LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಮಾ ನಿಷಾದ…

Author: ; Published On: ಗುರುವಾರ, ಜುಲಾಯಿ 1st, 2010;

Switch to language: ಕನ್ನಡ | English | हिंदी         Shortlink:

|| ಹರೇರಾಮ ||

ಕೇವಲ ದುಃಖವು ದುಃಖವೇ ಅಲ್ಲ.
ಸಂತೋಷದ ನಂತರ ಬರುವ ದುಃಖವೇ ನಿಜವಾದ ದುಃಖ..!
ಹುಟ್ಟುಬಡವನಿಗೆ ಗಂಜಿ ಕುಡಿಯಲು ಕಷ್ಟವೇನಿಲ್ಲ –
ಅದು ಕಷ್ಟವಾಗುವುದು, ಕೆಲಕಾಲ ಮೃಷ್ಟಾನ್ನವನ್ನುಂಡ ನಂತರವೇ…!

ಇಲ್ಲಿ ವಾಲ್ಮೀಕಿಗಳಿಗಾದದ್ದು ಹಾಗೆಯೇ…
ಪಕ್ಷಿಗಳ ಪ್ರೇಮ ಪ್ರಸಂಗವನ್ನು ಕಂಡ ಕಣ್ಣಿನಿಂದಲೇ ಅವುಗಳ ದಾರುಣ ಮರಣ-ವಿರಹ-ಸಂಕಟಗಳನ್ನು-
ಆ ಮೃದು ಹೃದಯಿ ಮುನಿ ಕಾಣಬೇಕಾಯಿತು….!
ಒಂದಾದ ಮೇಲೊಂದರಂತೆ ಪ್ರೇಮ-ಘೋರಗಳ ಪರಾಕಾಷ್ಠೆಯನ್ನು ಕಾಣುವುದೆಂದರೆ –
ಆನಂದದ ಅಂಬರವೇರಿ ಅನ್ಯಾಯದ ಪಾತಾಳಕ್ಕೆ ಉರುಳಿದಂತೆಯೇ ಅಲ್ಲವೇ..?

ಸುಡುವ ಸೂರ್ಯನ ಝಳಕ್ಕೆ ಹಿಮಾಲಯವು ಕರಗಿ ಗಂಗೆಯಾಗಿ ಹರಿವಂತೆ..
ಧರೆಯ ಧಗೆಗೆ ಮೋಡ ಕರಗಿ ಮಳೆಯಾಗಿ ಇಳಿಯುವಂತೆ..
ಪಕ್ಷಿಯ ಪರಿತಾಪದ ಬಿಸಿಗೆ ಕರಗಿತು ಮುನಿಮನವೆಂಬ ಹಿಮಾಲಯ..ಹರಿಯಿತು ಕಾವ್ಯಗಂಗೆಯಾಗಿ…!
ವಾಲ್ಮೀಕಿಗಳೊಳಗೆ ಹಕ್ಕಿಗಳ ಹರುಷದಿಂದಾಗಿ ಹುಟ್ಟಿಕೊಂಡಿದ್ದ ನಾಕವು ಶೋಕವಾಗಿ ಪರಿವರ್ತಿತವಾದರೆ-
ಶೋಕವು ಶ್ಲೋಕದಲ್ಲಿ ಪರ್ಯವಸಾನಗೊಂಡಿತು…!

ಮಹಾಪೂರವು ಆಣೆಕಟ್ಟನ್ನು ಮುರಿದು ಮುನ್ನುಗ್ಗುವಂತೆ –
ಸಂಯಮದ ಕಟ್ಟೆಯನ್ನೊಡೆದು ಮುನಿಮುಖದಿಂದ ಹೊರಹೊಮ್ಮಿತು ಶಾಪವಾಕ್ಯ..

ಮಾ ನಿಷಾದ ಪ್ರತಿಷ್ಠಾಂ ತ್ವಂ
ಅಗಮಃ ಶಾಶ್ವತೀಃ ಸಮಾಃ|
ಯತ್ ಕ್ರೌಂಚಮಿಥುನಾತ್ ಏಕಂ
ಅವಧೀಃ ಕಾಮಮೋಹಿತಮ್..||

ಶಾಪವಿದು ಬೇಡನಿಗೆ...ಮಂಗಲಮಹಾವರ ಮನುಕುಲಕೆ..!

“ಎಲೋ ಬೇಡನೇ..! ಕ್ರೌಂಚ ದ್ವಂದ್ವದಲ್ಲೊಂದನ್ನು, ಅದು ಕಾಮಮೋಹಿತವಾಗಿದ್ದಾಗ ನಿಷ್ಕರುಣೆಯಿಂದ ಕೊಂದೆಯಲ್ಲವೇ..?
ಮುಗ್ಧ ಪಕ್ಷಿಯ ವಾಸದ ನೆಲೆ (ವೃಕ್ಷ)-
ವಿಶ್ವಾಸದ ನೆಲೆ (ಪತ್ನಿ)-
ಮತ್ತು ಶ್ವಾಸದ ನೆಲೆ (ಬದುಕು)-
ಹೀಗೆ ಮೂರೂ ನೆಲೆಗಳನ್ನು ಇಲ್ಲವಾಗಿಸಿದ ನಿನಗೆ ನೆಲೆಯೇ ಸಿಗದಿರಲಿ…!”

ವೃತ್ತಿಧರ್ಮವೆಂಬ ನೆಲೆಯಲ್ಲಿ ನಿಂತಲ್ಲವೇ ಆತ ಪಕ್ಷಿಯನ್ನು ಹೊಡೆದದ್ದು..?
ಅಂದಮೇಲೆ ಋಷಿಯು ಬೇಡನ ಮೇಲೆ  ಕೋಪಿಸಲೇಕೆ..?
ಆತನನ್ನು ಶಪಿಸಲೇಕೆ..?

ಹಿಂಸೆಗಾದರೊಂದು ಕಾರಣ ಬೇಡವೇ…?
ಹಸಿವಿಗಾಗಿ ಕೊಲ್ಲುವುದುಂಟು..
ಅಪಾಯವಿದ್ದರೆ ಆತ್ಮರಕ್ಷಣೆಗೆಂದು ಕೊಲ್ಲುವುದುಂಟು..!
ಅಪರಾಧ ನಡೆದಾಗ ದಂಡನೆಯ ರೂಪದಲ್ಲಿ ಕೊಲ್ಲುವುದುಂಟು..

ಆದರಿಲ್ಲಿ..?
ಪಕ್ಷಿಯ ಹತ್ಯೆಯ ಹಿನ್ನೆಲೆಯಲ್ಲಿ ಇದ್ಯಾವ ಕಾರಣಗಳೂ ಇರಲಿಲ್ಲ..!
ಕೊಂದವನಿಗೆ ಹಸಿವಿರಲಿಲ್ಲ…
ಮುಗ್ಧ ಪಕ್ಷಿಯಿಂದ ಅವನಿಗೆ ಯಾವ ಅಪಾಯವೂ ಇರಲಿಲ್ಲ..
ಯಾವ ಅಪರಾಧವೂ ಘಟಿಸಿರಲಿಲ್ಲ..
ಆದುದರಿಂದಲೇ ವೃತ್ತಿಧರ್ಮವೊಂದೇನು..ಯಾವ ಧರ್ಮದ ನೆಲೆಯಲ್ಲಿಯೂ ನಡೆಸಿದ ಹತ್ಯೆ ಅದಾಗಿರಲಿಲ್ಲ..!

ಹಿಂಸೆಗಾದರೊಂದು ಸಮಯ ಬೇಡವೇ..?
ಕೊಲ್ಲಲು ಜೋಡಿ ಹಕ್ಕಿಗಳು ಜೊತೆಯಾಗಿ ಅದ್ವೈತದ ನೈಸರ್ಗಿಕ ಆನಂದದಲ್ಲಿ ವಿಹರಿಸುತ್ತಿರುವ ಸಮಯವೇ ಆಗಬೇಕೇ…?

ಹಿಂಸೆಗಾದರೊಂದು ಸಂದರ್ಭ ಬೇಡವೇ…?
ಪ್ರೇಮ-ದಯೆಗಳ ಸಾಕಾರರೂಪರಾದ ಮಹರ್ಷಿಗಳ ಕಣ್ಣೆದುರೇ ಇಂತಹ ಘೋರ ಕೃತ್ಯವನ್ನು ನಡೆಸುವುದೇ…?

ಹಿಂಸೆಗಾದರೊಂದು ಮಿತಿ ಬೇಡವೇ…?
ಪಕ್ಷಿಯುಗಳದಲ್ಲಿ ಒಂದನ್ನು ಹೊಡೆದು ಇನ್ನೊಂದನ್ನು ಬಿಡುವುದರಲ್ಲಿ,
ಒಂದರ ಮರಣಸಂಕಟ, ಇನ್ನೊಂದರ ವಿಯೋಗವ್ಯಥೆಯನ್ನು
ಒಮ್ಮೆಲೇ ಕಂಡು ಆನಂದಿಸುವ ಕ್ರೂರ ಹಿಂಸಾಸಂತೋಷಪ್ರವೃತ್ತಿಯಲ್ಲವೇ ಆ ಬೇಡನಲ್ಲಿ ಅಡಗಿದ್ದದ್ದು…!?

ವಿಷಯವೊಂದನ್ನು ಅರ್ಥ ಮಾಡಿಕೊಳ್ಳಲು ಸಾಮಾನ್ಯ ಬುದ್ಧಿಗೆ ಉಪಕರಣಗಳು ಬೇಕು..
ಯುಕ್ತಿಗಳು ಬೇಕು..ಸಾಕ್ಷ್ಯಗಳು ಬೇಕು..
ಆದರೆ,
ಮುನಿಯಾದವನಿಗೆ ಅವನ ಪರಿಶುದ್ಧ ಅಂತಃಕರಣವೇ ಸಾಕು..
ಆ ಸಮಯದಲ್ಲಿ ಅವನ ಅಂತರಂಗದಲ್ಲೇಳುವ ಭಾವತರಂಗಗಳೇ ಸಾಕು..
ಅವನ ಆತ್ಮಸಾಕ್ಷಿಯೇ ಸಾಕು..!
ತನ್ನ ಆತ್ಮದಲ್ಲೇ ಜಗತ್ತನ್ನೇ ನೋಡಬಲ್ಲವನಿಗೆ, ಅರಿಯಬಲ್ಲವನಿಗೆ ತಾನೆ, ಮುನಿಯೆಂದು ಹೆಸರು..!

ಬೇಡನ ಬೇಡದ ಕೃತ್ಯದಿಂದಾಗಿ ತನ್ನೊಳಗೆ ಉಂಟಾದ ಶೋಕದಿಂದಲೇ ವಾಲ್ಮೀಕಿಗಳು ನಿರ್ಣಯಿಸಿದರು ಇಲ್ಲಿ ಧರ್ಮನಾಶವಾಗಿದೆ ಎಂದು.
ಏಕೆಂದರೆ, ಸತ್ಪುರುಷರಿಗೆ ಶೋಕವುಂಟಾಗುವುದು ಧರ್ಮನಾಶವಾದಾಗ ಮಾತ್ರ…!

‘ಧರ್ಮೋ ಹಂತಿ ಹತೋ ರಾಜನ್ ಧರ್ಮೋ ರಕ್ಷತಿ ರಕ್ಷಿತಃ..|’

ಧರ್ಮವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುವುದು..
ಧರ್ಮವನ್ನು ನಾವು ಘಾತಿಸಿದರೆ ಅದು ನಮ್ಮನ್ನು ಘಾತಿಸುವುದೂ ಅಷ್ಟೇ ಸಹಜ…!
ಬಲ್ಲವರ ವಾಣಿಯಿದು..!

ಬೇಡ ಹೊಡೆದದ್ದು ಕೇವಲ ಪಕ್ಷಿಯನ್ನಲ್ಲ..
ಪಕ್ಷಿಗಳಲ್ಲಿ ಆನಂದದ ರೂಪದಲ್ಲಿ ಪ್ರಕಟವಾಗುತ್ತಿದ್ದ ಪ್ರಾಕೃತಿಕ ಧರ್ಮವನ್ನು…!
ಆದುದರಿಂದಲೇ ಪಕ್ಷಿಯೊಳಗೆ ಆಹತವಾದ ಧರ್ಮವು ವಾಲ್ಮೀಕಿಗಳೊಳಗಿನಿಂದ ವ್ಯಕ್ತವಾಗಿ – ಶಾಪವಾಗಿ ಬೇಡನನ್ನು ದಂಡಿಸಿತು…!
(ಪೂಜ್ಯರಾದ ಎನ್ೆ.ಎಸ್. ರಾಮಭದ್ರಾಚಾರ್ಯರು ನೀಡುತ್ತಿದ್ದ ವಿವರಣೆಯಿದು).

ನೆಲೆ ಸಿಗದಿರಲೆಂಬ ಶಾಪವಾಣಿಯೂ ಅರ್ಥಪೂರ್ಣವಾದುದೇ…!

ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ…|
ಧರ್ಮೋ ಧಾರಯತೇ ಪ್ರಜಾಃ…|

ಜಗತ್ತು ನೆಲೆ ನಿಂತಿರುವುದೇ ಧರ್ಮದ ಮೇಲೆ..
ಸಕಲ ಜೀವಿಗಳನ್ನೂ ಧರಿಸಿರುವ ಸೃಷ್ಟಿಯ ಧಾರಕಶಕ್ತಿಯೇ ಧರ್ಮ..
ಅದನ್ನೇ ಘಾತಿಸಿದ ಮೇಲೆ ಮತ್ತೆ ನೆಲೆಯೆಲ್ಲಿಂದ…?
ತಾನು ಕುಳಿತ ಕೊಂಬೆಯನ್ನೇ ಕಡಿದಂತಲ್ಲವೇ ಅದು..?

ಶ್ಲೋಕವಾಯಿತು ಶೋಕ..!

ಶೋಕದಲ್ಲಿಯೋ, ರೋಷದಲ್ಲಿಯೋ, ಆವೇಶದಲ್ಲಿಯೋ..ಆಡಿದ ಮಾತುಗಳು ತಾಳ ತಪ್ಪುವುದು ಸಹಜ..
ಆದರೆ ಅದೇನು ವಿಚಿತ್ರವೋ, ಶೋಕವಶರಾದ ವಾಲ್ಮೀಕಿಗಳ ಬಾಯಿಯಿಂದ ಅಪ್ರಯತ್ನವಾಗಿ ಹೊರಹೊಮ್ಮಿದ ಮಾತುಗಳು ಕೇವಲ ಮಾತಾಗಿರದೆ ಸುವ್ಯವಸ್ಥಿತವಾದ ಛಂದೋಬದ್ಧವಾದ ಕವಿತೆಯಾಗಿದ್ದವು…!

ಸರಿಯಾಗಿ ನಾಲ್ಕು ಚರಣಗಳು..
ಒಂದೊಂದು ಚರಣದಲ್ಲಿಯೂ ಸರಿಯಾಗಿ ಎಂಟೆಂಟು ಅಕ್ಷರಗಳು…!
ತಂತ್ರೀವಾದ್ಯಗಳೊಡನೆ ಮೇಳೈಸಿ ಸೊಗಸಾಗಿ ಹಾಡಬರುವ ತೆರನಾದ ರಾಗ- ತಾಳ-ಲಯಗಳ ಸಮನ್ವಯ..!
ಇವುಗಳೆಲ್ಲವೂ ಆ ಕವಿತಾರೂಪದ ಶಾಪವಾಕ್ಯದಲ್ಲಿ ತಾನೇತಾನಾಗಿ ಪಡಿಮೂಡಿದ್ದವು..

ಗಿರಿಯಿಂದ ಸಹಜವಾಗಿ ಧುಮ್ಮಿಕ್ಕುವ ಝರಿಯಂತೆ..
ವಾಲ್ಮೀಕಿಗಳ ಯಾವ ಪ್ರಯತ್ನವೂ ಇಲ್ಲದೆಯೇ ಛಂದೋಬದ್ಧವಾಗಿ – ರಸಭಾವ ಪರಿಪೂರ್ಣವಾಗಿ –
ತಾಳ-ಲಯಸಮನ್ವಿತವಾಗಿ ಆ ಕವಿತೆ ಅವರೊಳಗಿನಿಂದ ಧುಮ್ಮಿಕ್ಕಿತು…!

ಅವು ಕೇವಲ ಅಕ್ಷರಗಳ ಜೋಡಣೆಯಲ್ಲ..
ಅಂತಃಸ್ಪೂರ್ತಿಯ ನೆಲೆಯಲ್ಲಿ ಚಿಮ್ಮಿಬಂದ ಕಾವ್ಯಧಾರೆ..

ಅದು ಈ ಜಗದ ಮೊದಲ ಕವಿತೆ…!
ಆದಿಕಾವ್ಯದ ಆದಿಮಂಗಳ ಪಂಕ್ತಿಯದು…!

ಆದಿಕವಿತೆಯು ಮುಂಬರುವ ಅನಂತಕವಿತೆಗಳಿಗೆ ಹೇಳಿದ ಪಾಠವಿದು..
ಕವಿತೆಯೆಂಬುದು ಮುಗಿಲಿನಿಂದ ತಾನೇತಾನಾಗಿ ಇಳಿದು ಬರುವ ಮಳೆಯಂತೆ..
ಗಿರಿಯಿಂದ ಸಹಜವಾಗಿ ಹರಿದು ಬರುವ ಝರಿಯಂತೆ…
ಭೂಮಿಯ ಒಡಲಿನಿಂದ ನೈಸರ್ಗಿಕವಾಗಿ ಚಿಮ್ಮಿ ಬರುವ ಚಿಲುಮೆಯಂತೆ…
ಸಹಜವಾದ ಭಾವ ಸೃಷ್ಟಿಯಾಗಿರಬೇಕೇ ಹೊರತು ನಲ್ಲಿಯ ನೀರಿನಂತೆ  ಕೃತ್ರಿಮವಾದ ಬುದ್ಧಿಸೃಷ್ಟಿಯಾಗಿರಬಾರದು..
ಒಂದಿಷ್ಟು ಹಣಕ್ಕಾಗಿಯೋ ಹೆಸರಿಗಾಗಿಯೋ ಮನ ಬಂದಂತೆ ಕೃತ್ರಿಮವಾಗಿ ಹೊಸೆಯುವ ಶಬ್ದಜಾಲಗಳೆಲ್ಲ ಕಾವ್ಯಗಳಲ್ಲ…!

ಕೆಲವರ ವರ ಹಲವರಿಗೆ ಶಾಪವಾಗುವುದುಂಟು..!
ಉದಾಹರಣೆಗೆ, ರಾವಣನಿಗೂ, ಹಿರಣ್ಯಕಶ್ಯಪುವಿಗೂ ಸಿಕ್ಕಿದ ವರಗಳು ವಿಶ್ವಕಂಟಕವಾಗಿ ಪರಿಣಮಿಸಿದವು…!
ಆದರೆ ಇಲ್ಲಿ ಹಾಗಲ್ಲ…
ಬೇಡನಿಗೆ ವಾಲ್ಮೀಕಿಗಳಿತ್ತ ಶಾಪವು ವಿಶ್ವಕ್ಕೆ ಶ್ರೀರಾಮಾಯಣ ರೂಪದ ಶಾಶ್ವತ ವರವಾಗಿ ಪರಿಣಮಿಸಿತು…!
ಅನಂತ ಕಾವ್ಯಗಳ ಅಮೃತಧಾರೆಯ ಪ್ರಥಮಬಿಂದುವಾಯಿತು…!

|| ಹರೇರಾಮ ||

25 Responses to ಮಾ ನಿಷಾದ…

 1. shobha lakshmi

  ಹರೇರಾಮ….ಗುರುದೇವಾ…ರಾಮಾಯಣ ಕಾವ್ಯ ಹುಟ್ಟಲು ಕಾರಣವಾದದ್ದು ಒ೦ದು ದುಃಖದ ಸನ್ನಿವೇಷ …ಇದೇ ರೀತಿ ಇಡೀ ರಾಮಾಯಣಲ್ಲಿ ಹಲವಾರು ಪ್ರಸ೦ಗ ಸಿಕ್ಕುತ್ತು…..ದಶರಥ ಮಹಾರಾಜ ಪುತ್ರವಿಯೋಗಲ್ಲಿ ಕೊರಗುದು,,,ಸೀತಾಪಹರಣ,,ಮು೦ತಾಗಿ ,,,ಪ್ರಕ್ರುತಿ ಪುರುಷರ ವಿಯೋಗ,,ಅದರಿ೦ದ ನೋವು ,ದುಃಖ ಪಡುದು ಇಡಿ ರಾಮಾಯಣದ ಸಾರಾ೦ಶವಾಗಿ ಕಾಣುತ್ತಿದ್ದು…ಅಲ್ಲದಾ?

  [Reply]

  Sri Samsthana Reply:

  ನೂಲಿನಂತೆ ಸೀರೆ… ಬೀಜದಂತೆ ವೃಕ್ಷ..
  ರಾಮಾಯಣ ವೃಕ್ಷದ ಬೀಜವೇ ಮಾ ನಿಷಾದ..
  ಅಂದ ಮೇಲೆ ಅಲ್ಲಿರುವ ಕರುಣರಸ ವೃಕ್ಷದಲೆಲ್ಲ ಪಸರಿಸಬೇಕಲ್ಲವೇ…?

  [Reply]

 2. Madhu Dodderi

  ಮೂರು ಬಾರಿ ಓದಿದೆ…. ನೂರು ಬಾರಿ ಓದಬೇಕೆನಿಸಿತು!

  ’ಗುರುಪದ’ಗಳಲ್ಲಿ ಅದೆಂಥಾ ಶಕ್ತಿ!

  [Reply]

  Sri Samsthana Reply:

  ಆ ಶಕ್ತಿಯ ಮೂಲ ರಾಮ, ರಾಮಾಯಣ..!

  [Reply]

 3. Vishwa M S Maruthipura

  ಕಳೆದು ಹೋದ ಒಂದು ಸುಖ ವನ್ನು ನೆನಪಿಸಿಕೊಂಡರೆ ತಕ್ಷಣ ಕಣ್ಣೀರು ಬರುತ್ತದೆ ,ಆದರೆ ….ಕಳೆದುಹೋದ ಒಂದು ಕಷ್ಟ ನೆನಪಿಸಿಕೊಂಡರೆ ಯಾಕೋ ತುಟಿಯಂಚಿನಲ್ಲಿ “ನಗೆ” ಅರಳುತ್ತದೆ …”.ಸುಖದ ನೆನಪು ಕಣ್ಣೀರನ್ನು ,ಕಷ್ಟದ ನೆನಪು ನಗೆ”ಯನ್ನು ಉಂಟು ಮಾಡುವುದು ಎಂಥಹ ವಿಚಿತ್ರ …ಆದರೂ ಸತ್ಯ ! ರಾಮಾಯಣ ದ ಉದ್ದಗಲಕ್ಕೂ ಇದು ಗೋಚರಿಸುತ್ತಾ ಹೋಗುತ್ತದೆ …..

  [Reply]

  Sri Samsthana Reply:

  ಕಷ್ಟ ಕಳೆಯಿತೆಂಬ ಸುಖ..ಸುಖ ಕಳೆಯಿತೆಂಬ ದುಃಖ…
  ಚಕ್ರವತ್ ಪರಿವರ್ತಂತೆ ದುಃಖಾನಿಚ ಸುಖಾನಿಚ..||
  ಸುಖ-ದುಃಖಗಳನ್ನು ಮೀರಿ ನಿಂತರೆ ಶಾಂತಿ..

  [Reply]

 4. Sharada Jayagovind

  Harerama Sri Guruji

  The blog explores the question of a hunter killing a bird from the stand point of Dharma .It condemns the act as unrighteous .Reasons have been given and accepted…

  But in today’s world , Veerappans are felicitated, poets and rishis sing their glory…curses donot work…Ravanayana is born …why? Why?
  We know it is Kaliyuga and Dharma is weak.Yet ,what is the way out?

  [Reply]

  Sri Samsthana Reply:

  ಧರ್ಮವೆಂದೂ ದುರ್ಬಲವಲ್ಲ..
  ದುರ್ಬಲರು ನಾವು, ನಮ್ಮ ಮನಸ್ಸು…
  ಇಚ್ಚೆ-ಸಂಕಲ್ಪಗಳು ಮನಸ್ಸಿಗೆ ಶಕ್ತಿ ತುಂಬುವುವು..
  ಏನಾಗಬೇಕೆಂದುಕೊಳ್ಳುವೆವೋ ಆ ಕುರಿತು ಪ್ರಾಮಾಣಿಕವಾದ ಇಚ್ಚೆ ಮತ್ತು ದೃಢವಾದ ಸಂಕಲ್ಪ ಇದ್ದರೆ ಅದು ಆಗಿಯೇ ತೀರುತ್ತದೆ..
  where there is a will, there is a way..!

  [Reply]

 5. Vishwa M S Maruthipura

  ಹರೇರಾಮ …ಒಬ್ಬರ ನೆತ್ತಿಯ ಮೇಲೆ ಕಲ್ಲೆತ್ತಿ ಹಾಕುವ ಮನುಷ್ಯ ತನ್ನ ಹೆಬ್ಬೆಟ್ಟಿಗೆ ಗಾಯ ವಾಗದಿರಲೆಂದು ಎಚ್ಚರಿಕೆ ವಹಿಸದೆ ಇರುತ್ತಾನೆಯೇ ,ಬಹುಶ :ಇಂಥಹ ಒಂದು ಅದ್ಬುತ ವಾಲ್ಮೀಕಿಯಿಂದ ಆಗುವುದಕ್ಕೆ ದೇವನಾಡಿಸಿದ ಲೀಲೆಯೇ ?

  [Reply]

 6. ರಾಘವೇ೦ದ್ರ ಉಪಾಧ್ಯ Raghavendra Narayana

  ಆದಿ ಕವಿತೆಗೆ, ಆದಿ ಕವಿಗೆ, ಆದಿ ಕಾವ್ಯಕ್ಕೆ, ಆದಿ ದೇವನ ಸೇರಲು ಹಾದಿ ಮಾಡಿಕೊಡುತ್ತಿರುವ ಆದಿ ಗುರುವಿಗೆ ಪ್ರಣಾಮಗಳು.
  .
  ಹಾದಿಗೆ ನೆರಳಾಗಿ ಗುರುವಿರಲಿ. ಕಾಲು ಸೋಲದಿರಲಿ, ಕಣ್ಣು ದಣಿಯದಿರಲಿ, ಅ೦ಧಕಾರದಲ್ಲಿ ಚುಕ್ಕಿಚ೦ದ್ರಮ ಹಾಲಬೆಳಕ ನೀಡಿ ಹಾದಿಕಾವ್ಯ ಮುನ್ನೆಡಸಲಿ.

  [Reply]

  Sri Samsthana Reply:

  ತಥಾಸ್ತು..

  [Reply]

 7. yajneshbhat

  ಮೊದಲಿಂದ ಕೊನೆಯತನಕ ಓದೋ ತನಕ ಅದೆಷ್ಟು ಉತ್ಸಾಹ!!!

  ಪ್ರತಿ ವಾಕ್ಯ ಅದಕ್ಕೆ ಉಪಮೆ ಎಲ್ಲಾ ಸುಂದರ. ಮತ್ತೆ ಮತ್ತೆ ಓದಬೇಕಿನಿಸುತ್ತದೆ. ಮನಸ್ಸಲ್ಲಿ ಘಟನೆಯ ತದ್ರೂಪ ಸೃಷ್ಟಿಯಾಗಿ ಪ್ರತಿ ಪಾತ್ರದಲ್ಲೂ ನಾವಾಗಿ ಪಾತ್ರದಾರಿಯ ಮನಸ್ಸಲ್ಲಿ ನಡೆಯೋ ದ್ವಂದ್ವಗಳು ಹಚ್ಚಹಸುರಾಗಿ ನಿಂತಿದೆ….

  ತುಂಬಾ ಸುಂದರವಾಗಿ ಬಂದಿದೆ

  [Reply]

  Sri Samsthana Reply:

  ಲೇಖನಿಗೆ, ಆಸ್ವಾದಿಸುವ ಹೃದಯಗಳೇ ಸ್ಫೂರ್ತಿ..!

  [Reply]

 8. ಜಗದೀಶ್ B R

  ಹರೇ ರಾಮ.. ಆದಿಯಿಂದ ಅಂತ್ಯದವರೆಗೆ ಅತ್ಯಂತ ಸೊಗಸಾದ ನಿರೂಪಣೆ. :)
  ದುರ್ಲಭವಾದ ನರಜನ್ಮದಲ್ಲಿ ಜನಿಸಿಯೂ ಜನ್ಮ ಸಾರ್ಥಕ ಮಾಡಿಕೊಳ್ಳುವ ಅವಕಾಶಗಳಿಗಿಂತ ಜನ್ಮಭ್ರಷ್ಟ, ಧರ್ಮಭ್ರಷ್ಟನಾಗುವ ಸಂದರ್ಭ, ಸನ್ನಿವೇಶಗಳೇ ಹೆಜ್ಜೆ ಹೆಜ್ಜೆಗೂ ಇದಿರಾಗುವ, ಇಳಿಜಾರಿಗೇ ಎಳೆದೊಯ್ಯುವ ಈ ದಿನಗಳಲ್ಲಿ ಗುರುಮುಖೇನ ರಾಮಾಯಣದಲ್ಲಿನ ಆದರ್ಶಗಳ ದರ್ಶನ ಮಾಡುವ, ತನ್ಮೂಲಕ ಧರ್ಮಿಷ್ಟನಾಗುವ ಅವಕಾಶ ‘ಹರೇರಾಮ’ದ ಮೂಲಕ ಸುಲಭವಾಗಿ ಲಭಿಸಿರುವುದು ನಮಗೊದಗಿ ಬಂದಿರುವುದು ಸುಂದರ, ಸುವರ್ಣ ಸದವಕಾಶ. ಮುಂದಿನದು, ಇದನ್ನು ಸಂಪೂರ್ಣ ‘ಲಾಭ’ ಮಾಡಿಕೊಳ್ಳುವುದು!

  [Reply]

  Sri Samsthana Reply:

  ಗುರುವಿನ ಕಂಗಳು ಹೋದಲ್ಲಿ ಶಿಷ್ಯರ ಕಾಲುಗಳು ಹೋದರೆ ಸಾಕು…
  ಮೋಕ್ಷಕ್ಕೆ ಮತ್ತೇನು ಬೇಕು..?

  [Reply]

  Dr J Thirumala Prasad Reply:

  ಎಷ್ಟು ಚೆನ್ನಾಗಿದೆ ಈ ವಾಕ್ಯ!!

  [Reply]

 9. sriharsha.jois

  ವಿಷಯವೊಂದನ್ನು ಅರ್ಥ ಮಾಡಿಕೊಳ್ಳಲು ಸಾಮಾನ್ಯ ಬುದ್ಧಿಗೆ ಉಪಕರಣಗಳು ಬೇಕು..
  ಯುಕ್ತಿಗಳು ಬೇಕು..ಸಾಕ್ಷ್ಯಗಳು ಬೇಕು..
  ಆದರೆ,
  ಮುನಿಯಾದವನಿಗೆ ಅವನ ಪರಿಶುದ್ಧ ಅಂತಃಕರಣವೇ ಸಾಕು..
  ಆ ಸಮಯದಲ್ಲಿ ಅವನ ಅಂತರಂಗದಲ್ಲೇಳುವ ಭಾವತರಂಗಗಳೇ ಸಾಕು..
  ಅವನ ಆತ್ಮಸಾಕ್ಷಿಯೇ ಸಾಕು..!
  ತನ್ನ ಆತ್ಮದಲ್ಲೇ ಜಗತ್ತನ್ನೇ ನೋಡಬಲ್ಲವನಿಗೆ, ಅರಿಯಬಲ್ಲವನಿಗೆ ತಾನೆ, ಮುನಿಯೆಂದು ಹೆಸರು..!

  ಇಂದು ಈ ಅಂತಃಸಾಕ್ಷಿ ಎನ್ನುವ ಶಬ್ಧವಾದರೂ ಪ್ರಚಲಿತದಲ್ಲಿದೆಯೇ ಗುರುದೇವಾ..?
  ಅದನ್ನನುಸರಿಸುವ ಶುದ್ಧ ಭಾವ ಹೊಂದಿರುವ ವ್ಯಕ್ತಿ ಕಾಣಸಿಗಲು ಸಾಧ್ಯವೇ…?
  ಕೋಪಗೊಂಡರೂ ಆ ಸಾತ್ವಿಕತೆ ಹೃದಯದಲ್ಲಿ ಅದು ಹೇಗೆ ತುಂಬಿತ್ತು…?

  [Reply]

  Sri Samsthana Reply:

  ಸಾತ್ವಿಕ ಕೋಪವದು…!

  [Reply]

 10. Madhu Dodderi

  “ಕೆಲವರ ವರ ಹಲವರಿಗೆ ಶಾಪವಾಗುವುದುಂಟು..!
  ಉದಾಹರಣೆಗೆ, ರಾವಣನಿಗೂ, ಹಿರಣ್ಯಕಶ್ಯಪುವಿಗೂ ಸಿಕ್ಕಿದ ವರಗಳು ವಿಶ್ವಕಂಟಕವಾಗಿ ಪರಿಣಮಿಸಿದವು…!”

  ಇಲ್ಲಿ ರಾವಣನಿಗೂ, ಹಿರಣ್ಯಕಶಪುವಿಗೂ ಸಿಕ್ಕಿದ ವರಗಳಿಂದ ಶ್ರೀಮನ್ನಾರಾಯಣನೇ ಭುವಿಗಿಳಿದುಬರುವಂತಾಗಿ ವಿಶ್ವಮಂಗಲವೂ ಆಯಿತಷ್ಟೆ!
  ರಾವಣನಿಲ್ಲದಿದ್ದಲ್ಲಿ ಪೂರ್ಣಗುಣಾನ್ವಿತನಾದ ಒಬ್ಬ ಮಾನವರೂಪಿಯನ್ನು ನೋಡುವ ಅವಕಾಶವೇ ತಪ್ಪಿ ಹೋಗುತ್ತಿತ್ತಲ್ಲವೇ?

  ಸೋಜಿಗವೆನಿಸುತ್ತದೆ…

  ಒಂದೇ ಘಟನೆ ವಿಶ್ವಮಂಗಲಕಾರಣವಾಗಿಯೂ, ವಿಶ್ವಕಂಟಕಮೂಲವಾಗಿಯೂ ಆದಂತೆನಿಸುತ್ತದಲ್ಲಾ…. ಇದರ ಹಿಂದಿನ ಮರ್ಮವೇನು?

  [Reply]

  Sri Samsthana Reply:

  ಭಗವಂತನ ಅವತಾರವಾಗುವುದು ದುಷ್ಟರಿಗಾಗಿ ಅಲ್ಲ..ಆರ್ತರಿಗಾಗಿ..
  ರಾವಣ-ಹಿರಣ್ಯಕಶ್ಯಪುಗಳು ತಮ್ಮ ವರವನ್ನು ಬಳಸಿದ್ದು ವಿಶ್ವಕ್ಕೇ ಕಂಟಕವಾಗುವಂತೆಯೇ ಸರಿ..
  ಭಗವಂತನ ಅವತಾರದ ಶ್ರೇಯಸ್ಸು ಅವರಿಗೆ ಸಲ್ಲಬೇಕಾದದ್ದಲ್ಲ…
  ಅದು ಸಲ್ಲಬೇಕಾದದ್ದು ನೊಂದ ಜೀವಗಳ ಪ್ರಾರ್ಥನೆಗೆ..
  ರಾಮಾಯಣಕ್ಕೆ ಅವತಾರಕ್ಕೆ ಕ್ರೌಂಚಕರುಣವೇ ಕಾರಣವೆಂದರೆ ಸರಿ..
  ಬೇಡನ ದೌಷ್ಟ್ಯಕ್ಕೆ ಆ ಶ್ರೇಯಸ್ಸು ಸಲ್ಲದು..

  [Reply]

  Anuradha Parvathi Reply:

  ತುಂಬಾ convincing ಆಗಿದೆ. ನನಗೂ ಮಧುಗೆ ಬಂದ ಸಂಶಯ ಯಾವಾಗಲೂ ಬರುತ್ತೆ. ತ್ರುಪ್ತಿ ಆಯಿತು ಗುರುಗಳ ಉತ್ತರ ಓದಿ.

  [Reply]

 11. seetharama bhat

  Hareram,

  Harichitha
  Narachitha

  Berathare

  Paramaartha illavadare Anartha

  [Reply]

  Sri Samsthana Reply:

  ಹರಿಚಿತ್ತ ನರಚಿತ್ತ ಸೇರಿಸುವ ಸಮರ್ಥ ಗುರು ನಿಜದ ದಾರಿಯ ತೋರೆ..ಬದುಕು ಪೂರ್ಣ..

  [Reply]

 12. ರಾಘವೇ೦ದ್ರ ಉಪಾಧ್ಯ Raghavendra Narayana

  ತ೦ಗಾಳಿ ಹೊತ್ತು ತರುವ ಮೋಡಗಳ೦ತೆ – ಶಾ೦ತ ಗಾ೦ಭಿರ್ಯ ತೀವ್ರತೆಗಳ ಒಳಗೊ೦ಡ೦ತೆ, ತಮಸೆಯಲ್ಲಿ ರಾಮ ಎ೦ಬ ಸಾಗರದ ಅಲೆ ಅಲೆ ಮನಸ್ಸಿಗೆ ಬಡಿಬಡಿದು ತೇಲುವ೦ತಾಗಿರಲು, ಮನ ರಾಮನತ್ತ ವಾಲುತ್ತಿರಲು……. ಸಾಗರ ಪ್ರಕೃತಿಯ ತಟದಲ್ಲಿ ಕುಳಿತು ಆನ೦ದದಲೆಗಳನ್ನು ತಮ್ಮಲ್ಲಿ ತು೦ಬಿಕೊ೦ಡು ತೇಲಿಕೊ೦ಡಿದ್ದ ಕ್ರೌ೦ಚ ಪಕ್ಷಿಗಳ ಕ೦ಡು…… ರಾಮನಿದ್ದ ಹೃದಯಕ್ಕೆ ಬೇಡ ಬಿಟ್ಟ ಬಾಣಕ್ಕೆ ಚಿತ್ರ ಛಿದ್ರಗೊ೦ಡು – ಧರ್ಮ ಮತ್ತೆ ನೆಲೆಗೂಡಲಿ ಎ೦ದು ರಚಿತವಾಯ್ತೆ ರಾಮಾಯಣ?

  [Reply]

 13. ರಾಘವೇ೦ದ್ರ ನಾರಾಯಣ ಉಪಾಧ್ಯ Raghavendra Narayana

  ————————————–
  “ಬೇಡ ಹೊಡೆದದ್ದು ಕೇವಲ ಪಕ್ಷಿಯನ್ನಲ್ಲ..
  ಪಕ್ಷಿಗಳಲ್ಲಿ ಆನಂದದ ರೂಪದಲ್ಲಿ ಪ್ರಕಟವಾಗುತ್ತಿದ್ದ ಪ್ರಾಕೃತಿಕ ಧರ್ಮವನ್ನು…!
  ಆದುದರಿಂದಲೇ ಪಕ್ಷಿಯೊಳಗೆ ಆಹತವಾದ ಧರ್ಮವು ವಾಲ್ಮೀಕಿಗಳೊಳಗಿನಿಂದ ವ್ಯಕ್ತವಾಗಿ – ಶಾಪವಾಗಿ ಬೇಡನನ್ನು ದಂಡಿಸಿತು…!
  (ಪೂಜ್ಯರಾದ ಎನ್ೆ.ಎಸ್. ರಾಮಭದ್ರಾಚಾರ್ಯರು ನೀಡುತ್ತಿದ್ದ ವಿವರಣೆಯಿದು).”
  ————————————–

  [Reply]

Leave a Reply

Highslide for Wordpress Plugin