LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಹರಿದುಬರಲಿ ಹಣ ಸರಿ ದಾರಿಯಲ್ಲಿ….

Author: ; Published On: ರವಿವಾರ, ಫೆಬ್ರವರಿ 7th, 2010;

Switch to language: ಕನ್ನಡ | English | हिंदी         Shortlink:

||ಹರೇರಾಮ||

|| ಯೋರ್ಥೇ ಶುಚಿಃ ಸ ಶುಚಿಃ ನ ಮೃದ್ವಾರಿ ಶುಚಿಃ ಶುಚಿಃ ||

ವ್ಯಕ್ತಿ ಶುದ್ಧನಾಗುವುದು ಸಾಬೂನು, ನೀರುಗಳಿಂದಲ್ಲ, ಹಣದ ವಿಷಯದಲ್ಲಿ ಯಾರು ಶುದ್ಧನೋ ಅವನು ಮಾತ್ರವೇ ನಿಜವಾಗಿಯೂ ಶುದ್ಧನು..!!

ಭಾಗ್ಯದ ಲಕ್ಷ್ಮಿ ಬಾರಮ್ಮ..

ಭಾಗ್ಯದ ಲಕ್ಷ್ಮಿ ಬಾರಮ್ಮ..

ಶ್ರೀಮಂತರೊಬ್ಬರ ಮನೆಯಲ್ಲಿ ಸಂತರೊಬ್ಬರ ಶುಭಾಗಮನವಾಗಿತ್ತು.

ಸಂಭ್ರಮದ ಸ್ವಾಗತ, ವೈಭವದ ಪಾದಪೂಜೆಯ ನಂತರ ಸಮೃದ್ಧವಾದ ಭಿಕ್ಷೆ ಆ ಮನೆಯಲ್ಲಿ ನೆರವೇರಿತು..

ಅದು ಯಾವ ಮಾಟವೋ, ಭಿಕ್ಷೆಯನ್ನು ಸ್ವೀಕರಿಸಿದ ಸಂತ ಮನೆಯಿಂದ ಹೊರಡುವಾಗ ಬೆಳ್ಳಿಯ ತಟ್ಟೆಯೊಂದನ್ನು ಕದ್ದು ಜೊತೆಗೊಯ್ಯುತ್ತಾನೆ..!!!

ಬಲುದೂರ ಸಾಗಿದ ಮೇಲೆ, ಬಲುಹೊತ್ತು ಕಳೆದ ಮೇಲೆ ಉದರದಲ್ಲಿದ್ದ ಅನ್ನ ಕರಗಿ ಶುಭವಾದ ಹೊಸ ಅನ್ನ ಪ್ರವೇಶಿಸಿದ ಮೇಲೆ..ಇದ್ದಕ್ಕಿದ್ದಂತೆ ಸಂತನಿಗೆ ಎಚ್ಚರವಾಯಿತು.

“ಅರೇ ಈ ಕಳ್ಳಬುದ್ಧಿ ನನಗ್ಯಾಕೆ ಬಂತು..!!?? ಎಲ್ಲಿಂದ ಬಂತು..!!?”

ಕೊಂಚ ಚಿಂತಿಸುವಷ್ಟರಲ್ಲಿ ಶ್ರೀಮಂತನ ಮನೆಯ ಅನ್ನದ ಪ್ರಭಾವವೆಂದು ಸ್ಫುರಿಸಿತು..

ಒಡನೆಯೇ ಆತನ ಮನೆಗೆ ಧಾವಿಸಿದ ಸಂತ ಬೆಳ್ಳಿಯತಟ್ಟೆಯನ್ನು ಆತನಿಗೆ ಮರಳಿಸಿ ಮತ್ತೆ ಪ್ರಶ್ನಿಸುತ್ತಾನೆ..

“ನಿಜ ಹೇಳು ನಿನ್ನ ಈ ಸಂಪತ್ತು ಸಂಪಾದನೆಯಾದ ಮಾರ್ಗವಾವುದು..?”

ನಿಜವಾಗಿಯೂ ಕಳ್ಳತನದ ಮಾರ್ಗದಲ್ಲಿ ಸಂಪಾದಿಸಿದ ಸಂಪತ್ತಾಗಿದ್ದಿತು ಅದು..!!

ದುರ್ಮಾಗ೯ದಲ್ಲಿ ಸಂಪಾದಿಸಿದ ಹಣದ ದುಷ್ಪ್ರಭಾವ ಅನ್ನದ ಮೂಲಕ ತನು ಮನ ಜೀವನಗಳ ಮೇಲೆ ಎಷ್ಟಾಗಬಹುದೆಂಬುದಕ್ಕೆ ಇದೊಂದು ದೃಷ್ಟಾಂತ..!

ಎಂದೋ ಒಮ್ಮೆ ಉಂಡ ಸಂತನ ಮನಸ್ಸೇ ಇಷ್ಟು ಕಲುಷಿತವಾಗಬೇಕಾದರೆ ನಿತ್ಯ ಅದನ್ನೇ ಉಣ್ಣುವವರ ಮನಸ್ಥಿತಿ – ಪರಿಸ್ಥಿತಿ ಏನಿರಬಹುದು..!!??

ನಮ್ಮ ಮಠದಲ್ಲಿ ತುತ್ತೆತ್ತುವ ಮೊದಲು ಪರಂಪರೆಯಿಂದ ಪಠಿಸುವ ಒಂದು ಶ್ಲೋಕ ಹೀಗಿದೆ..

ಆಹಾರಾರ್ಥಂ ಕರ್ಮ ಕುರ್ಯಾತ್ ಅನಿಂದ್ಯಮ್ |

ಕುರ್ಯಾತ್ ಆಹಾರಂ ಪ್ರಾಣ ಸಂರಕ್ಷಣಾರ್ಥಮ್ ||

ಪ್ರಾಣಾಃ ರಕ್ಷ್ಯಾಃ ತತ್ವಜಿಜ್ಞಾಸನಾರ್ಥಮ್ |

ತತ್ವಂ ಜಿಜ್ಞಾಸ್ಯಂ ಯೇನ ಭೂಯೋ ನ ದುಃಖಮ್ ||

ಜೀವಿಸುವ ಸಕಲ ಜೀವಿಗಳ ಜೀವನಕ್ಕೆ ಸಂಕಲ್ಪವೊಂದೇ..

ದುಃಖಗಳು ದೂರಾಗಬೇಕು..ಸುಖಸಂಪೂರ್ಣವಾಗಿರಬೇಕು ಬದುಕು..

ಸುಖಸಂಪೂರ್ಣತೆ ತತ್ವಜ್ಞಾನದಿಂದ..

ತತ್ವಜ್ಞಾನ ಉಂಟಾಗುವುದು ಮಾನವಶರೀರದಲ್ಲಿ..

ದೇವತೆಗಳು ಕೂಡಾ ತತ್ವಜ್ಞಾನವನ್ನು ಪಡೆಯಬೇಕೆಂದರೆ ಮಾನವರಾಗಿಯೇ ಹುಟ್ಟಿಬರಬೇಕಾಗುತ್ತದೆ..!

ಶರೀರ ಉಳಿಯಲು ಆಹಾರ ಬೇಕೇ ಬೇಕು..

ಆಹಾರ ಸಂಪಾದನೆ ಧನ ಸಂಪಾದನೆಯಿಂದ..

ಧನಸಂಪಾದನೆಯಾಗುವುದು ಕರ್ಮದಿಂದ..!

ಮಲಿನ ಕರ್ಮದಿಂದ ಸಂಪಾದನೆಯಾಗುವುದು ಮಲಿನ ಧನವೇ..!!

ಮಲಿನ ಧನದಿಂದ ಸಂಪಾದನೆಯಾಗುವ ಅನ್ನವೂ ಮಲಿನವೇ..!

ನಾವುಣ್ಣುವ ಅನ್ನವೇ ನಮ್ಮ ತನು-ಮನಗಳನ್ನು ನಿರ್ಮಾಣ ಮಾಡುವುದು..

ಅನ್ನದ ಸ್ಥೂಲ ಭಾಗದಿಂದ ಶರೀರ – ಅನ್ನದ ಸೂಕ್ಶ್ಮಭಾಗದಿಂದ ಮನಸ್ಸು..

ಅನ್ನಮಯಂ ಹಿ ಸೌಮ್ಯಮನಃ – ಛಾಂದೋಗ್ಯೋಪನಿಶತ್..

जैसा अन्न वैसा मन – ಹಿಂದಿ ಗಾದೆ..

ಮಲಿನ ಮನದಲ್ಲಿ ಜ್ಞಾನವೆಲ್ಲಿ ಮೂಡಲು ಸಾಧ್ಯ..

ಜ್ಞಾನವಿಲ್ಲದೇ ಸುಖವೆಲ್ಲಿ..?

ಜ್ಞಾನ – ಸುಖಗಳು ಒಂದನ್ನು ಬಿಟ್ಟು ಇನ್ನೊಂದಿರಲಾರವು…!!

ಮಲಿನ ಜಲದಲ್ಲಿ ಪ್ರಭಾಕರನ ಪ್ರತಿಬಿಂಬ ಮೂಡುವುದೇ..?

ಆನಂದಮಯನ ಸೃಷ್ಠಿಯಲ್ಲಿ ಎಲ್ಲೆಲ್ಲೂ ಆನಂದವೇ ತುಂಬಿದೆ..!

ಅದು ನಮ್ಮಲ್ಲಿ ಪ್ರತಿಫಲಿಸಬೇಕಂದರೆ ನಮ್ಮ ಮಾನಸ, ಮಾನಸಸರೋವರವಾಗಬೇಕು..

ಮಲಿನ – ಚಂಚಲ ಜಲದ  ಆಳದಲ್ಲಿ ಮಣಿಮಾಲೆಯಿದ್ದರೂ ಅದು ತೋರದು..

ನಮ್ಮನ್ನು ಸೃಷ್ಟಿಸಿದವನು ನಮ್ಮೊಳಗೆ ಹುದುಗಿಸಿಟ್ಟಿರುವ ಆನಂದದ ನಿಧಿ ಮಲಿನ-ಚಂಚಲ-ಮನದಲ್ಲಿ ಮೈದೋರಲಾರದು..!

ದಿನವಿಡೀ – ಜೀವನವಿಡೀ ‘ಮಡಿ – ಮಡಿ’ ಎಂದು ಮಡಿಗಾಗಿ ಹೊಡೆದಾಡುವವರನ್ನು ನೋಡಿದ್ದೇವೆ..

ಆದರೆ ಹಣ ಮಡಿಯಲ್ಲದಿದ್ದರೆ ಬೇರಾವುದೂ ಮಡಿಯಲ್ಲ.. !!!!

ಬದುಕಿಗೆ ಗುರಿ ಎಷ್ಟು ಮುಖ್ಯವೋ ದಾರಿಯೂ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚು ಮುಖ್ಯ..

ಮೊದಲು ಸಿಗಬೇಕಾದದ್ದು ದಾರಿ.ಅದು ಸಿಕ್ಕಿದರೆ ಮತ್ತೆ ತಾನೇತಾನಾಗಿ ಸಿಗುವುದು ಗುರಿ..

ಬೇಗ ತಲುಪುವೆನೆಂಬ ಭ್ರಮೆಯಲ್ಲಿ ತಪ್ಪುದಾರಿಯಲ್ಲಿ ನಡೆದರೆ ಗುರಿ ಎಂದೆಂದೂ ಸಿಗದು..!

ಹಣಸಂಪಾದನೆಯಲ್ಲದೇ ಬೇರಾವುದನ್ನೂ ಬದುಕಿನ ಗುರಿಯಾಗಿಸಿಕೊಳ್ಳುವುದನ್ನು ಮನಸ್ಸು ಒಪ್ಪುತ್ತಿಲ್ಲವೇ..?

ಚಿಂತೆಯಿಲ್ಲ…!

ಸಂಪಾದನೆಯ ದಾರಿಯೊಂದು ಶುದ್ಧವಾಗಿರಲಿ..

ಆ ಶುದ್ಧಿ ತನು- ಮನ – ಜೀವನಗಳಲ್ಲೆಲ್ಲಾ ಪಸರಿಸುವುದು..

ಆ ಬಗೆಯ ಹಣಸಂಪಾದನೆ ಅದು ಮಹಾಲಕ್ಷ್ಮಿಯ ಉಪಾಸನೆ..

ಅವಳಿರುವುದು ವೈಕುಂಠದಲ್ಲಿ..

ಶ್ರೀಮನ್ನಾರಾಯಣನ ಪಾಶ್ವ೯ದಲ್ಲಿ…

ನೀನು ಸೇರುವುದು ಅಲ್ಲಿ………!!!!
ರಾಮಬಾಣ:- ಧನ ಮೈಲಿಗೆಯಾದರೆ ಜೀವನವೇ ಮೈಲಿಗೆ..!!

||ಹರೇರಾಮ||

12 Responses to ಹರಿದುಬರಲಿ ಹಣ ಸರಿ ದಾರಿಯಲ್ಲಿ….

 1. Raghavendra Narayana

  ೧. “ದಿನವಿಡೀ – ಜೀವನವಿಡೀ ‘ಮಡಿ – ಮಡಿ’ ಎಂದು ಮಡಿಗಾಗಿ ಹೊಡೆದಾಡುವವರನ್ನು ನೋಡಿದ್ದೇವೆ..
  ಆದರೆ ಹಣ ಮಡಿಯಲ್ಲದಿದ್ದರೆ ಬೇರಾವುದೂ ಮಡಿಯಲ್ಲ.. !!!!”
  “ರಾಮಬಾಣ:- ಧನ ಮೈಲಿಗೆಯಾದರೆ ಜೀವನವೇ ಮೈಲಿಗೆ..!!”
  . . . ರಾಮ ಬಾಣ ನೀತಿ ಪಾಠ. ರಾಮ ಬಾಣ ಅದ್ಭುತ, ನೀತಿ ಪಾಠವೇ ರಾಮ ಬಾಣದ ಉದ್ದೇಶ – ಅ೦ದಿಗು ಇ೦ದಿಗು ಎ೦ದೆ೦ದಿಗು.

  ೨. “ಹಣಸಂಪಾದನೆಯಲ್ಲದೇ ಬೇರಾವುದನ್ನೂ ಬದುಕಿನ ಗುರಿಯಾಗಿಸಿಕೊಳ್ಳುವುದನ್ನು ಮನಸ್ಸು ಒಪ್ಪುತ್ತಿಲ್ಲವೇ..?
  ಚಿಂತೆಯಿಲ್ಲ…!
  ಸಂಪಾದನೆಯ ದಾರಿಯೊಂದು ಶುದ್ಧವಾಗಿರಲಿ..
  ಆ ಶುದ್ಧಿ ತನು- ಮನ – ಜೀವನಗಳಲ್ಲೆಲ್ಲಾ ಪಸರಿಸುವುದು..”
  . . . ಅದ್ಭುತ, ಇದು ರಿವರ್ಸ್ ಇ೦ಜಿನಿಯರಿ೦ಗ್.

  ೩. “ಜ್ಞಾನವಿಲ್ಲದೇ ಸುಖವೆಲ್ಲಿ..?”
  . . . ಎಷ್ಟಿದ್ದರೇನು, ಎನಿದ್ದರೇನು.. ನಿಜವಾದ ಬೆಲೆಯೆ ಗೊತ್ತಿಲ್ಲದಿದ್ದರೆ – ಸೃಷ್ಟಿಯ ವ್ಯಾಪಾರ ವ್ಯವಹಾರಗಳ ಜ್ಞಾನವಿಲ್ಲದಿದ್ದರೆ – ದುಃಖ ಕಟ್ಟಿಟ್ಟ ಬುತ್ತಿ – ಉಣಲೆಬೇಕು, ವಿಧಿಯಿಲ್ಲ. (ವಿಧಿಯೂ ಅವನ ನಿಯಮಗಳಿಗೆ ಬದ್ಧನೆ? ವಿಧಿಯನ್ನು ಮೀರಿ ನಿಲ್ಲುವ ವೀರನ್ಯಾರು?)

  [Reply]

 2. Raghavendra Narayana

  ಗುರುಗಳೇ, ಐಶ್ವರ್ಯ ಎ೦ದರೆ ಕೇವಲ ಹಣ-ಭೂಮಿ-ಚಿನ್ನ ಮಾತ್ರವೆ? ಬೇರೆ ಯಾವುದನ್ನು ಐಶ್ವರ್ಯ ಎನ್ನಬಹುದು ತಿಳಿಸುವಿರಾ?

  [Reply]

 3. seetharama bhat

  Hareram,

  We should earn money to live not live for money,money makes many things but many more are not made by money, only your blessings can make anything in this and that world

  Hareram

  [Reply]

 4. Manju ..

  “ಅಸಮರ್ತೋ ಸಾಧು ಭವೇತ್…. “

  [Reply]

 5. Raghavendra Narayana

  ಶ್ರೀ ಶ್ರೀ ಆದಿ ಶ೦ಕರಾಚಾರ್ಯರ ಪ್ರಶ್ನೋತ್ತರರತ್ನಮಾಲಿಕೆಯ ಒ೦ದು ರತ್ನ.
  __
  “ಕುತ್ರ ವಿಷ೦? ದುಷ್ಟಜನೇ, ಕಿಮಿಹಾಶೌಚ೦? ಭವೇತ್, ಋಣ೦ ನೃಣಾಮ್ |
  ಕಿಮಭಯಮಿಹ? ವೈರಾಗ್ಯ೦, ಭಯಮಪಿ ಕಿ೦? ವಿತ್ತಮೇವ ಸರ್ವೆಷಾ೦ ||

  __
  ವಿಷವು ಎಲ್ಲಿದೆ? ದುರ್ಜನರಲ್ಲಿ.
  ಯಾವುದು ಮೈಲಿಗೆ? ಇಲ್ಲಿ ಮನುಷ್ಯರು ಮಾಡಿರುವ ಸಾಲ.
  ಇಲ್ಲಿ ಭಯರಾಹಿತ್ಯವು ಯಾವುದು? ವೈರಾಗ್ಯ.
  ಎಲ್ಲಿರಿಗೂ ಭಯವು೦ಟುಮಾಡುವುದು ಯಾವುದು? ಹಣವೇ ಸರಿ|

  [Reply]

 6. Mahesha Elliadka

  ಸಹನಾವವತು, ಸಹನೌ ಭುನಕ್ತು..!!
  ಹರೇ ರಾಮ

  [Reply]

 7. ಜಗದೀಶ್ B. R.

  ಈ ಲೇಖನ ನಮ್ಮಲ್ಲಿರುವ ಕೊಳೆ ತೊಳೆಯುವ ಪಾಪ ಕಳೆಯುವ ಗಂಗಾಜಲ. ಇಲ್ಲಿರುವ ಈ ಪಾಠ (ಈ ತಾಣದಲ್ಲಿರುವ ಎಲ್ಲಾ ಲೇಖನಗಳೂ) ಶಾಲಾ ಮಕ್ಕಳಿಗೆ ಪಾಟ್ಯವಾಗಿ ಬಂದಲ್ಲಿ ಕಲುಷಿತಗೊಂಡಿರುವ ವ್ಯವಸ್ಥೆ ಮುಂದಿನ ದಿನಗಳಲ್ಲಾದರೂ ಖಂಡಿತ ಸ್ವಚ್ಚವಾಗುವುದು.

  [Reply]

 8. Rama Ajjakana

  ನಿಜವಾದ ಮಾತುಗಳು.

  ಮನದೊಳು ಶ್ರೀಮಂತನಾಗದಿದ್ದರೆ ಬಾಹ್ಯ ಶ್ರೀಮಂತಿಕೆಗೇನು ಬೆಲೆ.
  ಮನೆಯೊಳು ಸುಖಿಯಾಗದಿದ್ದರೆ| ಬಾಹ್ಯ ಮಡಿವಂತಿಗೇನು ಬೆಲೆ.
  ತಾ ತತ್ವಜ್ಞಾನಿಯೆಂದು ಮಾಡಲಾರದ ಕೆಲಸವ ಮಾಡಿರೆ ಬೆಲೆಯೇನು ಧರ್ಮಜ್ಞ ||

  |ಶ್ರೀಮನ್ನಾರಾಯಣ ನಮೋ ನಮ:|

  [Reply]

 9. Raghavendra Narayana

  “ಜೀವನವದೊ೦ದು ಪರಮೈಶ್ವರ್ಯ ಬೊಮ್ಮನದು.. – ಮ೦ಕುತಿಮ್ಮ”
  ಐಶ್ವರ್ಯ ಇಲ್ಲವೆ೦ದು ಹೇಳುತ್ತೇವೆ.
  ಇಡೀ ದೇಹವೆ ದೇವನು ಕೊಟ್ಟ ಮಹಾ ಐಶ್ವರ್ಯ, ಪ್ರತಿಯೊಬ್ಬರಿಗೂ. ಹುಟ್ಟುತ್ತಲೆ ಪ೦ಚಭೂತಗಳ ಜೊತೆಗೆ ಪ೦ಚೇ೦ದ್ರಿಯ, ಜ್ಞಾನೇ೦ದ್ರಿಯ ಇಟ್ಟುಕೊ೦ಡು ಬ೦ದವರು ನಾವು. ಬಾಯಲ್ಲಿ ಚಿನ್ನದ ಚಮಚದ ಐಶ್ವರ್ಯದ ಉಪಮೆ ಇದರ ಮು೦ದೆ ನಿಕೃಷ್ಟದ ನಿಕೃಷ್ಟದ ನಿಕೃಷ್ಟದ……………… ನಿಕೃಷ್ಟ.
  __
  ಹಣ-ಹೊನ್ನು-ಭೂಮಿಗಳ ಮಧ್ಯದಲಿ, ಒಳ ಇರುವ ಬಳಿ ಸಿಗುವ ಸಿರಿಯನ್ನೆ ಮರೆಸುವ ಅಮಲು ಈ ಮದ್ಯದಲಿ.
  ಮದಿರೆಯೇ ವಿಸ್ಮಿತವಾಗಿ ತವಕಿಸಿ ನೋಡಿ ಹೇಳೀತೂ “ಇದ್ಯಾವಾ ಇಳಿಯದಾ ನಶೆ?”
  __
  ಮಳೆಯ ನೋಟ, ನೀರಿನ ರಭಸ, ನೆಲದ ಗ೦ಧ, ಜಲದ ಗೀತೆ.. ಕಣ್ಣು-ಮೂಗು-ಕಿವಿ ಐಶ್ವರ್ಯ ವೇ ಅಲ್ಲವೇ?
  ನೆನೆಯುವ ಆಟದಲಿ, ಐಶ್ವರ್ಯ ಪೂರ್ಣ ದೇಹವೆ ಅಲ್ಲವೇ?
  ನೆನೆಯುವ ಮನದಲಿ, ಶಿವ ಶ೦ಕರನ ನೆನೆದರೆ, ಐಶ್ವರ್ಯ ನಶ್ವರ ಅಲ್ಲವೇ? ಶಾಶ್ವತ ಈಶ್ವರ ಅಲ್ಲವೇ?
  __
  ಭೋರ್ಗರೆಯುವ ಮಳೆಯಲಿ ಅಮಲು ಇಳಿಯಲಿ.
  ಸೃಷ್ಟಿಯ ಮಡಿಯಲಿ ಲಕ್ಷಿಯು ಒಲಿಯಲಿ
  __
  ಶಿವನೇಕೆ ಅಭಿಷೇಕ ಪ್ರಿಯ…?
  __
  ವೈರಾಗ್ಯವೆ೦ಬ ಐಶ್ವರ್ಯದಿ೦ದ ಮೋಕ್ಷವನ್ನು ಕೊ೦ಡುಕೊಳ್ಳಬಹುದೆ?

  [Reply]

 10. Anuradha Parvathi

  ಹಣವೆ ನಿನ್ನಯ ಗುಣ ಎಷ್ಟು ವರ್ಣಿಸಲಿ.
  ಹಣವಿಲ್ಲದವನೊಬ್ಬ ಹೆಣವೇ ಸರಿ ಕಂಡ್ಯ.

  ದಾಸರ ಪದ.

  [Reply]

 11. Anuradha Parvathi

  ಪ್ರಣಾಮಗಳು ಗುರುಗಳೆ, ಹಣ ಸಂಪದನೆಯ ಮಿತಿ ಏನು? ನಮಗೆ ಇಷ್ಟು ಸಾಕು ಎಂದು ಗೊತ್ತಾಗುವುದು ಹೇಗೆ?

  [Reply]

 12. Vishwa M S Maruthipura

  ಗುರುಗಳೇ ನಿಮ್ಮ ಈ ಎಲ್ಲಾ ಬರಹಗಳನ್ನು ಎಲ್ಲರೂ ಓದುವಂತೆ ಆದರೆ ಅದೇ ರಾಮರಾಜ್ಯಕ್ಕೆ ಮುನ್ನುಡಿಯಾದಿತು ಆ ದಿನಕ್ಕಾಗಿ ಕಾಯುತ್ತಿದ್ದೇವೆ …ಹರೇ ರಾಮ

  [Reply]

Leave a Reply

Highslide for Wordpress Plugin