LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಸಾಯಲು ಕಲಿಯೋಣವೇ..?

Author: ; Published On: ರವಿವಾರ, ದಶಂಬರ 20th, 2009;

Switch to language: ಕನ್ನಡ | English | हिंदी         Shortlink:

|| ಹರೇ ರಾಮ ||

ಜೀವಿ ಎಷ್ಟು ಕಾಲ ಬದುಕಿರುತ್ತಾನೆ ಎಂಬುದಕ್ಕಿಂತ, ಹೇಗೆ ಬದುಕುತ್ತಾನೆ ಎಂಬುದು ಮುಖ್ಯ.
ಹೇಗೆ ಬದುಕುತ್ತಾನೆ ಎಂಬುದಕ್ಕಿಂತಲೂ, ಹೇಗೆ ಸಾಯುತ್ತಾನೆ ಎಂಬುದು ಇನ್ನೂ ಮುಖ್ಯ ..!

ಬದುಕು ಪರೀಕ್ಷೆಯಾದರೆ, ಸಾವು ಅದರ ಫಲಿತಾಂಶ.
ಹೇಗೆ ಬದುಕಬೇಕೆಂಬ ನಿರ್ಧಾರವನ್ನು ಸಾಮಾನ್ಯರು ಮಾಡಬಹುದು. .
ಆದರೆ, ಹೇಗೆ ಸಾಯಬೇಕೆಂಬುದನ್ನು ನಿರ್ಧರಿಸಲು ಅಸಾಮಾನ್ಯರಿಗೆ ಮಾತ್ರವೇ ಸಾಧ್ಯ..!

ಬದುಕಿದರೆ ಹೇಗೆ ಬದುಕಬೇಕೆಂಬುದನ್ನು ಶ್ರೀ ರಾಮಾಯಣ ಹೇಗೆ ನಿರೂಪಿಸಿದೆಯೋ,   ಹಾಗೆಯೇ, ಸತ್ತರೆ ಹೇಗೆ ಸಾಯಬೇಕೆಂಬುದನ್ನು ಕೂಡಾ ಮನ ಮುಟ್ಟುವಂತೆ ನಿರೂಪಿಸಿದೆ.
ಬದುಕಿನ ಜೊತೆಗೆ ಸಾವನ್ನು ಕಲಿಯಬಯಸುವಿರಾದರೆ ಮಧ್ಯರಾಮಾಯಣಕ್ಕೆ ಬನ್ನಿ..

ಪಕ್ಷಿರಾಜ ಜಟಾಯು ಮತ್ತು ಮಾಯಾವಿ ಮಾರೀಚ..
ತಮ್ಮ ಸಾವಿನ ಮೂಲಕ ರಾಮಾಯಣಕ್ಕೆ ತಿರುವು ತಂದುಕೊಟ್ಟ, ಅಷ್ಟೇ ಏಕೆ – ಅಂದಿನ ಜಗತ್ತಿನ ಚಿತ್ರಣವನ್ನು ಬದಲಾಯಿಸಿದ ಎರಡು ಅದ್ಭುತ ಪಾತ್ರಗಳನ್ನು ಒಮ್ಮೆ ನೋಡಿ.
ಕಾರ್ಯ ನಿರ್ವಹಣೆಯ ದೃಷ್ಟಿಯಿಂದ ಈರ್ವರಲ್ಲಿಯೂ ದೋಷವೆಣಿಸುವಂತಿಲ್ಲ, ಸ್ವಾಮಿಕಾರ್ಯಕ್ಕೆ ತನ್ನ ಸರ್ವಶಕ್ತಿಯನ್ನೂ ಧಾರೆಯೆರೆದವರು.
ಕೆಲ ವಿಷಯಗಳಲ್ಲಿ ಇವರೀರ್ವರೂ ಒಬ್ಬರನ್ನೊಬ್ಬರು ಹೋಲುತ್ತಾರೆ..!
ಆದರೆ ಹಲವು ವಿಷಯಯಗಳಲ್ಲಿ ಕತ್ತಲೆ- ಬೆಳಕುಗಳಂತೆ ಸಂಪೂರ್ಣವಾಗಿ ಭಿನ್ನವಾಗಿ ನಿಲ್ಲುತ್ತಾರೆ..!

ಹೋಲಿಕೆ ಇಲ್ಲಿ…

 • ಈರ್ವರೂ ಪ್ರಧಾನ ಭೂಮಿಕೆ ವಹಿಸುವುದು ರಾಮಾಯಣದ ಅರಣ್ಯಕಾಂಡದಲ್ಲಿ ಬರುವ ಸೀತಾಪಹರಣದ ಪ್ರಕರಣದಲ್ಲಿ..
 • ಈರ್ವರೂ ತಮ್ಮ ಸ್ವಾಮಿಗಾಗಿ ಸರ್ವೋಚ್ಚ ಬಲಿದಾನವನ್ನೇ ಮಾಡಿದವರು.  ಸಾಯುವ ಕ್ಷಣದಲ್ಲಿಯೂ ತಮ್ಮ ಮಾತುಗಳ ಮೂಲಕವೇ ಸ್ವಾಮಿಕಾರ್ಯವನ್ನು ಸಾಧಿಸಿಕೊಟ್ಟವರು..
 • ತಾವು ಹೊರಟ ಕಾರ್ಯದಲ್ಲಿ ಸಾವು ನಿಶ್ಚಿತವೆಂಬುದು ಈರ್ವರಿಗೂ ಮೊದಲೇ ತಿಳಿದಿತ್ತು..
 • ಈರ್ವರೂ ತಮ್ಮ ಶತ್ರು ನಾಯಕನಿಂದಲೇ ಹತರಾದವರು..

ಹೋಲಿಕೆ ಎಲ್ಲಿ ?…

 • ಈರ್ವರ ಉದ್ದೇಶಗಳಲ್ಲಿಯೇ ಮಹದಂತರವಿದೆ..
  ರಾಮನ ಮಡದಿ ರಾಮನೊಡನಿರಲೆಂಬುದು ಜಟಾಯುವಿನ ಸದುದ್ದೇಶ..
  ಮಾರಿಚನದ್ದಾದರೂ ಆ ಮಹಾಸತಿಯ ಪಾತಿವ್ರತ್ಯಕ್ಕೆ ಚ್ಯುತಿ ತರುವ, ರಾಮನ ಮಡದಿಯನ್ನು ರಾವಣನ ವಶಗೊಳಿಸುವ ದುರುದ್ದೇಶ..!
 • ಕಾರ್ಯವಿಧಾನಗಳೂ ಸಂಪೂರ್ಣ ಭಿನ್ನ.
  ಜಟಾಯುವಿನದು ಸತ್ಯ ಸಂಗ್ರಾಮವಾದರೆ, ಮಾರೀಚನದು ಪಕ್ಕಾ ವಂಚನೆ..!
 • ಈರ್ವರ ಪ್ರೇರಣಾ ಸ್ರೋತದಲ್ಲಿರುವ  ಅಂತರವನ್ನು ಗಮನಿಸಿ:
  ಜಟಾಯುವಿನದ್ದು ಸ್ವಯಂಪ್ರೇರಣೆ..
  ರಾವಣನಿಂದ ಅಪಹರಿಸಲ್ಪಡುತ್ತಿದ್ದ ಸೀತೆಯ ಆರ್ತನಾದವನ್ನು ಕೇಳಿ ತಾನೇ ತಾನಾಗಿ ರಾವಣನೊಡನೆ ಖಾಡಾಖಾಡಿಯಾಗಿ ಹೋರಾಟಕ್ಕೆ ನಿಂತವನು ಜಟಾಯು.
  ಬಲವಂತಕ್ಕೆ ಬಂದವನು ಮಾರೀಚ..!
  ಎಷ್ಟು ಮಾತ್ರಕ್ಕೂ ತನ್ನ  ಆಜ್ಞೆಯನ್ನು ಪಾಲಿಸಲು ಮಾರೀಚನೊಪ್ಪದಿದ್ದಾಗ, ಕೊನೆಯಲ್ಲಿ ಪ್ರಾಣಭಯವನ್ನೊಡ್ಡುತ್ತಾನೆ ರಾವಣ..
  ಪಾಪಿ ರಾವಣನ ಕೈಯಿಂದ ಸಾಯುವುದಕ್ಕಿಂತ ರಾಮನ ಕೈಯಲ್ಲಿ ಸಾಯುವುದೇ ಮೇಲೆಂದು ಒಲ್ಲದ ಮನಸ್ಸಿನಿಂದ ಹೊರಟುಬಂದವನು ಮಾರೀಚ!

ಅದೆಷ್ಟೇ ಮರೆಮಾಚಿದರೂ ಸುಳ್ಳು ಕೊನೆಗೂ ಸುಳ್ಳಾಗಿಯೇ ಉಳಿಯುತ್ತದೆ..
ಸತ್ಯವಾದರೂ ಕೊನೆಯಲ್ಲಿ ಪರಮಸತ್ಯವಾಗಿಯೇ ವಿರಾಜಿಸುತ್ತದೆ..
ಸಾಯುವ ಕೊನೆಕ್ಷಣದಲ್ಲಿ ಮಾಡಿದ “ಹಾ ಸೀತೆ…!, ಹಾ… ಲಕ್ಷ್ಮಣಾ…!”ಎಂಬ ಮಾರೀಚನ ಉದ್ಗಾರ ಮಿಥ್ಯೆ ಅಲ್ಲವೇ?
ಆ ಮೋಸ ತಾನೇ ಸೀತಾಪಹರಣಕ್ಕೆ ಕಾರಣವಾಗಿದ್ದು?
ಪ್ರಾಣೋತ್ಕ್ರಮಣದ ಚರಮಾವಸ್ಥೆಯಲ್ಲಿಯೂ ರಕ್ತಮಾಂಸಗಳೊಸರುವ ತನ್ನ ಬಾಯಿಯಿಂದ “ಸೀತೆಯನ್ನಾರು ಕದ್ದರು? ಯಾವ ಕಡೆಗೊಯ್ದರು?” ಎನ್ನುವ ಸತ್ಯವನ್ನು ರಾಮನಿಗೆ ಅರುಹಿದವನು ಜಟಾಯು..
ಆ ಸತ್ಯವೇ ಮುಂದೆ ಸೀತೆಯ ಪುನಃಪ್ರಾಪ್ತಿಗೆ ಕಾರಣವಾಯಿತು..
ಜಗತ್ತಿನಲ್ಲಿ ಧರ್ಮಾಧರ್ಮಗಳಲ್ಲಿ ಯಾವ ಅಂತರವಿದೆಯೋ, ಜಟಾಯು-ಮಾರೀಚರ ನಡುವೆ ಅದೇ ಅಂತರವಿದೆ..!
ಜಟಾಯು ಮಾರೀಚರಿಗೆ – ಕೊನೆಗೇನು ಸಿಕ್ಕಿತು? – ಎಂಬುದನ್ನೂ ನಾವು ಚಿಂತಿಸಬೇಕು.

ಧರ್ಮದ ಫಲಕ್ಕೂ ಅಧರ್ಮದ ಫಲಕ್ಕೂ ಅಂತರ ಗೊತ್ತಾಗುವುದಲ್ಲೇ..!
ಪರನಾರೀ ಚೌರ್ಯದ ಕುತ್ಸಿತ ಕಾರ್ಯಕ್ಕೆ ಮಾರೀಚನನ್ನು ಒಪ್ಪಿಸುವಾಗ –
ಕಾರ್ಯ ಸಾಧಿಸಿಕೊಟ್ಟರೆ ಅರ್ಧರಾಜ್ಯ ಕೊಡುವುದಾಗಿಯೂ, ಬರಬಹುದಾದ ಆಪತ್ತುಗಳಲ್ಲಿ ಜೊತೆಗಿದ್ದು ರಕ್ಷಿಸುವುದಾಗಿಯೂ’ಭರವಸೆ‘ಯಿತ್ತ ರಾವಣ, ಕಾರ್ಯವಾದ ನಂತರ ಮಾರೀಚನ ಕಡೆಗೆ ತಿರುಗಿಯೂ ನೋಡಲಿಲ್ಲ!
ಅರ್ಧ ರಾಜ್ಯದ ಮಾತು ಹಾಗಿರಲಿ, ಮಾರೀಚ ಸತ್ತುಬಿದ್ದದ್ದೆಲ್ಲಿ ಎಂದು ನೋಡುವ ಗೋಜಿಗೂ ರಾವಣ ಹೋಗುವುದಿಲ್ಲ..!
ಆಪತ್ತುಗಳಲ್ಲಿ ರಕ್ಷಿಸುವೆನೆ೦ದವನು ಕೊನೆಯ ಪಕ್ಷ ಮಾರೀಚನ ಶರೀರಕ್ಕೆ ಆಗಬೇಕಾದ ಅಂತ್ಯಸಂಸ್ಕಾರಗಳನ್ನೂ ಮಾಡಿಸಲಿಲ್ಲ!
ಸೀತೆಯೆಂದೂ ರಾವಣನ ವಶವಾಗಲಿಲ್ಲ. ಆದರೆ, ಮಾರೀಚನ ಶರೀರ ನಾಯಿ-ನರಿಗಳ ಪಾಲಾಯಿತು.

ಆದರೆ,

ಜಟಾಯುವಿಗೆ ಪ್ರಾಪ್ತವಾದ ದಿವ್ಯಮೃತ್ಯು ಭೂಮಂಡಲದ ಇತಿಹಾಸದಲ್ಲಿಯೇ ಯಾವ ಸತ್ಪುರುಷರಿಗೂ ಪ್ರಾಪ್ತವಾಗಿರಲಾರದು.!
ರಾವಣನ ಖಡ್ಗ ಪ್ರಹಾರಕ್ಕೆ ತನ್ನ ಪಕ್ಷಗಳನ್ನು(ರೆಕ್ಕೆಗಳನ್ನು)-ಪಾಶ್ವ೯ಗಳನ್ನು –ಪಾದಗಳನ್ನು ಕಳೆದುಕೊಂಡು ಧರೆಗುರುಳಿದ ಜಟಾಯುವಿಗೆ ಪ್ರಥಮ ಚಿಕಿತ್ಸೆಯ ರೂಪದಲ್ಲಿ ಲಭಿಸಿದ್ದು ಲೋಕಮಾತೆ ಸೀತೆಯ ಮಡಿಲು..!
ಶೈತ್ಯೋಪಚಾರ ರೂಪದಲ್ಲಿ ಸಿಂಪಡಿಸಲ್ಪಟ್ಟಿದ್ದು ಆ ವಾತ್ಸಲ್ಯಮೂರ್ತಿಯ ಕಣ್ಣೀರು..!
ಮರಣವನ್ನೇ ಮಹೋತ್ಸವವನ್ನಾಗಿ ಮಾಡಿಕೊಂಡ ಆ ಮಹಾವೀರ, ಅಮರನಾಗಿದ್ದು ಶ್ರೀರಾಮನ ಚರಣಗಳಲ್ಲಿ..!
ಮಿಕ್ಕೆಲ್ಲಾ ಅಂಗಗಳೂ ಛಿನ್ನವಿಚ್ಚಿನ್ನವಾಗಿದ್ದರೂ, ಅಳಿದುಳಿದ ನಾಲಿಗೆಯೊಂದರಿಂದಲೇ ಶ್ರೀರಾಮನಿಗೆ ಅನುಪಮ ಸೇವೆ ಸಲ್ಲಿಸಿದ ಅದ್ಭುತ “ಚೇತನ“..!
ಸಾಯುವ ಗಳಿಗೆಯಲ್ಲಿಯೂ ಮಾಡಿದ್ದು ರಾಮಕಾರ್ಯ, ನೋಡಿದ್ದು ಶ್ರೀರಾಮನ ಮುಖಕಮಲ..!
ಬ್ರಹ್ಮಾಂಡದ ಒಡೆಯನ ಕರಕಮಲಗಳಿಂದಲೇ ಅಂತ್ಯಸಂಸ್ಕಾರ..
ದಶರಥನಿಗೂ ಸಿಗದ ಭಾಗ್ಯವದು…!

ತ್ರೇತಾಯುಗದ ನಂತರ, ದ್ವಾಪರಯುಗ ಕಳೆದು, ಕಲಿಯುಗ ಬಂದಿದೆ..
ಇಂದಿನ ಇಪ್ಪತ್ತೊಂದನೇ ಶತಮಾನದಲ್ಲಿಯೂ ಮಾರೀಚ-ಜಟಾಯುಗಳು ಮತ್ತೊಮ್ಮೆ ಹುಟ್ಟಿ ಬಂದಿದ್ದಾರೆ..!
ತಾವೂ ಸತ್ತು ಸಾವಿರಾರು ಜನರನ್ನೂ ಸಾಯಿಸುವ, ದೇಶವನ್ನೇ ನೋಯಿಸುವ ಭಯೋತ್ಪಾದಕರಲ್ಲಿ ಮಾರೀಚನ ಆವೇಶವಿದೆ..!!
ತ್ಯಾಗ ಒಳಿತಾದರೂ ಧ್ಯೇಯ ಕೆಡುಕಾದಾಗ, ಅದರ ಫಲ ವಿಶ್ವವಿಪ್ಲವವೇ ಹೊರತು ವಿಶ್ವಶಾಂತಿಯಲ್ಲ..!

ಇತ್ತೀಚೆಗೆ ಮುಂಬೈಯಲ್ಲಿ ನರಮೇಧವನ್ನು ನಡೆಸಿ ಕಮಾಂಡೋಗಳಿಂದ ಹತರಾದ ಭಯೋತ್ಪಾದಕರಿಗೆ ಅಂತ್ಯ ಸಂಸ್ಕಾರ ಮಾಡಲು ಅವರ ಯಾವೊಬ್ಬ ಬಂಧುವೂ ಮುಂದೆ ಬರಲಿಲ್ಲ.
ಮಾತ್ರವಲ್ಲ, ಯಾವ ದೇಶಕ್ಕಾಗಿ ಅವರುಗಳು ಪ್ರಾಣತೆತ್ತರೋ – ಆ ಪಾಕಿಸ್ತಾನವೇ ಅವರನ್ನು ’ತಮ್ಮವರಲ್ಲ!’ ಎಂದುಬಿಟ್ಟಾಗ – ಅನಾಥ ಮಾರೀಚನ ನೆನಪಾಗದಿರುತ್ತದೆಯೇ…!?

ದೇಶಕ್ಕಾಗಿ ಹುತಾತ್ಮರಾಗುವ ವೀರ ಸೈನಿಕರಲ್ಲಿ ಜಟಾಯುವಿನ ಚೇತನವಿದೆ..
ತಮ್ಮ ಜೀವವನ್ನು ತೆತ್ತು ಅಸಂಖ್ಯ ಜೀವಗಳನ್ನು ಉಳಿಸುವವರಿವರು..
ಭಾರತಮಾತೆಯ ಚರಣಗಳನ್ನು ತಮ್ಮ ಪ್ರಾಣಗಳಿಂದ ಪೂಜಿಸುವವರಿವರು..!
ಭಾರತಮಾತೆಯ ಭುಜಗಳಾಗಬೇಕಾದ ಯುವಕರೇ….!!
ನಿಮ್ಮ ಹೃದಯದೇವತೆಗಳಾಗಬೇಕಾದವರಿವರು..!! ಹೊರತು – ಸಡಿಲ ಚಾರಿತ್ರ್ಯದ ಚಿತ್ರ ತಾರೆಗಳಲ್ಲ..!

ನಿಮ್ಮ ಅಂತರಂಗವು ’ಮಾರೀಚನ ಮಾಯಾಮೃಗ ಸುಳಿದಾಡುವ ಕಗ್ಗಾಡಾ’ಗದಿರಲಿ.
ಜಟಾಯು ಚಿರಾಯುವಾಗಿ ವಿಹರಿಸುವ ಅನಂತ ಆಕಾಶವಾಗಲಿ.

ರಾಮಬಾಣ: ಬದುಕಿದರೆ ಶ್ರೀರಾಮನಂತೆ ಬದುಕಬೇಕು(ರಾವಣನಂತೆ ಅಲ್ಲ..!) ಸತ್ತರೆ ಜಟಾಯುವಿನಂತೆ ಸಾಯಬೇಕು( ಮಾರೀಚನಂತೆ ಅಲ್ಲ..!)

21 Responses to ಸಾಯಲು ಕಲಿಯೋಣವೇ..?

 1. Raghavendra Narayana

  ಗುರುಗಳೇ, ಲೇಖನ ಮಾರ್ಮಿಕವಾಗಿದೆ..

  ಚಿ೦ತನೆ ಮಾಡುವ ವಿಚಾರಗಳು ತು೦ಬಾ ಇವೆ ಈ ಲೇಖನದಲ್ಲಿ..
  ಕರ್ಮ ಫಲದ ಮರ್ಮ ಸ್ಪಷ್ಟವಾಗಿದೆ..

  ಜಟಾಯುವಿನ೦ತೆ ಧರ್ಮಕ್ಕಾಗಿ ಹೋರಾಡುವ – ಪರಮ ಪುರುಷನಲ್ಲಿ ಪುರುಷ ಸಿ೦ಹನಾಗಿ ಲೀನವಾಗುವ..
  ಜಟಾಯುವಿನ ಆಶೀರ್ವಾದವಿರಲಿ – ಅವನ ಆಶೀರ್ವಾದ ಪಡೆಯುವ ಯೋಗ್ಯತೆ ಬರಲಿ.

  [Reply]

 2. Sathya Bhat

  Hare raama. Maricha Rman kaiyendale sattidu. Hagadare. sree Raama devarallave? devara kaiyenda sattare adu yanta savu?

  [Reply]

 3. Anuradha Parvathi

  ಹರೆ ರಾಮ ಗುರುಗಳೆ,
  ಇಬ್ಬರ ಹೊಲಿಕೆ ಮಾಡಿದ ರೀತಿ ಮನ ಮುಟ್ಟಿತು. ಆದರೆ ನಮ್ಮಲ್ಲಿ ಬಹಳಷ್ಠು ಜನ ಜಠಾಯುವೂ ಅಲ್ಲ ಮಾರೀಚನೂ ಅಲ್ಲ. ಯಡಬಿಡಂಗಿಗಳು. ಇನ್ನೊ ೧೦೦೦ ಜನ್ಮ ಬೇಕೆನೊ ಜಠಾಯುವಗಲು. ಮಾರೀಚ ಮಾತ್ರ ಆಗಬಾರದೆಂದು ಆ ದೇವರಲ್ಲಿ ಪ್ರಾರ‍್ಥನೆ.

  [Reply]

 4. Vishwa M S hosanagara

  ಬಂದುಗಳೇ ….ಆಲೋಚಿಸಿ ..ಇನ್ನಾದರು ..ನಮ್ಮಲ್ಲಿರುವ ಮಾರಿಚರನ್ನ ಮಟ್ಟ ಹಾಕೋಣ …ಜಟಾಯು ವಾಗಿಸೋಣ

  [Reply]

 5. Raghavendra Narayana

  ಗುರುಗಳೇ, ಕಳೆದ ಚಾತುರ್ಮಾಸ್ಯದ ಪ್ರವಚನದಲ್ಲಿ ಈ ವಿಷಯ ಬ೦ದಿತ್ತು..

  ರಾಮ ಜಟಾಯುವಿನ ಉತ್ತರ ಕ್ರೀಯೆ ಮಾಡುತ್ತ ಒ೦ದು ಮಾತು ಹೇಳುತ್ತಾನೆ – “ನನ್ನ ಲೋಕದಲ್ಲಿ ನಿನಗೆ ಉನ್ನತ ಸ್ಥಾನ ಸಿಗಲಿ..” ಎ೦ದು, ಸ್ಥಿತಿ ಸ೦ರಕ್ಷಕ ಮೋಕ್ಷದಾಯಕ ಪರಮ ಪುರುಶೋತ್ತಮ ಪರಮ ಕರುಣಾಕರ ನಾರಯಣನ ಸಾಕ್ಷತ್ ದರ್ಶನವಿದೆ.. ದಾರ್ಶನಿಕ ವಾಲ್ಮೀಕಿಗೂ ಗುರುಗಳಿಗೂ ಶಿರ ಸಾಷ್ಠಾ೦ಗ ಪ್ರಣಾಮಗಳು..

  ಗುರುಗಳೇ, ದಯವಿಟ್ಟು ಆ ಶ್ಲೋಕ ಮತ್ತು ಅರ್ಥವನ್ನು ತಿಳಿಸುವಿರಾ?

  [Reply]

 6. raghavendra hegde

  matte ade prashne jeevarella atmana amshavaadamele namma karmagalige adikari naavu maatrave?
  hagiddare janmantaragala karma nirdeshana yariMda?
  vadakkai mareechaninda taane jatayuvi pramukyate baruvudu?
  ella kalakku valitu keduku ittallave?
  valitu keduku onde naanyada eradu muka taane , eradu muka iruva naanya ttane chalaavaneyaaguvudu!!!!

  [Reply]

  Sri Samsthana Reply:

  ಕೇವಲಾತ್ಮವೇ ಅಗಿ ನಿ೦ತಾಗ ಕರ್ಮಬನ್ಧ ಇಲ್ಲವೇ ಇಲ್ಲ. ಅದರೆ ಜೀವ ಸ್ವರೂಪದಲ್ಲಿ ಇರುವ ವರೆಗೆ ಕರ್ಮದ ಫಲ ಇದ್ದೇ ಇದೆ. ನಮ್ಮ ತಪ್ಪುಗಳಿಗೆ ನಾವೇ ಹೊಣೆಗಾರರು.ಅನ್ಯಮಾರ್ಗವಿಲ್ಲ.

  ಒಳಿತು ಕೆಡುಕು ಸೇರಿಯೇ ಜಗತ್ತಾಗಿದೆ ಎ೦ಬುದು ನಿಜವೇ ಅದರೂ ನಾವು ಆಯ್ದುಕೊಳ್ಳಬೇಕಾದುದು ಒಳಿತನ್ನೇ ಅಗಿದೆ.

  ರಾಮನಿದ್ದಂದು ರಾವಣನೊಬ್ಬನಿರ್ದನಲ
  ಭೀಮನಿದ್ದಂದು ದುಶ್ಶಾಸನನದೋರ್ವನ್ |
  ಈ ಮಹಿಯೊಳನ್ಯಾಯಕಾರಿಯಿಲ್ಲದುದೆಂದು
  ರಾಮಭಟನಾಗು ನೀ – ಮಂಕುತಿಮ್ಮ ||

  [Reply]

 7. vdaithota

  Manuja kevala “devara atada bombe” allave..???!!!!! Manushya swabhava huttinindale bandiddu beledante vikasagolluvudu tane..??!!! Olitu / keduku yavude agali tumbidavanu Devane tane…??!!! Hagiruvaga, parinamakke badhanu avane allave?????!!!!!!! anda mele ee kaladalli Mareechare jasti endare Devanige kedukina mele preeti jasti ende artha..???!!!!!

  [Reply]

  Sri Samsthana Reply:

  ಈ ವಾದಕ್ಕೆ ಮೂಲ “ ತೇನ ವಿನಾ ತೃಣಮಪಿ ನ ಚಲತಿ ” ಎಂಬ ವಾಕ್ಯ . ದೇವರ ಹೊರತಾಗಿ ಹುಲ್ಲು ಕಡ್ಡಿಯೂ ಚಲಿಸದು ಎಂಬುದು ಅದರ ಅರ್ಥ.
  ಉದಾಹರಣೆ;- ಇ೦ಧನದ ಹೊರತು ವಾಹನ ಚಲಿಸದು.ಆದರೆ ವಾಹನವನ್ನು ದೇವಾಲಯಕ್ಕೆ ಬೇಕಾದರೂ ತೆಗೆದುಕೂ೦ಡು ಹೊಗಬಹುದು,ಮದ್ಯದ ಅ೦ಗಡಿಗೆ ಬೇಕಾದರೂ ತೆಗೆದು ಕೊ೦ಡು ಹೊಗಬಹುದು.ದೊಡ್ಡ ಅಪಾಘಾತವೇ ಘಟಿಸಿಬಿಡಬಹುದು .ಇದಕ್ಕೆಲ್ಲ ಹೊಣೆ ನೆಡೆಸುವವನೇ ಹೊರತು ಇ೦ಧನವಲ್ಲ.
  ಹಾಗೆಯೇ ನಮ್ಮ ಬದುಕೆ೦ಬ ವಾಹನವನ್ನು ನಡೆಸಲು ಇ೦ಧನದ ಹಾಗೆ ಶಕ್ತಿ ನೀಡುವವನು ದೇವರು . ಬದುಕನ್ನು ಹೇಗೆ ನಡೆಸಬೇಕು, ಎತ್ತ ನಡೆಸಬೇಕು ಎ೦ಬುದೆಲ್ಲ ನಮಗೆ ಸೇರಿದ್ದು. ಎಲ್ಲವಕ್ಕೂ ದೇವರೇ ಹೊಣೆಯಾಗುವುದಾದರೆ ಸರಿ-ತಪ್ಪುಗಳು, ಪುಣ್ಯ-ಪಾಪಗಳು ಮತ್ತು ಅದಕ್ಕೆ ತಕಂತೆ ಶಿಕ್ಷೆ-ರಕ್ಷೆಗಳಿಗೆ ಎಡೆಯೆಲ್ಲಿ ?

  [Reply]

 8. shobha lakshmi

  ಗುರುದೇವಾ…ಈ ಲೇಖನ ತು೦ಬಾ ಚೆನ್ನಾಗಿದೆ..ಆತ್ಮಾವಲೋಕನ ಮಾಡಬೇಕಾಗಿದೆ..ನಾವು ಜಟಾಯು ವಾ ಅಲ್ಲ ಮಾರೀಚರಾ ಎ೦ದು….ಇದುವರೆಗೆ ಯಾರೊಬ್ಬರೂ ರಾಮಾಯಣ ಮಹಾಕಾವ್ಯವನ್ನು ಹೀಗೆ ನಮ್ಮ ಬದುಕಿಗೆ ಆದರ್ಷವಾಗಿ ಹೋಲಿಕೆ ಮಾಡಿ ವಿಮರ್ಷೆಗೆ ಹಚ್ಚಿಲ್ಲ….ಬಹುಷ ರಾಮಾಯಣ ದ ಎಲ್ಲ ಪಾತ್ರವನ್ನು ವ್ಯಕ್ತಿತ್ವವನ್ನು ನಮ್ಮೊ೦ದಿಗೆ ಹೋಲಿಸಿಕೊಡು ನಮ್ಮನ್ನು ತಿದ್ದಿಕೊಳ್ಳಬಹುದಲ್ಲವೆ??

  [Reply]

 9. shobha lakshmi

  ಗುರುದೇವಾ..ನನ್ನ ಕೆಲವು ಪ್ರಶ್ಣೆ..

  ೧) ದಯಾಮರಣ ಎ೦ದರೇನು?? ಇದು ಧರ್ಮಸಮ್ಮತವೆ??
  ೨)ಇಛ್ಛಾಮರಣ ಎ೦ದರೆ? ಅದು ಎ೦ತವರು ಅರ್ಹರು?
  ೩) ಆತ್ಮಹತ್ಯೆ ಎಷ್ತರಮಟ್ಟಿಗೆ ಪಾಪತ್ವ?? ಆತ್ಮಹತ್ಯೆಗೆ ಒಳಗಾದ ಜೀವಕ್ಕೆ ಮುಕ್ತಿ ಇಲ್ಲವೆ??ಆ ಜೀವ ಮು೦ದೇನಾಗುವುದು?
  ೪)ನಮ್ಮ ಧರ್ಮ ಶಾಸ್ತ್ರದಲ್ಲಿ ಎ೦ತಹ ಸ೦ಧರ್ಬದಲ್ಲಿ ಹೇಗೆ ದೇಹತ್ಯಾಗ ಮಾಡಬಹುದೆ೦ದಿದೆ??
  ೫) ಶ್ರೀರಾಮ,,ಶ್ರೀಕ್ರಿಶ್ಣ ಪರಮಾತ್ಮರ ಮತ್ತು ಇನ್ನು ಕೆಲವು ಮಹನೀಯರ ನಿರ್ವಾಣ ಯಾವರೀತಿದು??

  ಹರೇರಾಮ..

  [Reply]

  Sri Samsthana Reply:

  ಸಾವೆ೦ಬುದು ಬದುಕಿಗಿ೦ತಲೂ ದೊಡ್ಡ ವಿಷಯವಾಗಿದೆ..
  ಇನ್ನೊ೦ದು ಲೇಖನದಲ್ಲಿಯೇ ಈ ಕುರಿತು ಚರ್ಚೆ ಮಾಡೋಣ..

  [Reply]

 10. Suma Nadahalli

  ರಾಮನಿಗಾಗಿ ಜೀವನವನ್ನೇ ಮುಡಿಪಾಗಿಟ್ಟು ಹೋರಾಡಿದ್ದಕ್ಕೆ
  ಜಟಾಯು ಮತ್ತು ಹಲವಾರು ಕಪಿಗಳಿಗೆ ಸಿಕ್ಕಿದ್ದು
  ವೀರ ಮರಣ(ಮೋಕ್ಷ ). ಆದರೆ ಹಲವಾರು ಕಪಿಗಳಿಗೆ ಅವರ ಕೆಲಸ
  ಎಲ್ಲೂ ಗುರುತಿಸದೆ ಒಟ್ಟು ಕಪಿ ಸೈನ್ಯ ಎಂದು ಗುರುತಿಸಲ್ಪಟ್ಟಿತು….

  ನಮ್ಮಲ್ಲೂ ಹಾಗೆ ಆಗುತ್ತದೆ ಜೀವನವನ್ನೇ ಮುಡಿಪಾಗಿಟ್ಟು
  (ಜಟಾಯುವಿನಂತೆ ) ಕೆಲಸ ಮಾಡಿದವರಿಗೆ,
  ಯಾರೂ ಗುರುತಿಸದೆ ಎಲ್ಲರಂತೆ ಒಂದು ಜೀವನ ……….(ಮರಣದ ನಂತರ ಇರಬಹುದೇನೋ)…
  ಮನಸ್ಸಿನ/ಆತ್ಮದ ಸಂತೃಪ್ತಿ ಒಳ್ಳೆ ಕೆಲಸ ಮಾಡುವುದು ….

  ಎಲ್ಲರ ತ್ಯಾಗ ಜೀವನಕ್ಕೆ ಅಸ್ಟೊಂದು ಬೆಲೆ ಇಲ್ಲ ……
  ಎಲ್ಲೋ ಕೆಲವರಿಗೆ ಮಾತ್ರ ಆ ಬೆಲೆ ……………
  “ಪುನಃ ಅದು ನಮ್ಮ ಕರ್ಮಾನುಸಾರ”….!!!!!!!!!

  [Reply]

  Sri Samsthana Reply:

  ಎಲ್ಲರೂ ಗುರುತಿಸ ಬೇಕೆ೦ದಿಲ್ಲ ಗುರುತಿಸಬೇಕಾದವರು ಗುರುತಿಸಿದರಾಯಿತು..
  ಗುರುವಿಗೆ ಗುರುತಾಗದುದೇನಿಲ್ಲ..

  [Reply]

 11. nandaja haregoppa

  ಹರೇರಾಮ,

  ಬದುಕಲು ಕಲಿಯಿರಿ {art of living } ಬದುಕುವುದನ್ನು ಕಲಿಸಿಕೊಡ್ತು, ಆದರೆ ಸಾಯಲು ಕಲಿಯಿರಿ {art of dying} ಎಷ್ಟು ಅರ್ಥಗರ್ಭಿತ, ಇದರಲ್ಲಿ ಬದುಕುವದರಲ್ಲಿ ಸಾವು ಮತ್ತು ಸಾವಿನಲ್ಲು ಮುಂದಿನವರಿಗೆ ಬೆಳಕು (ಬದುಕು) ಇದ್ದು ಅನಿಸ್ತು. ಇಂತ ಬದುಕು ಮತ್ತು ಸಾವು ಪದೆಯಲು ನಾವು “Q” ನಲ್ಲಿ ಇದ್ವಾ? ಇಲ್ಲದ್ದರೆ “ಬನ್ನಿ, ಸಾಧಿಸೋಣ!” ಗುರುಗಳ ಕೃಪೆಯಿಂದ.

  [Reply]

 12. Mohan Bhaskar

  ಅಪೂರ್ವ ಚಿಂತನೆ, ದಿವ್ಯ ನೀತಿ, ಮನನೀಯವಾಗಿದೆ ಗುರುಗಳೇ…

  [Reply]

  Raghavendra Narayana Reply:

  We are missing your comments..
  .
  Shri Gurubhyo Namaha

  [Reply]

 13. Raghavendra Narayana

  Maaricha’s loyalty is towards person, Jatayu’s loyalty is towards concept.
  We need to choose right person and right concept before becoming loyal.
  Loyal to right concept is safer than loyal to a person I think. Again we can become loyal to person if that person is loyal to concept.. looks like I am making it complex.

  Any thoughts?

  [Reply]

 14. Jeddu Ramachandra Bhat

  ಪರಮ ಪೂಜ್ಯರಿಗೆ ಸಾಷ್ಟಾ೦ಗ ಪ್ರಣಾಮಗಳು,

  “ಹರೇ ರಾಮ” ದಲ್ಲಿ ಜಟಾಯು, ಮಾರೀಚ ಇಬರಿಬ್ಬರ ಬಗ್ಗೆ ತುಲನಾತ್ಮಕ ವಿವರಣೆಯನ್ನು ಓದಿದೆ. ಒ೦ದು ಕ್ಷಣ ಸರ್ವಧಾರಿ ಚಾತುರ್ಮಾಸ್ಯದ ದಿವಸಗಳ ನೆನಪು ಮರುಕಳಿಸಿತು. ರಾಮಾಯಣ ಪ್ರವಚನಗಳ ಸ೦ದರ್ಭದಲ್ಲಿ ತಾವು ನುಡಿದ ಮಾತು – “ಇಡಿಯ ರಾಮಾಯಣ ಪ್ರವಚನಗಳ ಸ೦ದರ್ಭದಲ್ಲಿ ನಿಸ್ವಾರ್ಥ ಸೇವೆ ಮಾಡಿದವನೆ೦ದರೆ ಜಟಾಯು ಮಾತ್ರ” – ಅ೦ದಿದ್ದಿರಿ. ಬಹುಶಃ ಅ೦ತಹ ಒಬ್ಬ ನಿಸ್ವಾರ್ಥ ಜೀವಿ ಹಿ೦ದೆ೦ದೂ ಇದ್ದಿರಲಾರ; ಮು೦ದೆ೦ದೂ ಬರಲಾರ.

  ಜಟಾಯು – ಮಾರೀಚ ಎರಡೂ ಪಾತ್ರಗಳೂ ಎರಡು ಸಮಾನಾ೦ತರ ರೇಖೆಗಳು, ಎದೆ೦ದೂ ಒ೦ದನ್ನೊ೦ದು ಸ೦ಧಿಸಲಾರವು. ಜಟಾಯು “ಪಕ್ಷಿ”ಯಾಗಿ ಮನುಷ್ಯತ್ವ ತೋರಿ ಕರ್ತವ್ಯಪಾಲನೆ ಮಾಡಿ ಅಸುನೀಗಿದ. ಮಾರೀಚ “ಮೃಗ”ವಾಗಿ ರಾಕ್ಷಸತ್ವವನ್ನು ತೋರಿ ಅಸುನೀಗಿದ. ವಿಶೇಷವೆ೦ದರೆ, ಇಬ್ಬರೂ “ಪರಸತಿಯನ್ನು ಬಯಸಿದ” ರಾವಣನ ಸ೦ಹಾರಕ್ಕೆ ಸಹಾಯಕರಾದರು !

  ಮೋಸ, ವ೦ಚನೆ, ಸುಲಿಗೆ, ಚಾರಿತ್ರ್ಯಹನನ ನಡೆಯುತ್ತಿರುವ ಇ೦ದಿನ ದಿನಗಳಲ್ಲಿ ಜಟಾಯುನ೦ತಹವರು, ಹೆಚ್ಚೇಕೆ, ಮಾರೀಚನಷ್ಟೂ ಸ್ವಾಮಿನಿಷ್ಠೆ ಇರುವವರು ಸಿಗಲಾರರು.

  ನಿಟ್ಟುಸಿರು ಬಿಡಬೇಕಷ್ಟೆ – ಆದರೂ ಕವಿವಾಣಿ ನೆನಪಿಗೆ ಬರುತ್ತಿದೆ – “ನಡೆ ಮು೦ದೆ ನಡೆ ಮು೦ದೆ ನುಗ್ಗಿ ನಡೆ ಮು೦ದೆ, ಕುಗ್ಗದೆಯೆ ಬಗ್ಗದೆಯೆ ನುಗ್ಗಿ ನಡೆ ಮು೦ದೆ”.

  ಮನಸಿಗನ್ನಿಸಿದ್ದನ್ನು ಬರೆದಿದ್ದೇನೆ, ತಪ್ಪುಗಳಿದ್ದರೆ ಕ್ಷಮಿಸಿ.

  “ಹರೇರಾಮ”
  ಜೆಡ್ಡು ರಾಮಚ೦ದ್ರ ಭಟ್ಟ

  ** ಬೆ೦ಗಳೂರಿನಲ್ಲಿ ರಾಮಾಯಣ ಪ್ರವಚನ ಮು೦ದುವರಿಸುವ೦ತೆ ಬಿನ್ನಹ. ಚಾತಕ ಪಕ್ಷಿಯ೦ತೆ ಕಾಯುತ್ತಿದ್ದೇನೆ.

  [Reply]

  Jeddu Ramachandra Bhat Reply:

  Small Correction.
  ರಾಮಾಯಣ ಪ್ರವಚನಗಳ ಸ೦ದರ್ಭದಲ್ಲಿ ತಾವು ನುಡಿದ ಮಾತು – “ಇಡಿಯ ರಾಮಾಯಣದಲ್ಲಿ ನಿಸ್ವಾರ್ಥ ಸೇವೆ ಮಾಡಿದವನೆ೦ದರೆ ಜಟಾಯು ಮಾತ್ರ”

  [Reply]

 15. Jayashree Neeramoole

  “ಬದುಕಿದರೆ ಶ್ರೀರಾಮನಂತೆ ಬದುಕಬೇಕು(ರಾವಣನಂತೆ ಅಲ್ಲ…) ಸತ್ತರೆ ಜಟಾಯುವಿನಂತೆ ಸಾಯಬೇಕು (ಮಾರಿಚನಂತೆ ಅಲ್ಲ…)”

  “ಶ್ರೀರಾಮ ನಮ್ಮೆದೆರುಗಿದ್ದಾನೆ. ಎಲ್ಲರೂ ಒಂದಾಗಿ ಬನ್ನಿ….. ಶ್ರೀರಾಮನಂತೆ ಬದುಕೋಣ……. ಸತ್ತರೆ ರಾಮನ ಮಡಿಲಲ್ಲಿ…..”

  [Reply]

Leave a Reply

Highslide for Wordpress Plugin