ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.
ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಶ್ರದ್ಧಾಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಶ್ರದ್ಧಾಸುಮ ಶ್ರೀಗುರುಚರಣಕೆ....

ಶ್ರದ್ಧಾಸುಮ ಶ್ರೀಗುರುಚರಣಕೆ….

ಶ್ರದ್ಧಾಸುಮ 13:  

ಬ್ರಹ್ಮೈಕ್ಯ ಪೂಜ್ಯಗುರುವರ್ಯ
–  ನಾನು ದರ್ಶನಮಾಡಿದಂತೆ

ಎಂ. ಎ. ಭಟ್ಟ, ಕೊಡ್ಲೆಕೆರೆ (ಗೋಕರ್ಣ)

      ಪೂಜ್ಯ ಗುರುವರ್ಯ ಶ್ರೀಶ್ರೀಮದ್ರಾಘವೇಂದ್ರ ಭಾರತೀ ಸ್ವಾಮಿಗಳವರ ಕುರಿತು ಬರೆಯಲು ಸಿಕ್ಕಿರುವ ಈ ಅವಕಾಶ ಶ್ರೀಗುರುಗಳ ಪರಮಾನುಗ್ರಹವೆಂದು ಭಾವಿಸಿದ್ದೇನೆ. ನನ್ನ ಬಾಳಿನಲ್ಲಿ ಬಹುದೊಡ್ಡ ಪ್ರಭಾವವನ್ನು ಬೀರಿದ ಆ ಚೈತನ್ಯದ ಕುರಿತು ಬರೆಯಬೇಕೆಂದರೆ ನೆನಪುಗಳು ಒಮ್ಮೆಲೆ ನನ್ನನ್ನು ಸುತ್ತುವರೆದು ‘ಎಲ್ಲಿಂದ ಆರಂಭಿಸಲಿ?’ ಎಂದು ಯೋಚಿಸುವಂತಾಗುತ್ತದೆ. 

ತುಂಗಾನದಿಯ ಪ್ರಶಾಂತ ವಾತಾವರಣದಲ್ಲಿ, ತೀರ್ಥಹಳ್ಳಿಯಲ್ಲಿ ತೀರ್ಥರಾಜಪುರ ಮಠ ಇದೆ. ಇದು ಹೊಸನಗರದಲ್ಲಿರುವ ನಮ್ಮ ಶ್ರೀರಾಮಚಂದ್ರಾಪುರಮಠದ ಅಧೀನ ಮಠ. ತೀರ್ಥಹಳ್ಳಿಯ ಶ್ರೀಮಠದಲ್ಲಿ ನನ್ನ ಅಜ್ಜ ಮತ್ತು ತಂದೆ ಪಾರುಪತ್ಯಗಾರರಾಗಿ ಸೇವೆ ಸಲ್ಲಿಸಿದವರು.

    ಶ್ರೀ ಶ್ರೀರಾಘವೇಂದ್ರ ಭಾರತಿಗಳವರನ್ನು ಅವರ ಪೂರ್ವಾಶ್ರಮದಲ್ಲೇ ತೀರ್ಥಹಳ್ಳಿಯ ಮಠದಲ್ಲಿ ಕಂಡ ನೆನಪಿದೆ. ನನಗೆ ಆಗ ಹದಿಮೂರೋ, ಹದಿನಾಲ್ಕೋ ವರ್ಷ ವಯಸ್ಸು. ಅವರದು ಆಕರ್ಷಣೀಯ ವ್ಯಕ್ತಿತ್ವ. ತೆಳ್ಳಗೆ, ಬೆಳ್ಳಗೆ ಎತ್ತರದ ಆಳು-ಅವರ ವಿದ್ವತ್ತು ಆ ನಗು ಮುಖದಲ್ಲಿ ಸೂಸುತ್ತಿತ್ತು. ಅವರ ಸನ್ಯಾಸಾಶ್ರಮ ಸ್ವೀಕರಿಸಿದ್ದನ್ನು ಶ್ರೀ ರಾಮಚಂದ್ರಾಪುರ ಮಠದಲ್ಲಿ ನೋಡುವ ಭಾಗ್ಯವೂ ನನ್ನದಾಗಿತ್ತು. ತಮ್ಮ ತಂದೆಯವರಲ್ಲಿ, ನಂಜನಗೂಡು, ಕುಂಭಕೋಣ ಮುಂತಾದೆಡೆಗಳಲ್ಲೂ ಅಧ್ಯಯನ ಮಾಡಿದ ಶ್ರೀಗುರುಗಳು ಮುಂದೆ ಕಾಶಿಯಲ್ಲೂ ಹೆಚ್ಚಿನ ಅಧ್ಯಯನ ನಡೆಸಿದರು. ಅಲ್ಲಿ ವಿದ್ಯಾಭ್ಯಾಸ ಮುಗಿಸಿ ಶ್ರೀಗುರುಗಳು ಮೊದಲು ಬಂದಿದ್ದು ತೀರ್ಥಹಳ್ಳಿಯ ಮಠಕ್ಕೆ ಮುಂದೆ ಎಲ್ಲ ಮಠಗಳ ಕಟ್ಟಡಕ್ಕೆ ನೀಲಿನಕ್ಷೆ ತಯಾರಾಗಿದ್ದು ಇಲ್ಲೇ. ಅಖಿಲ ಹವ್ಯಕ ಅಧಿವೇಶನ ಪ್ರಥಮಬಾರಿಗೆ ಅಪ್ರತಿಮವಾಗಿ ನೆರವೇರಿದ್ದೂ ಎಲ್ಲೇ. ಮುಂದೆ ಶಿಷ್ಯ ಪರಿಗ್ರಹಕ್ಕಾಗಿಯೂ ಸಭೆ, ಸಮಾರಂಭಗಳು ಇಲ್ಲೇ ನಡೆದವು.

                ಅನಾರೋಗ್ಯದಲ್ಲೂ ಶ್ರೀಗುರುಗಳು ಎಂದೂ ವಿಶ್ರಮಿಸಿದವರಲ್ಲ. ಸ್ವಂತ ಅಭ್ಯಾಸ, ಅಧ್ಯಯನ, ಜತೆಗೆ ಅಧ್ಯಾಪನ, ಸಕಲ ಸೀಮೆಗಳಿಂದ ಬರುತ್ತಿದ್ದ ಶಿಷ್ಯ ಪರಿವಾರದ ಭೇಟಿ, ಪತ್ರಿಕೆಗಳ ಪರಿಶೀಲನೆ… ಇಂತ ಯಾವ ಕಾರ್ಯಕ್ಕೂ ನಿಲುಗಡೆಯೇ ಇಲ್ಲ. ಎಲ್ಲರೊಡನೆ ಆತ್ಮೀಯ ಮಾತುಕತೆ, ಹಿತವಾದ ಮಾರ್ಗದರ್ಶನ.ತಮ್ಮ ವಿದ್ಯಾರ್ಥಿಗಳ ಕುರಿತು ವಿಶೇಷವಾದ ಕಾಳಜಿ.  ಆ ವಿಷಯದಲ್ಲಿ ಅವರದು ಎಣೆಯರಿಯದ ಪ್ರೀತಿ, ಶಿಷ್ಯರ ಆರೋಗ್ಯದಲ್ಲಿ ಕಿಂಚಿತ್ತೂ ಏರುಪೇರಾದರೂ ಎಚ್ಚರಿಕೆವಹಿಸುವ ತಾಯಿಮಮತೆ.

            “ಬಿದ್ದುದನ್ನು ನಿಲ್ಲಿಪುದೆ… ಬಿದ್ದುದನ್ನು ನಿಲ್ಲಿಸುವುದರಲ್ಲಿ ‘ಮೃತ್ಯುಂಜಯತೆ’ ಇದೆಯೆಂಬ ತುಂಬ ಅರ್ಥಗರ್ಭಿತ ಸೂಕ್ತಿ ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗದಲ್ಲಿ ಬರುತ್ತದೆ. ಆ ಮಾತಿಗೆ ಪ್ರತ್ಯಕ್ಷ ನಿದರ್ಶನವಾಗಿದ್ದವರು ನಮ್ಮ ಗುರುಗಳು. ಆರ್ಥಿಕವಾಗಿ ತುಂಬ ಸಂಕಷ್ಟಕ್ಕೊಳಗಾಗಿದ್ದ ನಮ್ಮ ಮಠ ಚೇತರಿಕೆಯನ್ನಷ್ಟೇ ಅಲ್ಲ, ಉಚ್ಛ್ರಾಯವನ್ನೇ ಕಂಡ ಪವಾಡ ಸಾಧ್ಯವಾಗಿದ್ದು ಶ್ರೀಗುರುಗಳ ಸಂಕಲ್ಪ ಶಕ್ತಿ ಮತ್ತು ವ್ಯವಹಾರ ಕುಶಲತೆಗಳಿಂದ ಹಿಡಿದ ಕೆಲಸವನ್ನು ಯಶಸ್ವಿಯಾಗಿಯೇ ಮಾಡಿ ಪೂರೈಸುವ ಅವರ ಛಲ ನಮ್ಮ ಮಠಕ್ಕೆ ಭೀಮಬಲವನ್ನೊದಗಿಸಿತು. ಅದು ತೋಟವಿರಲಿ, ಮಠವಿರಲಿ, ಪಾಠಶಾಲೆಯೇ ಇರಲಿ-“ಉಳುಮೆಯಿಲ್ಲದೆ, ದುಡಿಮೆ ಇಲ್ಲದೆ ಮಹಿಮೆ ಇಲ್ಲ” ಎಂಬುದನ್ನು ತೋರಿದ ಧೀಮಂತರವರು. ಇಂಥ ಸಾಧಕ ಗುರುಗಳು ತಮ್ಮ ಪ್ರತ್ಯಕ್ಷ ಕಾರ್ಯಶೀಲತೆಯಿಂದಲೇ ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿರುತ್ತಾರೆ. ತನ್ನ ಗುರಿ ಸಾಧಿಸುವಲ್ಲಿ ವಿರೋಧಿಗಳು ಎಷ್ಟೇ ಇರಲಿ, ವಿರೋಧಿಗಳು ಎಷ್ಟೇ ಇರಲಿ-ಅವರು ಹಿಮ್ಮೆಟ್ಟಿದವರೇ ಅಲ್ಲ. ಬದಲಾಗಿ ತಮ್ಮನ್ನು ವಿರೋಧಿಸಿದವರನ್ನೂ ಕಾಲಕ್ರಮದಲ್ಲಿ ಒಲಿಸಿಕೊಳ್ಳಬಲ್ಲ ಗುರುತ್ವ ಅವರ ವ್ಯಕ್ತಿತ್ವದ್ದು. ಎಷ್ಟೋ ಕುಟುಂಬಗಳ ವ್ಯವಹಾರಗಳನ್ನೂ ಕೋರ್ಟ್ ಕಛೇರಿಗಳ ವ್ಯವಹಾರವಿಲ್ಲದೆ ಬಗೆಹರಿಸಿಕೊಟ್ಟ ಕುಶಲತೆ ಶ್ರೀಗುರುಗಳದು.

ಅಧ್ಯಯನ,ಅಧ್ಯಾಪನ

   ಶ್ರೀಗುರುಗಳ ಅಧ್ಯಯನಶೀಲತೆ ಮತ್ತು ಅಧ್ಯಾಪನ ಪ್ರವೃತ್ತಿಗಳ ಕುರಿತು ಆಗಲೇ ಒಮ್ಮೆ ಹೇಳಿದೆ, ಆ ಕುರಿತು ಇನ್ನೂ ಸ್ವಲ್ಪ ಹೇಳಬೇಕು.  ಸಮಾಜದ ಸ್ಥಿತಿಗತಿಗಳನ್ನು ಅಭ್ಯಸಿಸಿದ ಶ್ರೀಗುರುಗಳಿಗೆ ವೇದ-ಸಂಸ್ಕೃತ ಅಧ್ಯಯನಗಳಿಗೆ ಮಠದಿಂದಲೇ ಚಾಲನೆ ದೊರೆಯಬೇಕೆಂದು ತೋರಿತು. ಅದರಂತೆ ಅವರು ಮಠದಲ್ಲಿಯೇ ಪಾಠಶಾಲೆ ಆರಂಭಿಸಿ ಅಧ್ಯಪನ ಕೈಗೆತ್ತಿಕೊಂಡರು. ವಿದ್ಯಾರ್ಜನೆಯಲ್ಲಿ ಹೇಗೆ ಆಸಕ್ತಿ ಇತ್ತೋ, ಅದನ್ನು ಇತರರಿಗೆ ನೀಡಬೇಕೆಂಬ ವಿಷಯದಲ್ಲೂ ಶ್ರೀಗುರುಗಳಿಗೆ ಸರಿಸಮನವಾದ ಆಸಕ್ತಿ, ಆಸ್ಥೆ. ಸ್ವತಃ ಗ್ರಂಥಗಳನ್ನು ಅವರು ಅವಲೋಕಿಸುತ್ತಿದ್ದರು.  ಬೊಂಬೆ ವೆಂಕಟರಮಣ ಶಾಸ್ತ್ರಿಗಳಿಂದ ಪಾಠ ಹೇಳಿಸಿಕೊಳ್ಳುತ್ತಿದ್ದರು. ಸ್ವತಃ ತಾವು ಪಾಠಗಳನ್ನು ಹೇಳಿ ಶಿಷ್ಯರನ್ನು ವಿದ್ಯಾಸಂಪನ್ನರಾಗಿಸುವ ಕಾರ್ಯಗೌರವವೂ ಅವರಿಗೆ ಸಂತಸದ್ದಾಗಿತ್ತು.

     ಶ್ರೀಶ್ರೀಗಳವರ ಸನ್ನಿಧಿಯಲ್ಲಿ ಅಧ್ಯಯನ ಮಾಡಿದ ಅನೇಕರಿಗೆ, ನಂತರ ಸಮಾಜದಲ್ಲಿ ಪಡೆದ ಅವರ ಗೌರವ-ಆದರಗಳು, ಶ್ರೀಗುರುಗಳ ಅಧ್ಯಾಪನ ಪ್ರವೃತ್ತಿಗೆ ಸಿಕ್ಕ ಗೌರವವೇ ಆಗಿದೆ. ಅವರು ಪಾಠ ಹೇಳುವ ರೀತಿ ಮನೋಜ್ಞವಾಗಿತ್ತು. ರಘುವಂಶಕಾವ್ಯವೇ ಆಗಲಿ, ನೀತಿಶತಕವೇ ಆಗಲಿ ವ್ಯಾಕರಣ ಸೂತ್ರವೇ ಆಗಲಿ-ಎಲ್ಲವೂ ಸುಸೂತ್ರವಾಗಿ ತಿಳಿಯುವಂತಿತ್ತು. ನಾವು ಅಣ್ಣ ತಮ್ಮಂದಿರು ಪಾಠಪ್ರವಚನಗಳ ಸಂದರ್ಭದಲ್ಲಿ ಕುಳಿತುಕೊಂಡು ಲಾಭ ಪಡೆದಿದ್ದೇವೆ. “ಕಾಶೀಗಮನ ಮಾತ್ರೇಣ ನಾನ್ನಂಭಟ್ಟಾಯತೆ ದ್ವಿಜಃ” ಸತತ ಪರಿಶ್ರಮ, ಮನನ ತಲ್ಲೀನತೆಗಳಿಂದ ವಿದ್ಯಾರ್ಜನೆ ಮಾಡಿ ಪಾಂಡಿತ್ಯ ಪಡೆಯಬೇಕೆಂಬ ಸಂಗತಿಯನ್ನು ಅವರು ಕಥೆಗಳ ಮೂಲಕ ಮನದಟ್ಟು ಮಾಡಿಸಿದ್ದರು. ಅಂಥ ಸಂದರ್ಭದಲ್ಲೇ ಈ ಮೇಲಿನ ಶ್ಲೋಕವನ್ನು ಅವರ ಹೇಳಿದ್ದು. ಇದನ್ನು ನಾನು ಶಿಕ್ಷಕನಾದ ಮೇಲೂ ನನ್ನ ಸೇವೆಯುದ್ದಕ್ಕೂ ಮಕ್ಕಳಿಗೆ ಹೇಳುತ್ತಿದ್ದೆ.

                ಗುರುಗಳ ಅಧ್ಯಯನಶೀಲತೆಗೆ ಬೊಂಬೆ ವೆಂಕಟರಮಣಶಾಸ್ತ್ರಿಗಳಿಂದ ದೊಡ್ಡಬಲ ಒದಗುತ್ತಿತ್ತು. ರಾಮತೀರ್ಥದಲ್ಲಿ ಶ್ರೀಗುರುಗಳಿಗೆ ಶಾಸ್ತ್ರಿಗಳಿಂದ ಪಾಠಪ್ರವಚನ ಪ್ರಾರಂಭದಲ್ಲಿ ಗುರು-ಶಿಷ್ಯ, ಶಿಷ್ಯ-ಗುರು ಒಟ್ಟಿಗೇ ಶಾಂತಿಪಾಠ ಹೇಳುತ್ತಿದ್ದರು. ಅದನ್ನು ಕೇಳುವುದು ಕಣ್ಮನಗಳಿಗೆ  ಮಹದಾನಂದ. ಪಾಠದ ಕೊನೆಗೂ ಶಾಂತಿಮಂತ್ರ ಗುರುಗಳು ತಮ್ಮ ಆಸನದಲ್ಲಿ, ಶಾಸ್ತ್ರಿಗಳು ಅಷ್ಷು ಎತ್ತರದಲ್ಲದ ಆಸನದಲ್ಲಿ ಕುಳಿತಿರುತ್ತಿದ್ದರು. ಶಾಸ್ತ್ರಿಗಳು ವಿದ್ಯಾ ವಿನಯ ಸಂಪನ್ನರು, ನಿಗರ್ವಿಗಳು, ಶ್ರೀಗುರುಗಳಿಗೆ ಪಾಠದ ಮೊದಲೂ, ಬಳಿಕವೂ ನಮಸ್ಕರಿಸುವುದು ಅವರ ರೂಢಿ. ನಾನೊಮ್ಮೆ “ಶಾಸ್ತ್ರಿಗಳೇ, ನೀವು ಗುರುಗಳಿಗೇ ಗುರುಗಳು” ಎಂದೆ. ಅದಕ್ಕವರು”ಮಹಾಬಲಭಟ್ಟರೇ, ಗುರುಗಳಿಗೆ ಪಾಠ ಹೇಳಲು ನಾನು ಪೂರ್ವತಯಾರಿ ಇಲ್ಲದೇ ಬರುವುದಿಲ್ಲ. ಆದರೂ ದಿಗಿಲು. ನಂತರ ಪಾಠ ಮಾಡುತ್ತಿರುವಾಗ ಬರುವ ಪ್ರಶ್ನೆಗಳೇ ಬೇರೆ. ನನ್ನ ಉತ್ತರ ಸಮರ್ಪಕವಾದದ್ದು ಎಂದು ನನ್ನ ಅನಿಸಿಕೆ. ಅದಕ್ಕೆ ಶ್ರೀಗುರುಗಳ ಮುದ್ರಿಕೆ. ಪಾಠ ಹೇಳಿಸಿಕೊಳ್ಳುವವರೂ ಅವರೇ, ಹೇಳಿಕೊಡುವವರೂ ಅವರೇ , ನಾನು ನಿಮಿತ್ತ. ಇದರಿಂದ ನನಗೇ ಜ್ಞಾನವೃದ್ಧಿಯ ಲಾಭ ಆಗಿದೆ” ಎಂದರು. ಇದು ಶಾಸ್ತ್ರಿಗಳ ವಿನಯಶೀಲತೆ ಮತ್ತು ಗುರುಗಳ ಅಧ್ಯಯನಶೀಲತೆ-ಎರಡಕ್ಕೂ ಬೆಳಕು ಚೆಲ್ಲುವ ಮಾತು.

         ಗುರುಗಳು ತುಂಬ ಆಕರ್ಷಕವಾದ ರೀತಿಯಲ್ಲಿ ಉಪನ್ಯಾಸಗಳನ್ನು ನೀಡುತ್ತಿದ್ದರು. ಅವರ ಮಾತುಗರಿಕೆ-ಒಂದು ಗುಂಪಿನ ಜತೆಗಿರಲಿ, ಒಂದು ದೊಡ್ಡ ಸಭೆಯ ಎದುರಿನದಾಗಿರಲಿ-ಜನರನ್ನು ಒಲಿಸಿಕೊಳ್ಳುವ ಒಂದು ವಿಶೇಷ ಕಾಂತಿಯುಳ್ಳದ್ದು.  ಅವರು ಒಂದು ಸಂದರ್ಭದಲ್ಲಿ ಗುಣ, ಶೀಲ, ದಯೆಗಳಿಲ್ಲದ ವೇದಭ್ಯಾಸ ರಾಕ್ಷಸರದು, ವ್ಯರ್ಥವಾದುದು ಎಂದು ಮನಮೆಚ್ಚುವಂತೆ ವಿವರಿಸಿದ್ದರು. ಅಂದು ಅವರು ಉದಾಹರಿಸಿದ ಶ್ಲೋಕ ನನ್ನ ಮನಸ್ಸಿನಲ್ಲಿ ಸ್ಥಿರವಾಗಿ ಉಳಿದಿದೆ. “ಅಗ್ನಿಹೋತ್ರಾಣಿ ವೇದಾಶ್ಚ ರಾಕ್ಷಸಾನಾಂ ಗೃಹೇ ಗೃಹೇ”-ರಾಕ್ಷಸರ ಮನೆ, ಮನೆಗಳಲ್ಲೂ ಅಗ್ನಿಹೋತ್ರ, ವೇದ ಪಠನ ನಡೆಯುತ್ತಿದೆ’ ಹೀಗೆಂದು ಲಂಕೆಯಿಂದ ಬಂದ ಹನುಮಂತ ಹೇಳಿದಾಗ ರಾಮ ಚಿಂತಿತನಾಗುತ್ತಾನೆ. “ಇಂಥ ವೇದ ವಿದ್ಯಾವಿಶಾರದರನ್ನು ನಾನು ಹೇಗೆ ಜಯಿಸಲಿ?”ಎಂದು ಅವನ ಚಿಂತೆ. ಆದರೆ ಹನುಮಂತ ಮುಂದುವರಿದು ಹೇಳಿದನಂತೆ: “ದಯಾ ಸತ್ಯಂಚ-ಶೀಲಂಚ ರಾಕ್ಷಸಾನಾಂ ನ ವಿದ್ಯತೇ”-ದಯೆ,ಸತ್ಯ, ಶೀಲಗಳೆಂದರೇನೆಂದೂ ರಾಕ್ಷಸರಿಗೆ ತಿಳಿಯದು. ಈಗ ರಾಮನಿಗೆ  ಧೈರ್ಯಬಂತಂತೆ. ದಯೆ, ಸತ್ಯ, ಶೀಲಗಳಿಲ್ಲದ ಜನರನ್ನು ಎದುರಿಸುವುದು ಕಷ್ಟವಲ್ಲ. ಅಂಥವರ ವೇದಾಧ್ಯಯನವೂ ವ್ಯರ್ಥ. ಸಚ್ಚಾರಿತ್ರ್ಯದ ಕುರಿತು ಇದಕ್ಕಿಂತ ಚೆನ್ನಾಗಿ ಹೇಳಲು ಸಾಧ್ಯವೇ? ಪ್ರತಿವರ್ಷವೂ ನಮ್ಮ ಶಾಲೆಯಿಂದ ಮಕ್ಕಳನ್ನು ಬೀಳ್ಕೊಡುವ ಸಂದರ್ಭದಲ್ಲಿ ನಾನು ಈ ಶ್ಲೋಕವನ್ನು ಉದಾಹರಿಸುತ್ತಿದ್ದೆ. ವ್ಯಕ್ತಿತ್ವದಲ್ಲಿ ಸದ್ಗುಣಗಳಿಲ್ಲದೇ ಹೋದರೆ ಎಂಥ ವಿದ್ಯೆಯೂ ಪರಿಮಳವಿಲ್ಲದ ಪುಷ್ಪ. ಅದು ಯಾರಿಗೂ ಸಾರ್ಥಕತೆಯನ್ನು ತರಲಾರದು. ಇದನ್ನು ಶ್ರೀ ರಾಘವೇಂದ್ರ ಭಾರತಿಗಳು ತಮ್ಮ ಕಲಿಕೆಯಿಂದ ನನಗೆ ಮನಗಾಣಿಸಿಕೊಟ್ಟರು.

                ಆಷಾಢ ಬಹುಳ ಪಂಚಮಿಯಿಂದ  ಭಾದ್ರಪದಶುದ್ಧ ಪೌರ್ಣಮಿಯವರೆಗೆ  ಶ್ರೀಗಳವರು ಅನುಷ್ಠಾನ ನಿರತರಾಗುವ ಕಾಲ. ಆದರೆ ನಮ್ಮ ಶ್ರೀಗಳವರಿಗೆ ಆಗಲೂ ಬಿಡುವು ಇಲ್ಲ. ಗುರುಗಳನ್ನು ಕಾಣಬೇಕು, ಅವರಿಂದ ಸಲಹೆ, ಆಶೀರ್ವಾದ ಪಡೆಯಬೇಕು ಎನ್ನುವವರಿಗೆ ಇದು ಅಮೃತಗಳಿಗೆ. ‘ಹೇಗೂ ತೀರ್ಥಹಳ್ಳಿಯಲ್ಲಿರುತ್ತಾರೆ’ ಎಂದು ಮೂರು ಸೀಮೆಯ ಶಿಷ್ಯರು ಬಂದು ಒಂದೆರಡು ದಿನ ತಂಗಿಹೋಗುತ್ತಿದ್ದರು. ಪ್ರತಿಯೊಬ್ಬರೊಡನೆಯೂ ಆತ್ಮೀಯ, ಆಕರ್ಷಣೀಯ ಮಾತು. ವರ್ಷಗಳು ಕಳೆದಂತೆ ಹೀಗೆ ತಮ್ಮ ಊರಿನ, ದೇವಾಲಯದ, ಪಾಠಶಾಲೆಯ ಕುರಿತು ಮಾರ್ಗದರ್ಶನ ಪಡೆಯಲು ಬರಹೋಗುವವರ ಸಂಖ್ಯೆ ಹೆಚ್ಚಾಯಿತು. ಇಡೀ ಸಮಯದಲ್ಲಿ ಕಾಶಿಯಿಂದ ಹೆಬ್ಬಾರಶಾಸ್ತ್ರಿಗಳು, ರಾಮಶಾಸ್ತ್ರಿಗಳು ಹಾಗೂ ಇನ್ನೂ ಕೆಲವರು ಬರುತ್ತಿದ್ದರು.  ಗಣೇಶ ಉತ್ಸವವನ್ನು ಮಠದಲ್ಲಿ ಚೆನ್ನಾಗಿ ಆಚರಿಸಲಾಗುತ್ತಿತ್ತು. ಸಂಸ್ಥಾನದ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿದ್ದವು. ಯಕ್ಷಗಾನದ ಖ್ಯಾತಿವೆತ್ತ ಅರ್ಥಧಾರಿಗಳಿಂದ ತಾಳಮದ್ದಲೆಯೂ ಏರ್ಪಡುತ್ತಿತ್ತು.

                 ನನಗೆ ಇನ್ನೂ ಜ್ಞಾಪಕವಿರುವ ಸಂದರ್ಭ ಇಡಗುಂಜಿಯದು. ಶ್ರೀ ಸವಾರಿ ಹೋದಾಗ ರಾತ್ರಿ ದೇವಸ್ಥಾನದಲ್ಲಿ ವಾಸ. ದೇವಸ್ಥಾನದ ಎದುರಿನ ಅಂಗಳದಲ್ಲಿ(೧೯೫೬ ನವೆಂಬರ್ ತಿಂಗಳು) ಅಂದು ಕೊಂಡದಕುಳಿ ಸೋದರರಿಂದ ಯಕ್ಷಗಾನ ಪ್ರಸಂಗ ‘ಭೀಷ್ಮವಿಜಯ‘.  ಶ್ರೀಗಳು ತಮ್ಮ ವಿಶ್ರಾಂತಿ ಕೋಣೆಯಿಂದಲೇ ಆಟ ವೀಕ್ಷಿಸಿದರು. ಮಾರನೇದಿನ ಶ್ರೀಗಳು ಹೇಳಿದರು.”ಭೀಷ್ಮಪರಶುರಾಮರ ವಾಗ್ವಾದ ಬಹು ಉತ್ತಮವಾಗಿತ್ತು. ‘ನಮಗೇ ಆ ಪ್ರಶ್ನೆ ಕೇಳಿದರೆ ಉತ್ತರಿಸುವುದು ಹೇಗೆ?’ ಎಂದು ಯೋಚನೆಯಾಯಿತು, ಮಹಾಬಲ” ಎಂದಿದ್ದರು. ಇದು ಅವರು ಯಕ್ಷಗಾನವನ್ನು ಕಲಾವಿದರಲ್ಲಿ ಒಬ್ಬನಾಗಿ ನೋಡುವ ರೀತಿ. ವಿದ್ವಾಂಸರನ್ನು, ಕಲಾವಿದರನ್ನು ಸುವರ್ಣಮಂತ್ರಾಕ್ಷತೆ ಕೊಟ್ಟು ಹರಸುತ್ತಿದ್ದರು. ಸಮಾಜದಲ್ಲಿ ಕಲೆ, ಸಾಹಿತ್ಯ, ಪಾಂಡಿತ್ಯಗಳು ಸಂಸ್ಕೃತಿಯನ್ನು ಪೋಷಿಸಬೇಕು ಹಾಗೂ ಅಂಥ ವಿದ್ವನ್ಮಣಿಗಳನ್ನು ಸಮಾಜ, ಮಠಗಳು ಆದರದಿಂದ ಕಾಣಬೇಕು ಎಂಬ ಭಾವನೆ ಅವರದ್ದಾಗಿತ್ತು.

 ಪರಿವಾರದ ಕುರಿತು ಕಾಳಜಿ:

   ಮಠದ ಪರಿವಾರದ ಕಲ್ಪನೆ ಬಹುದೊಡ್ಡದು. ಬ್ರಹ್ಮೀಭೂತ ರಾಮಚಂದ್ರಭಾರತೀಯವರ ಪೂರ್ವಾಶ್ರಮದ ಸೋದರರಾದ ವೇ.ಮೂ. ಚಂದ್ರಶೇಖರಭಟ್ಟರು, ಅವರ ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಮಠದ ಪರಿವಾರಕ್ಕೆ ಸೇರಿದವರು. ಗೋಕರ್ಣಕ್ಕೆ ಸವಾರಿ ಹೋದಾಗ, ಅವರುಗಳು ಮಠಕ್ಕೆ, ದರ್ಶನಕ್ಕೆ ಬಂದಾಗ ಎಲ್ಲರನ್ನೂ ನಲ್ಮೆಯಿಂದ ವಿಚಾರಿಸಿ, ಸುವರ್ಣ ಮಂತ್ರಾಕ್ಷತೆ ಕರುಣಿಸುವ ಕ್ರಮ ಇಟ್ಟುಕೊಂಡಿದ್ದರು.

                ಅಂಥ ಪ್ರೀತಿ, ಅನುಗ್ರಹಗಳನ್ನು ಶ್ರೀಗುರುಗಳಿಂದ ಪಡೆದ ಅದೃಷ್ಟವಂತರು ನಾವು-ನಮ್ಮ ಕುಟುಂಬದವರು. ‘ನಾವು ಅವರನ್ನು ಸಮೀಪದಿಂದ ಕಂಡೆವು’ ಎಂಬುದಕ್ಕಿಂತ ಶ್ರೀಗುರುಗಳೇ ನಮ್ಮನ್ನು ಅವರ ಅತ್ಯಂತ ಸಮೀಪದಲ್ಲಿರಿಸಿಕೊಂಡು ಅನುಗ್ರಹಿಸಿದರು,  ಈ ಭಾವನೆ ಅವರನ್ನು ಸಂದರ್ಶಿಸಿದ ಪ್ರತಿಯೊಬ್ಬರಿಗೂ ಆಗುತ್ತಿತ್ತು. ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಭಿನ್ನವಾಗುವ ಹವ್ಯಕ ನುಡಿಗಟ್ಟನ್ನು ಸಂದರ್ಭೋಚಿತವಾಗಿ  ಬಳಸುವ ಅವರ ಬಗೆ ಆತ್ಮೀಯತೆ ಉಂಟುಮಾಡುತ್ತಿತ್ತು. “ವ್ಯವಹಾರವನ್ನು ನಾವು ಅನಂತಭಟ್ಟರಿಂದ ಕಲಿತಿದ್ದೇವೆ” ಎಂದು ನಮ್ಮ ತಂದೆಯವರ ಕುರಿತು ಅವರು ಹೇಳಿದ ಸಂದರ್ಭಗಳು ಅವೆಷ್ಟೋ. ಇಲ್ಲ, ನಮ್ಮ ತಂದೆ ಶ್ರೀಕೊಡ್ಲೆಕೆರೆ  ಅನಂತಭಟ್ಟರು ಅನುಭವ, ವ್ಯವಹಾರಜ್ಞಾನ ವೃದ್ಧಿಸಿಕೊಂಡಿದ್ದು ಮಠದ ಸೇವೆಯಲ್ಲಿದ್ದುಕೊಂಡು -ಎಂಬ ಸಂಗತಿಯನ್ನು ಹೇಳಲೇಬೇಕು. ‘ಅನಂತಭಟ್ಟರ ಮಕ್ಕಳು’ಎಂಬ ಪ್ರೀತಿಯಿಂದ ಗುರುಗಳು ನಮ್ಮನ್ನು ಮನಸ್ಸಿಗೆ ಹತ್ತಿರದವರನ್ನಾಗಿಟ್ಟುಕೊಂಡು ಅನುಗ್ರಹಿಸಿದರು. ಒಮ್ಮೆಯಂತೂ ಐದಾರು ವರ್ಷ ಶ್ರೀಗುರುಗಳ ದರ್ಶನ ಆಗಿರಲಿಲ್ಲ. ಬೆಂಗಳೂರಲ್ಲಿ ಅವರನ್ನು ಕಂಡಾಗ ಶ್ರೀಗುರುಗಳು ಆಶ್ಚರ್ಯಪಟ್ಟರು; ಅದೇ ಮೊದಲ ದಿನ, ಬೆಳಗಿನ ಜಾವದಲ್ಲಿ ಶ್ರೀಗಳ ಸ್ವಪ್ನದಲ್ಲಿ ನಾನು ಕಂಡಿದ್ದೆನಂತೆ!

                ಇನ್ನು-ಗುರುಗಳ ಜ್ಞಾಪಕಶಕ್ತಿಯಂತೂ ಅಗಾಧವಾದುದು, ಅಸಾಧಾರಣವಾದುದು. ಯಾವ ಸಂವತ್ಸರದಲ್ಲಿ ಸವಾರಿ ಎಲ್ಲಿತ್ತು. ಏನೇನು ನಡೆಯಿತು- ಎಲ್ಲವನ್ನೂ ಒಂದೂ ಬಿಡದೆ ಹೇಳುತ್ತಿದ್ದರು. ಕಟ್ಟಡಗಳ ಉದ್ದ-ಅಗಲ, ಖರ್ಚು-ವೆಚ್ಚಗಳ ವಿವರ ಎಲ್ಲವೂ ಅವರ ಬಾಯಲ್ಲಿ ಇರುತ್ತಿತ್ತು. ಅಪೂರ್ವ ಮೇಧಾಶಕ್ತಿಯೊಡನೆ ಅದ್ಭುತ ಜ್ಞಾಪಕಶಕ್ತಿಯೂ ಸೇರಿದ್ದು ಅವರ ವ್ಯಕ್ತಿತ್ವಕ್ಕೆ ವಿಶಿಷ್ಟತೆಯನ್ನೊದಗಿಸಿತ್ತು. ಇವುಗಳೊಡನೆ ಅವರ ಜಿಜ್ಞಾಸು ಪ್ರವೃತ್ತಿಯೂ ಪ್ರಸ್ತಾಪಿಸಲೇಬೇಕಾದುದು. ‘ಆತ್ಮ ವಿದ್ಯಾಖ್ಯಾಯಿಕಾ‘ದ ಮುಖಪುಟದಲ್ಲಿ ‘ಓಂ’ ಅನ್ನು ಹತ್ತಾರು ವಿಧಗಳಲ್ಲಿ ಬರೆಸಿ, ಸೂಕ್ತವಾದುದನ್ನು ಎಲ್ಲರೊಡನೆ ಚರ್ಚಿಸಿ, ನಿರ್ಧರಿಸಿ ಈಗಿರುವ ಬಗೆಯನ್ನು ಸ್ವೀಕರಿಸಿದರು. ಇದೊಂದು ನೆನಪಿಗೆ ಬರುತ್ತಿರುವ ಉದಾಹರಣೆ ಅಷ್ಟೇ. ಯಾವುದೇ ಮಹತ್ವದ ನಿರ್ಧಾರದ ಹಿಂದೆ ಬಹು ದೀರ್ಘವಾದ ಅವಲೋಕನ ಅವರದಾಗಿರುತ್ತಿತ್ತು. 

                ಶ್ರೀಗಳವರು ಮುಕ್ತರಾಗಲು ಕೆಲಕಾಲ ಮೊದಲಿನ ಮಾತು ಅಂದು ಗಿರಿನಗರದಲ್ಲಿದ್ದ ಅಣ್ಣ-ತಮ್ಮಂದಿರು ಸೇರಿ ಗುರುಗಳಿಗೆ  ಪಾದಪೂಜೆ ಸಲ್ಲಿಸುವುದೆಂದು ಸಂಕಲ್ಪವನ್ನು ಅರಿಕೆ ಮಾಡಿಕೊಂಡರು. ಅದಕ್ಕೆ ಗುರುಗಳ ಒಪ್ಪಿಗೆ ದೊರಕಿತು. ಪಾದಪೂಜೆಯದಿನ ಇನ್ನೊಬ್ಬ ತಮ್ಮ ಬಂದ, ‘ಪೂಜೆಗೆ ಅವನನ್ನೂ ಸೇರಿಸಿಕೊಳ್ಳಿ’ ಎಂದು ಶ್ರೀಗುರುಗಳಿಂದ ಮಾರ್ಗದರ್ಶನ. ಅವನಿಗೂ ಸೇವೆಯ ಅನುಗ್ರಹ ನಂತರ ಶ್ರೀಗಳ ಮಾರ್ಗದರ್ಶನದಂತೆ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು.

                  ಇಂದು ಶ್ರೀಮದ್ರಾಘವೇಂದ್ರ ಭಾರತಿಗಳು ಬ್ರಹ್ಮೀಭೂತರಾಗಿದ್ದುಕೊಂಡು ನಮ್ಮ ಬಾಳ್ವೆಗೆ ಬೆಳಕು ತೋರುತ್ತಿದ್ದಾರೆ. ತಮ್ಮಜ್ಞಾನಯೋಗ, ಕರ್ಮಯೋಗಗಳಿಂದ ಅಪೂರ್ವ ಸಾಧನೆಗೈದ ಶ್ರೀಗುರುಗಳ ಕುರಿತು ಎಷ್ಟು ಬರೆದರೂ ಮುಗಿಯದು. ಶ್ರೀ ಗುರುದೇವರ ಚರಣಾರವಿಂದಗಳಲ್ಲಿ ನನ್ನ ನಮನಗಳನ್ನು ಸಮರ್ಪಿಸುತ್ತಾ ಈ ಲೇಖನಕ್ಕೆ ಮುಕ್ತಾಯ ಹೇಳುತ್ತಿದ್ದೇವೆ.

                                                           *~*

 

Facebook Comments