LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಮುನಿಮನದೊಳು ಮಾತಾಗಿ ಮೂಡಿದನೆ ರಾಮ..?!

Author: ; Published On: ಗುರುವಾರ, ಜುಲಾಯಿ 15th, 2010;

Switch to language: ಕನ್ನಡ | English | हिंदी         Shortlink:

|| ಹರೇರಾಮ ||

ಅಮೃತಬಿಂದುವೊಂದು ಸಿಕ್ಕರೂ ತೃಪ್ತರಾಗುವವರು ಹಲವರು..
ಬಿಂದುಲಾಭದ ನಂತರ ಸಿಂಧುವಿಗಾಗಿ ಹುಡುಕುವವರು ಕೆಲವರು..

ನಾರದರೊರೆದ ರಾಮಕಥಾ ಸಂಕ್ಷೇಪವನ್ನು ಕಿವಿದೆರೆದು ಕೇಳಿದ ವಾಲ್ಮೀಕಿಗಳು, ಅದರ ವಿಸ್ತಾರವನ್ನು ಕಣ್ಮುಚ್ಚಿ ಹುಡುಕತೊಡಗಿದರು..
ಅತ್ಮೋದ್ಧಾರಕ್ಕೆ ಬಿಂದು ಸಾಕು..ಜಗದುದ್ಧಾರಕ್ಕೆ ಸಿಂಧುವೇ ಬೇಕಲ್ಲವೇ..?

ಕಣ್ಮುಚ್ಚಿ ಹುಡುಕಿದರೆಂದೆವಲ್ಲವೇ..?
ನಿಜದ ನಿಜವಾದ ರಾಜಧಾನಿ ನಮ್ಮ ಹೃದಯವೇ ಆಗಿರುವಾಗ ಹೊರಗೆಲ್ಲಿ ಹುಡುಕುವುದು..!?
ಇತಿಹಾಸವನ್ನು ಹರಿದ ತಾಳೆಗರಿಗಳಲ್ಲಿಯೋ, ಮುರಿದ ಮಡಕೆ ಚೂರುಗಳಲ್ಲಿಯೋ ಹುಡುಕುವುದುಂಟು..
ಅಂತಹವರಿಗೆ ಸಿಗುವುದು ಹರಿದ-ಮುರಿದ ಇತಿಹಾಸ ಮಾತ್ರವೇ..!
ಪೂರ್ಣ ಸತ್ಯದರ್ಶವಾಗುವುದೆಂದೂ ಅಂತಂಗದಲ್ಲಿಯೇ..!

ದೇವಮುನಿಯ ಮುಖದಿಂದ ರಾಮಕಥಾಶ್ರವಣ..
ಮತ್ತೆ ಮತ್ತೆ ಮನದಲ್ಲಿಯೇ ಮನನ..
ಧ್ಯಾನದಲ್ಲಿ ರಾಮಾಯಣದರ್ಶನ ..
ಇದು ವಾಲ್ಮೀಕಿಗಳ ತ್ರಿವಿಕ್ರಮ..!
(ತ್ರಿವಿಕ್ರಮ :- ದಿವಿ-ಭುವಿಗಳನ್ನಳೆಯುವ ಮೂರು ಹೆಜ್ಜೆಗಳು..)

ಇಂದಿನ ಕಾಲದಲ್ಲಿ ಯಾವುದಾದರೊಂದು ಘಟನೆಯ ಬಗ್ಗೆ ಬರೆಯಬೇಕೆಂದರೆ, ಮೊದಲು ಗ್ರಂಥಾಲಯದಲ್ಲಿಯೋ ಅಂತರ್ಜಾಲದಲ್ಲಿಯೋ ಹುಡುಕುತ್ತಾರೆ..
ಘಟನೆಯ ಭಾಗಿಗಳನ್ನೋ, ಸಾಕ್ಷಿಗಳನ್ನೋ ಸಂದರ್ಶನ ಮಾಡುವುದೂ ಉಂಟು..

ಆದರೆ ವಾಲ್ಮೀಕಿಗಳು ಇದಾವುದನ್ನೂ ಮಾಡಲಿಲ್ಲ..!
ಶುದ್ಧಾಚಮನ ಮಾಡಿದರು..ಬದ್ಧಾಂಜಲಿಗಳಾದರು..ಪೂರ್ವಮುಖವಾದ ದರ್ಭೆಗಳಲ್ಲಿ ಸಮಾಸೀನರಾದರು.
ರಾಮನೆಂಬ ತತ್ವದಲ್ಲಿ ತನ್ನ ಮನವನ್ನು ನೆಟ್ಟುಬಿಟ್ಟರು..!
ಅವರು ತನ್ಮಯತೆಯ ಉತ್ತುಂಗಕ್ಕೇರಿದಾಗ….
ಯೋಗವು ಅವರನ್ನು ಆಮೂಲಾಗ್ರವಾಗಿ ಆವರಿಸಿದಾಗ..
‘ರಾಮ’ನೆಂಬ ಧರ್ಮವು ಅವರನ್ನು ಆಳತೊಡಗಿದಾಗ..
ಜಗತ್ತು ಮರೆಯಾಯಿತು..
ಅಂಗೈಯಲ್ಲಿನ ನೆಲ್ಲಿಕಾಯಿಯಂತೆ ರಾಮಾಯಣದ ದೃಶ್ಯಾವಳಿಗಳು ಒಂದಾದ ಮೇಲೊಂದರಂತೆ ಗೋಚರಿಸತೊಡಗಿದವು..!

ನಶ್ವರ ಬದುಕಿನಲ್ಲಿ ಘಟನೆಗಳು ನಡೆದು ಮುಗಿದೇ ಹೋಗುತ್ತವೆ..
ಹರಿದುಹೋದ ನೀರು ಮತ್ತೆ ಬಾರದಂತೆ ಅವು ಪುನಃ ಸಿಗುವುದೇ ಇಲ್ಲ..!

ಈಶ್ವರದ ಬದುಕನ್ನು ನೋಡಿ..!
ಅದು ಅವಿನಾಶಿ.. ಯುಗ-ಯುಗಗಳೇ ಕಳೆದರೂ ರಾಮನ ಬದುಕಿನ ಘಟನೆಗಳನ್ನು ಧ್ಯಾನಮಗ್ನತೆಯಲ್ಲಿ ಪುನಃ ಪುನಃ
ಕಾಣಲು ಸಾಧ್ಯವಿದೆಯೆಂದರೆ..ಎಂಥ ಅದ್ಭುತವಿದು..!

ನಿನಗಿರದ ಕಣ್-ಬಾಯಿ ವಾಲ್ಮೀಕಿಗೆಂತಾಯ್ತು?
ಮುನಿಕವಿತೆಗೆಂತು ನಿನ್ನೊದೆಯೊಳೆಡೆಯಾಯ್ತು?
ಘನಮಹಿಮನೊಳ್ ಜ್ವಲಿಸುತಿತರರೊಳ್ ನಿದ್ರಿಸುತ,
ಅನಲನೆಲ್ಲರೊಳಿಹನು – ಮಂಕುತಿಮ್ಮ||

ವಾಲ್ಮೀಕಿಯ ಕಣ್ಣು ನಮಗುಂಟಾದರೆ ರಾಮಾಯಣ ದರ್ಶನವಿಂದಿಗೂ ಸಾಧ್ಯ..
ವಾಲ್ಮೀಕಿಯ ಬಾಯಿ ನಮಗುಂಟಾದರೆ ಅದನ್ನು ಬಣ್ಣಿಸಲೂ ಸಾಧ್ಯ..
ದ್ವಾರ ಸದಾ ತೆರೆದಿದೆ…ಇನ್ನು ನಾವು ಕಣ್ತೆರೆಯುವುದೊಂದೇ ಬಾಕಿ….!

ಬ್ರಹ್ಮರ್ಷಿಗಳ ಪರಮಾನುಭವಗಳು ವೇದಗಳ ರೂಪ ತಾಳುವಂತೆ..
ನವಜಾತ ಶಿಶುವಿನ ಸುಖ-ದುಃಖಗಳು ನಗು-ಅಳುಗಳಾಗಿ ಪರಿಣಾಮವಾಗುವಂತೆ..
ಸೃಷ್ಟಿಯ ಮೂಲವಾದ ಪರಂಜ್ಯೋತಿಯು ಬರಬರುತ್ತಾ ವಿಶ್ವವಿಸ್ತರವಾಗಿ ವಿಕಸಿತವಾಗುವಂತೆ..
ಚೈತ್ರದ ಚಿಗುರನ್ನು ಸೇವಿಸುವ ಕೋಗಿಲೆಯ ಆನಂದ , ಕುಹು-ಕುಹೂ ಆಗಿ ಹೊರಹೊಮ್ಮುವಂತೆ..
ವಾಲ್ಮೀಕಿಗಳ ಅಂತಶ್ಚಕ್ಷುವಿಗೆ ಗೋಚರಿಸಿದ ರಾಮಾಯಣದ ಘಟನೆಗಳು ಅವರ ಮನದ ಮನೆಯ ಮೌನ ಮುರಿದು ಮಾತನಾಡತೊಡಗಿದವು ..!
೨೪ ಸಾವಿರ ಶ್ಲೋಕಗಳ,೫೦೦ ಅಧ್ಯಾಯಗಳ,೭ ಕಾಂಡಗಳ ಶ್ರೀಮದ್ರಾಮಾಯಣವು ಅವರೊಳಗೇ ರಚಿತವಾಗತೊಡಗಿತು…

ಬದುಕೆಂಬುದು ಸಾಧನೆ-ಶೋಧನೆ- ಬೋಧನೆಗಳ ಅನಂತ ಚಕ್ರವಾಗಬೇಕೆಂದು ಪೂಜ್ಯ ರಾಮಭದ್ರಾಚಾರ್ಯರು ಹೇಳುತ್ತಿದ್ದುದುಂಟು..
ಸಾಧನೆಯ ಫಲವಾಗಿ ವಾಲ್ಮೀಕಿಗಳು ರಾಮಾಯಣವನ್ನು ಶೋಧಿಸಿದರು..
ಹಾಗೆ ಶೋಧಿಸಿದ ರಾಮಾಯಣವನ್ನು ಕಾವ್ಯರೂಪದಲ್ಲಿ ಜಗತ್ತಿಗೆ ಬೋಧಿಸಿದರು.
ಆ ಬೋಧನೆ ತುಳಸೀದಾಸರು, ತ್ಯಾಗರಾಜರಂತಹ ಅದೆಷ್ಟೋ ಸಾಧಕರಿಗೆ ಸಾಧನೆಯ ಪ್ರೇರಣೆಯನ್ನು ಕೊಟ್ಟಿತು..!
ಅವರೂ ಶೋಧಿಸಿದರು..ಬೋಧಿಸಿದರು..
ಹೀಗೆ ಸಾಧನೆ-ಶೋಧನೆ-ಬೋಧನೆಗಳ ಅನಂತಚಕ್ರದಲ್ಲಿಯೇ ರಾಮಾಯಣವು ಅನಂತವಾಗಿ ವಿಸ್ತರಿಸತೊಡಗಿದ್ದು..!

(ಇನ್ನೂ ಇದೆ)

|| ಹರೇರಾಮ ||

17 Responses to ಮುನಿಮನದೊಳು ಮಾತಾಗಿ ಮೂಡಿದನೆ ರಾಮ..?!

 1. ರಾಘವೇ೦ದ್ರ ನಾರಾಯಣ ಉಪಾಧ್ಯ Raghavendra Narayana

  ಸತ್ಯ೦ ಶಿವ೦ ಸು೦ದರ೦
  .
  ಅತೀಈಈಈಈಈಈಈಈಈಈಈಈಈಈ ಸು೦ದರ.
  .
  ರಾಮ ತತ್ವವನ್ನು ಉಸಿರಾಗಿಸಿಕೊ೦ಡವರಿಗೆ ಸತ್ಯ ಶಿವ ಸೌ೦ದರ್ಯವಲ್ಲದೇ ಬೇರೇನು ಕಾಣಲು ಸಾಧ್ಯ, ಬೇರೇನು ತೋರಿಸಲು ಸಾಧ್ಯ.
  .
  ಶ್ರೀ ಗುರುಭ್ಯೋ ನಮಃ
  .
  ನಾರಾಯಣ ನನ್ನ ನರನಾಡಿಯಲ್ಲಿ ಬೆರೆಯೊ ಅಥವಾ ನಿನ್ನ ನರನಾಡಿಯಲ್ಲೆನ್ನ ಬೆರೆಸಿಕೊಳ್ಳೊ.
  ನಾ ನಿನ್ನೊಳಗೆ ಇದ್ದರೂ, ನೀ ನನ್ನೊಳಗಿಲ್ಲವೆ೦ದು ಭಾವಿಸುವ ನನ್ನ ನರಿನಾರಿಮನವ ಕಳೆಯೋ,
  ದರ್ಪಣದಲಿ ಸಿ೦ಹದರ್ಶನ ಮಾಡಿಸೊ, ಘರ್ಜಿಸಿ ನಿನ್ನೊಡಲ ಬೆರೆಯುವ೦ತೆ ಮಾಡಿಸೊ.
  .
  ದೃಶ್ಯಪ್ರಪ೦ಚದೊಡಯನೆ ನೀನಿತ್ತ ರಾಮಾಯಣ ದೃಶ್ಯಕಾವ್ಯ ಹೆರ-ದೂರ-ನಿ೦ತು ನೋಡಿಯೆ ನಡುಗುತಿಹೆನು, ಒಳ-ಹತ್ತಿರ-ಬ೦ದು ನೋಡಿದರೆ ಹುಚ್ಚನೇ ಆದೇನು.

  [Reply]

 2. jagadisha sharma

  ವಾಲ್ಮೀಕಿಯ ಕಣ್ಣು ನಮಗುಂಟಾದರೆ ರಾಮಾಯಣ ದರ್ಶನವಿಂದಿಗೂ ಸಾಧ್ಯ..
  ವಾಲ್ಮೀಕಿಯ ಬಾಯಿ ನಮಗುಂಟಾದರೆ ಅದನ್ನು ಬಣ್ಣಿಸಲೂ ಸಾಧ್ಯ..
  ದ್ವಾರ ಸದಾ ತೆರೆದಿದೆ…ಇನ್ನು ನಾವು ಕಣ್ತೆರೆಯುವುದೊಂದೇ ಬಾಕಿ….!

  ಅಚ್ಚರಿಯ ಬರಹ. ಸಂಸ್ಥಾನದ ರಾಮಾಯಣ ಬರಹ ಗದ್ಯಕಾವ್ಯ ಎನಿಸಿತ್ತು. ಅದು ದೃಶ್ಯಕಾವ್ಯವೂ ಆಗಿದೆ.

  [Reply]

 3. Ashwini

  ||ಹರೇ ರಾಮ||

  ‘ಪದ’ ರೂಪದ ‘ನಿಜ’ ನುಡಿಯ ಅನುಗ್ರಹ ಧಾರೆಗೆ ಅನಂತ ಪ್ರಾಣಾಮಗಳು.

  ಗುರು ನುಡಿಯೆಡೆಗೆ ಗುರಿ ಇಟ್ಟು ನಿತ್ಯ ಆನಂದವೆಂಬ ‘ರಾಮ’ ನೆಡಗಿನ ಪಯಣ
  ‘ಮಾಯೆ’ ಎಂಬ ಮೋಹದಿಂದ ಗುರಿ ತಪ್ಪಿದೆ ಗುರುವೇ..
  ಸಾಧನೆಯ ‘ಸಿರಿ’ಯರಿಯದೇ..
  ಶೋಧನೆಯ ಬಗೆ ತಿಳಿಯದೇ…
  ನಿಂತಲ್ಲೆ ನೆಲೆಗೊಂಡಾತ್ಮವನು ಸಾಧನೆ-ಶೋಧನೆಯಡೆಗೆ ಕೈ ಹಿಡಿದು ಕರೆದೊಯ್ಯು ತಾಯೇ…

  [Reply]

 4. Anuradha Parvathi

  ’ಬದುಕೆಂಬುದು ಸಾಧನೆ – ಶೋಧನೆ – ಬೊಧನೆಗಳ ಅನಂತ ಚಕ್ರವಾಗಬೇಕು’ – ತುಂಬಾ ಸುಂದರವಾಗಿದೆ

  [Reply]

 5. Suma Nadahalli

  ನಾರದರಿಗೆ ಗೋಚರಿಸಿದ ದಿವ್ಯ ದೃಷ್ಟಿ ಗೋಚರಿಸಿದರೆ …ಪ್ರಭುವಿನ ದರ್ಶನ ಸಾಧ್ಯವೇ
  ????

  [Reply]

  Sri Samsthana Reply:

  ನಿಶ್ಚಯವಾಗಿಯೂ ಸಾಧ್ಯ…

  [Reply]

 6. seetharama bhat

  Hareraama

  Nithya Niranthara badukalli
  Namgu kaNali ramayana
  Novu Nalivina BaLalli
  Namma nadesali Narayana

  [Reply]

 7. Raghavendra Narayana

  Just bringing up this point again.
  .
  New computer/internet users may MISS to notice this “Raama” blog as the focus is always on “Raajya” blog in the main page. Request the team to provide different space for “Raama” and “Rajya” blog like Pramukha, Sammukka, Shrimukha.

  [Reply]

  Sri Samsthana Reply:

  Acknowledged…

  [Reply]

 8. gopalakrishna pakalakunja

  “ಹರೇ ರಾಮ ”
  ರಾಮನಂ ಭುವನಾಭಿ ರಾಮನಂ ಗುಣರತ್ಢ
  ದ್ಧಾಮನಂ ರಘುಕುಲೋಹ್ಹಾಮನಂ ರೂಪಜಿತ
  ಕಾಮನಂ ಸತ್ಕೀರ್ತಿ ಕಾಮನಂ ಶರಣಜನವಾರ್ಧಿಯಂ ಮಿಗೆ ಪೇರ್ಚಿಪ|
  ಸೋಮನಂ ಸೌಭಾಗ್ಯ ಸೋಮನಂ ಕುವಲಯ
  ಶ್ಯಾಮನಂ ನಿಜತನು ಶ್ಯಾಮನಂ ಘನಪುಣ್ಯ
  ನಾಮನಂ ಸಂತತಂ ನಾಮನಂದಣಿಯದೆ ರಮಿಸದೆ ಬಾಳ್ವೆನೆಂತೆಂದಳು||…(ಜೈಮಿನಿ)

  ಅಂತಹ ರಾಮನನ್ನು ತಾನು ಕಂದು ಮಿಕ್ಕವರಿಗೆ ತೋರಿಸಿದ ಮುನಿ ಪುಂಗವರ ಪಾದರವಿಂದಕ್ಕ ನಮೋ ನಮೋ…

  [Reply]

 9. Raghavendra Narayana

  / “ರಾಮನೆಂಬ ತತ್ವದಲ್ಲಿ ತನ್ನ ಮನವನ್ನು ನೆಟ್ಟುಬಿಟ್ಟರು..!” /
  .
  ತತ್ವವನ್ನು ಪ್ರೀತಿಸುತ್ತಾ ಹೋದ೦ತೆ, ಪದರ ಪದರವಾಗಿ ತರ೦ಗ ತರ೦ಗವಾಗಿ ಪ್ರೀತಿಸಿದವರ ಸೇರುತ್ತಾ ಹೋಗುತ್ತದೆ.
  ಪ್ರೀತಿಸಬೇಕು ದಾವಿಸಬೇಕು ಭಾವಿಸಬೇಕು ಸೇವಿಸಬೇಕು ಆವರಿಸಕೊಳ್ಳಬೇಕು, ಸಿಕ್ಕೇ ಸಿಗುತ್ತದೆ,
  ಕರುಣಾಕರನೇ ತತ್ವದೊಡಯನಾಗಿರಬೇಕಾದರೆ ಎಲ್ಲಿಯ ಚಿ೦ತೆ, ಒ೦ದೇ ಒ೦ದು ಹೆಜ್ಜೆ ಆ ದಿಕ್ಕಿನೆಡೆ ಇಟ್ಟರೆ ನೂರುಸಾವಿರ ಹೆಜ್ಜೆ ಅದು ನಮ್ಮತ್ತ ಇಡುತ್ತದೆ.
  ಅದೇ ಒ೦ದು ಹೆಜ್ಜೆ ಮಾಯೆಯೆಡೆ ಇಟ್ಟು ನೋಡಿ, ಸಾವಿರಸಾವಿರ ಹೆಜ್ಜೆ ದೂರ ಓಡುತ್ತದೆ, ಇದು ಕೂಡ ಕರುಣಾಕರನ ಕರುಣೆಯೇ ಅಲ್ಲವೆ. ಇಲ್ಲದಿದ್ದರೆ ಅನಿತ್ಯ ಅಸತ್ಯ ಬೆಳಕಿನೆಡೆಗೆ ಆಕರ್ಷಿತರಾಗಿ ಕ್ಷಣದಲ್ಲಿ ಮಣ್ಣು ಸೇರುವ ಪತ೦ಗವೇ ಅದೇವು.
  .
  ಗುರುಗಳು ಹಿ೦ದಿನ ಒ೦ದು ಲೇಖನದಲ್ಲಿ ಹೀಗೆ ಹೇಳಿದ್ದರು,
  {
  “ಮಹಾಮಸ್ತಿಷ್ಕವೆಂದರೆ ಅನಂತಶಕ್ತಿ ಸಾಗರ..!!
  ಅದರ ಶಕ್ತಿಯಲ್ಲಿ..ಈಗ ಉಪಯೋಗವಾಗುತ್ತಿರುವುದು ಕೋಟಿಯಲ್ಲೊ೦ದು ಪಾಲು ಕೂಡ ಅಲ್ಲ..!!”
  http://hareraama.in/blog/%e0%b2%95%e0%b2%a3%e0%b3%8d%e0%b2%a3%e0%b3%81-%e0%b2%ac%e0%b3%87%e0%b2%95%e0%b3%87-%e0%b2%ac%e0%b3%87%e0%b2%95%e0%b2%a3%e0%b3%8d%e0%b2%a3%e0%b2%be-%e0%b2%ae%e0%b3%82%e0%b2%b0%e0%b2%a8%e0%b3%86/
  }
  ಖ೦ಡಿತ ಸತ್ಯ – ಪ್ರೀತಿಸಬೇಕು ಪ್ರೇಮಿಸಬೇಕು – ಇಡೀ ಸೃಷ್ಟಿಯೇ ಪ್ರೀತಿ ಪ್ರೇಮ ತತ್ವದ ಮೇಲೆ ನಿ೦ತಿದೆ. ಇಲ್ಲಿ ಸಿಗುತ್ತಿರುವ ಪ್ರತಿ ಪಾಠವು ಪರಮಾತ್ಮ ತತ್ವವ ಅರಿಯುವ ಆಟಕ್ಕೆ ಸಹಾಯಕವು ತಯಾರಕವು. ಯಾವುದನ್ನು ಜರಿಯುವ ಅಗತ್ಯವಿಲ್ಲ, ಎಲ್ಲವನ್ನು ಅರಿಯುವ ಅಗತ್ಯವಿದೆ.
  .
  ಯಾವುದನ್ನು ಅರಿತರೆ ಮತ್ತೆಲ್ಲಾವನ್ನು ಅರಿತ೦ತೆಯೊ ಅ೦ತಹ ಪರಮಾತ್ಮ ತತ್ವವೇ ನಮ್ಮ ಪ್ರೀತಿಯ ತೀವ್ರತೆಯ ಸೀಮಿತದಲ್ಲಿರುವಾಗ, ಬೆಲೆಯನ್ನು ಅರಿಯುವುದು ಅವಶ್ಯಕ, ಬೆಳೆಯನ್ನು ಬೆಳೆಯುವುದು ಅತ್ಯಾವಶ್ಯಕ.
  .
  ಸ೦ಸ್ಥಾನದ ಪ್ರೇರಣೆಯಿ೦ದ ಹರೇರಾಮದ ಧಾರಣೆಯಿ೦ದ ಸಿಗುತ್ತಿರುವ ಪಾಠಗಳಿ೦ದ ತುಳಿಯುತ್ತಿರುವ ಪಥದಿ೦ದ ನಿತ್ಯ-ಸತ್ಯ ಆನ೦ದದ ಸಾನಿಧ್ಯ ಸಿಗುವ೦ತಾಗಲಿ.
  ಗುರುವೇ ಹರಸು, ಅಮಿತ-ಸದಾಹಿತ-ಆನ೦ದದೆಡೆಗೆ ನನ್ನ ಲಕ್ಷ್ಯ ತಪ್ಪದ೦ತೆ ಮಾಡು.

  [Reply]

 10. Jeddu Ramachandra Bhatt

  ಹರೇರಾಮ,
  ಸಾಷ್ಠಾ೦ಗ ಪ್ರಣಾಮಗಳು –
  ಗುರುಗಳ ಲೇಖನಿಯಿ೦ದ ರಾಮಾಯಣವು ಪರಿಶುದ್ಧ ಗ೦ಗೆಯ೦ತೆ, ಕೆಲವೊಮ್ಮೆ ಭೋರ್ಗರೆಯುತ್ತಾ, ಕೆಲವೊಮ್ಮೆ ಮ೦ದಗಾಮಿನಿಯಾಗಿ, ಹರಿದು ಬರುತ್ತಿದೆ. ಶ್ರುತಿಬದ್ಧ ಸ೦ಗೀತದ ಅಲೆಯ೦ತೆ ತೇಲಿಬರುತ್ತಿದೆ. ಒಬ್ಬನೇ ಸ೦ಗೀತಗಾರ ಒ೦ದೇ ರಾಗವನ್ನು ವಿವಿಧ ರೀತಿಯಲ್ಲಿ ಆಲಾಪನೆ ಮಾಡುವ೦ತೆ ಹೊಮ್ಮಿ ಬರುತ್ತಿದೆ. ವಾಲ್ಮೀಕಿ ಮಹರ್ಷಿಯ೦ಬ ಕೋಗಿಲೆಯ ಕ೦ಠದಿ೦ದ ಹೊಮ್ಮಿದ ರಾಮಕಥೆ, ಕಸ್ತೂರಿ ಕನ್ನಡ ಕ೦ಪಿನೊ೦ದಿಗೆ ನನ್ನ ಮನವನ್ನು ಮುದಗೊಳಿಸುತ್ತಿದೆ.

  ಮು೦ದಿನಭಾಗವನ್ನು ಎದುರು ನೋಡಿತ್ತಿದ್ದೇನೆ. ಅಭಿನವ ವಾಲ್ಮೀಕಿ ಮಹರ್ಷೀಗಳಿಗೆ ಸಾಷ್ಠಾ೦ಗ ಪ್ರಣಾಮಗಳು.

  [Reply]

  Sri Samsthana Reply:

  ನೀವೇ ಸ್ಫೂರ್ತಿ..!

  [Reply]

 11. Roopa Bhat

  ರಾಮಾಯಣ, ಅದರಲ್ಲಿ ಬರೋ ಪಾತ್ರಗಳು ಕಣ್ಣಮುಂದೆ ಬರುತ್ತಿದೆ. ಕಳೆ ಹೆಚುತ್ತಲಿದೆ, ಕೊಳೆ ಕಳೆಯುತ್ತಲಿದೆ

  [Reply]

 12. dattu

  ಮಾತನಾಡಿದನೋ……………………………. ಅಥವಾ, ಸುಖದುಃಖವನ್ನು ಹೇಳಿಕೊಂಡನೋ!!!?????………….

  [Reply]

 13. ganeshbhat bayar

  ಹರೇ ರಾಮ!!

  ಇವ ಕಣಾ ಶ್ರೀ ರಾಮ ಶೇಶನೆ ಪವಡಿಸಲು ಸುಖತಲ್ಪ !
  ಪಾಲ್ಗಡಲಿವಗೆ ಮನೆಯಂಗಳವು ಮಾಯೆಯು ನಿರತ ಸೇವಿಪಳು!!
  ಇವನರಸಿಯೇ ಸೀತೆ ನೋಡಲಿವನ ವಕ್ಶದೊಳಿಹಳು!
  ಲೀಲೆಯಿಂ ಭುವಿಗವತರಿಸಿ ನಟಿಸಿದ ನಟನೆಗೆಳುವೇಕೆ?
  ರಾಮಾ.. ರಾಮಾ ….ರಾಮಾ!!

  [Reply]

 14. vinaykabbinagadde

  nijavagiyu! raama nalivannu,samtoshavannu,nemmadiyannu needuttiddane…raama devare raama katheyalli raghaveshwarara roopadalli mataduttiddare….hare raam

  [Reply]

Leave a Reply

Highslide for Wordpress Plugin