|| ಹರೇರಾಮ ||

ಆಹಾ ! ಎಂಥಾ ದೃಶ್ಯವದು…!

ತನ್ನ ಸಾವಿರಾರು ಪ್ರಜೆಗಳನ್ನು ಕೇವಲ ಕಂಠಸಿರಿಯ ಬಲದಿಂದಲೇ ಸೆಳೆಯುವ – ಆಳುವ ಅವಳಿ ಮಕ್ಕಳು ರಾಜಮಾರ್ಗವನ್ನು ಶೋಭಾಯಮಾನಗೊಳಿಸುತ್ತಿದ್ದಾರೆ…!

ಶ್ರವಣ-ನಯನ-ಮನಗಳ ಸಂಯುಕ್ತ ಹಬ್ಬವದು..!

ಕಣ್ತಣಿಸುವ ರೂಪ..ಕಿವಿಗಿಂಪಾದ ಗಾನ..ಮನ ಬೆಳಗುವ ಸಾಹಿತ್ಯಗಳ ತ್ರಿವೇಣೀಸಂಗಮ…

ಅಚ್ಚರಿಯ ಮೇಲಚ್ಚರಿಯಾಯಿತು ಅಯೋಧ್ಯೆಯರಸನಿಗೆ…

ರೂಪ ತನ್ನದೇ..!

ಸ್ವರ ತನ್ನದೇ..!

ಕೊನೆಗೆ ಗಮನಿಸಿ ಕೇಳಿದರೆ ಕುಮಾರರು ಹಾಡುತ್ತಿರುವ ಕಥೆಯೂ ತನ್ನದೇ..!

ಎಲ್ಲೆಲ್ಲೂ ತಾನೇ ! ತನ್ನ ತನವೇ..!

ರಾಮನು ಪ್ರೀತಿಸದವರಾರು..?

ಪರಮಾತ್ಮ ಚೈತನ್ಯವು ತಲುಪದ ಸ್ಥಳವಾವುದು..?

ಸೂರ್ಯಕಿರಣಗಳು ಸ್ಪರ್ಶಿಸದ ಜೀವವೆಲ್ಲಿ..?

ಎಲ್ಲವನ್ನೂ, ಎಲ್ಲರನ್ನೂ ಪ್ರೀತಿಸುವವನವನು..!

ಆದರೆ ಅದೇಕೋ…ಕಣ್ಣರಿಯದ, ಕರುಳರಿಯುವ ಕಾರಣವಿರಬೇಕು..! ಆ ಮಕ್ಕಳಲ್ಲಿ ಅಸಾಮಾನ್ಯವಾದ ಪ್ರೀತಿಯುಂಟಾಯಿತು ಪ್ರಭುವಿಗೆ…

ಮೊದಲ ನೋಟದ ಪ್ರೀತಿಯದು..

ಸಾಮಾನ್ಯವಾಗಿ ಬದುಕಿನಲ್ಲಿ ಯಾವುದಾದರೊಂದು ವಸ್ತುವಿನಲ್ಲೋ, ವ್ಯಕ್ತಿಯಲ್ಲೋ ಪ್ರೀತಿಯುಂಟಾಗುವುದು ಪ್ರಯೋಜನವನ್ನು ಕಂಡಾಗ..

ಆದರೆ ಅತ್ಯಂತ ಅಪರೂಪಕ್ಕೊಮ್ಮೆ ಕೆಲವರನ್ನು ಕಂಡೊಡನೆಯೇ ಕಾರಣವಿಲ್ಲದೆಯೇ ಪ್ರೀತಿ ಮೂಡುವುದೂ ಉಂಟು..

ಅದು ನೈಸರ್ಗಿಕವಾದ ಪ್ರೀತಿ…ಅದುವೇ ನಿಜವಾದ ಪ್ರೀತಿ..!

ರಾಮನಿಗೆ ಕುಶಲವರನ್ನು ಕಂಡೊಡನೆಯೇ ಉಂಟಾದ ಪ್ರೀತಿ ಅಕೃತ್ರಿಮವಾದುದು…ಅನಿಮಿತ್ತವಾದುದು..

ಪ್ರೀತಿಯು ಪರ್ಯವಸಾನವಾಗುವುದು ಸಾಮೀಪ್ಯದಲ್ಲಿ…

ಸಾಮೀಪ್ಯವು ಪರ್ಯವಸಾನವಾಗುವುದು ಅದ್ವೈತದಲ್ಲಿ…

ಕುಶಲವರನ್ನು ಕುರಿತು ರಾಮನ ಅಂತರಾಳದಲ್ಲಿ ಅಂಕುರಿಸಿದ ಪ್ರೀತಿ ತನ್ನ ಮೊದಲ ಹೆಜ್ಜೆಯಿಟ್ಟಿತು…

ಅದಾಗಲೇ ಮನದೊಳಗೆ ಪ್ರವೇಶಿಸಿದ್ದ ಮುದ್ದುಮಕ್ಕಳನ್ನು ಮನೆಯೊಳಗೆ ಬರಮಾಡಿಕೊಂಡನವನು…

ರಾಮನೆಂಬ ಬಿಂದುವಿನಲ್ಲಿ ಕುಶಲವರೆಂಬ ವಿಸರ್ಗವು ಸೇರಿದಾಗ ಅಪೂರ್ವ ಪ್ರೇಮತ್ರಿಕೋಣವೊಂದು ಅಯೋಧ್ಯೆಯ ಅರಮನೆಯಲ್ಲಿ ಅನಾವರಣಗೊಂಡಿತು…

ಕಾನನಮಧ್ಯದಲ್ಲಿ ಅರಳಿ, ಹಳ್ಳಿ ಸೇರಿ ಹಾರವಾಗಿ, ಮಹಾನಗರದ ಮಂದಿರಮಧ್ಯದಲ್ಲಿ ಬೆಳಗುವ ಮೂರ್ತಿಯ ಮುಡಿಯೇರಿ ಶೋಭಿಸುವ ಸುಮಗಳಂತೆ…

ಪ್ರಕೃತಿಗರ್ಭದಲ್ಲಿ ಜನಿಸಿ, ರತ್ನಕಾರನಿಂದ ಸಂಸ್ಕಾರ ಪಡೆದು, ಅರಮನೆ ಸೇರಿ, ಮಹಾರಾಜನ ಮುಕುಟವನ್ನಲಂಕರಿಸುವ ಮಾಣಿಕ್ಯಗಳಂತೆ…

ತಮಸಾತೀರದ ಆಶ್ರಮದಲ್ಲ ಜನಿಸಿ, ವಾಲ್ಮೀಕಿಗಳಿಂದ ಸಂಸ್ಕಾರ ಪಡೆದು, ಅಯೋಧ್ಯಾಮಹಾನಗರಿಯ ಅರಮನೆ ಸೇರಿ, ದೇವರ ದೇವನ – ರಾಜಾಧಿರಾಜನ ಸಾನ್ನಿಧ್ಯದಲ್ಲಿ ಶೋಭಿಸಿದರು ಕುಶಲವರು…

ಆವರೆಗೆ ಕುಮಾರರು ಗಿರಿ-ನದೀ-ಕಾನನಗಳನ್ನು ನೋಡಿದ್ದರು..

ಆಶ್ರಮಗಳನ್ನು, ಋಷಿ-ಮುನಿಗಳನ್ನು ನೋಡಿದ್ದರು..

ನಗರ-ನಾಗರಿಕರನ್ನು, ಅರಮನೆ-ಅರಸರನ್ನು ಕಥೆಯಲ್ಲಿ ಕೇಳಿದ್ದರು..ಕಣ್ಣಲ್ಲಿ ನೋಡಿರಲಿಲ್ಲ…!

ಆದರೆ ಅದೇ ಮೊದಲಾಗಿ ನೋಡಿದರೂ ಅಯೋಧ್ಯೆ ಅವರಿಗೆ ಹೊಸದೆನಿಸಲಿಲ್ಲ..!

ಅರಮನೆ ಮನೆಯಲ್ಲವೆನಿಸಲಿಲ್ಲ..!

ಅರಸ ಅಪರಿಚಿತನೆನಿಸಲಿಲ್ಲ..!

ಭೂಮಂಡಲದ ಸರ್ವೋಚ್ಚ ಸಿಂಹಾಸನವೇರಿ ಮೆರೆಯುವ ಮುಗಿಲೆತ್ತರದ ರಾಮನೇಕೋ ಅತಿಹತ್ತಿರದವನಾಗಿ ಕಂಡುಬಂದ..!

ರಾಮನನ್ನು ನೋಡುವಾಗ ಅದೇಕೋ ಅಮ್ಮನ ನೆನಪಾಯಿತು ಆ ಮಕ್ಕಳಿಗೆ…!

ಕೆಲವು ವ್ಯಕ್ತಿತ್ವಗಳು ಅದೆಷ್ಟು ದೂರವಿದ್ದರೂ ಹತ್ತಿರವೇ ಇರುತ್ತವೆ…

ಕಣ್ಮರೆಯಾದರೂ ಮತ್ತೆ ಮತ್ತೆ ಕಣ್ಮುಂದೆ ಬರುತ್ತವೆ…

ವಿಧಿವಿಪರ್ಯಾಸದಲ್ಲಿ ಸೀತೆಯನ್ನು ರಾಮನೇ ಕಾಡಿಗೆ ಕಳಿಸಿಕೊಟ್ಟಿದ್ದೂ ನಿಜ…

ಮಕ್ಕಳು ಆಕೆಯನ್ನು ಬೀಳ್ಕೊಟ್ಟು ಅಯೋಧ್ಯೆಗೆ ಬಂದಿದ್ದೂ ನಿಜ…

ರಾಮನಿಗೆ ಕಣ್ಮುಂದೆ ಶೋಭಿಸುವ ಮಕ್ಕಳಲ್ಲಿ ಕಾಣದ ಮಡದಿ ತೋರಿಬಂದರೆ…

ಆ ಮಕ್ಕಳಿಗೆ ರಾಮನ ಸಾನ್ನಿಧ್ಯ ಅಮ್ಮನ ಮಡಿಲನ್ನು ನೆನಪಿಸಿತು…

ರಾಮನೇ ಗಂಗೆ;

ಯಮಳರೇ ಯಮುನೆ;

ಸೀತೆಯೇ ಗುಪ್ತಗಾಮಿನಿ ಸರಸ್ವತಿ ;

ಅಯೋಧ್ಯೆಯೇ ಪ್ರಯಾಗವಾಯಿತು ಆ ಕ್ಷಣದಲ್ಲಿ…

ವಾಮನರಾಗಿ ಅಯೋಧ್ಯೆಯನ್ನು ಪ್ರವೇಶಿಸಿದ ಕುಶಲವರು ರಾಮನ ಹೃದಯದಲ್ಲಿ ತ್ರಿವಿಕ್ರಮರಾಗಿ ಬೆಳೆದರು…

ಬಲಿ ಚಕ್ರವರ್ತಿ ನೀಡಿದ್ದು ಮೂರು ಹೆಜ್ಜೆಗಳನ್ನು…

ಆದರೆ ವಾಮನನು ಪಡೆದುಕೊಂಡಿದ್ದು ಮೂರು ಲೋಕಗಳನ್ನು…

ಕ್ಷಣಕಾಲ ಕಿವಿಗೊಟ್ಟು ರಾಮಾಯಣದ ಕೆಲಬಿಂದುಗಳನ್ನು ಆಲಿಸಿದ ರಾಮನಿಗೆ ಕುಶಲವರ ಮುಖದಿಂದ ಸಂಪೂರ್ಣ ರಾಮಾಯಣವನ್ನು ಸವಿಯುವ ಮನಸ್ಸಾಯಿತು…

‘ಏಕಃ ಸ್ವಾದು ನ ಭುಂಜೀತ’…

ಏನನ್ನಾದರೂ ಒಬ್ಬನೇ ಸವಿಯುವುದು ರಾಮನ ಸ್ವಭಾವವೇ ಅಲ್ಲ…

ಹಾಗಾಗಿ ಸಹೋದರರು, ಸಚಿವರು, ಮತ್ತಿತರ ಸಹೃದಯರನ್ನು ರಾಮಾಯಣ ಸವಿಯಲು ಸಾರಿ ಕರೆದನು ಶ್ರೀರಾಮ…

ಪೀಠವೇ ಪೀಠಿಕೆಯನ್ನು ಕೊಟ್ಟರೆ…?

ಕಥಾನಾಯಕನೇ ಕಾವ್ಯಕ್ಕೆ ಮುನ್ನುಡಿಯಿತ್ತರೆ…?

ನಡೆದದ್ದು ಹಾಗೆಯೇ…

ಸ್ವಯಂ ಶ್ರೀರಾಮನೇ ರಾಮಾಯಣಗಾನಕ್ಕೆ ಪ್ರಸ್ತಾವನೆ ಗೈದನೆಂದರೆ ಅದು ಅದ್ಭುತವಲ್ಲವೇ…?

ಸ್ವಯಂ ಗಾಂಧರ್ವತತ್ತ್ವಜ್ಞನೇ ಆದ ಆ ನರದೇವನು ತನ್ನ ಮಧುರಗಂಭೀರಸ್ವರದಿಂದ ಸೇರಿದವರ ಮನಗಳನ್ನು ಸೂರೆಗೊಳ್ಳುತ್ತಾ ಆ ಮಹಾಸಭೆಯನ್ನುದ್ದೇಶಿಸಿ ನುಡಿಯಲುಪಕ್ರಮಿಸಿದನು…

“ಈ ದಿವ್ಯ ಸಭೆಯಲ್ಲಿ ಮಂಡಿಸಿರುವ ಸುಕೃತಿಚೇತನರೇ,

ಈ ಬಾಲಕರಲ್ಲಿ ಅಣು ಮಹತ್ತುಗಳ  ಅದ್ಭುತ ಸಮಾವೇಶವನ್ನು ನೋಡಿದಿರಾ..!

ಪುಟ್ಟ ಎದೆಗಳಲ್ಲಿ ಬಹುದೊಡ್ಡ ಗ್ರಂಥ..

ಪುಟ್ಟಪುಟ್ಟ ಕೊರಳುಗಳಲ್ಲಿ ಸಂಗೀತ ಸಾಮ್ರಾಜ್ಯದ ಸಾರ ಸರ್ವಸ್ವ ..

ವಯಸ್ಸು ಕಿರಿದು..

ತಪಸ್ಸು ಹಿರಿದು..!

ಭಸ್ಮಚ್ಛನ್ನವಾದ ಕೆಂಡದಂತೆ ಮುನಿವೇಷದ ಮರೆಯಲ್ಲಿ ನೈಸರ್ಗಿಕವಾದ ರಾಜಲಕ್ಷಣಗಳು..!

ಸ್ಫಟಿಕದ ಪಾತ್ರೆಯಲ್ಲಿ ಬೆಳಗುವ ಜ್ಯೋತಿಯಂತೆ ಮಾನವತನುವಿನಲ್ಲಿ ಮಿನುಗುವ ದೇವಕಾಂತಿ..!

ಈ ಯಮಳ ವಾಮನರು ತಮ್ಮ ಸ್ವರವಿಸ್ತಾರದಿಂದ ತ್ರಿವಿಕ್ರಮರಾಗಿ ಬೆಳೆದು ನಮ್ಮೆಲ್ಲರನ್ನೂ ಆವರಿಸುತ್ತಿದ್ದಾರೆ.

ಈ ಲೋಕವನ್ನೇ ಮರೆಸಿ, ಇನ್ನಾವುದೋ ಲೋಕವನ್ನು ತೆರೆಸುತ್ತಿದ್ದಾರೆ..!

ಎಂದೋ ನಡೆದುಹೋದ ಘಟನೆಗಳು ಈ ಗಾಯನವನ್ನಾಲಿಸುತ್ತಿದ್ದಂತೆಯೇ ಮರುಹುಟ್ಟು ತಾಳುತ್ತಿವೆ..

ಎಂದೆಂದೂ ಕಾಣದ ಆನಂದವೊಂದು ಎಲ್ಲೆಡೆ ಅಂಕುರಿಸುತ್ತಿದೆ..

ಅಲೌಕಿಕವಾದ ಈ ಗಾಯನವು ನನ್ನನ್ನೂ ಕೂಡ ನನ್ನ ಪರಮೋಚ್ಚ ಸತ್ತ್ವದೆತ್ತರಕ್ಕೆ ಎತ್ತುತ್ತಿದೆ..!

ಜೀವಕ್ಷೇಮಂಕರವಾದ ಈ ಧರ್ಮಾಖ್ಯಾನವನ್ನು ಕುಮಾರರು ಮೈಮನವೆಲ್ಲ ಮುಖವಾಗಿ ಆಮೂಲಾಗ್ರವಾಗಿ ಹಾಡಲಿ..

ಮೈಮನವೆಲ್ಲ ಕಿವಿಯಾಗಿ  ಕೇಳೋಣ ನಾವೆಲ್ಲರೂ…”

ಸಭೆಯನ್ನುದ್ದೇಶಿಸಿ ಹೀಗೆಂದ ಶ್ರೀರಾಮನು ತನ್ನ ಬೆಳದಿಂಗಳ ದೃಷ್ಟಿಯನ್ನು ಕುಮಾರರೆಡೆಗೆ ಬೀರುತ್ತ  ಹಾಡಲು ಪ್ರೇರಿಸಿದನು..

ಅಧರ ಮಧುರ, ವದನ ಮಧುರ, ನಯನ ಮಧುರ, ಹೆಚ್ಚೇಕೆ ಸರ್ವಮಧುರನಾದ ಮಧುರಾಧಿಪತಿಯಿಂದ ಸಂಪ್ರೇರಿತರಾದ ಕುಮಾರರು ಭಾವದುಂಬಿ, ರಸವುಕ್ಕಿ , ಮಧುರ ಮಧುರವಾಗಿ ಹಾಡತೊಡಗಿದರು ಅನಾದಿನಾಯಕನ ಆದಿಕಾವ್ಯವನ್ನು..

ಸಹಜವಾಗಿಯೇ ಮಧುರವಾದ ಕುಶಲವರ ಕಂಠಗಳು ಶ್ರೀರಾಮನ ಸಾನ್ನಿಧ್ಯ ಮತ್ತು ಪ್ರೇರಣೆಗಳಿಂದಾಗಿ ಮತ್ತಷ್ಟು ಮಧುರವಾದವು..!

ಗಂಗೆಯನ್ನು ಬರಮಾಡಿಕೊಳ್ಳುವ ಶಾಂತಸಾಗರದಂತೆ,ಕುಶಲವರು ನಿರಂತರ ಹರಿಸಿದ ಕಥಾಲಹರಿಯನ್ನು ಒಳಗೊಂಡನು ಶ್ರೀರಾಮ..

ಆ ಕಥಾಗಂಗೆಯು ಅವನ ಅಂತರಂಗದ ತುಂಬೆಲ್ಲ ತುಂಬಿ ತುಳುಕಿತು ಆನಂದಬಾಷ್ಪದ ರೂಪ ತಾಳಿ ಕಂಗಳಲ್ಲಿ…

ಆತನ ಹನಿಗೂಡಿದ ನಿಮೀಲಿತ ನೇತ್ರಗಳು ಹಿಮಬಿಂದುಗಳಿಂದೊಪ್ಪುವ ಸಂಧ್ಯಾಕಮಲಗಳಂತೆ ಶೋಭಿಸಿದವು..

ಮಹಾಪ್ರಭುವಿನೊಂದಿಗೆ ಕಳೆದ ರಸನಿಮಿಷಗಳು, ಒಡಗೂಡಿ ಅನುಭವಿಸಿದ ಸಂಕಟ-ಸಂತೋಷಗಳು ‘ಪುನರ್ನವ’ಗೊಂಡವು ಲಕ್ಷ್ಮಣ-ಭರತ-ಶತ್ರುಘ್ನ-ಸುಮಂತ್ರರೇ ಮೊದಲಾದ ರಾಮನ ಒಡನಾಡಿಗಳಲ್ಲಿ..

ಹಾಡುವುದರಲ್ಲಿ ಎರಡು ವಿಧ..

ಇಂದ್ರಿಯ ರಂಜನೆಯಾಗುವಂತೆ ಹಾಡಿದರೆ ಅದು”ದೇಶೀ”

ಆತ್ಮಕ್ಕೆ ಹಿತವಾಗುವಂತೆ – ಮುಕ್ತಿಗೆ ಮಾರ್ಗವಾಗುವಂತೆ ಹಾಡಿದರೆ ಅದು “ಮಾರ್ಗ”

ಕರಣವನ್ನೂ, ಅಂತಃಕರಣವನ್ನೂ ಮಾತ್ರವಲ್ಲ, ಅಂತರಾಳದಲ್ಲಿ ಹುದುಗಿರುವ ಆತ್ಮ – ಪರಮಾತ್ಮರನ್ನೂ ತೃಪ್ತಿಪಡಿಸುವ ಸಂಗೀತ ರೀತಿಯದು..

ಕುಶಲವರು ರಾಮಾಯಣವನ್ನು ಹಾಡಿದ್ದು “ಮಾರ್ಗ” ವಿಧಾನದಲ್ಲಿ..

ಏಕೆಂದರೆ, ರಾಮಾಯಣವು ಕೇವಲ ಬುದ್ಧಿಜೀವಿಗಳ ಕಾವ್ಯವಲ್ಲ.

ಅದು ಹೃದಯ ಜೀವಿಗಳ ಕಾವ್ಯ ; ಆತ್ಮಬಂಧುಗಳ ಕಾವ್ಯ..

ಸಾಗರದಿಂದ ಆವಿಯಾಗಿ ಮೇಲೇಳುವ ನೀರು ಮೋಡವಾಗಿ ತೇಲಿ, ಮಳೆಯಾಗಿ ಸುರಿದು, ಹೊಳೆಯಾಗಿ ಹರಿದು ಪುನಃ ಸಾಗರವನ್ನೇ ಸೇರುವಂತೆ..

ಮುನಿಮನದಲ್ಲಿ ಸನ್ನಿಹಿತನಾದ,  ಶ್ರೀರಾಮನಿಂದಲೇ ಉಗಮಿಸಿದ ಶ್ರೀರಾಮಾಯಣವು ಕುಶಲವರ ಮೂಲಕ ಶ್ರೀರಾಮಾರ್ಪಣವಾಯಿತು.

ಕಾಲವೆಂದೂ ನಿಲ್ಲದು..
ಅದೆಂದೆಂದೂ ಹಿಂದೆ ಸರಿಯದು..

ಸದಾ ಮುಂದು ಮುಂದಕ್ಕೆ ಸರಿಯುತ್ತಲೇ ಇರುವುದು ಕಾಲದ ಸ್ವಭಾವ..

ಆದರೆ ಅಂದು ಅಯೋಧ್ಯೆಯಲ್ಲಿ ಕುಶಲವರು ರಾಮಾಯಣವನ್ನು ಹಾಡತೊಡಗಿದಾಗ ಕಾಲಕ್ಕೆ ಮುಂದೆ ಸರಿಯಲು ಸಾಧ್ಯವೇ ಆಗಲಿಲ್ಲ..!

ಅದು ನಿಂತೇ ಬಿಟ್ಟಿತು.. ಮಾತ್ರವಲ್ಲ, ಮೆಲ್ಲಮೆಲ್ಲನೆ ಹಿಂದುಹಿಂದಕ್ಕೆ ಸರಿಯತೊಡಗಿತು..!

ಸಕಲರನ್ನೂ ತಮ್ಮ ಗಾನಪುಷ್ಪಕದಲ್ಲಿ ಕುಳ್ಳಿರಿಸಿಕೊಂಡು ಕುಶಲವರು ಹೊರಟೇಬಿಟ್ಟರು ಕಾಲವಿಹಾರಕ್ಕೆ..!

ಈ ಕಾಲದಿಂದ ಆ ಕಾಲಕ್ಕೆ..

ರಾಮಸಮ್ಮುಖದ ಕಾಲದಿಂದ ರಾಮಪ್ರತೀಕ್ಷೆಯ ಕಾಲಕ್ಕೆ..!

ಅಯೋಧ್ಯೆ ನಿಶ್ಶಬ್ದವಾಯಿತು..

ಜಡವಸ್ತುಗಳು ಮಾತ್ರವೇ ಉಳಿದವಲ್ಲಿ..!

ಸಕಲ ಚೇತನರೂ ರಾಮನ ಬದುಕಿನ ಜೊತೆಗೇ ಪಯಣಿಸುವ ಕುಶಲವರನ್ನು ಹಿಂಬಾಲಿಸಿದರು..

ಮುಚ್ಚಿದ ಕಣ್ಣುಗಳ ಮುಂದೆ ಮೂಡತೊಡಗಿತ್ತು ರಾಮಾಯಣ..

|| ಹರೇರಾಮ ||

ಟಿಪ್ಪಣಿ :-

ಅಕೃತ್ರಿಮ -ಕೃತ್ರಿಮವಲ್ಲದ್ದು, ಸಹಜವಾದುದು.

ಅನಿಮಿತ್ತ – ಅಕಾರಣವಾದುದು, ಯಾವುದೋ ಕಾರಣವನ್ನಿಟ್ಟುಕೊಂಡು ಹುಟ್ಟಿದ್ದಲ್ಲ.
ಯಮಳ – ಅವಳಿ
ಏಕಃ ಸ್ವಾದು ನ ಭುಂಜೀತ – ಸವಿಯಾದದ್ದನ್ನು ಒಬ್ಬನೇ ಸವಿಯಬಾರದು.
ಗಾಂಧರ್ವ ತತ್ವಜ್ಞ – ಸಂಗೀತ – ನಾಟ್ಯವೇ ಮೊದಲಾದ ಕಲೆಗಳ ಮರ್ಮವನ್ನರಿತವನು.
ಭಸ್ಮಚ್ಛನ್ನವಾದ ಕೆಂಡದಂತೆ ಮುನಿವೇಷದ ಮರೆಯಲ್ಲಿ ನೈಸರ್ಗಿಕವಾದ ರಾಜಲಕ್ಷಣಗಳು..ಭಸ್ಮವೆಂಬುದು ಮುನಿಲಕ್ಷಣ..ಕೆಂಡದ ಬಿಸಿ ಕ್ಷಾತ್ರವನ್ನು ನೆನಪಿಸುವಂಥದ್ದು..ಕುಶಲವರ ಮುನಿವೇಷದ ಮರೆಯಲ್ಲಿ ಕ್ಷಾತ್ರಲಕ್ಷಣಗಳೂ – ರಾಜಲಕ್ಷಣಗಳೂ ಇರುವುದನ್ನು ಈ ಉಪಮೆಯು ಸುಂದರವಾಗಿ ನಿರೂಪಿಸುತ್ತದೆ..
ಜೀವಕ್ಷೇಮಂಕರ – ಜೀವಕ್ಕೆ ಹಿತವನ್ನುಂಟುಮಾಡುವ..
ಧರ್ಮಾಖ್ಯಾನ – ಧರ್ಮಬಲದಿಂದಲೇ ಮುನಿ ಕಂಡ ಕಥೆ, ಧರ್ಮಮೂರ್ತಿಯ ಕಥೆ,  ಕೇಳಿದವರ ಮನದಲ್ಲಿ ಧರ್ಮವು ಅಂಕುರಿಸುವಂತೆ ಮಾಡುವ ಕಥೆ, ಧರ್ಮವನ್ನೇ ತಿಳಿಸಿ ಹೇಳುವ ಕಥೆ..
ನಿಮೀಲಿತ ನೇತ್ರ -( ತನ್ಮಯತೆಯಿಂದಾಗಿ) ಮುಚ್ಚಿದ ಕಣ್ಣು
ಸಂಧ್ಯಾಕಮಲ – ಸಂಧ್ಯಾಸಮಯದಲ್ಲಿ ಮುದುಡುವ ಕಮಲ
ಪುನರ್ನವ– ಮತ್ತೆ ಹೊಸದಾಗುವುದು..
ರಾಮಸಮ್ಮುಖ ಕಾಲ – ರಾಮನೆದುರು ಕುಳಿತಿರುವ ವರ್ತಮಾನಕಾಲ
ರಾಮಪ್ರತೀಕ್ಷಾ ಕಾಲ – ರಾವಣನ ಅನ್ಯಾಯಗಳಿಂದಾಗಿ ನೊಂದ ಸೃಷ್ಟಿ ರಾಮನು ಹುಟ್ಟಿ ಬರಲೆಂದು ಕಾಯುತ್ತಿದ್ದ ಕಾಲ, ರಾಮಾವತಾರಕ್ಕಿಂತ ಪೂರ್ವ ಕಾಲ.

Facebook Comments Box