LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಅಂಬೊಂದು….ಹಕ್ಕಿಯೆರಡು…!

Author: ; Published On: ಗುರುವಾರ, ಜೂನ್ 24th, 2010;

Switch to language: ಕನ್ನಡ | English | हिंदी         Shortlink:

|| ಹರೇರಾಮ ||

ದೈವೀಸಂಪತ್ತುಗಳು ಹರಿದು ಬರುವ ದ್ವಾರವನ್ನು ಕೃತಜ್ಞತೆಯಿಂದ ಪೂಜಿಸಬೇಕು.
ಹಾಗೆ ಮಾಡದಿದ್ದಾಗ ದ್ವಾರಬಂಧವಾಗಬಹುದು, ಸಂಪತ್ತಿನ ಹರಿವೆಯೇ ನಿಲ್ಲಬಹುದೆಂಬುದು ಬಲ್ಲವರ ಮಾತು..

ಸಂಪೂರ್ಣ ರಾಮಕಥೆಯನ್ನು ಸಂಕ್ಷೇಪವಾಗಿ ಕೇಳಿದ ವಾಲ್ಮೀಕಿಗಳು ನಾರದರನ್ನು ವಿಧಿವತ್ತಾಗಿ ಪೂಜಿಸಿದರು.
ವಾಲ್ಮೀಕಿಗಳ ಪಾಲಿಗೆ ರಾಮದ್ವಾರವಲ್ಲವೇ ನಾರದರು..?
ಯುಗ-ಯುಗಗಳ ಕಾಲ ಭುವಿಯ ಜೀವಿಗಳಿಗೆ ಭವ್ಯ ಬದುಕಿನ ದಾರಿ ತೋರಬಲ್ಲ ಮಹಾಕಾವ್ಯವೊಂದಕ್ಕೆ –
ಅಮೃತಬೀಜವನ್ನು ವಾಲ್ಮೀಕಿಗಳ ಹೃದಯದಲ್ಲಿ ಬಿತ್ತಿದ ನಾರದರು-
‘ಬಂದ ಕಾರ್ಯವಾಯಿತು’ ಎಂಬಂತೆ ಗಗನವನ್ನೇರಿ ಹೊರಟು ಹೋದರು…

ದಿವಿ ಭುವಿಗಿಳಿದಿತ್ತು..
ಭುವಿಯನ್ನು ದಿವಿಯಾಗಿಸಬಯಸಿತ್ತು..!
ವಾಲ್ಮೀಕಿಗಳ ಹೃದಯವನ್ನು ಹೊಕ್ಕಿತ್ತು..
ಬಹು ದೊಡ್ಡ ರೂಪದಲ್ಲಿ ಪ್ರಕಟಗೊಳ್ಳಲು ಸಮಯ ಕಾಯುತ್ತಿತ್ತು…
ಸನ್ನಿವೇಶವನ್ನು ಸೃಷ್ಟಿಸತೊಡಗಿತ್ತು..!

ರಾಮಾಯಣದ ಕಥನ-ಕಥಾನಕ-ಕಥಾನಾಯಕರ ಗಾಢ ಪ್ರಭಾವಕ್ಕೊಳಗಾದ ಮಹಾಮುನಿಗಳಿಗೆ ಬಹು ಹೊತ್ತಿನವರೆಗೆ ಬಾಹ್ಯಪ್ರಜ್ಞೆ ಮರಳಲಿಲ್ಲ…!
ನಡುನೆತ್ತಿಯ ನೇಸರ ತನ್ನ ಕಿರಣಗಳ ಕರಗಳಿಂದ ತಟ್ಟಿ ಎಬ್ಬಿಸಿದಾಗಲೇ ವಾಲ್ಮೀಕಿಗಳಿಗೆ ಎಚ್ಚರವಾದದ್ದು…!

ಪವಿತ್ರತೆಯಲ್ಲಿ ಗಂಗೆಯ ತಂಗಿಯೇ ಆದ ತಮಸೆಯೆಡೆಗೆ ತೆರಳಿದರು ವಾಲ್ಮೀಕಿಗಳು ಮಾಧ್ಯಾಹ್ನಿಕ ಸ್ನಾನಕ್ಕಾಗಿ.
ಪ್ರಿಯಶಿಷ್ಯನಾದ ಭರದ್ವಾಜನು ಸ್ನಾನವಸ್ತ್ರ ಮತ್ತು ಕಲಶಗಳೊಡನೆ ಅವರನ್ನನುಸರಿಸಿದನು.
ನಿರ್ಮಲಾತ್ಮನ ನೆನಪಿನಲ್ಲಿಯೇ ಇದ್ದ ವಾಲ್ಮೀಕಿಗಳಿಗೆ ಪ್ರತಿನಿತ್ಯ ನೋಡುತ್ತಿದ್ದರೂ ಅಂದೇಕೋ ವಿಶೇಷವಾಗಿ ತೋರಿದಳು ತಮಸೆ..!

ಒಂದಿನಿತೂ ಕಲ್ಮಷವಿಲ್ಲದ, ರಮಣೀಯವಾದ, ಸ್ಫಟಿಕಸದೃಶವಾದ ತಮಸೆಯ ಜಲದಲ್ಲಿ –
ವಾಲ್ಮೀಕಿಗಳಿಗೆ ತೋರಿದ್ದು ಶ್ರೀರಾಮನ ಮನ….!
ತಿಳಿದವನಾಗದಿದ್ದರೂ ಚಿಂತೆಯಿಲ್ಲ, ಸನ್ಮನುಷ್ಯನಾಗಬೇಕಿದ್ದರೆ ತಿಳಿಮನದವನಾಗಿರಬೇಕು..!
ಅಂತಹ ಶ್ರೀರಾಮನ ಮನಕ್ಕೆ ನಮನ ಸಲ್ಲಿಸಿ ಸ್ನಾನಕ್ಕೆ ಸಿದ್ಧರಾದ ವಾಲ್ಮೀಕಿಗಳು ಭರದ್ವಾಜನಿಗೆ ಹೇಳಿದರು.

” ಮಗೂ.. ಕಲಶವನ್ನಿಲ್ಲಿಯೇ ಇಡು, ಸ್ನಾನವಸ್ತ್ರವನ್ನು ಕೊಡು.
ಹಿತವಾದ ಈ ತಮಸಾ ತೀರ್ಥವನ್ನು ಅವಗಾಹಿಸುವೆ..”
ಭರದ್ವಾಜನು ವಿನೀತನಾಗಿ ವಾಲ್ಮೀಕಿಗಳ ಆಣತಿಯನ್ನು ಪಾಲಿಸಿದನು.

ಭರದ್ವಾಜನ ಹಸ್ತದಿಂದ ಸ್ನಾನವಸ್ತ್ರವನ್ನು ವಾಲ್ಮೀಕಿಗಳು ತೆಗೆದುಕೊಂಡಿದ್ದೇನೋ ನಿಜ,
ಆದರೆ ತಮಸೆಯ ಅವಗಾಹನವನ್ನು ಅವರು ಮಾಡಲಿಲ್ಲ..!
ಅದಾಗಲೇ ಅವರ ಮನಸ್ಸು ನಿರ್ಮಲತೆಯಲ್ಲಿ ತಮಸೆಯನ್ನೇ ಹೋಲುವ ರಾಮನ ಮನದಲ್ಲಿ ಅವಗಾಹನಗೈದಾಗಿತ್ತು…!
ಯಾರೋ ಕರೆದವರಂತೆ ತಟ್ಟನೆದ್ದ ವಾಲ್ಮೀಕಿಗಳು ತಮಸಾವನದಲ್ಲಿ ವಿಹರಿಸತೊಡಗಿದರು…!

ತಮಸೆಯ ತಂಪಿನಿಂದ ಮೇಲೆದ್ದು ಬಂದು, ಹಸಿರಿನ ಸೊಂಪಿನಲ್ಲಿ ವಿಹರಿಸುತ್ತಿದ್ದ ವಾಲ್ಮೀಕಿಗಳನ್ನು-
ಇದ್ದಕ್ಕಿದ್ದಂತೆ ಸೆಳೆಯಿತು ಜೋಡಿಹಕ್ಕಿಗಳ ಹಾಡಿನ ಇಂಪು..!
ಧ್ವನಿ ಬಂದೆಡೆಗೆ ಅಪ್ರಯತ್ನವಾಗಿ ತಿರುಗಿದ ವಾಲ್ಮೀಕಿಗಳ ದೃಷ್ಟಿಗೆ –
ಗೋಚರವಾದವು ಪ್ರೇಮದ ವಿನಿಮಯದಲ್ಲಿ ಮಗ್ನವಾಗಿದ್ದ ಜೋಡಿ ಕ್ರೌಂಚ ಪಕ್ಷಿಗಳು..!

ಅನ್ಯೋನ್ಯ ಪ್ರೇಮಾತಿಶಯದಿಂದಾಗಿ ಒಂದು ಕ್ಷಣವಾದರೂ ಪರಸ್ಪರ ವಿರಹವನ್ನು ಸಹಿಸಲಾರದ,
ಆನಂದಾತಿಶಯದಿಂದಾಗಿ ಅತ್ಯಂತ ಮಧುರವಾಗಿ ನಿನಾದಗೈಯುತ್ತಿದ್ದ ಕ್ರೌಂಚಮಿಥುನವನ್ನು-
ಕಣ್ತುಂಬ ನೋಡಿದಾಗ ವಾಲ್ಮೀಕಿಗಳಿಗೆ ಆದದ್ದು ಪ್ರಕೃತಿ-ಪುರುಷರ ಸಾಕ್ಷಾತ್ಕಾರ…!

ಪರಸ್ಪರರನ್ನು ನೋಡಿ ನಲಿಯುವ ಜೋಡಿಹಕ್ಕಿಗಳು..!
ಹಕ್ಕಿಗಳ ಜೋಡಿಯನ್ನು ನೋಡಿ ಆನಂದಿಸುವ ವಾಲ್ಮೀಕಿಗಳು..!
ಹಿನ್ನೆಲೆಯಲ್ಲಿ ಹರಿಯುವ ಹೊಳೆ..
ಹೊಳೆ-ಹೊಳೆಯುವ ಹಸಿರಿನ ಸೃಷ್ಟಿ..!
ಸುಂದರ ಸೃಷ್ಟಿಯನ್ನು ಸಂಧಿಸುವ ನಿರ್ಮಲ ದೃಷ್ಟಿ…!

ಅಯ್ಯೋ…
ಆಗ ಬಿದ್ದಿತಲ್ಲಿಗೊಂದು ‘ಬೇಡ’ದ ದೃಷ್ಟಿ..!
ಸೃಷ್ಟಿ-ದೃಷ್ಟಿಗಳ ಸಮರಸ-ಸೌಖ್ಯವನ್ನು ಚಿರಕಾಲ ಉಳಿಯಲು ವಿಧಿಯದೇಕೆ ಬಿಡದೋ…!?
ಕೆಂಗಣ್ಣಿನ, ಕೆಡುಮನಸ್ಸಿನ, ಕ್ರೂರವೈರದ, ದಯಾದೂರನಾದ, ದುರುಳ ಬೇಡನೊಬ್ಬನು ದಾಂಗುಡಿಯಿಟ್ಟನಲ್ಲಿ..!

ಒಂದೆಡೆ ಸಕಲ ಜೀವಗಳನ್ನೂ ಸ್ವಾರ್ಥವಿಲ್ಲದೆ ಪ್ರೀತಿಸುವ ವಾಲ್ಮೀಕಿಗಳು-
ಇನ್ನೊಂದೆಡೆ ಸಕಲಜೀವಗಳನ್ನೂ ಅಕಾರಣವಾಗಿ ದ್ವೇಷಿಸುವ ಒಬ್ಬ ಬೇಡ..
ಒಂದೆಡೆ ಜೀವಗಳ ಆನಂದವನ್ನು ಕಂಡು ಆನಂದಿಸುವ ದೈವೀಮನಸ್ಥಿತಿ..
ಇನ್ನೊಂದೆಡೆ ಜೀವಹಿಂಸೆಯಲ್ಲೇ ಆನಂದವನ್ನು ಕಾಣುವ ಆಸುರೀಮನಸ್ಥಿತಿ..
ಎಂಥ ವಿಪರ್ಯಾಸದ ಸಮಾವೇಶವಿದು…!

ಪಕ್ಷಿಯುಗಳವು ಮೈಮರೆತು ಸುಖಿಸುತ್ತಿರುವಂತೆಯೇ, ಮಹರ್ಷಿ ವಾಲ್ಮೀಕಿಗಳು ನೋಡನೋಡುತ್ತಿರುವಂತೆಯೇ –
ಬೇಡನ ಕೆಡುಮನಸ್ಸು ಕೆಡುಸಂಕಲ್ಪವೊಂದನ್ನು ಮಾಡಿತು..
ಕೆಂಗಣ್ಣು ಗುರಿಯಿಟ್ಟಿತು..
ಕ್ರೂರ ಕೈಗಳು ಕೂರಂಬನ್ನೆಸೆದವು…!
ನಲ್ಲೆಯ ಒಲವಿನಲ್ಲಿ ಜಗದಿರವನ್ನು, ಹೆಚ್ಚೇಕೆ.. ತನ್ನಿರವನ್ನೇ ಮರೆತಿದ್ದ ಗಂಡುಪಕ್ಷಿಯ ಕೋಮಲ ಹೃದಯವನ್ನು –
ಹೃದಯಶೂನ್ಯನಾದ ಬೇಡನ ಬಾಣವು ಭೇದಿಸಿಯೇಬಿಟ್ಟಿತು..!

ಅಹೋ…ಬದುಕಿನ ಭಾಗ್ಯದ ವಿಪರ್ಯಯವೇ…!
ಎಲ್ಲಿಋಷಿಯ ಪಾವನ ದೃಷ್ಟಿಯಿದ್ದಿತೋ..ಅಲ್ಲಿ ಬಿದ್ದಿತು ವ್ಯಾಧನ ಪಾಪದೃಷ್ಟಿ..
ಮಡದಿಗಾಗಿ ಮೀಸಲಿಟ್ಟ ಮೃದು ಹೃದಯದಲ್ಲಿ ಆಯಿತು ಕ್ರೂರ ಶರಪ್ರವೇಶ..
ಶೃಂಗಾರರಸವಳಿದು ಪ್ರಕಟವಾಯಿತು ಕರುಣರಸ…
ಪ್ರೇಮಧಾರೆಯಾರಿತು, ಚಿಮ್ಮಿತು ರಕ್ತಧಾರೆ..
ಕಲರವ ಕರಗಿತು, ಮಾರ್ದನಿಸಿತು ಚೀತ್ಕಾರ…!!

ಮುಂಜಾನೆಯ ಮಂಜಿನಲ್ಲಿ ಮಿಂದು ನಳನಳಿಸುವ, ಸೂರ್ಯನನ್ನು ನೋಡಿ ತನ್ನಷ್ಟಕ್ಕೇ ನಗುವ,
ಸುಕೋಮಲ ಕಮಲದ ಮೇಲೆ ಸಿಡಿಲು ಬಿದ್ದಂತೆ..
ಹಿಂದುಮುಂದಿಲ್ಲದ, ಪ್ರಾಣಹರವಾದ ಬಾಣಾಘಾತಕ್ಕೆ ತುತ್ತಾಗಿ ಧರೆಗುರುಳಿದ ಪ್ರೇಮಪಕ್ಷಿ ,
ರಕ್ತದ ಮಡುವಿನಲ್ಲಿ ತನ್ನ ಪ್ರಾಣಗಳಿಗಾಗಿ..ಅಲ್ಲಲ್ಲ..ತನ್ನ ಪ್ರಾಣಪ್ರಿಯಳಿಗಾಗಿ ಚಡಪಡಿಸಿತು…!

ಒಂದೇ ಕಲ್ಲಿಗೆ ಎರಡು ಹಕ್ಕಿಗಳೆನ್ನುವರಲ್ಲವೇ..
ಇಲ್ಲಿ ಆದದ್ದು ಹಾಗೇ..!
ಒಂದೇ  ಶ್ರುತಿಯ ಎರಡು ವೀಣೆಗಳಲ್ಲಿ ಒಂದನ್ನು ಮೀಟಿದರೆ ಎರಡೂ ಮಿಡಿಯುವಂತೆ –
ಗಂಡುಪಕ್ಷಿಯ ಮರಣವೇದನೆಯ ಕೂಗು ಹೆಣ್ಣುಪಕ್ಷಿಯ ಹೃದಯದಲ್ಲಿ
ಇಮ್ಮಡಿಯಾಗಿ..ಮುಮ್ಮಡಿಯಾಗಿ..ನೂರ್ಮಡಿಯಾಗಿ ಪ್ರತಿಧ್ವನಿಸಿತು..!
ಆಕೆಯ ಕರುಣಾಕ್ರಂದನಕ್ಕೆ ಕರುಳೇಕೆ..ಕಲ್ಲುಬಂಡೆಗಳೇ ಕರಗಿದವು…!

ತಮಸೆಯ ತಟದಲ್ಲಿ ಹರಿಯತೊಡಗಿತು ಮತ್ತೊಂದು ನದಿ..
ಅದು ಜೀವನದಿ… ಜೀವನದ ನೋವ ನದಿ..!

|| ಹರೇರಾಮ ||

12 Responses to ಅಂಬೊಂದು….ಹಕ್ಕಿಯೆರಡು…!

 1. ಜಗದೀಶ್ B R

  ”ತಿಳಿದವನಾಗದಿದ್ದರೂ ಚಿಂತೆಯಿಲ್ಲ, ಸನ್ಮನುಷ್ಯನಾಗಬೇಕಿದ್ದರೆ ತಿಳಿಮನದವನಾಗಿರಬೇಕು..!”
  –ಅನನ್ಯ ಅಮೃತ ವಚನ.

  [Reply]

 2. sriharsha.jois

  ಗುರುದೇವಾ…

  ಈ ಕ್ರೌಂಚಪಕ್ಷಿಗಳ ಬೇರ್ಪಡುವಿಕೆಯೇ ಇಡೀ ರಾಮಾಯಣದ ಘಟನೆಗಳಿಗೆ ಕಾರಣವಾಯಿತೆ..?
  ಕ್ರೌಂಚಗಳನ್ನು ನೋಡಿದ ವಾಲ್ಮೀಕಿಗಳ ಮನಸಿನಲ್ಲಿ ಪ್ರತ್ಯಕ್ಷವಾದದ್ದು ಪ್ರಕೃತಿ-ಪುರುಷರ ರೂಪಗಳು..
  ಆಗಷ್ಟೆ ನಾರದರಿಂದ ರಾಮವರ್ಣನೆಯನ್ನು ತಿಳಿದುಕೊಂಡವರು..!
  ಅವವನಲ್ಲೇ ಮುಳುಗಿದವರು..!
  ಸೀತಾರಾಮರೇ ಪ್ರಕೃತಿಪುರುಷರಾಗಿ ಕಂಡಿರಬೇಕು..!
  ಯಾವಾಗ ‘ಬೇಡ’ನಿಂದಾಗಿ ಪಕ್ಷಿಗಳು ಬೇರೆಯಾದವೋ –
  ಕರುಣಾರಸ ಉಕ್ಕಿ ಹರಿಯಲು ಆರಂಭವಾಯಿತೇನೋ ಮಹರ್ಷಿಗಳಲ್ಲಿ.
  ಶ್ಲೋಕಗಳಾಗಿ ಹೊರಹೊಮ್ಮಿದವೇನೋ..?
  ಈ ಕೋನದಲ್ಲಿ ಯೋಚಿಸಬಹುದೇ ತಂದೇ……?

  [Reply]

 3. sriharsha.jois

  ಪರಸ್ಪರರನ್ನು ನೋಡಿ ನಲಿಯುವ ಜೋಡಿಹಕ್ಕಿಗಳು..!
  ಹಕ್ಕಿಗಳ ಜೋಡಿಯನ್ನು ನೋಡಿ ಆನಂದಿಸುವ ವಾಲ್ಮೀಕಿಗಳು..!
  ಹಿನ್ನೆಲೆಯಲ್ಲಿ ಹರಿಯುವ ಹೊಳೆ..
  ಹೊಳೆ-ಹೊಳೆಯುವ ಹಸಿರಿನ ಸೃಷ್ಟಿ..!
  ಸುಂದರ ಸೃಷ್ಟಿಯನ್ನು ಸಂಧಿಸುವ ನಿರ್ಮಲ ದೃಷ್ಟಿ…!

  ಇಂದಿನ ದಿನಗಳಲ್ಲಿ ಈ ಭಾವನೆಗಳು ಇರಲು ಸಾಧ್ಯವೇ ತಂದೇ….

  ಪ್ರಕೃತಿಯ ಸುಂದರ ವರ್ಣನೆ..ಅದನ್ನು ಕೆಡಿಸದಿರಲು ಆ ‘ಬ್ಯಾಡ’ನಿಗೆ ಯಾರಾದ್ರೂ ಹೇಳ್ಬಹುದಿತ್ತು…!!
  ಹ್ಯಾಗಾದ್ರು ಮನಸು ಬಂತೋ..!?

  [Reply]

 4. nandaja haregoppa

  ಹರೇ ರಾಮ

  ರಾಮಾಯಣ ಮಹಾ
  ಕಾವ್ಯ ಬರೆಯಲು ವಾಲ್ಮಿಕಿಗಳಿಗೆ ಹೇಗೆ ಸನ್ನಿವೇಶ ಸೃಷ್ಟಿಯಾಯಿತೋ ಹಾಗೆ ಗುರುಗಳ ಚಾತುರ್ಮಾಸದಲ್ಲಿ ಗುರುಗಳಿಂದ

  ರಾಮಾಯಣ ಪ್ರವಚನ ಕೇಳಲು ಬೆಂಗಳೊರಿನ ರಾಮಶ್ರಮದ ವೇದಿಕೆ ಸಿದ್ದವಾಯಿತು ,ರಾಮಾಯಣದ ಸುಂದರ ಕಥನವನ್ನು

  ಇಷ್ಟು ಸ್ವಾರಸ್ಯವಾಗಿ ಬರೆದು ನಮಗೆ ಉಣ ಬಡಿಸಲು ಹರೇರಾಮ ಬ್ಲಾಗ್ ಸೃಷ್ಟಿಯಾಯಿತೇನೋ

  ಪ್ರಣಾಮಗಳು

  [Reply]

 5. Raghavendra Narayana

  ರಾಮಾಯಣ ಮಹಾಕಾವ್ಯ ಎ೦ದು ಏಕೆ ಹೇಳುತ್ತಾರೆ ಎ೦ದು ಅರ್ಥವಾಯಿತು. ರಸದ ನದಿಯೇ ಹರಿವ೦ತೆ ತೋರುತ್ತಿದೆ. ಮಹಾಸಾಗರದ ಭೊರ್ಗರತ ಕೇಳಿಸುತ್ತಿದೆ – ಹತ್ತಿರ ಹೋದರೆ ಶಾ೦ತ ಸರೋವರ ಸಿಗುತ್ತದೆ.
  .
  ———————————————————————
  ಸೃಷ್ಟಿ-ದೃಷ್ಟಿಗಳ ಸಮರಸ-ಸೌಖ್ಯವನ್ನು ಚಿರಕಾಲ ಉಳಿಯಲು ವಿಧಿಯದೇಕೆ ಬಿಡದೋ…!?
  ———————————————————————
  .
  ಗುರುಗಳೇ, ಕಾವ್ಯಮಯವಾಗಿದೆ, ಹಕ್ಕಿಗಳಿಗಾದ ವೇದನೆ ನಮಗಾಗಿದೆ.
  .
  ಸುಖವೆ೦ಬ ಮರೀಚಿಕೆಗಿ೦ತ ದುಃಖವೆ೦ಬ ವಾಸ್ತವವನ್ನೆ ಹೆಚ್ಚು ಕ೦ಡರೆ ರಾಮಾಯಣ ಪಾತ್ರ ಪ್ರಪ೦ಚದವರು.
  .
  ಅದೇಕೆ ಈ ವೇದನೆ ಶುರುವಿನಲ್ಲೇ, ಸ್ವತಃ ತಮಸೆಯಲ್ಲಿ ಮಿ೦ದು ಆಕ್ರ೦ದನವ ಕ೦ಡು ಮದುಡಿದೆ ಮನ

  [Reply]

  Raghavendra Narayana Reply:

  ಅದ್ಭುತ

  [Reply]

 6. 24101971

  ಮಾನಿಶಾದ ………….ಯತ್ ಕ್ರೌ೦ಚ ಮಿಥುನಾದೇಕ೦ ಅವಧೀ ಕಾಮಮೋಹಿತ೦.

  [Reply]

 7. RAVINDRA T L BHATT

  ತಮಸೆಯ ತಟದಲ್ಲಿ ಹರಿಯತೊಡಗಿತು ಮತ್ತೊಂದು ನದಿ..
  ಅದು ಜೀವನದಿ…
  ಒಂದಿನಿತೂ ಕಲ್ಮಷವಿಲ್ಲದ,
  ರಮಣೀಯವಾದ,
  ಸ್ಫಟಿಕಸದೃಶವಾದ ತಮಸೆ
  -ಯ ಜಲದಲ್ಲಿ –
  ವಾಲ್ಮೀಕಿಗಳಿಗೆ ತೋರಿದ್ದು
  ಶ್ರೀರಾಮನ ಮನ….!

  ಸುಂದರ ರಾಮಾಯಣ,
  ಅತಿ ಸುಂದರ

  [Reply]

 8. Vishwa M S Maruthipura

  ಆ ಬೇಡ …ನಮಗೆ ಬ್ಯಾಡ ….! ಅವನಿಂದಲೇ ಸಮಾಜಕ್ಕೆ ಅಂಟುಜಾಡ್ಯ..ವಾಲ್ಮಿಕಿಯಿಂದ ಉಣ ಬಡಿಸಲ್ಪಟ್ಟಿತು…ರಾಮಾಯಣ ದ ಕಾವ್ಯ [ಖಾದ್ಯ?]

  [Reply]

 9. Suma Nadahalli

  ಎರಡು ಜೀವಗಳ ತ್ಯಾಗ (ಅನಿವಾರ್ಯ) ….ಇಡೀ ಮನುಕುಲಕ್ಕೆ ಲಾಭ …ಎಂತಹ ವಿಪರ್ಯಾಸ !!!!!!!!!!!!!!!!!!!!!!!!!!

  [Reply]

 10. Anuradha Parvathi

  felt very sad

  [Reply]

 11. seetharama bhat

  Harerama,

  Ella rasagala Saagarave Raamayana
  Rasada ruchi hathisidde Ramashrama

  [Reply]

Leave a Reply

Highslide for Wordpress Plugin