LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ರಾಮಾಯಣದ ಸಿದ್ಧತೆಯೆಂದರೆ………………

Author: ; Published On: ಗುರುವಾರ, ಮಾರ್ಚ 25th, 2010;

Switch to language: ಕನ್ನಡ | English | हिंदी         Shortlink:

|| ಹರೇರಾಮ ||

ರಾಮಾಯಣ ಆರಂಭವಾಗುವುದು ಹೀಗೆ..

” ತಪ:ಸ್ವಾಧ್ಯಾಯನಿರತಂ ತಪಸ್ವೀ ವಾಗ್ವಿದಾಂ ವರಂ | ವಾಲ್ಮೀಕಿಃ ಪರಿಪಪ್ರಚ್ಛ ನಾರದಂ ಮುನಿಪುಂಗವಂ || “

“ತಪಸ್ಸು ಮತ್ತು ಸ್ವಾಧ್ಯಾಯಗಳಲ್ಲಿ ನಿರತರೂ, ಮಾತು ಬಲ್ಲವರಲ್ಲಿ ಮಿಗಿಲಾದವರೂ ಆದ ನಾರದರೆಂಬ ಶ್ರೇಷ್ಠ ಮುನಿಯಲ್ಲಿ ತಪಸ್ವಿಗಳಾದ ವಾಲ್ಮೀಕಿಗಳು ಪರಿಪ್ರಶ್ನೆಗೈದರು..”

ನಾರದರಲ್ಲಿ ಮೂರು ವಿಶೇಷಗಳನ್ನು ಗುರುತಿಸಿದೆ ಈ ಕವಿತೆ…

೧. ತಪಸ್ಸು,

೨. ಸ್ವಾಧ್ಯಾಯ,

೩. ವಾಗ್ಮಿತ್ವ.

ತಪಸ್ಸಿನ ಮೂಲಕ ತನ್ನೆಲ್ಲ ದೋಷಗಳನ್ನು ಕಳೆದುಕೊಂಡು..

ಸ್ವಾಧ್ಯಾಯದ ಮೂಲಕ ತನ್ನನ್ನೇ ತಾನರಿತು..

ವಾಗ್ಮಿತೆಯ ಮೂಲಕ ತನ್ನರಿವನ್ನು ಜೀವಕೋಟಿಗೆ ವಿತರಿಸಬಂದವರು ನಾರದರು..

ಇದೇ ಕವಿತೆ ವಾಲ್ಮೀಕಿಗಳನ್ನು ಬಣ್ಣಿಸುವುದು ‘ತಪಸ್ವೀ’ ಎಂಬ ಒಂದೇ ಒಂದು ವಿಶೇಷಣದಿಂದ..

ತಪಸ್ಸೆಂದರೆ ತಾಪ..
ಅದೊಂದು ಬಗೆಯ ಕಾವು..
ಚಿನ್ನದಲ್ಲಿರುವ ಚಿನ್ನವಲ್ಲದ್ದನ್ನು ಸುಡಲು ಬೇಕೇ ಬೇಕಲ್ಲವೇ ಕಾವು..?
ಹೊನ್ನು, ಕಾವು ಕಂಡ ಮೇಲಲ್ಲವೆ ಸು-ವರ್ಣವಾಗಿ ಕಂಗೊಳಿಸುವುದು..?
ತಪಸ್ಸೂ ಕೂಡ ಪ್ರಕೃತಿಯಲ್ಲಿ ಒಂದು ಬಗೆಯ ತಾಪವನ್ನೇರ್ಪಡಿಸುತ್ತದೆ…
ತನ್ಮೂಲಕ ದೋಷಗಳನ್ನೆಲ್ಲ ದಹಿಸಿ ಜೀವಿಯನ್ನು ಪರಿಶುದ್ಧಗೊಳಿಸುತ್ತದೆ…!

ನಾರದರು ಬರುವ ಮುನ್ನ ತೀವ್ರತರ ತಪದಿಂದ ತನ್ನೊಳಗಿನ ಸರ್ವದೋಷಗಳನ್ನೂ ಕಳೆದುಕೊಂಡು ಪರಿಶುದ್ಧರಾಗಿ ಸಿದ್ಧರಾಗಿದ್ದರು ವಾಲ್ಮೀಕಿಗಳು…!

ಪಾತ್ರದಲ್ಲಿ ಏನಾದರೂ ಒಳ್ಳೆಯದನ್ನು ತುಂಬಬೇಕಾದರೆ ಮೊದಲು ಅದನ್ನು ತೊಳೆದು ಶುದ್ಧ ಮಾಡಬೇಕಲ್ಲವೇ..?
ಕಲ್ಮಷ ತುಂಬಿರುವ ಪಾತ್ರದಲ್ಲಿ ಒಳ್ಳೆಯದೇನನ್ನದರೂ ತುಂಬಿದರೆ ಅದು ಒಳ್ಳೆಯದಾಗಿ ಉಳಿಯುವುದಾದರೂ ಹೇಗೆ..?

ತಪದ ಮೂಲಕ ತೊಳೆಯಲ್ಪಟ್ಟಿದ್ದ, ಕಲ್ಮಷ ಕಳೆದು ಬರಿದಾಗಿದ್ದ, ವಾಲ್ಮೀಕಿಗಳ ಅಂತರಂಗವೆಂಬ ಪಾತ್ರದಲ್ಲಿ ಶ್ರೀರಾಮಾಯಣವನ್ನು ತುಂಬಿದರು ನಾರದರು…!

ಇಲ್ಲಿ ನಮಗೊಂದು ಸಂದೇಶವಿದೆ…

ವಾಲ್ಮೀಕಿಯ ರಾಮಾಯಣ ನಮ್ಮದಾಗಬೇಕಾದರೆ ವಾಲ್ಮೀಕಿಯ ದಾರಿ ನಮ್ಮದಾಗಬೇಕು..

ಅದೆಷ್ಟು ಕಾಲವಾಯಿತೋ… ನಾವು ನಮ್ಮೊಳಮನೆಯನ್ನು ತೊಳೆಯದೆಯೇ…!
ಹೊರಜಗತ್ತಿನ ಕಸಕಡ್ಡಿಗಳು – ಬೇಡದ ಸಂಗತಿಗಳು ಅದೆಷ್ಟು ಕಾಲದಿಂದ ನಮ್ಮೊಳತುಂಬಿಕೊಂಡಿವೆಯೋ..!!

ಅವುಗಳ ಜೊತೆಗೆ ರಾಮಾಯಣವೂ ಸೇರಿದರೆ ರಾಮಾಯಣದ ನೈಜರೂಪ ಮನಸ್ಸಿಗೆ ಬರುವುದಾದರೂ ಎಂತು..?

ಹುಳಿಪಾತ್ರದಲ್ಲಿಟ್ಟ ಹಾಲು ಹಾಳೆನಿಸಿದರೆ…
ಮೆಣಸಿನ ಪಾತ್ರದಲ್ಲಿಟ್ಟ ಹಾಲು ಖಾರವೆನಿಸಿದರೆ…
ಅದು ಹಾಲಿನ ತಪ್ಪಲ್ಲ…!

ಹಾಗೆಯೇ ಪೂರ್ವಾಗ್ರಹಗಳಿಂದ ಕಲುಷಿತವಾದ ನಮ್ಮ ಮನಸ್ಸಿಗೆ ರಾಮಾಯಣ ಏನೇನೋ ಆಗಿ ತೋರಿದರೆ…
ಅದು ರಾಮಾಯಣದ ತಪ್ಪಲ್ಲ…!

ಶುಚಿಯಲ್ಲದ ಕಣ್ಮನಗಳಿಂದ ರಾಮಾಯಣವನ್ನು ನೋಡಿದ್ದೇ ಅದರ ಹಲವು ಬಗೆಯ ಅಪಾರ್ಥ,ಅಪವ್ಯಾಖ್ಯಾನ,ಅಪಪ್ರಚಾರಗಳಿಗೆ ಕಾರಣವಾಯಿತು..!

ಶುದ್ಧ ದೃಷ್ಟಿಗೆ ರಾಮಾಯಣದ ಶುದ್ಧರೂಪ ಗೋಚರಿಸುವುದು….
ಕಲುಷಿತ ದೃಷ್ಟಿಗೆ…………………………???????????????????


ರಾಮಾಯಣದ ಸಿದ್ಧತೆಯೆಂದರೆ………………ಅದು ದೃಷ್ಟಿಯ ಶುದ್ಧತೆ…!!!

|| ಹರೇರಾಮ ||


9 Responses to ರಾಮಾಯಣದ ಸಿದ್ಧತೆಯೆಂದರೆ………………

 1. Shreekant Hegde

  ಹರೇ ರಾಮ, ಗುರುಗಳೇ ನಮಾಂಸಿ ||

  ನಮ್ಮೆಲ್ಲರ ಸ್ವರ್ಣವಾಗಿಸಲಿ ಕಾವಿಯ ಕಾವು |

  [Reply]

 2. Raghavendra Narayana

  ಗುರುಗಳೇ, ಅದ್ಭುತವಾಗಿ ಮೂಡಿದೆ ಕಾವ್ಯದ ಕಾವ್ಯ / ಅರ್ಥ
  .
  ನಮ್ಮ ಸಾಧನೆ, ಸ್ವಲ್ಪ ಧನ ಮಾತ್ರ.. – ನಿಮ್ಮ ದೃಷ್ಟಿ ನಮ್ಮ ಮೇಲೆ ಬಿದ್ದು, ನಮ್ಮ ದೃಷ್ಟಿ ಶುದ್ಧವಾಗಬೇಕಷ್ಟೆ
  .
  ಮಹಾವಿಷ್ಟು ಕ್ಷೀರಸಾಗರ, ಮಹಾದೇವ ಕ್ಷೀರಬೆಟ್ಟ..

  [Reply]

 3. vdaithota

  ಕಸವ ಅರಿಯಲು…
  ಅರಿತು ರಸವಾಗಿಸಲು…
  ಗುರು ಕೃಪೆಯ ಬೇಡುವೆ…
  ದಯೆ ಇರಲಿ ಗುರುವೇ…..

  [Reply]

 4. kavitha dhanu

  ಕಾಮಲೆ ಕಣ್ಣಿಗೆ ಲೋಕವೆಲ್ಲಾ ಹಳದಿ. ಒಳ್ಳೆ ಮನಸ್ಸಿಂದ ನೋಡಿದ್ರೆ ಎಲ್ಲದು ಒಳ್ಳೆದಾಗೆ ಕಾಣ್ತು ಅಲ್ಲದಾ?

  [Reply]

 5. Raghavendra Narayana

  ಪ್ರೇಮವೋ, ಸ್ನೇಹವೋ, ಪ್ರೀತಿಯೋ, ರಾಜನೀತಿಯೋ, ಧರ್ಮನೀತಿಯೋ, ಕ್ಷಮಾಗುಣವೋ, ಕ್ಷತ್ರಿಯಗುಣವೋ….
  ಮಾತಾ ಪಿತಾ ಪತ್ನಿ ಸೋದರ ರಾಜ ಸೇವಕ ಸ್ನೇಹಿತ ಪ್ರಾಣಿ ಪಕ್ಷಿ ಪ್ರಕೃತಿ ಜನ ಋಷಿ ಪೂಜೆ ಭಕ್ತಿ ಯೋಗ ನಿಷ್ಟೆ – ರೀತಿ ನೀತಿ ಆದರ್ಶವೋ….
  ಎನನ್ನು ತಿಳಿಯುವುದು, ಎನನ್ನು ಅಳವಡಿಸಿಕೊಳ್ಳುವುದು, ಎನನ್ನು ಮೆಚ್ಚುವುದು, ಎನನ್ನು ಭಜಿಸುವುದು, ಎನನ್ನು ಧ್ಯಾನಿಸುವುದು, ಎನನ್ನು ಪಠಿಸುವುದು, ಎನನ್ನು ಅಭ್ಯಾಸಿಸುವುದು, ರಾಮ ರಾಮ ಕಷ್ಟ ಕಷ್ಟ….
  ಕೇವಲ “ಶ್ರೀರಾಮ ಜಯರಾಮ ಜಯ ಜಯ ರಾಮ” ಸಾಕೋ,
  ಕೇವಲ “ರಾಮ” ಸಾಕು.. ಕೇವಲ “ರಾಮ” ಸಾಕು.. ಕೇವಲ “ರಾಮ” ಸಾಕು..
  .
  ರಾಮಾಯಣ ಕ್ಷೀರಸಾಗರ ಯಾನ ಮಾಡಿ ಕೈ ಮುಗಿಯುವುದೋ, ವಿಹಾರ ಮಾಡಿ ಮೈ ಮರೆಯುವುದೋ..
  ಮುಳುಗಿ ೨೪,೦೦೦ ಮುತ್ತುಗಳನ್ನು ಹುಡುಕುವುದೋ, ೨೪,೦೦೧ನೇ ಮುತ್ತು ಲಕ್ಷಿನಾರಾಯಣನೋ..
  .
  ೨೪,೦೦೧ನೇ ಮುತ್ತು, ಮುತ್ತಿನಹಾರವನ್ನು ಧರಿಸಿರುವ ನಾನೋ
  ೨೪,೦೦೨ನೇ ಮುತ್ತು, ಮುತ್ತಿನಹಾರವನ್ನು ಲಕ್ಷಿನಾರಾಯಣನ ಪಾದಕ್ಕೆ ಅರ್ಪಿಸಿತ್ತಿರುವ ನಾನೋ
  ೨೪,೦೦೩ನೇ ಮುತ್ತು, ಮುತ್ತುನ್ನು ಹಾರವನ್ನು ಕ್ಷೀರವನ್ನು ಸಾಗರವನ್ನು ಲಕ್ಷಿಯನ್ನು ನಾರಾಯಣನನ್ನು ವ್ಯಾಪಿಸಿರುವ ನಾನೋ
  ದೋಣಿ ಸಾಗರ ಯಾನ ವಿಹಾರ – ಅದೆಲ್ಲಾ ಅದೆಲ್ಲಿ ಮರೆಯಾಯಿತೋ, ತೆರೆ ಸರಿಯಿತೋ, ತನು ಕರಗಿತೋ, ಮನ ಹರಿಯಿತೋ, ಶ್ರೀಶ ತೊರೆದನೋ, ಈಶ ಕರೆದನೋ, ಈಶ ಸೆಳೆದನೋ, ಈಶ ಸೆಳೆದನೋ, ಈಶ ಸೆಳೆದನೋ

  [Reply]

 6. chs bhat

  ಹರೇ ರಾಮ. ಓದುತ್ತಿದ್ದರೆ ಮನಸ್ಸು ಹಾಗೇ ನಿರ್ಮಲವಾಗುತ್ತಿದೆ. ಏನೋ ಒಂದು ರೀತಿಯ ಕನಸು ಕಾಣುವ ಅನುಭವ.ರಾಮಾಯಣವನ್ನು ಸ್ವೀಕರಿಸಲು ನಮಗೆ ಯೋಗ್ಯತೆ ಬರಲಿ ಎಂಬುದೇ ಹಾರೈಕೆ. ಸೀಹೆಚ್ಚೆಸ್ಸ್.

  [Reply]

 7. ಜಗದೀಶ್ B R

  ಇದನ್ನ ಓದ್ತಾ ಇದ್ರೆ ಏನೋ ಆನಂದ, ಮುಗಿಯ ತನಕ ಬಿಡ್ದೆ ಓದನ ಅನಿಸ್ತು. ಅಷ್ಟು ಚನಾಗಿದ್ದು ಗುರುಗಳ ನಿರೂಪಣಾ ಶೈಲಿ.
  ನಾವು ಭಾಗ್ಯಶಾಲಿಗಳು.. ಬೇಗ ಬೇಗ ಬರಲಿ ಉಳಿದ ಭಾಗಗಳು.

  [Reply]

 8. Raghavendra Narayana

  ಸ೦ತತದ ಶಿಕ್ಷೆಯಿ೦ ದೀರ್ಘದಭ್ಯಾಸದಿ೦- |
  ದ೦ತರ೦ಗದ ಕಡಲು ಶಾ೦ತಿಗೊಳಲಹುದು ||
  ಸ೦ತೃಪ್ತವೃತ್ತಿಯಿ೦ದೇಕಾ೦ತಸೇವೆಯಿ೦ |
  ಸ೦ತಯಿಸು ಚಿತ್ತವನು – ಮ೦ಕುತಿಮ್ಮ ||
  .
  ಮನವನಾಳ್ವುದು ಹಟದ ಮಗುವನಾಳುವ ನಯದೆ |
  ಇನಿತನಿತು ಸವಿಯುಣಿಸು ಸವೆಕಥೆಗಳಿ೦ದೆ ||
  ಅನುಕೂಲಿಸದು ಬರಿಯ ಕೂಗು ಬಡಿತಗಳಿನದು |
  ಇನಿತಿತ್ತು ಮರಸಿನಿತ – ಮ೦ಕುತಿಮ್ಮ ||

  [Reply]

 9. Anuradha Parvathi

  ಇಷ್ಟು ವರ್ಷಗಳಿಂದ ಗುರುಗಳ ಬಾಯಲ್ಲಿ ರಾಮನ ಗುಣಗಾನ ಕೇಳಿ, ಮೊದಲಿದ್ದ ಪೂರ್ವಗ್ರಹ ಹೋಗಿದೆ.

  [Reply]

Leave a Reply

Highslide for Wordpress Plugin