LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ರಾಮಾಯಣ ರಾಮಾರ್ಪಣ..!

Author: ; Published On: ಗುರುವಾರ, ಆಗಸ್ತು 26th, 2010;

Switch to language: ಕನ್ನಡ | English | हिंदी         Shortlink:

|| ಹರೇರಾಮ ||

ಆಹಾ ! ಎಂಥಾ ದೃಶ್ಯವದು…!

ತನ್ನ ಸಾವಿರಾರು ಪ್ರಜೆಗಳನ್ನು ಕೇವಲ ಕಂಠಸಿರಿಯ ಬಲದಿಂದಲೇ ಸೆಳೆಯುವ – ಆಳುವ ಅವಳಿ ಮಕ್ಕಳು ರಾಜಮಾರ್ಗವನ್ನು ಶೋಭಾಯಮಾನಗೊಳಿಸುತ್ತಿದ್ದಾರೆ…!

ಶ್ರವಣ-ನಯನ-ಮನಗಳ ಸಂಯುಕ್ತ ಹಬ್ಬವದು..!

ಕಣ್ತಣಿಸುವ ರೂಪ..ಕಿವಿಗಿಂಪಾದ ಗಾನ..ಮನ ಬೆಳಗುವ ಸಾಹಿತ್ಯಗಳ ತ್ರಿವೇಣೀಸಂಗಮ…

ಅಚ್ಚರಿಯ ಮೇಲಚ್ಚರಿಯಾಯಿತು ಅಯೋಧ್ಯೆಯರಸನಿಗೆ…

ರೂಪ ತನ್ನದೇ..!

ಸ್ವರ ತನ್ನದೇ..!

ಕೊನೆಗೆ ಗಮನಿಸಿ ಕೇಳಿದರೆ ಕುಮಾರರು ಹಾಡುತ್ತಿರುವ ಕಥೆಯೂ ತನ್ನದೇ..!

ಎಲ್ಲೆಲ್ಲೂ ತಾನೇ ! ತನ್ನ ತನವೇ..!

ರಾಮನು ಪ್ರೀತಿಸದವರಾರು..?

ಪರಮಾತ್ಮ ಚೈತನ್ಯವು ತಲುಪದ ಸ್ಥಳವಾವುದು..?

ಸೂರ್ಯಕಿರಣಗಳು ಸ್ಪರ್ಶಿಸದ ಜೀವವೆಲ್ಲಿ..?

ಎಲ್ಲವನ್ನೂ, ಎಲ್ಲರನ್ನೂ ಪ್ರೀತಿಸುವವನವನು..!

ಆದರೆ ಅದೇಕೋ…ಕಣ್ಣರಿಯದ, ಕರುಳರಿಯುವ ಕಾರಣವಿರಬೇಕು..! ಆ ಮಕ್ಕಳಲ್ಲಿ ಅಸಾಮಾನ್ಯವಾದ ಪ್ರೀತಿಯುಂಟಾಯಿತು ಪ್ರಭುವಿಗೆ…

ಮೊದಲ ನೋಟದ ಪ್ರೀತಿಯದು..

ಸಾಮಾನ್ಯವಾಗಿ ಬದುಕಿನಲ್ಲಿ ಯಾವುದಾದರೊಂದು ವಸ್ತುವಿನಲ್ಲೋ, ವ್ಯಕ್ತಿಯಲ್ಲೋ ಪ್ರೀತಿಯುಂಟಾಗುವುದು ಪ್ರಯೋಜನವನ್ನು ಕಂಡಾಗ..

ಆದರೆ ಅತ್ಯಂತ ಅಪರೂಪಕ್ಕೊಮ್ಮೆ ಕೆಲವರನ್ನು ಕಂಡೊಡನೆಯೇ ಕಾರಣವಿಲ್ಲದೆಯೇ ಪ್ರೀತಿ ಮೂಡುವುದೂ ಉಂಟು..

ಅದು ನೈಸರ್ಗಿಕವಾದ ಪ್ರೀತಿ…ಅದುವೇ ನಿಜವಾದ ಪ್ರೀತಿ..!

ರಾಮನಿಗೆ ಕುಶಲವರನ್ನು ಕಂಡೊಡನೆಯೇ ಉಂಟಾದ ಪ್ರೀತಿ ಅಕೃತ್ರಿಮವಾದುದು…ಅನಿಮಿತ್ತವಾದುದು..

ಪ್ರೀತಿಯು ಪರ್ಯವಸಾನವಾಗುವುದು ಸಾಮೀಪ್ಯದಲ್ಲಿ…

ಸಾಮೀಪ್ಯವು ಪರ್ಯವಸಾನವಾಗುವುದು ಅದ್ವೈತದಲ್ಲಿ…

ಕುಶಲವರನ್ನು ಕುರಿತು ರಾಮನ ಅಂತರಾಳದಲ್ಲಿ ಅಂಕುರಿಸಿದ ಪ್ರೀತಿ ತನ್ನ ಮೊದಲ ಹೆಜ್ಜೆಯಿಟ್ಟಿತು…

ಅದಾಗಲೇ ಮನದೊಳಗೆ ಪ್ರವೇಶಿಸಿದ್ದ ಮುದ್ದುಮಕ್ಕಳನ್ನು ಮನೆಯೊಳಗೆ ಬರಮಾಡಿಕೊಂಡನವನು…

ರಾಮನೆಂಬ ಬಿಂದುವಿನಲ್ಲಿ ಕುಶಲವರೆಂಬ ವಿಸರ್ಗವು ಸೇರಿದಾಗ ಅಪೂರ್ವ ಪ್ರೇಮತ್ರಿಕೋಣವೊಂದು ಅಯೋಧ್ಯೆಯ ಅರಮನೆಯಲ್ಲಿ ಅನಾವರಣಗೊಂಡಿತು…

ಕಾನನಮಧ್ಯದಲ್ಲಿ ಅರಳಿ, ಹಳ್ಳಿ ಸೇರಿ ಹಾರವಾಗಿ, ಮಹಾನಗರದ ಮಂದಿರಮಧ್ಯದಲ್ಲಿ ಬೆಳಗುವ ಮೂರ್ತಿಯ ಮುಡಿಯೇರಿ ಶೋಭಿಸುವ ಸುಮಗಳಂತೆ…

ಪ್ರಕೃತಿಗರ್ಭದಲ್ಲಿ ಜನಿಸಿ, ರತ್ನಕಾರನಿಂದ ಸಂಸ್ಕಾರ ಪಡೆದು, ಅರಮನೆ ಸೇರಿ, ಮಹಾರಾಜನ ಮುಕುಟವನ್ನಲಂಕರಿಸುವ ಮಾಣಿಕ್ಯಗಳಂತೆ…

ತಮಸಾತೀರದ ಆಶ್ರಮದಲ್ಲ ಜನಿಸಿ, ವಾಲ್ಮೀಕಿಗಳಿಂದ ಸಂಸ್ಕಾರ ಪಡೆದು, ಅಯೋಧ್ಯಾಮಹಾನಗರಿಯ ಅರಮನೆ ಸೇರಿ, ದೇವರ ದೇವನ – ರಾಜಾಧಿರಾಜನ ಸಾನ್ನಿಧ್ಯದಲ್ಲಿ ಶೋಭಿಸಿದರು ಕುಶಲವರು…

ಆವರೆಗೆ ಕುಮಾರರು ಗಿರಿ-ನದೀ-ಕಾನನಗಳನ್ನು ನೋಡಿದ್ದರು..

ಆಶ್ರಮಗಳನ್ನು, ಋಷಿ-ಮುನಿಗಳನ್ನು ನೋಡಿದ್ದರು..

ನಗರ-ನಾಗರಿಕರನ್ನು, ಅರಮನೆ-ಅರಸರನ್ನು ಕಥೆಯಲ್ಲಿ ಕೇಳಿದ್ದರು..ಕಣ್ಣಲ್ಲಿ ನೋಡಿರಲಿಲ್ಲ…!

ಆದರೆ ಅದೇ ಮೊದಲಾಗಿ ನೋಡಿದರೂ ಅಯೋಧ್ಯೆ ಅವರಿಗೆ ಹೊಸದೆನಿಸಲಿಲ್ಲ..!

ಅರಮನೆ ಮನೆಯಲ್ಲವೆನಿಸಲಿಲ್ಲ..!

ಅರಸ ಅಪರಿಚಿತನೆನಿಸಲಿಲ್ಲ..!

ಭೂಮಂಡಲದ ಸರ್ವೋಚ್ಚ ಸಿಂಹಾಸನವೇರಿ ಮೆರೆಯುವ ಮುಗಿಲೆತ್ತರದ ರಾಮನೇಕೋ ಅತಿಹತ್ತಿರದವನಾಗಿ ಕಂಡುಬಂದ..!

ರಾಮನನ್ನು ನೋಡುವಾಗ ಅದೇಕೋ ಅಮ್ಮನ ನೆನಪಾಯಿತು ಆ ಮಕ್ಕಳಿಗೆ…!

ಕೆಲವು ವ್ಯಕ್ತಿತ್ವಗಳು ಅದೆಷ್ಟು ದೂರವಿದ್ದರೂ ಹತ್ತಿರವೇ ಇರುತ್ತವೆ…

ಕಣ್ಮರೆಯಾದರೂ ಮತ್ತೆ ಮತ್ತೆ ಕಣ್ಮುಂದೆ ಬರುತ್ತವೆ…

ವಿಧಿವಿಪರ್ಯಾಸದಲ್ಲಿ ಸೀತೆಯನ್ನು ರಾಮನೇ ಕಾಡಿಗೆ ಕಳಿಸಿಕೊಟ್ಟಿದ್ದೂ ನಿಜ…

ಮಕ್ಕಳು ಆಕೆಯನ್ನು ಬೀಳ್ಕೊಟ್ಟು ಅಯೋಧ್ಯೆಗೆ ಬಂದಿದ್ದೂ ನಿಜ…

ರಾಮನಿಗೆ ಕಣ್ಮುಂದೆ ಶೋಭಿಸುವ ಮಕ್ಕಳಲ್ಲಿ ಕಾಣದ ಮಡದಿ ತೋರಿಬಂದರೆ…

ಆ ಮಕ್ಕಳಿಗೆ ರಾಮನ ಸಾನ್ನಿಧ್ಯ ಅಮ್ಮನ ಮಡಿಲನ್ನು ನೆನಪಿಸಿತು…

ರಾಮನೇ ಗಂಗೆ;

ಯಮಳರೇ ಯಮುನೆ;

ಸೀತೆಯೇ ಗುಪ್ತಗಾಮಿನಿ ಸರಸ್ವತಿ ;

ಅಯೋಧ್ಯೆಯೇ ಪ್ರಯಾಗವಾಯಿತು ಆ ಕ್ಷಣದಲ್ಲಿ…

ವಾಮನರಾಗಿ ಅಯೋಧ್ಯೆಯನ್ನು ಪ್ರವೇಶಿಸಿದ ಕುಶಲವರು ರಾಮನ ಹೃದಯದಲ್ಲಿ ತ್ರಿವಿಕ್ರಮರಾಗಿ ಬೆಳೆದರು…

ಬಲಿ ಚಕ್ರವರ್ತಿ ನೀಡಿದ್ದು ಮೂರು ಹೆಜ್ಜೆಗಳನ್ನು…

ಆದರೆ ವಾಮನನು ಪಡೆದುಕೊಂಡಿದ್ದು ಮೂರು ಲೋಕಗಳನ್ನು…

ಕ್ಷಣಕಾಲ ಕಿವಿಗೊಟ್ಟು ರಾಮಾಯಣದ ಕೆಲಬಿಂದುಗಳನ್ನು ಆಲಿಸಿದ ರಾಮನಿಗೆ ಕುಶಲವರ ಮುಖದಿಂದ ಸಂಪೂರ್ಣ ರಾಮಾಯಣವನ್ನು ಸವಿಯುವ ಮನಸ್ಸಾಯಿತು…

‘ಏಕಃ ಸ್ವಾದು ನ ಭುಂಜೀತ’…

ಏನನ್ನಾದರೂ ಒಬ್ಬನೇ ಸವಿಯುವುದು ರಾಮನ ಸ್ವಭಾವವೇ ಅಲ್ಲ…

ಹಾಗಾಗಿ ಸಹೋದರರು, ಸಚಿವರು, ಮತ್ತಿತರ ಸಹೃದಯರನ್ನು ರಾಮಾಯಣ ಸವಿಯಲು ಸಾರಿ ಕರೆದನು ಶ್ರೀರಾಮ…

ಪೀಠವೇ ಪೀಠಿಕೆಯನ್ನು ಕೊಟ್ಟರೆ…?

ಕಥಾನಾಯಕನೇ ಕಾವ್ಯಕ್ಕೆ ಮುನ್ನುಡಿಯಿತ್ತರೆ…?

ನಡೆದದ್ದು ಹಾಗೆಯೇ…

ಸ್ವಯಂ ಶ್ರೀರಾಮನೇ ರಾಮಾಯಣಗಾನಕ್ಕೆ ಪ್ರಸ್ತಾವನೆ ಗೈದನೆಂದರೆ ಅದು ಅದ್ಭುತವಲ್ಲವೇ…?

ಸ್ವಯಂ ಗಾಂಧರ್ವತತ್ತ್ವಜ್ಞನೇ ಆದ ಆ ನರದೇವನು ತನ್ನ ಮಧುರಗಂಭೀರಸ್ವರದಿಂದ ಸೇರಿದವರ ಮನಗಳನ್ನು ಸೂರೆಗೊಳ್ಳುತ್ತಾ ಆ ಮಹಾಸಭೆಯನ್ನುದ್ದೇಶಿಸಿ ನುಡಿಯಲುಪಕ್ರಮಿಸಿದನು…

“ಈ ದಿವ್ಯ ಸಭೆಯಲ್ಲಿ ಮಂಡಿಸಿರುವ ಸುಕೃತಿಚೇತನರೇ,

ಈ ಬಾಲಕರಲ್ಲಿ ಅಣು ಮಹತ್ತುಗಳ  ಅದ್ಭುತ ಸಮಾವೇಶವನ್ನು ನೋಡಿದಿರಾ..!

ಪುಟ್ಟ ಎದೆಗಳಲ್ಲಿ ಬಹುದೊಡ್ಡ ಗ್ರಂಥ..

ಪುಟ್ಟಪುಟ್ಟ ಕೊರಳುಗಳಲ್ಲಿ ಸಂಗೀತ ಸಾಮ್ರಾಜ್ಯದ ಸಾರ ಸರ್ವಸ್ವ ..

ವಯಸ್ಸು ಕಿರಿದು..

ತಪಸ್ಸು ಹಿರಿದು..!

ಭಸ್ಮಚ್ಛನ್ನವಾದ ಕೆಂಡದಂತೆ ಮುನಿವೇಷದ ಮರೆಯಲ್ಲಿ ನೈಸರ್ಗಿಕವಾದ ರಾಜಲಕ್ಷಣಗಳು..!

ಸ್ಫಟಿಕದ ಪಾತ್ರೆಯಲ್ಲಿ ಬೆಳಗುವ ಜ್ಯೋತಿಯಂತೆ ಮಾನವತನುವಿನಲ್ಲಿ ಮಿನುಗುವ ದೇವಕಾಂತಿ..!

ಈ ಯಮಳ ವಾಮನರು ತಮ್ಮ ಸ್ವರವಿಸ್ತಾರದಿಂದ ತ್ರಿವಿಕ್ರಮರಾಗಿ ಬೆಳೆದು ನಮ್ಮೆಲ್ಲರನ್ನೂ ಆವರಿಸುತ್ತಿದ್ದಾರೆ.

ಈ ಲೋಕವನ್ನೇ ಮರೆಸಿ, ಇನ್ನಾವುದೋ ಲೋಕವನ್ನು ತೆರೆಸುತ್ತಿದ್ದಾರೆ..!

ಎಂದೋ ನಡೆದುಹೋದ ಘಟನೆಗಳು ಈ ಗಾಯನವನ್ನಾಲಿಸುತ್ತಿದ್ದಂತೆಯೇ ಮರುಹುಟ್ಟು ತಾಳುತ್ತಿವೆ..

ಎಂದೆಂದೂ ಕಾಣದ ಆನಂದವೊಂದು ಎಲ್ಲೆಡೆ ಅಂಕುರಿಸುತ್ತಿದೆ..

ಅಲೌಕಿಕವಾದ ಈ ಗಾಯನವು ನನ್ನನ್ನೂ ಕೂಡ ನನ್ನ ಪರಮೋಚ್ಚ ಸತ್ತ್ವದೆತ್ತರಕ್ಕೆ ಎತ್ತುತ್ತಿದೆ..!

ಜೀವಕ್ಷೇಮಂಕರವಾದ ಈ ಧರ್ಮಾಖ್ಯಾನವನ್ನು ಕುಮಾರರು ಮೈಮನವೆಲ್ಲ ಮುಖವಾಗಿ ಆಮೂಲಾಗ್ರವಾಗಿ ಹಾಡಲಿ..

ಮೈಮನವೆಲ್ಲ ಕಿವಿಯಾಗಿ  ಕೇಳೋಣ ನಾವೆಲ್ಲರೂ…”

ಸಭೆಯನ್ನುದ್ದೇಶಿಸಿ ಹೀಗೆಂದ ಶ್ರೀರಾಮನು ತನ್ನ ಬೆಳದಿಂಗಳ ದೃಷ್ಟಿಯನ್ನು ಕುಮಾರರೆಡೆಗೆ ಬೀರುತ್ತ  ಹಾಡಲು ಪ್ರೇರಿಸಿದನು..

ಅಧರ ಮಧುರ, ವದನ ಮಧುರ, ನಯನ ಮಧುರ, ಹೆಚ್ಚೇಕೆ ಸರ್ವಮಧುರನಾದ ಮಧುರಾಧಿಪತಿಯಿಂದ ಸಂಪ್ರೇರಿತರಾದ ಕುಮಾರರು ಭಾವದುಂಬಿ, ರಸವುಕ್ಕಿ , ಮಧುರ ಮಧುರವಾಗಿ ಹಾಡತೊಡಗಿದರು ಅನಾದಿನಾಯಕನ ಆದಿಕಾವ್ಯವನ್ನು..

ಸಹಜವಾಗಿಯೇ ಮಧುರವಾದ ಕುಶಲವರ ಕಂಠಗಳು ಶ್ರೀರಾಮನ ಸಾನ್ನಿಧ್ಯ ಮತ್ತು ಪ್ರೇರಣೆಗಳಿಂದಾಗಿ ಮತ್ತಷ್ಟು ಮಧುರವಾದವು..!

ಗಂಗೆಯನ್ನು ಬರಮಾಡಿಕೊಳ್ಳುವ ಶಾಂತಸಾಗರದಂತೆ,ಕುಶಲವರು ನಿರಂತರ ಹರಿಸಿದ ಕಥಾಲಹರಿಯನ್ನು ಒಳಗೊಂಡನು ಶ್ರೀರಾಮ..

ಆ ಕಥಾಗಂಗೆಯು ಅವನ ಅಂತರಂಗದ ತುಂಬೆಲ್ಲ ತುಂಬಿ ತುಳುಕಿತು ಆನಂದಬಾಷ್ಪದ ರೂಪ ತಾಳಿ ಕಂಗಳಲ್ಲಿ…

ಆತನ ಹನಿಗೂಡಿದ ನಿಮೀಲಿತ ನೇತ್ರಗಳು ಹಿಮಬಿಂದುಗಳಿಂದೊಪ್ಪುವ ಸಂಧ್ಯಾಕಮಲಗಳಂತೆ ಶೋಭಿಸಿದವು..

ಮಹಾಪ್ರಭುವಿನೊಂದಿಗೆ ಕಳೆದ ರಸನಿಮಿಷಗಳು, ಒಡಗೂಡಿ ಅನುಭವಿಸಿದ ಸಂಕಟ-ಸಂತೋಷಗಳು ‘ಪುನರ್ನವ’ಗೊಂಡವು ಲಕ್ಷ್ಮಣ-ಭರತ-ಶತ್ರುಘ್ನ-ಸುಮಂತ್ರರೇ ಮೊದಲಾದ ರಾಮನ ಒಡನಾಡಿಗಳಲ್ಲಿ..

ಹಾಡುವುದರಲ್ಲಿ ಎರಡು ವಿಧ..

ಇಂದ್ರಿಯ ರಂಜನೆಯಾಗುವಂತೆ ಹಾಡಿದರೆ ಅದು”ದೇಶೀ”

ಆತ್ಮಕ್ಕೆ ಹಿತವಾಗುವಂತೆ – ಮುಕ್ತಿಗೆ ಮಾರ್ಗವಾಗುವಂತೆ ಹಾಡಿದರೆ ಅದು “ಮಾರ್ಗ”

ಕರಣವನ್ನೂ, ಅಂತಃಕರಣವನ್ನೂ ಮಾತ್ರವಲ್ಲ, ಅಂತರಾಳದಲ್ಲಿ ಹುದುಗಿರುವ ಆತ್ಮ – ಪರಮಾತ್ಮರನ್ನೂ ತೃಪ್ತಿಪಡಿಸುವ ಸಂಗೀತ ರೀತಿಯದು..

ಕುಶಲವರು ರಾಮಾಯಣವನ್ನು ಹಾಡಿದ್ದು “ಮಾರ್ಗ” ವಿಧಾನದಲ್ಲಿ..

ಏಕೆಂದರೆ, ರಾಮಾಯಣವು ಕೇವಲ ಬುದ್ಧಿಜೀವಿಗಳ ಕಾವ್ಯವಲ್ಲ.

ಅದು ಹೃದಯ ಜೀವಿಗಳ ಕಾವ್ಯ ; ಆತ್ಮಬಂಧುಗಳ ಕಾವ್ಯ..

ಸಾಗರದಿಂದ ಆವಿಯಾಗಿ ಮೇಲೇಳುವ ನೀರು ಮೋಡವಾಗಿ ತೇಲಿ, ಮಳೆಯಾಗಿ ಸುರಿದು, ಹೊಳೆಯಾಗಿ ಹರಿದು ಪುನಃ ಸಾಗರವನ್ನೇ ಸೇರುವಂತೆ..

ಮುನಿಮನದಲ್ಲಿ ಸನ್ನಿಹಿತನಾದ,  ಶ್ರೀರಾಮನಿಂದಲೇ ಉಗಮಿಸಿದ ಶ್ರೀರಾಮಾಯಣವು ಕುಶಲವರ ಮೂಲಕ ಶ್ರೀರಾಮಾರ್ಪಣವಾಯಿತು.

ಕಾಲವೆಂದೂ ನಿಲ್ಲದು..
ಅದೆಂದೆಂದೂ ಹಿಂದೆ ಸರಿಯದು..

ಸದಾ ಮುಂದು ಮುಂದಕ್ಕೆ ಸರಿಯುತ್ತಲೇ ಇರುವುದು ಕಾಲದ ಸ್ವಭಾವ..

ಆದರೆ ಅಂದು ಅಯೋಧ್ಯೆಯಲ್ಲಿ ಕುಶಲವರು ರಾಮಾಯಣವನ್ನು ಹಾಡತೊಡಗಿದಾಗ ಕಾಲಕ್ಕೆ ಮುಂದೆ ಸರಿಯಲು ಸಾಧ್ಯವೇ ಆಗಲಿಲ್ಲ..!

ಅದು ನಿಂತೇ ಬಿಟ್ಟಿತು.. ಮಾತ್ರವಲ್ಲ, ಮೆಲ್ಲಮೆಲ್ಲನೆ ಹಿಂದುಹಿಂದಕ್ಕೆ ಸರಿಯತೊಡಗಿತು..!

ಸಕಲರನ್ನೂ ತಮ್ಮ ಗಾನಪುಷ್ಪಕದಲ್ಲಿ ಕುಳ್ಳಿರಿಸಿಕೊಂಡು ಕುಶಲವರು ಹೊರಟೇಬಿಟ್ಟರು ಕಾಲವಿಹಾರಕ್ಕೆ..!

ಈ ಕಾಲದಿಂದ ಆ ಕಾಲಕ್ಕೆ..

ರಾಮಸಮ್ಮುಖದ ಕಾಲದಿಂದ ರಾಮಪ್ರತೀಕ್ಷೆಯ ಕಾಲಕ್ಕೆ..!

ಅಯೋಧ್ಯೆ ನಿಶ್ಶಬ್ದವಾಯಿತು..

ಜಡವಸ್ತುಗಳು ಮಾತ್ರವೇ ಉಳಿದವಲ್ಲಿ..!

ಸಕಲ ಚೇತನರೂ ರಾಮನ ಬದುಕಿನ ಜೊತೆಗೇ ಪಯಣಿಸುವ ಕುಶಲವರನ್ನು ಹಿಂಬಾಲಿಸಿದರು..

ಮುಚ್ಚಿದ ಕಣ್ಣುಗಳ ಮುಂದೆ ಮೂಡತೊಡಗಿತ್ತು ರಾಮಾಯಣ..

|| ಹರೇರಾಮ ||

ಟಿಪ್ಪಣಿ :-

ಅಕೃತ್ರಿಮ -ಕೃತ್ರಿಮವಲ್ಲದ್ದು, ಸಹಜವಾದುದು.

ಅನಿಮಿತ್ತ – ಅಕಾರಣವಾದುದು, ಯಾವುದೋ ಕಾರಣವನ್ನಿಟ್ಟುಕೊಂಡು ಹುಟ್ಟಿದ್ದಲ್ಲ.
ಯಮಳ – ಅವಳಿ
ಏಕಃ ಸ್ವಾದು ನ ಭುಂಜೀತ – ಸವಿಯಾದದ್ದನ್ನು ಒಬ್ಬನೇ ಸವಿಯಬಾರದು.
ಗಾಂಧರ್ವ ತತ್ವಜ್ಞ – ಸಂಗೀತ – ನಾಟ್ಯವೇ ಮೊದಲಾದ ಕಲೆಗಳ ಮರ್ಮವನ್ನರಿತವನು.
ಭಸ್ಮಚ್ಛನ್ನವಾದ ಕೆಂಡದಂತೆ ಮುನಿವೇಷದ ಮರೆಯಲ್ಲಿ ನೈಸರ್ಗಿಕವಾದ ರಾಜಲಕ್ಷಣಗಳು..ಭಸ್ಮವೆಂಬುದು ಮುನಿಲಕ್ಷಣ..ಕೆಂಡದ ಬಿಸಿ ಕ್ಷಾತ್ರವನ್ನು ನೆನಪಿಸುವಂಥದ್ದು..ಕುಶಲವರ ಮುನಿವೇಷದ ಮರೆಯಲ್ಲಿ ಕ್ಷಾತ್ರಲಕ್ಷಣಗಳೂ – ರಾಜಲಕ್ಷಣಗಳೂ ಇರುವುದನ್ನು ಈ ಉಪಮೆಯು ಸುಂದರವಾಗಿ ನಿರೂಪಿಸುತ್ತದೆ..
ಜೀವಕ್ಷೇಮಂಕರ – ಜೀವಕ್ಕೆ ಹಿತವನ್ನುಂಟುಮಾಡುವ..
ಧರ್ಮಾಖ್ಯಾನ – ಧರ್ಮಬಲದಿಂದಲೇ ಮುನಿ ಕಂಡ ಕಥೆ, ಧರ್ಮಮೂರ್ತಿಯ ಕಥೆ,  ಕೇಳಿದವರ ಮನದಲ್ಲಿ ಧರ್ಮವು ಅಂಕುರಿಸುವಂತೆ ಮಾಡುವ ಕಥೆ, ಧರ್ಮವನ್ನೇ ತಿಳಿಸಿ ಹೇಳುವ ಕಥೆ..
ನಿಮೀಲಿತ ನೇತ್ರ -( ತನ್ಮಯತೆಯಿಂದಾಗಿ) ಮುಚ್ಚಿದ ಕಣ್ಣು
ಸಂಧ್ಯಾಕಮಲ – ಸಂಧ್ಯಾಸಮಯದಲ್ಲಿ ಮುದುಡುವ ಕಮಲ
ಪುನರ್ನವ– ಮತ್ತೆ ಹೊಸದಾಗುವುದು..
ರಾಮಸಮ್ಮುಖ ಕಾಲ – ರಾಮನೆದುರು ಕುಳಿತಿರುವ ವರ್ತಮಾನಕಾಲ
ರಾಮಪ್ರತೀಕ್ಷಾ ಕಾಲ – ರಾವಣನ ಅನ್ಯಾಯಗಳಿಂದಾಗಿ ನೊಂದ ಸೃಷ್ಟಿ ರಾಮನು ಹುಟ್ಟಿ ಬರಲೆಂದು ಕಾಯುತ್ತಿದ್ದ ಕಾಲ, ರಾಮಾವತಾರಕ್ಕಿಂತ ಪೂರ್ವ ಕಾಲ.

41 Responses to ರಾಮಾಯಣ ರಾಮಾರ್ಪಣ..!

 1. dattu

  ಶ್ರೀಗಳಿಂದ ಮ್ಯೂಸಿಕ್-ತೆರೆಪಿಯ ಮೂಲಪಾಠ

  [Reply]

 2. Sharada Jayagovind

  Samsthana such writing conquers time, stops time and stuns us by its depths and heights. It descends into our hearts, stirs emotions, touches the soul and leaves me speechless…Hareraama…we are blessed to bathe in such waves of Sathvik words and emotions…

  [Reply]

  dattu Reply:

  Then worship is remaining. Why we should late to worship(advaita) god? Be hurry sharadakka

  [Reply]

  Raghavendra Narayana Reply:

  Wonderful.

  [Reply]

 3. dattu

  ರಾಮನು ಪ್ರೀತಿಸದವರಾರು..?

  ರಾಮನನ್ನು ಪ್ರೀತಿಸದವರಾರು?

  [Reply]

 4. Raghavendra Narayana

  ರಾಮರಸದ ಆಗರ ಈ ರಾಮಾಯಣ
  ಸೋಮರಸದ ಸಾಗರ ಈ ರಾಮಾಯಣದ ವ್ಯಾಖ್ಯಾನಗಳು
  ಶ್ರೀ ಗುರುಭ್ಯೋ ನಮಃ
  .
  ಅ೦ತರ೦ಗದ ತೂರಾಟ ಹೆಚ್ಚಿ ಸಧ್ಯಕ್ಕೆ ಅಯೋಧ್ಯೆಯ ಒ೦ದು ಮರದ ಕೆಳಗೆ ಬಿದ್ದು full flat
  ಮತ್ತೆ ಎದ್ದು ಕುಡಿಯಬೇಕು, ತೂರಾಡಬೇಕು, ಬೀಳಬೇಕು, ಬಿದ್ದ ಮೇಲೆ ಸತತ ಮನನ ನಡೆಯಬೇಕು, ಮಥನವಾಗಬೇಕು, ಮದನನಾಗಬೇಕು – ರಾಮಾಯಣವೆ೦ಬ ಕೊಳಲು ಬೇಕು, ರಾಮನೆ೦ಬ ಮರ ಬೇಕು ಹೆಮ್ಮರ ಬೇಕು – ಬೀಳಬೇಕು ಅ೦ತರ೦ಗ ಬಹಿರ೦ಗಗಳೆರಡೂ ಅಲ್ಲಿ

  [Reply]

  dattu Reply:

  ಧನ್ಯವಾದಗಳು ರಾಘವೇಂದ್ರಣ್ಣ
  ಈ ಸಾತ್ವಿಕ ಕುಡಿತದ ಬಯಕೆಗೆ, ತೂರಾಟಕ್ಕೆ,

  full flat ಆದಮೇಲೆ
  ಮತ್ತೆ ತೂರಾಟವೇಕೆ?
  ತೂರಾಟದ ಬಯಕೆಯೇಕೆ?

  [Reply]

  Raghavendra Narayana Reply:

  By your wishes if it becomes complete “full flat” then it is great grace by God.
  .
  Problem is I wake up, see the external world, get up and start dancing again to Maaya World. So there is a need of drinking such Knowledge Rasa again and again till I reach and saturate at the heights of “full flat”..

  [Reply]

  dattu Reply:

  if you got abundant supply of rama(soma) rasa just inform me.
  so that i can share with you

  [Reply]

 5. Shaman Hegde

  ಹರೇರಾಮ…ಕಥಾನಾಯಕನೇ ಕಾವ್ಯಕ್ಕೆ ಮುನ್ನುಡಿಯಿತ್ತರೆ…?- ಅತ್ಯಾದ್ಭುತ!!!! ಆತ್ಮಕ್ಕೆ ಹಿತವಾಗುವಂತೆ – ಮುಕ್ತಿಗೆ ಮಾರ್ಗವಾಗುವಂತೆ ಹಾಡಿದರೆ ಅದು “ಮಾರ್ಗ”…ಈಗಿನ ಕಾಲದಲ್ಲಿ ಈ ರೀತಿಯ ಹಾಡುಗಾರಿಕೆ ಸಿಗುವುದು ಕಷ್ಟ… ಸಿಕ್ಕಿದರೂ, ಸರಿಯಾಗಿ ಗುರುತಿಸುವ ಸಾಮರ್ಥ್ಯ ಇಲ್ಲ…

  [Reply]

 6. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು. ರಾಮನಿಂದಲೇ ಉಗಮಿಸಿದ ನಮ್ಮೆಲ್ಲರ ಜೀವನವೂ ರಾಮಾರ್ಪಣವಾಗುವ ಕಾಲವು ಗುರುಗಳ ಅನುಗ್ರಹದಿಂದ ಸನ್ನಿಹಿತವಾದಂತಿದೆ.

  [Reply]

 7. Anuradha Parvathi

  ಎನು ಬರಿಯೋಕೂ ತೋಚುತ್ತಿಲ್ಲ, ಯೋಗ್ಯತೆನೂ ಇಲ್ಲ. ಅದ್ಬುತವಾಗಿತ್ತು.

  [Reply]

 8. nandaja haregoppa

  ಹರೇ ರಾಮ

  ರಾಮಾಯಣವನ್ನು ಕುಶಲವರು ಹಾಡಿದರು ಎಂದು ಮಾತ್ರ ಓದಿದ್ದೆವು ಆದ್ರೆ ಅದರ ಹಿಂದೆ ಇಷ್ಟು ಸುಂದರ ಕಥೆ ಇದೆ ಎಂದು ಇವತ್ತೇ

  ಗೊತ್ತಾಗಿದ್ದು ,

  ವಯಸ್ಸು ಕಿರಿದು..

  ತಪಸ್ಸು ಹಿರಿದು..!

  ಪ್ರಣಾಮಗಳು

  [Reply]

 9. Raghavendra Narayana

  What lines to highlight? Whole article is highlights.
  Satva Gunas fly high when reading these articles.

  [Reply]

 10. ಜಗದೀಶ್ ಬಿ. ಆರ್.

  ರಾಮರಸಗವಳ!!
  ಸನಾತನ ಕಾವ್ಯದ ವಿನೂತನ ನಿರೂಪಣೆ ಅತ್ಯದ್ಭುತವಾಗಿದೆ!
  ಗುರುಗಳ ಈ ಹೃದಯವಾಣಿಯನ್ನು ಸಕಲಚೇತನರೂ, ವಿಕಲಚೇತನರೂ! ಆಲಿಸುವಂತಾಗಲಿ, ಪಾಲಿಸುವಂತಾಗಲಿ.

  [Reply]

  Raghavendra Narayana Reply:

  ಅತ್ಯದ್ಭುತ

  [Reply]

 11. seetharama bhat

  Hareram,

  Suryodyada munche Arunodayadanthe
  Ramodyada munche Premodayadanthe

  Swayam sundara kavya
  Munnue sundara,bhavya

  Eruthide nishe
  thorithide dishe

  Jai sriram

  [Reply]

 12. madhyastharv

  hare rama

  [Reply]

 13. Aravinda

  ರಸದೋತಣ…….

  ಸಮುದ್ರಕ್ಕೆ ಕಟ್ಟೇ ಕಟ್ಟುವರುಂಟೇ….!

  ನಮ್ಮ ಗುರುಗಳ ಪದಗಳಿಗೆ ಬೆಲೆ ಕಟ್ಟುವರುಂಟೇ……?

  (ಈ ಲೋಕವನ್ನೇ ಮರೆಸಿ, ಇನ್ನಾವುದೋ ಲೋಕವನ್ನು ತೆರೆಸುತ್ತಿದ್ದಾರೆ..! )

  [Reply]

  seetharama bhat Reply:

  Hareram,

  Ramanida mathra saadya
  Raghavarinda maathra saadya
  navellaraguvevu sidha saadya

  Hareraam

  [Reply]

 14. Aravinda

  ಕಾಲವೇ ಹಿಂದಿರುಗಿರಬೇಕದರೆ ನಾವು ಕೂಡ ಹಿಂದಿರುಗ ಬೇಡವೆ…..?

  ಕುಲಗುರುವೆ.. ಹಿಂದಿರುಗುವ ಬಗೆ ಹೇಗೆ ಹೇಳುವಿರಾ …!?

  [Reply]

 15. Aravinda

  ಸಕಲರನ್ನೂ ತಮ್ಮ ಹರೇರಾಮ ಪುಷ್ಪಕದಲ್ಲಿ ಕುಳ್ಳಿರಿಸಿಕೊಂಡು ಕುಲಗುರುಗಳು ಹೊರಟೇಬಿಟ್ಟರು ಕಾಲವಿಹಾರಕ್ಕೆ..!

  [Reply]

 16. Sharada Jayagovind

  Dattanna will you please explain your idea of worship…

  [Reply]

  dattu Reply:

  why not sharadakka……………………
  only the problem is language

  [Reply]

  dattu Reply:

  “ಅರ್ಚ ಪೂಜಾಯಾಂ” ಪೂಜೆಯೆಂದರೆ ಗೌರವಿಸಬೇಕಾದುದನ್ನು ಗೌರವಿಸುವುದು

  Giving respect to whom should be respected

  ಇದು ಕರ್ಮಕಾಂಡದ ಒಂದು ಪ್ರಬೇದವಾದ ಉಪಾಸನಾಮಾರ್ಗ

  [Reply]

 17. Rajalakshmi Joshi

  Harerama..I wish someone would translate Guruji’s beautiful words into English for the benefit of people like me, who cannot read Kannada….If the responses are so beautiful, I wonder how beautifullly Guruji must have explained the subject…:-)

  [Reply]

  Raghavendra Narayana Reply:

  Completely Agree. We need translations in Hindi and English.
  .
  There are few articles got translated and published in Indian Express and other newspapers. It was uploaded in Hareraama site, I am unable to find/fetch those links.

  [Reply]

 18. gopalakrishna pakalakunja

  “….ಕಾನನಮಧ್ಯದಲ್ಲಿ ಅರಳಿ, ಹಳ್ಳಿ ಸೇರಿ ಹಾರವಾಗಿ, ಮಹಾನಗರದ ಮಂದಿರಮಧ್ಯದಲ್ಲಿ ಬೆಳಗುವ ಮೂರ್ತಿಯ ಮುಡಿಯೇರಿ ಶೋಭಿಸುವ ಸುಮಗಳಂತೆ…
  ಪ್ರಕೃತಿಗರ್ಭದಲ್ಲಿ ಜನಿಸಿ, ರತ್ನಕಾರನಿಂದ ಸಂಸ್ಕಾರ ಪಡೆದು, ಅರಮನೆ ಸೇರಿ, ಮಹಾರಾಜನ ಮುಕುಟವನ್ನಲಂಕರಿಸುವ ಮಾಣಿಕ್ಯಗಳಂತೆ…
  ತಮಸಾತೀರದ ಆಶ್ರಮದಲ್ಲ ಜನಿಸಿ, ವಾಲ್ಮೀಕಿಗಳಿಂದ ಸಂಸ್ಕಾರ ಪಡೆದು, ಅಯೋಧ್ಯಾಮಹಾನಗರಿಯ ಅರಮನೆ ಸೇರಿ, ದೇವರ ದೇವನ – ರಾಜಾಧಿರಾಜನ ಸಾನ್ನಿಧ್ಯದಲ್ಲಿ ಕುಶಲವರು…ಶೋಭಿಸಿದಂತೆ…..”
  ಎಲ್ಲೆಲ್ಲೋ ಹುಟ್ಟಿ ಬೆಳೆದ ನಾವೆಲ್ಲ, ಪೂರ್ವಜನ್ಮಾನುಸಾರ ಸುಸಂಸ್ಕಾರ ಪಡೆದು ಶ್ರೀಗುರು ದೇವತಾನುಗ್ರಹದಿಂದ ಶ್ರೀ ಮಠದ ಆಶ್ರಯಾನುಗ್ರಹ ಪಡೆದು,ಶ್ರೀ ಶ್ರೀ ಸಂಸ್ಥಾನದ ಪಾದರಜಗಳಾಗಿ ಶೋಭಿಸೋಣವಂತೆ…

  [Reply]

 19. ಜಗದೀಶ್ ಬಿ. ಆರ್.

  ಗುರುಗಳು ಅನೇಕರನ್ನು ವ್ಯಸನಿಗಳನ್ನಾಗಿಸಿದ್ದಾರೆ!!! ಈ ವ್ಯಸನ ಮುಕ್ತಿಗಾಗಿ (ವ್ಯಸನವೇ ಮುಕ್ತಿಗಾಗಿ!). ಆತ್ಮತೃಪ್ತಿಗಾಗಿ.
  (ರಾಘವೇಂದ್ರ ನಾರಾಯಣ, ಮಧು ದೊಡ್ಡೇರಿ ಮುಂತಾದವರನ್ನು ನೋಡಿದಾಗ ಅನ್ನಿಸಿದ್ದು :))

  [Reply]

  Raghavendra Narayana Reply:

  ಟ್ವಿಟ್ಟರ್ ಅಲ್ಲಿ ಬರೆದ ನೆನಪು
  “ಗುರಿ, ಗುರು, ಚಟ, ನೀತಿ ಗ್ರ೦ಥದ ಆಲಯ, ಗರ್ಭ ಗುಡಿ, ಅರಿವಿನ ಹಸಿವು, ವಿಧಿಯ ಶಿಕ್ಷೆ, ಆಸಕ್ತಿ…. – ಇಲ್ಲದ ಮಾನವರು – ಮಾಯೆಯ ಶಾಪಕ್ಕೆ ಗುರಿಯಾದವರು”

  [Reply]

 20. Mohan Bhaskar

  ಹರೇ ರಾಮ – ಸ೦ಸ್ಠಾನ೦.
  ಆನ೦ದ ನೀಡುತ್ತಿವೆ. ವಿವರಣೆಗೆ ಮೀರಿದೆ.
  ಆಸೆ :
  ಅ೦ದು ವಾಲ್ಮೀಕಿ ಮಹರ್ಷಿಗಳಿ೦ದ ರಚಿತವಾದ ಶ್ರೀ ರಾಮಾಯಣವನ್ನು ಕುಶ-ಲವ ರು ಶ್ರೀ ರಾಮನೆದುರಿಗೇ – ಲೋಕದೆದುರಿಗೆ ಹಾಡಿ ತೋರಿದರು.
  ಇ೦ದು ನಮ್ಮ ಗುರುಗಳಿ೦ದ ರಚಿತವಾಗುತ್ತಿರುವ ಶ್ರೀ ರಾಮಾಯಣವು, ಬರೆದ ದಿನ ಲೋಕಕ್ಕೆ ಓದಿ ತೋರುವ೦ತಾದರೆ – ಮಹಾ ಪ್ರಸಾದವಲ್ಲವೇ..?

  ಪ್ರಣಾಮಗಳು – ಮೋಹನ ಭಾಸ್ಕರ

  [Reply]

 21. chs bhat

  ಹರೇ ರಾಮ. ಶ್ರೀ ರಾಮ ತನ್ನ ಮಕ್ಕಳಿಂದ ( ಅಂದರೆ ತನ್ನಿಂದಲೇ- ಆತ್ಮಾವೈ ಪುತ್ರ…..)ತನ್ನದೇ ಕತೆಯನ್ನು ಕೇಳುತ್ತಾನೆ. ತನ್ನ ಕತೆಯನ್ನು ತಾನೇ ಕೇಳಿ ಅದನ್ನನುಭವಿಸುತ್ತಾನೆ. ಈಗ ಮತ್ತೋಮ್ಮೆ ರಾಮನೇ ರಾಘವನಾಗಿ ತನ್ನ ಕತೆಯನ್ನು ತನ್ನ ಪ್ರಜೆಗಳಿಗೆ -ಶಿಷ್ಯರಿಗೆ – ಕೇಳಿಸುತ್ತಿದ್ದಾನೆಯೇ? ನಾವು ಧನ್ಯರು. ಹರೇ ರಾಮ.
  -ಸತ್ಯ.

  [Reply]

 22. shobha lakshmi

  ನೈಸರ್ಗಿಕವಾದ ಪ್ರೀತಿ ನಿಜವಾದ ಪ್ರೀತಿ..ಅದು ತನ್ನಿ೦ದ ತಾನೇ ಉ೦ಟಾಗುವುದು..ಶ್ರೀರಾಮನಿಗೆ ತನ್ನ ಮಕ್ಕಳ ಮೊಟ್ಟಮೊದಲ ಬಾರಿಗೆ ಈ ರೀತಿಲಿ ನೋಡುವಗ ಆದ ಅನುಭವ ನಮಗೂ ಆದ ಹಾ೦ಗೆ ಆತು..ರೋಮಾ೦ಚನ ಆತು..ಕಣ್ಣೀರು ಬ೦ತು..

  ಆತ್ಮಕ್ಕೆ ಹಿತವಾಗುವ೦ತೆ ಹಾಡಿದರೆ ಅದು ಮಾರ್ಗ..ಅ೦ದರೆ ದಾರಿ,,ಎಲ್ಲಿಗೆ ಹೋಗುವ ದಾರಿ? ಆತ್ಮದೆಡೆಗೆ ? ಸ೦ಗೀತದ ಮೂಲಕ ಆತ್ಮದೆಡೆಗೆ ಹೋಗಬಹುದಲ್ಲವೇ ಗುರುದೇವ? ಶುಧ್ಧ ಶಾಸ್ತ್ರೀಯವಾಗಿ ,,ಶ್ರುತಿಬಧ್ಧ ವಾಗಿ, ರಾಗವನ್ನು ಅನುಸ೦ಧಾನ ಮಾಡಿಕೊ೦ಡು , ಹಾಡುತ್ತಾ ಹಾಡುತ್ತಾ ಆತ್ಮಾನುಭವ ಪಡೆಯಬಹುದಲ್ಲವೆ? ಉದಾಹರಣೆ ತ್ಯಾಗರಾಜ,,ಪುರ೦ದರದಾಸ,,ಮು೦ತಾದ ಸ೦ಗೀತ ಸಾಮ್ರಾಟರು?

  [Reply]

  BASAVARAJ Reply:

  WHAT ABOUT RAM RAJJA

  [Reply]

 23. sree guru

  ಲವ ಕುಷರಿಂದ ರಾಮಾಯಣವನ್ನು ಕೇಳಿದ ರಾಮನ ಭಾಗ್ಯ ದೊಡ್ಡದೋ ……..?
  ರಾಮನು ಕೇಳಿದ್ದನ್ನು ನಿಮ್ಮಿಂದ ಮತ್ತೆ …ಮತ್ತೆ ಕೇಳುವ ನಮ್ಮ ಭಾಗ್ಯ ದೊಡ್ಡದೋ…?

  [Reply]

 24. Mahesha Elliadka

  { ಏಕೆಂದರೆ, ರಾಮಾಯಣವು ಕೇವಲ ಬುದ್ಧಿಜೀವಿಗಳ ಕಾವ್ಯವಲ್ಲ.
  ಅದು ಹೃದಯ ಜೀವಿಗಳ ಕಾವ್ಯ ; ಆತ್ಮಬಂಧುಗಳ ಕಾವ್ಯ.. }
  – ಸಾಧು..ಸಾಧು!!

  ರಾಮನಿಂದ ಆರಂಭವಾಗಿ ರಾಮಾರ್ಪಣವಾಗಿ ಬೆಳಗಿದ ರಾಮಾಯಣ ಸಾಗರದಲ್ಲಿ ಪುಣ್ಯಸ್ನಾನ ನಮಗೆಲ್ಲರಿಗೂ ಸಿಗುವಂತೆ ಮಾಡಿದ ಗುರುಗಳಡಿಗೆ ಈ ವಂದನೆ ’ರಾಮಾರ್ಪಣ’..
  ಹರೇರಾಮ..

  [Reply]

 25. maruvala narayana

  ರಾಮಾಯಣದ ಬಗೆಗೆ ಪೀಠದಿಂದ ಬರುತ್ತಿರುವ ಪೀಠಿಕೆ ಅತ್ಯಂತ ಸುಂದರ

  [Reply]

 26. RAVINDRA T L BHATT

  ಸದಾ ಮುಂದು ಮುಂದಕ್ಕೆ ಸರಿಯುತ್ತಲೇ ಇರುವುದು ಕಾಲದ ಸ್ವಭಾವ..
  ಆದರೆ ಅಂದು ಅಯೋಧ್ಯೆಯಲ್ಲಿ ಕುಶಲವರು ರಾಮಾಯಣವನ್ನು ಹಾಡತೊಡಗಿದಾಗ ಕಾಲಕ್ಕೆ ಮುಂದೆ ಸರಿಯಲು ಸಾಧ್ಯವೇ ಆಗಲಿಲ್ಲ..!
  ಅದು ನಿಂತೇ ಬಿಟ್ಟಿತು.. ಮಾತ್ರವಲ್ಲ, ಮೆಲ್ಲಮೆಲ್ಲನೆ ಹಿಂದುಹಿಂದಕ್ಕೆ ಸರಿಯತೊಡಗಿತು..!
  ಇಂದೂ ಹಾಗೆಯೇ ಆಗಿ ಬಿಟ್ಟಿದೆಯಲ್ಲ!!!
  ಕಾಲ ಹಾಗೆ ನಿಂತಿರುವ ಹಾಗಿದೆ, ಅಲ್ಲ್ಲಲ್ಲ, ಹಿಂದೆ,ಹಿಂದೆ ಸರಿಯತೊಡಗಿದೆ!!,
  ತ್ವೇತ್ರಾ ಯುಗಕ್ಕೆ ಕರೆದು ಕೊಂಡು ಹೋಗುತ್ತಿರುವ ಹಾಗಿದೆ!!!
  ಸುಂದರ ಪದಪುಂಜಗಳಿಗಿದೋ ನಮನಗಳು!,
  ಸರಿಯ ಗುರಿಯ ತೋರಿ ಜಗದಿ
  ಬೆಳಕ ನೀಡುತಿರುವ ಗುರುವ
  ಕರಿಣಿಸಿರುವ ಜಗದ ಗುರುವಿಗಿದೋ
  ನೂರು ಮತ್ತಿನ್ನೂರು,ಮತ್ತಿನ್ನೂರು ನಮನಗಳು

  [Reply]

 27. ಮಂಗ್ಳೂರ ಮಾಣಿ...

  ರಾಮಾಯಣ ಪುಸ್ತಕವಾಗಿ ಬಿಡುಗಡೆಯಾಗಿದ್ದು ಬಹಳ ಬಹಳ ಸಂತೋಷವಾಯಿತು.
  ಮೊನ್ನೆ ಅಶೋಕೆಯಲ್ಲಿ ಕೊಂಡುಕೊಂಡೆ, ಓದಿದಷ್ಟೂ ಹೊಸದು – ಸವಿದಷ್ಟೂ ಸವಿ – ತಿಂದಷ್ಟೂ ಹಸಿವು…

  ಪ್ರಕಟಿಸಿದವರಿಗೆ ಮನದಾಳದ ಧನ್ಯವಾದ. ಈಗ ನಾನೆಲ್ಲಿ ಹೋದರಲ್ಲಿ ರಾಮನೂ – ರಾಮಾಯಣಾವೂ ಜೊತೆಗಿದೆ.

  – ನಂದ ಕಿಶೋರ.

  [Reply]

  Raghavendra Narayana Reply:

  Where are you?
  .
  Shri Gurubhyo Namaha

  [Reply]

 28. Raghavendra Narayana

  ರಾಮಾಯಣ ರಾಮಾರ್ಪಣ.
  .
  ಶ್ರೀ ಗುರುಭ್ಯೋ ನಮಃ

  [Reply]

Leave a Reply

Highslide for Wordpress Plugin