LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಸಾಮಾನ್ಯದಿಂದೆದ್ದ ಅಸಾಮಾನ್ಯ – ಶ್ರೀ ವೇಣು ವಿಘ್ನೇಶ

Author: ; Published On: ಸೋಮವಾರ, ಸೆಪ್ಟೆಂಬರ 27th, 2010;

Switch to language: ಕನ್ನಡ | English | हिंदी         Shortlink:

“ನಾವು ನೀರಿಗೆ ಇಳಿದಿದ್ದಾಗಿದೆ,
ನೀವುಗಳೂ ಜೊತೆಯಾದರೆ ಸಂತೋಷ,
ದಡ ಸೇರುವವರೆಗೆ ನಾವಂತೂ ವಿಶ್ರಮಿಸುವುದಿಲ್ಲ”

ಪೀಠಾರೋಹಣದ ದಿನ ಶ್ರೀಗಳವರು ಆಡಿದ ಮಾತುಗಳಿವು.

ಇನ್ನೂ 23-24ರ ಆಸುಪಾಸಿನ ಹರಯ.
ಮುಗ್ಧಮನದ ಯೌವನ. ಮನೆ ಬಿಟ್ಟು ಮಠ ಸೇರಿ ದೊಡ್ಡ ಜವಾಬ್ದಾರಿ ಹೊತ್ತ ಸಮಯ.
ಅದೇ ಹರಯದ ಉಳಿದವರಿಗಿರಬಹುದಾದ ಕನಸುಗಳನ್ನೆಲ್ಲ ಗಾಳಿಗೆ ತೂರಿ ಸಮಾಜಕ್ಕಾಗಿ ಏನನ್ನಾದರೂ ಸಾಧಿಸುತ್ತೇವೆ ಎನ್ನುವ ಪ್ರಬುದ್ಧ ಸ್ವಪ್ನದ ಮಾತುಗಳು ಹೀಗೆ ಪ್ರತಿಜ್ಞೆಯಂತೆ ಹೊರಬರುತ್ತಿತ್ತು.

ಮುಂದೆಯೇ ಕುಳಿತು ಕೇಳುತ್ತಿದ್ದ ನಾನು ತುಂಬ ಅತ್ತಿದ್ದೆ.
ಪಾಪ, ಈ ಚಿಕ್ಕ ವಯಸ್ಸಿನಲ್ಲಿ ಅವರು ಏನು ಮಾಡಿಯಾರು? ಸಮಾಜದ ಹಿರಿಯ ತಲೆಗಳ ನಡುವೆ ಸಿಕ್ಕಿ ತಮ್ಮ ಜೀವನವನ್ನೇ ಹಾಳುಮಾಡಿಕೊಂಡರಲ್ಲ ಎಂದೆಲ್ಲ ಏನೇನೋ ಯೋಚನೆಗಳು ಮನಸ್ಸಿನಲ್ಲಿ ಹರಿಯುತ್ತಿದ್ದವು.
ಶ್ರೀಮಠದ ಶಿಷ್ಯಪರಿಗ್ರಹ ಪ್ರಕ್ರಿಯೆಗೆ ಅವರ ಜಾತಕ ಕಳುಹಿಸಿದ ನಮ್ಮ ಮಾವನವರನ್ನು ಮನಸ್ಸಿನಲ್ಲಿಯೇ ಶಪಿಸಿದ್ದೆ.
ಅತ್ತೆ ಇನ್ನೊಂದಿಷ್ಟು ಹಠ ಹಿಡಿದಿದ್ದರೆ ಅವರ ಸಂನ್ಯಾಸಸ್ವೀಕಾರ ತಪ್ಪುತ್ತಿತ್ತೇನೋ ಎಂದೆಲ್ಲ ಅನಿಸುತ್ತಿತ್ತು. ಸಭೆಯ ಪ್ರಚಂಡ ಕರತಾಡನದಿಂದ ಗಲಿಬಿಲಿಗೊಂಡು ಯೋಚನೆಯಿಂದ ಹೊರಬಂದೆ.
ಶ್ರೀಗಳವರು ಒಂದೊಂದಾಗಿ ತಮ್ಮ ಕನಸುಗಳನ್ನು ಉದ್ಘೋಷಿಸುತ್ತಿದ್ದರು. ಇಂತಹದೊಂದರ ನೀರೀಕ್ಷೆಯೇ ಇಲ್ಲದೆ ಹೊಸ ಗುರುಗಳನ್ನು ನೋಡಿ ಹೋಗೋಣ ಎಂದುಕೊಂಡು ಬಂದಿದ್ದ ಜನ ಬೆರಗಾಗಿ ಹೋಗಿದ್ದರು.
ಈ ಮಾತುಗಳನ್ನು ಕೇಳಿ ನಾನೂ ರೋಮಾಂಚನಗೊಂಡವನಾದರೂ ಮನಸ್ಸು ಮಾತ್ರ ಶ್ರೀಗಳವರ ಮುಂದಿನ ಜೀವನದ ಕಷ್ಟಗಳನ್ನೇ ಎಣಿಸುತ್ತಿತ್ತು, ಕಣ್ಣೀರು ಹರಿಯುತ್ತಿತ್ತು.

ಅಬ್ಬ! ಏನೆಲ್ಲ ಸಾಧಿಸಿಬಿಟ್ಟರು ಅವರು. ಬುದ್ಧಿವಂತ ಸಮಾಜವೊಂದರ ಸಂಘಟನೆಯ ಜೇನುಗೂಡಿಗೆ ಕೈ ಹಾಕಿದ್ದರು.
ಹಗಲು ರಾತ್ರಿಗಳೆಂದಿಲ್ಲದೇ ಗ್ರಾಮ ಗ್ರಾಮಗಳನ್ನು ಸುತ್ತಿದರು. ‘ಪರಿಷತ್ತು’ ಎಂಬ ಅವರ ಕನಸಿನ ವಿಶಿಷ್ಟ ( unique ) ಸಂಘಟನೆಯನ್ನು ಕಟ್ಟಿದರು. ಕಂಡು ಕೇಳರಿಯದ ಹೊಸ ಹೊಸ ಹುದ್ದೆಗಳನ್ನು ಸೃಷ್ಟಿಸಿದರು.
ಶ್ರೀಮಂತ-ಬಡವ ಭೇದವಿಲ್ಲದೇ ಸಮರ್ಥರನ್ನು ನಾಯಕರನ್ನಾಗಿಸಿದರು. ಅಲ್ಲಿಯವರೆಗೆ ಮಠವೆಂದರೆ ಕೇವಲ ಪುರೋಹಿತರಿಗೆ, ಶ್ರೀಮಂತರಿಗೆ ಮೀಸಲು ಎನ್ನುವ ಜನ ಸಾಮಾನ್ಯರ ಅನಿಸಿಕೆಯನ್ನು ಸುಳ್ಳೆಂದು ತೋರಿಸಿದರು.
ಕೆಲವೇ ಸಮಯದಲ್ಲಿ ಬಡವ-ಶ್ರೀಮಂತ, ವಿದ್ಯಾವಂತ-ಅವಿದ್ಯಾವಂತ, ಆಸ್ತಿಕ-ನಾಸ್ತಿಕ ಎನ್ನುವ ಭೇದವಿಲ್ಲದೇ ಸಮುದ್ರೋಪಾದಿಯಲ್ಲಿ ಜನ ಮಠದೆಡೆಗೆ ಬರತೊಡಗಿದರು.
ಪುರುಷರಷ್ಟೇ ಅಲ್ಲದೇ ಮಹಿಳೆಯರೂ ಮಠದೆಡೆಗೆ ಮುಖ ಮಾಡಿದರು. ಅದಕ್ಕಿಂತ ವಿಶೇಷವೆಂದರೆ ದೇವರು, ಧರ್ಮ, ಮಠ, ಗುರುಗಳನ್ನು ಒಪ್ಪದ ಯುವಕರು ಗುಂಪು ಗುಂಪಾಗಿ ಮಠಕ್ಕೆ ಎಡತಾಗತೊಡಗಿದರು.
ಅವರನ್ನು ಬಿಡಿ ಮಕ್ಕಳೂ ‘ಗುರುಗಳು ಗುರುಗಳು’ ಎಂದು ಜಪಿಸತೊಡಗಿದರು.

ಮಕ್ಕಳೆಂದಾಗ ನಾವು ಮಕ್ಕಳಾಗಿದ್ದ ದಿನಗಳು ನೆನಪಾಗುತ್ತವೆ.
ನಮ್ಮ ಬಾಲ್ಯವೆಂದರೆ, ಅದು ನಾವು ನಾಲ್ಕು ಜನರ ನಿರಂತರ ಒಡನಾಟವೇ ಆಗಿತ್ತು. ( ಪೂರ್ವಾಶ್ರಮಲ್ಲಿದ್ದ ಗುರುಗಳು, ನನ್ನ ಅಣ್ಣಂದಿರಾದ ಜಗದೀಶ ಮತ್ತು ಕೃಪೇಶ ಹಾಗೂ ನಾನು) ಆಟ, ಪಾಠ, ನೋಟ ಎಲ್ಲವೂ ನಮ್ಮ ಕೂಟವೇ ಆಗಿತ್ತು.
ಸರಿಸುಮಾರು ಒಂದೇ ವಯಸ್ಸಿನ ನಾಲ್ವರು ಮಕ್ಕಳು ಮನೆಯಲ್ಲಿದ್ದರೆ ಕೇಳಬೇಕೇ? ಶಾಲೆಯೂ ಇಂದಿನಂತೆ ಟೆಸ್ಟ್, ಅಸೈನ್ ಮೆಂಟ್, ಸೆಮಿಸ್ಟರ್, ಹೋಮ್ ವರ್ಕ್, ಟ್ಯೂಷನ್ ಇವುಗಳಿಂದ ಹೊರತಾಗಿದ್ದರಿಂದ ಪಠ್ಯೇತರ ಚಟುವಟಿಕೆಗಳಿಗೆ ತುಂಬಾ ಸಮಯವೂ ಸಿಕ್ಕುತ್ತಿತ್ತು.
ಮರಕೋತಿ, ಚಿನ್ನಿದಾಂಡು, ಸಿಕ್ಕವರ ಚೆಂಡು, ಕಣ್ಣೆ ಕಟ್ಟೆ, ಕಂಬದ ಆಟ, ಕೋಲು ಕಲ್ಲು……… ಎಷ್ಟೊಂದು ಆಟಗಳು. ಕೊನೆಗೆ ನಗರದಿಂದ ಕ್ರಿಕೆಟ್, ಕೇರಂ, ಚೆಸ್ ಗಳು ಆಮದಾದವು.
ಇವುಗಳಲ್ಲಿ ಚೆಸ್ ಗುರುಗಳ ನೆಚ್ಚಿನ ಆಟವಾಗಿತ್ತು.
ಇದೆಲ್ಲದರ ನಡುವೆ ಶ್ರೀಗಳವರು ಸಂಧ್ಯಾವಂದನೆಯನ್ನು ಬಿಟ್ಟವರೇ ಅಲ್ಲ. ಆಟದೆಡೆಗೆ ಅದೆಷ್ಟು ಸೆಳೆತವಿದ್ದರೂ ಸಮಯಕ್ಕೆ ಸರಿಯಾಗಿ ಗಂಟೆಗಳ ಕಾಲ ಜಪಮಾಡುತ್ತಾ ಕುಳಿತಿರುತ್ತಿದ್ದರು.
ನಮ್ಮೆಲ್ಲರಿಗಿಂತ ಹೆಚ್ಚು ಸಮಯ ದೇವರ ಮನೆಯಲ್ಲಿ ಕಳೆಯುತ್ತಿದ್ದವರು ಅವರೇ. (of course ನನಗೆ ಸಂಧ್ಯಾವಂದನೆ ಕಲಿಸಿದವರೂ ಅವರೇ).

ಆಗ ಬರುತಿದ್ದ ಪ್ರಜಾಮತ, ಸುಧಾ, ತರಂಗಗಳ ಖಾಯಂ ಓದುಗರಾಗಿದ್ದೆವು. ಪುಸ್ತಕಗಳನ್ನ ಓದುತ್ತಿದ್ದರೆ ಶ್ರೀಗಳಿಗೆ ವಿಚಿತ್ರ ಏಕಾಗ್ರತೆ.
ಊಟ, ತಿಂಡಿಗೆ ಕರೆದರೂ ಬರಲಾರದಷ್ಟು ಅದರಲ್ಲಿ ಮುಳುಗಿರುತ್ತಿದ್ದರು. ಮೈ ಮುಟ್ಟಿ ಕರೆದರೂ ಎಷ್ಟೋ ಬಾರಿ ಅವರಿಗೆ ಕರೆದದ್ದು ತಿಳಿಯುತ್ತಲೇ ಇರಲಿಲ್ಲ.
ಅಜ್ಜನಿಗಾಗಿ ಮಾವ ತಂದಿದ್ದ ಮಹಾಭಾರತದ ೩೨ ಸಂಪುಟಗಳ ಸಾವಿರ ಸಾವಿರ ಪುಟಗಳನ್ನು ಒಂದಕ್ಷರವೂ ಬಿಡದಂತೆ ಅವರು ಓದಿ ಮುಗಿಸಿದ್ದರು.
ಆಗ ಅವರಿಗೆ ೧೨-೧೩ ವರ್ಷಗಳಷ್ಟೇ. ಅದರಲ್ಲಿನ ರೋಚಕ ಕಥೆಗಳನ್ನು ಆಕರ್ಷಕವಾಗಿ ಹೇಳುತ್ತಿದ್ದರು.

ನಾವು ಯಕ್ಷಗಾನದ ಕಟ್ಟಾಭಿಮಾನಿಗಳಾಗಿದ್ದೆವು. ರಾತ್ರಿವೇಳೆ ಕಾಡಿನ ದಾರಿಯಲ್ಲಿ ಸುಮಾರು ೪-೫ ಮೈಲಿ ನಡೆದು ಹೋಗಿ ಇಡೀ ರಾತ್ರಿ ನಡೆಯುವ ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಿದ್ದೆವು.
ರಂಗಸ್ಥಳದ ತೀರ ಹತ್ತಿರದ ‘ನೆಲ’ ನಮ್ಮ ಖಾಯಂ ಜಾಗ. ಬೆಳಗ್ಗೆ ಮನೆಗೆ ಬಂದು ನಮ್ಮ ಅಣಕು ಪ್ರದರ್ಶನವಿರುತ್ತಿತ್ತು.
ಅವರ ೧೩ನೇ ವಯಸ್ಸಿನಲ್ಲಿಯೇ ಯಕ್ಷಗಾನದಲ್ಲಿ ಪಾತ್ರ ಹಾಕಿದ್ದರು. ಯಕ್ಷಗಾನವೇದಿಕೆಯೆಂದರೆ ಯಾವುದೋ ಅನೂಹ್ಯ ಲೋಕವೆಂದು ನಾವಿನ್ನು ಬೆರಗುಗಣ್ಣಿನಿಂದ ನೋಡುತ್ತಿರುವಾಗಲೇ ಅವರು ನಾರದನಾಗಿ ರಂಗಪ್ರವೇಶ ಮಾಡಿಯಾಗಿತ್ತು.
ಅದ್ಭುತ ಮಾತು, ಕುಣಿತ ಅಂದು ಅವರದಾಗಿತ್ತು.
ಕಲೆಯೆ ಕುರಿತಾದ ಅವರ ಅಂದಿನ ಆ ಅಭಿಮಾನದಿಂದಾಗಿಯೇ ಇಂದು ಮಠದ ಪೋಷಣೆಯಲ್ಲಿ ಕಲೆ ಮತ್ತು ಕಲಾವಿದರುಗಳಿಗೆ ಹೊಸ ಬದುಕು ಸಿಕ್ಕಿದೆ.
ಮಠದಿಂದ ಮಾರುದೂರದಲ್ಲಿದ್ದಂತಿದ್ದ ಯಕ್ಷಗಾನ, ನಾಟಕ, ಸಂಗೀತ ಇವುಗಳು ಮಠದ ದಿನದ ಚಟುವಟಿಕೆಗಳಂತಾಗಿ ಬಿಟ್ಟಿವೆ. ಮಹಾನ್ ಮಹಾನ್ ಕಲಾವಿದರಿಂದ ಹಿಡಿದು ಸಾಧಾರಣ ಕಲಾವಿದರೂ ಕೂಡ ತನ್ನದೊಂದು ಪ್ರದರ್ಶನವನ್ನು ಗುರುಗಳ ಮುಂದೆ ಯಾವಾಗ ಪ್ರಸ್ತುತ ಪಡಿಸುವುದೆಂದು ಕಾಯುತ್ತಿರುವಂತಾಗಿದೆ.
ಕಲೆಗಳಿಗೆ ಕಾಯಕಲ್ಪವೇ ಸಿಕ್ಕಿದೆ.

ಓದುವ ವಿಷಯದಲ್ಲಿ, ಪುರಾಣಗಳ ವಿಷಯದಲ್ಲಿ ಅವರಿಗೆ ತುಂಬಾ ನೆನಪಿರುತ್ತಿತ್ತು.
ಆದರೆ ಇನ್ನು ಕೆಲವು ವಿಷಯಗಳಲ್ಲಿ ಅವರು ಮರೆಗುಳಿ ಫ್ರೊಫೆಸರ್ ಆಗಿದ್ದರು. ಪರಿಚಯದವರು ಸಿಕ್ಕಾಗ ಅವರ ಹೆಸರು ನೆನಪಾಗದೇ ತುಂಬಾ ಕಷ್ಟಪಟ್ಟು ಹಲವು ಮುಜುಗರದ ಪ್ರಸಂಗಗಳನ್ನು ಅವರು ಅನುಭವಿಸಿದ್ದುಂಟು.
ಒಮ್ಮೆ ಹಾಗೆಯೇ ಆಗಿತ್ತು. ಅಂದು ಶನಿವಾರ. ಬೆಳಗಿನ ಸಮಯ ಮಾತ್ರ ಶಾಲೆ. ಮಧ್ಯಾಹ್ನ ಊಟವಾದ ಮೇಲೆ ಮಕ್ಕಳ ತುಂಟಾಟ ತಡೆಯಲಾಗದೇ ಹಿರಿಯರು ನಮ್ಮನ್ನು ಮಲಗಿಸಿದ್ದರು.
ಮಲಗಿ ಎದ್ದ ಗುರುಗಳು ಬೆಳಗಿನ ಅಭ್ಯಾಸದಂತೆ ದೇವರಿಗೆ ಹೂ ಕೀಳಲು ಹೊರಟು ಬಿಟ್ಟಿದ್ದರು.

ಆದರೆ ಈಗ ಅದೆಂತಹ ಜ್ಞಾಪಕಶಕ್ತಿ ಅವರದ್ದು. ಅದೆಷ್ಟು ಸಾವಿರ ಜನರನ್ನು ಹೆಸರು ಹೇಳಿ ಮಾತನಾಡಿಸಬಲ್ಲರು.
ಮೊದಲೇ ಫೀಡ್ ಮಾಡಿ ಇಟ್ಟಿದ್ದ ಪೂರ್ಣ ವಿವರವನ್ನು ಹೆಸರನ್ನು ಕ್ಲಿಕ್ಕಿಸಿದೊಡನೆಯೇ ಪರದೆಯ ಮೇಲೆ ತೆರೆದಿಡುವ computer ನಂತೆ ವ್ಯಕ್ತಿಯ ಮುಖವನ್ನು ಕಂಡೊಡನೆಯೇ ಅವನ ಕಷ್ಟ, ನಷ್ಟ, ಸುಖ, ಲಾಭ, ಉದ್ದೇಶ, ಸಂಬಂಧ, ಸಮಸ್ಯೆ – ಅವನ ಮೊದಲ ಭೇಟಿಗಳಲ್ಲಿನ ವಿಷಯಗಳನ್ನೆಲ್ಲ ಹೇಳಬಲ್ಲರು.
ಅವರು ಚಿಕ್ಕವರಿದ್ದಾಗ ಒಮ್ಮೆ ನನ್ನ ಮಾವನ ಮಗನೊಬ್ಬನನ್ನು ಕೆಳಗಿನಿಂದ ಮೇಲೆತ್ತಿ ನೆಲಕ್ಕೆ ಬಿಸಾಡಿದ್ದರು. ಅವರಿಗೆ ಸಿಟ್ಟು ಬಹಳ ಬೇಗ ಬರುತ್ತಿತ್ತು.
ಈಗ ಅದೆಷ್ಟು ತಾಳ್ಮೆ ಅವರಿಗೆ. ಸದಾ ಹಸನ್ಮುಖಿ. ಯಾರಲ್ಲೂ ಸಿಟ್ಟು ಮಾಡಿದ್ದು ನಾನಂತೂ ಕಂಡಿಲ್ಲ. ಪ್ರತಿದಿನ ಹತ್ತು ಹಲವು ಜನ (ಕೆಲಸ ಇದ್ದವರು ಹಾಗು ಇಲ್ಲದವರೂ!) ಭೇಟಿ ಮಾಡಿ ಇಲ್ಲದಿರುವ ಸಮಸ್ಯೆಗಳನ್ನೆಲ್ಲ ಶ್ರೀಗಳವರಿಗೆ ಸಮರ್ಪಿಸಿ ಹೋಗುತ್ತಿರುತ್ತಾರೆ.
ಆದರೆ ಶ್ರೀಗಳು ತಮ್ಮ ಬಳಿ ಬಂದ ಎಲ್ಲರನ್ನೂ ಸಹನೆಯಿಂದಲೇ ಮಾತನಾಡಿಸಿ ಅವರು ಹೇಳುವುದಷ್ಟನ್ನೂ ಕೇಳಿ ಅವರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾರೆ.
ಅದನ್ನು ಕಂಡಾಗ ಅವರೊಂದು ತಾಳ್ಮೆಯ ಪರ್ವತವೇನೋ ಅನ್ನಿಸುತ್ತದೆ.

ಬಾಲ್ಯದಲ್ಲಿ ಅವರಿಗೆ ನಿಂತಲ್ಲಿ ನಿಂತು ಅಭ್ಯಾಸವಿರಲಿಲ್ಲ. ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ನಡೆದಾಡುತ್ತಲೇ ಮಾತನಾಡುತ್ತಿದ್ದರು.
ಈ ಅಭ್ಯಾಸವನ್ನು ನಿಲ್ಲಿಸಲು ಹಿರಿಯರು ಹರಸಾಹಸ ಪಡುತ್ತಿದ್ದರು. ಕೈ ಹಿಡಿದು ನಿಲ್ಲಿಸಿ ಈಗ ಮಾತನಾಡು ಎನ್ನುತ್ತಿದ್ದರು. ಆದರೆ ಸಂಧ್ಯಾವಂದನೆ ಮಾಡುವಾಗಲೂ ಪುಸ್ತಕ ಓದುವಾಗಲೂ ಎಷ್ಟು ಹೊತ್ತಾದರೂ ಒಂದೇ ಕಡೆ ಕುಳಿತಿರುತ್ತಿದ್ದರು.
ಒಂದು ದೃಷ್ಟಿಯಿಂದ ಈಗಲೂ ಹಾಗೆಯೇ. ಪೀಠದಲ್ಲಿ ದಿನವಿಡೀ ಕುಳಿತಿರಬಲ್ಲರು. ಹಾಗೆಯೇ ನೂರು ಸಾವಿರ ಮೈಲುಗಳನ್ನು ಸಂಚರಿಸುತ್ತಲೂ ಇರಬಲ್ಲರು.

ಹತ್ತಾರು ಯೋಜನೆಗಳು, ನೂರಾರು ಸಂಸ್ಥೆಗಳು, ಸಾವಿರಾರು ಫಲಾನುಭವಿಗಳು, ಲಕ್ಷಾಂತರ ಕನಸುಗಳು, ಕೋಟ್ಯಂತರ ಮೊತ್ತದ ವಿನಿಯೋಗ……
ಹೀಗೆ ಸಾಗಿದೆ ಇಂದು ಶ್ರೀಗಳ ಕನಸಿನ ಸಾಕಾರದ ಯತ್ನ.
ಅವರ ಹಗಲುಗಳು, ರಾತ್ರಿಗಳು, ದಿನಗಳು, ವಾರಗಳು, ತಿಂಗಳುಗಳು, ವರ್ಷಗಳು ಒಟ್ಟಿನಲ್ಲಿ ಅವರ ಇಡೀ ಬದುಕೇ ಸಮಾಜಕ್ಕೆಂದು ಮೀಸಲಾಗಿದೆ. ಅವರು ಉಸಿರಾಟವನ್ನೂ ಕೂಡ ಸ್ವಂತಕ್ಕಾಗಿ ಮಾಡುತ್ತಿಲ್ಲ.
ಎಲ್ಲವೂ ನಮಗಾಗಿ, ನಮ್ಮ ಒಳಿತಿಗಾಗಿ…..

ಆದರೆ ನಾವೆಷ್ಟು ತೊಡಗಿಕೊಂಡಿದ್ದೇವೆ?
ಶ್ರೀಗಳ ಕಾರ್ಯಗಳಿಗೆ ನಾವೆಷ್ಟು ಸಹಕಾರ ನೀಡುತ್ತಿದ್ದೇವೆ? ಎಂದು ನಮ್ಮನ್ನೇ ನಾವು ಕೇಳಿಕೊಂಡರೆ, ಆತ್ಮವಿಮರ್ಶೆಗೆ ತೊಡಗಿಕೊಂಡರೆ ನಮ್ಮ ನಿಜವಾದ ಸ್ವರೂಪದರ್ಶನ ನಮಗಾಗುತ್ತದೆ.

ಹೀಗಾಗಬಾರದು; ನಾವು ಹೀಗಿರಬಾರದು…

ಫೋಟೋಗಳು:

 

ಲೇಖಕರ ಪರಿಚಯ:
ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ವೇಣುವಿಘ್ನೇಶ ಅವರು ಶ್ರೀಮಠದ ನಿಷ್ಠಾವಂತ ಕಾರ್ಯಕರ್ತರು.
ಬೆಂಗಳೂರು ಯುವಪರಿಷತ್ ಅಧ್ಯಕ್ಷರಾಗಿ, ಅವಲಂಬನ ಕಾರ್ಯಕರ್ತರಾಗಿ, ಕೇಂದ್ರ ಯುವಪರಿಷತ್ ಕೋಶಾಧ್ಯಕ್ಷರಾಗಿ ಗುರುಸೇವೆ ಮಾಡಿದವರು.
ಪ್ರಕೃತ ಶ್ರೀಮಠದ ಶ್ರೀಸೀತಾರಾಮಚಂದ್ರ ಪ್ರತಿಷ್ಠಾನಮ್ ಚದರವಳ್ಳಿ ಇದರ ಟ್ರಸ್ಟಿಯಾಗಿ, ರಾಜಾ ಮಲ್ಲೇಶ್ವರ ವಲಯದ ಕೋಶಾಧ್ಯಕ್ಷರಾಗಿ ಗುರುಸೇವೆಯನ್ನು ಮುಂದುವರಿಸಿದ್ದಾರೆ.
ಅಖಿಲಹವ್ಯಕ ಮಹಾಸಭೆಯ ಕೋಶಾಧ್ಯಕ್ಷರಾಗಿ ಸಮಾಜಸೇವಾ ನಿರತರೂ ಆಗಿರುವ ಇವರು ಸಾಗರದ ಶ್ರೀಚಿದಾನಂದ ಭಟ್ ಮತ್ತು ಶ್ರೀಮತಿ ಮಂಗಳಗೌರಿಯವರ ಪುತ್ರರು.

21 Responses to ಸಾಮಾನ್ಯದಿಂದೆದ್ದ ಅಸಾಮಾನ್ಯ – ಶ್ರೀ ವೇಣು ವಿಘ್ನೇಶ

 1. nanda kishora

  ಬಹಳ ಚೆನ್ನಾಗಿದೆ ಲೇಖನ… ನಮ್ಮ ಗುರುಗಳ ಪೂರ್ವಾಶ್ರಮದ ಬದುಕಿನ- ಬಾಲ್ಯದ ಪರಿಚಯ ಮಾದಿಕೊಟ್ಟದ್ದಕ್ಕಾಗಿ ಧನ್ಯವಾದ..

  [Reply]

 2. Raghavendra Narayana

  Beautiful, just beautiful..

  [Reply]

 3. sriharsha.jois

  ಧನ್ಯರು ಒಡನಾಡಿಗಳಾಗಿದ್ದ ನೀವುಗಳೆಲ್ಲರೂ…..

  ನಾವಿಂದು ಉಸಿರಾಡುತ್ತಿರುವುದೇ ಅಂದು ಅವರು ನೀರಿಗಿಳಿದಿದ್ದರಿಂದ…!

  ಆದರೆ…ನಾವಿಂದು ಮಾಡುತ್ತಿರುವುದೇನು ವೇಣೂ…?

  ಉಸಿರು ಕೊಟ್ಟವರನ್ನೇ ಮುಳುಗಿಸಲು ಹೊರಟೆವು…!

  ತಾಯಿ ಕೊರಳನ್ನು ಕೊಯ್ಯುವುದಕ್ಕೂ..ಈ ಕಾರ್ಯಕ್ಕೂ ಏನು ವ್ಯತ್ಯಾಸವಿದೆ..?

  ಆದರೂ ಆ ಶಕ್ತಿ ನಮ್ಮನ್ನು ಕೈಬಿಡದೆ ನಡೆಸುತ್ತಿದೆಯೆಂದರೆ….

  ಅದೆಂತಹ ಕರುಣಾಮೂರ್ತಿಯೋ…..

  ವೇಣೂ…..ನಾವೂ ಧನ್ಯರಲ್ಲವೇ….ಹೇಳು….

  [Reply]

 4. Ashwini

  ‘ಅಮೃತಸಾಗರ’ದಲ್ಲಿ ಇಳಿದು ‘ಅಮೃತತ್ವಕ್ಕೇರಿ’ ಜೀವಕೋಟಿಯನ್ನುದ್ದರಿಸುತ್ತಿರುವ ಮಾನವರೂಪಿ ‘ಮಾಧವರವರು’.

  ಮಾನವ ಜನ್ಮ ಸಹಜ ‘ನಡೆ-ನುಡಿ’ ಮುಗಿಸಿ ,
  ‘ನಡಿ-ನುಡಿಯಲ್ಲು’ ನಿರ್ಮಲ ಪ್ರೇಮ ವಿರಿಸಿ’
  ‘ತಿದ್ದಿ-ತೀಡಿ’ ಸಲಹುತಿರುವ ‘ಮಹಾತಾಯಿಯವರು’.

  ‘ನಮ್ಮ ಗುರುಗಳ’ ಪೂರ್ವಾಶ್ರಮದ ‘ದರ್ಶನ ಲೇಖನ’ ಸುಂದರವಾಗಿ ಮೂಡಿಬಂದಿದೆ ವೇಣು ಅಣ್ಣ.

  ‘ಅವತಾರಗಳು’ ‘ಪ್ರವಾಹದಂತೆ’ ,
  ‘ ದೊಡ್ಡ ಕೂಪ ‘ ಗಳನ್ನು ಮುಚ್ಚಬಲ್ಲದು.
  ‘ರಭಸ’ ನೋಡಿ ‘ದೂರ’ ನಿಂತರೆ ‘ಸಾಗರ ಸೇರಲಾಗದು’,
  ‘ಹಿಂಬಾಲಿಸಿದರೆ ‘ ಮತ್ತೆ ‘ಹಿಂದಿರುಗಬೇಕಿಲ್ಲ’.

  ಅನಂತ ಪ್ರಣಾಮಗಳು ಗುರುದೇವ.

  [Reply]

 5. Anuradha Parvathi

  ’ನಾವೆಷ್ಟು ತೊಡಗಿಕೊಂಡಿದ್ದೇವೆ……’. ಹೌದು, ನಿಜ. ಕಣ್ಣಲ್ಲಿ ನೀರು ಬಂತು. ಇಂಥಾ ಗುರುಗಳ ಆದೇಶವನ್ನು ನಾವೆಷ್ಟು ಪಾಲಿಸುತಿದ್ದೇವೆ?

  ಲೇಖನ ತುಂಬಾ ತುಂಬಾ ತುಂಬಾ ಚೆನ್ನಾಗಿತ್ತು.

  [Reply]

 6. yajneshbhat

  ತುಂಬಾ ಚೆನ್ನಾಗಿ ಬಂದಿದೆ ಲೇಖನ. ನಮ್ಮಲ್ಲಿ ಚಿಂತನೆಯನ್ನು ಉಂಟುಮಾಡಿ ಸಮಾಜಮುಖಿ ಕೆಲಸಗಳತ್ತ ಕೊಂಡೊಯ್ಯುತ್ತದೆ.

  [Reply]

 7. Suma Nadahalli

  ಸಾಮಾನ್ಯದಿಂದ ಅಸಾಮಾನ್ಯದೆಡೆಗೆ …ನಿಜವಾಗಿಯೂ ಅರ್ಥಪೂರ್ಣ, ಭಾವಪೂರ್ಣ …..
  ತನ್ನ ಕಣ್ಣನ್ನೇ ನಂಬಲು ಅನುಮಾನ ಪಟ್ಟಂತಹ ಸ್ಥಿತಿ…..ಜೀವಂತ ಸಾಕ್ಷಿ ಕೂಡ …..!!!!!!!!!!!!!!!!

  [Reply]

 8. gopalakrishna pakalakunja

  ಸಾಮಾನ್ಯದಿಂದೆದ್ದ ಅಸಾಮನ್ಯ ? ?

  ” ಬೆಳೆಯ ಸಿರಿ ಮೊಳಕೆಯಲ್ಲಿ” ಎಂಬಂತೆ , ಪೂರ್ವಾಶ್ರಮದಲ್ಲಿಯೇ ಅಭಿವ್ಯಕ್ತ ಗೊಂಡಿದೆ ಈ ದಿವ್ಯ ವ್ಯಕ್ತಿತ್ವ ಎಂದೆನಿಸಿತು.

  ಸೌತೆ ಹೂ ಅರಳಿದಷ್ತೆಲ್ಲ ಮಿಡಿ ಯಾಗುವುದಿಲ್ಲ….ತೊಂಡೆ ಮಿಡಿ ಹೂ ಸಮೇತ ಬರುವಂತೆ…..ಪರಿ ಪೂರ್ಣತೆಯನ್ನು ಹೊಂದಿದ

  ದಿವ್ಯಾತ್ಮರು ಪತಿತತೋದ್ದಾರಕ್ಕಾಗಿ ಭುವಿಗಿಳಿದು ಬಂದವರು, ತಮ್ಮ ಪ್ರತಿ ನಡೆನುಡಿಯಲ್ಲಿ ತಮ್ಮದೇಆದ ಚಾಪನ್ನು

  ತೋರಿಸುತ್ತಾರೆ. ಶ್ರೀ ರಾಮ , ಶ್ರೀ ಕೃಷ್ಣ, ಆದಿಶಂಕರರು….ಶ್ರೀ ಸಂಸ್ಥಾನ….

  [Reply]

 9. Sharada Jayagovind

  Dear Venu

  Thank you so much for the wonderful piece. Your style of narration is a classic example of good biography…right mix of information, emotion and analysis.

  Samsthana began to run infront of our eyes as a divine child..

  [Reply]

 10. Jayarama Korikkar

  Dear Shri. Venu,

  Thanks a lot for sharing the woderful bits of experience which you have cherished all these years. Wonderful.. it gave us interesting insights into the unknown.. “rushee moola”?

  [Reply]

 11. ramesh.k.l

  ಹರೇ ರಾಮ
  ಲೇಖನ ತು೦ಬಾ…..ಚೆನ್ನಾಗಿ ಬರೆದಿದ್ದೀರಿ ಬಾಲ್ಯದ ನೆನಪು … ವ್ಹಾ!…. ಅದೆಷ್ತು…ಸ೦ತಸ…ಆಹಾ
  ಶ್ರೀಸ೦ಸ್ಠಾನದ ಪಾದಗಳಿಗೆ ನನ್ನ ನಮನಗಳು

  [Reply]

 12. Raghavendra Narayana

  “ಸಾಮಾನ್ಯದಿ೦ದೆದ್ದ ಅಸಾಮಾನ್ಯ” – ಅತೀ ಸಾಮಾನ್ಯವಾಗಿ ಎದ್ದ ಅಸಾಮಾನ್ಯ, ಆದರೆ ಸಾಮಾನ್ಯರೊಳು ಸಾಮಾನ್ಯ..?? ಅನೇಕ ಸಾಮಾನ್ಯರನ್ನು ಅಸಾಮಾನ್ಯರನ್ನಾಗಿ ಮಾಡುತ್ತಿರುವ, ಆತ್ಮ ದರ್ಶನ ಮಾಡಿಸುತ್ತಿರುವ, ಸಮಾಜದಲ್ಲಿರುವ ಸ೦ಕುಚಿತ ಭಾವಗಳ ಕಡಿಮೆ ಮಾಡಿ ವಿಕಾಸದತ್ತ ಚಿತ್ತವ ಬದಲಿಸಿರುವ, ಅಸಾಮಾನ್ಯರಲ್ಲಿ ಅಸಾಮಾನ್ಯ..?? ಖ೦ಡಿತ ಹೌದು.
  .
  ಎಲ್ಲವನ್ನು ಪಡೆದುಕೊ೦ಡವರು ಮಾಡುವ ಕೆಲಸವೇನು? ತಮ್ಮಲಿರುವುದನ್ನು ಇರದವರಿಗೆ ಹ೦ಚುವುದು.
  ಹ೦ಚಿದರೆ ಮುಗಿಯದ, ಹ೦ಚಿದರೆ ಬೆಳೆಯುವ ಪ್ರಕಾಶ-ಸಾಗರದಲ್ಲಿ ಮೊಗೆ-ಮೊಗೆದು ತೆಗೆದುಕೊ೦ಡುಹೋಗುತ್ತಿರುವರು. ಪ್ರಕಾಶ-ಸಾಗರವ ನೋಡಿ ದುಖಃ ಪಡುವುದು೦ಟೆ, ಅದನ್ನು ಕೊಡುತ್ತಿರುವ ತೆಗೆದುಕೊಳ್ಳುತ್ತಿರುವ ದೃಶ್ಯವ ನೋಡಿ ಆನ೦ದ ಪಡದಿರೆ..??
  .
  ಎಲ್ಲರೂ ಆನ೦ದ ಹುಡುಕುತ್ತಿರುವರು, ಕೆಲವರು ರುಚಿಹಿಡಿದು ಶಾಶ್ವತ-ಆನ೦ದ-ವನದೊಳು ನಲಿಯುತ್ತಿರುವರು, ಆ ಆನ೦ದವ ಹ೦ಚಲು ತವಕಿಸುತ್ತಿರುವರು. ಗುರುವೇ, ಅಶಾಶ್ವತ ಕ್ಷಣಿಕ ಆನ೦ದದಿ೦ದ ಶಾಶ್ವತ ಆನ೦ದ ಮರದ ನೆರಳೊಲು ಎನ್ನ ಕೂಡಿಸು, ಆಶೀರ್ವದಿಸು, ಸಕಲವನ್ನು ಮನ್ನಿಸು, ಸಕಲವನ್ನು ಮರೆಸು.
  .
  ಶ್ರೀ ಗುರುಭ್ಯೋ ನಮಃ

  [Reply]

 13. Madhu Dodderi

  ಪ್ರೀಯ ವೇಣು ಅಣ್ಣಾ…
  ರಾಶಿ ಚಂದ ಬರದ್ದೆ…
  ಆದರೆ ಸಂಸ್ಥಾನ ಹಿಂಗಿದ್ದಿದ್ದ ಅಂತ ನಂಬಕ್ಕೆ ಕಷ್ಟ ಆಗ್ತಾ ಇದ್ದು … :)
  ಇಂಥದ್ದೊಂದು ಅನೂಹ್ಯ ಪರಿಚಯಕ್ಕಾಗಿ ಧನ್ಯವಾದಗಳು…
  >>ಮಧು

  [Reply]

 14. beleyur venu

  dear venu anna

  hare rama

  [Reply]

 15. seetharama bhat

  Hareraam,

  ನೀವಿರುವಾಗ ಹೊಳೆಯೇನು ಚಳಿಯಾಗದು
  ಬಳಿಯಿರುವಾಗ ಬಳಲಿಕೆಯು ತಿಳಿಯದು-ಗುರುದೇವಾ

  ವೇಣು ವಿ ನಾದ ಇ೦ಪಾಗಿದೆ,ತ೦ಪಾಗಿದೆ,ಕ೦ಪಾಗಿದೆ ಸೊ೦ಪಾಗಿರಲಿ ಮು೦ದೆ.

  ಹರೇರಾಮ್

  [Reply]

 16. chs bhat

  ವೇಣು, ನಾನು ಲೇಖನವನ್ನು ಓದುವುದರಲ್ಲಿ ತಡವಾಯ್ತು. ಲೇಖನ ತುಂಬಾ ಚೆನ್ನಾಗಿ ಬಂದಿದೆ. ಶ್ರೀಗಳ ಪೂರ್ವಾಶ್ರಮದ ಬದುಕಿನ ಬಗ್ಗೆ ನಮಗೆ ತಿಳಿದಿರದಿದ್ದ ಹಲವು ವಿಷಯಗಳನ್ನು ತಿಳಿಯಲು ಲೇಖನ ಸಹಕಾರಿಯಾಯ್ತು. ನೀವು ನಾಲ್ಕು ಜನ ನಿಂತಿರುವ ಫೋಟೋ ಅಂತೂ ಯಾವುದೋ blck and white film ನ ಒಂದು ದೃಶ್ಯ ಇದ್ದ ಹಾಗಿದೆ! ಶ್ರೀಗಳು ಯಕ್ಷಗಾನದಲ್ಲಿ ಪಾತ್ರಧಾರಿಗಳಾಗಿದ್ದರು ಎಂಬುದು ತಿಳಿದಾಗ ತುಂಬಾ ಖುಷಿ ಯಾಯ್ತು. ಶ್ರೀಗಳಿಗೆ ತುಂಬಾ ಸಿಟ್ಟು ಬರುತ್ತಿತ್ತು ಎಂಬುವುದನ್ನೂ ನಂಬುವುದಕ್ಕಾಗುತ್ತಿಲ್ಲ.(ಅದಕ್ಕೇ ಇರಬೇಕೇನೋ ಸಂನ್ಯಾಸ ಸ್ವೀಕಾರವೆಂದರೆ ಮರು ಜನ್ಮ ಪಡೆದಂತೆ ಎನ್ನುವುದು) ಶ್ರೀಗಳ ಸಂನ್ಯಾಸ ಸ್ವೀಕಾರದ ಕ್ಷಣಗಳ ನಿನ್ನ ಭಾವನೆಗಳನ್ನು ಓದಿದಾಗ ಒಮ್ಮೆ ಮನಸ್ಸು ತುಂಬಾ ಭಾರವಾಯ್ತು. ನಿನ್ನ ಅತ್ತೆಯವರ ಚಿತ್ರ ಕಣ್ಣ ಮುಂದೆ ಬಂತು.
  ಜಗದ್ಗುರುಗಳನ್ನು ಕೊಟ್ಟ ಚದುರಹಳ್ಳಿ ಧನ್ಯ,ಧನ್ಯ,ಧನ್ಯ! –ಸಂಸನಾಭ

  [Reply]

 17. Aparna P I Bhat

  Abba…..entaha kshana….kannu tumbi mana tumbi bantu anna….gurugalu badukinuddakku arogyadinda nagunaguta sthithaprajnaragiye adarshaprayaragiye irali…ivara belakinadi kattalege jagavelliyadu? dhanyaru navu…

  [Reply]

 18. K....P....

  Hare Raama
  Hare Raama

  [Reply]

 19. shiva shankara

  Wonderful narration . Excellent information.

  [Reply]

 20. k govinda bhat

  ಹಿರಿಯ ಗುರುಗಳ ಷಷ್ಠ್ಯಯಬ್ಧ ಸಂರಂರ್ದದ ನಂತರ ನಾನು ಮಟಕೀ ನಿಷ್ಠ ಈಗುರುಗಳು ಪೀಠವೇರಿದ ದಿನದಿಂದ ಗುರುಗಳನ್ನು ಮಾನಸಿಕವಾಗಿ ಆರಾಧಿಸುತ್ತಿದ್ದೇನೆ. ಅವರ ಸಂಕಲ್ಪಶಕ್ತಿ ಆತ್ಮಬಲ ದೊಡ್ಡದು, ಅವರುಗ್ರಹಿಸಿದ್ದೆಲ್ಲ್ಲ ( ಸಂಕಲ್ಪಿದ್ದೆಲ್ಲ) ಕೈಗೂಡುತ್ತಾ ಬಂದಿದೆ. ಹರೇರಾಂ

  [Reply]

 21. Pallavi

  Hareraama… Lekhana thumba chennagidhe.ADBUTHA! Kushiyaaythu. Avra baalyadha jeevanavannu parichayisiddakke dhanyavaadhagalu.samanyadinda asaamayakke hogalu yoga beku.hegiddavru hege bekaadru aagbahudhu annodakke jeevantha saakshiyaagiddare.

  [Reply]

Leave a Reply

Highslide for Wordpress Plugin