LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಮರೆವು ವಿಪತ್ತಿ, ಅರಿವೇ ಸಂಪತ್ತಿ..!

Author: ; Published On: ರವಿವಾರ, ಜನವರಿ 23rd, 2011;

Switch to language: ಕನ್ನಡ | English | हिंदी         Shortlink:

||ಹರೇ ರಾಮ||
ರಾಜನೆಂದರೆ ರಾಜ್ಯದ ಆತ್ಮ..

ಮಂತ್ರಿಯೆಂದರೆ ರಾಜ್ಯದ ಬುದ್ಧಿ..

ಯಾವುದರ ಪರಿವೆ ಇಲ್ಲದೆಯೂ ಆತ್ಮವು ಇರಬಹುದು…ಆದರೆ ಬುದ್ಧಿಯು ಸದಾ ಎಚ್ಚರವಾಗಿರಲೇಬೇಕು…ಶರೀರದ, ಮನಸ್ಸಿನ,ಇಂದ್ರಿಯಗಳ,ಹೆಚ್ಚೇಕೆ ಬದುಕಿನ ಸಮಸ್ತ ಆಗು-ಹೋಗುಗಳನ್ನು ಗಮನಿಸುವ-ನಿಯಂತ್ರಿಸುವ ಹೊಣೆಗಾರಿಕೆ ಅದರದ್ದೇ ಅಲ್ಲವೇ..?

ಮನನವೆಂದರೆ ಅರಿಯುವುದು..

ತ್ರಾಣವೆಂದರೆ ಪೊರೆಯುವುದು…

ಮನನ-ತ್ರಾಣಗಳೆರಡೂ ಹುದುಗಿವೆ ಮಂತ್ರದಲ್ಲಿ..

ಮಂತ್ರವುಳ್ಳವನು ಮಂತ್ರಿಯೆಂದಾದಮೇಲೆ ಆತನಿಗೆ ಎರಡೇ ಮುಖ್ಯಕಾರ್ಯಗಳು..

ಅರಿಯುವುದು ಮತ್ತು ಪೊರೆಯುವುದು…

ಎಲ್ಲವನ್ನೂ ಅರಿಯುವ, ತನ್ಮೂಲಕ ಎಲ್ಲರನ್ನೂ ಪೊರೆಯುವ ಕರ್ತವ್ಯವವನದ್ದು..

ಅರಿವು ಪೊರೆಯುವಂತೆ ಮತ್ಯಾವುದು ತಾನೇ ಪೊರೆಯಲು ಸಾಧ್ಯ..?

ಆತ್ಮ- ಬುದ್ಧಿಗಳು ಎಲ್ಲರಲ್ಲಿಯೂ ಇವೆ. ಆದರೆ ಆತ್ಮ ಕೆಟ್ಟು ಕೆಟ್ಟವರಾರಿಲ್ಲ..ಬುದ್ಧಿ ಕೆಟ್ಟು ಕೆಟ್ಟವರುಂಟು..!

ಬಂಧನ -ಮೋಕ್ಷಗಳು ಬುದ್ಧಿಯಿಂದಲಾಗಿ, ಆತ್ಮದಿಂದಲಾಗಿಯಲ್ಲ..

ಒಳ್ಳೆಯವರು- ಕೆಟ್ಟವರೆನಿಸುವುದು ಒಳ್ಳೆಯ-ಕೆಟ್ಟ ಬುದ್ಧಿಗಳಿಂದಲಾಗಿ, ಆತ್ಮದಿಂದಲಾಗಿಯಲ್ಲ..

ವ್ಯಕ್ತಿಯ ಉನ್ನತಿ- ಅವನತಿಗಳಿಗೆ ಹೇಗೆ ಅವನ ಬುದ್ಧಿ ಕಾರಣವೋ ಹಾಗೆಯೇ ರಾಜ್ಯವೊಂದರ ಉನ್ನತಿ- ಅವನತಿಗಳಿಗೆ ಆ ರಾಜ್ಯದ ಮಂತ್ರಿಗಳೇ ಎದುರು ಕಾಣದ, ಆದರೆ ನೈಜವಾದ ಕಾರಣರು..

ಆದುದರಿಂದಲೇ ಇರಬೇಕು..ರಾಜನನ್ನು ೩೮ ಬಗೆಯಲ್ಲಿ ಬಣ್ಣಿಸಿದ ವಾಲ್ಮೀಕಿಗಳು ಮಂತ್ರಿಗಳನ್ನು ೫೧ ಬಗೆಯಲ್ಲಿ ಬಣ್ಣಿಸಿದರು !! ಏಕೆಂದರೆ ವ್ಯಕ್ತಿಯನ್ನು ಎಷ್ಟೇ ಬಣ್ಣಿಸಲಿ, ಕೊನೆಗೂ ಬಂದು ನಿಲ್ಲುವುದು ‘ಆತನಿಂದ ಯಾರಿಗೆ ಏನು ಲಾಭವಾಯಿತು?’ ಎಂಬಲ್ಲಿಯೇ ಅಲ್ಲವೇ..!? ಹಾಗಲ್ಲದಿದ್ದರೆ ‘ ಮಾಣಿ ಬಹಳ ಒಳ್ಳೆಯವನೇ, ಆದರೆ ತೋಟ ಮಾತ್ರ ಸಂಪೂರ್ಣ ಹಾಳು’ ‘ Operation success, but patient is dead’ ಎಂಬಂತಾದೀತು..

ಪರಿಣಾಮವೇ ಇಲ್ಲದ ಒಳ್ಳೆಯದನ್ನು ಕಟ್ಟಿಕೊಂಡು ಯಾರಿಗೇನು ?

ಚಂದನದ ಸಾರವನ್ನು ಸುಗಂಧದಲ್ಲಿ ಕಾಣುವಂತೆ, ಸಕ್ಕರೆಯ ಸಾರವನ್ನು ಸವಿಯಲ್ಲಿ ಕಾಣುವಂತೆ, ಸೂರ್ಯನ ಸಾರವನ್ನು ಬೆಳಕಲ್ಲಿ ಕಾಣುವಂತೆ, ರಾಜನ ಸಾರವನ್ನು ರಾಜ್ಯಭಾರದಲ್ಲಿ ಕಾಣಬೇಕು..! ರಾಜ್ಯಭಾರದ ಮೂರ್ತರೂಪರೇ ಮಂತ್ರಿಗಳು..ಆದುದರಿಂದಲೇ ಮಂತ್ರಿಗಳ ಬಗೆಗೆ ಇಷ್ಟೊಂದು ವಿವರಣೆ..ಮಂತ್ರಿಗಳನ್ನು ಮಾಧ್ಯಮವನ್ನಾಗಿ ಮಾಡಿಕೊಂಡು ವಾಲ್ಮೀಕಿಗಳು ವರ್ಣಿಸಿದ್ದು ದಶರಥನ ರಾಜ್ಯಭಾರವನ್ನೇ..!!

ಸವಾಲು : – ‘ ಗುರು ‘ ಏನೆಂಬುದನ್ನು ಒಂದೇ ಪದದಲ್ಲಿ ವ್ಯಾಖ್ಯಾನಿಸಿ..

ಜವಾಬು :- ‘ ಶಿಷ್ಯ ‘

ಏಕೆಂದರೆ ಗುರುವಿನ ಗುರುತು- ಗುರುತ್ವಗಳು ಶಿಷ್ಯನಲ್ಲಿಯಲ್ಲವೇ ಪ್ರಕಟವಾಗುವುದು – ಅಳೆಯಲ್ಪಡುವುದು ..? ಹಾಗೆಯೇ ರಾಜನನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ನೋಡಬೇಕಾದುದು ರಾಜ್ಯವನ್ನು, ಗಮನಿಸಬೇಕಾದುದು ‘ ರಾಜ್ಯಭಾರ ‘ ವನ್ನು..!!

ದಶರಥನು ದೇಶವೆಂಬ ದೇಹದ ಹೃದಯವಾಗಿದ್ದರೆ, ಮಿದುಳಾಗಿದ್ದರು ಆತನ ಮಂತ್ರಿಗಳು..

ಮಿದುಳಿಗೆ ಅರಿವೇ ಅಲ್ಲವೇ ಮುಖ್ಯ ಕಾರ್ಯ..?

ಬುದ್ಧಿಗೆ ಅರಿವೇ ಸಿದ್ಧಿ, ಮರೆವು ವಿಪತ್ತಿ..!!

ದಶರಥನ ಮಂತ್ರಿಗಳು ಎಲ್ಲದರಲ್ಲಿಯೂ ಬಲ್ಲಿದರಾಗಿದ್ದರೆಂಬುದನ್ನು ( ಬಲ್ಲ + ಇದ = ಬಲ್ಲಿದ ) ಬಣ್ಣಿಸುವ ಋಷಿಪದಗಳನ್ನು ಒಮ್ಮೆ ಅವಲೋಕಿಸಿ..

* || ಪ್ರಕೃತ್ಯಾ ಸಂಪದನ್ವಿತಾಃ || ವಿದ್ಯಾವಿನೀತಾ ಃ ||

ಭೂಮಿಯಲ್ಲಿ ನೈಸರ್ಗಿಕವಾಗಿ ನೀರಿದ್ದರೆ, ಬಾವಿ ತೋಡಿದಾಗ ಅದು ಸರ್ವಜನೋಪಯೋಗಿಯಾಗಿ ಪ್ರಕಟಗೊಳ್ಳುತ್ತದೆ..ವ್ಯಕ್ತಿಯಲ್ಲಿ ನೈಸರ್ಗಿಕವಾಗಿ ಸಾಮರ್ಥ್ಯವಿದ್ದರೆ, ಸರಿಯಾದ ಶಿಕ್ಷಣ ನೀಡಿದಾಗ ಅದು ವಿಕಸಿತಗೊಂಡು, ವ್ಯಕ್ತಿಗೂ, ಸಮಾಜಕ್ಕೂ ಹಿತವಾಗುವಂತೆ ಪ್ರಕಟಗೊಳ್ಳುತ್ತದೆ.. ಸಾಮರ್ಥ್ಯವಿಲ್ಲದವನಿಗೆ ಶಿಕ್ಷಣ ನೀಡುವುದು ನೀರಿಲ್ಲದಲ್ಲಿ ಬಾವಿ ತೋಡಿದಂತೆಯೇ ಸರಿ..! ಸಾಮರ್ಥ್ಯವಿರುವವನಿಗೆ ಸರಿಯಾದ ಶಿಕ್ಷಣ ದೊರೆಯದಿದ್ದರೆ, ಭೂಮಿಯಲ್ಲಿ ನೀರಿದ್ದರೂ ಮೇಲೆತ್ತುವ ಮನುಷ್ಯಪ್ರಯತ್ನವಿಲ್ಲದಾಗ ಅದು ವ್ಯರ್ಥವಾಗಿ ಹೋಗುವಂತೆಯೇ ಸರಿ….!

ರಾಜ್ಯರಕ್ಷಣೆಗೆ ಬೇಕಾದ ಜ್ಞಾನ – ಗುಣಸಂಪತ್ತನ್ನು ನೈಸರ್ಗಿಕವಾಗಿಯೇ ಹೊಂದಿರುವ ವ್ಯಕ್ತಿತ್ವಗಳನ್ನು ಅಯೋಧ್ಯೆಯ ಅರಮನೆಯು ಗುರುತಿಸಿತ್ತು.. ಅವರಿಗೆ ಸಮುಚಿತವಾದ ಶಿಕ್ಷಣವನ್ನು ನೀಡಿ, ಮಂತ್ರಿಪದದಲ್ಲಿ ಪ್ರತಿಷ್ಠಾಪಿಸಿತ್ತು..

ಶ್ರೇಷ್ಠವಾದ ಆಡಳಿತವೆಂದರೆ ಯೋಗ್ಯ ವ್ಯಕ್ತಿಗಳನ್ನು ಗುರುತಿಸಿ, ಅವರಿಗೆ ಯೋಗ್ಯವಾದ ಶಿಕ್ಷಣ- ಉಪಕರಣಗಳನ್ನು ನೀಡಿ, ಯೋಗ್ಯವಾದ ಪದವಿಯಲ್ಲಿ ನೆಲೆಗೊಳಿಸುವುದೇ ಅಲ್ಲವೇ..?

14 Responses to ಮರೆವು ವಿಪತ್ತಿ, ಅರಿವೇ ಸಂಪತ್ತಿ..!

 1. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು

  “ರಾಜ – ಮಂತ್ರಿ”, “ಆತ್ಮ -ಬುದ್ದಿ”, “ಗುರು-ಶಿಷ್ಯ” ಪದಗಳು ನಮ್ಮೆಲ್ಲರ ಹೊಣೆಗಾರಿಕೆಯನ್ನು ಮತ್ತೆ ಮತ್ತೆ ನೆನಪಿಸುವಂತಿದೆ. ಸದಾ ಜಾಗೃತಾವಸ್ಥೆಯಲ್ಲಿದ್ದು ಕರ್ತವ್ಯವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಪ್ರಭು ಶ್ರೀರಾಮಚಂದ್ರನು ನಮಗೆಲ್ಲ ಕರುಣಿಸಲಿ.

  [Reply]

 2. Anuradha Parvathi

  ಸವಾಲು = ಗುರು?
  ಜವಾಬು = ಶಿಷ್ಯ

  ಈ ಮೇಲಿನದಕ್ಕೆ ಆತಂಕ ಪಡಬೇಕೋ!, ಹೆಮ್ಮೆ ಪಡಬೇಕೋ! ಎಂಬ ಪ್ರಶ್ನೆ. ಆತಂಕ ಯಾಕಂದರೆ, ಶಿಷ್ಯರು ಈ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವರೊ ಇಲ್ಲವೊ ಎಂದು. ಹೆಮ್ಮೆ ಯಾಕೆಂದು ಬೇರೆ ಹೇಳುವ ಅಗತ್ಯವಿಲ್ಲವೆನುಸುತ್ತದೆ. ಹೆಮ್ಮೆಗೆ ನೂರೆಂಟು ಕಾರಣಗಳುಂಟು.

  [Reply]

 3. shrinivas hegde

  hare raama,

  gurugale, ee lekana ‘raama-baana’ vannu nenapisuttade…

  [Reply]

 4. gopalakrishna pakalakunja

  “….ವ್ಯಕ್ತಿಯ ಉನ್ನತಿ- ಅವತಿಗಳಿಗೆ ಹೇಗೆ ಅವನ ಬುದ್ಧಿ ಕಾರಣವೋ ಹಾಗೆಯೇ ರಾಜ್ಯವೊಂದರ ಉನ್ನತಿ- ಅವನತಿಗಳಿಗೆ ಆ ರಾಜ್ಯದ ಮಂತ್ರಿಗಳೇ ಎದುರು ಕಾಣದ, ಆದರೆ ನೈಜವಾದ ಕಾರಣರು..”
  ಸಾರ್ವಕಾಲಿಕ ಸತ್ಯ.
  ಗುರುಚರಣಗಳಿಗೆ ಅನಂತ ಪ್ರಣಾಮಗಳು

  [Reply]

 5. Raghavendra Narayana

  ಅದ್ಭುತ.
  .
  “ಬ೦ಧನ-ಮೋಕ್ಷಗಳು ಬುದ್ಧಿಯಿ೦ದಲಾಗಿ, ಆತ್ಮದಿ೦ದಲಾಗಿಯಲ್ಲ..
  ಒಳ್ಳೆಯವರು-ಕೆಟ್ಟವರೆನಿಸುವುದು ಒಳ್ಳೆಯ-ಕೆಟ್ಟ ಬುದ್ಧಿಗಳಿ೦ದಲಾಗಿ, ಆತ್ಮದಿ೦ದಲಾಗಿಯಲ್ಲ..”
  .
  “ಮಿದುಳಿಗೆ ಅರಿವೇ ಅಲ್ಲವೇ ಮುಖ್ಯ ಕಾರ್ಯ..?
  ಬುದ್ಧಿಗೆ ಅರಿವೇ ಸಿದ್ಧಿ, ಮರೆವು ವಿಪತ್ತಿ..!!”
  .
  ಗುರುಗಳ ಲೇಖನ ಓದಿ ಓದಿ, ನಮ್ಮ ಮೆದುಳಿನ, ನಮ್ಮ ಬುದ್ಧಿಯ, ನಮ್ಮ ಸಾಮರ್ಥ್ಯದ ಅರಿವಾಗಲಿ..
  ವಿಕಾಸವಾಗಲಿ, ಹಿತವಾಗಲಿ, ಸುಖವಾಗಲಿ ಸಮಾಜಕ್ಕೆ,
  .
  ಸ್ವಸ್ಥ ಸಮಾಜದಿ೦ದ ಮೆಡಿಕಲ್ ಶಾಪ್-ಗಳು ಕಡಿಮೆಯಾಗಲಿ.
  (ಶಿವ ಶಿವ, ಬೆ೦ಗಳೂರಿನಲ್ಲಿ ಕಣ್ಣು ಬಿಟ್ಟ ಕಡೆಯಲ್ಲಾ ಮೆಡಿಕಲ್ ಶಾಪ್ಸ್.. ವಿಜಯನಗರ ಸಾಮ್ರಾಜ್ಯದಲ್ಲಿ ಮುತ್ತು ರತ್ನ ಚಿನ್ನ ಬೀದಿಯಲ್ಲಿ ಮಾರುತ್ತಿದ್ದರ೦ತೆ..)
  .
  ಶ್ರೀ ಗುರುಭ್ಯೋ ನಮಃ

  [Reply]

 6. Jeddu Ramachandra Bhatt

  ಗುರುಗಳಿಗೆ ಪ್ರಣಾಮಗಳು,

  ರಾಮಾಯಣದ ಈ ಸಂದೇಶವನ್ನು ಸರಿಯಾಗಿ ತಿಳಕೊಂಡು ನಡೆಯಬಲ್ಲ ವ್ಯಕ್ತಿಗಳೆಲ್ಲಿದ್ದಾ ರೆ – ಗುರು ವಸಿಶ್ತರನ್ನು ಪೂಜ್ಯರಲ್ಲಿ ಕಾಣಬಲ್ಲೆ. ಆದರೆ ಮಂತ್ರಿ ಸುಮಂತ್ರನಂತೆ ದಶರಥನಂತಿರುವವರನ್ನು ಎಲ್ಲಿ ಹುಡುಕೋಣ?
  – ಈ ಕಲಿಯುಗದಲ್ಲಿ ?
  ಹೇ ರಾಮಾ, ಮತ್ತೊಮ್ಮೆ ಇಳೆಗೆ ಇಳಿದು ಬಾ.

  ಪುನಃ ರಾಮಯಣದ ಗುಂಗಿಗೆ ಒಳಗಾಗುತ್ತಿ ದೇನೆ. ಮುಂದುವರಿಯಲಿ ಪೂಜ್ಯರ ಪ್ರವಚನ, ಒಳ್ಲೆಯ ಕಾಲ ಬಂದೀತಲ್ಲವೆ?

  [Reply]

 7. ಮಂಗ್ಳೂರ ಮಾಣಿ...

  ಪರಿಣಾಮ ತರುವ ಒಳಿತು ನಮ್ಮೆಲ್ಲರೊಳ ಬರುವಂತೆ ಆಶೀರ್ವದಿಸಿ ಗುರುಗಳೇ.

  [Reply]

 8. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ತನ್ನ ತಪಶಕ್ತಿಯಿಂದ ಇಡೀ ಜಗತ್ತನ್ನೇ ತನ್ನ ದೃಷ್ಟಿಯೋಳಗಿರಿಸಿಕೊಂಡು, ಜಗತ್ತಿನ ಕಣ ಕಣದಲ್ಲೂ ರಾಮನನ್ನೇ ಕಾಣುವ, ಜಗತ್ತಿನ ಯಾವುದೋ ಮೂಲೆಯಲ್ಲಿರುವ ಶಿಲೆಯಲ್ಲಿ ಕುಳಿತಲ್ಲಿಂದಲೇ ರಾಮನ ವಿಗ್ರಹವನ್ನು ಕೆತ್ತುವ ಸಾಮರ್ಥ್ಯವುಳ್ಳ ಇಂತಹ ಜಗದ್ಗುರುಗಳಿರುವಾಗ ರಾಮ ರಾಜ್ಯದ ಕನಸು ನನಸಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

  [Reply]

 9. SUBRAHMANYA B.R.

  ಶ್ರೀ ಗುರುಭೋ ನಮಃ

  ಅಮ೦ತ್ರಮಕ್ಷರ೦ ನಾಸ್ತಿ ಮೂಲ ವನೌಷಧಮ್೦l ಅಪ್ರಯೋಜಕ ಪುರುಷೊ ನಾಸ್ತಿ ಯೋಜಕಸ್ತತ್ರ ದುರ್ಲಭಃ

  ಯೋಜಕರಾಗಿ ಶ್ರೀ ಗುರುಗಳಿರುವಾಗ ನಾವೆಲ್ಲ ಹೇಗೆ ಅಪ್ರಯೋಜಕರಾಗಲು ಸಾಧ್ಯ?

  [Reply]

 10. Athrijalu

  hererama
  manassige naatuvanthaa lekhana
  guruvaryaaa

  hareraama

  [Reply]

 11. Shrikant Hegde, RR Nagar

  || ಹರೇ ರಾಮ ||
  ನಮ್ಮ ದೇಶದಲ್ಲಿ ಇಂದು ರಾಜ್ಯದ ದೇಶದ ಆಡಳಿತದ ಮುಚುನಿಯಲ್ಲಿರುವವರು ತಮ್ಮ ತಮ್ಮ ಅಧಿಕಾರ ರಕ್ಷಿಸಿಕೊಳ್ಳುವ, ವ್ರದ್ಧಿಸಿಕೊಳ್ಳುವ ದಾಹವನ್ನು ಬಿಟ್ಟು ಶ್ರೀಗಳು ಈ ಲೇಖನದಲ್ಲಿ ತಿಳಿಯ ಪಡಿಸಿದಂತೆ ಸಮರ್ಥ ಆದಲಿತದೆಡೆಗೆ ಮನಸ್ಸು ಹರಿಸಲೆಂದು ಗುರು-ದೇವರಲ್ಲಿ ಪ್ರಾರ್ಥಿಸುತ್ತೇವೆ!
  ಶ್ರೇಷ್ಠವಾದ ಆಡಳಿತವೆಂದರೆ ಯೋಗ್ಯ ವ್ಯಕ್ತಿಗಳನ್ನು ಗುರುತಿಸಿ, ಅವರಿಗೆ ಯೋಗ್ಯವಾದ ಶಿಕ್ಷಣ- ಉಪಕರಣಗಳನ್ನು ನೀಡಿ, ಯೋಗ್ಯವಾದ ಪದವಿಯಲ್ಲಿ ನೆಲೆಗೊಳಿಸುವುದೇ ಅಲ್ಲವೇ..?

  || ಹರೇ ರಾಮ ||

  [Reply]

 12. Raghavendra Narayana

  ಗುರುವೇ, ನನ್ನೊಳಗೇ ನಾನೇ ನಾನಾಗಿ ಮಿತ್ರಸೈನ್ಯ ಶತ್ರುಸೈನವಿರುವುದು, ಮೈತ್ರಿ / ಸ೦ಧಾನ / ಯುದ್ಧ – ಯಾವುದರೊ೦ದಿಗೆ ಹೇಗೆ ಮಾಡಿಕೊಳ್ಳಬೇಕೆ೦ಬ ವಿದ್ಯ ಕಲಿಸಿ.. ಶಿಷ್ಯ ನೆಪಮಾತ್ರವಾಗಿ ಗುರುವಿನ ವಿಜಯವಾಗಲಿ..
  — ಹರೇರಾಮ (ಬ್ಲಾಗ್ಸ್) ಗುರುಗಳೇ
  .
  ಶ್ರೀ ಗುರುಭ್ಯೋ ನಮಃ

  [Reply]

 13. pakalakunja gopalakrishna bhat

  ”….ಭೂಮಿಯಲ್ಲಿ ನೈಸರ್ಗಿಕವಾಗಿ ನೀರಿದ್ದರೆ, ಬಾವಿ ತೋಡಿದಾಗ ಅದು ಸರ್ವಜನೋಪಯೋಗಿಯಾಗಿ ಪ್ರಕಟಗೊಳ್ಳುತ್ತದೆ..ವ್ಯಕ್ತಿಯಲ್ಲಿ ನೈಸರ್ಗಿಕವಾಗಿ ಸಾಮರ್ಥ್ಯವಿದ್ದರೆ, ಸರಿಯಾದ ಶಿಕ್ಷಣ ನೀಡಿದಾಗ ಅದು ವಿಕಸಿತಗೊಂಡು, ವ್ಯಕ್ತಿಗೂ, ಸಮಾಜಕ್ಕೂ ಹಿತವಾಗುವಂತೆ ಪ್ರಕಟಗೊಳ್ಳುತ್ತದೆ.. ಸಾಮರ್ಥ್ಯವಿಲ್ಲದವನಿಗೆ ಶಿಕ್ಷಣ ನೀಡುವುದು ನೀರಿಲ್ಲದಲ್ಲಿ ಬಾವಿ ತೋಡಿದಂತೆಯೇ ಸರಿ..! ಸಾಮರ್ಥ್ಯವಿರುವವನಿಗೆ ಸರಿಯಾದ ಶಿಕ್ಷಣ ದೊರೆಯದಿದ್ದರೆ, ಭೂಮಿಯಲ್ಲಿ ನೀರಿದ್ದರೂ ಮೇಲೆತ್ತುವ ಮನುಷ್ಯಪ್ರಯತ್ನವಿಲ್ಲದಾಗ ಅದು ವ್ಯರ್ಥವಾಗಿ ಹೋಗುವಂತೆಯೇ ಸರಿ….!”

  [Reply]

 14. rama bhat muliyala

  hareraama shri gurubhyo nama. mantri ellavannoo mduvudadaroo namaskarisabekadaddu rajanige . rajanaru mantri yaru endu gurutisuvudu hege gurugaledari tori…

  [Reply]

Leave a Reply

Highslide for Wordpress Plugin