ಶ್ರೀರಾಮರಾಮೇತಿ ರಮೇ ರಾಮೇ ಮನೋರಮೇ |
ಸಹಸ್ರನಾಮತತ್ತುಲ್ಯಂ ರಾಮನಾಮ ವರಾನನೇ ||

ಶ್ರೀ ನಾರಾಯಣ ನ ನಾಮವನ್ನು ಒಮ್ಮೆ ಜಪಿಸುವದರಿಂದ ಕೋಟಿ ಜನ್ಮ ದ ಪಾಪಗಳು ನಿಶ್ಯೇಷ ಆಗುತ್ತವೆ ಎನ್ನುವ ವಿಷಯ ನಮ್ಮೆಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಮಹೇಶ್ವರ ತನ್ನ ಸತಿ ಮಹಾಸತಿ ಪಾರ್ವತಿಗೆ ಹೇಳುವ ಪ್ರಕಾರ, ಅಂತಹ ಸಾವಿರ ವಿಷ್ಣು ನಾಮಗಳನ್ನ ಹೇಳಿದ ಪುಣ್ಯ ನಮ್ಮೆಲ್ಲರ ಆರಾಧ್ಯ ಧೈವ ಪ್ರಭು ಶ್ರೀ ರಾಮನ ನಾಮ ಹೇಳುವುದರಿಂದ ಪ್ರಾಪ್ತ ಆಗುತ್ತದೆ. ಅಂತಹ ಪ್ರಭು ರಾಮನ ಅನುದಿನದ ಆರಾಧಕರು, ಆತನನ್ನ ಹೃದಯ ಕಮಲದಲ್ಲಿ ಇಟ್ಟುಕೊಂಡು ಪೂಜಿಸುವರು ಮತ್ತು ಆತನಿಗೆ ಅತ್ಯಂತ ಹತ್ತಿರದವರು ಆಗಿರುವ ನಮ್ಮೆಲ್ಲರ ಹೆಮ್ಮೆಯ ಗುರುಗಳು, ನಮ್ಮ ಮಾರ್ಗದರ್ಶಕರು ಹಾಗೂ ಪ್ರಾತಸ್ಮರಣೀಯರು ಆಗಿರುವ ಪರಮಪುಜ್ಯ ಶ್ರೀ ಸಂಸ್ಥಾನದ ಅಡಿದಾವರೆಗಳಲ್ಲಿ, ತಮ್ಮೆಲ್ಲರ ಸಮ್ಮುಖದಲ್ಲಿ ನನ್ನ ಕೆಲವು ಭಾವನೆಗಳನ್ನು ಹಂಚಿಕೊಳ್ಳಲಿಕ್ಕೆ ಒಂದು ಚಿಕ್ಕ ಪ್ರಯತ್ನ ಮಾಡುತ್ತಿದ್ದೇನೆ. ಭಾವನೆಗಳು ಸರಿ ತಪ್ಪುಗಳಿಂದ ಅತೀತವಾಗಿದ್ದರೂ, ನನ್ನ ಭಾವನೆಗಳನ್ನು ಹಂಚಿಕೊಳ್ಳುವ ಪ್ರಯತ್ನದಲ್ಲಿ ಆಗಿರಬಹುದಾದ ತಪ್ಪುಗಳಿಗೆ ಅತ್ಯಂತ ವಿನಮ್ರನಾಗಿ ಕ್ಷಮೆ ಕೇಳುತ್ತೇನೆ.

ಮೊತ್ತಮೊದಲಿಗೆ, ಹರೇ ರಾಮ ವೆಬ್ ಸೈಟ್ ನ ಮೂಲಕ ಪರಮ ಪೂಜ್ಯ ಶ್ರೀ ಸಂಸ್ಥಾನ ಮತ್ತೆ ಶಿಷ್ಯ ಕೋಟಿಯ ಜೊತೆ ತನ್ನ ಭಾವನೆಗಳನ್ನು ಹಂಚಿಕೊಳ್ಳುವ ಅವಕಾಶ ಸೃಷ್ಟಿ ಮಾಡಿರುವುದು ಅತ್ಯಂತ ಅಭಿನಂದನೀಯ – ಇದು ಶ್ರೀ ಮಠ ಯಾವುತ್ತು ಹೊಸತನಗಳಿಗೆ ತೆರೆದು ಕೊಳ್ಳುವುದರಲ್ಲಿ ಮುಂದು ಮಾತ್ರವಲ್ಲ ಲಭ್ಯವಿರುವ ಎಲ್ಲ ಅವಕಾಶಗಳ ಮೂಲಕ ತನ್ನ ಶಿಷ್ಯ ರನ್ನ ಮುಟ್ಟುವ ಪ್ರಯತ್ನವನ್ನ ಪ್ರಾಮಾಣಿಕವಾಗಿ ಮಾಡುತ್ತಲೇ ಇದೆ ಎನ್ನುವುದಕ್ಕೆ ಬಹು ದೊಡ್ಡ ಸಾಕ್ಷಿ. ಶಿಷ್ಯ ಕೋಟಿಯ ಪರವಾಗಿ ಅತ್ಯಂತ ಧನ್ಯವಾದಗಳು ಹಾಗು ಇಂತಹ ವ್ಯವಸ್ಥೆ ಯಾವಾಗಲೂ ಮುಂದುವರೆಯಲಿ ಎಂಬ ಸದಾಶಯ ಕೂಡ.

ಆತ್ಮೀಯರೇ, ನಮ್ಮೆಲ್ಲರಿಗೆ ಅತ್ಯಂತ ಹೆಮ್ಮೆಯ ಸಂಗತಿ ಎಂದರೆ ನಮ್ಮೆಲ್ಲರ ಹುಟ್ಟು ಮತ್ತು ಬದುಕು ಪವಿತ್ರ ಭರತ ಖಂಡದಲ್ಲಿ ಆಗಿದೆ.  ಪರಮ ಪವಿತ್ರ ವಾದ ಈ ನಾಡು ದೇವಾನುದೇವತೆಗಳಿಗೆ ಅವತಾರ ಎತ್ತುವ ಸಂದರ್ಭ ಬಂದಾಗ ಆರಿಸಿಕೊಂಡ ಪುಣ್ಯ ಭೂಮಿ. ಹೌದು. ಈ ಮಣ್ಣಿನಲ್ಲಿ, ಅಜ್ಞಾನದಿಂದ ಜ್ಞಾನದತ್ತ ಒಯ್ಯಲು, “ಗುರು” ಇದ್ದಾನೆ. ಯುದ್ದಭೂಮಿಯಲ್ಲಿ ಶಸ್ತ್ರ ತ್ಯಜಿಸಿ ಕರ್ತವ್ಯ ವಿಮುಖನಾದ ಅರ್ಜುನನಿಗೆ ಕರ್ತವ್ಯದ ದಾರಿ ತೋರಿದ ಜಗತ್ತಿನ ಶ್ರೇಷ್ಠ ಗುರು ಶ್ರೀಕೃಷ್ಣ ನಿಂದ ಸನಾತನವಾದ ಹಿಂದೂ ಧರ್ಮವನ್ನೆ ಬೆಳಕಿನೆಡೆಗೆ ಕೊಂಡೊಯ್ದ ಭಗವತ್ಪಾದರವರೆಗೆ ಬಹು ದೊಡ್ಡ ಗುರು ಪರಂಪರೆಯ ಇತಿಹಾಸ ಇರುವ ಈ ನಾಡಿನಲ್ಲಿ ಹುಟ್ಟಿದ ನಾವೇ ಧನ್ಯ.

ಶಬ್ದಾರ್ಥ ಸೂಚಿಸುವಂತೆ ಗುರು ಎಂದರೆ ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವವರು. ಈ ಭೂಮಿ ಪುಣ್ಯ ಭೂಮಿ ಆಗಲಿಕ್ಕೆ ಮುಖ್ಯ ಕಾರಣ ಎಂದರೆ ಇಲ್ಲಿ ಜನ್ಮ ತಾಳಿದ, ಜನ್ಮ ತಾಳುತ್ತಿರುವ, ಸಮಾಜಕ್ಕೆ ಸರಿ ಸಮಯದಲ್ಲಿ ಸರಿ ದಾರಿ ತೋರಿದ ಗುರುಗಳು. ಹಿಂದೂ ಧರ್ಮ ಹಾಗೂ ಭಾರತೀಯ ಇತಿಹಾಸದಲ್ಲಿ ಗುರು ವಿನ ಪಾತ್ರ ವಿಶೇಷ ವಾಗಿದೆ. ಈ ಭೂಮಿಯಲ್ಲಿ, ಧರ್ಮಕ್ಕೆ ಆತಂಕ ಉಂಟಾದಾಗ ಧರ್ಮದ ಪುನರ್ ಉತ್ಥಾನ ಆಗಿದ್ದು ಗುರುಗಳಿಂದ ಅದು ಸಮರ್ಥ ರಾಮದಾಸರು ಆಗಿರಬಹುದು, ವಿದ್ಯಾರಣ್ಯರು ಆಗಿರಬಹುದು. ಒಟ್ಟಿನಲ್ಲಿ ಭಾರತ ಭಾರತವಾಗೆ ಉಳಿಯುವಲ್ಲಿ ಗುರು ಪರಂಪರೆಯ ಪಾತ್ರ, ಕೊಡುಗೆ ಹಾಗೂ ಕಾಣಿಕೆ ಅನನ್ಯ.

ನಮ್ಮೆಲ್ಲರ ಹೆಮ್ಮೆಗೆ ಇನ್ನೊಂದು ಕಾರಣ ಇದೆ. ಈ ಭಾರತ ವರ್ಷದ ಅತ್ಯಂತ ಶ್ರೇಷ್ಠ ಗುರು ಪರಂಪರೆ ಯಲ್ಲಿ ಶ್ರೇಷ್ಠಾತಿಶ್ರೇಷ್ಠವಾಗಿರುವ ಪರಂಪರೆ ಶ್ರೀ ರಾಮಚಂದ್ರಾಪುರ ಮಠದ್ದು. ಶ್ರೀ ಶಂಕರ ಭಗವತ್ಪಾದ ರಿಂದ ಸ್ಥಾಪಿತವಾದ ಸರಿ ಸುಮಾರು ೧೨೦೦ ವರ್ಷಗಳಿಗೂ ಅತ್ಯಂತ ಉಜ್ವಲ ಇತಿಹಾಸ ಉಳ್ಳ ಭವ್ಯ ಪರಂಪರೆ ನಮ್ಮ ಶ್ರೀ ರಾಮಚಂದ್ರಾಪುರ ಮಠದ್ದು – ನಿಜವಾದ ಅರ್ಥದಲ್ಲಿ “ಸತ್ ಗುರು” ಗಳನ್ನು ಸಮಾಜಕ್ಕೆ ನೀಡಿದ ಪೀಠ ಇದು.

ಬಂಧುಗಳೇ, ಇಂತಹ ಒಂದು ಪೀಠದ ಶಿಷ್ಯರು ನಾವು ಎಂದು ಹೇಳಿಕೊಳ್ಳಲಿಕ್ಕೆ ಜನ್ಮಾಂತರದ ಪುಣ್ಯ ಬೇಕು ಎಂದರೆ ತಪ್ಪಾಗಲಿಕ್ಕಿಲ್ಲ.  ಈ ಪೀಠದಲ್ಲಿ ೩೫ ಕ್ಕೂ ಹೆಚ್ಚು ಯತಿವರೇಣ್ಯರು, ಯತಿಶ್ರೇಷ್ಠರು ಸಮಾಜಕ್ಕೆ, ನಮ್ಮ ಹಿರಿಯರಿಗೆ, ಭೂಮಿಗಿಂತ ದೊಡ್ಡದಿರುವ ತಾಯಿಯ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ಮಾಡಿದ್ದಾರೆ. ಸರಿ ದಾರಿಯಲ್ಲಿ ಕರೆದೊಯ್ದಿದ್ದಾರೆ. ೩೫ ಯತಿವರೇಣ್ಯರೂ ತಪೋ ಬಲರು. ಅಪಾರ ತಪೋಶಕ್ತಿ ಉಳ್ಳವರು. ನಮ್ಮೆಲ್ಲ ಪ್ರಭು ಶ್ರೀರಾಮನ ತ್ರಿಕಾಲ ಪೂಜೆಯನ್ನು ನಿತ್ಯ ಕಾಯಕ ಮಾಡಿಕೊಂಡವರು. – ಆ ಪ್ರಭು ಶ್ರೀರಾಮನಿಂದ ಪೂಜಿಸಲ್ಪಟ್ಟ ಶ್ರೀ ಚಂದ್ರಮೌಳೀಶ್ವರನನ್ನು ಹೃದಯದಲ್ಲಿ ಇಟ್ಟು ಆರಾಧಿಸಿದವರು. ಅದರಿಂದಾಗಿ ಅಗ್ರಹಾನುಗ್ರಹ ಶಕ್ತಿ ಸಂಪಾದಿಸಿಕೊಂಡವರು. ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿದವರು. ಶ್ರೀ ಪೀಠದ ಪ್ರತಿಯೊಬ್ಬ ಯತಿವರೇಣ್ಯರು ಅವತಾರ ಪುರುಷರು ಎಂದರೆ ಅತಿಶಯೋಕ್ತಿ ಅಲ್ಲ.

ದಶಕಗಳ ಹಿಂದೆ ಶ್ರೀ ಶ್ರೀ ರಾಘವೇಂದ್ರಭಾರತೀ ಯತೀಂದ್ರರು ನಮ್ಮ ಮನೆಗೆ ಚಿತ್ತೈಸಿದ ಅಮೃತ ಕ್ಷಣ

ಶ್ರೀ ಪೀಠದ ೩೩ ನೆಯ ಯತಿವರೇಣ್ಯರಾದ ಶ್ರೀ ರಾಘವೇಶ್ವರ ಭಾರತಿಗಳು ತಮ್ಮ ತಪಸ್ಸಿಗೆ ಹೆಸರಾಗಿದ್ದವರು. ತಮ್ಮ ಉಗ್ರ ತಪಸ್ಸಿಂದಲೇ ತಮಗೆ ಆಗಿದ್ದ ಅನಾರೋಗ್ಯವನ್ನು ಗುಣ ಮಾಡಿಕೊಂಡವರು. ಪಟ್ಟದ ಆನೆಗೆ ಆಗಿದ್ದ ದೃಷ್ಟಿ ಹೀನತೆಯನ್ನ ಸರಿಪಡಿಸಿದವರು. ಅದೇ ರೀತಿ ಅವರ ಅನಂತರ ಪೀಠಕ್ಕೆ ಬಂದ ಶ್ರೀ ರಾಮಚಂದ್ರ ಭಾರತಿಗಳು ಸಹಿತ ತಮ್ಮ ತಪಸ್ಸಿಗೆ ಉಗ್ರತೆಗೆ ಹೆಸರಾಗಿದ್ದವರು. ಸಮಾಜದ ತುಂಬಾ – ಪ್ರಮುಖವಾಗಿ ಉತ್ತರಕನ್ನಡದ ಘಟ್ಟದ ತಗ್ಗಿನ ಭಾಗಗಳಲ್ಲಿ ಸಂಚಾರ ಮಾಡಿದರು. ಅಲ್ಲದೆ ಅವರ ಅಗ್ರಹಾನುಗ್ರಹ ಶಕ್ತಿಗಳು ಲೋಕ ವಿದಿತ.

ಸರಿ ಸುಮಾರು ೫೦ ಚಾತುರ್ಮಸಗಳನ್ನು ಅಂದರೆ ೫೦ ಕ್ಕೂ ಹೆಚ್ಚು ವರ್ಷಗಳನ್ನ ಪ್ರಭು ಶ್ರೀರಾಮನ ಆರಾಧನೆಯಲ್ಲಿ ಕಳೆದು, ಶ್ರೀ ಪೀಠದಲ್ಲಿ ವಿರಾಜಮಾನರಾಗಿದ್ದ ನಮ್ಮ ಪೀಠದ ೩೫ ನೆಯ ಯತಿ ಶ್ರೇಷ್ಠ ,ಶ್ರೀ ರಾಘವೇಂದ್ರ ಭಾರತಿ ಮಹಾಸ್ವಾಮಿಗಳ ತಪೋ ಶಕ್ತಿ ಮತ್ತು ಸಮಾಜಕ್ಕೆ ನೀಡಿದ ಕೊಡುಗೆ ಯಾವುದೇ ವಿವರಣೆಗಳಿಗೆ ಅತೀತವಾಗಿದ್ದು.
ಅವರು ಪೀಠಕ್ಕೆ ಬಂದಾಗ ಇದ್ದ ಮಠದ ಆರ್ಥಿಕ ಪರಿಸ್ಥಿತಿ , ಅವತ್ತಿನ ಕಾಲಮಾನ ಹಾಗೂ ಅವತ್ತಿನ ಸಾಮಾಜಿಕ ಸ್ಥಿತಿಗಳನ್ನ ಗಮನಿಸಿದಾಗ, ಶ್ರೀಗಳ ಸಾಧನೆ ಸಾಮಾಜಿಕ ಹಾಗೂ ಧಾರ್ಮಿಕವಾಗಿ ಒಂದು ಮೈಲಿ ಗಲ್ಲು.  ಇತ್ತೀಚಿಗೆ ಅಂದರೆ ೩೦-೪೦ ವರ್ಷಗಳ ಹಿಂದೆ, ತೀರ್ಥಹಳ್ಳಿ ಮಠಕ್ಕೆ ಹಾವು ಬರುತ್ತಾ ಇರುವುದನ್ನ ಸ್ವತಹ ನಮ್ಮ ಅಜ್ಜಿ ನೋಡಿದ್ದರು [ಆಮೇಲೆ ಶ್ರೀಗಳ ಮಂತ್ರಾಕ್ಷತೆ ಬಿದ್ದ ತಕ್ಷಣ ಆ ಹಾವು ತಕ್ಷಣ ಮಾಯ ಆಯಿತು ಅನ್ನುವುದು ಅವರ ಶಕ್ತಿಗೆ ಒಂದು ಉದಾಹರಣೆಯೂ ಆಗಬಹುದು] – ಇವತ್ತು ತೀರ್ಥಹಳ್ಳಿ ಮಠ ಹೇಗಿದೆ ಎನ್ನುವುದು ನಮಗೆಲ್ಲ ಗೊತ್ತೇ ಇದೆ.

ಅಂತೆಯೇ ಅವತ್ತಿನ ಸಂದರ್ಭದಲ್ಲಿ ಅಡಿಕೆಯ ದರ ನೂರು ರೂಪಾಯಿಗಳ ಲೆಕ್ಕದಲ್ಲಿ ಇದ್ದಾಗ, ರಾಮಚಂದ್ರಾಪುರ ಮಠ ದಂತಹ ಮಠವನ್ನ ಕಟ್ಟುವ ಸಂಕಲ್ಪ ಮತ್ತು ಶಿಷ್ಯ ಜನತೆಯೊಡಗೂಡಿ ಆ ಸಂಕಲ್ಪದ ಸಿದ್ದಿ – ನಾವೆಲ್ಲರೂ ಚಿರಋಣಿಗಳು ಎನ್ನುವುದು ಬಿಟ್ಟು ಇನ್ನೇನು ಹೇಳುವುದು.

ನಮ್ಮ ತೀರ್ಥರೂಪರಿಂದ ಶ್ರೀ ಶ್ರೀರಾಘವೇಂದ್ರಭಾರತೀ ಯವರಿಗೆ ಮಾಲಾರ್ಪಣೆ.

ಅವರ ಕರ್ತೃತ್ವ ಕೇವಲ ರಾಮಚಂದ್ರಾಪುರ ಮಠಕ್ಕೆ ಮಾತ್ರ ಸೀಮಿತ ಅಲ್ಲ. ಅದು ಮಂಗಳೂರು ಇರಬಹುದು, ಬೆಂಗಳೂರು ಇರಬಹುದು ಅವತ್ತಿನ ಎಲ್ಲ ಪರಿಧಿಗಳ ಮದ್ಯವೂ ಶಿಷ್ಯರನ್ನು ಮುಟ್ಟುವ ಪ್ರಯತ್ನ ಮಾಡಿದರು. ಅವರ ಮತ್ತು ಶಿಷ್ಯರ ಬಂಧ ಹೇಗಿತ್ತು ಎನ್ನುವುದನ್ನ ಪೂಜ್ಯ  ರಾಘವೇಶ್ವರ ಭಾರತಿಗಳು ನಮ್ಮ ಮನೆಯಲ್ಲಿ ಅತ್ಯಂತ ಸೊಗಸು ಹಾಗೂ ಪರಿಪೂರ್ಣ ವಾಗಿ ವ್ಯಾಖ್ಯಾನಿಸಿದಂತೆ  “ನಮ್ಮ ಗುರುಗಳು ಒಂದು ರೀತಿ ಸಿಂಹ. ಒಮ್ಮೆ, ಒಮ್ಮೆ ಸಿಂಹದ ಗುಹೆ ಯಲ್ಲಿ ಪ್ರವೇಶ ಸಿಕ್ಕಿದರೆ ಅದರ ಪ್ರೀತಿ ಮತ್ತೆ ಕಾಳಜಿ ಶಬ್ಧಗಳಲ್ಲಿ ಸಿಗುವಂತದ್ದು ಅಲ್ಲ” ಅಕ್ಷರಶ ಸತ್ಯ. ಅಲ್ಲದೆ, ಶ್ರೀ ರಾಘವೇಂದ್ರ ಭಾರತಿ ಸ್ವಾಮಿಗಳ ತರ್ಕ ಪಾಂಡಿತ್ಯ, ಅವರ ವಿದ್ವತ್ ಗೆ ಅತ್ಯಪೂರ್ವ ಸಾಕ್ಷಿ ಯಾಗಿ, ಅದ್ಭುತ ಗ್ರಂಥಗಳಾದ ಆತ್ಮವಿದ್ಯಾ ಆಖ್ಯಾಯಿಕಾ, ಗುರು ಕೃಪಾ ತರಂಗಿಣಿ ಇನ್ನು ಅನೇಕ ಗ್ರಂಥಗಳೇ ಸಾಕ್ಷಿ. ಅಲ್ಲದೆ, ಶ್ರೀ ರಾಘವೇಂದ್ರ ಭಾರತಿ ಮಹಾಸ್ವಾಮಿಗಳಿಗೆ, ಶ್ರೀ ಪೀಠದ ೩೩ ನೆಯ ಗುರುಗಳಾಗಿದ್ದ ಶ್ರೀ ರಾಘವೇಶ್ವರ ಭಾರತಿ ಗಳ ಮೇಲೆ ವಿಶೇಷ ಅಭಿಮಾನ. ಅದೇ ರೀತಿ ಅವರ ವಿಶೇಷ ಅನುಗ್ರಹ ಕೂಡ ಶ್ರೀ ರಾಘವೇಂದ್ರ ಭಾರತಿಗಳ ಮೇಲೆ ಇತ್ತು. ಶ್ರೀ ರಾಘವೇಂದ್ರ ಭಾರತಿ ಗಳು ತೆಗೆದುಕೊಂಡ ಬಹುತೇಕ ನಿರ್ಧಾರಗಳ ಹಿಂದೆ ಶ್ರೀ ರಾಘವೇಶ್ವರ ಭಾರತಿಗಳ ಮಾರ್ಗದರ್ಶನ ಮತ್ತು ಪ್ರೇರಣೆ ಮುಖ್ಯ ಕಾರಣ  . ಒಟ್ಟಿನಲ್ಲಿ, ತಪೋ ಧನರು, ವಿದ್ವಾಂಸರೂ ಆಗಿದ್ದ ಶ್ರೀ ರಾಘವೇಂದ್ರ ಭಾರತಿ ಗುರುಗಳ ಕೊಡುಗೆ ಸಮಾಜಕ್ಕೆ ಬಹಳ. ಎಲ್ಲಕ್ಕೂ ಮುಕುಟ ಪ್ರಾಯವಾಗಿ. ಎಲ್ಲಕ್ಕಿಂತ ಹೆಚ್ಚಾಗಿ, ಹೌದು ಎಲ್ಲಕ್ಕಿಂತ ಹೆಚ್ಚಾಗಿ, ನಮ್ಮ ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳಂತಹ ಶ್ರೀ ಪರಮ ಪೂಜ್ಯರನ್ನು ಈ ಸಮಾಜಕ್ಕೆ ಕೊಡುಗೆ ಕೊಡಲು ಶ್ರೀ ರಾಘವೇಂದ್ರ ಭಾರತಿ ಸ್ವಾಮಿಗಳಿಂದಲ್ಲದೆ ಮತ್ತಾರಿಂದ ಸಾದ್ಯ?

ಏನೆಂದು ಹೇಳೋಣ. ಎಲ್ಲಿಂದ ಹೇಳೋಣ, ಯಾವುದೆಂದು ಹೇಳೋಣ – ಕೊನೆ ಮೊದಲಿಲ್ಲದ ದೊಡ್ಡ ಸಾಗರ – ಮಹಾಭಾರತದ ಪ್ರಾರಂಭದಲ್ಲಿ ಹೇಳುವಂತೆ ಇಲ್ಲಿ ಸಿಕ್ಕಿದ್ದು ಬೇರೆ ಎಲ್ಲಾದರೂ ಸಿಗುವ ಅವಕಾಶಗಳು ಇದೆ – ಆದರೆ ಇಲ್ಲಿ ಸಿಕ್ಕದ್ದು ಇನ್ನೆಲ್ಲೂ ಸಿಕ್ಕದ್ದು – ಅಂತಹ ಒಂದು ಮಹಾನ್ ಕಾವ್ಯ ನಮ್ಮ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳು.

ಅಕ್ಷರಶಃ ಸತ್ಯ. ಸಮಾಜಕ್ಕೆ ಸಿಕ್ಕ ಅತ್ಯಂತ ದೊಡ್ಡ ಕೊಡುಗೆ ಶ್ರೀ ಸಂಸ್ಥಾನ. ನಮ್ಮೆಲ್ಲರ ಮೇಲೆ, ಈ ಸಮಾಜದ ಮೇಲೆ, ಶ್ರೀ ರಾಘವೇಶ್ವರರ ಋಣ ಬಹಳ ದೊಡ್ಡದಿದೆ. ತಪಸ್ವಿಗಳೂ, ಸಮಕಾಲಿನ ಯತಿ ಶ್ರೇಷ್ಠರಲ್ಲಿ ಶ್ರೇಷ್ಠರು, ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ತಮ್ಮ ರಾಮ ಸೇವಾ ಕೈಂಕರ್ಯಕ್ಕೆ ಒಂದಿನಿತೂ ಧಕ್ಕೆಯಾಗದಂತೆ ರಾಮ ಸೇವೆಯನ್ನು ಮಾಡುತ್ತಿರುವುದು ಒಂದು ಕಡೆ ಯಾದರೆ, ಇನ್ನೊಂದೆಡೆ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಶ್ರೀ ಪೀಠವನ್ನ ತಲುಪಿಸಿದ, ಸಮಾಜದ ಅನೇಕ ಜ್ವಲಂತ ಸಮಸ್ಯೆಗಳಿಗೆ ಉತ್ತರವಾಗಿ ನಾಯಕತ್ವ ವಹಿಸಿಕೊಂಡ ಪರಿ ಇನ್ನೊಂದೆಡೆ.

ಶ್ರೀ ಶ್ರೀ ರಾಘವೇಶ್ವರ ಭಾರತೀ ಯತೀಂದ್ರರ ಆಗಮನದ ಅಮೃತಕ್ಷಣ...

ಅತ್ಯಂತ ಕಿರಿಯ ವಯಸ್ಸಿನಲ್ಲಿ ಪೀಠಕ್ಕೆ ಬಂದಿದ್ದಲ್ಲದೆ, ಭಗವತ್ಪಾದರನ್ನೇ ಮಾದರಿಯಾಗಿಟ್ಟುಕೊಂಡು ಲೋಕ ಸಂಚಾರ ಮಾಡಿದ್ದಲ್ಲದೆ, ಪ್ರತಿ ಊರಿನಲ್ಲಿ ಜನ ಜಾಗೃತಿ ಯನ್ನು ಮಾಡಿ, ಅತ್ಯಂತ ಅದ್ಬುತ ಆಲೋಚನೆಯಾದ ಪರಿಷತ್ ವ್ಯವಸ್ಥೆ ಹುಟ್ಟು ಹಾಕಿದ್ದಾಗಲಿ, ಅಥವಾ ಮಹಾತ್ಮಾ ಗಾಂಧಿ ಯ ಹಸಿದವನಿಗೆ ಅನ್ನ ನೀಡುವ ಮಹಾನ್ ತತ್ವ ವನ್ನು ಸಾರುವ ಮುಷ್ಟಿ ಬಿಕ್ಷದ ಯೋಜನೆ ಮತ್ತು ಅದರ ಸಾಕಾರಗಳು.. ವಾಹ್ ಶಬ್ದದಲ್ಲಿ ನಿಲುಕಂತದ್ದು ಅಲ್ಲವೇ ಅಲ್ಲ. ಇವತ್ತು ಮಠದ ಕಾರಣ ಮತ್ತು ಪ್ರೇರಣೆಯಿಂದ ಹತ್ತಾರು ಕಡೆ ನಡಿಯುತ್ತಿರುವ ಅನ್ನದಾನ, ಹಾಗೂ ವಿದ್ಯಾದಾನ ಗಳ ಪ್ರೇರಕ ಹಾಗೂ ಕಾರಕ ಶಕ್ತಿ ಶ್ರೀ ರಾಘವೇಶ್ವರರು ಎಂದರೆ ಅದು ವಾಸ್ತವ. ಕೃಷಿ ಪ್ರಧಾನ ಈ ದೇಶದಲ್ಲಿ, ಸಾವಯವ ಕೃಷಿ ಮತ್ತು ಗೋ ಸಂಪತ್ತಿನ ಪ್ರಾಮುಖ್ಯತೆ ಯ  ಬಗೆಗೆ ಶ್ರೀ ರಾಘವೇಶ್ವರರ ಕಳಕಳಿ, ಅದಕ್ಕೆ ಅವರು ಮಾಡಿದ ತ್ಯಾಗ ಮತ್ತು ಹೋರಾಟ ಇಡಿ ಪ್ರಪಂಚಕ್ಕೆ ಗೊತ್ತಿದೆ ಎಂದರೆ ತಪ್ಪಾಗಲಾರದು. ಎಲ್ಲದಕ್ಕಿಂತ ಹೆಚ್ಚಾಗಿ, ಇವತ್ತಿನ ಸಮಾಜಕ್ಕೆ ಸರಿ ತಪ್ಪು ಗಳನ್ನ ಮಾರ್ಗದರ್ಶನ ಮಾಡುವರ ಅವಶ್ಯಕತೆ, ಸರಿ ಆದ ದಾರಿಯನ್ನು ತೋರಿಸುವರ ಅವಶ್ಯಕತೆ, ನಮ್ಮೆಲ್ಲರ ನಡುವೆ ಕಳೆದು ಹೋಗುತ್ತಿರವ ನಿಸ್ವಾರ್ಥ ಪ್ರೀತಿ, ವಿಶ್ವಾಸ, ಅಂತಃಕರಣ ಹಾಗು ಮಾನವೀಯತೆಗಳನ್ನ ಪುನಃ ಸ್ಥಾಪಿಸುವ ಮಹಾನ್ ವ್ಯಕ್ತಿಯ ಅವಶ್ಯಕತೆ ಹಿಂದೆಂದಿಗಿಂತ ಹೆಚ್ಚಾಗಿ ಇದೆ – ಮತ್ತು ಇಂತಹ ಒಂದು ಬಹು ದೊಡ್ಡ ಜವಾಬ್ದಾರಿ ಯನ್ನು ನಮ್ಮ ಶ್ರೀ ಗಳು ತೆಗೆದು ಕೊಂಡಿದ್ದಾರೆ- ಇದು ನಮಗೆಲ್ಲ ಒಂದು ಬಹು ದೊಡ್ಡ ಹೆಮ್ಮೆ ಮತ್ತು ಜವಾಬ್ದಾರಿ ಕೂಡ. – ಸಾಮಾನ್ಯವಾಗಿ ಯಾವುದೇ ಒಂದು ಧನಾತ್ಮಕ ಬದಲಾವಣೆಗೆ ಸಮಾಜದ ಪೂರಕ ಪ್ರತಿಕ್ರಿಯೆ ಸುಲಭವಲ್ಲ – ಹೀಗಿದ್ದಾಗ ಕೇವಲ ಕೆಲವೇ ವರ್ಷಗಲ್ಲಿ ಸಮಾಜದ ಒಟ್ಟು ವಾಹಿನಿ ಯಲ್ಲಿ ಬದಲಾವಣೆ ತರುವ ಪ್ರಯತ್ನ ಮತ್ತೆ ಅದರಲ್ಲಿ ದೊಡ್ಡ ಯಶಸ್ಸು ಎಲ್ಲರಿಗೆ ಲಭ್ಯ ಅಲ್ಲ. ಹಾಗೆಯೇ ನಮ್ಮ ಶ್ರೀ ಸಂಸ್ಥಾನಕ್ಕೆ ಲಭ್ಯವಾಗಿರುವ ಆ ಅಪರಿಮಿತ ಯಶಸ್ಸಿಗೆ ನಮ್ಮ ಶ್ರೀ ಸಂಸ್ಥಾನದಲ್ಲಿರುವ ಒಂದು ದೊಡ್ಡ ಮಟ್ಟದ ಆಧ್ಯಾತ್ಮಿಕ ಸಾಧನೆ ಕೂಡ ಒಂದು ಕಾರಣ ಎನ್ನುವುದು ನನ್ನ ಮತ್ತು ಎಲ್ಲ ಶಿಷ್ಯ ಜನರ ನಂಬಿಕೆ – ಮಾತ್ರವಲ್ಲ ಈ ಜವಾಬ್ಧಾರಿ ಹಾಗೂ ಹೆಮ್ಮೆಯ ಜೊತೆ ಜೊತೆಗೆ ಬರುವ ಕರ್ತವ್ಯವೆಂದರೆ ಶ್ರೀಗಳ ತೋರಿಸಿದ ದಾರಿಯಲ್ಲಿ ಮುನ್ನೆಡೆಯುವುದು. ಶ್ರೀ ರಾಮಚಂದ್ರಾಪುರ ಮಠ ಮಾತ್ರ ಅಲ್ಲ, ಈ ಭಾರತ ವರ್ಷದಲ್ಲಿ ಆಗಿರುವ ಅತಂತ ಶ್ರೇಷ್ಠ ಯತಿಗಳ ಸಾಲಿನಲ್ಲಿ ಅಗ್ರರಾಗಿ ಇತಿಹಾಸದಲ್ಲಿ ದಾಖಲಾಗಿರುವ ಶ್ರೀ ಗಳಿಗೆ ನಾವೆಲ್ಲ, ಈ ಸಮಾಜ, ಮಾತ್ರ ಅಲ್ಲ ನಮ್ಮ ಮುಂದಿನ ಜನಾಂಗ ಕೂಡ ಚಿರ ಋಣಿ ಗಳು ಆಗಿರಲೇ ಬೇಕಾಗಿದೆ – ಹಾಗೂ ಖಂಡಿತವಾಗಿಯೂ ಚಿರ ಋಣಿ ಗಳು ಆಗಿರುತ್ತದೆ ಎನ್ನುವದರಲ್ಲಿ ಯಾವುದೇ ಅನುಮಾನಗಳೇ ಇಲ್ಲ.

ಬಂಧುಗಳೇ , ಶ್ರೀ ಸಂಸ್ಥಾನ ಮತ್ತೆ ಶ್ರೀ ಪೀಠ ನಮ್ಮೆಲ್ಲರಿಗೆ ಸಮಷ್ಟಿಯಾಗಿ ಕೊಟ್ಟಿರುವದನ್ನ ಮಾತ್ರ ಪ್ರಸ್ತಾಪಿಸಿದರೆ ಅದು ಪರಿ ಪೂರ್ಣ ಅಲ್ಲ ಎನ್ನುವುದು ನನ್ನ ಭಾವನೆ. ವೈಯುಕ್ತಿಕವಾಗಿ ನಮ್ಮೆಲ್ಲರಿಗೆ, ನಮ್ಮೆಲ್ಲರ ಕುಟುಂಬಗಳಿಗೆ, ನಮ್ಮೆಲ್ಲರ ನೋವು ನಲಿವಿನ ಮಧ್ಯ ಒಬ್ಬರಾಗಿ. ಎಲ್ಲ ಸಮಯದಲ್ಲಿ ಒಬ್ಬ ಮನೆಯ ಹಿರಿಯರಾಗಿ ನಮ್ಮನ್ನು ಅಕ್ಷರಶಃ ಕೈ ಹಿಡಿದು ನಡಿಸುತ್ತಿದ್ದಾರೆ. ನಮ್ಮೆಲ್ಲರದ್ದು ಒಂದೊಂದು ಘಟನೆ ಗಳು ಒಂದೊಂದು ಉದಾಹರಣೆಗಳು. ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮೆಲ್ಲರ ನೋವುಗಳು ಕೊನೆಗೆ ತಲುಪುವುದು ಶ್ರೀ ಸಂಸ್ಥಾನಕ್ಕೆ – ಅದೆಷ್ಟು ಜನ ಅದೆಷ್ಟು ಸಮಸ್ಯೆಗಳು – ಎಷ್ಟು ನೋವುಗಳು, ಪ್ರತಿದಿನ ನೂರಾರು ಸಮಸ್ಯೆಗಳಿಗೆ ಉತ್ತರ ಶ್ರೀ ಸಂಸ್ಥಾನದಲ್ಲಿ. ಇವೆಲ್ಲದರ ಪ್ರಾತಿನಿಧಿಕವಾಗಿ ನಮ್ಮ ಮನೆಯ ಕೆಲವೊಂದು, ಕೇವಲ ಕೆಲವೊಂದು ಘಟನೆ, ಭಾವನೆಗಳನ್ನು ಅದಕ್ಕಿಂತ ಹೆಚ್ಚಾಗಿ ಕೃತಜ್ಞ ನಾಗಿರುವದನ್ನು ವಿನಮ್ರ ಮತ್ತು ವಿನೀತನಾಗಿ  ಹಂಚಿಕೊಳ್ಳಲು ಬಯಸುತ್ತೇನೆ ಹೊರತಾಗಿ ಇದು ಯಾವುದೇ ರೀತಿಯ ವೈಯುಕ್ತಿಕವಾದ ಸಂಗತಿಗಳು ಎಂದು ನಾನು ಭಾವಿಸುವುದಿಲ್ಲ.. ಮತ್ತೊಮ್ಮೆ ಹೇಳಲಿಕ್ಕೆ ಇಷ್ಟ ಪಡುತ್ತೇನೆ ಇದು ನಮ್ಮೆಲ್ಲರ ಕಥೆ. ಶ್ರೀ ಸಂಸ್ಥಾನದ ಪ್ರೀತಿ ಒಂದು ಅಕ್ಷಯ ಪಾತ್ರೆ ಇಲ್ಲಿ ನಾನು ನೀವು ಮತ್ತೊಬ್ಬರು ನೆಪ ಮಾತ್ರ – ಮುಖ್ಯವಾಗಿ ಬೇಕಾದ್ದು ತೆಗೆದು ಕೊಳ್ಳುವ ಮನಸ್ಸು   ಆದ್ದರಿಂದ ಇಲ್ಲಿ ನಾನು ಪ್ರಸ್ತಾಪಿಸುವ ಘಟನೆಗಳು ನಮ್ಮೆಲ್ಲರ ಜೀವನದಲ್ಲಿ ನಡೆದಿರುವಂತದ್ದು – ಪಾತ್ರಗಳ ಹೆಸರುಗಳು ಮತ್ತು ರಂಗಭೂಮಿ ಬೇರೆ ಬೇರೆ ಇರಬಹುದು.- ಮಾತ್ರ ಅಲ್ಲ ಶ್ರೀ ರಾಘವೇಶ್ವರರು ತೋರುವ ಇಂತಹ ಒಂದು ಅತ್ಯಂತ ನಿಷ್ಕಲ್ಮಶವಾದ ಮಗುವಿನ ಪ್ರೀತಿ ಯನ್ನ ಶ್ರೀ ಸಂಸ್ಥಾನದ ಹತ್ತಿರಕ್ಕೆ ಬಂದು ಸಮಾಜದ ಪ್ರತಿಯೊಬ್ಬರೂ  ಅನುಭವಿಸುವಂತಾಗಲಿ ಎಂಬ ಸದಾಶಯ ಕೂಡ.

ಮೊದಲೇ ಹೇಳಿದಂತೆ ಶ್ರೀ ಪೀಠ ಮತ್ತು ಶ್ರೀ ಸಂಸ್ಥಾನದ ದೊಡ್ಡ ಋಣ ನಮ್ಮ ಮೇಲೆ ಇದೆ. ಅದರಲ್ಲೂ, ನನಗೆ, ಸಮಾಜದ ಒಬ್ಬ ಅಭಿನ್ನ ವ್ಯಕ್ತಿಯಾಗಿ ಮಾತ್ರ ಅಲ್ಲ, ಒಬ್ಬ ನಮ್ಮ ಕುಟುಂಬದ ಸದಸ್ಯನಾಗಿ ಕೂಡ ಕೇವಲ ಭಾವನೆಗಳಲ್ಲಿ ವ್ಯಕ್ತ ಪಡಿಸಲಾಗುವ , ಹಾಗೂ  ಅಕ್ಷರಗಳಲ್ಲಿ ಬರೆಯಲಾಗದಷ್ಟು ಋಣ ನಮ್ಮ ಮೇಲೆ ಇದೆ ಎಂದರೆ ತಪ್ಪಾಗಲಾರದು. ಪೂಜ್ಯ ಶ್ರೀ ರಾಘವೇಶ್ವರ ಭಾರತಿಗಳು ಒಮ್ಮೆ ಹೇಳಿದ ಹಾಗೆ ಪ್ರತಿಯೊಬ್ಬ ವ್ಯಕ್ತಿ ಸಹಿತ ಉತ್ತಮ ಮತ್ತು ಶ್ರೇಷ್ಠ ಕ್ಷಣ ಗಳಿಗೆ ಗೋಸ್ಕರ  ಬದುಕುತ್ತಾನೆ. ಅವನ ಅನುದಿನದ ಹೋರಾಟ ಆ ಶ್ರೇಷ್ಠ ಮತ್ತು ಪರಿಪೂರ್ಣ ಕ್ಷಣಗಳಿಗೋಸ್ಕರ. ಹೌದು. ಶ್ರೀ ಗುರುಪೀಠ ನಮ್ಮ ಮೇಲೆ ತೋರಿಸಿದ ಅಭಿಮಾನದ ಕ್ಷಣಗಳು, ಶ್ರೀ ಸಂಸ್ಥಾನದ ಒಡನಾಟದ ಭಾಗ್ಯ ಸಿಕ್ಕ ಆ ಕ್ಷಣಗಳೇ ನಾವು ತವಕಿಸುತ್ತಿದ್ದ ಮತ್ತು ತವಕಿಸುತ್ತಿರುವ ಕ್ಷಣ ಗಳು ಮಾತ್ರವಲ್ಲ ನಮ್ಮನ್ನು ಪಾವನ ಮಾಡಿದ ಆ ಕ್ಷಣಗಳಿಗೋಸ್ಕರ, ನಮ್ಮ ಎಲ್ಲ ಹಿರಿಯರ ಪರವಾಗಿ, ಭಕ್ತಿ ಪೂರ್ವಕ ಪ್ರಣಾಮಗಳು. ಹೌದು ನಮ್ಮ ಎಲ್ಲ ಹಿರಿಯರು ನಿಜವಾಗಿಯೂ ಭಾಗ್ಯಶಾಲಿಗಳು. ಶ್ರೀ ಪೀಠ ವನ್ನು ಏರಿದ ಮಹಾಮಹಿಮರನ್ನು ಅತ್ಯಂತ ಹತ್ತಿರದಿಂದ ಸೇವೆ ಮಾಡುವ ಭಾಗ್ಯ ಮತ್ತು ಜವಾಬ್ದಾರಿ ಅವರಿಗೆ ಒಲಿದು ಬಂದಿತ್ತು. ಮಾವಿನಕುಳಿ ಎನ್ನುವ ಸಾಗರದ ಕರೂರು ಸೀಮೆಯ ಮೂಲದವರು ನಾವು. ಪರಮ ಪೂಜ್ಯ ಶ್ರೀ ರಾಘವೇಂದ್ರ ಭಾರತಿ ಯವರು ಹೇಳುತ್ತಿದ್ದಂತೆ, ಮಾವಿನಕುಳಿ ಯಲ್ಲಿ ಶ್ರೀ ಸಂಸ್ಥಾನದ ಆನೆ ಕಟ್ಟಲಿಕ್ಕೆ ಎಂದೇ ಒಂದು ಜಾಗ ಇತ್ತು – ಅಂದರೆ ಪರಂಪರೆ ಯಲ್ಲಿ ಹಿಂದೆ ಆನೆ ಯ ಮೇಲೆ ಬರುತ್ತಿದ್ದ ಸಂದರ್ಭಗಳಲ್ಲೇ, ಮಾವಿನಕುಳಿಯಲ್ಲಿ ಮೊಕ್ಕಾಂ ಗಳು ಆಗುತ್ತಿದ್ದವು – ಅಲ್ಲದೆ ಅವರ ಗುರುಗಳಾದ ಶ್ರೀ ರಾಮಚಂದ್ರ ಭಾರತಿಗಳ ಮೊಕ್ಕಾಂ ಸಹ ಅನೇಕ ಬಾರಿ ಆಗಿತ್ತು – ಅಲ್ಲದೆ. ಶ್ರೀ ರಾಘವೇಂದ್ರ ಭಾರತಿ ಸ್ವಾಮಿಗಳ ಶಿಷ್ಯ ಪರಿಗ್ರಹ ಸಂಧರ್ಭ ದಲ್ಲಿ ಮತ್ತೆ ನಂತರದ ಅವರ ಕಾಶಿ ವಿದ್ಯಾಭ್ಯಾಸ ಸಂದರ್ಭದಲ್ಲಿ ಶ್ರೀ ರಾಮಚಂದ್ರ ಭಾರತಿಗಳು  ನಮ್ಮ ಅಜ್ಜ, ದಿ||ಶ್ರೀ ಚನ್ನಕೇಶವ ಭಟ್ಟರಿಗೆ ವಿಶೇಷ ಮತ್ತು ಕ್ರಿಯಾತ್ಮಕ ವಾದ ಜವಾಬ್ದಾರಿಗಳನ್ನು ಕೊಟ್ಟು ಶ್ರೀ ಪೀಠಕ್ಕೆ ಸೇವೆ ಸಲ್ಲಿಸಲು ಅವಕಾಶ ಕೊಟ್ಟಿದ್ದರು. ಅನಂತರ ವಿದ್ಯುತ್ ಗೋಸ್ಕರ ಕಟ್ಟಿದ ಹಿರೆಭಾಸ್ಕರ ಅಣೆಕಟ್ಟೆಗೋಸ್ಕರ ಆ ಊರು ತ್ಯಾಗ ಮಾಡಬೇಕಾದ ಸನ್ನಿವೇಶ ಬಂತು. ಆ ಸಮಯದಲ್ಲಿ ಸಾಗರದ ಕರ್ಕಿಕೊಪ್ಪ ಎನ್ನುವ ಊರಿಗೆ ನಮ್ಮ ವಾಸ್ತವ್ಯ ವರ್ಗಾಯಿಸಲ್ಪಟ್ಟಿತ್ತು. ಆ ಸಂದರ್ಭಗಳಲ್ಲಿ, ಶ್ರೀ ರಾಘವೇಂದ್ರ ಭಾರತಿ ಸ್ವಾಮಿಗಳವರ ಮಾರ್ಗದರ್ಶನ ಪಡೆದ ನಾವೇ ಧನ್ಯ. ಮಾತ್ರ ಅಲ್ಲ, ಮನೆ ಕಟ್ಟಿದ ತಕ್ಷಣ ಆ ಮನೆಗೆ ಬಂದು ಮೊಕ್ಕಾಂ ಮಾಡುವ ಕೃಪೆ ತೋರಿದ್ದು – ಅದಾದಮೇಲೆ ಸಾಕಷ್ಟು ಬಾರಿ ಮನೆಗೆ ಬರುವ ಔದಾರ್ಯ ಮತ್ತು ಬಂದಾಗಲೆಲ್ಲ ೮-೧೦ ದಿನ ಮೊಕ್ಕಾಂ ಮಾಡುವ ವಾತ್ಸಲ್ಯ – ಮಾತ್ರವಲ್ಲ ನಮ್ಮ ಅಜ್ಜನವರು ಕೊನೆಯ ಹಂತದಲ್ಲಿದ್ದಾಗ, ಸ್ವತಃ ಶ್ರೀ ಸಂಸ್ಥಾನವೇ ಬಂದು ಪ್ರಭು ಶ್ರೀರಾಮ ದೇವರ ತೀರ್ಥ ಕೊಡುವದೆಂದರೆ – ಹೃದಯ ತುಂಬಿ ನಮಸ್ಕರಿಸುವುದು ಬಿಟ್ಟು ಬೇರೇನನ್ನು ಮಾಡಲಾಗದು. ಶ್ರೀ ರಾಘವೇಂದ್ರ ಭಾರತಿಗಳಿಗೆ, ನಮ್ಮ ತಂದೆ ಯವರಾದ ಮೃತ್ಯುಂಜಯ ರವರನ್ನು ಕಂಡರೂ ಕೂಡ ವಿಶೇಷ ವಾತ್ಸಲ್ಯ ಮತ್ತು ಪ್ರೀತಿ. ಮೊತ್ತ ಮೊದಲು  ಶ್ರೀ ರಾಘವೇಂದ್ರ ಭಾರತಿ ಗಳು ನಮ್ಮ ಮನೆಗೆ ಬಂದಾಗ ನಮ್ಮ ತಂದೆ ಇನ್ನು ಚಿಕ್ಕ ಮಗು – ಆಗ ಅವರಿಗೆ ಶ್ರೀಗಳು ಪಂಚತಂತ್ರ ದ ಕಥೆಗಳನ್ನು ಹೇಳುತ್ತಿದ್ದರಂತೆ – ನಮ್ಮ ತಂದೆಯವರ ಜೀವನದ ಎಲ್ಲ ನಿರ್ಧಾರಗಳು, ಮದುವೆ ಯಂತಹ ಅವರ ಅತ್ಯಂತ ವೈಯುಕ್ತಿಕ ನಿರ್ಧಾರಗಳು ಕೂಡ ಆಗಿದ್ದು ತೀರ್ಥಹಳ್ಳಿ ಯಲ್ಲಿ – ಶ್ರೀ ರಾಘವೇಂದ್ರ ಭಾರತಿ ಸ್ವಾಮಿಗಳಿಂದ. ಮಾತ್ರ ಅಲ್ಲ – ಆಯುಷ್ಯ ಹೋಮ ದಂತಹ  ಕಾರ್ಯಕ್ರಮಗಳ ಮುಹೂರ್ತ ಸಹಿತ ಶ್ರೀ ರಾಘವೇಂದ್ರ ಭಾರತಿ ಗಳು ಮಾರ್ಗದರ್ಶನ ದಲ್ಲಿ ಆಗುತ್ತ ಇತ್ತು. ತೀರ್ಥಹಳ್ಳಿ ಯಲ್ಲಿ ಹೋದಾಗ, ಹುಲಿ ಮಂಡೆ ತೋಟದ ಅಭಿವೃದ್ಧಿ  ಪಡಿಸುವ ಸಂದರ್ಭದಲ್ಲಿ, ಶ್ರೀ ರಾಮಚಂದ್ರಾಪುರ ಮಠಕ್ಕೆ ಭೇಟಿ ಕೊಡುವ ಸಂದರ್ಭದಲ್ಲಿ, ಶ್ರೀ ರಾಘವೇಂದ್ರ ಭಾರತಿಗಳು, ತಂದೆಯವರನ್ನು ಕರೆದು ಕೊಂಡು ಹೋಗುವಷ್ಟು ಆತ್ಮೀಯತೆ ಮತ್ತು ವಿಶ್ವಾಸ – ಈ ರೀತಿಯ ಉದಾಹರಣೆಗಳು ಅಸಂಖ್ಯ. ಶ್ರೀ ರಾಘವೇಂದ್ರ ಭಾರತಿಗಳು ತಮ್ಮ ಆರೋಗ್ಯ ಸ್ವಲ್ಪ ವ್ಯತ್ಯಯ ಉಂಟಾಗಿ ಬೆಂಗಳೂರು ಗೆ ತಮ್ಮ ಮೊಕ್ಕಾಂ ವರ್ಗಯಿಸುವದಕ್ಕಿಂತ ಮುಂಚೆ ಕೊನೆಯ ತಿರುಗಾಟ ನಮ್ಮ ಮನೆಯಲ್ಲಿ ಆಗಿತ್ತು – ಅದೇ ಸವಾರಿಯ ಕೊನೆಯ ಓಡಾಟ. ಆ ಬಾರಿ ಸವಾರಿ ಸುಮಾರು ೧೫ ಕ್ಕೂ ಹೆಚ್ಚು ದಿನ ನಮ್ಮ ಮನೆಯಲ್ಲಿ ಮೊಕ್ಕಾಂ ಮಾಡಿ ನಮ್ಮನ್ನೆಲ್ಲ ಪಾವನ ಮಾಡಿದ್ದಲ್ಲದೆ, ನನ್ನ ಉಪನಯನ ಕಾರ್ಯಕ್ರಮವನ್ನ ಸಹಿತ ಅವರೇ ನಿರ್ಧರಿಸಿ, ಅವರ ಮೊಕ್ಕಾಂ ಸಂದರ್ಭದಲ್ಲಿ ಮಾಡಿಸಿದರು ಕೂಡಾ – ಮಾತ್ರ ಅಲ್ಲ ಅದೇ ಸಂದರ್ಭದಲ್ಲಿ ಶಿಷ್ಯ ಸ್ವೀಕಾರಕ್ಕೆ ಭೂಮಿಕೆ ಮತ್ತು ಶ್ರೀ ರಾಮಚಂದ್ರಾಪುರ ಮಠದಲ್ಲಿ ನಡೆಯಬೇಕಾಗಿದ್ದ ಅತಿರುದ್ರ ಮಹಾಯಾಗದ ಸಂಪೂರ್ಣ ರೂಪು ರೇಷೆ ಸಿದ್ದವಾಗಿದ್ದು. ಇಂತಹ ಮಮತೆ, ವಾತ್ಸಲ್ಯ, ಮತ್ತೆ ಕಾಳಜಿ ಯನ್ನು ಶ್ರೀ ಗುರುಗಳಲ್ಲಿ ಮಾತ್ರ ಕಾಣ ಸಧ್ಯ. ನಮ್ಮ ತಂದೆಯವರ ಪುಣ್ಯ – ಶ್ರೀ ಪೀಠ ಅವರ ಮೇಲೆ ಇಟ್ಟಿರುವ ವಿಶ್ವಾಸ ಯಾವತ್ತು ಜಾಸ್ತಿಯೇ ಆಗುತ್ತಿದೆ – ೧೯೯೭ ರಲ್ಲಿ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳು, ಶ್ರೀ ರಾಮಚಂದ್ರಾಪುರ ಮಠಕ್ಕೆ ಬಂದು ತಮ್ಮ ಅಧ್ಯಯನ ಮುಂದುವರೆಸಿದಾಗ, ಅವರ ಒಡನಾಟಗಳು. ಹಾಗೂ ಶ್ರೀ ಪರಮಪೂಜ್ಯ  ರಾಘವೇಶ್ವರ ಭಾರತಿ ಮಹಾಸ್ವಾಮಿಗಳು ಸೀಮಾ ಸಂಚಾರ ಪ್ರಾರಂಭ ಮಾಡಿದಾಗ ನಮ್ಮ ಇಕ್ಕೇರಿ ಸೀಮೆ ಯಲ್ಲಿ ಸ್ವಲ್ಪ ಅಹಿತಕರ ವಾತಾವರಣ ಇದ್ದಗಲೂ ನಮ್ಮೆಲ್ಲರ ಭಕ್ತಿಯ ಒತ್ತಾಯಕ್ಕೆ ಮಣಿದು ನಮ್ಮ ಸೀಮೆಗೆ ಬರುವ ನಿರ್ಧಾರ ತೆಗೆದುಕೊಂಡಿದ್ದು – ಹಾಗೂ ಸರಿ ಸುಮಾರು ೯ ವರ್ಷಗಳ ಕಾಲ ನಮ್ಮ ತಂದೆಯವರನ್ನು ಸೀಮಾ ಪರಿಷತ್ ಅಧ್ಯಕ್ಷರಾಗಿ ಸೇವೆ ಮಾಡುವ ಅವಕಾಶ ಕಲ್ಪಿಸಿದ್ದು – ಮತ್ತು ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ನಮ್ಮ ಮನೆಯಲ್ಲಿ ಮೊಕ್ಕಾಂ ಮಾಡಿದ್ದೂ – ಇವೆಲ್ಲಕ್ಕೂ ನಮ್ಮ ಕುಟುಂಬ ಚಿರ ಋಣಿ..

ಶ್ರೀ ಶ್ರೀ ರಾಘವೇಂದ್ರಭಾರತೀ ಯತಿಗಳಿಗೆ ನನ್ನಿಂದ ಮಾಲಾರ್ಪಣೆ

ನಾನು ಮೊದಲು ಮಠಕ್ಕೆ ಹೋಗಿದ್ದು ಪರಮಪೂಜ್ಯ ಶ್ರೀ ರಾಘವೇಂದ್ರ ಭಾರತಿ ಸ್ವಾಮಿಗಳನ್ನು ನೋಡಿದ್ದು ಯಾವಾಗ..ಗೊತ್ತಿಲ್ಲ..ಹೌದು ಹೇಗೆ ಮೊತ್ತ ಮೊದಲು ತಂದೆ ತಾಯಿಯರನ್ನು ನೋಡಿದ ದಿನಾಂಕ ಹೇಗೆ ನೆನಪಿರುವದಿಲ್ಲವೋ ಅದೇ ರೀತಿ. ನಾನು ಹುಟ್ಟಿದ ಕೆಲವೇ ತಿಂಗಳುಗಳಿಗೆ ಶ್ರೀ ರಾಘವೇಂದ್ರ ಭಾರತಿಗಳ ಮೊಕ್ಕಾಂ ಸರಿ ಸುಮಾರು ೮-೧೦ ದಿನ ಗಳು ನಮ್ಮ ಮನೆಯಲ್ಲಿ. ನನಗೆ ಗೊತ್ತಿರುವಂತೆ ಮೊತ್ತ ಮೊದಲ ಬಾರಿಗೆ, ಶ್ರೀ ಸಂಸ್ಥಾನವನ್ನು ದರ್ಶಿಸಿದ, ಶ್ರೀ ರಾಮನ ಪೂಜೆಯನ್ನು ನೋಡಿದ ದಿನಗಳು. – ಅದಾದಮೇಲೆ..ಏನು ಹೇಳೋಣ. ಹಲವಾರು ಮೊದಲುಗಳು – ನನಗೆ ನೆನಪಿರುವಂತೆ ಮೊತ್ತಮೊದಲ ಬಾರಿಗೆ ನಾನು ಹೊರಗಡೆ ಹೋದ ಕಾರಣ ತೀರ್ಥಹಳ್ಳಿ ಮಠಕ್ಕೆ ಹೋಗಲು. ಮೊತ್ತ ಮೊದಲು ಹತ್ತಿದ ಕಾರು ಶ್ರೀ ಸಂಸ್ಥಾನದ್ದು – ನನ್ನ ಉಪನಯನ ಆಗಿದ್ದು ಶ್ರೀ ಪೀಠದ ಮೊಕ್ಕಾಂ ನ ಸಮಯದಲ್ಲಿ – ಆಗ ಸುಮಾರು ೧೫ ಕ್ಕೂ ಹೆಚ್ಚು ದಿನ ಮೊಕ್ಕಾಂ ಇತ್ತು. ಹೀಗೆ ನೂರಾರು ಸಾವಿರಾರು ಘಟನೆಗಳು. ಜೀವನದ ಉದ್ದಕ್ಕೂ ಹಸಿರಾಗಿರುವ ನೆನಪಿನ ಬುತ್ತಿಗಳು – ಧನ್ಯತಾ ಭಾವಗಳು. ೧೯೯೭ರ ನಂತರ ಹೊಸ ಶಕೆ. ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳ ದರ್ಶನ ಭಾಗ್ಯ ಸಿಕ್ಕ ವರ್ಷ. ನಂತರ ..ನನ್ನ ಜೀವನದ ಯಾವುದೇ ನಿರ್ಧಾರಗಳನ್ನು ಸಹಿತ ನಾನು ತೆಗೆದುಕೊಳ್ಳುವ ಅವಶ್ಯಕತೆಯೇ ಬೀಳಲಿಲ್ಲ. ನನ್ನ ಎಲ್ಲ ನಿರ್ಧಾರಗಳನ್ನು ತೆಗೆದು ಕೊಂಡಿದ್ದು ಶ್ರೀ ಸಂಸ್ಥಾನ. ಹಾಗೂ ಹಲವು ಮೊದಲುಗಳು. ನಾನು ಮೊತ್ತ ಮೊದಲ ಬಾರಿಗೆ ಪತ್ರಿಕೆ ಯಲ್ಲಿ ಬರೆಯಲಿಕ್ಕೆ ಪ್ರೇರಣೆ ಪರಮಪೂಜ್ಯ ಶ್ರೀಗಳು. ೧೯೯೭ ರಲ್ಲಿ ಶ್ರೀ ಸಂಸ್ಥಾನ ಶ್ರೀ ರಾಮಚಂದ್ರಾಪುರ ಮಠಕ್ಕೆ ಬಂದಾಗ ಸ್ಥಳೀಯ ಪತ್ರಿಕೆ ಯೊಂದರಲ್ಲಿ ಅತಾರ್ಕಿಕವಾದ ಅಸಂಬದ್ದವಾದ ಲೇಖನವೊಂದು ಪ್ರಕಟ ಆಯಿತು. ಆ ವರದಿಯಲ್ಲಿ ಇದ್ದ ಅಸತ್ಯಗಳನ್ನು ಪ್ರಸ್ತಾಪಿಸಿ ಬರೆದಿದ್ದು ಮತ್ತೆ ಖಂಡಿಸಿದ್ದು ನನ್ನ ಮೊದಲ ಬರಹ (ಆಗ ನನಗೇ ಶ್ರೀ ಸಂಸ್ಥಾನದ ದರ್ಶನ ಇನ್ನೂ ಆಗಿರಲಿಲ್ಲ).
ಎರಡನೆಯ ಬರಹಕ್ಕೂ ಕಾರಣ ಶ್ರೀ ಸಂಸ್ಥಾನ. ಶ್ರೀ ಸಂಸ್ಥಾನ ಶ್ರೀ ರಾಮಚಂದ್ರಾಪುರ ಮಠಕ್ಕೆ ಬಂದ ಮೇಲೆ ಆಯೋಜಿಸಿದ ಮೊತ್ತ ಮೊದಲ ಕಾರ್ಯಕ್ರಮ ಬೇಸಿಗೆ ವೇದ ಅಧ್ಯಯನ ಶಿಬಿರ – ಆ ಸಮಾರಂಭದ ವರದಿ ಮಾಡುವ ಯೋಗ ನನ್ನದಾಗಿತ್ತು. ಈ ರೀತಿ ಕೊನೆಮೊದಲಿಲ್ಲದ ಸುಂದರ ಮಧುರ ಅತ್ಯಂತ ಸಮೃದ್ದ ಕ್ಷಣಗಳು. ಹೇಳಿದಷ್ಟೂ ಮುಗಿಯದವು. ನಮ್ಮ ಶ್ರೀ ಸಂಸ್ಥಾನದ ಶಿಷ್ಯರ ಮೇಲಿನ ಪ್ರೀತಿ ಹಾಗೂ ಕಾಳಜಿ ನಮಗೆಲ್ಲರಿಗೂ ಗೊತ್ತಿರುವದೆ – ತಮ್ಮ ಶಿಷ್ಯರಿಗೋಸ್ಕರ ಅವರು ಬಿಟ್ಟ ನಿದ್ರೆ ಗಳೆಷ್ಟೋ ತೆಗೆದುಕೊಂಡ ತೊಂದರೆಗಳೆಷ್ಟೋ – ರಾಮನಿಗೆ ಗೊತ್ತು.

ಶ್ರೀಗಳ ಬಗ್ಗೆ ಹೇಳುವಾಗ ಈ ಘಟನೆಯನ್ನು ಪ್ರಸ್ತಾಪಿಸಲೇಬೇಕು.
ನನ್ನ ದ್ವಿತೀಯ ಪಿ ಯು ಸಿಯ ನಂತರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಶ್ರೀಗಳ ಮಾರ್ಗದರ್ಶನ ಪಡೆಯಲು ನಮ್ಮ ತದೆಯವರ ಜೊತೆಗೆ ಭೇಟಿ ಮಾಡಿದ್ದೆ.  ಶ್ರೀ ಸಂಸ್ಥಾನ ನಮಗೆ ‘ಮಾಹಿತಿ ತಂತ್ರಜ್ಞಾನ’ ವಿಭಾಗದಲ್ಲಿ ಶಿವಮೊಗ್ಗ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಮಾಡಲು ಆದೇಶಿಸಿದರು. ಆದರೆ ಆ ಸಮಯದಲ್ಲಿ ಶಿವಮೊಗ್ಗೆಯಲ್ಲಿ ಮಾಹಿತಿ ತಂತ್ರಜ್ಞಾನ ಪದವಿ ಲಭ್ಯ ಇರದ  ವಿಚಾರವನ್ನು  ಶ್ರೀಗಳಲ್ಲಿ  ಹೇಳಿದಾಗ, ಶಿವಮೊಗ್ಗೆಯಲ್ಲೇ ಆಗಬೇಕು, ಅದಲ್ಲದ ನಂತರದಲ್ಲಿ ಮೈಸೂರಿನಲ್ಲಿ ಪರಿಶೀಲಿಸು ಎಂಬ ಆದೇಶವನ್ನು ಕೊಟ್ಟರು. ಆ ಬೇಟಿಯ ನಂತರ ನಾನು ಮೈಸೂರಿನ ವಿದ್ಯಾರ್ಥಿನಿಲಯದ ಬಗ್ಗೆ ಯೋಚಿಸುತ್ತಿದ್ದರೆ, ತಂದೆಯವರು ಶಿವಮೊಗ್ಗದ ವಿದ್ಯಾರ್ಥಿನಿಲಯದ ಬಗ್ಗೆ ಯೋಚಿಸುತ್ತಿದ್ದರು. ಕೊನೆಗೆ ಕೌನ್ಸೆಲಿಂಗ್‌ಗೆ ನಾವು ಹೋದಾಗ, ಅದರ ಹಿಂದಿನ ದಿನವಷ್ಟೇ ಶಿವಮೊಗ್ಗೆಯ ಇಂಜಿನಿಯರಿಂಗ್ ಕಾಲೇಜಿಗೆ ‘ಮಾಹಿತಿ ತಂತ್ರಜ್ಞಾನ’ ವಿಷಯದಲ್ಲಿ ಪದವಿ ಆರಂಭಿಸಲು ಅನುಮತಿ ದೊರಕಿ ಸೀಟುಗಳು ಲಭ್ಯವಾಗಿದ್ದವು. ಕೊನೆಗೆ ಗುರು ಅನುಗ್ರಹದಿಂದ ಅಲ್ಲೇ ವಿದ್ಯಾಭ್ಯಾಸ ಮಾಡುವಂತಾಯಿತು. ಇದು ಗುರು ವಾಕ್ಯದ ಮಹಿಮೆಗೊಂದು ಅಪೂರ್ವ ನಿದರ್ಶನ.

ಗುರು ಮಹಿಮೆಗಿರುವ ಸಾವಿರಾರು ಉದಾಹರಣೆಗಳ ಪೈಕಿ ಇತ್ತೀಚಿಗೆ ನಡೆದ ಒಂದು ಘಟನೆ ಹೇಳಲಿಕ್ಕೆ ಇಷ್ಟ ಪಡುತ್ತೇನೆ. ಕಳೆದ ವರ್ಷದ ಚಾತುರ್ಮಾಸ್ಯದ ಶುಭ ಸಂದರ್ಭದಲ್ಲಿ ಕೊಲ್ಕೊತ್ತಗೆ ಹೋಗಿದ್ದೆ – ಅವತ್ತೇ ಯೋಗನುಯೋಗವೋ ಎಂಬಂತೆ ಶ್ರೀ ರಾಮ ಪಟ್ಟಾಭಿಷೇಕ – ಶ್ರೀ ಸಂಸ್ಥಾನ ತಮ್ಮ ಬೆಳಗಿನ ಪೂಜೆಯ ನಂತರ ಸುಮಾರು ೩-೪ ಗಂಟೆಗಳಿಗೂ ಹೆಚ್ಚು ಕಾಲ ಶ್ರೀರಾಮ ಪಟ್ಟಾಭಿಷೇಕ ಸಮಾರಂಭ ದಲ್ಲಿ ಪಾಲ್ಗೊಂಡಿದ್ದರು – ಮತ್ತು ಪರಂಪರೆ ಯಂತೆ ರೇಷ್ಮೆ ಬಟ್ಟೆ ಉಟ್ಟಿದ್ದರು. ಕೊಲ್ಕೊತ್ತದ ಸೆಕೆಯೋ ದೇವರಿಗೆ ಪ್ರೀತಿ. ಅಂತಹ ಸೆಕೆಯಲ್ಲಿ, ಸರಿ ಸುಮಾರು ೪ ಘಂಟೆಗಳ ಕಾಲ ರೇಷ್ಮೆ ಬಟ್ಟೆಯಲ್ಲಿ ಬಿಡುವಿಲ್ಲ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶ್ರೀ ಗುರುಗಳು, ಯಾವಾಗ ನಾನು ಅವತ್ತೇ ಊರಿಗೆ ಹೋಗಬೇಕು ಎಂದು ಹೇಳಿದನೋ, ಆಗ ತಕ್ಷಣ ಅದೇ ಬಟ್ಟೆಯಲ್ಲಿ, ಅತ್ಯಂತ ಸಮಾಧಾನವಾಗಿ ಎಲ್ಲ ವಿಷಯಗಳನ್ನು ಮಾತನಾಡಿ ಮಂತ್ರಾಕ್ಷತೆ ಕೊಟ್ಟು ಕಳುಹಿಸಿದರು – ಅವತ್ತು ನನಗೇ ಶ್ರೀ ಸಂಸ್ಥಾನಕ್ಕೆ ತೊಂದರೆಯಾಗುತ್ತ ಇದೆ ಮಂತ್ರಾಕ್ಷತೆ ತೆಗೆದು ಕೊಂಡು ಹೋಗೋಣ ಎಂದು ಭಾವನೆ ಇದ್ದರೂ ಅವರು ಅದರ ಪರಿವೆಯೇ ಇಲ್ಲದೆ ಮಾಮೂಲಿನಂತೆ ಮಾತಾಡಿ ಮಂತ್ರಾಕ್ಷತೆ ಕೊಟ್ಟುಕಳಿಸುವ ಮನಸ್ಸು ಮತ್ತು ಹೃದಯ – ಆ ಹೃದಯದಲ್ಲಿ ಇರುವ ಮಮತೆ.. ಈ ಅನುಭವ ಅವರ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರಿಗೆ ಆಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಆತ್ಮೀಯ ಬಂಧುಗಳೇ, ಇಲ್ಲೊಂದು ಘಟನೆಯನ್ನು ಘಟನೆಯಾಗಿ ಈ ಮಾಧ್ಯಮದ ಮೂಲಕ ತಮ್ಮ ಮುಂದೆ ಇಡಲಿಕ್ಕೆ ಇಷ್ಟ ಪಡುತ್ತೇನೆ – ಇದು ಎಲ್ಲೋ ನಡೆದ ಕತೆ ಅಲ್ಲ – ನಮ್ಮ ಮನೆಯಲ್ಲಿ ಇತ್ತೀಚಿಗೆ ನಡೆದ ಘಟನೆ – ಮಹಾಭಾರತದ ಯಕ್ಷಪ್ರಶ್ನೆಯ ಸಂದರ್ಭದಲ್ಲಿ ಧರ್ಮರಾಜ ಯಮಧರ್ಮ ರಾಯನಿಗೆ ಹೇಳುತ್ತಾನೆ – ಭೂಮಿ ಗಿಂತ ದೊಡ್ಡದು ತಾಯಿ. ಅಂತಹ ಸ್ಥಾನದಲ್ಲಿರುವ ತಾಯಿ ಇವತ್ತು ನಮ್ಮ ಜೊತೆ ಇದ್ದರೆ ಅದಕ್ಕೆ ಕಾರಣ ಶ್ರೀ ಸಂಸ್ಥಾನ- ನಮ್ಮ ತಾಯಿಗೆ ಸುಮಾರು ೬ ವರ್ಷಗಳ ಹಿಂದೆ ತಕ್ಷಣ ಆರೋಗ್ಯ ಹದಗೆಟ್ಟಿತು – ಮಣಿಪಾಲದ KMC ಆಸ್ಪತ್ರೆ ಯಲ್ಲಿ I C U ನಲ್ಲಿ ವಾರಗಟ್ಟಲೆ ಇರುವ ಸಂದರ್ಭ ಬಂದಿತ್ತು. ತಮ್ಮ ದೇಹದ ಮೇಲೆ ನಿಯಂತ್ರಣ ಇರಲಿಲ್ಲ – ಕೇವಲ ೫೦ ವರ್ಷಕ್ಕೂ ಚಿಕ್ಕವರಾದ, ಕೇವಲ ಕೆಲವೇ ದಿನಗಳ ಹಿಂದೆ ಸಶಕ್ತರಾದ ನಮ್ಮ ತಾಯಿ ದೇಹದ ಮೇಲೆ ಸಂಪೂರ್ಣ ನಿಯಂತ್ರಣ ಕಳೆದುಕೊಂಡು ಮಾತು ಸಹಿತ ಆಡಲು ಆಗದೆ ಮಲಗಿದ್ದರು – ವೈದ್ಯರಗಳು ಇದು ವಿಶ್ವದಲ್ಲಿ ೦.೦೩% ಜನರಿಗೆ ಬರುವ ಕಾಯಿಲೆ – ಯಾವುದೇ ರೀತಿಯ ಭರವಸೆಗಳು ಇಲ್ಲ ಎನ್ನುವ ಮಾತು ಆಡುತ್ತಿದ್ದರು – ಕೊನೆಗೆ ಸ್ವಲ್ಪ ದಿನಗಳ ನಂತರ ಕ್ಷೀಣವಾಗಿ ಮಾತಾಡುತ್ತಿದ್ದ, ಅವತ್ತಿನ ಮಟ್ಟಿಗೆ ಬದುಕುವ ಆಸೆ ಯನ್ನೇ ಕಳೆದುಕೊಂಡಿದ್ದ, ನಮ್ಮ ತಾಯಿ ದಾರಿ ಕಾಣದೆ ಕುಳಿತಿದ್ದ ನಮಗೆ ದಾರಿ ತೋರಿದರು  – ICU ನಲ್ಲೆ ನನ್ನನ್ನು ಕರೆದು ಕ್ಷೀಣ ಧ್ವನಿಯಲ್ಲೇ ನಮ್ಮ ಸ್ವಾಮಿಗಳಿಗೆ ಇವೆಲ್ಲ ವಿಷಯ ಹೇಳಿ, ಅವರ ಪರಮ ಪವಿತ್ರ ಮಂತ್ರಾಕ್ಷತೆ ತರಬಹುದೇ – ಹತ್ತಿರದಲ್ಲಿ ಇದ್ದಾರೆಯೇ ಎಂದು ಕೇಳಿದರು – ಅವತ್ತು ನಮ್ಮ ಪುಣ್ಯವಶಾತ್ ಭಾನ್ಕುಲಿ ಮಠದಲ್ಲಿ ಇದ್ದ ಶ್ರೀ ಸಂಸ್ಥಾನದ ಆಶೀರ್ವಾದ, ಮಂತ್ರಾಕ್ಷತೆ ಹಾಗೂ ಶ್ರೀರಾಮನ ಅನುಗ್ರಹ ನಮಗೆ ಸಿಕ್ಕಿತ್ತು – ಅಷ್ಟೇ – I C U ನಲ್ಲಿ ವಾರಗಟ್ಟಲೆ ಇದ್ದ, ತಮ್ಮ ದೇಹದ ಸ್ವಾಧೀನವನ್ನೇ  ಕಳೆದುಕೊಂಡಿದ್ದ, KMC ಯಂತಹ ಆಸ್ಪತ್ರೆಯ ಉತ್ತಮೋತ್ತಮ ವೈದ್ಯರಿಂದಲೇ ಬದುಕುವ ಭರವಸೆ ಪಡೆಯದ ನಮ್ಮ ತಾಯಿ ಕೆಲವೇ ವರ್ಷಗಳಲ್ಲಿ ಶ್ರೀ ಸಂಸ್ಥಾನಕ್ಕೆ ಬಿಕ್ಷ ಮಾಡುವ ಹಾಗೆ ಆಗಿದ್ದರೆ ಅದಕ್ಕೆ ಸಂಪೂರ್ಣ ಕಾರಣ – ಶ್ರೀ ಸಂಸ್ಥಾನ. ಪ್ರಭು ಶ್ರೀರಾಮನ, ಶ್ರೀ ಸಂಸ್ಥಾನದ ಅನುಗ್ರಹಕ್ಕೆ ನಾವು ಏನು ಹೇಳಿದರೂ ಎಷ್ಟು ಹೇಳಿದರೂ ಹೇಗೆ ಹೇಳಿದರೂ ಕಡಿಮೆಯೇ. ಹೃದಯ ತುಂಬಿ ಮಾಡುವ ಕೋಟಿ ಕೋಟಿ ಪ್ರಣಾಮಗಳು.

ಅಬ್ಬ ಎಷ್ಟೊಂದು ಕಾರಣಗಳು – ಬರೆಯಲು ಹೋದರೆ ಪುಸ್ತಕಗಳೇ ಬೇಕಾದಿತು – ಎಷ್ಟೊಂದು ಜನ್ಮಗಳನ್ನ ಎತ್ತಿ ಬಂದರೂ ಸಹಿತ ನಮ್ಮೆಲ್ಲರಿಗೆ ಶ್ರೀ ಸಂಸ್ಥಾನದ ಋಣ ವನ್ನ ತೀರಿಸಲು ಸಾದ್ಯ ಇಲ್ಲ. ಆದರೂ ಕಿಂಚಿತ್ ಪ್ರಯತ್ನ ಮಾಡೋಣ – ಶ್ರೀ ಸಂಸ್ಥಾನದ ಯೋಜನೆಗಳು ದೊಡ್ಡದು – ಮನುಕುಲದ ಉದ್ದಾರಕ್ಕಾಗಿ ರೂಪ ಗೊಂಡವು – ಅತ್ಯಂತ ಉದಾತ್ತ ಉದ್ದೇಶಗಳಿಂದ ರೂಪುಗೊಂಡ ಈ ಯೋಜನೆಗಳ ದಾರಿ ದೂರ ಇದೆ. ಪ್ರಭು ರಾಮನ ಅವತಾರದಲ್ಲಿ ರಾವಣ ನ ಮರಣ ಆಗಿದ್ದು ಕೊನೆಗೆ. ಅದಕ್ಕೆ ಮುಂಚಿತವಾಗಿ ಮಾರೀಚ ಸುಬಾಹುಗಳನ್ನು ರಾಮ ವಧಿಸಿದ. ಖರ ದುಷನರು, ಕಬಂಧ ವಾಲಿ ಆಮೇಲೆ ರಾವಣನ ಅಂತ್ಯ  – ಅದೇ ರೀತಿ  ಕೃಷ್ಣಾವತಾರದಲ್ಲಿ ಧರ್ಮ ಸ್ಥಾಪನೆ ಆಗಲಿಕ್ಕೆ ಸಾಕಷ್ಟು ಸಮಯ ಬೇಕಾಗಿತ್ತು – ೧೮ ಅಕ್ಷೋಹಿಣಿಯಷ್ಟು ಸೈನ್ಯ ಆ ಕಾರ್ಯದಲ್ಲಿ ತೊಡಗಿಸಿ ಕೊಳ್ಳಬೇಕಾಯ್ತು . ಅದೇ ರೀತಿ ಈಗಲೂ ಬದಲಾವಣೆ/ಕೆಟ್ಟದರ ನಿರ್ಮೂಲನ ಪ್ರಾರಂಭ ಆಗಿದೆ – ಆದರೆ ಇದರ ಗಮ್ಯ ಇನ್ನು ದೂರ ಇದೆ. ಇವತ್ತು ಎಲ್ಲೆಲ್ಲು ನೋವು ದುಖ ಹಿಂಸೆ ಅಸಮಾಧಾನ ಇದೆ. ಇದರ ಮದ್ಯದಲ್ಲಿ ನಿಜವಾದ “ಆನಂದ” ಏನು ಎಲ್ಲಿ ಎನ್ನುವುದನ್ನ ಯೋಚಿಸಲಿಕ್ಕೂ ಸಮಯ ಇಲ್ಲದ ಪರಿಸ್ಥಿತಿಯನ್ನ ನಮ್ಮ ಸಮಾಜವೇ ನಿರ್ಮಾಣ ಮಾಡಿಕೊಂಡಿದೆ. ಪೂಜ್ಯ ಗೋಮಾತೆ, ಭೂಮಾತೆ, ಕೊನೆಗೆ ಜನ್ಮ ಕೊಟ್ಟ ತಾಯಿಯನ್ನು ಸಹಿತ ಲಾಭದ ದೃಷ್ಟಿಯಿಂದ ನೋಡುವ/ಉಪಯೋಗಿಸುವ ಪ್ರವೃತ್ತಿ ದಿನೇ ದಿನೇ ಜಾಸ್ತಿ ಆಗುತ್ತಿರುವುದು ಅತ್ಯಂತ ವಿಪರ್ಯಾಸ. ಇಂತಹ ವಿಷಮ ಸಂದರ್ಭದಲ್ಲಿ ಆಶಾಕಿರಣವಾಗಿ ಸಮಾಜ ಶ್ರೀ ಪೀಠದತ್ತ ಮುಖ ಮಾಡಿದೆ. ಹಾಗೂ ಈ ದಿಕ್ಕಿನಲ್ಲಿ ಶ್ರೀ ಪೀಠ ಕಾರ್ಯ ಪ್ರವತ್ತವಾಗಿ ದೊಡ್ಡ ಪ್ರಮಾಣದ ಯಶಸ್ಸು ಕಾಣುತ್ತ ಇರುವುದು ಇಡಿ ಸಮಾಜಕ್ಕೆ ಒಂದು ಸಮಾಧಾನಕರ ಮತ್ತು ಆಶಾದಾಯಕವಾದ ಸಂಗತಿ. ಆದರೆ ಈ ದಾರಿ ಬಹಳ ದೂರ ಮತ್ತು ಕಠಿಣ ಇದೆ – ಅದ್ದರಿಂದ ಈ ಪ್ರಯಾಣದ ತಾರ್ಕಿಕ ಅಂತ್ಯಕ್ಕೆ ನಮ್ಮ ನೆಚ್ಚಿನ ಶ್ರೀ ಪೀಠದ ಮಾರ್ಗದರ್ಶನದ ಅವಶ್ಯಕತೆ ತುಂಬಾ ಇದೆ.  ಹಾಗೂ ಮುಖ್ಯವಾಗಿ ಬಹಳ ದುರ್ಗಮ ಮತ್ತು ದೂರದ ಈ ಪ್ರಯಾಣದಲ್ಲಿ ಶಿಷ್ಯಕೋಟಿಗೆ, ಶ್ರೀ ಪೀಠಕ್ಕೆ ಎರಡು ಬಗೆಯದೆ, ನಮ್ಮ ಗುರುಗಳ ಮಾರ್ಗದರ್ಶನ ಹಾಗೂ ಆದೇಶದಂತೆ ಅವರ ಜೊತೆ ಕ್ರಮಿಸಲಿಕ್ಕೆ ಬೇಕಾದ ಶಕ್ತಿ ಮತ್ತು ಬುದ್ದಿ ಯನ್ನ, ಈ ಸಮಾಜದ ಎಲ್ಲ ನೋವುಗಳನ್ನ, ತಪ್ಪುಗಳನ್ನ, ಮಾನವ ಸಮಾಜ ತನ್ನ ಮಾತೆಯರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನ ನಿಲ್ಲಿಸುವ ಸದ್ಬುದ್ಧಿ ಯನ್ನ ಶ್ರೀ ಸಂಸ್ಥಾನ ಹಾಗೂ ಪ್ರಭು ಶ್ರೀ ರಾಮ ದಯ ಪಾಲಿಸಲಿ ಎಂದು ವಿನಮ್ರನಾಗಿ ಬೇಡಿ ಕೊಳ್ಳುತ್ತೇನೆ ಮತ್ತು ತನ್ಮೂಲಕ ಅಂದು ಇದ್ದ, ನಾವೆಲ್ಲ ಬಹುವಾಗಿ ಕೇಳಿರುವ ರಾಮ ರಾಜ್ಯ ವನ್ನ ನೋಡುವ ಭಾಗ್ಯ ನಮ್ಮೆಲ್ಲರಿಗೆ ಸಿಗುವಂತೆ ಅಗಲಿ ಎಂದು ಆಶಿಸುತ್ತೇನೆ.

ಆತ್ಮೀಯರೇ , ಅತ್ಯಂತ ಕಡಿಮೆ ಸಮಯ ಹಾಗು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಬಹು ದೊಡ್ಡ ಎತ್ತರಕ್ಕೆ ಏರಿರುವ ನಮ್ಮ ಶ್ರೀ ಸಂಸ್ಥಾನ ದ ಮಾರ್ಗ ದರ್ಶನದಲ್ಲಿ ನಮ್ಮನ್ನು ನಾವು ಸಮಾಜದ ಹಿತಕ್ಕಾಗಿ ತೊಡಗಿಸಿಕೊಳ್ಳುವುದು ಇವತ್ತಿನ ಅತ್ಯಂತ ಮುಖ್ಯವಾದ ಅವಶ್ಯಕತೆ ಹಾಗು ಅದು ಸಮಾಜದ ಅನಿವಾರ್ಯತೆ ಕೂಡ. ತಮ್ಮದೆಲ್ಲವನ್ನ ಬಿಟ್ಟು ಹಾಗೂ “ಆಸೆ” ಎನ್ನುವುದನ್ನೇ ಆಶಿಸದೆ, ಇವತ್ತಿನ ಗುರು ಶ್ರೇಷ್ಠ ರಲ್ಲಿ ಒಬ್ಬರಾಗಿ, ನಿಜವಾದ ಅರ್ಥದಲ್ಲಿ ಸನ್ಯಾಸಿಗಳು, ಪರಿವ್ರಾಜಕರು ಹಾಗೂ ಜಗದ್ಗುರುಗಳು ಆಗಿ  ರಾರಾಜಿಸುತ್ತಿರುವ ನಮ್ಮ ಗುರುಗಳಿಗೆ ನಮ್ಮನ್ನೇ ನಾವು ಅರ್ಪಿಸುವ ಸಮಯ ಬಂದಿದೆ. ಈ ಸಮಾಜವನ್ನೇ ನಮ್ಮದು ಎಂದು ನಮಗೆಲ್ಲ ತಿಳಿ ಹೇಳುತ್ತಿರುವ ಶ್ರೀ ಗುರುಗಳನ್ನ ಅನ್ಯತಾ ಯೋಚಿಸದೆ ಅನುಸರಿಸೋಣ. ಬನ್ನಿ “ನಮ್ಮ” ಶ್ರೀ ಗುರುಗಳ ಮಾರ್ಗದರ್ಶನದಲ್ಲಿ ಸಮಾಜದ ಶ್ರೇಯಸ್ಸಿಗೆ ಕಟಿಬದ್ಧರಾಗೋಣ ತನ್ಮೂಲಕ ಸಮಾಜದ ಶ್ರೆಯಸ್ಸಿನಲ್ಲಿ ಅಳಿಲು ಸೇವೆಯ ಭಾಗ್ಯ ಪಡೆಯೋಣ.

ಧ್ಯಾಯೇನ್ಮಂತ್ರಮನೇಕಜನ್ಮಸುಕೃತೈಃ ಪ್ರಾಪ್ತೈಕಲಭ್ಯಂ ಶುಭಮ್
ಸಂತಾಪತ್ರಯನಾಶಕಂ ಹಿ ಸತತಂ ಮೋಕ್ಷಾರ್ಥಿಮುಕ್ತಿಪ್ರದಮ್ |
ಜಪ್ಯಂ ಯೋಗಿಜನೈರನನ್ಯಮನಸಾ ಕೈವಲ್ಯಸಂಸಿದ್ಧಯೇ
ನಿತ್ಯಂ ಜಾತ್ವಾ ಮನಸ್ತಕಲ್ಮಶರಹಂ ಶ್ರೀರಾಮನಾಮಾತ್ಮಕಮ್ ||

– ಬ್ರಹ್ಮೀಭೂತ ಶ್ರೀ ಶ್ರೀ ರಾಘವೇಂದ್ರಭಾರತೀಮಹಾಸ್ವಾಮಿಗಳವರಿಂದ ರಚಿತ

ತಮ್ಮವ,
ಪ್ರಸನ್ನ ಮಾವಿನಕುಳಿ
prasanna.mavinakuli@gmail.com

ಪರಿಚಯ:

ಶ್ರೀ ಪ್ರಸನ್ನ ಮಾವಿನಕುಳಿ

ಸಾಗರ ಸಮೀಪದ ಕರ್ಕಿಕೊಪ್ಪದ ಶ್ರೀ ಪ್ರಸನ್ನ ಮಾವಿನಕುಳಿಯವರು ಮೂಲತಃ ಕರೂರು ಸೀಮೆಯ ಮಾವಿನಕುಳಿಯವರು.
ವಿದ್ಯುತ್ ಯೋಜನೆಗಾಗಿ ನಿರ್ಮಿಸಿದ ಹಿರೆಭಾಸ್ಕರ ಅಣೆಕಟ್ಟಿಗೋಸ್ಕರ ಮಾವಿನಕುಳಿಯಯನ್ನು ಬಿಟ್ಟು ಇಕ್ಕೇರಿ ಸೀಮೆಯ ಕರ್ಕಿಕೊಪ್ಪಕ್ಕೆ ಬಂದು ಜೀವನ ಕಟ್ಟಿಗೊಂಡ ಮಾವಿನಕುಳಿ ಕುಟುಂಬದವರು. ಇವರು ಶ್ರೀ ಎಂ. ಸಿ ಮೃತ್ಯುಂಜಯ ರವರ ಪುತ್ರ. ‘ಮಾಹಿತಿ ತಂತ್ರಜ್ಞಾನ’ ಇಂಜಿನಿಯರಿಂಗ್ ಪದವಿ ವಿದ್ಯಾಭ್ಯಾಸ ಮಾಡಿ, ಸದ್ಯ ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಕಳೆದ ಕೆಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.  ಕಲಸದೊಂದಿಗೆ ತಮ್ಮ ಓದನ್ನೂ ಮುಂದುವರೆಸುತ್ತಿರುವ ಇವರು ಕಾನೂನು ಅಂತಿಮ ವರ್ಷದ ವಿದ್ಯಾರ್ಥಿಯೂ ಹೌದು.
ಶ್ರೀಯುತರ ಕುಟುಂಬ ಹಿರಿಯ ಶ್ರೀಗಳ ಕಾಲದಿಂದಲೇ ಶ್ರೀಮಠದ ಕಾರ್ಯಯೋಜನೆಗಳಲ್ಲಿ ಒಂದಾಗಿದ್ದು, ಶ್ರೀ ಸಂಸ್ಥಾನದ ಮಾರ್ಗದರ್ಶನದಲ್ಲಿ ಮುಂದುವರೆಯುವ ಮಹದಾಕಾಂಕ್ಷೆ ಉಳ್ಳವರಾಗಿದ್ದಾರೆ.


Facebook Comments Box