೆಂದರೆ ಯಾವುದೇ ಲೌಕಿಕವಾದ ಮಾನದಂಡಕ್ಕೂ ಮೀರಿದ ವ್ಯಕ್ತಿತ್ವ, ಅಗಣಿತ ಸಾಧನೆ, ಚಿಂತನೆಗೂ ನಿಲುಕದ ಅನ್ಯಾದೃಶ ವಿದ್ಯಾವೈಭವ, ಅನುಷ್ಠಾನಬಲದಿಂದ ಸಂಪಾದಿಸಿದ ದಿವ್ಯ ತಪಃಶಕ್ತಿ. ಇವುಗಳ ಒಂದೊಂದು ಮುಖವನ್ನು ವಿವರಿಸಲು ಅಸಾಧ್ಯವಾಗಿರುವಾಗ ಅವರ ಕುರಿತಾಗಿ ಬರೆಯಲು ಹೊರಡುವುದೂ ಒಂದೇ, ಸಮುದ್ರದ ನೀರನ್ನು ಅಳೆಯುವುದೂ ಒಂದೆ. ಪ್ರಸಿದ್ಧವಾದ ಆಲಂಕಾರಿಕ ಉದಾಹರಣೆಯಾದ  “ಇಂದುರಿಂದುರಿವ ಶ್ರೀಮಾನ್” ಎಂಬ ವಾಕ್ಯ ಪೂಜ್ಯರಲ್ಲಿ ಸಾರ್ಥಕತೆ ಹೊಂದುತ್ತದೆ. ಋಗ್ವೇದದ ಒಂದು ಮಂತ್ರ –

  “ಉತತ್ವಃ ಪಶ್ಯನ್ ನ ದದರ್ಶ ವಾಚಂ
         ಉತತ್ವಃ ಶೃಣ್ವನ್ ನ ಶೃಣೋತ್ಯೇನಾಂ |
         ಉತೋತ್ವಸ್ಮೈ ತನ್ವಂ  ವಿಸಸ್ರೇ
         ಜಾಯೇವ ಪತ್ಯ ಉಶತೀ ಸುವಾಸಾಃ ||

ಎನ್ನುತ್ತದೆ. ಅದರಂತೆ ಪೂಜ್ಯ ಭಗವತ್ಪಾದರನ್ನು ಕೆಲವರು ಕಂಡರೂ ಕಾಣಲಿಲ್ಲ. ಕೇಳಿದರೂ ಕೇಳಿಸಲಿಲ್ಲ. ಆದರೆ ಕೆಲವರಿಗೆ ಮಾತ್ರ ಅವರ ದಿವ್ಯ ಸ್ವರೂಪವನ್ನು ಅರಿತುಕೊಳ್ಳುವ ಅನುಗ್ರಹವನ್ನು ಅವರೇ ಕೊಡಮಾಡಿದರು. “ಸಕೃದೇವ ಪ್ರಪನ್ನಾಯ” ಎಂಬ ಶ್ರೀರಾಮನ ಮಾತನ್ನು, “ರಾಮೋದ್ವಿರ್ನಾಭಿಭಾಷತೇ” ಎಂಬ ಉಕ್ತಿಯನ್ನು ತಮ್ಮ ಬದುಕಿನ ಪೂರ್ತಿ ಸಾಕಾರಗೊಳಿಸಿದವರು ಅವರು. ನಂಬಿದವರನ್ನು ಕೈಹಿಡಿದೆತ್ತಿದ್ದು ಹಿರಿಮೆಯಲ್ಲ, ನಂಬದವರನ್ನು ತನ್ನತ್ತ ಆಕರ್ಷಿಸಿ ಅವರನ್ನು ಉದ್ಧರಿಸಿದ ಮಹಿಮೆ ಅವರದ್ದು. ಆನೆ ನಡೆದದ್ದೇ ಹಾದಿಯಾಗುತ್ತದೆ. ಆನೆಗೆಂದೂ ಯಾರೂ ರಸ್ತೆ ಮಾಡುವುದಿಲ್ಲ. ತನ್ನ ಸತ್ವದಿಂದಲೇ ಪ್ರಸಿದ್ಧವಾದ ಮೃಗರಾಜನಿಗೆ ಯಾರ ಅನುಗ್ರಹದ ಅಗತ್ಯವೂ ಇಲ್ಲ. ಧರ್ಮ ಸಾಮ್ರಾಜ್ಯದ ನೇತಾರರಾಗಿದ್ದ ಪೂಜ್ಯರಿಗೆ ಎಂದೂ ಲೌಕಿಕ ವ್ಯವಹಾರದ ಲೇಪ ಆಗಲೇ ಇಲ್ಲ. ಒಂದು ಧರ್ಮಪೀಠದ ಆಚಾರ್ಯರಾಗಿದ್ದೂ ಅನೇಕ ಲೌಕಿಕ ವ್ಯವಹಾರಗಳಲ್ಲಿ ಮುಳುಗಿಯೇ ಇರುವಂಥ ಸ್ಥಿತಿಯಲ್ಲಿಯೂ ಅವರು ಪದ್ಮ ಪತ್ರದಂತೆ ನಿರ್ಲಿಪ್ತರಾಗಿಯೇ ಉಳಿದರು. ‘ಧೀಯಾ ರಾತಿ ಇತಿ ಧೀರಃ’ ಎಂಬ ಅವರ ಧೀರ ಶಬ್ದದ ನಿರ್ವಚನ, “ವಿಕಾರ ಹೇತೌ ಸತಿ ವಿಕ್ರಿಯಂತೇ ಯೇಷಾಂ ನ ಚೇತಾಂಸಿ ತ ಏವ ಧೀರಾಃ!” ಎಂಬ ಅವರ ಮಾತು ಅವರಲ್ಲಿಯೇ ಸಾರ್ಥಕತೆಯನ್ನು ಹೊಂದುವಂತಹದ್ದು. ಶ್ರೀಮದಾಚಾರ್ಯರ ಭಾಷ್ಯದ ಸೊಗಸನ್ನೋ, ಭಾಗವತದ ವಿಚಾರವನ್ನೋ, ಅವರದೇ ಆದ ಗಂಭೀರವಾಣಿಯ ಮೂಲಕ ಕೇಳುವ ದಿನಗಳು ಕಳೆದುಹೋದವು ಎಂಬುದನ್ನು ನೆನೆದಾಗ “ತೇ ಹಿನೋ ದಿವಸಾ ಗತಾಃ” ಎಂಬ ಮಾತು ಖಂಡಿತ ಸ್ಮರಣೆಗೆ ಬರದಿರಲಾರದು.

ವಾಸ್ತವವಾಗಿ ನನಗೆ ಪೂಜ್ಯ ಭಗವತ್ಪಾದರ ಸಾಮೀಪ್ಯದ ಅನುಗ್ರಹವಾದದ್ದು ತೀರ ಇತ್ತೀಚೆಗಿನ  ಹದಿನೈದು ವರ್ಷಗಳಲ್ಲಿ. ಆದರೆ ಈ ವರ್ಷಗಳಲ್ಲಿ ಅವರು ತಮ್ಮ ಸಾಮೀಪ್ಯವನ್ನು ನೀಡಿದ ಸಮಯ ನನ್ನ ಬದುಕಿನಲ್ಲಿಯೇ ಅತ್ಯಂತ ಸಾರ್ಥಕ ಸಮಯ ಎಂದು ನಾನು ಭಾವಿಸಿದ್ದೇನೆ. ಅದರಲ್ಲಿಯೂ ಕೆಲವು ಬಾರಿ ನನ್ನ ಅಧಿಕ ಪ್ರಸಂಗದಿಂದಾಗಿ ಅವಕಾಶವನ್ನು ಕಳೆದುಕೊಂಡದ್ದೂ ಉಂಟು. ನಾನು ಗಮನಿಸಿದಂತೆ ನಾನೂ ಹಾಗೂ ಮಾನ್ಯ ಹಿರಿಯರಾದ ಶ್ರೀಯುತ ರಾಮಕೃಷ್ಣ ಅಡ್ಕೋಳಿಯವರು ಹೋದಾಗಲೆಲ್ಲ, ನಮಗೆ ಉಪನಿಷತ್ತಿನಲ್ಲಿ ಅಥವಾ ಭಾಗವತದಲ್ಲಿ ಅವರಿಗೆ ಪ್ರಿಯವಾದ ವಿಷಯಗಳನ್ನು ಎತ್ತಿಕೊಂಡು ಗಂಟೆಗಟ್ಟಲೆ ಆ ಬಗ್ಗೆ ವಿವರಿಸುವುದು ಅವರ ಕ್ರಮವಾಗಿತ್ತು. ಒಮ್ಮೆಯಂತೂ  “ಅನಾಮಕಾಯ ಮಹತೇ” ಎಂಬ ಶ್ಲೋಕವನ್ನು ಸುಮಾರು ಒಂದು ಘಂಟೆಯ ಕಾಲ ವಿವೇಚಿಸಿ ಅದರ ಸ್ವಾರಸ್ಯವನ್ನು ಹೇಳಿದ್ದುಂಟು. ಮಧ್ಯೆ ಆ ಕುರಿತಾಗಿ ಪ್ರಶ್ನಿಸಿ ನಮಗೆ ಉತ್ತರ ತೋಚದೆ ಆಕಾಶದತ್ತ ನೋಡಿದಾಗ ತಾವೇ ಅದಕ್ಕೆ ಸೂಕ್ತ ಸಮಾಧಾನವನ್ನು ಹೇಳಿ ಮುಂದುವರೆಯುತ್ತಿದ್ದುದೂ ಅವರದ್ದೇ ಆದ ವಿಧಾನ. ಒಮ್ಮೆ ಕೌಟುಂಬಿಕವಾದ ಸಮಸ್ಯೆಯೊಂದರಿಂದ ಪೀಡಿತನಾಗಿ ಅನನ್ಯ ಗತಿಕನಾಗಿ ಶ್ರೀ ಸನ್ನಿಧಾನವನ್ನೇ ಶರಣು ಹೋಗಿದ್ದ ಸಂದರ್ಭ. ವಿಷಯ ತಿಳಿಸಿದಾಗ ಅವರದು ತೀರ ನಿರಾಸಕ್ತಿ. ಇರಲಿ ಬಿಡು, ಏನೂ ಆಗಲಿಕ್ಕಿಲ್ಲ ಎಂಬ ಉತ್ತರ. ನನಗೋ ತಡೆಯಲಾರದ ತಳಮಳ. ನನ್ನ ಸಮಸ್ಯೆಯ ಬಗ್ಗೆ ಅವರು ಏನನ್ನೂ ಹೇಳುತ್ತಿಲ್ಲವಲ್ಲ ಎಂಬ ಎದೆಗುದಿ. ಆದರೆ ಹೇಳುವಂತಿಲ್ಲ. ಸುಮ್ಮನಿದ್ದೆ. ಅಂದು ಕೂಡ ಎಂದಿನಂತೆ ಮಾತನಾಡುತ್ತ ಗುರುವನ್ನು ನೋಡುವ, ಧ್ಯಾನಿಸುವ, ಕುರಿತಾಗಿ ಬಹಳ ಹೊತ್ತು ಉಪದೇಶ ನೀಡಿದರು. ನಾನು ಸುಮ್ಮನಿರಬೇಕಿತ್ತು. ಇನ್ನೂ ಹೆಚ್ಚಿನ ಅಮೃತಪಾನ ನನಗಾಗುತ್ತಿತ್ತು. ಆದರೆ ನನ್ನ ಸಮಸ್ಯೆಗೆ ಯಾವ ಸಮಾಧಾನವನ್ನೂ ಹೇಳದೆ ಬೇರೆ ವಿಷಯವನ್ನು ಹೇಳುತ್ತಿದ್ದಾರಲ್ಲ ಎಂಬ ಮನಸ್ಸಿನ ಬೇಗೆ ಎಲ್ಲಿಯೋ ಅವಿತುಕೊಂಡದ್ದು ಪ್ರಶ್ನೆಯ ರೂಪದಲ್ಲಿ ಸ್ಫೋಟವಾಯಿತು. ಪ್ರಾಯಃ ನನ್ನ ಶ್ರವಣಭಾಗ್ಯ ಮುಗಿದಿತ್ತು. ಆ ವಿಷಯವನ್ನು ಅವರು ಮುಂದುವರಿಸಲೇ ಇಲ್ಲ. ನನಗೆ ತಿಳಿದುಬಂದ ವಿಷಯ “ಪೂಜ್ಯರು ನನ್ನ ಸಮಸ್ಯೆಗೆ ನನಗೆ ಹೇಳುವ ಮೊದಲೇ ಚಿಕಿತ್ಸೆ ನೀಡಿದ್ದರು” ಎಂಬುದು.

ಅವರ ಕೊನೆಯ ದಿನಗಳಲ್ಲಿ ಅಶಕ್ತತೆ ಮೊದಲಾದ ತೊಂದರೆಗಳು  ಕಾಣಿಸಿಕೊಂಡಾಗ  ಪರಮತಪೋನಿಧಿಗಳಾದ, ಮಹಾಮಹಿಮರಾದ ಅವರು ಈ ತೊಂದರೆಗಳಿಂದ ಏಕೆ ದೂರವಾಗಬಾರದು ಎಂಬುದನ್ನು ಒಮ್ಮೆ ನಾನು ಮನಸ್ಸಿನಲ್ಲಿ ಚಿಂತಿಸಿದಾಗ ಅವರು ನೀಡಿದ ಉತ್ತರ – ದೇಹಭಾವವನ್ನು ಯಾರೂ ಮೀರುವಂತಿಲ್ಲ, ಮೀರಲೂಬಾರದು. ಈ ದೇಹದೊಂದಿಗೆ ನಮ್ಮ ಅವಿನಾಭಾವವಿಲ್ಲವಾದಾಗ ಬಾಧೆ ದೇಹಕ್ಕೇ ಹೊರತು ನಮಗಲ್ಲ. ನಾವು ಸಂಪೂರ್ಣ ಆನಂದ ಲೋಕದಲ್ಲಿಯೇ ಇದ್ದೇವೆ ಎಂದು. ಇದಕ್ಕೆ ಕೃಷ್ಣ-ರಾಮರ ಉದಾಹರಣೆ ನೀಡಿ “ಮರ್ತ್ಯಾವತಾರಸ್ತ್ವಿಹ ಮರ್ತ್ಯಶಿಕ್ಷಣಂ” ಎಂಬ ಮಾತಿನ ಉಲ್ಲೇಖ. ಇಲ್ಲಿ ಗಮನಿಸಬೇಕಾದ ಅಂಶ ನಾನು ಮನಸ್ಸಿನಲ್ಲಿಯೇ ಅಂದುಕೊಂಡ ವಿಷಯ ಅವರಿಗೆ ಹೇಗೆ ತಿಳಿಯಿತು ಎನ್ನುವುದಕ್ಕಿಂತ ಅವರು ಈ ವಿಷಯದ ಬಗ್ಗೆ ನೀಡಿದ ಸಮಾಧಾನ.

ಮೊದಮೊದಲು ಸ್ವಾಮಿಗಳಾದವರಿಗೆ ಲೌಕಿಕ ವ್ಯವಹಾರವೇನು ತಿಳಿದಿರುತ್ತದೆ ಎಂಬ ಭಾವನೆಯಿಂದ ಅವರು ಬೇಡ ಎಂದು ಹೇಳಿದ ವ್ಯವಹಾರವನ್ನು ನಾನು ಬುದ್ಧಿವಂತ ಎಂದು ತಿಳಿದ ಮಾಡಿ ಕೈಸುಟ್ಟುಕೊಂಡಿದ್ದೇನೆ. ಹಾಗೆಯೇ ಪೂಜ್ಯರು ಆದೇಶಿಸಿದ ರೀತಿಯಲ್ಲಿಯೇ ವ್ಯವಹರಿಸಿ ಎಲ್ಲ ಕಾರ್ಯಗಳಲ್ಲಿ ಸಫಲನಾಗಿದ್ದೂ ಇದೆ.

ಪೂಜ್ಯರಿಗೆ ಅತ್ಯಂತ ಪ್ರಿಯವಾದ ಭಾಗವತದ ಶ್ಲೋಕಗಳನ್ನು ಗ್ರಂಥದ ಸಹಾಯವಿಲ್ಲದೆಯೇ ನಿರರ್ಗಳವಾಗಿ ಪಠಿಸುತ್ತ ಅದರ ನಿಗೂಢಾರ್ಥವನ್ನು ವಿವರಿಸುವ ಶೈಲಿಯೇ ಅನಿತರಸಾಧಾರಣ. ಅವರು ರಚಿಸಿದ ಅನೇಕ ಗ್ರಂಥಗಳೂ ಸಹ ನಿಜವಾದ ಅರ್ಥದಲ್ಲಿ “ಸಂಕ್ಷಿಪ್ತೋ ಬಹುಲಾರ್ಥಕಃ” ಪ್ರಾಯಃ ತರ್ಕಶಾಸ್ತ್ರದ ಅಧ್ಯಯನದ ಫಲವೇನೋ,ತತ್ವಚಿಂತಾಮಣಿಯ ದೀಧಿತಿಯ ಛಾಯೆ. ಕವಿ ಭಾರವಿಯ –

“ಭವಂತಿ ತೇ ಸಭ್ಯತಮಾವಿಪಶ್ಚಿತಃ
ಮನೋಗತಂ ವಾಚಿ ನಿವೇಶಯಂತಿ ಯೇ |
ನಯಂತಿ ತೇಷ್ವಪ್ಯುಪಪನ್ನನೈಪುಣಾ
ಗಭೀರಮರ್ಥಂ ಕತಿಚಿತ್ ಪ್ರಕಾಶತಾಂ ||

ಎಂಬ ಉಕ್ತಿಯನ್ನು ನೆನಪಿಸುವಂತಹ ಹೃದಯಕ್ಕೆ ನೇರವಾಗಿ ತಟ್ಟುವಂತಹ ಮಾತು. “ಪ್ರವೃತ್ತಿಪಥಬೋಧಾಯ ನಿವೃತ್ತಿಪಥಶೋಭಿನೇ” ಎಂಬುದೂ ಅವರದ್ದೇ ಆದ ಮಾತು. ಇದು ಕೇವಲ ಅಲಂಕಾರಿಕ  ವಾಣಿಯಲ್ಲ. ಸ್ವಾತ್ಮಧ್ಯಾನಪರಾಯಣರಾಗಿ ಅನುಷ್ಠಾನದಿಂದ ಎರಡೂ ಮಾರ್ಗಗಳಲ್ಲಿ ಸಿದ್ಧಿಯನ್ನು ಪಡೆದ ಅನುಭವದ ನುಡಿ. “ವಾಚಮರ್ಥೋsನುಧಾವತಿ” ಎಂಬುದಕ್ಕೆ ಪ್ರತ್ಯಕ್ಷ ನಿದರ್ಶನ. ತಮ್ಮ ಗುರುಪರಂಪರೆಯ ಬಗ್ಗೆ ಅತ್ಯಂತ ಪೂಜ್ಯಭಾವನೆ ಹೊಂದಿದ್ದ ಅವರಿಗೆ ತಮ್ಮ ಪರಮಗುರುಗಳಾಗಿದ್ದ ತಪೋನಿಧಿಗಳಾದ ಪರಮಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳಲ್ಲಿ ಅಪಾರವಾದ ಭಕ್ತಿ. ಅದನ್ನು ಅವರ ಸ್ತುತಿಮಂಜರಿ ಮೊದಲಾದ ಗ್ರಂಥಗಳಲ್ಲಿ ಕಾಣಬಹುದು.ಅವರ ಹೆಸರಿನವರೇ ಆದ ಹಿಂದಿನ ಶ್ರೀ ಶ್ರೀಮದ್ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರೂ ಸಹ ಇವರಂತೆಯೇ ಲೌಕಿಕ-ಪಾರಮಾರ್ಥಿಕಗಳಲ್ಲಿ ಪ್ರವೃತ್ತಿ-ನಿವೃತ್ತಿ ಮಾರ್ಗಗಳಲ್ಲಿ ಸುಪ್ರಸಿದ್ಧರಾಗಿದ್ದರೆಂದು ಇತಿಹಾಸ ಹೇಳುತ್ತದೆ. “ತೃತೀಯೇ ಗಚ್ಛಾಮಃ” ಎಂಬ ಮಾತು ಇದನ್ನು ಸ್ಥಿರೀಕರಿಸುತ್ತದೆಯೇ? ಏಕೆಂದರೆ ಪೂಜ್ಯರು ಎಂದೂ ತಮ್ಮ ಪರಮೇಷ್ಠಿ ಗುರುಗಳ ಹೆಸರನ್ನು ಹೇಳುತ್ತಿರಲಿಲ್ಲ. “ನಮ್ಮ ಹೆಸರಿನವರು” ಎಂದೇ ವ್ಯವಹರಿಸುತ್ತಿದ್ದರು.

“ತ್ರಾಹಿ” ಎಂದು ಬಂದವನನ್ನು ಕೈಹಿಡಿದು ಉದ್ಧರಿಸಿದರು. ನಂಬಿ ಬದುಕಿದವರಿಗೆ ದಾರಿ ತೋರಿಸಿದರು. ನಮ್ಮ ಅಜ್ಞಾನದ ಬಟ್ಟೆ ಹರಿದೊಗೆದು ನಿಜವಾದ ಬಟ್ಟೆ ನೀಡಿದರು. ಬಟ್ಟೆಯೇ ಕಾಣದಾದವರಿಗೆ ನಿಜವಾದ ಬಟ್ಟೆ ತೋರಿಸಿದರು. ಇಂತಹ ಅಂಶಾವತಾರಿಗಳ ಕಾಲದಲ್ಲಿ ನಾವಿದ್ದೆವು. ಅವರ ಅನುಗ್ರಹವನ್ನು ಪಡೆದೆವು ಎಂದ ಮೇಲೆ ನಮ್ಮ ಭಾಗ್ಯಕ್ಕೆ ಬೆಲೆ ಕಟ್ಟಲುಂಟೇ ? ಇಷ್ಟಾಗಿಯೂ ಇದು ನಾನು ಮೊದಲೇ ಹೇಳಿದಂತೆ ಸಾಗರವನ್ನಳೆಯುವ ವ್ಯರ್ಥಪ್ರಯತ್ನ ಅಥವಾ ಅಂಧರು ಆನೆಯನ್ನು ವರ್ಣಿಸುವಂತಹ ಉಪಕ್ರಮ.ಏಕೆಂದರೆ ಇಷ್ಟು ಹೇಳಿಯೂ, ಹೇಳಲೇಬೇಕಾದದ್ದು ಉಳಿದೇ ಇದೆ. ತಿಳಿದುಕೊಳ್ಳಲೇಬೇಕಾದದ್ದೂ ಬಹಳ ಇದೆ.

                          ****************

Facebook Comments