|| ಹರೇರಾಮ ||

ಗಂಗೆಗೆ ಗಂಗೆಯೆಂಬ ಹೆಸರು ಎಂದು ಬಂದಿತೋ, ಅಂದಿದ್ದ ಜಲಪ್ರವಾಹ ಇಂದಿಲ್ಲ…
ಅದು ಹರಿದು ಸಮುದ್ರವನ್ನು ಸೇರಿ ಅದೆಷ್ಟೋ ಕಾಲವಾಯಿತು..!
ಅಂದಿನಿಂದ ಇಂದಿನವರೆಗೆ ಗಂಗೋತ್ರಿಯಿಂದ ಗಂಗಾಸಾಗರಕ್ಕೆ ಅದೆಷ್ಟು ನೀರು ಹರಿದಿಲ್ಲ..?
ಪ್ರತಿಕ್ಷಣವೂ ಹಳೆಯನೀರು ಹರಿದುಹೋಗಿ ಹೊಸನೀರು ಬರುತ್ತಿದ್ದರೂ ಗಂಗೆಯೆಂಬ ಹೆಸರು ಮಾತ್ರ ಬದಲಾಗಲೇ ಇಲ್ಲ..
ಏಕೆಂದರೆ, ಅಲ್ಲಿ ಹರಿದುಹೋದ ಹಳೆಯನೀರೂ ಗಂಗೆಯೇ, ಹರಿದು ಬರುತ್ತಿರುವ, ಬರಲಿರುವ ಹೊಸ ನೀರೂ ಗಂಗೆಯೇ..!
ಗಂಗೋತ್ರಿಯು ಪ್ರಥಮಬಿಂದುವಾಗಿಯೂ, ಕಾಶಿಯು ಮಧ್ಯಬಿಂದುವಾಗಿಯೂ, ಗಂಗಾಸಾಗರವು ಚರಮಬಿಂದುವಾಗಿಯೂ ಇರುವ ಪಾವನ ಪಥದಲ್ಲಿ ಹರಿಯುವ ನೀರೆಲ್ಲವೂ ಗಂಗೆಯೇ..!

ಇಕ್ಶ್ಕ್ವಾಕುವಂಶವೂ ಗಂಗೆಯಂತೆಯೇ..
ಸಿಂಹಾಸನದಲ್ಲಿ ಮಂಡಿಸಿದ ವ್ಯಕ್ತಿಗಳು ಬದಲಾದರೂ ಅಲ್ಲಿ ತತ್ತ್ವಗಳು ಮಾತ್ರ ಬದಲಾಗಲಿಲ್ಲ..!
ಅನುರೂಪವಾಗಿರುವುದಕ್ಕಲ್ಲವೇ ಸಂತತಿಯೆಂದು ಹೆಸರು..!
ದೀಪದ ಪರಂಪರೆಯಲ್ಲಿ ದೀಪಗಳು ಬರಬಹುದೇ ಹೊರತು ಕತ್ತಲೆಂದಿಗೂ ಬರಲು ಸಾಧ್ಯವಿಲ್ಲ
ಕಲ್ಪವೃಕ್ಷವು ಕಲ್ಪವೃಕ್ಷಗಳ ಸಾಲನ್ನೇ ಸೃಷ್ಟಿಸುತ್ತದೆ.. ಅಲ್ಲಿ ಕಳ್ಳಿಗೆಲ್ಲಿಯ ಪ್ರವೇಶ..!
“ಆತ್ಮಾವೈ ಪುತ್ರನಾಮಾಸಿ..”(ತಂದೆ-ಮಕ್ಕಳು ಬೇರೆಯಲ್ಲ,ಮಗನಾಗಿ ಹುಟ್ಟುವವನು ತಂದೆಯೇ)ಎಂಬ ವೇದವಾಕ್ಯವು ತನ್ನ ಪೂರ್ಣಾರ್ಥವನ್ನು ಕಂಡುಕೊಂಡಿದ್ದು ಸೂರ್ಯವಂಶದಲ್ಲಿ..!
ಅಮೃತಸಾಗರದಿಂದ ಒಂದನ್ನೊಂದು ಹೋಲುವ ಆನಂದದಲೆಗಳು ಒಂದಾದ ಮೇಲೊಂದರಂತೆ ಮೇಲೆದ್ದು ಬರುವಂತೆ …
ದಿನಕರನ ಅಮರವಂಶದಲ್ಲಿ ಮಹಾಪುರುಷರುಗಳು ಸಾಲುಸಾಲಾಗಿ ಆವಿರ್ಭವಿಸಿದರು..!

ಇದೋ..
ಭಾಸ್ಕರವಂಶದ ಅಕ್ಷರ ದರ್ಶನ..
ಆದಿರಾಜ ಮನು
ಇಕ್ಷ್ವಾಕು..
ಕುಕ್ಷಿ
ವಿಕುಕ್ಷಿ
ಬಾಣ
ಅನರಣ್ಯ
ಧರ್ಮ-ವಾತ್ಸಲ್ಯಗಳ ಪ್ರತಿಮೂರ್ತಿಯಾಗಿ ಧರಣಿಯನ್ನಾಳಿದ ದೊರೆಯಿವನು..
ಸೂರ್ಯವಂಶದೊಡನೆ ರಾವಣನ ವೈರದ ನಾಂದಿ ಇಲ್ಲಿಂದಲೇ…!
ಯಜ್ಞದೀಕ್ಷಿತನಾಗಿದ್ದ ರಾಜಾ ಅನರಣ್ಯನನ್ನು ನ್ಯಾಯವಲ್ಲದ ರೀತಿಯಲ್ಲಿ ರಾವಣನು ಕಗ್ಗೊಲೆಗೈದನು..
ರಾವಣನ ಸರ್ವನಾಶದ ಬೀಜಾಂಕುರವು ಅಲ್ಲಿಯೇ ಆಯಿತು..!
ಪ್ರಾಣೋತ್ಕ್ರಮಣದ ಸ್ಥಿತಿಯಲ್ಲಿ “ನನ್ನ ವಂಶದಲ್ಲಿ ಉದಯಿಸಿ ಬರುವ ಮಹಾಪುರುಷನೊಬ್ಬನಿಂದ ನಿನ್ನಸರ್ವನಾಶವಾಗುವುದು” ಎಂದು ಶಪಿಸಿದನು ಅನರಣ್ಯ..
ಶ್ರೀರಾಮಾವಿರ್ಭಾವದ ಸೋಪಾನವಾಯಿತು ಅನರಣ್ಯನ ಬದುಕಿನ ಅಂತಿಮವಾಕ್ಯ…

ತ್ರಿಶಂಕು..
ಯಾರೂ ಸಾಧಿಸದಿದ್ದುದನ್ನು ಸಾಧಿಸುವ ಛಲ ತ್ರಿಶಂಕುವಿನದ್ದು..
ಎಲ್ಲರೂ ಸತ್ತು ಸ್ವರ್ಗವನ್ನು ಸೇರಿದರೆ, ಸಶರೀರನಾಗಿಯೇ ಸ್ವರ್ಗವನ್ನು ಸೇರಲು ಹವಣಿಸಿದನಾತ…!
ತನ್ನ ಹೆಬ್ಬಯಕೆಯನ್ನು ಸಾಧಿಸಿಕೊಳ್ಳುವ ಹೋರಾಟದಲ್ಲಿ ಛಲವೊಂದನ್ನುಳಿದು ಮತ್ತೆಲ್ಲವನ್ನೂ ಕಳೆದುಕೊಳ್ಳಬೇಕಾಯಿತು..
ಶಾಪದಿಂದ ಚಂಡಾಲತ್ವ ಬಂದರೂ, ಕುಲಗುರುವಿನಿಂದಾರಂಭಿಸಿ ಪ್ರಜೆಗಳ ತನಕ ಸಕಲರೂ ಕೈಬಿಟ್ಟರೂ..
ತ್ರಿಶಂಕು ತನ್ನ ಹೋರಾಟವನ್ನು ಕೈಬಿಡಲಿಲ್ಲ..!
ಸೃಷ್ಟಿ ಕಂಡು ಕೇಳರಿಯದ, ಆ ಸಾಟಿಯಿಲ್ಲದ ಹೋರಾಟದ ಫಲವಾಗಿ ತ್ರಿಶಂಕುವಿಗಾಗಿ ಪ್ರತಿಸ್ವರ್ಗವೇ ಸೃಷ್ಟಿಯಾಯಿತು..!

ದುಂಧುಮಾರ
ಯುವನಾಶ್ವ
ಮಾಂಧಾತಾ..
ಯುಗಪುರುಷನಿವನು..
ಮಕ್ಕಳಿಲ್ಲದ ಯುವನಾಶ್ವನು ಭೃಗು ಮಹರ್ಷಿಗಳ ಸಾನ್ನಿಧ್ಯದಲ್ಲಿ ಪುತ್ರಕಾಮೇಷ್ಟಿಯನ್ನು ನಡೆಸಿದಾಗ,  ಪುತ್ರಪ್ರದವಾದ ಮಂತ್ರಗಳಿಂದ ಅಭಿಮಂತ್ರಿತವಾದ ಜಲವನ್ನು ಪ್ರಮಾದವಶಾತ್ ಕುಡಿದು ತಾನೇ ಗರ್ಭ ಧರಿಸಬೇಕಾಯಿತು..
ಹೀಗೆ ತಾಯಿಯಿಲ್ಲದೆ ತಂದೆಯ ಮಗನಾಗಿ ಭೂಮಿಗೆ ಬಂದವನು ಮಾಂಧಾತಾ ..
ಆಗ ಅರಮನೆಯಲ್ಲೆದ್ದ ಪ್ರಶ್ನೆ ‘ಕಂ ಧಾಸ್ಯತಿ..’?
‘ಈ ಮಗುವಿಗೆ ಹಾಲು ಕುಡಿಸುವವರಾರು..’?
ಉತ್ತರ ದಿವಿಯಿಂದ ಬಂದಿತು..!
ಸ್ವಯಂ ದೇವೇಂದ್ರನೇ ಧರೆಗಿಳಿದು “ಮಾಂ ಧಾಸ್ಯತಿ”.. “ನಾನು ಹಾಲೀಯುವೆನು” ಎಂದು ಉದ್ಘೋಷಿಸಿ ತನ್ನ ಹೆಬ್ಬೆರಳಲ್ಲಿ ಅಮೃತವನ್ನು ತುಂಬಿ ಮಗುವಿಗೆ ಕುಡಿಸಿದನು..!
ಇಂದ್ರನ ಮಾಂ ಧಾಸ್ಯತಿ ಎಂಬ ವಾಕ್ಯದಿಂದಾಗಿಯೇ ಆತನಿಗೆ “ಮಾಂಧಾತಾ” ಎಂದು ಹೆಸರಾಯಿತು…
ವರ ಪಡೆಯುವ ಅವಕಾಶ ಪ್ರಾಪ್ತವಾದಾಗ ಧರ್ಮಸಂಗ್ರಾಮದಲ್ಲಿ ತನ್ನ ಪ್ರಾಣಾರ್ಪಣೆಯಾಗಬೇಕೆಂದು ಕೇಳಿದವನಿವನು..!
ಅದು ಹಾಗೆಯೇ ಆಯಿತು..
ದುಷ್ಟ ಲವಣಾಸುರನೊಡನೆ ನಡೆದ ಮಹಾಸಂಗ್ರಾಮದಲ್ಲಿ ಮಾಂಧಾತನ ಪ್ರಾಣಾರ್ಪಣೆಯಾಯಿತು..
ಅಂತಿಮ ವಿಜಯ ಏಂದಿದ್ದರೂ ಸೂರ್ಯವಂಶದ್ದೇ..!
ಮುಂದೊಂದು ದಿನ ರಾಮನ ಕಿರಿಯ ಸೋದರನಾದ ಶತ್ರುಘ್ನನು ಲವಣಾಸುರನನ್ನು  ಸಂಹರಿಸಿದನು..

ಸುಸಂಧಿ
ಧ್ರುವಸಂಧಿ
ಭರತ
ಅಸಿತ
ಸಗರ..
ಗರವೆಂದರೆ ವಿಷ..
ವಿಷದೊಡನೆ ಜನಿಸಿದವನು ಸಗರ..
ಸಗರನ ತಾಯಿಯು ಗರ್ಭವತಿಯಾಗಿದ್ದಾಗ ಆಕೆಗೆ ಪುತ್ರಪ್ರಾಪ್ತಿಯಾಗುವುದನ್ನು ಸಹಿಸದ ಸವತಿಯೊಬ್ಬಳು ವಿಷವುಣಿಸಿದಳು..
ಆದರೆ ಚ್ಯವನ ಮಹರ್ಷಿಯ ಕೃಪೆ ದೊಡ್ಡದು..
ಗರ್ಭದೊಳಗೇ ವಿಷದೊಡನೆ ಹೋರಾಡಿ ಗೆದ್ದ ಮಗು ಸಚೇತನವಾಗಿ ಭೂಮಿಗೆ ಬಂದೇಬಂದಿತು..!
ಆತನೇ ಸಗರ..
ತನ್ನ ವಿಕ್ರಮದಿಂದಲೇ ವಿಶ್ವವಿಜಯಿಯಾದ ಸಗರನ ಕುರುಹು ಭುವಿಯಲ್ಲಿ ಶಾಶ್ವತ..
ಸಾಗರವು ಸಗರನ ಕೊಡುಗೆ…!

ಅಸಮಂಜ
ಅಂಶುಮಾನ್
ದಿಲೀಪ
ನಂದಿನಿಯೆಂಬ ವಸಿಷ್ಠರ ಹೋಮಧೇನುವಿನ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ನೀಡಲು ಮುಂದಾಗಿ ಗೋಸೇವೆಗೆ ಮೇಲ್ಪಂಕ್ತಿಯಾದವನಿವನು..

ಭಗೀರಥ..
ಪುರುಷಪ್ರಯತ್ನದ ಪರಮ ಪ್ರತೀಕನಿವನು..
ತನ್ನ ಮುತ್ತಜ್ಜಂದಿರ ಮೋಕ್ಷಕ್ಕಾಗಿ ದೇವಗಂಗೆಯೆನ್ನು ಭುವಿಗಿಳಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದವವನು..
ಸಾಲು ಸಾಲು ವಿಘ್ನಗಳನ್ನು ಮೀರಿ ಸಫಲನಾದವನು..
ಪಾಪನಾಶಿನಿ- ಮೋಕ್ಷದಾಯಿನಿ ಭಾಗೀರಥಿಯು ಭಗೀರಥನ ಭವ್ಯಬದುಕಿನ ಶಾಶ್ವತ ಚಿಹ್ನೆಯಾಗಿ ಭುವಿಯಲ್ಲಿ ಹರಿದಳು..!

ಕಕುತ್ಸ್ಥ..
ಸಂಕಟಕ್ಕೊಳಗಾದಾಗ ದೇವತೆಗಳ ಮೊರೆಹೋಗುವುದು ಸಾಮಾನ್ಯ ಮಾನವರಲ್ಲಿ ಕಂಡುಬರುವ ಸಾಮನ್ಯ ಸಂಗತಿ..
ಆದರೆ ಸೂರ್ಯವಂಶೀಯರು ಇದಕ್ಕೆ ಸಂಪೂರ್ಣ ಭಿನ್ನರು.!.
ದಾನವರ ಧಾಳಿಯಿಂದ ಕಂಗೆಟ್ಟ ದೇವತೆಗಳು ಸೂರ್ಯವಂಶದ ಮೊರೆ ಹೋಗುತ್ತಿದ್ದರು..
ಭುವಿಯಿಂದ ದಿವಿಗೇರಿ ದಾನವರನ್ನು ಸದೆಬಡಿದು ಸ್ವರ್ಗವನ್ನು ದೇವತೆಗಳಿಗೆ ಉಳಿಸಿಕೊಡುತ್ತಿದ್ದರು ಸೂರ್ಯವಂಶೀಯರು..!
ಕಕುತ್ ಎಂದರೆ ಎತ್ತಿನ ಹೆಗಲು..
ದಾನವರೊಡನೆ ಸಂಗ್ರಾಮದಲ್ಲಿ ಎತ್ತಿನ ರೂಪದಲ್ಲಿದ್ದ ಇಂದ್ರನ ಹೆಗಲೇರಿ ಹೋರಾಡಿ ಜಯಿಸಿದ್ದರಿಂದ ಈತ ಕಕುತ್ಸ್ಥ ಎನಿಸಿಕೊಂಡನು..
ಸೂರ್ಯವಂಶೀಯರು ಕಾಕುತ್ಸ್ಥರೆನಿಸಿದರು…

ರಘು..
ವಂಶದಿಂದಾಗಿಯೇ ಗೌರವವನ್ನು ಪಡೆಯುವವರು ಹಲವರು..
ವಂಶಕ್ಕೆ ಗೌರವವನ್ನು ತಂದುಕೊಡುವವರು ಕೆಲವರು..
ಎರಡನೇ ವರ್ಗಕ್ಕೆ ಸೇರಿದವನು ರಘುಮಹಾರಾಜ..!!
ಸೂರ್ಯವಂಶವು ರಘುವಂಶವೆನಿಸಿತು ಈತನಿಂದ..

ಕಲ್ಮಾಷಪಾದ
ಶಂಖಣ
ಸುದರ್ಶನ
ಅಗ್ನಿವರ್ಣ
ಶೀಘ್ರಗ
ಮರು
ಪ್ರಶುಶ್ರುಕ
ಅಂಬರೀಷ..
ಪರಮ ವೈಷ್ಣವನಿವನು..
ತನ್ನ ಸೇವಕರ ಸೇವೆಯನ್ನು ಭಗವಂತನೇ ಸ್ವತಃ ಮಾಡುವನೆಂಬುದಕ್ಕೆ ಪ್ರತ್ಯಕ್ಷ ದೃಷ್ಟಾಂತವಾದವನು..
ಸಾಕ್ಷಾತ್ ಸುದರ್ಶನ ಚಕ್ರವೇ ಅಂಬರೀಷನ ರಕ್ಷಣೆಗಾಗಿ ಸದಾ ಸನ್ನದ್ಧವಾಗಿ ಆತನ ಬಳಿಯಲ್ಲಿಯೇ ನೆಲೆಸಿತ್ತು..!

ಮನುವಿನಿಂದ ಮೊದಲುಗೊಂಡು ಮೂವತ್ತೈದನೆಯವನು ದಶರಥ..
ಸೂರ್ಯೋದಯವಾಗುವುದಕ್ಕೆ ಮುನ್ನ ಅರುಣೋದಯವಾಗುವಂತೆ, ಭುವಿಯಲ್ಲಿ ಶ್ರೀರಾಮೋದಯವಾಗುವುದಕ್ಕೆ ಮುನ್ನ ದಶರಥೋದಯವಾಯಿತು..!

|| ಹರೇರಾಮ ||

ಟಿಪ್ಪಣಿ: <ಭಾಸ್ಕರವಂಶದ ಅಕ್ಷರದರ್ಶನ> =ಅಕ್ಷರಗಳ ಮೂಲಕ ಸೂರ್ಯವಂಶದ ದರ್ಶನ,
ಸೂರ್ಯವಂಶದ ಅವಿನಾಶೀ ದರ್ಶನ

Facebook Comments Box