LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಆನೆ ಬಲಿ….!

Author: ; Published On: ರವಿವಾರ, ಫೆಬ್ರವರಿ 21st, 2010;

Switch to language: ಕನ್ನಡ | English | हिंदी         Shortlink:

|| ಹರೇರಾಮ ||

ಏನನ್ನು ಪಡೆಯಬೇಕಾದರೂ ಮತ್ತೇನಾದರೂ ತ್ಯಾಗ ಮಾಡಲೇ ಬೇಕು..!

ನಿಸರ್ಗ ನಿಯಮವಿದು..

ಆದರೆ ಯಾವುದನ್ನು ತೆತ್ತು ಯಾವುದನ್ನು ಪಡೆದುಕೊಳ್ಳಬೇಕು ಎನ್ನುವಕುರಿತು ಸರಿಯಾದ ವಿವೇಚನೆ ಇರಬೇಕು..!

ಕಿರಿದಾದುದನ್ನು ತೆತ್ತು ಹಿರಿದಾದುದನ್ನು ಪಡೆದುಕೊಳ್ಳಬೇಕು ಬದುಕನ್ನು ಸಂಪನ್ನಗೊಳಿಸುವ ಜಾಣ್ಮೆಯಿದು..

ಇದೇನಾದರೂ ಹಿಂದು – ಮುಂದಾದರೆ ಬರಡಾಗುವುದು ಬದುಕು..!

ಬದುಕಿನ ಮೂಲಸೂತ್ರವಿದು..

ದಟ್ಟದರಿದ್ರನೊಬ್ಬ ಕಠಿಣ ತಪಸ್ಸನ್ನು ಕೈಗೊಳ್ಳುತ್ತಾನೆ..

ಕನಿಕರಿಸಿದ ಶಿವ ಕಣ್ಮುಂದೆ ಪ್ರಕಟನಾಗಿ ಬೇಕಾದ ವರವನ್ನು ಕೇಳೆಂದು ನುಡಿಯುತ್ತಾನೆ..

ಆಗ ಆ ಬಡವ ಕೇಳಿದ ವರವೇನು ಗೊತ್ತೇ..?'ಆನೆ'

” ಆನೆ ಕೊಡು ”

ದೇವರೂ ದಂಗಾದ ಸಂದರ್ಭವದು..!

” ಹೊಟ್ಟೆಗೇ ಹಿಟ್ಟಿಲ್ಲದ ದಟ್ಟದರಿದ್ರ ನೀನು..!

ಆನೆಯನ್ನು ತೆಗೆದುಕೊಂಡು ಮಾಡುವುದಾದರೂ ಏನು..!?”

ಹಣದಿಂದ ಬಡವನಾದರೂ ಆತ ವಿವೇಕದಿಂದ ಅದೆಷ್ಟು ಶ್ರೀಮಂತನಾಗಿದ್ದನೆಂಬುದನ್ನು ಅವನಿತ್ತ ಉತ್ತರವೇ ಸಾರಿಹೇಳಿತು..

“ಪ್ರಭೂ..!

ನಾನು ಕೇಳಿದ್ದು ಆನೆಯೆಂಬ ಪ್ರಾಣಿಯನ್ನಲ್ಲ..!

‘ಆ’ ಎಂದರೆ ‘ಆರೋಗ್ಯ’..

‘ನೆ’ ಎಂದರೆ ‘ನೆಮ್ಮದಿ’..!!

ನಾನು ವರವಾಗಿ ಕೇಳಿದ್ದು ಶರೀರಕ್ಕೊಂದು ಆರೋಗ್ಯ ಮನಸ್ಸಿಗೊಂದು ನೆಮ್ಮದಿ ಮಾತ್ರ..!

ಇವೆರಡಿದ್ದರೆ ಇನ್ನೇನಿಲ್ಲದಿದ್ದರೂ ಚಿಂತೆಯಿಲ್ಲ..!

ಇವೆರಡಿಲ್ಲದಿದ್ದರೆ ಮತ್ತೇನಿದ್ದರೂ ಪ್ರಯೋಜನವಿಲ್ಲ..!!

ಅನುಗ್ರಹಿಸು ಪ್ರಭೂ..!!”

ಹತ್ತಲ್ಲ – ಹಲವಲ್ಲ, ಅನೆಕವಲ್ಲ – ಅನಂತವಲ್ಲ…!

ನಮ್ಮ ಬದುಕಿಗೆ ಕೇವಲ ಎರಡೇ ಎರಡು ಅಂಗಗಳು..!!

ತನುವೆಂಬ ಬಹಿರಂಗವೊಂದು, ಮನವೆಂಬ ಅಂತರಂಗವಿನ್ನೊಂದು..!!

ಆರೋಗ್ಯವೆಂದರೆ ತನು ಸುಖ..!

ನೆಮ್ಮದಿಯೆಂದರೆ ಮನಃಸುಖ..!

ಸುಖವಲ್ಲವೇ ಜೀವನ ಲಕ್ಷ್ಯ..!?

ಸುಖಕ್ಕಾಗಿಯಲ್ಲವೇ ಸಕಲಜೀವಿಗಳೂ ಪರಿಶ್ರಮಿಸುತ್ತಿರುವುದು – ಪರಿತಪಿಸುತ್ತಿರುವುದು..

ಅದನ್ನೇ ಕಳೆದುಕೊಂಡು ಮತ್ತೇನು  ಗಳಿಸಿದರೇನು ಫಲ..!!??

ಇಂದಿನ ನಮ್ಮ ಜೀವನ ಶೈಲಿಯಲ್ಲಿರುವ ಪ್ರಧಾನ ದೋಷವಿದು….!

ಹಿಂದಿನಕಾಲದಲ್ಲಿ ಆಡು – ಕುರಿಗಳನ್ನು ಬಲಿಕೊಡುತ್ತಿದ್ದುದನ್ನು ನಾವು ಕೇಳಿದ್ದೇವೆ..

ಇಂದಿನ ಕಾಲದ ಪ್ರಗತಿಯೆಂದರೆ ನಾವು ಆನೆಯನ್ನು(ಆನೆ = ಆರೋಗ್ಯ ನೆಮ್ಮದಿ) ಬಲಿ ಕೊಡಲು ಪಾರಂಭಿಸಿದ್ದೇವೆ.

ತನುವಿಗಿಂತ ಹಣ ಮುಖ್ಯವಾದರೆ ಹಾಳಾಗುವುದು ಆರೋಗ್ಯ..!

ಮನಃಸಾಕ್ಷಿಗಿಂತ ಹಣ ಮುಖ್ಯವಾದಾಗ ಹಾಳಾಯಿತು ನೆಮ್ಮದಿ..!!

ಹಣ – ಹೆಸರುಗಳ ಹಿಂದೆ ಹುಚ್ಚುಹಿಡಿದಂತೆ  ಓಡುತ್ತಿದೆ ಆಧುನಿಕ ಸಮಾಜ..

ಇವುಗಳನ್ನು ಗಳಿಸುವ ಭರದಲ್ಲಿ ಆರೋಗ್ಯ,ನೆಮ್ಮದಿಗಳನ್ನು ಬಲಿ ಕೊಡುತ್ತಿದೆ..

ಹಣ – ಹೆಸರುಗಳು ಬದುಕಿನಲ್ಲಿ ಬಂದು ಹೋಗುವ ಸಂಗತಿಗಳು..

ಆರೋಗ್ಯ – ನೆಮ್ಮದಿಗಳಾದರೋ ದೇವರು ನಮ್ಮನ್ನು ಹುಟ್ಟಿಸುವಾಗಲೇ ಬುತ್ತಿಯಹಾಗೆ ಜೊತೆಗಿತ್ತು ಕಳುಹಿಸಿದ ದಿವ್ಯ ವರಗಳು…!

ಸಾಮಾನ್ಯರೂ ಅನುಭವಿಸಬಹುದಾದ ನಮ್ಮೊಳಗೇ ಸಿಗುವ ಈಶ್ವರನ ರೂಪಗಳು..!!

ಪರಮಾನಂದವು ಪರಮಜ್ಞಾನಿಗಳಿಗೇ ಸರಿ..

ಪಾಮರರ ಪಾಡೇನು..!!??

ಆಗಸದ ಮೋಡ ಕರಗಿ ನೀರಾಗಿ ಇಳಿದು..ಹರಿದು ಹರಿದು ಬಡವನ ಮನೆಯ ಬಾವಿ ತುಂಬಿಸುವಂತೆ..

ಪಾಮರರ ಮೇಲಿನ ಕರುಣೆಯಿಂದಲ್ಲವೇ ಭಗವಂತ ಆರೋಗ್ಯ – ನೆಮ್ಮದಿಗಳ ರೂಪವನ್ನು ತಾಳಿ ಕೆಳಗಿಳಿದು ಬಂದು ,

ಹುಡುಕಾಡುವ – ತಡಕಾಡುವ ಅಗತ್ಯವೇ ಇಲ್ಲದಂತೆ…   ಹತ್ತಿರ-ಹತ್ತಿರ ಬಂದು ನಮ್ಮ ತನು – ಮನಗಳನ್ನೇ ಆಶ್ರಯಿಸಿದ್ದು..

ಅವುಗಳನ್ನೇ ಕಳೆದುಕೊಂಡಮೇಲೆ ಮತ್ತೇನಿದ್ದೇನು ಫಲ..!?

ಹಿರಿದನ್ನು ಪಡೆಯಲು ಕಿರಿದನ್ನು ತ್ಯಾಗ ಮಾಡಬೇಕೆಂಬುದು ಬದುಕಿನ ಸೂತ್ರವಾದರೆ..

ಆ ಸೂತ್ರ ಜೀವನಕ್ಕಿಳಿಯಲು ಹಿರಿದಾವುದು ಕಿರಿದಾವುದು ಎನ್ನುವುದರ ಪರಿಜ್ಞಾನವಿರಬೇಕು..

ಪರಮಾಣುವಿನಿಂದ ಪರಮಾಕಾಶದವರೆಗೆ ಹರಡಿರುವ ವಿಜ್ಞಾನಕ್ಕೆ ಈ ಜ್ಞಾನ ಬರುವುದೆಂದು..?

ಭೂಮಿಯಿಂದ ಲಕ್ಷಾಂತರ ಮೈಲು ದೂರದಲ್ಲಿರುವ ಆಕಾಶಕಾಯಗಳ ಬಗೆಗೆ ಅಧ್ಯಯನ ನಡೆಸುವ ಆಧುನಿಕತೆಗೆ

ನಮ್ಮೊಳಗೇ ಹುದುಗಿರುವ, ಕ್ಷಣ ಕ್ಷಣಕ್ಕೂ ಕ್ಷಯಿಸುತ್ತಿರುವ, ಎಲ್ಲರಿಗೂ ಬೇಕೇ ಬೇಕಾದ ಈ ‘ಆನೆ’ಯ ಕಡೆಗೆ ಗಮನ ಹೋಗುವುದೆಂದು..!?

ಬೆಲ್ಲದ ಗಣಪತಿಯನ್ನು ಪೂಜೆಮಾಡುವ ಸಮಯ…

ನೈವೇದ್ಯದ ಹೊತ್ತು ಬಂದಾಗ ಒಮ್ಮೆ ಅತ್ತಿತ್ತ ನೋಡಿದ ಪೂಜಾರಿ ಮೂರ್ತಿಯನ್ನೇ ಸ್ವಲ್ಪಮುರಿದು ಮುಂದಿಟ್ಟನಂತೆ..

ಹೀಗಿದೆ ನಮ್ಮ ಸ್ಥಿತಿ..!!!

ನಮ್ಮ ಜೀವನದ ಜೀವರೇಖೆಯೇ ತನು – ಮನಗಳ ಸ್ವಸ್ಥತೆ..!

ಅದನ್ನೇ ಕಳೆದುಕೊಂಡು ಗಳಿಸಿದ ಹಣ , ಹಣವಲ್ಲ.. ನಿಜಸುಖದ ಹೆಣ..!!

ಹೆಸರು ಹೆಸರಲ್ಲ ಮನದ ಕೆಸರು…!

ಹೇ ಪ್ರಭೋ..!

ಹತ್ತಾರು ಗುರುಗಳು, ನೂರಾರು ಮಾರ್ಗಗಳು, ಸಾವಿರಾರು ಗ್ರಂಥಗಳು ನಮಗೆ ಬೇಡವೇ ಬೇಡ..!

ಒಂದೇ ಒಂದು ಬಾರಿ ಬದುಕಿನಲ್ಲಿ ನಿಜಕ್ಕೂ ಹಿರಿದ್ಯಾವುದು ಎಂಬುದರ ಸತ್ಯ ದರ್ಶನ ಮಾಡಿಸು..

‘ಆನೆ’ ಕೊಡಿಸು..

ಅಂಬಾರಿಯೇರಿ,ಅಂಬರವನ್ನೇ ಮೀರಿ,ಅತಿಶಯ ಸುಖದಲ್ಲಿ ಅನಂತರಾಗುವೆವು……

|| ಹರೇರಾಮ ||

18 Responses to ಆನೆ ಬಲಿ….!

 1. Jeddu Ramachandra Bhat

  Hare Raama Gurugale – adbhutha kalpane

  [Reply]

 2. Ravi subrahmanya

  || ಹರೇ ರಾಮ||

  ತುಂಬಾ ಅರ್ಥಪೂರ್ಣವಾದ ವಿಶ್ಲೇಷಣೆ. ಅಜ್ಞಾನವೆಂಬ ಕತ್ತಲಿಂದ ಜ್ಞಾನವೆಂಬ ಬೆಳಕಿನೆಡೆಗೆ ಸಾಗಲು ಇದು ಅನಿವಾರ್ಯ.

  [Reply]

 3. shobha lakshmi

  ಗುರುದೇವಾ,,,,ಆರೋಗ್ಯ ಸರಿ ಇರುವಾಗ ಅದರ ಬೆಲೆ ಗೊತ್ತಾಗುದಿಲ್ಲ..ಅದು ಕೆಟ್ಟರೆ ಎರಡೂ “ಆ ನೆ ” ಇಲ್ಲ….ಆನೆ ಇದ್ದರೆ ತಾನೇ ಹಣ ಹೆಸರು ಗಳಿಸುದು…

  ಗುರು ದೇವಾ,,ನಿಮ್ಮ ಅನುಗ್ರ್ಹಹದಿ೦ದ “ಆ ನೆ ” ಯ ಜೊತೆಯಲ್ಲಿ ಜೀವನ ಸಾಗುತ್ತಿದೆ…ಇನ್ನು ಮು೦ದೂ ಆನೆ ಯೊ೦ದಿಗೇ ಬದುಕಬೇಕೆ೦ಬಾಸೆ…ಅನುಗ್ರ್ಹಿಸುವಿರಾಗಿ ಬೇಡುವೆ..

  [Reply]

 4. ravi n

  ತನು ಬಾಹ್ಯಕರಣಗಳನುಭವಕಿಂತ ಸೂಕ್ಷ್ಮತರದನುಭವಗಳ ನೀನೆಳಸೋ…
  ಎಂಥ ಚೆಂದದ ಕಲ್ಪನೆ ಸಂಸ್ಥಾನ…
  ತ್ಯಾಗವನ್ನು ಅರ್ಥೈಸಿಕೊಂಡವರಷ್ಟೇ ಅಲ್ಲವೇ ನೆಮ್ಮದಿಯನ್ನು ಪಡೆಯಬಲ್ಲವರು ಜೀವನದಲ್ಲಿ
  ತ್ಯಾಗದ ಒಂದಂಶ ಜೀವನವನ್ನು ಸುಂದರಗೊಳಿಸಿದರೆ.. ತ್ಯಾಗದ ಪರಾಕಾಷ್ಟೆ ಜೀವನನ್ನೇ ಸುಂದರಗೊಳಿಸುತ್ತದೆ.
  ಕಳೆದು ಕೊಳ್ಳುವ.. ಕಳೆದು ಹೋಗುವ ಭಾಗ್ಯಕ್ಕಿಂತ …. ಮಿಗಿಲಾದದ್ದು ಯಾವುದಿದೆ….
  ಪ್ರಣಾಮಗಳು

  [Reply]

 5. Vishwa M S Maruthipura

  ಬಹುಶ : ಅದಕ್ಕೆ ಇರಬೇಕು ಗುರುಗಳು ಯಾವಾಗಲು ಹೇಳುತಿದ್ದರು ….ಮಠ ದಲ್ಲಿ ಆನೆ ಇರಬೇಕು ಆಗ ಇಡೀ ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂದು …ನನಗನ್ನಿಸುವುದು ..ಮಠ ದಲ್ಲಿ “ಆನೆ”ಇರಬೇಕು :ಸಮಾಜದಲ್ಲಿ “ಆ”ನೆ ” ಇರಬೇಕು

  [Reply]

 6. Vishwa M S Maruthipura

  ಹಣ” ಮತ್ತು “ಹೆಸರಿ”ನ ಮೋಹ ಪಾಶದಲ್ಲಿ ಬಂದಿಗಳಾದ ನಮಗೆ “ಆನೆ”ನೋಡುವ ಬಾಗ್ಯ ಕಳೆದುಕೊಳ್ಳುವಂಥಾಗಿತ್ತು ಆದರೆ…. “ಗುರುಗಳ” ಸಕಾಲಿಖ ಅನುಗ್ರಹದಿಂದ ಆನೆ ನೋಡುವ ,ಅನುಭವಿಸುವ ಯೋಗ ನಮಗೆ ಪ್ರಾಪ್ತ ವಾಯಿತು ..ಹರೇ ರಾಮ

  [Reply]

 7. nandaja haregoppa

  Hare raama

  ನಾನು ವರವಾಗಿ ಕೇಳಿದ್ದು ಶರೀರಕ್ಕೊಂದು ಆರೋಗ್ಯ ಮನಸ್ಸಿಗೊಂದು ನೆಮ್ಮದಿ ಮಾತ್ರ..!

  ಇವೆರಡಿದ್ದರೆ ಇನ್ನೇನಿಲ್ಲದಿದ್ದರೂ ಚಿಂತೆಯಿಲ್ಲ..!

  ಇವೆರಡಿಲ್ಲದಿದ್ದರೆ ಮತ್ತೇನಿದ್ದರೂ ಪ್ರಯೋಜನವಿಲ್ಲ..!!

  ಅನುಗ್ರಹಿಸು ಪ್ರಭೂ..!!”

  ಹೇ ಪ್ರಭೋ..!

  ಹತ್ತಾರು ಗುರುಗಳು, ನೂರಾರು ಮಾರ್ಗಗಳು, ಸಾವಿರಾರು ಗ್ರಂಥಗಳು ನಮಗೆ ಬೇಡವೇ ಬೇಡ..!

  ಒಂದೇ ಒಂದು ಬಾರಿ ಬದುಕಿನಲ್ಲಿ ನಿಜಕ್ಕೂ ಹಿರಿದ್ಯಾವುದು ಎಂಬುದರ ಸತ್ಯ ದರ್ಶನ ಮಾಡಿಸು..

  pranamagalu

  [Reply]

 8. yajneshbhat

  ಸರಳವಾದ ಶೈಲಿಯಲ್ಲಿ ಎಷ್ಟು ಸುಂದರವಾಗಿ ವಾಸ್ತವವನ್ನು ಹಾಗು ಅದಕ್ಕೆ ಪರಿಹಾರವನ್ನು ಹೇಳಿದ್ದೀರಿ ಸಂಸ್ಥಾನ.. ತುಂಬ ಚೆಂದವಾಗಿ ಬೈಂದು ಈ ಲೇಖನ

  [Reply]

 9. vdaithota

  ಗುರು ಅನುಗ್ರಹದೊಂದಿಗೆ ತಪಸ್ಸು ಮಾಡಿದರೆ ಪಲ ಖಂಡಿತ…
  `ಆ`ನೆ` ಬಯಸಿ ತಪಸ್ಸು ಮಾಡುತ್ತಿದ್ದೇವೆ…
  ಅನುಗ್ರಹಿಸುವಿರಾ ಗುರುದೇವಾ…

  [Reply]

 10. Raghavendra Narayana

  ಈ ಆನೆ, ಆ ಆನೆಯಷ್ಟೆ ಚ೦ದ.
  ಆನೆಯ ಶಕ್ತಿ ಅಪಾರ.
  ದೇವಿಯ ಅ೦ಬಾರಿ – ಗಟ್ಟಿ ಆನೆಯ ಮೇಲಷ್ಟೆ.
  ಗಟ್ಟಿಯಾಗೋಣ, ಆನೆಯಾಗೋಣ, ಗಟ್ಟಿಗರಾಗೋಣ, ಅ೦ಬಾರಿ ಗಿಟ್ಟಿಸೋಣ, ಈ ಜೀವನ ಜಾತ್ರೆಯಲ್ಲಿನ ಮೋಜು ಹೆಚ್ಚಿಸೋಣ.
  ಆನೆ ಸವಾರನಿಗೆ ನಿತ್ಯ ದಸರ.
  .
  ಮುಕ್ತಿಗೆ ಸರಳ ಸಾಧನ, ಆನೆ ವಾಹನ.
  .
  ಶ್ರೀ ಗುರುಭ್ಯೋ ನಮಃ

  [Reply]

  Raghavendra Narayana Reply:

  ಆನೆ ಬಲ ತಿಳಿಯುವ,
  ಆನೆ ಬಲಿ ತಡಿಯುವ.
  .
  ಆನೆಗಳ ಹಿ೦ಡೆ ಇದ್ದರೆ, ಜೀವನ ಒ೦ದು ಚೆ೦ಡು.
  ಆನೆಯಷ್ಟು ಇದ್ದರೂ, ಆನೆ ಇಲ್ಲದಿದ್ದರೆ, ಬರೀ ಬೆ೦ಡು, ಡೆಡ್ ಎ೦ಡು.
  .
  ಕಾಡಿನ ಆನೆಯನ್ನು ಖೆಡ್ಡಾ ಮಾಡಿ, ಸರ್ಕಸನಲ್ಲಿ ಕುಣಿಸುತಿದ್ದಾರೆ, ನಾವು ಮ೦ಗನ೦ತೆ ಕುಣಿಯುತಿದ್ದೇವೆ.
  ನಮ್ಮ ಸೊ೦ಡಿಲನ್ನೆ ಉಪಯೋಗಿಸಿ, ಅ೦ಕುಶವನ್ನು ತಲೆಗೆ ತಿವಿದು, ತುಳಿಯುವ ದಾರಿಯನ್ನು ತುಳಿದಿದ್ದೆ ದಾರಿಯಾಗಿಸುವ.
  .
  ನಾರಾಯಣನ ಸುದರ್ಶನ ಚಕ್ರ, ಶಿವನ ತ್ರಿಶೂಲ, ಸ೦ಸಾರದ ಇರುವೆಗಳು ಆಗಾಗ ಆನೆಯ ಮೆದುಳನ್ನು ಚುಚ್ಚುತ್ತಿರಲಿ, ಗಜೇ೦ದ್ರ ಮೋಕ್ಷ ಸಿಗಲಿ.

  [Reply]

 11. Anuradha Parvathi

  ಮನಸ್ಸಿನ ಆರೋಗ್ಯ ಸರಿಯಾಗಿದ್ದರೆ ಮಾತ್ರ ದೇಹದ ಆರೋಗ್ಯ ಸರಿಯಾಗಿರುವುದು. ನಾವು ಯೋಚಿಸುವ ವಿಚಾರಗಳೂ ಆರೋಗ್ಯವಾಗಿದ್ದಲ್ಲಿ, ಸತ್ ವಿಚಾರಗಳಗಿದ್ದಲ್ಲಿ ’ಆನೆ’ ಯು ನಮ್ಮ ಬಳಿ ಇರುವುದು. ಆದರೂ ಮನುಷ್ಯ ಮಸಾಲೆ ಬಯಸುತ್ತಾನೆ, ನಾಲಿಗೆಗೂ (ತಿನ್ನಲೂ, ನುಡಿಯಲೂ) ಹಾಗೂ ಮನಸ್ಸಿಗೂ. ’ಆನೆ’ ಯ ಕತೆ?

  [Reply]

 12. Raghavendra Narayana

  “ಹೇ ಪ್ರಭೋ..!
  ಹತ್ತಾರು ಗುರುಗಳು, ನೂರಾರು ಮಾರ್ಗಗಳು, ಸಾವಿರಾರು ಗ್ರಂಥಗಳು ನಮಗೆ ಬೇಡವೇ ಬೇಡ..!
  ಒಂದೇ ಒಂದು ಬಾರಿ ಬದುಕಿನಲ್ಲಿ ನಿಜಕ್ಕೂ ಹಿರಿದ್ಯಾವುದು ಎಂಬುದರ ಸತ್ಯ ದರ್ಶನ ಮಾಡಿಸು..”

  ಈ ಮೇಲಿನ ಮಾತುಗಳು, ನಮ್ಮ ಪ್ರತಿ ನಿತ್ಯದ – ಪ್ರತಿ ಗಳಿಗೆಯ ಪ್ರಾರ್ಥನೆಯಾಗಬೇಕು. “ಘನತತ್ತ್ವವೊ೦ದಕ್ಕೆ ದಿನರಾತ್ರಿ ಮನಸೋತು.. – ಮ೦ಕುತಿಮ್ಮ”.
  ಸತ್ಯ. ಹೇ ಪ್ರಭೋ, ನಿಜಕ್ಕೂ ಹಿರಿದ್ಯಾವುದು ಎ೦ಬುದರ ಸತ್ಯ ದರ್ಶನ ಮಾಡಿಸು.
  .
  .
  ಕೃಷ್ಣ, ಶ೦ಕರಾಚಾರ್ಯ, ವಿವೇಕಾನ೦ದ ಇನ್ನೂ ಅನೇಕರಿಗೆ ಹೀಗೆ ಸತ್ಯದ ಅರಿವು ಇದ್ದದ್ದರಿ೦ದ, ಪ್ರತಿ ಕ್ಷಣವೂ ಲೋಕಪಯೋಗಿ ಕೆಲಸ ಮಾಡಿ ಪರಮ-ಯೋಗಿ ಪಟ್ಟವನ್ನು ಪಡೆದರು, ಪರಮ ಗುರಿಯನ್ನು ಮುಟ್ಟಿದರು ಎನ್ನಬಹುದೆ?

  [Reply]

 13. Raghava Hegde

  ಹರೇರಾಮ

  ಆ’ನೆ (ಆರೋಗ್ಯ ನೆಮ್ಮದಿ )ಇವೆರಡು ಗುರು ಮುಖೇನ ಅಥವಾ ಗುರು ಸೇವೆಯಿಂದ ಮಾತ್ರ ಸಾಧ್ಯ

  [Reply]

 14. Shreekant Hegde

  ಹರೇ ರಾಮ, ಗುರುಗಳೇ,

  …………………………….. ತಿನ್ನುವುದಾತ್ಮವನೆ ಮಂಕುತಿಂಮ | ಅಲ್ದಾ ಸಂಸ್ಥಾನ ?

  [Reply]

 15. Anantha Hegde

  nondenayya bhawabandhanadolu siluki mundhe daari kaanadhe…… sri guruve jagadeeshana darshana ninna karuneindhale. sakalaruu gurutatvadalli sruddheyannu hondhuvanthagali , kayyi hidhidhu nadesemmanu hare RAMA .

  [Reply]

 16. vanita

  ಹರೇರಾಮಾ ಗುರುಗಳೆ,
  eshtu chennagi artha madisidiri, ಆನೆ emba shabdadalli eshtondu artha ide embudannu.
  Na kelikolluvude ishte gurugale,

  ನಿಮ್ಮ ಅನುಗ್ರಹದಿಂದ ಆ ಅನೆ ನನಗೆ ಸಿಗಲಿ ಎಂದು.

  [Reply]

  Sri Samsthana Reply:

  ‘ಆನೆ ಬಲಿ’ ಅಲ್ಲ..

  ನಿನ್ನ ಪಾಲಿಗದು ‘ಆನೆ ಬರಲಿ’

  [Reply]

Leave a Reply

Highslide for Wordpress Plugin