ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.
ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಶ್ರದ್ಧಾಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಶ್ರದ್ಧಾಸುಮ ಶ್ರೀಗುರುಚರಣಕೆ....

ಶ್ರದ್ಧಾಸುಮ ಶ್ರೀಗುರುಚರಣಕೆ….

ಶ್ರದ್ಧಾಸುಮ 4:

ಪರಮಹಂಸ ಪರಿವ್ರಾಜಕ ಆಚಾರ್ಯ ಪರಮಪೂಜ್ಯ ಗುರುವರ್ಯರು

ವೇ. ಸುಬ್ರಹ್ಮಣ್ಯ ಶಾಸ್ತ್ರೀ, ಉಂಚಗೇರಿ

ಸಚ್ಚಿದಾನಂದರೂಪಾಯ ಬಿಂದುನಾದಾಂತರಾತ್ಮನೇ|
ಆದಿಮಧ್ಯಾಂತಶೂನ್ಯಾಯ ಗುರೂಣಾಂ ಗುರವೇ ನಮಃ||

ವ್ಯಾವಹಾರಿಕ ಸಮಸ್ಯೆಗಳನ್ನು ಹೊಂದಿ, ಅದನ್ನೇ ನೆನಪಿಸಿಕೊಳ್ಳುತ್ತ ಅದರಿಂದ ಉಂಟಾದ ಹರ್ಷ-ಅಮರ್ಷಗಳನ್ನು ಅನುಭವದಲ್ಲಿ ಕಾಣುವವರು ಜನಸಾಮಾನ್ಯರು. ಶಾಸ್ತ್ರದ ಘನತೆಯನ್ನು ಅರಿಯದೆ, ಆಚಾರದಲ್ಲಿ ಅದನ್ನು ಅಳವಡಿಸಲಾಗದೇ, ತಾನೂ ಆಚರಿಸಲು ಸಮರ್ಥನಲ್ಲದ ವ್ಯಕ್ತಿ ಆದರ್ಶ ಮಾರ್ಗದರ್ಶಕ ಹೇಗಾಗಬಲ್ಲ?
ಪರಮಾತ್ಮನಲ್ಲಿ ನೆಲೆ ನಿಂತ ಪ್ರಬುದ್ಧ ಧೀಶಾಲಿಯಾಗಿ, ಶಾಸ್ತ್ರಾಭ್ಯಾಸದಲ್ಲಿ ನಿಶಿತಮತಿಯಾಗಿ, ಆಳವಾಗಿ ಅಧ್ಯಯನವನ್ನು ಮಾಡಿ, ಸಮಯೋಚಿತವಾಗಿಯೂ, ಸಮಂಜಸವಾಗಿಯೂ, ಸಮರ್ಥವಾಗಿಯೂ ಉಪದೇಶಿಸಿ, ಆಚರಣೆ ನಿಲ್ಲುವ ರೀತಿಯ ಮಾರ್ಗದರ್ಶಕನು ತಾನೂ ಶಾಸ್ತ್ರಾನುಗುಣ ನಡತೆಯಿರಿಸಿಕೊಂಡ ಪುಣ್ಯಪುರುಷ ಪ್ರಭಾವಶಾಲಿ ಆಚಾರ್ಯನಾಗಬಲ್ಲನು.
ಬ್ರಹ್ಮೀಭಾವ ಹೊಂದಿದ ಪರಮಹಂಸ ಪರಿವ್ರಾಜಕಾಚಾರ್ಯ, ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರು, ಆದಿಶಂಕರಾಚಾರ್ಯರ ಅವಿಚ್ಛಿನ್ನಗುರುಪರಂಪರೆಯ ಶ್ರೀರಾಮಚಂದ್ರಾಪುರಮಠದ ಶ್ರೀಗುರುಪೀಠದಲ್ಲಿ, ಮೂವತ್ತೈದನೆಯ ಧರ್ಮಾಚಾರ್ಯರಾಗಿ ಬೆಳಗಿದವರು. ಬ್ರಹ್ಮೈಕ್ಯ ಶ್ರೀಗುರುವರ್ಯರ ದಿವ್ಯಜೀವನದ ಒಂದೊಂದು ಘಟನೆಯೂ, ಅವಲೋಕನೀಯ, ಚಿಂತನೀಯ.
ತಮ್ಮ ಸನ್ಯಾಸಾಶ್ರಮ ಸ್ವೀಕಾರದ ಕೆಲವು ಗಮನೀಯ ಕಾರ್ಯಗಳನ್ನು ಸಮಯವನ್ನೂ ತಾವೇ ದೈವೀಸ್ಫೂರ್ತಿಯಿಂದ ಉದ್ಘೋಷಿಸಿ, “ಆತ್ಮವಿದ್ಯಾ ಆಖ್ಯಾಯಿಕಾ” ಎಂಬ ಸಂಸ್ಕೃತ ಕಾವ್ಯ ಗ್ರಂಥವನ್ನು ಮತ್ತು “ಸ್ತುತಿ ಮಂಜರೀ” ಎಂಬ ಅಮೂಲ್ಯ ದಿವ್ಯಸ್ತೋತ್ರಗಳನ್ನೂ ನಮಗೆಲ್ಲರಿಗೆ ನೀಡಿದ ಈ ಮಹಾಮಹಿಮರನ್ನು ಅರಿತವರೇ ಧನ್ಯರು.
ಶ್ರೀಮಹಾಸಂಸ್ಥಾನದ ಗುರುತರ ಹೊಣೆಯನ್ನು ಹೊತ್ತು ಎಂತಹ ದುರ್ಭರ ಪ್ರಸಂಗದಲ್ಲಿಯೂ ವಿಚಲಿತರಾಗದೇ, ಆಚಾರ್ಯತನದ ಗಾಂಭೀರ್ಯ ಹಾಗೂ ಪರಿವ್ರಾಜಕತೆಯ ಸರಳ ವೈರಾಗ್ಯ ಇವುಗಳನ್ನು ಈ ಪರಿವ್ರಾಜಕರಲ್ಲಿ ನಾವು ಕಾಣುತ್ತೇವೆ.
ಸಿಂಹಗಾಂಭೀರ್ಯದ ತಪೋನಿಧಿ, ಬೃಹಸ್ಪತಿ ಸಮಾನವಾದ ವಿದ್ಯಾಗೌರವ, ನಾರದ ಸದೃಶ ವೈರಾಗ್ಯ-ವಿಷ್ಣುಭಕ್ತಿ, ವ್ಯಾಸಸದೃಶ ಪೂರ್ವಪರ ಐತಿಹಾಸಿಕ ಜ್ಞಾನ, ಶುಕಮಹರ್ಷಿಸದೃಶ ದೃಢ ಆತ್ಮಾನುಸಂಧಾನದ ಪ್ರಶಾಂತ ಪ್ರಸನ್ನತೆ, ಶ್ರೀಗೋವಿಂದ ಭಗವತ್ಪಾದರಂತೆ ಏಕಾಂತ ತತ್ಪರತೆ ಶ್ರೀಶಂಕರ ಭಗವತ್ಪಾದರಂತೆ ಕಾಲೋಚಿತ ಮಹತ್ಕಾರ್ಯ ಮಗ್ನತೆ, ಶ್ರೀಸುರೇಶ್ವರಾಚಾರ್ಯರಂತೆ ಪರಂಪರೆಯ ಅರಿವು, ಕಾರ್ಯನಿಷ್ಠೆ, ಶ್ರೀವಿದ್ಯಾನಂದಾಚಾರ್ಯರಂತೆ ವಿಶಾಲ ವಿದ್ಯಾಸಂಪನ್ನತೆ, ದುರವಾಪತಪಃಚಕ್ಷುಗಳಾದ ಪರಮಗುರುವರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳಂತೆ ತಪೋನಿಷ್ಠೆ, ಗುರುವರ್ಯ ಶ್ರೀರಾಮಚಂದ್ರಭಾರತೀ ಮಹಾಸ್ವಾಮಿಗಳಂತೆ ನಾನಾಯೋಗ ಸಮಾಸಕ್ತ ಚಿತ್ತವೃತ್ತಿ ಈ ಎಲ್ಲ ವಿಶಿಷ್ಟ ಗುಣಗಳನ್ನು ಬ್ರಹ್ಮೈಕ್ಯ ಗುರುವರ್ಯರಲ್ಲಿ ಕಾಣಬಹುದಾಗಿತ್ತು.
ಬ್ರಹ್ಮೈಕ್ಯ ಪೂಜ್ಯಗುರುವರ್ಯರು, “ಅಗ್ರತಃ ಚತುರೋ ವೇದಾಃ” – ಎಂಬಂತೆ ವ್ಯವಹಾರ ಚತುರರೂ, ಅತೀವ ತಪಃಶಕ್ತಿಸಂಪನ್ನರೂ, ಶಾಸ್ತ್ರಜ್ಞರೂ, ಆಚಾರನಿಷ್ಠರೂ, ಸಂಪ್ರದಾಯ ಸಂರಕ್ಷಕರೂ ಆಗಿದ್ದರೆಂಬುದನ್ನು ಅವರನ್ನು ದರ್ಶನ ಮಾಡಿ ಸಂಭಾಷಣೆಯನ್ನು ನಡೆಸಿ, ಅನುಗ್ರಹ ಪಡೆದಂತಹ ಎಲ್ಲರೂ ಬಲ್ಲರು.
ಸ್ವಭಾವತಃ ವಿರಕ್ತರಾದ ಬ್ರಹ್ಮೈಕ್ಯ ಶ್ರೀಗುರುವರ್ಯರು ಶ್ರೀಶಂಕರಭಗವತ್ಪಾದ ಪ್ರತಿಷ್ಠಾಪಿತ ಆಚಾರ್ಯಪೀಠದಲ್ಲಿ ಪರಿವ್ರಾಜಕವರ್ಯರಾಗಿ ಬೆಳಗಿ “ಶ್ರೀಗುರುಭಗವತ್ಪಾದ”ರೆಂದು ಜನಮನದಲ್ಲಿ ನೆಲೆನಿಂತು ಎಲ್ಲರನ್ನೂ ಅನುಗ್ರಹಿಸುತ್ತಿದ್ದಾರೆ. ಇಂತಹ ಕುಲಗುರುಗಳ ವಿಷಯದಲ್ಲಿ ಶ್ರದ್ಧಾಭಕ್ತಿಗಳಿಂದ ನಡೆದುಕೊಳ್ಳಬೇಕಾದುದು ಸಮಸ್ತ ಜನತೆಯ ಮೊದಲ ಕರ್ತವ್ಯ.
ಅಖಂಡ ಗೋಕರ್ಣಮಂಡಲಾಚಾರ್ಯರೂ, ಹವ್ಯಕ ಮಂಡಲಾಧೀಶ್ವರರೂ ಆಗಿ, ಎಲ್ಲರಿಗೆ ಸನ್ಮಾರ್ಗಪ್ರದರ್ಶನವನ್ನು ಮಾಡಿದವರೂ, ಶ್ರೀಭಗವತ್ಪಾದ ಸ್ವರೂಪಿಗಳೂ ಆಗಿದ್ದ ಬ್ರಹ್ಮೈಕ್ಯ ಪೂಜ್ಯಗುರುವರ್ಯರಿಗೆ ಪ್ರಣಾಮಗಳನ್ನು ಸಮರ್ಪಿಸಿ, ಅವರ ಈ ಆರಾಧನಾ ಸಂದರ್ಭದಲ್ಲಿ ಶ್ರೀಶಂಕರ ಭಗವತ್ಪಾದರ ಈ ಅಮೃತವಾಣಿಯನ್ನು ನೆನಪಿಸಲು ಇಷ್ಟಪಡುತ್ತೇನೆ.

ಶರೀರಂ ಸುರೂಪಂ ತಥಾ ವಾ ಕಲತ್ರಂ|
ಯಶಃ ಚಾರುಚಿತ್ತಂ ಧನಂ ಮೇರುತುಲ್ಯಂ|
ಗುರೋರಂಘ್ರಿಪದ್ಮೇ ಮನಶ್ಚೇನ್ನಲಗ್ನಂ|
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್||
~*~

Facebook Comments