|| ಹರೇರಾಮ ||

ಬಂಡವಾಳ ಚಿಕ್ಕದು, ಲಾಭ ದೊಡ್ಡದು.
ಇದು ತಾನೇ ಆದರ್ಶ ವ್ಯಾಪಾರ?
ಅಧ್ಯಾತ್ಮವೇನೂ ಇದಕ್ಕೆ ಹೊರತಲ್ಲ.  ಹಾಗೆ ನೋಡಿದರೆ, ವ್ಯಾಪಾರದ ವ್ಯಾಖ್ಯಾನ ಚೆನ್ನಾಗಿ ಹೊಂದಿಕೊಳ್ಳುವುದು ಅಧ್ಯಾತ್ಮಕ್ಕೇ ಸರಿ..!
ನಂಬಲಸಾಧ್ಯವೆನಿಸುತ್ತದೆಯೇ?
ನಂಬಲೇಬೇಕಾದ ಬದುಕಿನ ಪರಮಸತ್ಯವಿದು.

ಸಣ್ಣವರಲ್ಲಿ ಸಣ್ಣವರು ಯಾರು?

ಅದು, ’ನಾನೇ’ (ಎನಗಿಂತ ಕಿರಿಯರಿಲ್ಲ…)
ದೊಡ್ಡವರಲ್ಲಿ ದೊಡ್ಡವರು ಯಾರು?
ದೇವರು’.

ಆಲಿಂಗನದ ಮೂಲಕ ಇದೋ ನನ್ನನ್ನೇ ನಾನು ನಿನಗೆ ಕೊಟ್ಟೆ - ಶ್ರೀರಾಮ

ಆಲಿಂಗನದ ಮೂಲಕ ಇದೋ ನನ್ನನ್ನೇ ನಾನು ನಿನಗೆ ಕೊಟ್ಟೆ - ಶ್ರೀರಾಮ

ವಿಶ್ವ ಬ್ರಹ್ಮಾಂಡವನ್ನೇ ನಿರ್ಮಿಸುವ, ನಡೆಸುವ, ಉಪಸಂಹರಿಸುವ, ಮಹಾ ಶಕ್ತಿಯಲ್ಲವೇ ಅದು?

ದೇಹದ ಆಳು ’ನಾನು’.
ವಿಶ್ವವನ್ನು ಆಳುವವನು ಭಗವಂತ..!

ಇಲ್ಲೊಂದು ವ್ಯಾಪಾರ ಮಾಡೋಣವೇ?
ನಮ್ಮನ್ನು ಕೊಟ್ಟು ಈಶ್ವರನನ್ನೇ ಪಡೆದುಕೊಳ್ಳೋಣವೇ?
ನಮ್ಮನ್ನು ನಾವು ಈಶ್ವರನಿಗೆ ಸಮರ್ಪಿಸಿದರೆ – ಆತ್ಮ ನಿವೇದನೆ ಮಾಡಿಕೊಂಡರೆ, ಆತ ತನ್ನನ್ನೇ ನಮಗೆ ಕೊಡುವನು.
(ಚಿನ್ನವ ಕೊಡನೇ ರನ್ನವ ಕೊಡನೇ ತನ್ನನೆ ಕೊಡುವನೆ ಬಾರೆ ಸಖಿ… – ಕವಿವಾಣಿ)

ಬ್ರಹಾಂಡದಲ್ಲಿಯೇ ಅತ್ಯಧಿಕ ಲಾಭದ ವ್ಯಾಪಾರವಿದು.
ಹೂಡಿಕೆ (Investment) ಬ್ರಹ್ಮಾಂಡದಲ್ಲಿಯೇ ಚಿಕ್ಕದು!! ಲಾಭವಾದರೂ (Profit) ಬ್ರಹ್ಮಾಂಡದಲ್ಲಿಯೆ ದೊಡ್ಡದು!!!
ಇದರ ಹೆಸರೇ “ಶರಣಾಗತಿ“.

ಲಾಭದ ಬಗೆಗೆ  ಇನ್ನೂ ಸಂದೇಹವುಳಿದಿದ್ದರೆ ಈ ಕೆಳಗಿನ ಕೋಷ್ಟಕ ನೋಡಿ:

ಹೂಡಿಕೆ
(Investment)

ಲಾಭ
(Profit)

ಜೀವ

ಈಶ್ವರ

ಅಜ್ಞ

ಸರ್ವಜ್ಞ

ದುಃಖಿ

ಆನಂದಮಯ

ಮಿಲನ

ಪರಿಶುದ್ಧ

ಸೀಮಿತ

ಸರ್ವವ್ಯಾಪಿ

ಅಶಕ್ತ ಸರ್ವಶಕ್ತ
ನಶ್ವರ ಶಾಶ್ವತ ಈಶ್ವರ

ಆಂಜನೇಯ ಮಾಡಿದ ವ್ಯಾಪಾರ ನೋಡಿ:
ಪಂಪಾತೀರದಲ್ಲಿ ಸೀತೆಯನ್ನರಸುತ್ತಾ ಬಂದ ರಾಮನನ್ನು ಎಂದು ಕಂಡನೋ, ಅಂದೇ ಅವನಡಿಗೆ ಮುಡಿಯನ್ನು ಹಚ್ಚಿ ತನ್ನನ್ನು ತಾನೇ ಸಮರ್ಪಿಸಿಕೊಂಡವನು ಆಂಜನೇಯ..
ಮತ್ತೆ ದಕ್ಷಿಣದಿಕ್ಕನ್ನೆಲ್ಲಾ ಕ್ರಮಿಸಿ, ಸಮುದ್ರವನ್ನೇ ಲಂಘಿಸಿ, ಏಕಾಂಗಿಯಾಗಿ ರಾಕ್ಷಸ ನಗರಿಯನ್ನು ತುಡುಕಿ, ಸೀತೆಯನ್ನು ಹುಡುಕಿ ಶುಭವಾರ್ತೆಯೊಡನೆ ರಾಮನ ಬಳಿಗೆ ಬಂದಾಗ…..
ಹನುಮನಿಗೆ ಬಹುಮಾನ ಕೊಡಬೇಕೆಂದು ಅತ್ತ – ಇತ್ತ ನೋಡಿದನಂತೆ ರಾಮ!
ಕೊಡಲೇನಿದೆ ಕಾಡಾಡಿಯ ಬಳಿಯಲ್ಲಿ!
ಏನನ್ನು ಕೊಟ್ಟರೆ ತಾನೇ ಹನುಮನ ಸೇವೆಗೆ ಅದು ಸರಿಮಿಗಿಲೆನಿಸೀತು?

ಚಿಂತಿಸಿದ ರಾಮ ಮತ್ತೆ ಹನುಮನ ಬಳಿ ಸಾರಿ ಬಿಗಿದಪ್ಪಿ ಹೇಳಿದನಂತೆ, “ಆಲಿಂಗನದ ಮೂಲಕ ಇದೋ ನನ್ನನ್ನೇ ನಾನು ನಿನಗೆ ಕೊಟ್ಟೆ“!

ಇದರಿಂದ ಮಿಗಿಲಾದ ಲಾಭವುಂಟೇ? ಇದು ’ಅನಂತಲಾಭ’ವಲ್ಲವೇ?

ಲಾಭದ ಲೋಭಕ್ಕಿಂತ ದೊಡ್ಡ ತಪ್ಪಿಲ್ಲ…
ಅನಂತಲಾಭದ ಲೋಭಕ್ಕಿಂತ ದೊಡ್ಡ ಸರಿ ಬೇರೆ ಯಾವುದೂ ಇಲ್ಲ..!

ಇನ್ನೂ ಚಿಲ್ಲರೆ ವ್ಯಾಪಾರದ ಮಾತೇಕೇ?  ಬನ್ನಿ…
ಇಂಥಾ ವ್ಯಾಪಾರ ಆರಂಭ ಮಾಡೋಣ,  ಅನಂತಲಾಭದ ಲೋಭಿಗಳಾಗೋಣ..!

Facebook Comments Box