” ಏಕಃ ಸ್ವಾದು ನ ಭುಂಜೀತ ” ಸಿಹಿ ವಸ್ತುವನ್ನು ಹಂಚಿ ತಿನ್ನಬೇಕು, ಒಬ್ಬನೇ ತಿನ್ನ ಬಾರದು..!

ಶ್ರೀ ವಾಲ್ಮೀಕಿರಾಮಾಯಣವನ್ನು ಅವಲೋಕಿಸುತ್ತಿರುವಾಗ ನಮ್ಮ ಮನದಲ್ಲಿ ಮತ್ತೆ ಮತ್ತೆ ಸುಳಿದಾಡುವ ಆರ್ಯೋಕ್ತಿಯಿದು..!

ಅಕ್ಕರದಬರಹಕ್ಕೆ ಮೊದಲಿಗನದಾರು..?

ಅಕ್ಕರದ ಬರಹಕ್ಕೆ ಮೊದಲಿಗನದಾರು..?

ಅಂತರ್ಮುಖಿಯಾಗಿ ಅನಾದಿನಾಯಕನ ಜೀವನದರ್ಶನ ಮಾಡಿದ ಆದಿಕವಿಯ ಅಂತರಂಗದಲ್ಲಿಯೂ ಇದೇ ಭಾವ ಮೂಡಿರಬೇಕು..!!

ಮಧುರ – ಮಧುರವಾದ ಮಧುರಾಧಿಪತಿಯ ಕಥೆಯನ್ನು ತಾವು ಉಂಡಿದ್ದು ಮಾತ್ರವಲ್ಲ,

ಶ್ರೀರಾಮಾಯಣದ ಮೂಲಕ ಲೋಕಕ್ಕೆ ಉಣಬಡಿಸಿದರು..!

ರುಚಿ – ರುಚಿಯಾದ ಭಕ್ಷ್ಯ – ಭೋಜ್ಯಗಳನ್ನು ಹೊನ್ನ- ಹರಿವಾಣದಲ್ಲಿಟ್ಟು ಬಡಿಸುವುದಿಲ್ಲವೇ..?

ಹಾಗೆಯೇ ರಸಮಯವಾದ ತಮ್ಮ ಭಾವಗಳನ್ನು – ಅನುಭವಗಳನ್ನು ‘ಸು-ವರ್ಣ’ ಪಾತ್ರದಲ್ಲಿಟ್ಟು ಯುಗ – ಯುಗಗಳ ಜನವೃಂದಕ್ಕೆ ಬಡಿಸಿದರು..!!

ಆದರಿಂದು ಸುಸಂಸ್ಕೃತವಾದ ಭಾವಗಳು ವಿರಳವಾಗುತ್ತಿವೆ..!

ಸಂಸ್ಕೃತಭಾಷೆಯೂ ಮರೆಯಾಗುತ್ತಿದೆ.

ಪರಿಣಾಮವಾಗಿ ಇಂದಿನ ಪೀಳಿಗೆಯೇ ಮೂಲ ‘ರಾಮಾಯಣದಿಂದ’ ವಂಚಿತವಾಗುತ್ತಿದೆ..!

ಈ ಹಿನ್ನೆಲೆಯಲ್ಲಿ ಮೂಲವಾಲ್ಮೀಕಿರಾಮಾಯಣದ ಸವಿಯನ್ನು ಸಾಮಾನ್ಯ ಜನತೆಗೆ ಉಣಬಡಿಸುವ ಪ್ರಯತ್ನವಿದು..!

ರಾಮಾಯಣವನ್ನು ಮೊದಲಬಾರಿಗೆ ಸಮಾಜದ ಮುಂದೆ ಪ್ರಸ್ತುತಪಡಿಸಿದ ಲವ – ಕುಶರು ಮಹಾ ಕವಿ ವಾಲ್ಮೀಕಿಯನ್ನು ಕಂಡಿದ್ದರು..!

ಹಾಗೆಯೇ ಮಹಾನಾಯಕ ಶ್ರೀರಾಮನನ್ನೂ ಕಣ್ಣಾರೆ ಕಂಡಿದ್ದರು..!

ಇಂದು ಅವರಿಬ್ಬರೂ ನಮ್ಮ ಚರ್ಮ ಚಕ್ಷುಗಳ ಮುಂದಿಲ್ಲ..!

ನಮ್ಮ ಭಾಗಕ್ಕೆ ಇಂದು ಉಳಿದಿರುವುದು ವಾಲ್ಮೀಕಿಪ್ರಣೀತವಾದ ಶಬ್ದರಾಶಿ ಮಾತ್ರವೇ..!

ವಾಲ್ಮೀಕಿಗಳ ಅಮರ ‘ಪದ’ಗಳ ಮೂಲಕವೇ ಶ್ರೀರಾಮನ ಅಮರ ‘ಪದ’ಗಳನ್ನು ಸೇರಬೇಕಾಗಿದೆ..!!!

ಸಾಗರದಾಳದ, ಹಿಮಾಲಯದೆತ್ತರದ, ಆಗಸದಗಲದ ಶ್ರೀರಾಮನ ವ್ಯಕ್ತಿತ್ವವನ್ನು ವಾಲ್ಮೀಕಿಗಳೂ ಸಂಪೂರ್ಣವಾಗಿ ನೋಡಿರಲಾರರು..!

ಅವರ ಅರಿವಿಗದೆಷ್ಟು ಬಂದಿತೋ, ಅದಷ್ಟನ್ನೂ ಶಬ್ದಗಳಲ್ಲಿ ತರಲು ಅವರಿಗೆ ಸಾಧ್ಯವಾಗಿರಲಾರದು..!

ವಾಲ್ಮೀಕಿಗಳ ಶಬ್ದಗಳಲ್ಲಿ ತುಂಬಿರುವ ಭಾವವೆಲ್ಲವನ್ನೂ ಭಾವಿಸಲು ನಮ್ಮಿಂದ ಸಾಧ್ಯವಾಗಿರಲಾರದು..!

ರಾಮಾಯಣವು ನಮ್ಮಲ್ಲಿ ಮೂಡಿಸಿದ ಭಾವಗಳೆಲ್ಲವೂ ಹೇಗೂ ನಮ್ಮ ಶಬ್ದಗಳಲ್ಲಿ ಬರಲಾರವು..!!

ನಮ್ಮ ಶಬ್ದಗಳಲ್ಲಿ ಹುದುಗಿರಬಹುದಾದ ಭಾವಗಳೆಲ್ಲವೂ ನಿಮ್ಮನ್ನು ತಲುಪಲಾರವು..!

ಓದುಗನ ಹೃದಯವನ್ನು ತಲುಪಿದ ಭಾವಗಳಲ್ಲಿಯೂ ಕೂಡಾ ಎಲ್ಲವೂ ಬದುಕಿನಲ್ಲಿ ಅನುಷ್ಠಾನಕ್ಕೆ ಬರಲಾರವು..!

ಇಷ್ಟೆಲ್ಲ ಮಿತಿಗಳ ಮಧ್ಯದಲ್ಲಿಯೂ ರಾಮಾಯಣದಲ್ಲಿ ನಾವು ಅನುಭವಿಸಿದ ಸವಿಯನ್ನು ಈ ವಾರದಿಂದ ನಿಮ್ಮೊಡನೆ ಹಂಚಿಕೊಳ್ಳಬಯಸುವೆವು….!

ಏಕೆಂದರೆ ‘ಏಕಃ ಸ್ವಾದು ನ ಭುಂಜೀತ’….

Facebook Comments Box