ಭ್ರಮರಾಂಬಾಷ್ಟಕಮ್

ಶ್ರೀ ಆದಿ ಶಂಕರಾಚಾರ್ಯರು ರಚಿಸಿದ “ಭ್ರಮರಾಂಬಾಷ್ಟಕಮ್”,  ಹೆಸರೇ ಸೂಚಿಸುವ ಹಾಗೆ ಒಂದು  ದೇವೀ ಸ್ತೋತ್ರ; ಶ್ರೀಶೈಲದಲ್ಲಿ ನೆಲೆಯಾಗಿರುವ ಭ್ರಮರಾಂಬಿಕೆಯ ಸ್ತುತಿ.

ಶ್ರೀಶೈಲದಲ್ಲಿರುವ ಭ್ರಮರಾಂಬಿಕೆ

ಶ್ರೀಶೈಲದಲ್ಲಿರುವ ಭ್ರಮರಾಂಬಿಕೆ

ಶ್ರೀಶೈಲ  ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು.  ಕೃಷ್ಣಾ ನದೀ ತೀರದ ಈ ಸ್ಥಳವನ್ನು  ಶ್ರೀಶೈಲವ ಶ್ರೀ ಪರ್ವತಮ್, ಶ್ರೀಗಿರಿ ಎಂದೂ ಕರೆಯುತ್ತಾರೆ.

ಶ್ರೀಶೈಲಲ್ಲಿ ಆರಾಧನೆಯಾಗುವುದು ಸ್ವಾಮಿ ಮಲ್ಲಿಕಾರ್ಜುನ ಸ್ವಾಮಿ  ಮತ್ತು ದೇವಿ ಭ್ರಮರಾಂಬೆಗೆ.
ಅಷ್ಟಾದಶ ಶಕ್ತಿಪೀಠಗಳಲ್ಲಿ ಒಂದು  ಈ ತಾಯಿ ಭ್ರಮರಾಂಬೆಯ ಸನ್ನಿಧಿ.
ಇಂಥ ಮಹಿಮೆಯಿರುವ ಪುಣ್ಯಸ್ಥಳ. ತಾಯಿ ಪಾರ್ವತಿ, ಭ್ರಮರ ಎಂದರೆ ದುಂಬಿಯಾಗಿ ಅರುಣಾಸುರನನ್ನು ಸಂಹಾರ ಮಾಡಿದ ಸ್ಥಳ ಎಂಬ ನಂಬಿಕೆ ಇಲ್ಲಿ ಇರುವುದಲ್ಲದೆ,  ದೇವಸ್ಥಾನದ ಒಳ ಭಾಗದಲ್ಲಿ  ಒಂದು ಜಾಗದಲ್ಲಿ ಈಗಲೂ ದುಂಬಿಯ ಝೇಂಕಾರ ಕೇಳಿಸುತ್ತದೆ ಎಂಬ ಪ್ರತೀತಿ ಇದೆ.  ಶ್ರೀ ಆದಿ ಶಂಕರ ಭಗವತ್ಪಾದರು ಶಿವಾನಂದ ಲಹರೀ ಸ್ತೋತ್ರವನ್ನು  ಈ ಪುಣ್ಯಸ್ಥಳದಲ್ಲೇ ಬರೆದರೆಂದು ಹೇಳುತ್ತಾರೆ.

ಭ್ರಮರಾಂಬಾಷ್ಟಕಮ್

ಧ್ವನಿಃ ದೀಪಿಕಾ ಭಟ್
ರಚನೆಃ ಶ್ರೀ ಆದಿ ಶಂಕರಾಚಾರ್ಯರು

ಚಾಂಚಲ್ಯಾರುಣ ಲೋಚನಾಂಚಿತಕೃಪಾ ಚಂದ್ರಾರ್ಕ ಚೂಡಾಮಣಿಂ
ಚಾರುಸ್ಮೇರಮುಖಾಂ ಚರಾಚರಜಗತ್ಸಂರಕ್ಷಣೀಂ ತತ್ಪದಾಮ್ |
ಚಂಚತ್ ಚಂಪಕ ನಾಸಿಕಾಗ್ರ ವಿಲಸನ್ ಮುಕ್ತಾಮಣೀ ರಂಜಿತಾಂ
ಶ್ರೀಶೈಲಸ್ಥಲವಾಸಿನೀಂ ಭಗವತೀಂ ಶ್ರೀಮಾತರಂ ಭಾವಯೇ ||೧॥

ಚಂಚಲವಾದ, ಸೂರ್ಯನಂತೆ ಕಣ್ಣುಳ್ಳ, ಇಷ್ಟಾರ್ಥ ನೆರವೇರಿಸುವ, ಚಂದ್ರ ಸೂರ್ಯರನ್ನು ಶಿರದಲ್ಲಿ ಧರಿಸಿಹ, ಮನ್ಮಥನಂತಹ ಸುಂದರ ಮುಖವುಳ್ಳ, ಚರಾಚರ ಜಗತ್ತನ್ನು ಸಂರಕ್ಷಿಸುವ, ಪರತತ್ತ್ವಳೂ ಚಂಪಕದಂತಹ ಮೂಗಿನಲ್ಲಿ ಹೊಳೆಯುವ ಆಭರಣ ಧರಿಸಿಹ, ಮುಕ್ತಾಮಣಿ ಧರಿಸಿಹ ಶ್ರೀಶೈಲದಲ್ಲಿ ನೆಲೆಸಿರುವ ಭಗವತಿ ಶ್ರೀಮಾತೆಗೆ ನಮಿಸುತ್ತೇನೆ.  ||೧||

ಕಸ್ತೂರೀತಿಲಕಾಂಚಿತೇಂದುವಿಲಸತ್ ಪ್ರೋದ್ಭಾಸಿಫಾಲಸ್ಥಲೀಂ
ಕರ್ಪೂರದ್ರವಮಿಶ್ರಚೂರ್ಣ ಖದಿರಾ ವೋದೋಲ್ಲಸದ್ವೀಟಿಕಾಮ್ |
ಲೋಲಾಪಾಂಗತರಂಗಿತೈರತಿ ಕೃಪಾ ಸಾರೈರ್ನತಾನಂದಿನೀಂ
ಶ್ರೀಶೈಲಸ್ಥಲವಾಸಿನೀಂ ಭಗವತೀಂ ಶ್ರೀಮಾತರಂ ಭಾವಯೇ ||೨||

ಕಸ್ತೂರೀ ತಿಲಕವನ್ನು, ಚಂದ್ರನನ್ನು ಹಣೆಯಲ್ಲಿ ಧರಿಸಿಹ, ಕರ್ಪೂರ ಮಿಶ್ರಿತ ಚೂರ್ಣದಿಂದ ಉಲ್ಲಸಿತಳಾದ, ವೈಯ್ಯಾರದಿಂದ ಕೂಡಿದ, ಅಧಿಕ ಕೃಪೆ ನೀಡುವ ಶ್ರೀಶೈಲದಲ್ಲಿ ನೆಲೆಸಿರುವ ಭಗವತಿ ಶ್ರೀ ಮಾತೆಗೆ ನಮಿಸುತ್ತೇನೆ ||೨||

ರಾಜನ್ಮತ್ತಮರಾಲ ಮಂದಗಮನಾಂ ರಾಜೀವಪತ್ರೇಕ್ಷಣಾಂ
ರಾಜೀವಪ್ರಭವಾದಿದೇವಮಕುಟೈ ರಾಜತ್ಪ್ರದಾಂಭೋರುಹಾಂಮ್ |
ರಾಜೀವಾಯತಮಂದಮಂಡಿತ ಕುಚಾಂ ರಾಜಾಧಿರಾಜೇಶ್ವರೀಂ
ಶ್ರೀಶೈಲಸ್ಥಲವಾಸಿನೀಂ ಭಗವತೀಂ ಶ್ರೀಮಾತರಂ ಭಾವಯೇ ||೩||

ರಾಜಹಂಸದಂತೆ ನಡಿಗೆಯುಳ್ಳ, ಕಮಲದಂತೆ ಕಣ್ಣುಳ್ಳ, ಸೂರ್ಯನಂತೆ ಹೊಳೆಯುವ ಕಿರೀಟ ಧರಿಸಿಹ, ಕಮಲದಂತೆ ಪಾದಗಳುಳ್ಳ, ಕಮಲದಂತೆ ವಕ್ಷಸ್ಥಳವುಳ್ಳ ರಾಜಾದಿರಾಜೇಶ್ವರಿ ಶ್ರೀಶೈಲ ನಿವಾಸಿನಿ ಮಾತೆಗೆ ನಮಿಸುತ್ತೇನೆ ||೩||

ಷಟ್ತಾರಾಂ ಗಣದೀಪಿಕಾಂ ಶಿವಸತೀಂ ಷಡ್ವೈರಿವರ್ಗಾಪಹಾಂ
ಷಟ್ಚಕ್ರಾಂತರಸಂಸ್ಥಿತಾಂ ವರಸುಧಾಂ ಷಡ್ಯೋಗಿನೀವೇಷ್ಟಿತಾಮ್ |
ಷಟ್ಚಕ್ರಾಂಚಿತ ಪಾದುಕಾಂಚಿತಪದಾಂ ಷಡ್ಭಾವಗಾಂ ಷೋಡಶೀಂ
ಶ್ರೀಶೈಲಸ್ಥಲವಾಸಿನೀಂ ಭಗವತೀಂ ಶ್ರೀಮಾತರಂ ಭಾವಯೇ ||೪||

ಆರು ನಕ್ಷತ್ರಗಣಗಳಿಂದ ಕೂಡಿದ ಶಿವಪತ್ನಿ, ಅರಿಷಡ್ವರ್ಗಗಳನ್ನು ಜಯಿಸಿದ  ಷಟ್ಚಕ್ರಗಳಲ್ಲಿ ಸ್ಥಾಪಿತಳಾದ ವರಸುಧೆ, ಆರು ಯೋಗಿನಿಗಳಿಂದ ಆವರಿಸಲ್ಪಟ್ಟ, ಆರು ಚಕ್ರಗಳನ್ನು ಪಾದದಲ್ಲಿ ಹೊಂದಿರುವ, ಆರು ಭಾವನೆಗಳನ್ನು ಹೊಂದಿರುವ ಹದಿನಾರು ವರ್ಷಗಳ ಕನ್ಯೆ ಶ್ರೀಶೈಲದಲ್ಲಿ ನೆಲೆಸಿರುವ ಭಗವತಿ ಶ್ರೀಮಾತೆಗೆ ನಮಿಸುತ್ತೇನೆ ||೪||

ಶ್ರೀನಾಥಾಧೃತಪಾಲಿತಾತ್ರಿಭುವನಾಂ ಶ್ರೀಚಕ್ರ ಸಂಚಾರಿಣೀಂ
ಜ್ಞಾನಾಸಕ್ತಮನೋಜಯೌವನಲಸತ್ ಗಂಧರ್ವಕನ್ಯಾ ಧೃತಾಮ್ |
ದೀನಾನಾಮತಿವೇಲಭಾಗ್ಯಜನನೀಂ ದಿವ್ಯಾಂಬರಲಾಂ ಕೃತಾಂ
ಶ್ರೀಶೈಲಸ್ಥಲವಾಸಿನೀಂ ಭಗವತೀಂ ಶ್ರೀಮಾತರಂ ಭಾವಯೇ ||೫||

ಶ್ರೀನಾಥನಿಂದ ರಕ್ಷಿಸುವ ತ್ರಿಭುವನವನ್ನು ಪಾಲಿಸುವ ಮಾತೆ, ಶ್ರೀಚಕ್ರದಲ್ಲಿ ಸಂಚರಿಸುವ, ಧ್ಯಾನಾಸಕ್ತ ಮನಸ್ಸುಳ್ಳ, ಯೌವನದಿಂದ ಕೂಡಿರುವ ಗಂಧರ್ವ ಕನ್ಯೆ, ದೀನರಿಗೆ ಶೀಘ್ರವಾಗಿ ಭಾಗ್ಯ ನೀಡುವ, ದಿವ್ಯ ವಸ್ತ್ರಭೂಷಿತಳಾದ ಶ್ರೀಶೈಲ ನಿವಾಸಿನಿ ಭಗವತಿ ಶ್ರೀಮಾತೆಗೆ ನಮಿಸುತ್ತೇನೆ ||೫||

ಲಾವಣ್ಯಾಧಿಕಭೂಷಿತಾಂಗಲತಿಕಾಂ ಲಾಕ್ಷಾಲಸದ್ರಾಗಿಣೀಂ
ಸೇವಾಯಾತಸಮಸ್ತದೇವವನಿತಾಂ ಸೀಮಂತಭೂಷಾನ್ವಿತಾಮ್ |
ಭಾವೋಲ್ಲಾಸವಶೀ ಕೃತಪ್ರಿಯತಮಾಂ ಭಂಡಾಸುರಚ್ಛೇದಿನೀಂ
ಶ್ರೀಶೈಲಸ್ಥಲವಾಸಿನೀಂ ಭಗವತೀಂ ಶ್ರೀಮಾತರಂ ಭಾವಯೇ ||೬||

ಲಾವಣ್ಯವನ್ನು ಭೂಷಣವಾಗಿ ಪಡೆದಿಹ, ಕೆಂಪು ವರ್ಣಳಾದ, ಸರ್ವದೇವತೆಗಳಿಂದ ಪೂಜಿತಳಾದ, ಸರ್ವಾಲಂಕೃತಳಾದ ಭಾವೋಲ್ಲಾಸಗಳನ್ನು ವಶಮಾಡಿಕೊಂಡಿರುವ ಪ್ರಿಯತಮೆ, ಭಂಡಾಸುರ ಶಿರಚ್ಛೇದಿಸಿದ ಶ್ರೀಶೈಲದಲ್ಲಿ ನೆಲೆಸಿರುವ ಭಗವತಿ ಶ್ರೀಮಾತೆಗೆ ನಮಿಸುತ್ತೇನೆ ||೬||

ಧನ್ಯಾಂ ಸೋಮವಿಭಾವನೀಯಚರಿತಾಂ ಧಾರಾಧರಶ್ಯಾಮಲಾಂ
ಮುನ್ಯಾರಾಧನಮೇಧಿನೀಂ ಸುಮವತಾಂ ಮುಕ್ತಿಪ್ರಧಾನವ್ರತಾಮ್ |
ಕನ್ಯಾಪೂಜನಸುಪ್ರಸನ್ನ ಹೃದಯಾಂ ಕಾಂಚೀಲಸನ್ಮಧ್ಯಮಾಂ
ಶ್ರೀಶೈಲಸ್ಥಲವಾಸಿನೀಂ ಭಗವತೀಂ ಶ್ರೀಮಾತರಂ ಭಾವಯೇ ||೭||

ಧನ್ಯಳೂ, ಚಂದ್ರನಂತೆ ತಂಪಾದ ಸ್ವಭಾವವುಳ್ಳ ಶ್ಯಾಮಲವರ್ಣಳಾದ, ಭೂಲೋಕದಲ್ಲಿ ಮುನಿಗಳಿಂದ ಆರಾಧಿಸಲ್ಪಟ್ಟ, ಕೋಮಲಳೂ, ಮುಕ್ತಿ ನೀಡುವವಳೂ, ಕನ್ನಿಕೆಯರ ಪೂಜೆಯಿಂದ ಸುಪ್ರಸನ್ನಳಾಗುವ ಸೊಂಟದಲ್ಲಿ ಡಾಬನ್ನು ಧರಿಸಿಹ ಶ್ರೀಶೈಲದಲ್ಲಿ ನೆಲೆಸಿರುವ ಭಗವತಿ ಶ್ರೀಮಾತೆಗೆ ನಮಿಸುತ್ತೇನೆ ||೭||

ಕರ್ಪೂರಾಗರುಕುಂಕುಮಾಂಕಿತ ಕುಚಾಂ ಕರ್ಪೂರವರ್ಣಸ್ಥಿತಾಂ
ಕೃಷ್ಟೋತ್ಕೃಷ್ಟಸುಕೃಷ್ಟಕರ್ಮದಹನಾ ಂ ಕಾಮೇಶ್ವರೀಂ ಕಾಮಿನೀಮ್ |
ಕಾಮಾಕ್ಷೀಂ ಕರುಣಾರಸಾರ್ದ ಹೃದಯಾಂ ಕಲ್ಪಾಂತರಸ್ಥಾಯಿನೀಂ
ಶ್ರೀಶೈಲಸ್ಥಲವಾಸಿನೀಂ ಭಗವತೀಂ ಶ್ರೀಮಾತರಂ ಭಾವಯೇ ||೮||

ಕುಂಕುಮ ಕರ್ಪೂರ ಅಗರುಗಳಿಂದ ಕೂಡಿದ ವಕ್ಷಸ್ಥಳವುಳ್ಳ, ಕರ್ಪೂರವರ್ಣವುಳ್ಳ, ಕಷ್ಟಕಾರ್ಪಣ್ಯಗಳನ್ನು ನಾಶಮಾಡುವ ಕಾಮೇಶ್ವರಿ, ಕಾಮಿನಿ, ಕಾಮಾಕ್ಷಿ ಕರುಣಾರಸಪೂರಿತಳೂ, ಕಲ್ಫಾಂತರದಿಂದಲೂ ಇರುವ ಶ್ರೀಶೈಲ ನಿವಾಸಿನಿ ಭಗವತಿ ಶ್ರೀಮಾತೆಗೆ ನಮಿಸುತ್ತೇನೆ ||೮||

ಗಾಯತ್ರೀಂ ಗರುಢಧ್ವಜಾಂ ಗಗನಗಾಂ ಗಾಂಧರ್ವಗಾನಪ್ರಿಯಾಂ
ಗಂಭೀರಾಂ ಗಜಗಾಮಿನೀಂ ಗಿರಿಸುತಾಂ ಗಂಧಾಕ್ಷತಾಲಂ ಕೃತಾಮ್ |
ಗಂಗಾಗೌತಮಗರ್ಗಸನ್ನುತಪದಾಮ್ ಗಾಂ ಗೌತಮೀಂ ಗೋಮತೀಂ
ಶ್ರೀಶೈಲಸ್ಥಲವಾಸಿನೀಂ ಭಗವತೀಂ ಶ್ರೀಮಾತರಂ ಭಾವಯೇ ||೯||

ಗಾಯತ್ರಿ, ಗರುಡಧ್ವಜೆ, ಗಗನದಲ್ಲಿ ಸಂಚರಿಸುವ, ಗಂಧರ್ವಗಾನ ಪ್ರಿಯೆಯೂ, ಗಂಭೀರಳೂ, ಗಜಗಾಮಿನಿಯೂ, ಗಿರಿಕನ್ಯೆಯೂ, ಗಂಧಾಕ್ಷತೆಗಳಿಂದ ಅಲಂಕೃತಳಾದ, ಗಂಗಾ, ಗೌತಮ ಗಾರ್ಗೇಯರಿಂದ ಪೂಜಿಸಲ್ಪಡುವ, ಗೌತಮಿಯೂ, ಗೋಮತಿಯೂ ಶ್ರೀಶೈಲ ನಿವಾಸಿನಿಯೂ ಆದ ಭಗವತಿ ಶ್ರೀಮಾತೆಗೆ ನಮಿಸುತ್ತೇನೆ ||೯||

ಇತಿ ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ಯಸ್ಯ
ಶ್ರೀಗೋವಿಂದಭಗವತ್ಪೂಜ್ಯಪಾದಶಿಷ್ಯಸ್ಯ
ಶ್ರೀಮಚ್ಛಂಕರಭಗವತಃ ಕೃತೌ
ಭ್ರಮರಾಂಬಾಷ್ಟಕಂ ಸಂಪೂರ್ಣಮ್ ||

~*~

ಆಡಿಯೋ ಸಹಕಾರಃ oppanna.com

(ಸಂಗ್ರಹಃ ಅನಂತಕೃಷ್ಣ ಬೆಟ್ಟುಕಜೆ)

Facebook Comments