ರಾಮಸಾಗರಗಾಮಿನೀ…………..

ಗುರುವಾರ, ಆಗಸ್ತು 19th, 2010 - - 37 Comments

|| ಹರೇರಾಮ ||

ಸೋಮರಸ ಒಳಸೇರಿದರೆ ಸುಮ್ಮನಿರಗೊಡುವುದೇ…?
ಈ ಲೋಕವನ್ನು ಮರೆಸಿ ಇನ್ನಾವುದೋ ಲೋಕದಲ್ಲಿ ವಿಹರಿಸುವಂತೆ ಮಾಡದೇ ಅದು…?
ರಾಮರಸ ಒಳಸೇರಿದಾಗ  ಕುಶಲವರ ಸ್ಥಿತಿಯೂ ಹಾಗೆಯೇ ಆಯಿತು…

ಬಿಂದುವಿನೊಳು ಸಿಂಧು ಹಿಡಿಸುವುದೇ…?
ವಿಶ್ವಂಭರನ ಚರಿತೆಯ ವಿಶ್ವಕಾವ್ಯವು ಪುಟಾಣಿಮಕ್ಕಳ ಪುಟ್ಟಹೃದಯದೊಳಗೆ ಅದು ಹೇಗೆ ಹಿಡಿಸಿತೋ..?
ಹಿಡಿಸಲಾರದೇ ಹೊರಹೊಮ್ಮಿ ಹುಚ್ಚು ಹೊಳೆಯಾಗಿ ಹರಿದಿರಬೇಕು…!

ಕೈಯಲ್ಲಿ ತಂಬೂರಿ…
ಕಣ್ತುಂಬ ರಾಮ…
ಬಾಯಲ್ಲಿ ರಸಕಾವ್ಯ…

ಗಂಗೋತ್ರಿಯಿಂದ ಹೊರಟು ಗಂಗಾಸಾಗರವನ್ನು ಸೇರುವ ಮುನ್ನ ದೇಶದೆಲ್ಲೆಡೆ ಹರಿಯವ ಗಂಗೆಯಂತೆ…
ಆಶ್ರಮದಿಂದ ಹೊರಹೊರಟು ಹಳ್ಳಿಹಳ್ಳಿಗಳಲ್ಲಿ ಗಲ್ಲಿಗಲ್ಲಿಗಳಲ್ಲಿ  ಹಾಡತೊಡಗಿದರವರು ರಾಮಕಥೆಯನ್ನು…

” ಐಸೀ ಲಾಗೀ ಲಗನ್…
ಮೀರಾ ಹೋಗಯೀ ಮಗನ್…
ವೋ ತೋ ಗಲೀ ಗಲೀ ಹರಿಗುನ್ ಗಾನೇ ಲಗೀ…”

ಕೃಷ್ಣರಸವೂಡಿದಾಗ ಅರಮನೆಯನ್ನು ಪರಿತ್ಯಜಿಸಿ, ಗಲ್ಲಿಗಲ್ಲಿಗಳಲ್ಲಿ ಹರಿಗುಣವನ್ನು ಹಾಡಿ ಹಾಡಿ ಕುಣಿದ, ಕುಣಿದು ಕುಣಿದು ಹಾಡಿದ ಮೀರಾ ನೆನಪಾಗುವಳಲ್ಲವೇ ಇಲ್ಲಿ…!?

ತನ್ನಲ್ಲಿ ತನ್ಮಯರಾದ ರಾಮತನಯರನ್ನು ಕಂಡು ರಾಮಾಯಣಮಾತೆಯೂ ಕರಗಿದಳೇನೋ…?
ಸೀತಾಮಾತೆಯನ್ನು ಬೀಳ್ಕೊಟ್ಟುಬಂದ ಕುಶಲವರನ್ನು ಅವಳು ತನ್ನ ಮಡಿಲೊಳಗೆ ಹಾಕಿಕೊಂಡಳು…
ಮಾತ್ರವಲ್ಲ, ಮನೆಗೆ ಕರೆದೊಯ್ದಳು…!

ಅಯೋಧ್ಯೆಯಲ್ಲದೆ ಮತ್ತಾವುದು ಅವಳ ಮನೆ…?
ತಮಸಾತೀರದಲ್ಲಿ ಹುಟ್ಟಿ, ಸರಯೂತೀರದಲ್ಲಿ ನೆಲೆಸಿ, ವಿಶ್ವದಲ್ಲೆಲ್ಲ ಪಸರಿಸಿದವಳಲ್ಲವೇ ಅವಳು…?

ಅದು ತಮ್ಮೂರು, ತಮ್ಮ ಮನೆ ಎಂಬ ಅರಿವಿಲ್ಲದೆಯೇ ಅಯೋಧ್ಯೆಯನ್ನು ಪ್ರವೇಶಿಸಿದರು ಕುಶಲವರು…
ಮನೆಗೈತರುವ ತನ್ನೊಡೆಯನ ಕುಡಿಗಳನ್ನು ಕಂಡು ಅವ್ಯಕ್ತವಾಗಿ ಮಿಡಿದಳು ಅಯೋಧ್ಯೆ…!
‘ಈರ್ವರು ರಾಮರು ಬಂದರೇ’ ಎಂಬ ಬೆರಗಿನಲ್ಲಿ ಹರಿಯುವುದನ್ನೇ ಮರೆತಳು ಸರಯೂ…!

ಬಾಲರಾಮನು ನಲಿದಾಡಿದ ಅಯೋಧ್ಯೆಯ ಬೀದಿಗಳಲ್ಲಿ – ರಾಜಬೀದಿಗಳಲ್ಲಿ ನಲಿನಲಿದು ಹಾಡಿದರು ರಾಮಬಾಲರು…
ಮಿಂಚಿನಮರಿಗಳು ಸಂಚರಿಸಿದಂತಾಯಿತು ನಗರಿಯಲ್ಲಿ…

ಕುಮಾರರ ಗಾನಧ್ವನಿಯು ಪಸರಿಸುತ್ತಿದ್ದಂತೆಯೇ…
ಮಲಗಿದವರೆದ್ದುಕುಳಿತರು…
ಕುಳಿತವರು ನಿಂತರು…
ನಿಂತವರು ನಾದದೆಡೆಗೆ ನಡೆದರು…
ಕೇಳುಗರ ಜೊತೆಗೂಡಿದರು…

ಅಯೋಜಿತವಾಗಿ ಕುಶಲವರ ರಾಮಾಯಣಗಾನವು ನಡೆಯತೊಡಗಿದಾಗ…
ಬೀದಿಯಲ್ಲಿ ನಡೆದುಹೋಗುವವರು ನಿಂತರು…
ನಿಂತವರು ಕುಳಿತರು…
ಕುಳಿತವರು ಕಣ್ಮುಚ್ಚಿದರು…
ಈ ಲೋಕವನ್ನೇ ಮರೆತರು…
ಕುಮಾರರ ಗಾನತರಂಗವು ಅಯೋಧ್ಯೆಯಲ್ಲಿ ಯಾರು-ಯಾರನ್ನು ತಲುಪಿತೋ ಅವರು ತಮಗರಿವಿಲ್ಲದಂತೆಯೇ ಆ ಕಡೆಗೆ ಸೆಳೆಯಲ್ಪಟ್ಟರು…

ಗ್ರಾಹಕನು ಬಯಸಿದ ವಸ್ತುವನ್ನು ಕೊಡುವಷ್ಟರಲ್ಲಿ ರಾಮಾಯಣವನ್ನು ಕೇಳಿಸಿಕೊಂಡ ವರ್ತಕನಿಗೆ ಮೌಲ್ಯವನ್ನು ತೆಗೆದುಕೊಳ್ಳುವುದೇ ಮರೆತುಹೋಯಿತು…
ಒಲೆಯ ಮೇಲಿಟ್ಟ ಹಾಲಿನಪಾತ್ರೆಯನ್ನು ಇಳಿಸುವುದನ್ನೇ ಮರೆತು ಗೃಹಿಣಿಯರು ಬೀದಿಗೆ ಧಾವಿಸಿದರು…
ಅಮ್ಮನ ಕೆಚ್ಚಲಲ್ಲಿ ಬಾಯಿಟ್ಟು ಹಸಿವಾರಿಸಿಕೊಳ್ಳುತ್ತಿದ್ದ ಎಳೆಗರುಗಳು ಮುಖ ತಿರುಗಿಸಿ, ಕಿವಿ ನಿಮಿರಿಸಿ ರಾಮಾಯಣ ಕೇಳತೊಡಗಿದವು…
ಕ್ಷಣವೊಂದರಲ್ಲಿ ಹತ್ತೂ ದಿಶೆಗಳನ್ನವಲೋಕಿಸುವ ಸಹಸ್ರದೃಷ್ಟಿಗಳಾದ ಪ್ರಹರಿಗಳ ಕಣ್ಣುಗಳು ಕುಮಾರರಲ್ಲಿ ಕೀಲಿಸಿಹೋದವು…
ವಜ್ರಕಠಿಣವಾದ ಅವರ ಮುಖದಲ್ಲಿ ಒಸರಿತು ಕಣ್ಣೀರು…

ಸಂಖ್ಯೆಯಿಲ್ಲದ ಸಂಖ್ಯೆಯಲ್ಲಿ ಸೇರಿದ ಜನಸಮೂಹವು ಕುಶಲವರು ಸಂಚರಿಸಿದಂತೆ ಜೊತೆಗೂಡಿ ಹಿಂಬಾಲಿಸತೊಡಗಿತು…
ಅಯೋಧ್ಯೆಯಲ್ಲಿ ಉಳಿದದ್ದು ಎರಡೇ ಸದ್ದು…
ಕುಶಲವರ ಗಾನವೊಂದಾದರೆ ಜನಸಮೂಹದ ಉದ್ಗಾರವಿನ್ನೊಂದು…

ಶರೀರದ ಎಲ್ಲಿಯೋ ಒಂದೆಡೆ ಉಂಟಾಗುವ ಸುಖಸ್ಪರ್ಶ ಕ್ಷಣಮಾತ್ರದಲ್ಲಿ ಹೃದಯವನ್ನು ತಲುಪಿ ಅಲ್ಲಿ ಮಧುರಭಾವಕಂಪನಗಳನ್ನೇರ್ಪಡಿಸುವಂತೆ…
ಅಯೋಧ್ಯೆಯ ಬೀದಿಗಳಲ್ಲುಂಟಾದ ಕುಶಲವರ ಪಾದಸ್ಪರ್ಶವು ಅರಮನೆಯ ಅಂತರಾತ್ಮದಲ್ಲಿ ಅವ್ಯಕ್ತ ವಾತ್ಸಲ್ಯಕಂಪನಗಳನ್ನೇರ್ಪಡಿಸಿತು…
ತನ್ನ ನಿತ್ಯಸಹಚರಿಯಾದ ಮೂಲಪ್ರಕೃತಿಯ ಚಿರಕಾಲವಿರಹದಿಂದ ಸಂತಪ್ತನಾದ ಪರಮಪುರುಷನಿಗೆ ಆಕೆಯ ಹೃದಯದುಸಿರೇ ತಂಗಾಳಿಯಾಗಿ ಅರಮನೆಯ ಸುತ್ತ ಸುಳಿದಾಡಿದಂತೆನಿಸತೊಡಗಿತು…
ಭೂಸುತೆಯನ್ನು ಬಹುಕಾಲದಿಂದ ಕಾಣದೆ ಕುಂದಿದ ಕಂಗಳು, ಆಕೆಯ ಸವಿನುಡಿಗಳನ್ನು ಕೇಳಲು ಅದೆಷ್ಟೋ ಕಾಲದಿಂದ ಕಾತರಿಸಿದ ಕಿವಿಗಳು ಅದೇನೋ ಸುಳಿವು ಸಿಕ್ಕಂತೆನಿಸಿ ತನುವಿನಲ್ಲಿ ರೋಮಾಂಚನ ತಂದವು…
ಯಾರ ಅಪ್ಪಣೆಯನ್ನೂ ಎದುರು ನೋಡದೆ ನೇರವಾಗಿ ಒಳಬರುವ ಮನೆಯ ಮಕ್ಕಳಂತೆ ಎಳೆಯ ಕೊರಳುಗಳಿಂದ ಹೊರಹೊಮ್ಮಿದ ಮಧುರಮಂಗಲನಿನಾದವು ಅರಮನೆಯ ಒಳಪ್ರವೇಶಿಸಿ ದೊರಯ ಕಿವಿದೆರೆಗಳನ್ನು ಮೀಟಿತು…
ಕಿರಿಬೆರಳ ಹಿಡಿದೆಳೆಯುವ ಎಳೆಯ ಕರಗಳಂತೆ ಬಳಿಕರೆಯತೊಡಗಿತು ಇಲ್ಲವೆನ್ನಲಾರದಂತೆ…
ಧರ್ಮವನ್ನುಳುಹಲು ದಂಡಕೆಯ ಕಂಟಕಗಳಿಂದ ವಿದ್ಧವಾದ ಶ್ರೀಪಾದಗಳು ಅಚಿಂತಿತವಾಗಿ – ಅಪ್ರಯತ್ನವಾಗಿ ಉಪ್ಪರಿಗೆಯ ಮೆಟ್ಟಿಲುಗಳನ್ನೇರಿದವು…

ಗಗನಾಂಗಣದ ಮಧ್ಯೆ ನಿಂತು ಧರಣಿಯೆಡೆಗೆ ದೃಷ್ಟಿ ಬೀರುವ ಪೂರ್ಣಚಂದ್ರನಿಗೆ ಸಾಗರಮಧ್ಯದಲ್ಲಿ ತನ್ನದೇ ಪ್ರತಿಬಿಂಬವು ಗೋಚರಿಸುವಂತೆ…
ಉಪ್ಪರಿಗೆಯಲ್ಲಿ ನಿಂತು ರಾಜಮಾರ್ಗದೆಡೆಗೆ ದೃಷ್ಟಿ ಹಾಯಿಸಿದ ರಾಮಚಂದ್ರನಿಗೆ ಗೋಚರಿಸಿದವು ಜನಸಾಗರದ ನಡುವೆ ಶೋಭಿಸುವ ತನ್ನದೇ ಅವಳಿ ಪ್ರತಿಬಿಂಬಗಳು…!

ಭುವಿಯನ್ನು ಬೆಳಗುವ ತನ್ನ ಎಳೆಯ ಕಿರಣಗಳ ಶೋಭೆಯನ್ನು ವೀಕ್ಷಿಸಲು ಸೂರ್ಯದೇವನು ಇಳಿದು ಬಂದಂತಿದ್ದ, ತನ್ನ ತರಂಗಗಳ ವಿಲಾಸವನ್ನು ವೀಕ್ಷಿಸಲು ಸಾಗರವೇ ಮೇಲೆದ್ದುಬಂದಂತಿದ್ದ ಅಪೂರ್ವ ಸನ್ನಿವೇಶವದು…

ಅಚ್ಚರಿ-ಮೆಚ್ಚುಗೆ ತುಂಬಿದ ಹೃದಯದಿಂದ; ಎವೆಯಿಕ್ಕದ ಕಂಗಳಿಂದ ಮೈಮರೆತು ಮಕ್ಕಳನ್ನು ನೋಡಿಯೇನೋಡಿದನು ಪುರುಷೋತ್ತಮ…

|| ಹರೇರಾಮ ||

………………………………………..

ಟಿಪ್ಪಣಿ:
*ಸೋಮರಸ: ಒಂದು ದಿವ್ಯಲತೆಯಿಂದ ಮಾಡುವ ಪದಾರ್ಥ. ಅದು ಯಜ್ಞೋಪಯೋಗಿ ವಸ್ತು. ಆತ್ಮಸಾಧನೆಗೆ ಅತ್ಯುಪಯುಕ್ತ. ಅದರ ಪಾನ ಅಲೌಕಿಕ ಅನುಭವಕ್ಕೆ ಕಾರಣ…
*ಅಯೋಜಿತ: ಒಂದು ಕ್ರಮವತ್ತಾದ ಯೋಜನೆಯಿಲ್ಲದ…
*ಅವ್ಯಕ್ತವಾತ್ಸಲ್ಯಕಂಪನ: ಏನೆಂದು – ಏಕೆಂದು ತಿಳಿಯದೆ, ಹೃದಯದಲ್ಲಿ ಉಂಟಾದ ವಾತ್ಸಲ್ಯದ ಕಂಪನ…
*ಮೂಲಪ್ರಕೃತಿ – ಪರಮಪುರುಷ: ಮೂಲಪ್ರಕೃತಿಯೆಂದರೆ ಭಗವಂತನ ಮನದನ್ನೆ ಶ್ರೀದೇವಿ; ಪರಮಪುರುಷನೆಂದರೆ ಪರಮಾತ್ಮ. ಇಲ್ಲಿ ಸೀತಾ – ರಾಮರು…
-ಸಂಪಾದಕ

  • Shaman Hegde

    ಹರೇರಾಮ…ಬ್ಲಾಗ್ ಓದುತ್ತ ಹೋದಂತೆ ‘ಈ ಲೋಕವನ್ನು ಮರೆಸಿ ಇನ್ನಾವುದೋ ಲೋಕದಲ್ಲಿ ವಿಹರಿಸುವಂತೆ’ ಭಾಸವಾಗುತ್ತದೆ….ಹಿಂದಿನ ಒಂದು ಬ್ಲಾಗಿನಲ್ಲಿ,ರಾಮಾಯಣವನ್ನು ಈಗಲೂ ನೋಡಲು ಸಾಧ್ಯ ಎಂದು ತಿಳಿಸಿ ಕೊಟ್ಟಿದ್ದೀರಿ, ಈಗಲೂ ಕೇಳಲು ಸಾಧ್ಯವೇ? ಸಂಸ್ಥಾನ ವರ್ಣಿಸಿದ ಪರಿಯಿಂದಾಗಿ ಕೇಳಬೇಕೆಂಬ ಹಂಬಲವಾಗುತ್ತಿದೆ!!!

    • jagadisha sharma

      ತುಂಬಾ ಒಳ್ಳೆಯ ಬಯಕೆ…

  • Ashwini Bhat

    ಅಯೋಧ್ಯೆಯಲ್ಲಿ ಉಳಿದಿದ್ದು ಎರಡೇ ಸದ್ದು, ಒಂದು ಗಾನ ಇನ್ನೊಂದು ಉದ್ಗಾರ
    ಆದರೆ ಇಲ್ಲಿ, ಇದನ್ನು ಓದಿ ಎರಡೂ ಕಡೆ(ಅಂತರಂಗ,ಬಹಿರಂಗ)ಉಳಿದಿದ್ದು ನಿಶ್ಯಬ್ದ ಮಾತ್ರ…
    (ಇದನ್ನು ಓದುತ್ತಾ ಓದುತ್ತಾ ಉದ್ಗಾರ ತೆಗೆಯಲೂ ಆಗದಿರುವಷ್ಟು ವಿಸ್ಮಯ!!)

    • jagadisha sharma

      ಹೌದು, ಹಾಗೆಯೇ ಆಗುತ್ತಿದೆ…

  • jagadisha sharma

    “ಅಯೋಧ್ಯೆಯ ಬೀದಿಗಳಲ್ಲುಂಟಾದ ಕುಶಲವರ ಪಾದಸ್ಪರ್ಶವು ಅರಮನೆಯ ಅಂತರಾತ್ಮದಲ್ಲಿ ಅವ್ಯಕ್ತ ವಾತ್ಸಲ್ಯಕಂಪನಗಳನ್ನೇರ್ಪಡಿಸಿತು…”

    ಎಂತಹ ಮಧುರ ಮಾತು!

    ತನ್ನ ಮಕ್ಕಳೆಂದು ಗೊತ್ತಿಲ್ಲದಿದ್ದರೂ ತಂದೆಯ ಹೃದಯಸ್ಪರ್ಶಿಸಿದ ಮಕ್ಕಳ ಉಪಸ್ಥಿತಿಯ ಭಾವದ ವರ್ಣನೆ ಅನುಪಮ.

    • http://hareraama.in/members/rnarayana/ Raghavendra Narayana

      “ತನ್ನ ಮಕ್ಕಳೆಂದು ಗೊತ್ತಿಲ್ಲದಿದ್ದರೂ ತಂದೆಯ ಹೃದಯಸ್ಪರ್ಶಿಸಿದ ಮಕ್ಕಳ ಉಪಸ್ಥಿತಿಯ ಭಾವದ ವರ್ಣನೆ ಅನುಪಮ”
      ಅನ೦ತ ಪ್ರಕೃತಿ ಇದ್ದರೇನು ಯಾವುದನ್ನು ಹೇಗೆ ಸವಿಯಬೇಕು ಎ೦ದು ತೋರಿಸುವ ಹಿರಿಯರ ಹಿರಿತನ ಹಿರಿದು, ಅದು ಆ ಹರಿಯದು

  • http://hareraama.in/members/bharaja/ ಜಗದೀಶ್ ಬಿ. ಆರ್.

    ಗುರುಗಳ ವಿಚಾರನವನೀತವನ್ನು ಸವಿಯುವುದೇ ಒಂದು ಸೊಗಸಾದ ಅನುಭವ. ಇಲ್ಲಿ ಎಲ್ಲವೂ ಅಚ್ಚುಕಟ್ಟು, ರುಚಿಗೆ ತಕ್ಕಷ್ಟು! ಸವಿಯಲು ಕೊಟ್ಟ ಸಿಹಿಉಂಡೆಯ ಯಾವಭಾಗ ಇಷ್ಟ ಎಂದು ಕೇಳಿದರೆ..? ಏನು ಹೇಳುವುದು…? ಪ್ರತಿಯೊಂದು ಭಾಗವೂ ಇಷ್ಟವೇ, ಸ್ವಾದಿಷ್ಟವೇ!!

    • Ashwini Bhat

      ಉಪಮೆ ಬಹಳ ಬಹಳ ಚೆನ್ನಾಗಿದೆ ಜಗದೀಶಣ್ಣ…

    • http://hareraama.in/members/rnarayana/ Raghavendra Narayana

      ದಿಟ.. ಸ್ವಾದಿಷ್ಟ..

  • http://hareraama.in/members/rnarayana/ Raghavendra Narayana

    ಶ್ರೀ ಗುರುಭ್ಯೋ ನಮಃ
    ಗುರುವಿಲ್ಲದೆ ಜಗವೆಲ್ಲಿದೆ

  • yajneshbhat

    ಅದೆಷ್ಟು ಸುಂದರ ವರ್ಣನೆ. ಓದುತ್ತಾ ಹೋದ ಹಾಗೆ ಇನ್ನೇನು ರಾಮ ಅವರನ್ನು ಗುರುತಿಸುತ್ತಾನೆ ಎನ್ನುವ ಹಾಗೆ ಸಶೇಷಃ.

    ಮುಂದಿನ ಬಾಗಕ್ಕೆ ಕಾದು ಕುಳಿತಿದ್ದೇನೆ.

  • http://hareraama.in/members/mohanbhaskar/ Mohan Bhaskar

    ಸೀತಾಮಾತೆಯನ್ನು ಬೀಳ್ಕೊಟ್ಟುಬಂದ ಕುಶಲವರನ್ನು ಅವಳು ತನ್ನ ಮಡಿಲೊಳಗೆ ಹಾಕಿಕೊಂಡಳು…
    ಮಾತ್ರವಲ್ಲ, ಮನೆಗೆ ಕರೆದೊಯ್ದಳು…!
    ಸರಿಯಾಗಿ ಅರ್ಥವಾಗಲಿಲ್ಲ.. ಕುಶ – ಲವರಿಬ್ಬರೇ ಬ೦ದರೇ? ವಾಲ್ಮೀಕಿ ಮಹರ್ಷಿಗಳು ಬರಲಿಲ್ಲವೇ? ಸೀತಾಮಾತೆ ?ಪ್ರಣಾಮಗಳು – ಮೋಹನ ಭಾಸ್ಕರ

    • http://hareraama.in Editor@HareRaama.in

      ರಾಮಾಯಣದ ಬಾಲಕಾಂಡ ಮತ್ತು ಉತ್ತರಕಾಂಡಗಳಲ್ಲಿ ಈ ಸಂದರ್ಭ ಸ್ವಲ್ಪ ಭಿನ್ನವಾಗಿ ಬಂದಿದೆ. ಇಲ್ಲಿರುವುದು ಬಾಲಕಾಂಡವನ್ನು ಆಧರಿಸಿದ ಕತೆ.

      ಎರಡು ಕಡೆಯಲ್ಲಿಯೂ ಸೀತೆ ಜೊತೆಗಿರುವುದಿಲ್ಲ.

      ಹಾಡುವಾಗ ಎರಡು ಕಡೆಯಲ್ಲಿಯೂ ವಾಲ್ಮೀಕಗಳು ಜೊತೆಗಿರಲಿಲ್ಲ ಎಂದೇ ಇದೆ. ಆದರೆ ಉತ್ತರಕಾಂಡದ ಕತೆಯಂತೆ ಅಶ್ವಮೇಧ ಯಾಗಕ್ಕೆ ವಾಲ್ಮೀಕಿಗಳು ಶಿಷ್ಯರೊಂದಿಗೆ ಬಂದಾಗ ರಾಮಾಯಣಗಾನ ನಡೆಯುತ್ತದೆ. ಆದರೆ ಹಾಡುವಾಗ ವಾಲ್ಮೀಕಿಗಳು ಜೊತೆಗಿರುವುದಿಲ್ಲ.

    • Anuradha Parvathi

      ಸೀತಾಮಾತೆಯನ್ನು ಬೀಳ್ಕೊಟ್ಟುಬಂದ ಕುಶಲವರು ರಾಮಾಯಣಮಾತೆ ತನ್ನ ಮಡಿಲೊಳಗೆ ಹಾಕಿಕೊಂಡಳು. ಗಮನಿಸಿ.

  • seetharama bhat

    ಹರೇರಾಮ

    ಕುಶಲವರ ಗಾನ ಎಲ್ಲರನ್ನೂ ಸೆಳೆದಂತೆ
    ನಮ್ಮ ಮೈ-ಮನವನ್ನೂ ಸೆಳೆದಿದೆ
    ಅವರಿಗೆ ರಾಮ ಸಾಕ್ಷಾತ್ಕಾರವಾದಂತೆ
    ನಮಗೆ ಆತ್ಮ ಸಾಕ್ಷಾತ್ಕಾರವಾಗಲಿ

    ಹರೇರಾಮ

  • http://hareraama.in/members/rnarayana/ Raghavendra Narayana

    ರಾಮ – ಸೋಮ – ಇಬ್ಬರೂ ಅ೦ತರ೦ಗ ವಿಹಾರಿಗಳು, ಬಹಿರ೦ಗದಲ್ಲಿ ಕಣ್ಣು ತೆರೆದರೆ ಪ್ರತಿ ಹೆಜ್ಜೆ ನಟರಾಜ ನರ್ತನ, ರಸದೌತಣ.
    ನಾರಾಯಣ ನಿನ್ನ ರಾಮಾಯಣ ಸಾತ್ವಿಕರಿಗಷ್ಟೇ ಅಲ್ಲರೆ ಸರ್ವರಿಗೂ ನೀ ಉಣಿಸುವ ಕರುಣಾಮೃತದ ಒ೦ದು ಪರಿಚಯವಷ್ಟೆ ಎನ್ನಿಸುತ್ತಿದೆ. ನಿನ್ನೊಳು ಅದೇಷ್ಟು ಕೋಟಿ ರಾಮನ೦ತವರು ಇರುವರು ಎ೦ಬುದು ನೀನೊಬ್ಬನೇ ಅರಿತ್ತಿದ್ದರು ಮರೆತು ನಿರ್ಲಿಪ್ತನಾಗಿರುವೆ.
    ನಾರಾಯಣ ನಿನ್ನ ಅನ೦ತ ಅನುಪಮ ಕರುಣೆ ನಮ್ಮ ಕಣ-ಕಣವನ್ನು ಕ್ಷಣ-ಕ್ಷಣವು ಕಾಯುತ್ತಿದೆ.
    ನಾರಾಯಣ ನಾ ಬೇರೆಯಲ್ಲ ನೀ ಬೇರೆಯಲ್ಲ ಎ೦ದೆನ್ನ ಆಲ೦ಗಿಸೋ
    ನಾ ನಿನ್ನ ಒಡಲಿನಲ್ಲಿರಲು ನೀ ಹೇಗೆ ಆಲ೦ಗಿಸುವೆಯೋ

  • http://hareraama.in/members/rnarayana/ Raghavendra Narayana

    ರಾಮಯಣವೆ೦ಬ ಕಾವ್ಯದ ಕಡಲಿ೦ದ ಹೆಕ್ಕಿ ತೆಗೆದ೦ತಹ ಮುತ್ತು ರತ್ನಗಳು ಈ ಕಾವ್ಯಹನಿಗಳು.
    ಅಥವಾ ರತ್ಯಕಾವ್ಯಕಡಲಲ್ಲಿ ನಮ್ಮ ಕಣ್ಣಿಗೆ ಕೈಗೆ ಸಿಕ್ಕ ಮುತ್ತುಗಳು ಮಾತ್ರ…?
    .
    _________________________________________
    “ಕುಮಾರರ ಗಾನಧ್ವನಿಯು ಪಸರಿಸುತ್ತಿದ್ದಂತೆಯೇ…
    ಮಲಗಿದವರೆದ್ದುಕುಳಿತರು…
    ಕುಳಿತವರು ನಿಂತರು…
    ನಿಂತವರು ನಾದದೆಡೆಗೆ ನಡೆದರು…
    ಕೇಳುಗರ ಜೊತೆಗೂಡಿದರು…
    ಅಯೋಜಿತವಾಗಿ ಕುಶಲವರ ರಾಮಾಯಣಗಾನವು ನಡೆಯತೊಡಗಿದಾಗ…
    ಬೀದಿಯಲ್ಲಿ ನಡೆದುಹೋಗುವವರು ನಿಂತರು…
    ನಿಂತವರು ಕುಳಿತರು…
    ಕುಳಿತವರು ಕಣ್ಮುಚ್ಚಿದರು…
    ಈ ಲೋಕವನ್ನೇ ಮರೆತರು…”

    “ಅಯೋಧ್ಯೆಯಲ್ಲಿ ಉಳಿದದ್ದು ಎರಡೇ ಸದ್ದು…
    ಕುಶಲವರ ಗಾನವೊಂದಾದರೆ ಜನಸಮೂಹದ ಉದ್ಗಾರವಿನ್ನೊಂದು…”

    “ಶರೀರದ ಎಲ್ಲಿಯೋ ಒಂದೆಡೆ ಉಂಟಾಗುವ ಸುಖಸ್ಪರ್ಶ ಕ್ಷಣಮಾತ್ರದಲ್ಲಿ ಹೃದಯವನ್ನು ತಲುಪಿ ಅಲ್ಲಿ ಮಧುರಭಾವಕಂಪನಗಳನ್ನೇರ್ಪಡಿಸುವಂತೆ…”

    “ಕಿರಿಬೆರಳ ಹಿಡಿದೆಳೆಯುವ ಎಳೆಯ ಕರಗಳಂತೆ ಬಳಿಕರೆಯತೊಡಗಿತು ಇಲ್ಲವೆನ್ನಲಾರದಂತೆ…”

    “ಧರ್ಮವನ್ನುಳುಹಲು ದಂಡಕೆಯ ಕಂಟಕಗಳಿಂದ ವಿದ್ಧವಾದ ಶ್ರೀಪಾದಗಳು ಅಚಿಂತಿತವಾಗಿ – ಅಪ್ರಯತ್ನವಾಗಿ ಉಪ್ಪರಿಗೆಯ ಮೆಟ್ಟಿಲುಗಳನ್ನೇರಿದವು…”

    “ತನ್ನ ತರಂಗಗಳ ವಿಲಾಸವನ್ನು ವೀಕ್ಷಿಸಲು ಸಾಗರವೇ ಮೇಲೆದ್ದುಬಂದಂತಿದ್ದ ಅಪೂರ್ವ ಸನ್ನಿವೇಶವದು…”
    _________________________________________

  • http://hareraama.in/members/rnarayana/ Raghavendra Narayana

    “ಧರ್ಮವನ್ನುಳುಹಲು ದಂಡಕೆಯ ಕಂಟಕಗಳಿಂದ ವಿದ್ಧವಾದ ಶ್ರೀಪಾದಗಳು”
    ———————————————————————————-
    ಗುರುಗಳೇ, ಸಮಯ ಸಿಕ್ಕರೆ ದಯಮಾಡಿ ಹೆಚ್ಚು ವಿವರಿಸಿ.
    ಸಾಷ್ಠಾ೦ಗ ಪ್ರಣಾಮಗಳೊ೦ದಿಗೆ.

  • http://hareraama.in/members/rnarayana/ Raghavendra Narayana

    ಸ೦ಸ್ಥಾನ,
    ಪ್ರತಿ ಲೇಖನದೊ೦ದಿಗೆ ಸ೦ಬಧಿಸಿದ ರಾಮಾಯಣ ಶ್ಲೋಕಗಳು ಓದಲು ಸಿಕ್ಕರೆ ಒಳ್ಳೆಯದು ಎ೦ಬ ಭಾವನೆ.
    ಅಥವಾ ಪೂರ್ಣ ಕನ್ನಡ ಅನುವಾದವಿರುವ ವಾಲ್ಮೀಕಿ ರಾಮಯಣದ ಪುಸ್ತಕ ಇದ್ದರೆ, ಗುರುಗಳು ಸೂಚಿಸಿದರೆ, ಜೊತೆಗಿರಿಸಿಕೊಳ್ಳಬಹುದು.
    ಅಥವಾ ಮಠದಿ೦ದ ಕನ್ನಡ ಅನುವಾದದ ಪುಸ್ತಕ ಗುರುಗಳ ಮಾರ್ಗದರ್ಶನದಲ್ಲಿ ಸಿದ್ಧವಾದರೆ (ಭಾಗಗಳಲ್ಲಿ) ಇನ್ನೂ ಅದ್ಭುತ
    .
    ಹರೇರಾಮ ಹರನೇ ರಾಮ

  • sriharsha.jois

    ಸವಿಯುಣುವುದೊಂದೇ ನಮ್ಮ ಕಾರ್ಯ…
    ಉಣಿಸುವವರೆಮ್ಮ ಗುರುವರ್ಯ….!

  • chs bhat

    ಹರೇ ರಾಮ. ವರಲಕ್ಶ್ಮೀ ಹಬ್ಬದಂದು ಸಿಕ್ಕಿದ ಅತ್ಯಂತ ಆತ್ಮೀಯ ವಿಶೇಷ ಸಂಪತ್ತು ಈ ಲೇಖನ!
    ಸತ್ಯ.

  • Jayashree Neeramoole

    ಗುರುಚರಣಗಳಿಗೆ ಅನಂತ ಪ್ರಣಾಮಗಳು. “ನದಿ ನೀರೇನೋ ಸುಲಭವಾಗಿ ಹರಿದು ಸಾಗರವನ್ನು ಸೇರಬಹುದು. ಮುಚ್ಚಿದ ಕರಡಿಗೆಯೊಳಗಿನ ನೀರು ನದಿಯಲ್ಲಿದ್ದರೂ ಸಾಗರ ಸೇರಲು ಪ್ರಾರಬ್ಧವನ್ನೇ ಬದಲಿಸುವ ಶಕ್ತಿಯುಳ್ಳ ಗುರುಗಳ ಅನಗ್ರಹದಿಂದ ಮಾತ್ರ ಸಾಧ್ಯ”. ಮನ್ನಿಸಿ ಅನುಗ್ರಹಿಸಿ ದಾರಿ ತೋರಿ ಮುನ್ನಡೆಸಿ.

    • Jayashree Neeramoole

      ಗುರುಚರಣಗಳಿಗೆ ಅನಂತ ಪ್ರಣಾಮಗಳು.

      ಎಂತು ಬಣ್ಣಿಸಲಿ ಗುರುಕ್ರುಪೆಯ….. ಬಂಧನ ಮುಕ್ತವಾದ ನೀರಿಗೀಗ ಸಾಗರ ಸೇರುವ ತವಕ……

      • Jayashree Neeramoole

        ಗುರುಚರಣಗಳಿಗೆ ಅನಂತ ಪ್ರಣಾಮಗಳು…

        ಸಾಗರದ ಸೆಳೆತ, ಭೋರ್ಗರೆತ, ಸೇರುವ ತುಡಿತ ಜಾಸ್ತಿಯಾಗುತ್ತಿದೆ… ರಾಮ… ಸೆಳೆದುಕೋ… ಎನ್ನ ಸಾಗರದೊಳೊಂದಾಗಿಸು…

  • maruvala narayana

    ರಾಘವೇಶ್ವರ ಶ್ರೀಗಳ ಬಗೆಗೆ ಗೊತ್ತಿದ್ದವರೆಲ್ಲ್ರಿಗೆ ಅವರು ರಾಮಾಯಣದ ಬಗೆಗೆ ಬರೆಯುತ್ತಾರೆ ಎಂದು ತಿಳಿದಿರಲಾರರು.
    ರಾಮಾಯಣದ ಬಗೆಗೆ ಬರೆಯುತ್ತಾರೆ ಎಂದು ತಿಳಿದವರೆಲ್ಲ್ರಿಗೆ ಕಂಪ್ಯೂಟರ್ ಲಭ್ಯವಿರಲಾರದು
    ಕಂಪ್ಯೂಟರ್ ಲಭ್ಯವಿದ್ವವರೆಲ್ಲಿರಿಗೆ Internet ಗೆ access ಇರಲಾರದು.
    Internet ಗೆ access ಇದ್ದವರೆಲ್ಲರೂ ಲೇಖನವನ್ನು ಓದಿರಲಾರರು.
    ಓದಿದವರೆಲ್ಲರಿಗೆ ಪ್ರತಿಕ್ರೀಯೆ ನೀಡಬೇಕೆಂಬ ಅನಿಸಿಕೆ ಬರಲಾರದು.
    ಪ್ರತಿಕ್ರೀಯೆ ನೀಡಬೇಕೆಂಬ ಅನಿಸಿಕೆ ಬಂದವರೆಲ್ಲರಿಗೆ ಪ್ರತಿಕ್ರೀಯೆ ನೀಡಲು ತಿಳಿಯದು.
    ಹಾಗಿದ್ದರೂ ಶ್ರೀಗಳವರ ಲೇಖನಕ್ಕೆ ಇಷ್ಟು ಪ್ರತಿಕ್ರೀಯೆಗಳು ಲೇಖನಗಳ ಶ್ರೇ‍ಷ್ಠತೆಯ ಬಗೆಗೆ ತಿಳಿಸುತ್ತದೆ. ರಾಮಾಯಣವನ್ನು ಹೊಸ ರೀತಿಯಲ್ಲಿ ಪರಿಚಯಿಸುತ್ತಿರುವ ಶ್ರೀ ಸಂಸ್ಠಾನಕ್ಕೆ ಕೋಟಿ ಕೋಟಿ ಪ್ರಣಾಮಗಳು
    ಮರುವಳ ನಾರಾಯಣ

    • Madhu Dodderi

      Very Well said…

  • Anuradha Parvathi

    ಅದ್ಭುತ ಸಂಸ್ಥಾನ ಅದ್ಭುತ.

  • Sharada Jayagovind

    so beautiful…soul touching narration…

  • http://hareraama.in/members/dattumatha/ dattu

    *”ಸೋಮ”(ಮನಸ್ಸು)ನಿಗೆ ರಾಮರಸ ಇಷ್ಟವಾದುದೇ?……………………….
    ರಾಮರಸ ಒಳಸೇರಿದಾಗ ಕುಶಲರ ಸ್ಥಿತಿಯಿದಲ್ಲವೇ?…………..

    *ಪೃಕೃತಿ ತತ್ವದ ಕಡೆಯಿಂದ ಪುರುಷತತ್ವದ ಕಡೆಗೆ ಕುಶಲ(ವ)ರ ಪ್ರಯಾಣ ವಿದೇ?…….

    * ತಮಸ್ಸು ತುಂಬಿದ ಮನದಲ್ಲಿ ನೆಲೆಸಿ ಶರೀರವೆಂಬ “ವಿಶ್ವ”ವನ್ನು ವ್ಯಾಪಿಸಿದಳೇ ಅವಳು…?

    *ಮನವೆಂಬ ಸರಯೂ ಅತ್ತಿತ್ತ ಹರಿದಾಡುವುದನ್ನು ಬಿಟ್ಟಾಗಲಲ್ಲವೇ,
    (ರಾಮರೀರ್ವರು) ಒಳಗೂ-ಹೊರಗೂ ರಾಮನ ದರ್ಶನದ ಭಾಗ್ಯ?…………
    ಆಗ ಮಿಡಿಯದಿದ್ದೀತೇ ಅಯೋಧ್ಯೆ(ಶರೀರ)………..

  • gopalakrishna pakalakunja

    ಆದಿ ಶಂಕರರಿಗೆ ಮೂವತ್ತಾರನೇಯ ಶಂಕರರನ್ನು ಕಂಡಾಗ ಹಾಗೆಯೇ ಅನಿಸಿದ್ದಿರಬೇಕು……….
    “…ಗಗನಾಂಗಣದ ಮಧ್ಯೆ ನಿಂತು ಧರಣಿಯೆಡೆಗೆ ದೃಷ್ಟಿ ಬೀರುವ ಪೂರ್ಣಚಂದ್ರನಿಗೆ ಸಾಗರಮಧ್ಯದಲ್ಲಿ ತನ್ನದೇ ಪ್ರತಿಬಿಂಬವು ಗೋಚರಿಸುವಂತೆ…”

    • jagadisha sharma

      ಅದ್ಭುತ!!!

    • Anuradha Parvathi

      ಅದ್ಭುತ!!!!!ಅದ್ಭುತ, ಧಿಟ

  • Dr J Thirumala Prasad

    ಅದ್ಭುತ, ಕಣ್ಣಿಗೆ ಕಟ್ಟುವಂತಿದೆ.

  • shobha lakshmi

    ಈ ಲೇಖನ ಓದುವಾಗ ಕಣ್ಣಿಲಿ ನೀರು ಬತ್ತು,,,ಅದ್ಭುತ….ನಿಜವಾಗಿ ಅಯೋಧ್ಯೆಗೆ ಹೋಗಿ ನೋಡಿದ ಹಾ೦ಗೆ ಆವುತ್ತು..ಕುಶಲವರ ಗಾನ ಎ೦ಗಳು ಕೇಳಿದ ಹಾ೦ಗೆ ಅನಿಸಿತು…ಧನ್ಯಳಾದೆ ಸ೦ಸ್ಥಾನ..

  • http://hareraama.in/members/madhyastharv/ madhyastharv

    ಹರೆ ರಾಮ ನಮ್ಮ ಸಂಸ್ಥಾನ ಕ್ಕೆ ಮಾತ್ರ ಇರಿತಿ ಬರೆಯಲು ಸಾದ್ಯ ಅನಂತ ಪ್ರಣಾಮಗಳೂ…………………………………………

  • nandaja haregoppa

    ಹರೇ ರಾಮ

    ಓದುತ್ತ ಓದುತ್ತ ಅನಿಸಿದ್ದು ಹೀಗೆ

    ಮುಂದಿನ ದಿನಗಳಲ್ಲಿ

    ಅಶೋಕೆಯ ಸಾಮ್ರಾಜ್ಯದಲಿ

    ಕೈಯಲ್ಲಿ ತಂಬೂರಿ…
    ಕಣ್ತುಂಬ ರಾಘವೇಶ್ವರ ಶ್ರೀಗಳು
    ಬಾಯಲ್ಲಿ ಗುಣಗಾನ
    ಶಿಷ್ಯರು.. ಹೀಗೆ ಸಾಗುತ್ತಿದ್ದರೆ ..

  • http://hareraama.in/members/sreenivasa/ sreenivasa murthy

    ಹರೇ ರಾಮ
    ನಿಜಕ್ಕೂ ಈ ಲೇಖನದ ಸಾರ ಸಾಗರಕ್ಕಿಂತ ಆಳ…..
    ಓದಿದ ಹಾಗೆಲ್ಲಾ ಮಾತಿನಲ್ಲಿ ವಿವರಿಸಲಾಗದ ಅವ್ಯಕ್ತ ಭಾವ ಮನಸ್ಸನ್ನು ತುಂಬುತ್ತದೆ.
    “ಮನೆಗೈತರುವ ತನ್ನೊಡೆಯನ ಕುಡಿಗಳನ್ನು ಕಂಡು ಅವ್ಯಕ್ತವಾಗಿ ಮಿಡಿದಳು ಅಯೋಧ್ಯೆ…!
    ‘ಈರ್ವರು ರಾಮರು ಬಂದರೇ’ ಎಂಬ ಬೆರಗಿನಲ್ಲಿ ಹರಿಯುವುದನ್ನೇ ಮರೆತಳು ಸರಯೂ…!”
    ಅದ್ಭುತವಾದ ವರ್ಣನೆ ಗುರುದೇವ……….
    ಓದುವವರು ಧನ್ಯರಾದರು….
    ರಾಮಸಾಗರಗಾಮಿನಿಯಲ್ಲಿ ಮಿಂದೆದ್ದು ಪುಳಕಿತರಾದೆವು ಗುರುದೇವಾ………………….

Powered By Indic IME