ಸದ್ಗುರು ಸಂಕೀರ್ತನ

ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಕುರಿತ ಭಜನಾಕಮಲಗಳು

ಸ್ಫೂರ್ತಿ, ಸಾಹಿತ್ಯ, ವಾಚನ: ಡಾ. ಜಿ.ಜಿ.ಶಾಸ್ತ್ರಿ
ಗಾಯನ: ಹಾಡಿನ ಕಮಲಕ್ಕ
ಸಾಹಿತ್ಯ: ಶ್ರೀ ವೆಂ.ಭ.ವಂದೂರು, ಶ್ರೀಮತಿ ಸೀತಾಲಕ್ಷ್ಮಿ ಹೆಗಡೆ, ಶ್ರೀಮತಿ ಸರಸ್ವತಿ ಪಿ. ಭಟ್ಟ
ಸಂಗೀತ ನಿರ್ವಹಣೆ: ಭರತ್ ಬಿ.ಜೆ.
ಹಿನ್ನೆಲೆ ಸಂಗೀತ: ಶ್ರೀ ರಮೇಶಕುಮಾರ್ ಜಿ.ಎಲ್. (ಕೊಳಲು), ಶ್ರೀಮತಿ ಶೃತಿ ಕಾಮತ್ (ಸಿತಾರ್), ಶ್ರೀ ಭರತ್ ಬಿ.ಜೆ. (ಕೀಬೋರ್ಡ), ಶ್ರೀ ಪ್ರದ್ಯುಮ್ನ ಎಸ್.ಜಿ. (ತಬಲಾ), ಶ್ರೀ ಕೃಷ್ಣ (ರಿಧಮ್ ಪ್ಯಾಡ್)
ಧ್ವನಿಮುದ್ರಣ: ಸ್ಟುಡಿಯೋ ಅನನ್ಯ, ಮಲ್ಲೇಶ್ವರಂ, ಬೆಂಗಳೂರು.

.

ಮುನ್ನುಡಿ (ಸಾಹಿತ್ಯ ಹಾಗೂ ವಾಚನ: ಡಾ. ಜಿ.ಜಿ.ಶಾಸ್ತ್ರಿ)

ಜಗದ್ಗುರು ರಾಘವೇಶ್ವರರ ಗುಣಗಣಿತ್ವದ ಕುರಿತಾಗಿ ಅನೇಕ ಭಾವಗೀತೆಗಳು, ಭಜನೆಗಳು, ಗದ್ಯಸ್ವರೂಪದ ಸಾಲುಗಳು ಇತ್ಯಾದಿ ಈಗಾಗಲೇ ಪ್ರಚಲಿತವಿದ್ದು, ಜನಜನಿತವಾಗಿವೆ. ಯಾರನ್ನು ಎಷ್ಟು ಸ್ತುತಿಸಿದರೂ ಕಡಿಮೆಯೋ, ಯಾರನ್ನು ಅವರವರ ಭಾವಾನುಸಾರ ಎಷ್ಟು ಹೊಗಳಿ ಮೆಚ್ಚುಗೆ ವ್ಯಕ್ತಪಡಿಸಿದರೂ, ಅವರು ಅದಕ್ಕೂ ಹತ್ತು ಗಜ ಎತ್ತರದಲ್ಲಿ ನಿಂತು ತನ್ನ ಸ್ವಾಮಿತ್ವವನ್ನು ಸದಾ ವ್ಯಕ್ತಪಡಿಸುತ್ತಿರುವರೋ, ಆ ರಾಘವ ಭಾರ್ಗವರ ಕುರಿತಾಗಿ ತಮ್ಮ ಅನುಭವ, ಭಾವ, ಭಕ್ತಿ, ಶ್ರದ್ಧೆ ಹಾಗೂ ಶರಣಾಗತಿಗಳನ್ನು ಅಭಿವ್ಯಕ್ತಿ ಮಾಡುತ್ತಾ ಸರಳ, ಸುಂದರ, ಸುಮನೋಹರ ಭಜನಾವಳಿಗಳಿಂದ ಶ್ರೀಮತಿ ಕಮಲಕ್ಕನವರು ತಮ್ಮ ಕಂಚಿನ ಕಂಠದಲ್ಲಿ ಹೊರಹೊಮ್ಮಿಸಿರುವ ಆ ಭಜನೆಗಳ ಸಂಗ್ರಹದ ಭಾಗಾಂಶ ಇಲ್ಲಿದೆ. ಇವುಗಳನ್ನು ಶ್ರವಣ ಮಾಡುವವರು, ಪುನರುಚ್ಛರಿಸುವವರು ಪುಣ್ಯಭಾಜನರಾಗುವುದರಲ್ಲಿ ಸಂದೇಹವಿಲ್ಲ.

ಭಗವಾನ್ ರಾಘವೇಶ್ವರರ ಕುರಿತು ಭಕ್ತರ ಹೃದಯಾಕಾಶದಲ್ಲಿ ಮೂಡಿ ನಿಲ್ಲುವ ಭಕ್ತಿಚಂದಿರನ ಉದಯಕ್ಕೆ ಈ ಭಜನೆಗಳು ಕಾರಣೀಭೂತವಾಗಿವೆ ಎಂದರೆ ವಾಸ್ತವವನ್ನೇ ಹೇಳಿದಂತಾಗುತ್ತದೆ. ಅಣುವಿನಲ್ಲಿ ಅಣುವಾಗಿ, ಮಹತ್ತಿನಲ್ಲಿ ಮಹತ್ತಾಗಿ, ಅಸದೃಶ ಲೌಕಿಕ, ಪಾರಮಾರ್ಥಿಕ ನೀತಿಗಳನ್ನು ಜನರಿಗೆ ಅರಿವಾಗುವಂತೆ ತಮ್ಮ ನಡತೆಯಿಂದಲೇ ಮಾಡುತ್ತಾ, ಮನುಕುಲದ ಉದ್ಧಾರವನ್ನೇ ಏಕಮೇವ ಗುರಿಯನ್ನಾಗಿಸಿಕೊಂಡು ಯಶೋಪಥದಲ್ಲಿ ತಿರುಗಿ ನೋಡದೇ ಮುಂದುವರಿಯುತ್ತಿರುವ ರಾಘವೇಶ್ವರರ ದಿವ್ಯತ್ವದ ವರ್ಣನೆ ಈ ಭಜನೆಗಳಲ್ಲಿದೆ. ಕಮಲಕ್ಕನವರ ವಿಮಲ, ಪರಿಶುದ್ಧ ಭಕ್ತಿ ತರಂಗಗಳ ಪ್ರತಿಧ್ವನಿಗಳೇ ಈ ಭಜನೆಗಳಾಗಿವೆ. ಇವುಗಳನ್ನಾಲಿಸಿ, ಗುರುಗಳಿಗೆಲ್ಲ ಗುರುಗಳಾದ ರಾಘವೇಶ್ವರರ ವೈಶಾಲ್ಯ ಶಕ್ತಿತ್ವವನ್ನು ಅರ್ಥೈಸಿಕೊಂಡರೆ ಶ್ರೀಮತಿ ಕಮಲಕ್ಕನವರ ತರ್ಪಣಭಾವದಿಂದ ಅರ್ಪಣ ಮಾಡಿರುವ ಈ ಕಾವ್ಯಪುಂಜಗಳು ನಿಮ್ಮೆಲ್ಲರಿಗೆ ಆತ್ಮದರ್ಪಣವಾಗಿ ಪರಿಣಾಮ ಬೀರುವದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ. ಇದಕ್ಕೆಲ್ಲ, ಆಗುಹೋಗುಗಳನ್ನು ತಮ್ಮ ಇಚ್ಛಾಶಕ್ತಿಯಿಂದ ಸದುದ್ದೇಶಪೂರ್ವಕವಾಗಿ ಬದಲಾಯಿಸುವ ವಿಸ್ಮಯಕಾರೀ ಶಕ್ತಿಯನ್ನು ಹೊಂದಿರುವ ಭಗವಾನ್ ರಾಘವೇಶ್ವರರ ಸತ್ಸಂಕಲ್ಪವೇ ಕಾರಣವಾಗಿವೆ. ಈ ಮೊದಲ ಹಾಗು ತೊದಲ ನುಡಿಗಳು ನಿಮ್ಮನ್ನು ಭಜನೆಗಳ ಆನಂದಸಾಗರಕ್ಕೆ ಕೊಂಡೊಯ್ಯುವುದರಲ್ಲಿ ಸಾಧನವಾದರೆ, ಅದು ರಾಘವೇಶ್ವರರ ಆನಂದಾಶೀರ್ವಾದದಿಂದಲೇ ಎಂದು ನಂಬುತ್ತೇನೆ.

ಈ ಮೊದಲ ನುಡಿಗಳಿಗೆ ಪೂರ್ಣವಿರಾಮ ಕೊಡುವ ಮೊದಲು, ಈ ಭಜನೆಗಳ ದಾತಾರರಾದ ಶ್ರೀ ವೆಂಕಟರಮಣ ಭಟ್ಟರು (ವೆಂ. ಭ.) ಹಾಗೂ ಶ್ರೀಮತಿ ಸೀತಾಲಕ್ಷ್ಮಿ ಇವರುಗಳ ಅಮೋಘ, ಅದ್ವಿತೀಯ ಕಾವ್ಯರಚನಾಶಕ್ತಿಯನ್ನು ಇಚ್ಛೆಯಿಂದಲೇ ಮೆಚ್ಚಿಕೊಳ್ಳಬೇಕಾಗುತ್ತದೆ. ಸ್ವಚ್ಛ ಮನಸ್ಸಿನ ಇವರುಗಳಿಗೆ, ಅವರ ಭಾವಮಂಡಲದ ಕೇಂದ್ರಬಿಂದುವಾದ ಸದ್ಗುರು ರಾಘವೇಶ್ವರರು ಸನ್ಮಂಗಳವನ್ನುಂಟುಮಾಡುವುದರಲ್ಲಿ ಸಂದೇಹವಿಲ್ಲ. ಹೇಗೆ ಮಾತು ಮತ್ತು ಅದರ ಅರ್ಥ ಅವುಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲವೋ, ಅದರಂತೇ ಈ ಪ್ರಶಂಸಾಪಾತ್ರದ್ವಯರನ್ನು ಈ ಭಜನಾ ಸರೋವರಗಳಿಂದ ಬೇರ್ಪಡಿಸಿ ಹೊರತರುವುದು ಸುತಾರಾಂ ಸಾಧ್ಯವಿಲ್ಲ. ಸಾಹಿತ್ಯ, ಸಂಗೀತ ಹಾಗು ಕಲೆ ಇವು ದೈವದತ್ತವಾದ ಪ್ರತಿಭೆಗಳು. ಜನ್ಮಾಂತರಗಳಿಂದ ಇವರುಗಳಿಗಿರುವ ಗುರುಕೃಪೆಯೇ ಇವರ ಜಿಹ್ವಾಗ್ರದ ಮೇಲೆ ವೀಣಾಪಾಣಿ ವಾಣಿಯನ್ನು ನಲಿದು ನರ್ತಿಸುವಂತೆ ಮಾಡಿರುವುದರಲ್ಲಿ ಸಂದೇಹವಿಲ್ಲ. ಗುರುಗಾಯನವನ್ನು ಭಜನೆಗಳ ಮೂಲಕ ಶ್ರೀಮತಿ ಕಮಲಕ್ಕನವರ ಹೃದಯವೀಣೆಯ ಪ್ರೇಮತಂತಿಗಳನ್ನು ಮೀಂಟಿ ಹೊರಬರುವಂತೆ ಮಾಡಿದ ಈ, ಅರಿವಿನ ಭಜನೆಯ ಸಾಲುಗಳ ಸಮರ್ಪಣೆಗೆ ಕಾರಣರಾದವರನ್ನೆಲ್ಲ ಅಭಿನಂದಿಸುತ್ತೇವೆ-ಅಭಿವಂದಿಸುತ್ತೇವೆ. ಚಿದಾಕಾಶದಲ್ಲಿ ರಾಘವೇಶ್ವರರ ದಿವ್ಯ ತೇಜೋಮೂರ್ತಿ ಚಿರಸ್ಥಾಯಿಯಾಗಿ ನಿಲ್ಲುವಂತೆ ಮಾಡುವ ಈ ಭಜನೆಗಳೇ ಭಾಗ್ಯವಂತ ಭಜನೆಗಳು.
.

ರಾಘವೇಶ್ವರ ರಾಘವೇಶ್ವರ ರಾಘವೇಶ್ವರ ಪಾಹಿಮಾಂ (ಸಾಹಿತ್ಯ: ಡಾ. ಜಿ.ಜಿ.ಶಾಸ್ತ್ರಿ)

ರಾಘವೇಶ್ವರ ರಾಘವೇಶ್ವರ ರಾಘವೇಶ್ವರ ಪಾಹಿಮಾಂ |
ರಾಘವೇಶ್ವರ ರಾಘವೇಶ್ವರ ರಾಘವೇಶ್ವರ ರಕ್ಷಮಾಂ ||ಪ||

ವಿಜಯಲಕ್ಷ್ಮಿಯ ಸುತನು ನೀನೈ ಶ್ರೀನಿವಾಸನ ಕುವರನು |
ಸುಜನ ಕುಲದಲಿ ಜನ್ಮ ತಾಳಿದೆ ಎಳೆದೆ ಗುರುಕುಲ ತೇರನು ||
ಹರಿಹರರ ಶಕ್ತಿಯನು ಹೊಂದಿರೆ ಹರೀಶನೆಂಬಭಿದಾನವು |
ಪರಿಪರಿಯ ವಿದ್ಯೆಗಳ ಕಲಿಯುತ ಜ್ಞಾನಸಿಂಧು ನಿನಾದವು ||1||

ಸಾಗರವು ಧನ್ಯತೆಯ ಪಡೆಯಿತು ನಿನ್ನ ಜನನದಿ ಶ್ರೀಗುರು |
ಚದರವಳ್ಳಿಯು ಅದುರಿ ನಿಂತಿತು ನಿನ್ನ ಶಕ್ತಿಗೆ ಸದ್ಗುರು ||
ವೇದದಂತ್ಯವ ಕಂಡು ಬಾಲ್ಯದಿ ನ್ಯಾಯ ಶಾಸ್ತ್ರದಿ ನುರಿತಿಹೆ |
ಯೋಗ ವಿದ್ಯೆಯ ಕರದಿ ಪಡೆದಿಹೆ ಸಾಂಖ್ಯ ದರ್ಶನ ಅರಿತಿಹೆ ||2||

ಪಂಡಿತರು ಯಾರಿಲ್ಲ ತವ ಸಮ ಶುದ್ಧತೆಯ ವ್ಯಾಕರಣವು |
ಚಂಡಿಕೆಯ ನಿಜಕಂದ ನೀನಿರೆ ಶಾಲೆಯೇ ಗೋಕರ್ಣವು ||
ಹತ್ತು ನಾಲ್ಕೈದುರುಳುತಿರಲಿಕೆ ಸನ್ಯಾಸ ಜೀವನ ಬಂದಿತು |
ಅಧ್ಯಯನ ತೃಷೆ ಬೆಳೆಯುತಿರಲಿಕೆ ಮೈಸೂರು ಸೀಮೆಯು ಕರೆಯಿತು ||3||

ಭಾವ ಸಂವತ್ಸರದ ಚೈತ್ರದಿ ಆಶ್ರಮದಿ ಪರಿವರ್ತನೆ |
ಭಾವ ಪೂರ್ಣತೆಯಿಂದಲೇ ಸನ್ಯಾಸ ರಾಜ್ಯ ಪದಾರ್ಪಣೆ ||
ಶುಕ್ರವಾರದ ಚೌತಿ ಎಂದಿತು ಜನುಮ ಪಾವನವಾಯಿತು |
ತನ್ನ ಒಡಲೊಳು ರಾಘವೇಶ್ವರ ಶಕ್ತಿ ತಾ ಪಡಿಮೂಡಿತು ||4||

ಮೂರು ಸಂವತ್ಸರದಿ ಸತತವು ತಪವ ನೀನಾಚರಿಸಿದೆ |
ಮೂರ್ತಿಗಳ ಸ್ವೀಕರಿಸಿ ಗುರುವೇ ಕೀರ್ತಿ ಭಾಜನನಾಗಿಹೆ||
ಆರತಿಯ ಸ್ವೀಕರಿಸಿ ದಿನವೂ ಶಕ್ತಿ ಯೋಜನರಾದಿರಿ |
ಆ ರತಿಯ ಪತಿಯನ್ನು ದಹಿಸಿದ ಹರನ ಸದ್ಗುಣ ಪಡೆದಿರೆ ||5||

ಭರತ ಭೂಮಿಯ ತುಂಬ ಚರಿಸುತ ನೀನು ಮಾಡಿದೆ ಪ್ರವಚನ |
ನಿನ್ನ ಹಿರಿಮೆಯ ನಿನ್ನ ಗರಿಮೆಯ ಫಲವೆ ಪೀಠಾರೋಹಣ ||
ಋತು ವಸಂತದಿ ವೈಶಾಖ ಶುದ್ಧದಿ ತದಿಗೆಯೇ ಶುಭ ಮೂರ್ತವು |
ವರ್ಷವದು ಪ್ರಮಾಥಿ ತಿಳಿಯಿರಿ ವಾರವೇ ಬುಧವಾರವು ||6||

ಮೂರು ದಶಕಾರನೆಯ ಗುರುವೇ ಹರಿಯ ಇಚ್ಛೆಯ ಕಂದನು |
ಪರಮ ಸುಂದರನಾಗಿ ನಗುತಲೆ ಭರತ ಖಂಡಕೆ ಬಂದನು ||
ಅವತರಣ ನಿನ್ನಾತ್ಮಕಾಯಿತು ಮೂಲವೇ ಗುರುಮಂಡಲ |
ಸಮಯ ಸಂದಿತು ಪ್ರಗತಿ ಬೆಳಗಿತು ಪೂರ್ತಿ ಭೂಮಂಡಲ ||7||

ರಾಮರಾಜ್ಯದ ಸುವ್ಯವಸ್ಥೆಯ ಭರತ ಖಂಡದಿ ಬೆಳೆಸಿದೆ |
ಜನರ ಕಷ್ಟವ ಕಳೆವೆನೆನ್ನುವ ವಚನ ನೀನೇ ಉಳಿಸಿದೆ ||
ಮಠದ ಗುರಿಯನು ಇಚ್ಛೆಯಿಂದಲೆ ಪಟಪಟನೆ ನೀ ತಲುಪಿದೆ |
ಹಿಂದೆ ಕಾಣದ ಎಂದೂ ಮಾಡದ ಪ್ರಗತಿಯನು ನೀ ಮಾಡಿದೆ ||8||

ಪೂರ್ವ ದಿಶೆಯದು ಸಾತ್ವಿಕತೆಯನು ನಿನಗೆ ತಾನೇ ನೀಡಿದೆ |
ಪಶ್ಚಿಮವು ಸಂಯಮವ ನೀಡಿರೆ ಅದರಲೇ ನೀ ಬೆಳಗಿದೆ ||
ದಕ್ಷಿಣೋತ್ತರದಿಂದ ಹರಿದವು ಸಕಲ ಸದ್ಗುಣಗಳು |
ಕ್ಷಿತಿಜದುದ್ದಕು ನಿನ್ನ ಹಿರಿಮೆಯ ಅದನು ಹೊಗಳಸಾಧ್ಯವು ||9||

ನಂಬಿಕೆಯ ಬೇರನ್ನು ಇಳಿಸಿದೆ ಕಾಮಧೇನುವ ಪೊರೆದಿಹೆ |
ಭುವನ ಜನಮನ ಮಾತೆ ಗೋವನು ರಕ್ಷಿಸಲು ನೀ ತಿಳಿಸಿದೆ ||
ಗುರುವೆ ಆಲಿಸು ಬೇರೆ ಯಾರೂ ನಿನ್ನ ಸ್ಥಳವನು ತುಂಬರು |
ರಾಘವೇಶ್ವರರಂಥ ಗುರುವಿಲ್ಲೆಂದು ಎಲ್ಲರೂ ಅಂಬರು ||10||

ಚೇತನದ ಚೇತೋಹಾರಿ ನೀನೈ, ಸ್ಮರಣೆ ಸಂತಸದಾಯಕ |
ಭಜನೆ ಇಚ್ಛಿತ ವರವ ನೀಳ್ಪುದು, ನೆನಪು ನೆಮ್ಮದಿದಾಯಕ ||
ನಿನ್ನ ಗಾಯನ ಹಣದ ಹೊಳೆ ಹರಿಸುವುದು ನಂಬಿಕೆ ಭಜಕಗೆ |
ಸ್ಪರ್ಶವಂತೂ ಹರ್ಷದಾಗರ ದೃಷ್ಟಿ ಸ್ಫೂರ್ತಿಯ ಸೆಲೆಯದು ||11||

ನಂಬಿ ನಡೆದರೆ ಸಕಲ ಕಾಮನೆ, ಅಂಬಿಗನೆ ಶ್ರೀ ರಾಘವ |
ತುಂಬು ಹೃದಯದಿ ಗುರುವ ನೆನೆಯಿರಿ ಬದುಕಿನುಳಿದಾ ಭಾಗವ ||
ಕೊಂಬು ಕಹಳೆಯ ನಾದ ಮಧ್ಯದಿ ಹೊಳೆವ ರಾಘವ ಭಾರ್ಗವ |
ಅಂಬುಜಾಕ್ಷನು ಇದುವೇ ಸತ್ಯವು ಮಾಡಿ ಸ್ವಾರ್ಥದ ತ್ಯಾಗವ ||12||

.

ವೇಷ ಭೂಷಣದಿಂದ ಸನ್ಯಾಸಿಯು (ಸಾಹಿತ್ಯ: ಡಾ. ಜಿ.ಜಿ.ಶಾಸ್ತ್ರಿ)

ವೇಷ ಭೂಷಣದಿಂದ ಸನ್ಯಾಸಿಯು |
ವಾಸ್ತವದಿ ರಾಘವನ ಅವತಾರಿಯು ||ಪ||

ತ್ಯಾಗಕ್ಕೆ ಪ್ರತಿರೂಪ ನೀನಾಗಿಹೆ |
ಭೋಗಕ್ಕೆ ಪ್ರತಿನಿಮಿಷ ದೂರಾಗಿಹೆ ||
ಜನರನ್ನು ಉದ್ಧರಿಸೆ ಪೂಜಾ ಬಲ |
ಮನ ಮುದಿಸಲಿಕೆ ಇಹುದು ತಪೋಜಲ ||1||

ಸರಳತೆಯು ಸಂಯಮವು ನಿನ್ನಾಸ್ತಿಯು |
ಕೊರಳಿನಲಿ ಶೋಭಿಸುವ ರುದ್ರಾಕ್ಷಿಯು ||
ಕಾಷಾಯ ವಸ್ತ್ರದಲಿ ಕಂಗೊಳಿಸುವೆ |
ಈ ಕಾಯ ಕೊಳೆಯನ್ನು ನೀ ಕಳೆಯುವೆ ||2||

ಆದ್ಯಂತರಹಿತನೆ ನೀನಾಗಿಹೆ |
ವೇದಾಂತ ಪಟುವಾಗಿ ನೀ ಮೆರೆದಿಹೆ ||
ರಾಘವೇಶ್ವರ ನೀನು ವೇಗದಲಿ ಸಂಚರಿಸಿ |
ಅಘಭರಿತ ಭಾರತವ ಉದ್ಧರಿಸಿಹೆ ||3||

ಶಂಕರರ ಮನದಿಚ್ಛೆ ಪೂರೈಸಿದೆ |
ಕಿಂಕರಗೆ ಶುಭವನ್ನು ಹಾರೈಸಿದೆ ||
ತವದರುಶನದಿ ಮನಕೆ ಆನಂದವು|
ನವ ಹರುಷದಲಿ ಹೀಗೆ ದಿನ ಸಂದವು||4||

ಪೀಠಾಧಿಪನೆ ನಿನಗೆ ನಮನಂಗಳು |
ನಾಟ್ಯಾಧಿಪನ ರಕ್ಷೆ ಬೆಳದಿಂಗಳು ||
ಬಾರೊ ಬಾ ರಾಘವನೆ ಚಿಂತಾಹರ |
ಬೇರಾರು ಬೇಕಿಲ್ಲ “ಧರ್ಮಂಚರ” ||5||

ನಮನ ನಿನಗೀಗ ಗುರು ಆದರಿಸು ನೀ |
ಪ್ರೇಮ ಗೀತೆಯನಿದನು ಸ್ವೀಕರಿಸು ನೀ ||

.

ಬಂದನು ಗುರುರಾಯ ಚೆಂದದಿ ಪಾದವ ತೊಳೆಯಯ್ಯ (ಸಾಹಿತ್ಯ: ಶ್ರೀ ವೆಂ.ಭ.ವಂದೂರು)

ಬಂದನು ಗುರುರಾಯ | ಚೆಂದದಿ ಪಾದವ ತೊಳೆಯಯ್ಯ
ಅಂದದ ಚೆಂದದ ರಂಗವಲ್ಲಿಯನಿಟ್ಟು | ಸಿಂಗರಿಸಿರುವ ನಮ್ಮಂಗಳದೊಳಗೆ ||ಪ||

ಶುದ್ಧೋದಕದಲಿ ಪಾದವ ತೊಳೆಯಲು |
ಉದ್ಧರಿಸುವನು ಸದ್ಬುದ್ಧಿಯನಿತ್ತು ||
ರುದ್ರಾಕ್ಷಿಯ ತಾ ಕೊರಳಲಿ ಧರಿಸಿದ |
ಭದ್ರಾನನದಿ ರುದ್ರವತಾರಿಯು ||1||

ಬ್ರಹ್ಮಜ್ಞಾನವೇ ಮೂರ್ತಿರ್ಭವಿಸಿ |
ಬ್ರಹ್ಮಹರಿಹರರಂಶವು ಬೆರೆಸಿ ||
ಬ್ರಹ್ಮಾಂಡದಿ ನರ ರೂಪವ ಧರಿಸಿ |
ಬ್ರಾಹ್ಮೀ ಮುಹೂರ್ತವ ಲೋಕಕೆ ಸಾರುತ ||2||

ಕಾಷಾಯವು ನಿಶ್ಕಾಮದ ದ್ಯೋತಕ |
ಭೂಷಣ ನೊಸಲಿಗೆ ಭಸ್ಮದ ಲೇಪ ||
ವೇಶದೊಳೀತನು ಆದಿಶಂಕರನು |
ಭಾಷೆಯದೆಂತು ಹಿತಮಿತವು ||3||

ರಾಮಾಯಣದಲಿ ರಾಮಚಂದಿರನು |
ದ್ವಾಪರದಲಿ ಇವ ದೇವೋತ್ತಮನು ||
ಈ ಮಹಾಯತಿವರ ಭಾರತೀ ಪೀಠಕೆ |
ಶೋಭೆ ತರುವ ಶ್ರೀ ರಾಘವೇಶ್ವರನು ||4||

.

ಗುರುವೆ ನಿನ್ನಡಿಗಳಲಿ ಎರಗಿ ಬೇಡುವೆ ನಾನು (ಸಾಹಿತ್ಯ: ಶ್ರೀ ವೆಂ.ಭ.ವಂದೂರು)

ಗುರುವೆ ನಿನ್ನಡಿಗಳಲಿ ಎರಗಿ ಬೇಡುವೆ ನಾನು |
ಕರುಣಿಸೋ ಸ್ವರ್ಗದಿಂದಾಯ್ದವರಗಳನು ||ಪ||

ರಾಜಹಂಸನೇ ನೀನು ರಾಜೀವ ಪೀಠಸ್ಥ |
ರಾಜಸೋಜ್ವಲನಾಗಿ ರಾಜಿಸುವ ಹರಿಯ ||1||

ಪ್ರಜ್ಞಾನ ನೇತ್ರನೆ ಜಿಜ್ಞಾಸುಗಳಿಗೆಲ್ಲ |
ವಿಜ್ಞಾನವನು ನೀಡಿ ಪ್ರಾಜ್ಞನೇ ಪೊರೆಯೋ ||2||

ಕಮಲಾಕ್ಷ ಕರುಣದಿ ಕಮಲಿನಿಯ ಕಾಪಾಡೋ |
ವಿಮಲಾನುಭೂತಿಯಲಿ ಗುರು ರಾಘವೇಶ ||3||

ನಿನ್ನ ಪಾದವೇ ಎನಗೆ ಚಿನ್ಮಯನ ಸಿರಿಪಾದ |
ನಿನ್ನ ಗುಣಗಾನವೇ ಎನಗೆ ವೇದ ||4||

ಯಜ್ಞವರ್ಜ್ಯನೇ ನೀನು ಯಜ್ಞಪೋಷಕನಾಗಿ |
ಯಜ್ಞಪಶುವಾದೆಮಗೆ ಪ್ರಜ್ಞೆಯನು ನೀಡೋ ||5||

.

ವಿಶ್ರಾಂತಿ ನಿನಗಿರಲಿ ವಿಶ್ವಪಾಲಕನೇ (ಸಾಹಿತ್ಯ: ಶ್ರೀಮತಿ ಸೀತಾಲಕ್ಷ್ಮಿ ಹೆಗಡೆ)

ವಿಶ್ರಾಂತಿ ನಿನಗಿರಲಿ ವಿಶ್ವಪಾಲಕನೇ |
ವಿಶ್ವೇಶ್ವರನ ತೆರದಿ ವಿಶ್ವದೆಲ್ಲೆಡೆ ಇರ್ಪೇ ||ಪ||

ಒಂದು ಮನೆ ಯಜಮಾನ ತನ್ನವರ ಪಾಲನೆಗೆ |
ಹೊಂದಿರುವ ಹೊಣೆ ಎನಿತು ಪರದಾಟ ಎನಿತು ||
ಇಂದು ಈ ಜಗದ ಸಂಸಾರದ ಹೊಣೆ ಹೊತ್ತು |
ನಿಂದ ನಿನ್ನನು ನೋಡಿ ಹೃದಯ ತಳಮಳಿಸುತಿದೆ ||1||

ಉದಯದಲಿ ಮಹಾಪೂಜೆ ಸಂಜೆಯಲಿ ಮಹಾಪೂಜೆ |
ನಡುನಡುವಿನಾ ಸಮಯ ಬಂದವರ ಭೇಟಿ ||
ನಡುರಾತ್ರಿ ಬಂದರೂ ನಸುನಗುತ ನುಡಿಸುತಿಹೆ |
ಒಡೆಯ ನಿನ್ನನು ನೋಡಿ ಮನ ತಲ್ಲಣಿಸುತಿಹುದು ||2||

ರಕ್ಷಣೆಯ ನೀಡೆಂದು ಎಲ್ಲವರು ಬೇಡುವರು |
ಶಿಷ್ಟ ರಕ್ಷಕ ನಿನಗೆ ದಣಿವಿಲ್ಲವೇನೋ ||
ಈ ಕ್ಷಿತಿಯ ಗುರಿಕಾರ ರಾಘವೇಶ್ವರರಾಯ |
ಸುಕ್ಷೇಮವಾಗಿರ್ದು ನಿತ್ಯ ನಗುಮೊಗದೋರು ||3||

.

ಎಲ್ಲಿರುವೆಯೋ ಜೀಯ ಎಲ್ಲಿ ಹುಡುಕಲಿ ನಿನ್ನ (ಸಾಹಿತ್ಯ: ಶ್ರೀಮತಿ ಸೀತಾಲಕ್ಷ್ಮಿ ಹೆಗಡೆ)

ಎಲ್ಲಿರುವೆಯೋ ಜೀಯ ಎಲ್ಲಿ ಹುಡುಕಲಿ ನಿನ್ನ | ಇಲ್ಲೇ ಇರಬಾರದೇ ಈ ಮನಸಿನಲ್ಲಿ ||
ನಿಲ್ಲಲೂ ಬಿಡುವಿರದ ನಿನ್ನ ಕಾಯಕದಲ್ಲಿ | ಎಲ್ಲ ಪೇಳುವುದೆಂತು ಎದುರಿನಲ್ಲಿ ||ಪ||

ಮಂತ್ರಾಕ್ಷತೆಯ ವೇಳೆ ಮಾತನಾಡುವೆನೆನಲು |
ನಿಂತವರ ಸಾಲಿನಲ್ಲಿ ನೂರರಾಚೆ ||
ನಿಂತವಳು ನಾನಯ್ಯ ಕಾಲ್ಬಲವು ಕುಂದಿತ್ತು |
ಅಂತೂ ಸೆರಗೊಡ್ಡಿ ತಲೆಬಾಗೀ ನಡೆದೆ ||1||

ಭೇಟಿಯ ಸಮಯದಲಿ ಮಾತನಾಡುವೆನೆನಲು |
ಕೋಟಿ ಭಜಕರ ಹಿಂದೆ ನನ್ನ ಹೆಸರು ||
ಭೇಟಿಯಲಿ ಉದಯಾಸ್ತ ಉರುಳುತಿದೆ |
ಗಜದಂತ ಪೀಠಾಧಿಪತಿ ಕರುಣೆದೋರು ||2||

ಓಡಾಡುತಿಹ ನಿನ್ನ ನೋಡಿ ನುಡಿಸುವೆನೆನಲು |
ರೂಢಿಯೊಡನೆ ನಿನ್ನ ಸುತ್ತ ಮುತ್ತ ||
ಗೋಡೆಗಟ್ಟಿದ ರೀತಿ ಶರಣ ಬಾಂಧವರಿಹುದ |
ನೋಡಿ ಸಂತಸಗೊಂಡೆ ನುಡಿಯಲಿಲ್ಲ ||3||

ಈಗ ಪಾದುಕೆ ಮೆಟ್ಟಿ ವೇಗದಲೀ ಸಾಗುತಿಹೆ |
ಓಡಲಾರದೆ ಹೃದಯ ಕೂಗುತಿಹುದು ||
ರಾಘವ ನಿಲ್ಲಯ್ಯ ರಘುರಾಮ ರೂಪನೆ|
ಯೋಗಿ ಕುಲದೀಪಕನೆ ಮನವ ಬೆಳಗು ||4||

ಮುನಿಕುಲೋತ್ತಮ ನೀನು ಕನಸಿನಲಿ ಬಾರಯ್ಯ |
ಕ್ಷಣಕಾಲ ಮನಬಿಚ್ಚಿ ಮಾತನಾಡೇವು ||
ಕೊನೆಯ ಜಾವದಿ ಬರುವ ಸುಖನಿದ್ರೆಯದರಲ್ಲಿ |
ಮನಸಿನ ಗಾಯಗಳು ಮಾಸೀಯಾವು ||5||

.

ನೀಲದಾಗಸದಲ್ಲಿ ಪೂರ್ಣಚಂದಿರನಂತೆ (ಸಾಹಿತ್ಯ: ಶ್ರೀಮತಿ ಸೀತಾಲಕ್ಷ್ಮಿ ಹೆಗಡೆ)

ನೀಲದಾಗಸದಲ್ಲಿ ಪೂರ್ಣಚಂದಿರನಂತೆ |
ಪೀಠದಲಿ ರಾಜಿಸಿದೆ ಗುರುವರೇಣ್ಯ ||
ಈ ಹವ್ಯಕ ಸಮಾಜ ಶರಧಿ ನಿನ್ನಯ ದಿವ್ಯ |
ಚರಣ ತೊಳೆಯುತ್ತಿಹುದೇ ಪೂರ್ವ ಪುಣ್ಯ ||ಪ||

ಇರುಳಿನಾ ನಂತರದಿ ರವಿ ಮೂಡಿ ಬರುವಂತೆ |
ನೀ ಬಂದೆ ಜನಮನದ ರಾತ್ರಿ ಕಳೆದೆ ||
ರಾಮಾಯಣದ ರಾಮ ಭಾಗವತದಲಿ ಕೃಷ್ಣ |
ತಾನೆಂಬ ರೀತಿಯಲಿ ನೀನು ಬೆಳೆದೆ ||1||

ಪಟ್ಟವನು ಸ್ವೀಕರಿಸಿ ಪೀಠವೇರಿದ ದಿನವೇ |
ಎಷ್ಟೊಂದು ಯೋಜನೆಯ ಸೃಷ್ಟಿಗೈದು ||
ನಿಷ್ಠೆಯಿಂದಲಿ ಕಾರ್ಯರೂಪಕೆ ತಂದೆ ಗುರುರಾಯ |
ಭಕ್ತರ ಮನೆಮನೆಗೆ ಸಾಗಿಬಂದೂ ||2||

ರಾಮಚಂದ್ರಾಪುರದ ಶ್ರೀ ಮಠಾಧಿಪ ನೀನು |
ಸೋಮಮೌಳಿಯು ನಿನ್ನ ಸಂಗಡಿರುವ ||
ಸೋಮ ಸುಂದರ ವದನ ರಾಮನ್ ಸನ್ನಿಧಿ ಸದನ |
ರಾಘವೇಶ್ವರ ನೀಡು ನಿನ್ನ ಸೇವಾ ||3||

.

ನುಡಿ ನುಡಿಯಲಿ ಮೂಡಿ ಬರಲಿ ಮಧುರ ರಾಮ ನಾಮ (ಸಾಹಿತ್ಯ: ಶ್ರೀಮತಿ ಸೀತಾಲಕ್ಷ್ಮಿ ಹೆಗಡೆ)

ನುಡಿ ನುಡಿಯಲಿ ಮೂಡಿ ಬರಲಿ ಮಧುರ ರಾಮ ನಾಮ |
ಜಗದ ಜೀವ ರಾಶಿಗಳಿಗೆ ಇದುವೇ ಪುಣ್ಯಧ್ಯಾಮ ||ಪ||

ಕಷ್ಟ ಕಳೆವ ಸೌಖ್ಯ ಪಡೆವ ಮಾರ್ಗಕಿದುವೇ ಸಾಧನ |
ಶತ್ರುಭಯವ ಮೃತ್ಯುಭಯವ ಕಳೆವ ದಿವ್ಯ ಚೇತನ ||
ಹುಟ್ಟು ಸಾವು ಬಾರದಂಥ ಮೋಕ್ಷ ಮಾರ್ಗ ದರ್ಶನ |
ನಿಷ್ಠೆ ನೇಮ ಬಯಸದಂತ ನಾಮ ಪರಮ ಪಾವನ ||1||

ಹರಡಿರುವ ನೀಲದಲ್ಲಿ ಪುಣ್ಯನಾಮ ಛಾಯೆಯು |
ಮೂಡಿರುವಾ ತಾರೆಗಳಲಿ ಅದೇ ದಿವ್ಯತೇಜವೂ ||
ಹರಿವ ನದಿಯ ನೀರಿನಲ್ಲಿ ರಾಮ ನಾಮ ಧ್ಯಾನವೂ |
ನೆಲದ ಮಣ್ಣ ಕಣ ಕಣದಲಿ ರಾಮನಾಮ ಮಹಿಮೆಯೂ ||2||

ರಾಮ ರಾಘವೇಶನಾಗಿ ಅವತಾರವ ತಾಳಿದಾ |
ರಾಮಚಂದ್ರಪುರಮಠದಲಿ ಗುರುಪೀಠವನೇರಿದಾ ||
ಮಲಗಿರುವ ಜನಕೋಟಿಯ ತಟ್ಟಿ ಕೂಗಿ ಕರೆಸಿದಾ |
ಮನಸಿನಂಗಳದಲಿ ರಾಮ ನಾಮ ಬೀಜ ಬಿತ್ತಿದಾ ||3||

.

ಗುರುವಿರಬೇಕೆಮೆಗಿಂಥವನು ಗುರು ರಾಘವೇಶ್ವರರಂತವನು (ಸಾಹಿತ್ಯ: ಶ್ರೀಮತಿ ಸೀತಾಲಕ್ಷ್ಮಿ ಹೆಗಡೆ)

ಗುರುವಿರಬೇಕೆಮೆಗಿಂಥವನು | ಗುರು ರಾಘವೇಶ್ವರರಂತವನು ||
ಮರೆತು ಹೋದ ನಮ್ಮ ನೀತಿ ಧರ್ಮಗಳ | ಮರಳಿ ಮರಳಿ ಬೋಧಿಸುವವನು ||ಪ||

ಆದಿಶಂಕರರ ಪೀಠವನು |
ಪರಮಾದರದಲಿ ತಾನೇರಿದನು ||
ವೇದಶಾಸ್ತ್ರಗಳ ಧರ್ಮ ಕರ್ಮಗಳ |
ಹಾದಿ ತೋರಿಕೊಡುವಂಥವನು ||1||

ಹರಿಹರಬ್ರಹ್ಮ ಸ್ವರೂಪನು ತಾ |
ಧರಿಸಿ ಜಗದಿ ಗೋಚರಿಸಿದನು ||
ಕರೆದೆಲ್ಲರ ಸುಖ ದು:ಖ ವಿಚಾರಿಸಿ |
ಹರಸಿ ಅಭಯ ನೀಡುತಲಿಹನು ||2||

ಜಗದುದ್ಧಾರಕೆ ನಿಂತಿಹನು |
ತಾ ಜಗದೊಳೆಲ್ಲ ಸಂಚರಿಸುವನು ||
ನಗೆಮೊಗದರಸನು ತ್ರಿಗುಣಾತೀತನು |
ಪೊಗಳಸಾಧ್ಯದಾ ಬಗೆಯವನು ||3||

ಕೋಟಿ ಸೂರ್ಯ ಪ್ರಭೆಯುಳ್ಳವನು |
ಗುರುಪೀಠಕೆ ಹಿರಿಮೆಯ ತಂದಿಹನು ||
ಸಾಟಿಯಿರದ ಸೌಜನ್ಯ ಸುಗುಣಗಳ |
ಕೋಟೆ ಕಟ್ಟಿ ತಾನಾಳುವನು ||4|

ಪ್ರೇಮಮೂರ್ತಿ ಎಂದೆನಿಸಿಹನು |
ಬಹು ನೇಮದಿಂದ ತಾನಿರುತಿಹನು ||
ರಾಮಚಂದ್ರಪುರ ಮಠದಲಿ ಸೀತಾರಾಮರ |
ಸೇವೆಯ ಮಾಳ್ಪವನು ||5||

.

ದೂರ ಮಾಡಬೇಡವೆನ್ನ ಬೇಡಿಕೊಂಬೆ ರಾಘವ (ಸಾಹಿತ್ಯ: ಶ್ರೀಮತಿ ಸೀತಾಲಕ್ಷ್ಮಿ ಹೆಗಡೆ)

ದೂರ ಮಾಡಬೇಡವೆನ್ನ ಬೇಡಿಕೊಂಬೆ ರಾಘವ |
ತೀರ ನೊಂದು ಬಂದು ನಿನ್ನ ಪಾದಕಮಲಕೆರಗಿರುವೆನು ||ಪ||

ಕರಕಮಲವ ಮುಡಿಯೊಳಿಟ್ಟು
ಕರುಣೆಯಿಂದ ನನ್ನ ನೋಡಿ |
ಹರಸು ರಾಮಚಂದ್ರಪುರದ
ಗುರುವರೇಣ್ಯ ರಾಘವೇಶ ||1||

ಎಷ್ಟು ದೂರವಿದ್ದರೇನು
ನಿನ್ನ ದಿವ್ಯ ಮೂರ್ತಿಯನ್ನು |
ಇಟ್ಟು ಹೃದಯ ಮಂದಿರದಲಿ
ನಿತ್ಯ ಪೂಜೆ ಗೈಯುತಿಹೆನು ||2||

ಜ್ಞಾನ ಭಕುತಿ ವೈರಾಗ್ಯವ
ನೀನೇ ಎನಗೆ ಪಾಲಿಸಯ್ಯಾ |
ದೀನನಾಥನೆ ಕರುಣೆ ದೋರು,
ನಾನು ನಿನ್ನ ಬಳಿಗೇ ಬಂದೆನು ||3||

ರಾಘವೇಶ ಬಾರೋ ಎಂದು
ಕೂಗಿ ಕರೆವ ಭಕುತರಲ್ಲಿ |
ಈಗ ನಾನು ಓರ್ವಳಯ್ಯಾ
ಶ್ರೀ ಗುರುವೇ ಕರುಣೆ ದೋರು ||4||

ನೀರಿಲ್ಲದೆ ಮೀನ್ಗಳಿಲ್ಲ
ದೇವರಿಲ್ಲದೇ ದಾಸರಿಲ್ಲ |
ನಾನು ಎಂಬುದೇನು ಇಲ್ಲ,
ನೀನೇ ಎಲ್ಲೆಡೆ ತುಂಬಿಹೆಯಲ್ಲ ||5||

.

ಶರಣು ಹೇ ಗೋಮಾತೆಯೆ (ಸಾಹಿತ್ಯ: ಶ್ರೀಮತಿ ಸೀತಾಲಕ್ಷ್ಮಿ ಹೆಗಡೆ)

ಶರಣು ಹೇ ಗೋಮಾತೆಯೆ
ನಿನಗೆ ಕೋಟಿ ನೀರಾಜನ
ಮಾತೆಯರ ಸಂಪ್ರಾರ್ಥನಾ (ಕಂದರೆಲ್ಲರ ಪ್ರಾರ್ಥನಾ)
ಪ್ರೀತಿಯಾ ಆರಾಧನಾ ||ಪ||

ಶರಣು ಹೇ ಗೋಮಾತೆಯೆ | ಶರಣು ಹೇ ಗೋಮಾತೆಯೆ || (chorus)

ಹೃದಯದಾಳದ ಭಕ್ತಿಯಿಂದಲಿ | ಮಾಡುತಿರುವೆವು ವಂದನಾ ||
ಜೀವಕೋಟಿಯ ಉಳಿವಿನಾ | ಕಳಕಳಿಯ ಆಲಾಪನಾ ||1||

ಅನ್ನ ನೀಡುವ ಭೂಮಿ ತಾಯಿಯ | ಪುಷ್ಠಿ ಬಲ ವರ್ಥಿಸುವೆ ನೀ ||
ರಾಷ್ಟ್ರಮಾತೆ ಭಾರತಿಯ ಪ್ರತಿ | ರೂಪದಂತೆಯೆ ಇರುವೆ ನೀ ||2||

ಜಾತಿ ಮತ ಧರ್ಮಗಳನೆಣಿಸದೇ | ಕ್ಷೀರಸುಧೆ ನೀಡುತಿಹೆ ನೀ |
ಗವ್ಯದಿಂದಲಿ ರೋಗಗಳ ಪರಿಹರಿಸುವ ನಿಜ ಶಕ್ತಿ ನೀ ||3||

ಸಜ್ಜನರು ದುರ್ಜನರು ಎನ್ನುವ ಭೇದವಾ ಪರಿಗಣಿಸದೇ ನೀ
ಸಕಲರಿಗೂ ಸೌಖ್ಯವನು ನೀಡುವ ತ್ಯಾಗ ಮಮತೆಯ ಮೂರ್ತಿ ನೀ||4||

ಅಳಿಸಿದರೆ ಗೋಮಾತೆಯಾ | ಮನುಜರಳಿವುದು ನಿಶ್ಚಯ |
ಅಳಿವ ಗೋವನು ಉಳಿಸಿದರೆ ನಾವುಳಿಯುವುದು ನಿಸ್ಸಂಶಯ ||5||

ಜನಮನದೊಳಗೆ ನಿನ್ನ ಹಿರಿಮೆಯ | ಅರಿವ ಮೂಡಿಸಿ ಬೆಳೆಸಿದಾ |
ಜನನಿ ಹೃದಯದ ರಾಘವೇಶನ ಉಸಿರಿನೊಳಗಿಹೆ ನೀ ಸದಾ ||6||

.

ಎಂಥಾ ಮಗನ ಪಡೆದೀಯವ್ವ (ಸಾಹಿತ್ಯ: ಶ್ರೀಮತಿ ಸೀತಾಲಕ್ಷ್ಮಿ ಹೆಗಡೆ)

ಎಂಥಾ ಮಗನ ಪಡೆದೀಯವ್ವ | ಅಮ್ಮಾ ತಾಯೇ ಎಂಥಾ ಮಗನ ಪಡೆದೀಯವ್ವ ||
ಅಂತಿಂತ ಮಗನಲ್ಲ ಕಂತು ಪಿತನ ಹೋಲ್ವ | ಸಂತ ಸಜ್ಜನನಾತ ಈ ನಮ್ಮ ಗುರುನಾಥ ||ಪ||

ಕಾವಿಯ ಉಡುಗಿ ಕರುಣೆಯ ಕವಚ |
ವಿಭೂತಿ ಹಣೆಯೊಳು ಶಿವನ ಸ್ವರೂಪ ||
ಹೊಳೆಯುವ ಕಂಗಳು ಸುಜ್ಞಾನ ಜ್ಯೋತಿ |
ಮುಖದಾಗೆ ತಿಳಿ ಬೆಳದಿಂಗಳ ಕಾಂತಿ ||1||

ಕೊರಳಿನ ಸ್ಫಟಿಕ ಹಾರದ ಮೇಲೆ |
ಶರಣರಿಕ್ಕೀರೋ ತುಳಸಿಯ ಮಾಲೆ ||
ನಂದ ಕಿಶೋರನ ಮೋಹನ ರೂಪ |
ಲೋಕವ ಹಚ್ಚಿ ಬೆಳಗೀವ್ನಿ ದೀಪ ||2||

ದಂತದ ಪೀಠ ಏರಿದ ದಾತ |
ಶಿರದಿ ಕಿರೀಟ ಚಾಮರ ಛತ್ರ ||
ಉತ್ಸವ ಹೊರಡೊನು ಪಲ್ಲಕಿಯೇರಿ |
ಆಚೀಚೆ ಬೀಸೋರು ಬೀಸಳ್ಗೆ ಚವರಿ ||3||

ಪಟ್ಟೆ ಪೀತಾಂಬ್ರ ಉಟ್ಟಂಥ ಗುರುವು |
ಮೆತ್ತಾಗೆ ಮೆಲ್ಲಾ ನಡ್ದಾಗ ನೆಲವು ||
ತೃಪ್ತೀಲಿ ಧನ್ಯ ಎನುತಿಹುದವ್ವ |
ಹೊತ್ತಾರೆ ಸೂರ್ಯನ್ನ ಹೋಲ್ವಂತ ಗುರುವ ||4||

ನಗುವಾಗ ಮುತ್ತು ಉದ್ರುವ ಹಾಗೆ |
ಜಗವೆಲ್ಲ ಮಿಂದು ಮಡಿಯಾಯಿತೀಗೆ ||
ಬಗೆ ಬಗೆ ಯೋಜನೆ ಲೋಕವ ತುಂಬಿ |
ಗುರುವೆಂಬ ಹೂವಿಗೆ ಬರತಾವೆ ದುಂಬಿ ||5||

.

ಒಂದೇ ಒಂದ್ ಬಾರಿ ಬನ್ನಿ ನಮ್ಮನೆಗೆ

ಒಂದೇ ಒಂದ್ ಬಾರಿ ಬನ್ನಿ ನಮ್ಮನೆಗೆ |
ಬರಗಿದ್ರೆ ಬೇಜಾರಾಗ್ತು ನನ್ ಮನ್ಸಿಗೆ ||ಪ||

ಓಡಾಡುಲಾಗ್ತು ಹೇಳಿ ರೋಡ್ ಮಾಡಿದ್ದೋ |
ಉಳ್ಕಂಬು ಲೆಕ್ಕಕ್ಕೆಂದು ಗೂಡ್ ಕಟ್ಟಿದ್ದೋ ||
ಆಕ್ಳಿದ್ದು ಕರ ಇದ್ದು ಸಣ್ದೊಂದು ಜಮೀನಿದ್ದು |
ನಿಮ್ ಪಾದದ್ ಧೂಳಿ ಬಿದ್ದು ಬವಣೆ ಬದ್ಕು ಉದ್ಧಾರಾಗ್ಲಿ ||1||

ಚೈತ್ರ ವೈಶಾಖಕ್ಕಂದ್ತೆ ನೀರಿರ್ತಿಲ್ಲೆ |
ಮಳೆಗಾಲ್ದಲ್ ಗುಡ್ಡ ಮಾರ್ಗ ಸರಿ ಇರ್ತಿಲ್ಲೆ ||
ಆಶ್ವೀಜ ಕಾರ್ತಿಕ ಸಾಮಾನ್ಯ ಪರ್ವಾಗಿಲ್ಲೆ |
ಸುತ್ತ ಮುತ್ತ ಬೆಟ್ಟ ಗುಡ್ಡ ಅಚ್ಚ ಹಸರು ತುಂಬ್ಕಂಡಿರ್ತು ||2||

ಎಲ್ಲೆಲ್ಯವ್ರೆಲ್ಲಾ ಬಂದು ಕರೆತಾ ಇರ್ತೊ |
ಅಲ್ಲೆಲ್ಲಾ ಸಂಸ್ಥಾನ ಹೋಯ್ಕತ್ತೇ ಇರ್ತು ||
ಎಲ್ಲೆಲ್ಲಿ ನೋಡಿದರು ಶ್ರೀಗಳನೆ ಕೊಂಡಾಡ್ತಿರ್ತು |
ಕಸ್ಬಿಲ್ಲದ ಮುದ್ಕಿ ಹೇಳಿ ಕಂಡವ್ರೆಲ್ಲಾ ಗೇಲಿ ಮಾಡ್ತೋ ||3||

ಬಡತನ ಯಾವಾಗ್ಲೂ ಕಾಡ್ತಾ ಇದ್ದು |
ಬವಣೆಲೆ ಬಾಳು ಬದುಕು ಸಾಗ್ತಾ ಇದ್ದು ||
ರಾಮ್ ದೇವ್ರ ಪೂಜೆ ನೋಡೋ ಪಾದ್ ಪೂಜೆ ಭಿಕ್ಷ ಮಾಡೋ |
ಅಯ್ಯೋ ದೇವ್ರೆ ಎಂತಾ ಮಾಡ್ಲಿ ಕೈಲಾಗ್ತಿಲ್ಲೆ ಹೇಳ್ಕತ್ತಿದ್ದೇ ||4||

ಕೊಡ್ತೆ ಇಡ್ತೆ ಹೇಳಿ ನಾ ಹೇಳ್ತ್ನಿಲ್ಲೆ |
ಒಡವೆ ಬಂಗಾರ ಬೆಳ್ಳಿ ನನ್ ಕೈಲಿಲ್ಲೆ ||
ಶಬರಿಯ ಕುಟೀರಕ್ಕೆ ಶ್ರೀರಾಮ ಬಂದಾಂಗೆ |
ಒಡೆಯ ರಾಘವೇಶ ನನ್ನ ಗುಡಿಸಿಲಲ್ಲಿ ಪಾದ ಇರಿಸಿ ||5||

.

ಬಾಗಿಲನು ತೆರೆದು ದರುಶನವ ತಾರಯ್ಯ (ಸಾಹಿತ್ಯ: ಶ್ರೀಮತಿ ಸೀತಾಲಕ್ಷ್ಮಿ ಹೆಗಡೆ)

ಬಾಗಿಲನು ತೆರೆದು ದರುಶನವ ತಾರಯ್ಯ |
ಶ್ರೀರಾಮಚಂದಿರನ ಮೂರುತಿಯ ತೋರೋ ||ಪ||

ಈಗ ಶ್ರೀರಾಮ ಶಶಿಮೌಳಿ ರಾಜೇಶ್ವರಿಯ |
ಪೂಜೆಯನು ಕಾಂಬಂಥ ಸೌಭಾಗ್ಯ ನೀಡೋ ||
ಸಾಗರದ ತೆರನಿರ್ಪ ಶಿಷ್ಯಕೋಟಿಗಳೊಡೆಯ |
ಜಾಗು ಮಾಡದೇ ಇಂದಿನೀ ಕ್ಷಣದಿ ದಯದೋರಿ ||1||

ಶಂಖಧ್ವನಿಗೆ ನಾಕ ನಿಂತು ಕಿವಿ ತೆರೆದಿಹುದು |
ಘಂಟೆ ಜಾಗಟೆಗಾಗಿ ಜಗವೇ ಕಾಯ್ದಿಹುದು ||
ಮಂತ್ರಘೋಷಕೆ ಶರಣವೃಂದ ಕಾತರಿಸುತಿದೆ |
ಶಂಕರ ಪ್ರಿಯಕರ ರಾಘವ ನೀನೊಲಿದು ||2||

ಬಾನಿನಲಿ ರಂಗೇರಿ ಬೆಳಗನ್ನು ಸೂಚಿಸಿದೆ |
ಪಕ್ಷಿಗಳು ಸ್ಮರಿಸುತಿವೆ ಗೋವಿಂದ ನಾಮ ||
ಧ್ಯಾನದಲಿ ಕುಳಿತು ಬಹು ವೇಳೆಯಾಯಿತು ಸ್ವಾಮಿ |
ಜ್ಞಾನಿ ಜಗದಾಧಾರ ಜಯ ಶರಣ ಜನಪ್ರಿಯ ||3||

ಅಭಿಷೇಕ ಪೂಜೆಗಳ ಆ ಮಹಾವೈಭವವ |
ನೈವೇದ್ಯ ಧೂಪದಾರತಿಯ ಸಂಭ್ರಮವ ||
ಪ್ರಭುವೆ ನೀರಾಜನವ ಬೆಳಗಿ ಉದಯವ ತೋರು |
ಜಗವೆಚ್ಚರಾಗಲೈ ಘಂಟೆಯನು ನೀ ತೂಗು||4||

.

ವೈಕುಂಠವನು ಕಂಡೆ ವಿಶ್ವಾಕ್ಷನನು ಕಂಡೆ (ಸಾಹಿತ್ಯ: ಶ್ರೀ ವೆಂ.ಭ.ವಂದೂರು)

ವೈಕುಂಠವನು ಕಂಡೆ ವಿಶ್ವಾಕ್ಷನನು ಕಂಡೆ |
ವಿಭವೇಶ ಮಣಿ ಮುಕುಟ ತಟಘಟಿತನನು ಕಂಡೆ ||ಪ||

ರಾಘವೇಶ್ವರನೆಂಬ ಯೋಗೀಶ್ವರನ ಕಂಡೆ |
ಸ್ವರ್ಗ ಸಿಂಹಾಸನದ ಸಿರಿಯ ಕಂಡೆ ||
ಮಾರ್ಗವೇ ಮೈವೆತ್ತ ವಾಗ್ಮಿಯನು ನಾ ಕಂಡೆ |
ಭಾರ್ಗವನ ಹೊಂಗಿರಣ ಹೊಳೆವುದನು ಕಂಡೆ ||1||

ಮುಕ್ಕೋಟಿ ದೇವತೆಗಳೊಕ್ಕೂಟವನು ಕಂಡೆ |
ದಿಕ್ಕು ದಿಕ್ಕುಗಳಿಂದ ಬುಧರು ಬರುವುದ ಕಂಡೆ ||
ಕಕ್ಕುಲತೆಯನು ಕಂಡೆ ಭಕ್ತಿರಸವನು ಉಂಡೆ |
ಉಕ್ಕುವಾನಂದದಲಿ ಅವಗಾಹಗೊಂಡೆ ||2||

ಕನಕಾಭಿಷೇಕವೋ ದಿನಕರನ ಉದಯವೋ |
ಮನುಕುಲದ ಭಾಗ್ಯ ಭಾಸ್ಕರನ ಭಾಸುರವೋ ||
ಮುನಿಕುಲದ ರತ್ನನಾ ಮುಡಿಗೆ ರತ್ನ ಕಿರೀಟ |
ಜನಕೋಟಿ ನಿಬ್ಬೆರಗು ಗೊಂಬುದನು ಕಂಡೆ ||3||

ಅಕ್ಕಸಾಲಿಗರಲ್ಲಿ ದಕ್ಕಿರುವ ಕೌಶಲ್ಯ |
ಚೊಕ್ಕ ಚಿನ್ನದ ಮುಕುಟಕೊಪ್ಪಿದುದ ಕಂಡೆ ||
ಚುಕ್ಕಿಯಂದದಿ ಹೊಳೆವ ವಜ್ರ ವೈಢೂರ್ಯಗಳು |
ಉಕ್ಕುತಿಯ ನವರತ್ನದಂದವನು ಕಂಡೆ ||4||

ಇತಿಹಾಸದಾ ಪುಟದಿ ಹೊಸಯುಗವ ನಾ ಕಂಡೆ |
ಕ್ಷಿತಿಜದುದ್ದಗಲದಲಿ ಹರಿವ ಹರ್ಷವ ಕಂಡೆ ||
ಗತಕಾಲದಲಿ ಕಂಡು ಕೇಳರಿಯದೀ ದಿವ್ಯ |
ಘಟನೆ ಘಟಿಸಿರುವಂತ ವಿಸ್ಮಯವ ಕಂಡೇ ||5||

.

ನಾಗವೇಣಿಯರೆತ್ತಿ ಬೆಳಗಿರಿ ರಾಘವೇಶ್ವರಗಾರತಿ (ಸಾಹಿತ್ಯ: ಶ್ರೀಮತಿ ಸೀತಾಲಕ್ಷ್ಮಿ ಹೆಗಡೆ)

ನಾಗವೇಣಿಯರೆತ್ತಿ ಬೆಳಗಿರಿ ರಾಘವೇಶ್ವರಗಾರತಿ |
ರಾಮಚಂದ್ರಾಪುರ ವಿರಾಜಿತ ರಾಜಗುರುವರಗಾರತಿ ||ಪ||

ಮುತ್ತು ಮಾಣಿಕ ಮೆರೆವ ತಟ್ಟೆಯಳೊಟ್ಟು ಜ್ಯೋತಿದ್ವಯವನು |
ನಿತ್ಯ ಮಂಗಳ ಮೂರ್ತಿ ಗುರುವಿಗೆ ಪಾಡಿ ಸ್ತುತಿ ವಚನಗಳನು ||1||

ಭರತ ಖಂಡದೊಳೆಲ್ಲ ತಾ ಸಂಚರಿಸುತಿಹ ಮಹಮಹಿಮಗೆ |
ಭಾರತಿಯರಾ ನೀತಿ ಧರ್ಮವ ಭೋದಿಸುವ ಮಹಪ್ರಾಜ್ಞಗೆ ||2||

ರಾಮನಾಮವೆ ನಿತ್ಯವೆಂಬೀ ನೇಮವೆಲ್ಲರಿಗರುಹುವಾ |
ಪ್ರೇಮ ಮಂಗಳ ಮೂರ್ತಿ ಗುರುವಿಗೆ ಅರ್ಪಿಸುತ ಫಲಪುಷ್ಪವಾ ||3||
.

ಸಮಾರೋಪ

ಭಗವಾನ್ ಶ್ರೀ ರಾಮಚಂದ್ರನ ಇಚ್ಛಾನುಸಾರ ಅನವರತ ರಾಮಾವತಾರಗಳು ನಡೆಯುತ್ತಲೇ ಬಂದಿವೆ. ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಸಕಲ ಸಾತ್ವಿಕ ಗುಣಗಳು, ಅಖಂಡ ಬ್ರಹ್ಮಚರ್ಯತ್ವ, ಪ್ರಜಾಪರಿಪಾಲನೆ, ನಾರುಮಡಿಯುಟ್ಟು ನೇರವಾಗಿ ಕಾಂತಾರಕ್ಕೆ ತೆರಳಿದಾಗ, ಕಾಡಿನಲ್ಲಿ ಸನ್ಯಾಸ ಜೀವನ, ಮಿತವಾದ ಆಹಾರ ಸೇವನೆ, ಪಂಚೇಂದ್ರಿಯಗಳ ಗೆಲ್ಲುವಿಕೆ, ಭಕ್ತರ ಉದ್ಧಾರ ಮುಂತಾದ ಎಲ್ಲ ವಿಶೇಷತ್ವಗಳ ಸಮುಚ್ಛಯವೇ ರಾಘವೇಶ್ವರ ಅವತಾರವೆಂದು ಪರಿಭಾವಿಸಿದರೆ ವಾಸ್ತವವನ್ನು ಎತ್ತಿ ಹಿಡಿದಂತಾಗುತ್ತದೆ.

ಮಾಟವಾದ ಮುದ್ದುಮೊಗದರಸ ರಾಘವೇಶನ ಸನ್ಯಾಸ ಬದುಕು ಎಲ್ಲರಿಗೂ ಆದರ್ಶಪ್ರಾಯವಾಗಿದೆ. ಸಮಾಜದ ಒಳಿತಿಗೆ ಇವರು ಕೈಗೊಂಡ ಯೋಜನೆಗಳು ಯೋಜನದುದ್ದಕ್ಕೂ ಪಸರಿಸಿ ನಿಂತಿವೆ. ಇವರ ಸಾನಿಧ್ಯ ಆನಂದದಾಯಕ. ಬ್ರಹ್ಮಮೋಹಕತ್ವದಿಂದ ಶರಶ್ಚಂದ್ರನ ಕಾಂತಿಯನ್ನು ಹೊಂದಿದ ಇವರೇ ಶಾಂತಿಧಾಮ. ಎಷ್ಟು ನೋಡಿದರೂ ನೋಡುತ್ತಲೇ ಇರಬೇಕೆನ್ನುವ ಆಕರ್ಷಣೆ ಇವರಲ್ಲಿದೆ. ಇವರ ಆಶೀರ್ವಚನಗಳಿಂದ ಪರಿಹಾರವಾಗದ ಸಮಸ್ಯೆ ಇಲ್ಲ. ಎಲ್ಲ ದೇವರುಗಳನ್ನ ರಾಘವೇಶ್ವರರಲ್ಲಿ ಕಂಡು, ಭಕ್ತಿಯಿಂದ ನಡೆಯುವ ಭಕ್ತನ ಬದುಕು ಸಾರ್ಥಕ್ಯವಾಗುತ್ತದೆ.
ಬಾನಂಚಿನ ನೀಲಿ ಆಗಸದ ಚಂದ್ರಮನಿಂದ ಹೊರಸೂಸುವ ತಂಪುಕಿರಣಗಳಂತೆ, ಈ ರಾಘವ ಚಂದಿರನ ನೇತ್ರದ್ವಯಗಳ ಅವಲೋಕನೆ ನೊಂದವರಿಗೆಲ್ಲ ಅಂದವಾದ ಆನಂದ ತಂಪನ್ನೂ, ಸಂತೋಷದ ಕಂಪನ್ನೂ ಕೊಡುವುದರಲ್ಲಿ ಸಂದೇಹವಿಲ್ಲ. ಇವರ ನೆನಪು ಮಧುರ. ಆ ನೆನಪಿನಂಗಳದಲ್ಲಿ ಹಿತಮಿತವಾದ ಆನಂದ ಗಿಡಗಳು ಅದಾವುದೋ ಕಾಣದ ಭಾವನಾತ್ಮಕ ಲೋಕಕ್ಕೆ ನಿಮ್ಮನ್ನು ಕರೆದೊಯ್ಯುತ್ತವೆ. ಈಗಲಾದರೂ ಕಾರ್ಯತತ್ಪರರಾಗಿ. ಅಘನಿವಾರಕ ರಾಘವೇಶ್ವರರ ದರ್ಶನ ಮಾಡಿ ಲೌಕಿಕ, ಪಾರಮಾರ್ಥಿಕ ಸುಖಗಳನ್ನು ಹೊಂದಿ.

ಬದುಕು ಬಂಗಾರವಾಗಬೇಕಾದರೆ ಇಲ್ಲಿಗೆ ಧಾವಿಸಿ.

“ರಾಘವೇಶೋ ವಿಜಯತೇ”

Facebook Comments