LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಅರುಣೋದಯವಾಯಿತು..!!

Author: ; Published On: ಗುರುವಾರ, ಅಕ್ತೂಬರ 14th, 2010;

Switch to language: ಕನ್ನಡ | English | हिंदी         Shortlink:

|| ಹರೇರಾಮ ||

ಗಂಗೆಗೆ ಗಂಗೆಯೆಂಬ ಹೆಸರು ಎಂದು ಬಂದಿತೋ, ಅಂದಿದ್ದ ಜಲಪ್ರವಾಹ ಇಂದಿಲ್ಲ…
ಅದು ಹರಿದು ಸಮುದ್ರವನ್ನು ಸೇರಿ ಅದೆಷ್ಟೋ ಕಾಲವಾಯಿತು..!
ಅಂದಿನಿಂದ ಇಂದಿನವರೆಗೆ ಗಂಗೋತ್ರಿಯಿಂದ ಗಂಗಾಸಾಗರಕ್ಕೆ ಅದೆಷ್ಟು ನೀರು ಹರಿದಿಲ್ಲ..?
ಪ್ರತಿಕ್ಷಣವೂ ಹಳೆಯನೀರು ಹರಿದುಹೋಗಿ ಹೊಸನೀರು ಬರುತ್ತಿದ್ದರೂ ಗಂಗೆಯೆಂಬ ಹೆಸರು ಮಾತ್ರ ಬದಲಾಗಲೇ ಇಲ್ಲ..
ಏಕೆಂದರೆ, ಅಲ್ಲಿ ಹರಿದುಹೋದ ಹಳೆಯನೀರೂ ಗಂಗೆಯೇ, ಹರಿದು ಬರುತ್ತಿರುವ, ಬರಲಿರುವ ಹೊಸ ನೀರೂ ಗಂಗೆಯೇ..!
ಗಂಗೋತ್ರಿಯು ಪ್ರಥಮಬಿಂದುವಾಗಿಯೂ, ಕಾಶಿಯು ಮಧ್ಯಬಿಂದುವಾಗಿಯೂ, ಗಂಗಾಸಾಗರವು ಚರಮಬಿಂದುವಾಗಿಯೂ ಇರುವ ಪಾವನ ಪಥದಲ್ಲಿ ಹರಿಯುವ ನೀರೆಲ್ಲವೂ ಗಂಗೆಯೇ..!

ಇಕ್ಶ್ಕ್ವಾಕುವಂಶವೂ ಗಂಗೆಯಂತೆಯೇ..
ಸಿಂಹಾಸನದಲ್ಲಿ ಮಂಡಿಸಿದ ವ್ಯಕ್ತಿಗಳು ಬದಲಾದರೂ ಅಲ್ಲಿ ತತ್ತ್ವಗಳು ಮಾತ್ರ ಬದಲಾಗಲಿಲ್ಲ..!
ಅನುರೂಪವಾಗಿರುವುದಕ್ಕಲ್ಲವೇ ಸಂತತಿಯೆಂದು ಹೆಸರು..!
ದೀಪದ ಪರಂಪರೆಯಲ್ಲಿ ದೀಪಗಳು ಬರಬಹುದೇ ಹೊರತು ಕತ್ತಲೆಂದಿಗೂ ಬರಲು ಸಾಧ್ಯವಿಲ್ಲ
ಕಲ್ಪವೃಕ್ಷವು ಕಲ್ಪವೃಕ್ಷಗಳ ಸಾಲನ್ನೇ ಸೃಷ್ಟಿಸುತ್ತದೆ.. ಅಲ್ಲಿ ಕಳ್ಳಿಗೆಲ್ಲಿಯ ಪ್ರವೇಶ..!
“ಆತ್ಮಾವೈ ಪುತ್ರನಾಮಾಸಿ..”(ತಂದೆ-ಮಕ್ಕಳು ಬೇರೆಯಲ್ಲ,ಮಗನಾಗಿ ಹುಟ್ಟುವವನು ತಂದೆಯೇ)ಎಂಬ ವೇದವಾಕ್ಯವು ತನ್ನ ಪೂರ್ಣಾರ್ಥವನ್ನು ಕಂಡುಕೊಂಡಿದ್ದು ಸೂರ್ಯವಂಶದಲ್ಲಿ..!
ಅಮೃತಸಾಗರದಿಂದ ಒಂದನ್ನೊಂದು ಹೋಲುವ ಆನಂದದಲೆಗಳು ಒಂದಾದ ಮೇಲೊಂದರಂತೆ ಮೇಲೆದ್ದು ಬರುವಂತೆ …
ದಿನಕರನ ಅಮರವಂಶದಲ್ಲಿ ಮಹಾಪುರುಷರುಗಳು ಸಾಲುಸಾಲಾಗಿ ಆವಿರ್ಭವಿಸಿದರು..!

ಇದೋ..
ಭಾಸ್ಕರವಂಶದ ಅಕ್ಷರ ದರ್ಶನ..
ಆದಿರಾಜ ಮನು
ಇಕ್ಷ್ವಾಕು..
ಕುಕ್ಷಿ
ವಿಕುಕ್ಷಿ
ಬಾಣ
ಅನರಣ್ಯ
ಧರ್ಮ-ವಾತ್ಸಲ್ಯಗಳ ಪ್ರತಿಮೂರ್ತಿಯಾಗಿ ಧರಣಿಯನ್ನಾಳಿದ ದೊರೆಯಿವನು..
ಸೂರ್ಯವಂಶದೊಡನೆ ರಾವಣನ ವೈರದ ನಾಂದಿ ಇಲ್ಲಿಂದಲೇ…!
ಯಜ್ಞದೀಕ್ಷಿತನಾಗಿದ್ದ ರಾಜಾ ಅನರಣ್ಯನನ್ನು ನ್ಯಾಯವಲ್ಲದ ರೀತಿಯಲ್ಲಿ ರಾವಣನು ಕಗ್ಗೊಲೆಗೈದನು..
ರಾವಣನ ಸರ್ವನಾಶದ ಬೀಜಾಂಕುರವು ಅಲ್ಲಿಯೇ ಆಯಿತು..!
ಪ್ರಾಣೋತ್ಕ್ರಮಣದ ಸ್ಥಿತಿಯಲ್ಲಿ “ನನ್ನ ವಂಶದಲ್ಲಿ ಉದಯಿಸಿ ಬರುವ ಮಹಾಪುರುಷನೊಬ್ಬನಿಂದ ನಿನ್ನಸರ್ವನಾಶವಾಗುವುದು” ಎಂದು ಶಪಿಸಿದನು ಅನರಣ್ಯ..
ಶ್ರೀರಾಮಾವಿರ್ಭಾವದ ಸೋಪಾನವಾಯಿತು ಅನರಣ್ಯನ ಬದುಕಿನ ಅಂತಿಮವಾಕ್ಯ…

ತ್ರಿಶಂಕು..
ಯಾರೂ ಸಾಧಿಸದಿದ್ದುದನ್ನು ಸಾಧಿಸುವ ಛಲ ತ್ರಿಶಂಕುವಿನದ್ದು..
ಎಲ್ಲರೂ ಸತ್ತು ಸ್ವರ್ಗವನ್ನು ಸೇರಿದರೆ, ಸಶರೀರನಾಗಿಯೇ ಸ್ವರ್ಗವನ್ನು ಸೇರಲು ಹವಣಿಸಿದನಾತ…!
ತನ್ನ ಹೆಬ್ಬಯಕೆಯನ್ನು ಸಾಧಿಸಿಕೊಳ್ಳುವ ಹೋರಾಟದಲ್ಲಿ ಛಲವೊಂದನ್ನುಳಿದು ಮತ್ತೆಲ್ಲವನ್ನೂ ಕಳೆದುಕೊಳ್ಳಬೇಕಾಯಿತು..
ಶಾಪದಿಂದ ಚಂಡಾಲತ್ವ ಬಂದರೂ, ಕುಲಗುರುವಿನಿಂದಾರಂಭಿಸಿ ಪ್ರಜೆಗಳ ತನಕ ಸಕಲರೂ ಕೈಬಿಟ್ಟರೂ..
ತ್ರಿಶಂಕು ತನ್ನ ಹೋರಾಟವನ್ನು ಕೈಬಿಡಲಿಲ್ಲ..!
ಸೃಷ್ಟಿ ಕಂಡು ಕೇಳರಿಯದ, ಆ ಸಾಟಿಯಿಲ್ಲದ ಹೋರಾಟದ ಫಲವಾಗಿ ತ್ರಿಶಂಕುವಿಗಾಗಿ ಪ್ರತಿಸ್ವರ್ಗವೇ ಸೃಷ್ಟಿಯಾಯಿತು..!

ದುಂಧುಮಾರ
ಯುವನಾಶ್ವ
ಮಾಂಧಾತಾ..
ಯುಗಪುರುಷನಿವನು..
ಮಕ್ಕಳಿಲ್ಲದ ಯುವನಾಶ್ವನು ಭೃಗು ಮಹರ್ಷಿಗಳ ಸಾನ್ನಿಧ್ಯದಲ್ಲಿ ಪುತ್ರಕಾಮೇಷ್ಟಿಯನ್ನು ನಡೆಸಿದಾಗ,  ಪುತ್ರಪ್ರದವಾದ ಮಂತ್ರಗಳಿಂದ ಅಭಿಮಂತ್ರಿತವಾದ ಜಲವನ್ನು ಪ್ರಮಾದವಶಾತ್ ಕುಡಿದು ತಾನೇ ಗರ್ಭ ಧರಿಸಬೇಕಾಯಿತು..
ಹೀಗೆ ತಾಯಿಯಿಲ್ಲದೆ ತಂದೆಯ ಮಗನಾಗಿ ಭೂಮಿಗೆ ಬಂದವನು ಮಾಂಧಾತಾ ..
ಆಗ ಅರಮನೆಯಲ್ಲೆದ್ದ ಪ್ರಶ್ನೆ ‘ಕಂ ಧಾಸ್ಯತಿ..’?
‘ಈ ಮಗುವಿಗೆ ಹಾಲು ಕುಡಿಸುವವರಾರು..’?
ಉತ್ತರ ದಿವಿಯಿಂದ ಬಂದಿತು..!
ಸ್ವಯಂ ದೇವೇಂದ್ರನೇ ಧರೆಗಿಳಿದು “ಮಾಂ ಧಾಸ್ಯತಿ”.. “ನಾನು ಹಾಲೀಯುವೆನು” ಎಂದು ಉದ್ಘೋಷಿಸಿ ತನ್ನ ಹೆಬ್ಬೆರಳಲ್ಲಿ ಅಮೃತವನ್ನು ತುಂಬಿ ಮಗುವಿಗೆ ಕುಡಿಸಿದನು..!
ಇಂದ್ರನ ಮಾಂ ಧಾಸ್ಯತಿ ಎಂಬ ವಾಕ್ಯದಿಂದಾಗಿಯೇ ಆತನಿಗೆ “ಮಾಂಧಾತಾ” ಎಂದು ಹೆಸರಾಯಿತು…
ವರ ಪಡೆಯುವ ಅವಕಾಶ ಪ್ರಾಪ್ತವಾದಾಗ ಧರ್ಮಸಂಗ್ರಾಮದಲ್ಲಿ ತನ್ನ ಪ್ರಾಣಾರ್ಪಣೆಯಾಗಬೇಕೆಂದು ಕೇಳಿದವನಿವನು..!
ಅದು ಹಾಗೆಯೇ ಆಯಿತು..
ದುಷ್ಟ ಲವಣಾಸುರನೊಡನೆ ನಡೆದ ಮಹಾಸಂಗ್ರಾಮದಲ್ಲಿ ಮಾಂಧಾತನ ಪ್ರಾಣಾರ್ಪಣೆಯಾಯಿತು..
ಅಂತಿಮ ವಿಜಯ ಏಂದಿದ್ದರೂ ಸೂರ್ಯವಂಶದ್ದೇ..!
ಮುಂದೊಂದು ದಿನ ರಾಮನ ಕಿರಿಯ ಸೋದರನಾದ ಶತ್ರುಘ್ನನು ಲವಣಾಸುರನನ್ನು  ಸಂಹರಿಸಿದನು..

ಸುಸಂಧಿ
ಧ್ರುವಸಂಧಿ
ಭರತ
ಅಸಿತ
ಸಗರ..
ಗರವೆಂದರೆ ವಿಷ..
ವಿಷದೊಡನೆ ಜನಿಸಿದವನು ಸಗರ..
ಸಗರನ ತಾಯಿಯು ಗರ್ಭವತಿಯಾಗಿದ್ದಾಗ ಆಕೆಗೆ ಪುತ್ರಪ್ರಾಪ್ತಿಯಾಗುವುದನ್ನು ಸಹಿಸದ ಸವತಿಯೊಬ್ಬಳು ವಿಷವುಣಿಸಿದಳು..
ಆದರೆ ಚ್ಯವನ ಮಹರ್ಷಿಯ ಕೃಪೆ ದೊಡ್ಡದು..
ಗರ್ಭದೊಳಗೇ ವಿಷದೊಡನೆ ಹೋರಾಡಿ ಗೆದ್ದ ಮಗು ಸಚೇತನವಾಗಿ ಭೂಮಿಗೆ ಬಂದೇಬಂದಿತು..!
ಆತನೇ ಸಗರ..
ತನ್ನ ವಿಕ್ರಮದಿಂದಲೇ ವಿಶ್ವವಿಜಯಿಯಾದ ಸಗರನ ಕುರುಹು ಭುವಿಯಲ್ಲಿ ಶಾಶ್ವತ..
ಸಾಗರವು ಸಗರನ ಕೊಡುಗೆ…!

ಅಸಮಂಜ
ಅಂಶುಮಾನ್
ದಿಲೀಪ
ನಂದಿನಿಯೆಂಬ ವಸಿಷ್ಠರ ಹೋಮಧೇನುವಿನ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ನೀಡಲು ಮುಂದಾಗಿ ಗೋಸೇವೆಗೆ ಮೇಲ್ಪಂಕ್ತಿಯಾದವನಿವನು..

ಭಗೀರಥ..
ಪುರುಷಪ್ರಯತ್ನದ ಪರಮ ಪ್ರತೀಕನಿವನು..
ತನ್ನ ಮುತ್ತಜ್ಜಂದಿರ ಮೋಕ್ಷಕ್ಕಾಗಿ ದೇವಗಂಗೆಯೆನ್ನು ಭುವಿಗಿಳಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದವವನು..
ಸಾಲು ಸಾಲು ವಿಘ್ನಗಳನ್ನು ಮೀರಿ ಸಫಲನಾದವನು..
ಪಾಪನಾಶಿನಿ- ಮೋಕ್ಷದಾಯಿನಿ ಭಾಗೀರಥಿಯು ಭಗೀರಥನ ಭವ್ಯಬದುಕಿನ ಶಾಶ್ವತ ಚಿಹ್ನೆಯಾಗಿ ಭುವಿಯಲ್ಲಿ ಹರಿದಳು..!

ಕಕುತ್ಸ್ಥ..
ಸಂಕಟಕ್ಕೊಳಗಾದಾಗ ದೇವತೆಗಳ ಮೊರೆಹೋಗುವುದು ಸಾಮಾನ್ಯ ಮಾನವರಲ್ಲಿ ಕಂಡುಬರುವ ಸಾಮನ್ಯ ಸಂಗತಿ..
ಆದರೆ ಸೂರ್ಯವಂಶೀಯರು ಇದಕ್ಕೆ ಸಂಪೂರ್ಣ ಭಿನ್ನರು.!.
ದಾನವರ ಧಾಳಿಯಿಂದ ಕಂಗೆಟ್ಟ ದೇವತೆಗಳು ಸೂರ್ಯವಂಶದ ಮೊರೆ ಹೋಗುತ್ತಿದ್ದರು..
ಭುವಿಯಿಂದ ದಿವಿಗೇರಿ ದಾನವರನ್ನು ಸದೆಬಡಿದು ಸ್ವರ್ಗವನ್ನು ದೇವತೆಗಳಿಗೆ ಉಳಿಸಿಕೊಡುತ್ತಿದ್ದರು ಸೂರ್ಯವಂಶೀಯರು..!
ಕಕುತ್ ಎಂದರೆ ಎತ್ತಿನ ಹೆಗಲು..
ದಾನವರೊಡನೆ ಸಂಗ್ರಾಮದಲ್ಲಿ ಎತ್ತಿನ ರೂಪದಲ್ಲಿದ್ದ ಇಂದ್ರನ ಹೆಗಲೇರಿ ಹೋರಾಡಿ ಜಯಿಸಿದ್ದರಿಂದ ಈತ ಕಕುತ್ಸ್ಥ ಎನಿಸಿಕೊಂಡನು..
ಸೂರ್ಯವಂಶೀಯರು ಕಾಕುತ್ಸ್ಥರೆನಿಸಿದರು…

ರಘು..
ವಂಶದಿಂದಾಗಿಯೇ ಗೌರವವನ್ನು ಪಡೆಯುವವರು ಹಲವರು..
ವಂಶಕ್ಕೆ ಗೌರವವನ್ನು ತಂದುಕೊಡುವವರು ಕೆಲವರು..
ಎರಡನೇ ವರ್ಗಕ್ಕೆ ಸೇರಿದವನು ರಘುಮಹಾರಾಜ..!!
ಸೂರ್ಯವಂಶವು ರಘುವಂಶವೆನಿಸಿತು ಈತನಿಂದ..

ಕಲ್ಮಾಷಪಾದ
ಶಂಖಣ
ಸುದರ್ಶನ
ಅಗ್ನಿವರ್ಣ
ಶೀಘ್ರಗ
ಮರು
ಪ್ರಶುಶ್ರುಕ
ಅಂಬರೀಷ..
ಪರಮ ವೈಷ್ಣವನಿವನು..
ತನ್ನ ಸೇವಕರ ಸೇವೆಯನ್ನು ಭಗವಂತನೇ ಸ್ವತಃ ಮಾಡುವನೆಂಬುದಕ್ಕೆ ಪ್ರತ್ಯಕ್ಷ ದೃಷ್ಟಾಂತವಾದವನು..
ಸಾಕ್ಷಾತ್ ಸುದರ್ಶನ ಚಕ್ರವೇ ಅಂಬರೀಷನ ರಕ್ಷಣೆಗಾಗಿ ಸದಾ ಸನ್ನದ್ಧವಾಗಿ ಆತನ ಬಳಿಯಲ್ಲಿಯೇ ನೆಲೆಸಿತ್ತು..!

ಮನುವಿನಿಂದ ಮೊದಲುಗೊಂಡು ಮೂವತ್ತೈದನೆಯವನು ದಶರಥ..
ಸೂರ್ಯೋದಯವಾಗುವುದಕ್ಕೆ ಮುನ್ನ ಅರುಣೋದಯವಾಗುವಂತೆ, ಭುವಿಯಲ್ಲಿ ಶ್ರೀರಾಮೋದಯವಾಗುವುದಕ್ಕೆ ಮುನ್ನ ದಶರಥೋದಯವಾಯಿತು..!

|| ಹರೇರಾಮ ||

ಟಿಪ್ಪಣಿ: <ಭಾಸ್ಕರವಂಶದ ಅಕ್ಷರದರ್ಶನ> =ಅಕ್ಷರಗಳ ಮೂಲಕ ಸೂರ್ಯವಂಶದ ದರ್ಶನ,
ಸೂರ್ಯವಂಶದ ಅವಿನಾಶೀ ದರ್ಶನ

39 Responses to ಅರುಣೋದಯವಾಯಿತು..!!

 1. Aravinda

  ಅಕ್ಷರ ದರ್ಶನವೊ…. ಶ್ರೀ ದರ್ಶನವೊ…. !!!!!

  [Reply]

 2. Aravinda

  ನಮ್ಮ ಬಾಳಿನ ಭಾಗ್ಯೋದಯವಾಯಿತು ರಾಘವ ಉದಯದಲಿ…..!!

  [Reply]

 3. Rama Ajjakana

  ಹರೇ ರಾಮ
  ಸೂರ್ಯ ವಂಶದ ಮೂವತ್ತಾರನೆಯ ಮಹಾಪುರುಷನ ಜೀವನ ಚರಿತ್ರೆ, ಅದ್ವೈತ ಪೀಠದ ಯತಿಶ್ರೇಷ್ಠರಿಂದ ಕಾಕತಾಳೀಯವೋ?
  ಸೂರ್ಯವಂಶದ ಅವಿನಾಶೀ ದರ್ಶನ, ಅವಿಚ್ಛಿನ್ನ ಪರಂಪರೆಯ ಶ್ರೀಗಳಿಂದ.. ಎರಡು ಮಾತಿಲ್ಲ.. ಅದ್ವೈತವೇ..

  [Reply]

 4. seetharama bhat

  ಹರೇರಾಮ್,

  ೩೬ ನೆಯವನಾಗಿ ರಾಮ ಬ೦ದತೆ ೩೬ ನೆ ಗುರು ನೀವು ಬ೦ದತೆ
  ನಾವೆಲ್ಲಾ ರಾಮ ರಾಜ್ಯದ ವೈಭವ ಪಡೆಯುತ್ತಿದ್ದೆವೆ.

  ನಮಗೋ, ಭಾವ-ಅಭಾವ,
  ಬಾಷೆ-ಹತಾಶೆ

  ತಮ್ಮ ಪ್ರಭಾವದಿ೦ದ ಸ್ವಲ್ಪ ಬಾವ
  ಅಬಿಲಾಷೆಯಿ೦ದ ಸ್ವಲ್ಪ ಬಾಷೆ–

  ಬ೦ದರೆ– ನಾವೇ ಧನ್ಯರು

  ಹರೇ ರಾಮ್

  [Reply]

 5. chs bhat

  ಹರೇರಾಮ. ಸೂರ್ಯವಂಶದ ತೇಜಃಪುಂಜಗಳ ಬಗ್ಗೆ ತಿಳಿದಂತಾಯ್ತು ಈ ಗುರುವಾಕ್ಯಗಳಿಂದ. ನನ್ನ ಕೆಲವು ಸ್ನೇಹಿತರು ಈಗಾಗಲೇ ವ್ಯಕ್ತ ಪಡಿಸಿದಂತೆ ಅದೇನು ಆ36ರವಿಶಿಷ್ಟತೆ! ಆ ಪುರುಷೋತ್ತಮ ರಾಮ ಸೂರ್ಯವಂಶದ 36ನೆಯ ಕುಡಿಯಾಗಿ ಪಾಯಸದ ಮೂಲಕ ದಶರಥ ಸಂಜಾತನಾದರೆ, ನಮ್ಮ ಗುರುಗಳು ರಾಘವೇಂದ್ರ ಭಾರತೀಮಹಾಸ್ವಾಮಿಗಳ ಕರಕಮಲ ಸಂಜಾತರಾಗಿ ಶಂಕರಾಚಾರ್ಯ ಪೀಠದ 36 ನೆಯ ಯತಿವರ್ಯರಾಗಿ ಅವತರಿಸಿದರು. ರಾಮಾಯಣ ಮಹಾಸತ್ರದಲ್ಲಿ ನಮ್ಮ ಗುರುಗಳಲ್ಲೇ ನಾವೆಲ್ಲ ಆ ರಾಮನನ್ನು ಕಂಡವರಲ್ಲವೇ! ಪರಿಷತ್ತುಗಳ ರಚನೆಯೂ ರಾಮ ರಾಜ್ಯದ ಕಲ್ಪನೆಯ ಒಂದು ಅಂಗವೇ ಅಲ್ಲವೇ? ರಾಮ-ರಾಘವರು ಬೇರಲ್ಲ ಅಲ್ಲವೇ? …..ಸಂಸನಾಭ

  [Reply]

 6. Raghavendra Narayana

  ಅದ್ಭುತ, ಭಾವ ತು೦ಬಿದ “ಅದ್ಭುತ” ಉದ್ಗಾರವಾಯಿತು.
  ಬಹುದಿನದ ಮೇಲೆ ಒ೦ದು ಸವಿಯಾದ ಸವಿಯ ಸವಿದ೦ತಾಯಿತು.
  ರಾಮ ಉದಯವಾಗುತಿಹನು.. ಜಾಗ್ರತ ಜಾಗ್ರತಃ..
  ಸೂರ್ಯನಿ೦ದ ಸೂರ್ಯರೆ ಉದಯಿಸುತಿದ್ದರು…
  ರಘು ವ೦ಶ ಅದ್ಭುತ… ಗರ್ವವಿರಬೇಕು ಅ೦ತಹವರ ಆಳ್ವಿಕೆ ಕ೦ಡ೦ತಹ ನೆಲವಿದೆ೦ದು. ಚಿಲ್ಲಚಿಲ್ಲರೆ ನಾಯಕರುಗಳ ಬೆನ್ನು ಹತ್ತಿ ಹಳ್ಳಕ್ಕೆ ಬೀಳುತಿಹೆವು. ನಾಯಕವಾಗ ಬಹುಸುವವರೆ, ನಾಯಕರ ಚರಿತೆಗಳನ್ನು ಓದಿ, ಬಾಳಿ, ಬರೇ “ನಾ” ಅಲ್ಲ ಜೊತೆಗೆ “ವು” ಸೇರಬೇಕು.. ಇದು ನಾಯಕನ ಪ್ರಥಮ ಲಕ್ಷಣವೆ?
  ಮೊನ್ನೆ-ಮೊನ್ನೆಯವರಿಗೂ “ನಮ್ಮ ವ೦ಶ” “ನಮ್ಮ ವ೦ಶ” ಎ೦ದು ಹೇಳುವವರ ಕೇಳುತ್ತಿದೆ, ಇ೦ದು ಇ೦ದು ಯಾರಿಲ್ಲ, ಆರಿತೆ ರಕ್ತದ ಕುದಿ? ಕಲ್ಮಶವಾಯಿತೆ? ಸೇರಿತೆ ಸ್ವಾರ್ಥವೆ೦ಬ ಕೆ೦ಪು ನೀರು ನಮ್ಮ ನರನಾಡಿಗಳಲ್ಲಿ? ಆದವೆ ಗುಲಾಮರು?
  ಹರಿ, ನಿನ್ನ ದಾಸರುಗಳೆಲ್ಲಾ ಎಲ್ಲೊ? ಕನಕದಾಸನ ಮರೆತು, ದಾಸರಾದವೆಲೊ ಕನಕನಿಗೆ…
  .
  ಭಾಗೀರಥಿ – ಭಗೀರಥ..
  ಸಾಗರ – ಸಗರ..
  ರಘು ವ೦ಶೀಯರು ಮಾಡಿದ ಲೋಕೋಪಕಾರ ಕೆಲಸ ಯುಗ-ಯುಗಗಳಿಗಾಗುವಷ್ಟು..
  ಸ್ವಿಸ ಬ್ಯಾ೦ಕಲ್ಲಿ ಲೆಕ್ಕಕ್ಕೂ ಸಿಗದ ಹಣವನ್ನು ತನ್ನ ವ೦ಶದವರಿಗೆ ಮಾತ್ರ ಮಾಡಿ ಮಡಿದವರನ್ನು ಅವರ ವ೦ಶದವರು ನೆನೆಸದ೦ತಾದರೆ.. ದೇಹ ಸತ್ತ ಕೂಡಲೆ, ಅವರುಗಳು ಸತ್ತರೆ… ಅಯ್ಯೋ ಶಿವನೆ, ಕಣ್ತೆರೆದು ನಮ್ಮೊನೊಮ್ಮೆ ನೋಡೊ.. ನಕ್ಕು ಮತ್ತೆ ಕಣ್ಣು ಮುಚ್ಚುವೆಯೇನೊ..
  .
  ಶ್ರೀ ಗುರುಭ್ಯೋ ನಮಃ

  [Reply]

 7. Ashwini

  ಬೀಜದಲ್ಲಿರುವ ಮೂಲ ಸತ್ವವೇ ವೃಕ್ಷವೆಲ್ಲಾ ವ್ಯಾಪಿಸುವಂತೆ..

  ಪರಮಾತ್ಮನೆಂಬ ಮೂಲ ತತ್ವವು ಸೂರ್ಯವಂಶದ ಮಹಾಪುರುಷರ ರೂಪದಿ ಭುವಿಯನೆಲ್ಲ ವ್ಯಾಪಿಸಿತೇನೋ..!!

  ದಿನಕರನುದಯಿಸುವ ಮೊದಲು ಅವನದೆ ಕಿರಣಗಳು ಗೋಚರವಾಗುವಂತೆ..

  ಪರಮಾತ್ಮನು ತಾನು ಆವಿರ್ಭಾವಗೊಳ್ಳಲು ಸೂರ್ಯವಂಶವನ್ನೇ ಕಾರಣವಾಗಿಸಿಕೊಂಡನೇನೋ..!!

  ಪರಮಾತ್ಮನ ತೇಜೋವಂಶವನ್ನು ಅಕ್ಷರದರ್ಶನ ಮಾಡಿಸುತ್ತಿರುವ ‘ಪರಮ ತೇಜಸ್ಸಿ’ನ ಅಪಾರ ಕರುಣೆಗೆ ನಮೋ ನಮ:

  ಹರೇ ರಾಮ.

  [Reply]

 8. Dr J Thirumala Prasad

  ಎಂಥ ಅದ್ಭುತ ಸಾಮ್ಯತೆ!!!!

  ಮನುವಿನಿಂದ ಮೂವತ್ತಾರನೆಯವನು ಶ್ರೀರಾಮಚಂದ್ರ. ನಮಗೆ ರಾಮಾಯಣಾಮೃತವನ್ನು

  ಉಣಬಡಿಸುತ್ತಿರುವವರು ನಮ್ಮ ಕುಲಗುರುಗಳು, ಮೂವತ್ತಾರನೆಯ ಪೀಠಾಧಿಪತಿಗಳು.

  [Reply]

 9. gopalakrishna pakalakunja

  ಅನರಣ್ಯನ ಕಾಲಾನಂತರ ರಾವಣನು ಅತಿಕ್ರಮಿಸಿಕೊಂಡ ದಂಡಕಾರಣ್ಯ ಮತ್ತೆ ಸೂರ್ಯ ವಂಶದ ಸ್ವಾಧೀನ ಬಂದದ್ದು ಮೂವತ್ತಾರನೇ ತಲೆಮಾರಿನ ರಾಜ ಶ್ರೀ ರಾಮಭದ್ರ ನ ಕಾಲದಲ್ಲಿ…..ಅದೇ ರಾವಣನ ವಂಶಸ್ಥ ರಿಂದ ಅಕ್ರಮಿತ ಶ್ರೀ ಗೋಕರ್ಣ
  ಮತ್ತೆ ಶ್ರೀ ಸಂಸ್ಥಾನ ದ ಆಧೀನವಾದದ್ದು ಮೂವತ್ತಾರನೇ ಪೀಠಾಧಿಪತಿ ಗಳ ಕಾಲದಲ್ಲಿ……

  [Reply]

  Aravinda Reply:

  ನಿಜವಾಗಲು ಹೌದು ಗೋಪಲಣ್ಣ..

  [Reply]

 10. Gowtam B K

  ನಶ್ವರವಾದ ಬದುಕಿಗೆ ಶ್ರೀಗಳವರಿಂದ ಅಕ್ಷರದರ್ಶನ…..

  [Reply]

 11. Anuradha Parvathi

  ಅದ್ಭುತ. ೩೬ನೇ ಸಂಖ್ಯೆಯ ವೈಷಿಷ್ಟ್ಯ. ೩+೬=೯. ಗುರುಗಳು ಹೇಳಿದ ಹಾಗೆ ’ನವ’. ಒಂಬತ್ತರ ವೈಷಿಷ್ಟ್ಯ ಗುರುಗಳ ನವರಾತ್ರಿಯ ಪೀಠಿಕೆ ಪ್ರವಚನದಲ್ಲಿ ಕೇಳಬಹುದು.

  [Reply]

 12. ಮಂಗ್ಳೂರ ಮಾಣಿ...

  ಪ್ರತಿ ವಾಕ್ಯ ಓದುವಾಗಲೂ ರೋಮಾಂಚನವಾಯಿತು…

  ಹರೇ ರಾಮ

  [Reply]

 13. seetharama bhat

  ಹರೇರಾಮ್,

  ೩ ಮತ್ತು ೬ ಬೆನ್ನಿಗೆ ಬೆನ್ನು ಕೊಟ್ಟು ನಿ೦ತು ಹೋರಾಡುತ್ತಿವೆಯೋ ಎ೦ಬ೦ತೆ
  ಸಮಾಜ ಬೆಸೆದು ಕೊಳ್ಲಬೇಕು
  ೩ ಕ್ಕಿ೦ತ ೬ ದೊಡ್ಡದೆನಿಸಿದರೂ ಸ್ಠಾನ ಬೆಲೆಯಿ೦ದ ೩ ಹೆಚ್ಚಲ್ಲವೇ?
  ಸ್ಠಾನಕ್ಕೆ ಬೆಲೆ ಕೊಟ್ಟು ನಡೆಯಬೇಕಲ್ಲವೇ?

  ೩ ನ್ನು ಸರಿತೂಗಿಸಿ(ಸತ್ವ,ರಜ,ತಮ) ೩ ರಲ್ಲೂ (ಕಾಯ,ವಾಚ,ಮನಸಾ) ೬ ನ್ನು (ಕಾಮ,ಕ್ರೋದ,ಲೋಭ,ಮೋಹ,ಮದ,ಮಸ್ಸರ)ಗೆದ್ದು
  ೩೬ ನೇ ಗುರುವಿನನು ಗ್ರಹ ದಲ್ಲಿ ಬದುಕೋಣ

  ಹರೇರಾಮ್

  [Reply]

  Aravinda Reply:

  ಅದ್ಭುತ..ಅತ್ಯದ್ಭುತ.

  [Reply]

 14. shum

  I feel our math is also like ganga.

  [Reply]

 15. Raghavendra Narayana

  ಗುರುಗಳ ಲೇಖನ ಮತ್ತು ಕಾಮೆ೦ಟ್ಸ್ ಮಿಸ್ಸಿ೦ಗ್.
  ವಾರಕ್ಕೆ ಎರಡು ಬಾರಿಯಾದರು ಗುರುಗಳು ಕಾಮೆ೦ಟ್ಸ್ ಹಾಕಲೇಬೇಕು ಎ೦ದು ಸಾಸ್ಠಾ೦ಗ ಪ್ರಣಾಮಗಳೊ೦ದಿಗೆ ಕೇಳಿಕೊಳ್ಳುತ್ತೇವೆ. ಈ ರೀತಿ ಕೇಳಿಕೊ೦ಡು ಸುಮಾರು ಸಲ ಆಗಿದೆ, ಇನ್ನು ಗುರುಗಳು ಎಲ್ಲಿ ಇದ್ದರೊ ಅಲ್ಲಿಯೆ ಹೋಗಿ ಬಾವುಟ ಹಿಡಿಯಬೇಕಾಗಿದೆ….
  ಗುರುಗಳ ಅಫ಼ೀಶಿಯಲ್ ವೆಬ್ ಸೈಟಲ್ಲಿ ಗುರುಗಳೇ ಕಾಣದಿದ್ದರೆ ಹೇಗೆ…
  .
  ಆದಿಕವಿಯ ಆದಿಕಾವ್ಯ ರಾಮಾಯಣ, ರಘೂತ್ತಮನ ಕಥೆ, ಜಗತ್ತಿನ ಕಥೆ, ನಿತ್ಯ ಪಾರಾಯಣ ಗ್ರ೦ಥ… ರಾಮ ರಾಮನ ಕಥೆ, ಓದುವ ಸವಿಯುವ ಉದಯ ಸಮಯದೊಳು ಮೋಡವಿದ್ದರೆ ಅದು ಬೆಳ್ಳಿಮೋಡವಾಗಲಿ. ನೆಲದಲ್ಲಿ ಹಸಿರು ದಿವ್ಯ ಮ೦ಗಲವಾಗಿದೋರಲಿ. ಸುನಾದವಿರಲಿ. ಅ೦ತರ್ಗಣ್ಣು ಬಹಿರ್ಗಣ್ಣಿನ ಮೂಲಕ ನಿತ್ಯಮ೦ಗಲವ ಕಾಣಲಿ. ಪರಮಾತ್ಮನ ಚಿತ್ತ ಹರಿಯಲಿ ಇತ್ತ. ಆನ೦ದಮಳೆಯ ಸಿ೦ಚನವಾಗಲಿ.
  ದೃಶ್ಯ ಸ೦ಕುಚಿತವಾಗಲಿ, ದೃಷ್ಟಿ ವಿಕಸಿತವಾಗಲಿ.
  .
  ಶ್ರೀ ಗುರುಭ್ಯೋ ನಮಃ

  [Reply]

 16. Sri Samsthana

  ಬರುವೆವು…ಬರೆಯುವೆವು…ಬಿಡೆವು…ಬಿಡೆವು…ಖಂಡಿತಾ……

  [Reply]

 17. nandaja haregoppa

  ಹರೇ ರಾಮ

  ಇ೦ದು ವಾಲ್ಮೀಕಿ ಜಯ೦ತಿ , ರಾಮಾಯಣವೆ೦ಬ ಮಹಾ ಗ್ರ೦ಥ ವನ್ನು ಜಗತ್ತಿಗೆ ಕೊಟ್ಟ ಮಹಾ ತೆಜಸ್ಸಿಗೆ ಕೋಟಿ ನಮನಗಳು.

  ೩೬ ನೆಯ ಸೂರ್ಯನನ್ನು {ಗುರುಗಳನ್ನು } ನೋಡುವಾಗ ನೆನಪಿಗೆ ಬರುವ ಹಾಡಿದು

  ಮು೦ಗೋಳಿ ಕೂಗ್ಯಾವ ಮೂಡು ಕೆ೦ಪೇರ್ಯಾವ

  ಸ್ವಾಮಿ ತನ್ನಯ ರಥವೇರಿ ‘

  ಸ್ವಾಮಿ ತನ್ನಯ ರಥವೇರಿ ಬರುವಾಗ

  ನಾವೆದ್ದು ಕೈಯ ಮುಗಿದೇವ .

  ಆ ದಿನಕರನಿ೦ದ{ಗುರುಗಳಿ೦ದ }ಹೊರಹೊಮ್ಮುವ ದಿವ್ಯ ಕಿರಣಗಳು ನಮ್ಮನ್ನು ಯಾವಾಗಲು ತಾಕುತಿರಲಿ ,

  ಹರೇ ರಾಮ

  [Reply]

  Sri Samsthana Reply:

  ತಪ್ಪಿಲ್ಲ..!
  ತಡೆಯಿಲ್ಲ…!
  ತಡವಿಲ್ಲ..!
  ಎಂದೆಂದೂ…ಒಂದಿನಿತೂ ವ್ಯತ್ಯಾಸವೇ ಇಲ್ಲದಂತೆ ಕರ್ತವ್ಯವೆಸಗುವ ಓ…….ಸೂರ್ಯಾ……….
  ನಿನ್ನದೊಂದೇ ಒಂದು ಕಿರಣ ನಮ್ಮೊಳಹೊಕ್ಕರೂ ಸಾಕು…….

  [Reply]

  nandaja haregoppa Reply:

  ಹರೇ ರಾಮ

  ನಿಮ್ಮದೊ೦ದೇ ಒ೦ದು ಕಿರಣ ನಮ್ಮೊಳಹೊಕ್ಕರೂ ಸಾಕು

  ಸಾಕು ಸಾಕು ಸಾಕು ಈ ಜನುಮಕ್ಕೆ ,ಆದರೆ ಕಿರಣ ಒಳ ಬರುವ ದಾರಿಯನರಿಯೆ ನಾ

  ಉದ್ದರಿಸು ದೇವಾ ,ದೇವ ದೇವ

  [Reply]

 18. seetharama bhat

  ಹರೇರಾಮ್,

  ಗುರು ಕಿರಣ ದೀನಾ ಬೀಳಲಿ ನಮ್ಮಮೇಲೆ
  ಇ ಮೇಲ್ ಇರಲಿ ಆಮೇಲೂ ಇರಲಿ
  ನಾವು ಮೇಲೆ ಹೋಗುವ ಹಾಗಿರಲಿ

  ಹರೇರಾಮ್

  [Reply]

  Sri Samsthana Reply:

  ಮೇ…………ಲಿದ್ದರೂ ಕಿರಣವಾಗಿ ಕೆಳ…ಕೆಳ ಇಳೆಗಿಳಿದುಬರುವ…….ಬೆಳಕ ತರುವ ಆಗಸದರಸನ ನೋಡು..ನೋಡು…

  [Reply]

 19. Sri Samsthana

  ನಿಮಗೆ ಸತ್ಯವೆನಿಸಿದರೆ………ನಮಗೇಕೋ ವಿಚಿತ್ರವೆಂದೇ ಎನಿಸುತ್ತಿದೆ…!

  [Reply]

  seetharama bhat Reply:

  ನಿಜವಾಗಿಯೂ ವಿಚಿತ್ರ——ಗುರುದೇವ
  ವಿಶೇಷವಾದ ಚಿತ್ರ

  [Reply]

  Anuradha Parvathi Reply:

  ಧನ್ಯರು, ಭಾಗ್ಯಶಾಲಿಗಳು, ಪುಣ್ಯವಂತರು ಇತ್ಯಾದಿ ಇತ್ಯಾದಿ.

  [Reply]

 20. Sri Samsthana

  ಹಲವು ಭಾವಗಳು…ಹಲವು ಬಣ್ಣಗಳು ಸೇರಿಯಲ್ಲವೇ ‘ವಿಶೇಷಚಿತ್ರ’ದ ನಿರ್ಮಾಣ…?

  ನೀವಿಲ್ಲದೆ ನಾವೆಲ್ಲಿ…?

  ನೀವಿಲ್ಲದೆ ನಾವಿಲ್ಲ..!

  [Reply]

  Ashwini Reply:

  ನಿಜ ಗುರುವೇ… ನೀವಿಲ್ಲದೆ ನಾವಿಲ್ಲ!!

  [Reply]

  Anuradha Parvathi Reply:

  ಇದು ಶ್ರೀಗಳ ದೊ…….ಡ್ಡ ಮನಸ್ಸು.

  [Reply]

 21. seetharama bhat

  ಹರೇರಾಮ್,

  ದೇವಜಾತ ದುರ್ಗಿಯೊ?
  ಬಾವಜಾತ ಅವರ್ಗಿಯವೋ?
  ವರ್ಣಜಾತ ಸುವರ್ಣವೋ?

  ನೀವೆಲ್ಲೋ ನಾವಲ್ಲೇ
  ನಾ ಒಲ್ಲೆ ಬೇರೆಲ್ಲೂ
  ನಿಮ್ಮಲ್ಲೇ ನಾವೆಲ್ಲಾ

  ಹರೇರಾಮ್

  [Reply]

 22. Sri Samsthana

  ಭಾವಜಾತ ಸ್ವರ್ಗವಿದು..!

  [Reply]

 23. aruna shyam

  am impressed by trishanku…..

  [Reply]

  Sri Samsthana Reply:

  ಇಲ್ಲಿಯೂ ಸಲ್ಲುವವ(ನೀ)ನು..!
  ಅಲ್ಲಿಯೂ ಸಲ್ಲುವವ(ನೀ)ನು..!

  [Reply]

 24. nandaja haregoppa

  ಹರೇ ರಾಮ

  ತ್ರಿಶ೦ಕುವಿನ ನ೦ತರ ಆ ಸ್ವರ್ಗ ಏನಾಯಿತು? ಅಥವ ಅದು ಇನ್ನೂ ಇದೆಯಾ? {ಇದ್ದರೆ ಅಪ್ಪಿ ತಪ್ಪಿ ಯಾರಾದ್ರು ಅಲ್ಲಿಗೆ

  ಹೋಗುವರೆ?} ಅಥವ ಯಾರು ಅದನ್ನು ಹಾಳು ಮಾಡಿದ್ದು?

  ದಯಮಾಡಿ ತಿಳಿಸಿಕೊಡಿ ಗುರುಗಳೇ

  [Reply]

  Sri Samsthana Reply:

  ಅದು ಪ್ರತಿಸೃಷ್ಟಿ…
  ಸೃಷ್ಟಿಯ ಒಂದು ಭಾಗವೆಂದು ಸೃಷ್ಟಿಕರ್ತನಿಂದಲೇ ಅಂಗೀಕರಿಸಲ್ಪಟ್ಟಿದ್ದು…
  ಸೃಷ್ಟಿಯಿರುವವರೆಗೆ ಅದು ಇದ್ದೇ ಇದೆ..!
  ಅದು ಇರುವವರೆಗೆ ತ್ರಿಶಂಕುವೂ ಇದ್ದೇ ಇದ್ದಾನೆ..!
  ಆದರೆ ನಾವ್ಯಾರೂ ಅಪ್ಪಿತಪ್ಪಿಯೂ ಅಲ್ಲಿಗೆ ಹೋಗುವಂತಿಲ್ಲ…

  ಒಪ್ಪಾದರೆ (ಸಾಮಾನ್ಯ)ಸ್ವರ್ಗಕ್ಕೆ..
  ತಪ್ಪಾದರೆ ನರಕಕ್ಕೆ…

  ಇದು ಸಾಧಾರಣರ ಗತಿ..!
  ಆದರೆ ತ್ರಿಶಂಕುವಿನದು ಅಸಾಧಾರಣ ಗತಿ..!

  [Reply]

 25. shobha lakshmi

  ಹರೇರಾಮ…ಆ ರಾವಣ ಯಾವಾಗ ಹುಟ್ಟಿದ್ದು? ಅವನ ಆಯುಷ್ಯ ಎಷ್ಟು? ರಾವಣ ಚಕ್ರವರ್ತಿ ಆಗಿದ್ದು ಯಾವಾಗ? ೩ ಲೋಕ ಗಳು ರಾವಣನ ಕೈಯಲ್ಲಿತ್ತು, ಆದರೆ ಇಕ್ಷ್ವಾಕು ವ೦ಶದವರು ಅವನ ಕೈ ಕೆಳಗೆ ರಾಜ್ಯಭಾರ ಮಾಡುತ್ತಿದ್ದರೆ? ತಿಳಿಸಿಕೊಡಿ ಗುರುಗಳೇ..

  [Reply]

  Sri Samsthana Reply:

  ಬಟ್ಟೆಗೆ ಅಂಟಿದ ಕಲೆ ಬೇಗ ಹೋಗುವುದಿಲ್ಲ..
  ಭೂಮಿಗಂಟಿಕೊಳ್ಳುವ ಪಾಪಿಗಳು ಬೇಗ ಸಾಯುವುದಿಲ್ಲ…

  ರಾವಣ ಮೂರುಲೋಕಗಳನ್ನು ನಡುಗಿಸಿದ್ದು-ಪೀಡಿಸಿದ್ದು ನಿಜ…
  ಆದರೆ ಆತ ಚಕ್ರವರ್ತಿಯಾಗಿದ್ದು ಲಂಕೆಗೆ-ರಾಕ್ಷಸರಿಗೆ ಮಾತ್ರ…

  ಅಂದರೆ ಆ ಕಾಲದ ಭಯೋತ್ಪಾದಕರ ಚಕ್ರವರ್ತಿ..!!

  [Reply]

 26. shobha lakshmi

  ಸೂರ್ಯವ೦ಶದ ೩೬ ನೇ ಚಕ್ರವರ್ತಿ ಯ ಮಹಿಮೆ ವರ್ಣಿಸಲು ಬಹುಷಃ ಅಧ್ವೈತ ಪರ೦ಪರೆಯ ೩೬ ನೇ ಯತಿಗಳೇ ಆಗಬೇಕೆ೦ದು ಭಗವತ್ ಸ೦ಕಲ್ಪ ಇತ್ತೇನೋ ಅನಿಸುತ್ತಿದೆ..

  ರಾಮಾಯಣವನ್ನು ಇದುವರೆಗೆ ಬಹಳಷ್ಟು ಸಾರಿ ಓದಿರುವೆ,,ಕಥೆಗಳನ್ನು ಕೇಳಿರುವೆ,,ನೋಡಿರುವೆ…ಆದರೂ ಇದು ಹೊಸತೇನೋ ಅನಿಸುತ್ತಿದೆ..ರಾಮಾಯಣ ಮತ್ತೆ ಮತ್ತೆ ಈಗ ನಡೆಯಿತೇನೋ ಅನ್ನುವ೦ತೆ ಮೂಡಿಬರುತ್ತಿದೆ…

  ಮು೦ದೆ ಏನಾಯಿತು ಸವಿಯಲು ಕಾಯುತ್ತಿರುವೆ…ಹರೇರಾಮ..

  [Reply]

 27. Vidya Ravishankar.

  ಹರೇರಾಮ.
  ೩೬ನೇ ಯತಿವರ್ಯರಿಂದ ಅರುಣೋದಯವಾಯಿತು.

  [Reply]

Leave a Reply

Highslide for Wordpress Plugin