|| ಹರೇರಾಮ ||

ಸೋಮರಸ ಒಳಸೇರಿದರೆ ಸುಮ್ಮನಿರಗೊಡುವುದೇ…?
ಈ ಲೋಕವನ್ನು ಮರೆಸಿ ಇನ್ನಾವುದೋ ಲೋಕದಲ್ಲಿ ವಿಹರಿಸುವಂತೆ ಮಾಡದೇ ಅದು…?
ರಾಮರಸ ಒಳಸೇರಿದಾಗ  ಕುಶಲವರ ಸ್ಥಿತಿಯೂ ಹಾಗೆಯೇ ಆಯಿತು…

ಬಿಂದುವಿನೊಳು ಸಿಂಧು ಹಿಡಿಸುವುದೇ…?
ವಿಶ್ವಂಭರನ ಚರಿತೆಯ ವಿಶ್ವಕಾವ್ಯವು ಪುಟಾಣಿಮಕ್ಕಳ ಪುಟ್ಟಹೃದಯದೊಳಗೆ ಅದು ಹೇಗೆ ಹಿಡಿಸಿತೋ..?
ಹಿಡಿಸಲಾರದೇ ಹೊರಹೊಮ್ಮಿ ಹುಚ್ಚು ಹೊಳೆಯಾಗಿ ಹರಿದಿರಬೇಕು…!

ಕೈಯಲ್ಲಿ ತಂಬೂರಿ…
ಕಣ್ತುಂಬ ರಾಮ…
ಬಾಯಲ್ಲಿ ರಸಕಾವ್ಯ…

ಗಂಗೋತ್ರಿಯಿಂದ ಹೊರಟು ಗಂಗಾಸಾಗರವನ್ನು ಸೇರುವ ಮುನ್ನ ದೇಶದೆಲ್ಲೆಡೆ ಹರಿಯವ ಗಂಗೆಯಂತೆ…
ಆಶ್ರಮದಿಂದ ಹೊರಹೊರಟು ಹಳ್ಳಿಹಳ್ಳಿಗಳಲ್ಲಿ ಗಲ್ಲಿಗಲ್ಲಿಗಳಲ್ಲಿ  ಹಾಡತೊಡಗಿದರವರು ರಾಮಕಥೆಯನ್ನು…

” ಐಸೀ ಲಾಗೀ ಲಗನ್…
ಮೀರಾ ಹೋಗಯೀ ಮಗನ್…
ವೋ ತೋ ಗಲೀ ಗಲೀ ಹರಿಗುನ್ ಗಾನೇ ಲಗೀ…”

ಕೃಷ್ಣರಸವೂಡಿದಾಗ ಅರಮನೆಯನ್ನು ಪರಿತ್ಯಜಿಸಿ, ಗಲ್ಲಿಗಲ್ಲಿಗಳಲ್ಲಿ ಹರಿಗುಣವನ್ನು ಹಾಡಿ ಹಾಡಿ ಕುಣಿದ, ಕುಣಿದು ಕುಣಿದು ಹಾಡಿದ ಮೀರಾ ನೆನಪಾಗುವಳಲ್ಲವೇ ಇಲ್ಲಿ…!?

ತನ್ನಲ್ಲಿ ತನ್ಮಯರಾದ ರಾಮತನಯರನ್ನು ಕಂಡು ರಾಮಾಯಣಮಾತೆಯೂ ಕರಗಿದಳೇನೋ…?
ಸೀತಾಮಾತೆಯನ್ನು ಬೀಳ್ಕೊಟ್ಟುಬಂದ ಕುಶಲವರನ್ನು ಅವಳು ತನ್ನ ಮಡಿಲೊಳಗೆ ಹಾಕಿಕೊಂಡಳು…
ಮಾತ್ರವಲ್ಲ, ಮನೆಗೆ ಕರೆದೊಯ್ದಳು…!

ಅಯೋಧ್ಯೆಯಲ್ಲದೆ ಮತ್ತಾವುದು ಅವಳ ಮನೆ…?
ತಮಸಾತೀರದಲ್ಲಿ ಹುಟ್ಟಿ, ಸರಯೂತೀರದಲ್ಲಿ ನೆಲೆಸಿ, ವಿಶ್ವದಲ್ಲೆಲ್ಲ ಪಸರಿಸಿದವಳಲ್ಲವೇ ಅವಳು…?

ಅದು ತಮ್ಮೂರು, ತಮ್ಮ ಮನೆ ಎಂಬ ಅರಿವಿಲ್ಲದೆಯೇ ಅಯೋಧ್ಯೆಯನ್ನು ಪ್ರವೇಶಿಸಿದರು ಕುಶಲವರು…
ಮನೆಗೈತರುವ ತನ್ನೊಡೆಯನ ಕುಡಿಗಳನ್ನು ಕಂಡು ಅವ್ಯಕ್ತವಾಗಿ ಮಿಡಿದಳು ಅಯೋಧ್ಯೆ…!
‘ಈರ್ವರು ರಾಮರು ಬಂದರೇ’ ಎಂಬ ಬೆರಗಿನಲ್ಲಿ ಹರಿಯುವುದನ್ನೇ ಮರೆತಳು ಸರಯೂ…!

ಬಾಲರಾಮನು ನಲಿದಾಡಿದ ಅಯೋಧ್ಯೆಯ ಬೀದಿಗಳಲ್ಲಿ – ರಾಜಬೀದಿಗಳಲ್ಲಿ ನಲಿನಲಿದು ಹಾಡಿದರು ರಾಮಬಾಲರು…
ಮಿಂಚಿನಮರಿಗಳು ಸಂಚರಿಸಿದಂತಾಯಿತು ನಗರಿಯಲ್ಲಿ…

ಕುಮಾರರ ಗಾನಧ್ವನಿಯು ಪಸರಿಸುತ್ತಿದ್ದಂತೆಯೇ…
ಮಲಗಿದವರೆದ್ದುಕುಳಿತರು…
ಕುಳಿತವರು ನಿಂತರು…
ನಿಂತವರು ನಾದದೆಡೆಗೆ ನಡೆದರು…
ಕೇಳುಗರ ಜೊತೆಗೂಡಿದರು…

ಅಯೋಜಿತವಾಗಿ ಕುಶಲವರ ರಾಮಾಯಣಗಾನವು ನಡೆಯತೊಡಗಿದಾಗ…
ಬೀದಿಯಲ್ಲಿ ನಡೆದುಹೋಗುವವರು ನಿಂತರು…
ನಿಂತವರು ಕುಳಿತರು…
ಕುಳಿತವರು ಕಣ್ಮುಚ್ಚಿದರು…
ಈ ಲೋಕವನ್ನೇ ಮರೆತರು…
ಕುಮಾರರ ಗಾನತರಂಗವು ಅಯೋಧ್ಯೆಯಲ್ಲಿ ಯಾರು-ಯಾರನ್ನು ತಲುಪಿತೋ ಅವರು ತಮಗರಿವಿಲ್ಲದಂತೆಯೇ ಆ ಕಡೆಗೆ ಸೆಳೆಯಲ್ಪಟ್ಟರು…

ಗ್ರಾಹಕನು ಬಯಸಿದ ವಸ್ತುವನ್ನು ಕೊಡುವಷ್ಟರಲ್ಲಿ ರಾಮಾಯಣವನ್ನು ಕೇಳಿಸಿಕೊಂಡ ವರ್ತಕನಿಗೆ ಮೌಲ್ಯವನ್ನು ತೆಗೆದುಕೊಳ್ಳುವುದೇ ಮರೆತುಹೋಯಿತು…
ಒಲೆಯ ಮೇಲಿಟ್ಟ ಹಾಲಿನಪಾತ್ರೆಯನ್ನು ಇಳಿಸುವುದನ್ನೇ ಮರೆತು ಗೃಹಿಣಿಯರು ಬೀದಿಗೆ ಧಾವಿಸಿದರು…
ಅಮ್ಮನ ಕೆಚ್ಚಲಲ್ಲಿ ಬಾಯಿಟ್ಟು ಹಸಿವಾರಿಸಿಕೊಳ್ಳುತ್ತಿದ್ದ ಎಳೆಗರುಗಳು ಮುಖ ತಿರುಗಿಸಿ, ಕಿವಿ ನಿಮಿರಿಸಿ ರಾಮಾಯಣ ಕೇಳತೊಡಗಿದವು…
ಕ್ಷಣವೊಂದರಲ್ಲಿ ಹತ್ತೂ ದಿಶೆಗಳನ್ನವಲೋಕಿಸುವ ಸಹಸ್ರದೃಷ್ಟಿಗಳಾದ ಪ್ರಹರಿಗಳ ಕಣ್ಣುಗಳು ಕುಮಾರರಲ್ಲಿ ಕೀಲಿಸಿಹೋದವು…
ವಜ್ರಕಠಿಣವಾದ ಅವರ ಮುಖದಲ್ಲಿ ಒಸರಿತು ಕಣ್ಣೀರು…

ಸಂಖ್ಯೆಯಿಲ್ಲದ ಸಂಖ್ಯೆಯಲ್ಲಿ ಸೇರಿದ ಜನಸಮೂಹವು ಕುಶಲವರು ಸಂಚರಿಸಿದಂತೆ ಜೊತೆಗೂಡಿ ಹಿಂಬಾಲಿಸತೊಡಗಿತು…
ಅಯೋಧ್ಯೆಯಲ್ಲಿ ಉಳಿದದ್ದು ಎರಡೇ ಸದ್ದು…
ಕುಶಲವರ ಗಾನವೊಂದಾದರೆ ಜನಸಮೂಹದ ಉದ್ಗಾರವಿನ್ನೊಂದು…

ಶರೀರದ ಎಲ್ಲಿಯೋ ಒಂದೆಡೆ ಉಂಟಾಗುವ ಸುಖಸ್ಪರ್ಶ ಕ್ಷಣಮಾತ್ರದಲ್ಲಿ ಹೃದಯವನ್ನು ತಲುಪಿ ಅಲ್ಲಿ ಮಧುರಭಾವಕಂಪನಗಳನ್ನೇರ್ಪಡಿಸುವಂತೆ…
ಅಯೋಧ್ಯೆಯ ಬೀದಿಗಳಲ್ಲುಂಟಾದ ಕುಶಲವರ ಪಾದಸ್ಪರ್ಶವು ಅರಮನೆಯ ಅಂತರಾತ್ಮದಲ್ಲಿ ಅವ್ಯಕ್ತ ವಾತ್ಸಲ್ಯಕಂಪನಗಳನ್ನೇರ್ಪಡಿಸಿತು…
ತನ್ನ ನಿತ್ಯಸಹಚರಿಯಾದ ಮೂಲಪ್ರಕೃತಿಯ ಚಿರಕಾಲವಿರಹದಿಂದ ಸಂತಪ್ತನಾದ ಪರಮಪುರುಷನಿಗೆ ಆಕೆಯ ಹೃದಯದುಸಿರೇ ತಂಗಾಳಿಯಾಗಿ ಅರಮನೆಯ ಸುತ್ತ ಸುಳಿದಾಡಿದಂತೆನಿಸತೊಡಗಿತು…
ಭೂಸುತೆಯನ್ನು ಬಹುಕಾಲದಿಂದ ಕಾಣದೆ ಕುಂದಿದ ಕಂಗಳು, ಆಕೆಯ ಸವಿನುಡಿಗಳನ್ನು ಕೇಳಲು ಅದೆಷ್ಟೋ ಕಾಲದಿಂದ ಕಾತರಿಸಿದ ಕಿವಿಗಳು ಅದೇನೋ ಸುಳಿವು ಸಿಕ್ಕಂತೆನಿಸಿ ತನುವಿನಲ್ಲಿ ರೋಮಾಂಚನ ತಂದವು…
ಯಾರ ಅಪ್ಪಣೆಯನ್ನೂ ಎದುರು ನೋಡದೆ ನೇರವಾಗಿ ಒಳಬರುವ ಮನೆಯ ಮಕ್ಕಳಂತೆ ಎಳೆಯ ಕೊರಳುಗಳಿಂದ ಹೊರಹೊಮ್ಮಿದ ಮಧುರಮಂಗಲನಿನಾದವು ಅರಮನೆಯ ಒಳಪ್ರವೇಶಿಸಿ ದೊರಯ ಕಿವಿದೆರೆಗಳನ್ನು ಮೀಟಿತು…
ಕಿರಿಬೆರಳ ಹಿಡಿದೆಳೆಯುವ ಎಳೆಯ ಕರಗಳಂತೆ ಬಳಿಕರೆಯತೊಡಗಿತು ಇಲ್ಲವೆನ್ನಲಾರದಂತೆ…
ಧರ್ಮವನ್ನುಳುಹಲು ದಂಡಕೆಯ ಕಂಟಕಗಳಿಂದ ವಿದ್ಧವಾದ ಶ್ರೀಪಾದಗಳು ಅಚಿಂತಿತವಾಗಿ – ಅಪ್ರಯತ್ನವಾಗಿ ಉಪ್ಪರಿಗೆಯ ಮೆಟ್ಟಿಲುಗಳನ್ನೇರಿದವು…

ಗಗನಾಂಗಣದ ಮಧ್ಯೆ ನಿಂತು ಧರಣಿಯೆಡೆಗೆ ದೃಷ್ಟಿ ಬೀರುವ ಪೂರ್ಣಚಂದ್ರನಿಗೆ ಸಾಗರಮಧ್ಯದಲ್ಲಿ ತನ್ನದೇ ಪ್ರತಿಬಿಂಬವು ಗೋಚರಿಸುವಂತೆ…
ಉಪ್ಪರಿಗೆಯಲ್ಲಿ ನಿಂತು ರಾಜಮಾರ್ಗದೆಡೆಗೆ ದೃಷ್ಟಿ ಹಾಯಿಸಿದ ರಾಮಚಂದ್ರನಿಗೆ ಗೋಚರಿಸಿದವು ಜನಸಾಗರದ ನಡುವೆ ಶೋಭಿಸುವ ತನ್ನದೇ ಅವಳಿ ಪ್ರತಿಬಿಂಬಗಳು…!

ಭುವಿಯನ್ನು ಬೆಳಗುವ ತನ್ನ ಎಳೆಯ ಕಿರಣಗಳ ಶೋಭೆಯನ್ನು ವೀಕ್ಷಿಸಲು ಸೂರ್ಯದೇವನು ಇಳಿದು ಬಂದಂತಿದ್ದ, ತನ್ನ ತರಂಗಗಳ ವಿಲಾಸವನ್ನು ವೀಕ್ಷಿಸಲು ಸಾಗರವೇ ಮೇಲೆದ್ದುಬಂದಂತಿದ್ದ ಅಪೂರ್ವ ಸನ್ನಿವೇಶವದು…

ಅಚ್ಚರಿ-ಮೆಚ್ಚುಗೆ ತುಂಬಿದ ಹೃದಯದಿಂದ; ಎವೆಯಿಕ್ಕದ ಕಂಗಳಿಂದ ಮೈಮರೆತು ಮಕ್ಕಳನ್ನು ನೋಡಿಯೇನೋಡಿದನು ಪುರುಷೋತ್ತಮ…

|| ಹರೇರಾಮ ||

………………………………………..

ಟಿಪ್ಪಣಿ:
*ಸೋಮರಸ: ಒಂದು ದಿವ್ಯಲತೆಯಿಂದ ಮಾಡುವ ಪದಾರ್ಥ. ಅದು ಯಜ್ಞೋಪಯೋಗಿ ವಸ್ತು. ಆತ್ಮಸಾಧನೆಗೆ ಅತ್ಯುಪಯುಕ್ತ. ಅದರ ಪಾನ ಅಲೌಕಿಕ ಅನುಭವಕ್ಕೆ ಕಾರಣ…
*ಅಯೋಜಿತ: ಒಂದು ಕ್ರಮವತ್ತಾದ ಯೋಜನೆಯಿಲ್ಲದ…
*ಅವ್ಯಕ್ತವಾತ್ಸಲ್ಯಕಂಪನ: ಏನೆಂದು – ಏಕೆಂದು ತಿಳಿಯದೆ, ಹೃದಯದಲ್ಲಿ ಉಂಟಾದ ವಾತ್ಸಲ್ಯದ ಕಂಪನ…
*ಮೂಲಪ್ರಕೃತಿ – ಪರಮಪುರುಷ: ಮೂಲಪ್ರಕೃತಿಯೆಂದರೆ ಭಗವಂತನ ಮನದನ್ನೆ ಶ್ರೀದೇವಿ; ಪರಮಪುರುಷನೆಂದರೆ ಪರಮಾತ್ಮ. ಇಲ್ಲಿ ಸೀತಾ – ರಾಮರು…
-ಸಂಪಾದಕ

Facebook Comments Box